Wednesday, October 8, 2014

ಮಠದ ಬೆಕ್ಕು ಮತ್ತು ದೇವರ ಸಾವು

ಭವದ ಲಜ್ಜೆಯ ತೊರೆದು
ಇಹದ ಕಾಮವ ಹಳಿದು, ಒಂದೊಂದೂ ಅರಿವೆಯ
ಅರಿವುಗಳಲಿ ಹರಿದುಹಾಕಿ
ಬೆತ್ತಲಾಗಬೇಕಿತ್ತು ಬಯಲಿನಲಿ ಗುರುವು

ಕುಟೀಚಕನ ಸುತ್ತ ಕೋಟೆಯ ಕಾವಲು
ನಿಂತು ಏನ ಕಾಯಬೇಕಿತ್ತು? ಒಳಗೆ ಏನು ನಡೆದಿತ್ತು !
ವಿರಕ್ತನ ಮೈಯಲ್ಲಿ ಯಾವ ರಿಕ್ತಿಯು ಸುಳಿದಿತ್ತು ?
ಕಾಣಬೇಕಿತ್ತು ತೆರೆದಪರದೆಯಲಿ ಗುರುವು

ಎದೆಯಲ್ಲಿ ಯೋಗಮುದ್ರೆಯ ಹೊತ್ತ ಮೇಲೆ
ಸ್ತನ ಕಂಡು ಚಿತ್ತದಲಿ ಸ್ಥಾನಪಲ್ಲಟಗೊಂಡರೆ, ಅಲ್ಲಿ
ವಿಷದ ಕಳ್ಳಿಸಾಲು ಬೆಳೆದು ರೋಗದ ನಾಯಿ ಹೆಣ ಬಿದ್ದುದಲ್ಲದೇ
ಮತ್ತಾವ ವಾಸನೆ ಇರದು.
ಅರಳಬೇಕಿತ್ತು ಗಂಧದಹೂವಾಗಿ ಗುರುವು

ಅದಾಗದೇ

ನೆಲಕೆ ಕೃಷ್ಣಾಜಿನ, ಮೈತುಂಬಾ ಬೆಚ್ಚಗೆ ಕಷಾಯವಸ್ತ್ರ
ಮಿನುಗುವ ರುದ್ರಾಕ್ಷಿ ಸ್ಪಟಿಕ ಮಣಿಮಾಲೆಗಳು
ಬೆಳ್ಳಿಯ ಪಾದುಕೆಯ ಮೇಲೆ ಚಿನ್ನದ ಅಂಗುಷ್ಠ
ಕೈಯಲ್ಲಿ ಜಪಮಣಿ, ಬಾಯಿತುಂಬಾ ಧರ್ಮಮಂತ್ರ
ದೀನತೆಯನ್ನು ಉದ್ದೀಪಿಸುವ ಕ್ಷುದ್ರ ಮೊಗಮಂದಹಾಸ
ಅಯ್ಯಾ ..
ಜಂಗಮರ ಮಠದಲ್ಲಿ ಬೆಕ್ಕನ್ನು ಸಾಕಲಾಗಿ
ಆಕಳ ಕೆಚ್ಚಲಿಗೆ ಸೋಂಕು ತಾಗಿತು
ಮಕ್ಕಳು ಹಸಿದುವು, ಪ್ರಸಾದ ರುಚಿಸದಾಯಿತು.
ಕೆಚ್ಚಲ ತುಂಬಾ ಉಗುರು ಚುಚ್ಚಿದ ಗುರುತುಗಳಲಿ ರಕ್ತ ಒಸರುತ್ತಿರಲು
ಯಾಜಕರು ಬಲಿಗೆ ಸಿದ್ದರಾದರು, ಭಕ್ತರು ಉಮೇದಿನಲಿ
ಸಾಕ್ಷಿಯಾದರು.

ಇದಾದ ಮರುಕ್ಷಣ ದೇವರುಗಳು ಸತ್ತುಹೋದ
ಸುದ್ದಿಯೊಂದು ಬಲಿಪೀಠದ ಕೆಳಗೆ
ಬಿಸಿ ರಕ್ತದಂತೆ ಹರಿಯಿತು! ~

1 comment:

  1. ವಿರಕ್ತನೇ ಕಾಮಾಸಕ್ತನಾದರೆ, ಲೋಕವ ತಿದ್ದುವ ಗುರುವೆಲ್ಲಿ?
    'ಬೆತ್ತಲಾಗಬೇಕಿತ್ತು ಬಯಲಿನಲಿ ಗುರುವು' ಎಂತಹ ದುರಂತಮಯ ಕಲಿಗಾಲವಿದು ಕವಿಯೇ?

    ReplyDelete