Showing posts with label ಕೋವಿ ಮತ್ತು ಕೊಳಲು. Show all posts
Showing posts with label ಕೋವಿ ಮತ್ತು ಕೊಳಲು. Show all posts

Monday, May 26, 2014

ಮಳೆಯೇ ಬಾ

ಎಲ್ಲವೂ ಬೇಡವಾದಾಗ
ನಿನ್ನನ್ನೇ
ಕಾಯುತ್ತೇನೆ ಅನವರತ
ಬಾ ಮಳೆಯೇ
ಬಾ ನಿನ್ನ ರಭಸಕ್ಕೆ
ಸಿಕ್ಕು ಕೊಚ್ಚಿ ಹೋಗಲಿ
ಎಲ್ಲ ಕಿಚ್ಚುಗಳು
ಆ ತೇವದಲ್ಲೊಂದು ಹೊಸಕಾಳು ಬಿದ್ದು
ಮೊಳೆತು ಹಸಿರಾಗಲಿ..
ಜಗದುದ್ದ ಜಗದಗಲ ನೆರಳಾಗಲಿ.
ಮಳೆಯೇ ಬಾ.. ಎಲ್ಲೂ ನಿಲ್ಲದೆ ಬಾ. 


ಡ್ರ್ಯಾಗನ್ನ ಉರಿನಾಲಗೆ

ಭಾಷಣಗಳ ಚೌಕಟ್ಟಿನ
ಹೊರಗೆ ಎಳೆದುಕೊಳ್ಳಬೇಕು..
ಈ ನಾಲಿಗೆಯ
ಹದ ಮಾಡಿಕೊಳ್ಳಬೇಕು
ಒಲವ ಕುಲುಮೆಯಲ್ಲಿ ಕಾಯಿಸಿ..
ಚೂಪಾಗಿಸಬೇಕು.

ಮೈಕಿನ ಮುಂದೆ ಬಡಿದು ಬಡಿದು
ಮಾತನಾಡಿದ್ದು
ಸಾಕು ಸಾಕು
ಉಳುವವನ ಬಗ್ಗೆ
ಹೊರುವವನ ಬಗ್ಗೆ
ಹೆಣ್ಣಿನ ಬಗ್ಗೆ
ಭೂಮಿಯ ಬಗ್ಗೆ
ಗೊತ್ತಿದ್ದದ್ದು ಗೊತ್ತಿಲ್ಲದ್ದು
ಎಲ್ಲವನ್ನೂ ಬಾಚಿಕೊಂಡು
ಬಡಬಡಿಸಿದ್ದು.

ಆದರೆ
ಡ್ರ್ಯಾಗನ್ನ ಉರಿನಾಲಗೆ ಬೇಕಾಗಿದೆ
ಸುಡಬೇಕಾದ ಕೊಳಕು ತುಂಬುತ್ತಿದೆ
ಮಾತು ಸತ್ತ ನೆಲದಲ್ಲಿ
ಮೌನ ಒಂದು ಕೋವಿ
ಈಡು ಹೊಡೆಯಲು ಕ್ಷಣಗಳು ಕಾದಿವೆ! ~ ಕೋವಿ ಮತ್ತು ಕೊಳಲು

ಅವನೊಳಗೆ ಅವನ ಸಾವು

ಈ ಮನುಷ್ಯನೇಕೆ ನಿನ್ನಂತೆ
ಹರಿಯುದಿಲ್ಲ ಹೊಳೆಯೇ
ಎದೆಯಲ್ಲಿ
ನಿಂತು ನಿಂತು ಕೊಳೆಯುತ್ತಾನೆ, ರಾಡಿಯಾಗಿ.

ಮೀನು ಏಡಿ ಹಾವು
ಕನಿಷ್ಠ ಮನುಷ್ಯನೂ ಬದುಕುತ್ತಿಲ್ಲ.
ಅವನೊಳಗೆ
ಹೂ ಕೂಡ ಬೆಳೆಯದಷ್ಟು ಬಗ್ಗಡ!

ಅವನು ಹರಿಯುತ್ತಿಲ್ಲ,
ಕಾಲದ ಸ್ತಬ್ದತೆ ಬಯಸುತ್ತಾ
ಕಾಲವಾಗಿದ್ದಾನೆ. ಅವನ ಬಗ್ಗಡದಲ್ಲಿ
ಅವನವೇ ಕಾಲುಗಳು ಹೂತು.

ಅವನೀಗ ಜೀವನೂ ಅಲ್ಲ
ಉಸಿರು, ಮಾತು, ನಡೆ
ಎಲ್ಲ ಯಂತ್ರಸಾದೃಶ.
ಅವನದೇ ಬುದ್ದಿಯಲ್ಲಿ ಪ್ರಜ್ಞೆ ಅಮಾನತಾಗಿದೆ!

ಹರಿಯದ ನದಿಯೊಂದ ಒಳಗೆ ಸಾಕಿದರೆ
ಅವನೊಳಗೆ ಅವನ ಸಾವು!! ~ ಕೋವಿ ಮತ್ತು ಕೊಳಲು

ಎಷ್ಟೊಂದು ಚೌಕಟ್ಟುಗಳು

ಅಡಿ ಇಟ್ಟಲೆಲ್ಲ ಎಷ್ಟು ಚೌಕಟ್ಟುಗಳು
ಗುರುವೇ ಇಲ್ಲಿ ?!
ಒಂದು ತಪ್ಪಿದರೆ ಮತ್ತೊಂದು,
ಬಯಲೆನ್ನುವುದು ಬರೀ ಬಾಯಿ ಮಾತು!

ಹರಡಿಕೊಳ್ಳಲು ಕೈ ಕೋಳ
ಹಾಡಿಕೊಳ್ಳಲು ಬಾಯಿ ಬೀಗ
ಹೆಜ್ಜೆ ಇಟ್ಟಲ್ಲಿ ಕಾಲು ಬಂಧಿ.
ಬಾಗಿಲುಗಳ ದಾಟುತ್ತಾ ದಾಟುತ್ತಾ
ಮತ್ತೆ ಮತ್ತೆ ಬಾಗಿಲುಗಳನ್ನು ಸಂಧಿಸುತ್ತಲೇ
ಇದ್ದೇನೆ ಇಲ್ಲೇ!

ನಡಿಗೆಯ ದಣಿವು ನೀಗುತ್ತಿಲ್ಲ.
ದಾರಿ ಮುಗಿಯುತ್ತಿಲ್ಲ
ಸರಿದಷ್ಟೂ ಗೋಡೆಗಳು ಏಳುತ್ತಿವೆ
ಬಾಗಿಲುಗಳು ಕಾಣುತ್ತಿವೆ.

ಗುರುವೇ
ನಾನು ಹೊರಟಿದ್ದು ಕದಳಿಗೆ
ಎಷ್ಟೊಂದು ಚೌಕಟ್ಟುಗಳು
ಎಷ್ಟೊಂದು ಬಾಗಿಲುಗಳು
ಎಲ್ಲಯ್ಯ ಬಯಲು ?! ~ ಕೋವಿ ಮತ್ತು ಕೊಳಲು

Monday, May 12, 2014

ಸ್ಥಾವರ

ನಾನು ಸ್ಥಾವರವ ಕೀಳುತ್ತಾ
ಇದ್ದೀನಿ ಅಂದುಕೊಂಡಿದ್ದೆ..
ಹಾಗೆ ಕಿತ್ತ ಇಟ್ಟಿಗೆಗಳೆಲ್ಲವೂ
ಪೇರಿಸಿಡುತ್ತಾ
ಕಟ್ಟಿಗೊಂಡ ಗೋಡೆಗಳೇ ನನ್ನ ಬಂಧಿಸಿರುವುದು
ತಿಳಿದಾಗಿನಿಂದ
'ನನ್ನನ್ನೇ' ನಾಶಗೊಳಿಸಿಕೊಳ್ಳುವ
ಉಮೇದು ಶುರುವಾಗಿದೆ. ~

Sunday, May 11, 2014

ಕೋವಿ ಮತ್ತು ಕೊಳಲು ~ 1

ಕೆಂಪು ಮೆತ್ತಿದ ಈ ಕೈಗಳ
ಯಾವ ನೀರಿನಲ್ಲಿ ತೊಳೆದರೂ
ಹೋಗುತ್ತಿಲ್ಲ
ಪಾಪವೆಂಬ ಕೆಮಿಕಲ್ಲು ಅಷ್ಟು
ಗಾಢವಾಗಿಯೇನು? ಇನ್ನೂ ಈ ಲೋಕದಲ್ಲಿ!

ನೆನಪಿದೆ ಈ ನದಿಯುದ್ದ
ಹಸಿರ ರಾಶಿಯಲಿ
ಕೊಪ್ಪರಿಗೆಯ ಓಲೆ ಊದುವ ಕೊಳವೆಯಂತಾ
ಬೆಳೆದು ನಿಂತ ಬಿದಿರು ಮೆಳೆ
ನೆರೆದ ಹೆಣ್ಣುಗಳು
ಆ ಸೋಪಾನ ಕಟ್ಟೆಯ ಮೇಲೆ ಸೋಪು ತಿಕ್ಕಿ
ಉಕ್ಕುವ ನೊರೆಯಲ್ಲಿ ಆಡುತ್ತಾ
ಕೊಳಲ ಗಾನಕೆ ತಲೆದೂಗಿ
ಬಳಿ ಬಂದವರೆಷ್ಟೋ !
ಎದೆಯ ಪೊದೆಗೂದಲ ಎಳೆದು ಜುಮ್ಮೆನಿಸಿ
ಇಳಿದುಹೋದವರು ಯಾರ್ಯಾರೋ ?!

ಹೌದು ಹೌದು ಈ ನದಿ ಒಡಲು ಬತ್ತಿದ
ರಾತ್ರಿಯೇ
ನಾನು ಓಡಿದ್ದು
ಕೆಂಪು ಬಾವುಟ, ಕುಡುಗೋಲು ಹಿಡಿದು
ಎಲ್ಲೂ ನಿಲ್ಲದೆ ಓಡಿದ್ದು
ಊರು ಬಿಟ್ಟು ನಾಡು ದಾಟಿ
ದಂಡಕಾರಣ್ಯ ಸೇರಿದುದು
ಕೊಳಲ ತೂತುಗಳ ಮುಚ್ಚಿ ಗುಂಡುಗಳ ತುಂಬಿ
ಹಾರಿಸಿ ಕಂಡೆಲ್ಲೆಲ್ಲಾ ಕ್ರಾಂತಿಕಾರಿ ಎನಿಸಿಕೊಂಡಿದ್ದು
ಸಿರಿಯ ಎದೆಯ ಗುಂಡು ಬಡವನ ಹೊಟ್ಟೆ ಹರಿದಿದ್ದು

ಹರಿದದ್ದು ಬೊಗಸೆಯಲಿ ಮೊಗೆದು ನೋಡಿದರೆ
ರಕ್ಕಸನೊಬ್ಬ ಕಾಣುತ್ತಾನೆ ಅಲ್ಲಿ
ಥೇಟ್ ನನ್ನಂತೆಯೇ ...
ನಾನೆಯೇ
ಕೋವಿ ಹೊಡೆದ ಸದ್ದು
ಅದೋ ಬಿತ್ತು ಬಿದಿರು ಬೊಂಬು

ಮತ್ತೆ ಧಾರಾಳ ಬೀಳುತ್ತಿದೆ ಕಣ್ಣೀರು
ಕೆಂಪು ಜಾರುತ್ತಿದೆ ಅಷ್ಟಷ್ಟೇ.... ~

ಕೋವಿ ಮತ್ತು ಕೊಳಲು ~ 2

ಉಸಿರ ಕೊಳವೆಯ ಒಳಗೊಂದು
ಸಣ್ಣ ಸೂಜಿಗಾತ್ರದ
ತೂತು ಬಿದ್ದು
ಬೆಳಕಿರದ ಬೆಂಕಿಯ ರವ
ಎದೆಯ ಗೂಡಿಗೆ ತಾಗಿರಲು
ರಾತ್ರಿಯ ಕನಸುಗಳು ರಚ್ಚೆ ಹಿಡಿದು
ಕೊಳಲನೂದಿಸಿ
ಕಣ್ಣುಗಳ ತೂಗುಯ್ಯಾಲೆಯಲಿ
ನಿದ್ದೆಗೆ ಬಿದ್ದುವು.

ಕರ್ನಲನು ಹಿಡಿದ ಕೋವಿಗೆ ಬೆಚ್ಚಿದಂತೆ
ಧೋ ಸುರಿವ ಮಳೆಯಲ್ಲಿ
ಮತ್ತೆ ಮತ್ತೆ ಬೆಂಕಿಯ ಅರಸುತ್ತಾ
ಎದೆಗೆ ಕೈ ಇಡಲು
ಹಸಿಹಸಿ ಕೆಂಡ ಸಿಕ್ಕು
ನಿದ್ದೆಯ ಒದ್ದೆ ಕಣ್ಣುಗಳು
ಕತ್ತಲಲಿ ತಡವರಿಸುತ್ತಾ
ಮಡಿಲ ತುಂಬಾ ಕೆಂಡವ ತುಂಬಿಕೊಳ್ಳಲು

ಉಸಿರೂ ಕಿಡಿಯೂ
ಸೇರಿ ಹೊತ್ತಿ ಉರಿಯುತ್ತಿದೆ
ನೋಡಿದೀರಾ ..
ಆಕಾಶದ ತುಂಬೆಲ್ಲಾ
ಮಡಿಲ ಕೆಂಡ ಉರಿಯುತ್ತಿದೆ ನೋಡೀದಿರ?!