Showing posts with label ಬಿಡಿ ಹೂ. Show all posts
Showing posts with label ಬಿಡಿ ಹೂ. Show all posts

Monday, May 26, 2014

ಬಿಡಿ ಹೂ ~ 26

ಹೂಗಳು ಹೊದ್ದ 
ಇಹದ ಪರಿಮಳವ 
ಬಯಲಗಾಳಿ ಕದ್ದ ಮೇಲೆ
ದುಂಬಿಗಳ ಕಣ್ಣು 
ಹೆಣ್ಣಿನ ಮುಂಗುರುಳ ಮೇಲೆ !

Sunday, May 11, 2014

ಬಿಡಿ ಹೂ: 25

ಬೆವರು ಇಳಿಯುತ್ತಾ
ಹೊಲವೆಲ್ಲ ತೇವವಾಯ್ತು
ವಸಂತದಲಿ ಕಾಳು ಮೊಳೆಯಲೆಷ್ಟು ದಿನ!?


***

ಶಬ್ದ ಮತ್ತು ಅರ್ಥಗಳ ಹಂಗು
ಬಿಟ್ಟು, ಜೀವವನ್ನು
ನೀನು ಉಳಿಸಿಕೊಂಡಿದ್ದೇ ಆದರೆ
ನನ್ನೆದೆಯ ನಿನಗೆ ಕಸಿಮಾಡಿ
ಕವಿತೆಯಾಗಿಸುವೆ
ಅಕ್ಷರವೇ.

ಗೋಲ್ಗಥೆಯ ಶಿಲುಬೆ

ಶುಭಶುಕ್ರವಾರ ಸುರಿದ ಮಳೆಗೆ
ಶಿಲುಬೆ ಕರಗಿತ್ತು.
ಗೋಲ್ಗಥೆಯ ಮೇಲೆ
ಐದು ಮೊಳೆಗಳು ಮಾತ್ರ
ನಡುಗುತ್ತ
ಲೋಕಾಪವಾದಕ್ಕೆ ಎದೆ ಕೊಟ್ಟವು!


***
ಒಳಗೆಲ್ಲಾ
ಪಾಪ, ಕೌರ್ಯಗಳೇ ತುಂಬಿರುವ
ಶಿಲುಬೆಯ ಹೊತ್ತು ತಂದ
ನಿನ್ನ ದೇಹ ಸೀಳಿದ
ಮೊಳೆಯ ಸ್ಪರ್ಶ
ಅವ ಸುಟ್ಟು ಸೀಯಲಿ.
ಬಿದ್ದ ರಕ್ತದ ಹನಿ ಬೆರೆತು
ಶಿಲುಬೆ ಕರಗಿ ಘನವು ಉಳಿಯಲಿ!


***
ಎಲ್ಲೆಲ್ಲೂ ಕೊಲ್ಲುವ ಕೊಲೆಗಾರ
ದೇವರುಗಳ ನಡುವೆ
ನೀನೊಬ್ಬ ಒಲವಿನ ಹೂಗಾರ
ಶತ್ರುವನ್ನು ಪ್ರೀತಿಸಿಬಿಡು ಎಂದವನು
ಶಿಲುಬೆಯನ್ನೇ ಏರಿದವನು.


***

ನೀನು ಹರಿದು ಹಂಚಿದ್ದು
ಲೋಕದ ಹಸಿವೆಗೆ
ಬರಿಯ ಮೀನು, ರೊಟ್ಟಿಯ ಚೂರುಗಳನ್ನಷ್ಟೇ ಅಲ್ಲ
ಕರಗಲಾರದ ಪ್ರೀತಿಯನ್ನು ಕೂಡ.

ಆದರೆ ಹೊತ್ತಿದ್ದು ಬೆಟ್ಟಕ್ಕೆ
ಒಬ್ಬನೇ
ನೋವುಗಳ ಬಲುಭಾರದ ಶಿಲುಬೆಯನ್ನು!

***

ಶಿಲುಬೆಯ ಮೊಳೆಗಳು
ಪ್ರಾರ್ಥಿಸುತ್ತಿವೆ
ಉಳಿದ ಜನುಮಗಳು
ಅವನು ನಡೆವ ದಾರಿಯಲ್ಲಿ
ಹುಲ್ಲಾಗಿ ಹುಟ್ಟ ಬಯಸಿ ~
 

ಬಿಡಿ ಹೂ: 24

ಕಣ್ಣೀರು ಬತ್ತಿಹೋದವನು ಅತ್ತರೆ
ನಕ್ಕಂತೆಯೇ ಕಾಣುತ್ತದೆ
ಲೋಕಕ್ಕೆ
ಗಾಯವೇ ಬೇಕು ಪುರಾವೆಗೆ
ನೋವು ಮಾತ್ರ ಕೇಳುವುದಿಲ್ಲ!

ಬಿಡಿ ಹೂ: 23

ಮುಂಜಾವಿನ ಬೆವರು
ಅರ್ಥನಿಷಿದ್ಧ.

ಅದು ಬೆವತವನ
ಭಾವ ಮತ್ತು
ಭಕುತಿಯದ್ದು!


***

ಖಾಲಿ ಕೊಡದೊಳಗೆ
ತುಂಬಿಕೊಳ್ಳುತ್ತಿದೆ
ಗಾಳಿ!

ಖಾಲಿ ಬಯಲೊಳಗೆ
ಧುಮ್ಮಿಕ್ಕುತ್ತಿದೆ
ನದಿ!


 

ಬಿಡಿ ಹೂ : 22

ಈಗೀಗ ಅಂಜುತ್ತೀನಿ
ನೋವು ಹೇಳಿಕೊಳ್ಳಲು.
ಇಲ್ಲಿ
ಕೆಂಪು ಗಾಯದ ಬಣ್ಣ
ಹಚ್ಚಿಕೊಂಡವರು ಎಲ್ಲೆಲ್ಲೂ
ಕಾಣಸಿಗುತ್ತಾರೆ.

ಬಿಡಿ ಹೂ:21

ಬೇಸಗೆಯ ರಾತ್ರಿ
ಅಡುಗೆ ಮನೆಯಲ್ಲಿ
ಸಾಸಿವೆ ಸಿಡಿಸಿದಷ್ಟೂ
ಒಳಕೋಣೆಯ ಪರಿತಾಪ
ಸೂರ್ಯನಿಗೆ ಬಿದ್ದ ಬಿಸಿತುಪ್ಪ! ~

ಬಿಡಿ ಹೂ : 20

ಎದೆಯಂಗಳ
ಖಾಲಿ ಮಾಡುವ ಮುನ್ನ
ಹೆಜ್ಜೆಗಳನ್ನು ಮಾತ್ರ ಅಳಿಸದಿರು
ಅವುಗಳೊಂದಿಗೆ ನನ್ನುಸಿರು ಬೆರೆತಿದೆ.

ಹೋಗಿ ಬಾ
ವಸಂತವೇ..
ತೆರೆದ ಕಣ್ಣುಗಳಲಿ
ಈ ನೆಲ ಕಾಯುತ್ತಿರುತ್ತದೆ
ಹೋಗಿ ಬಾ.

ಬಿಡಿ ಹೂ : 19

ಪದಗಳ ಹೆಕ್ಕಿ ಹೆಕ್ಕಿ ತೆಗೆದು
ಶಬ್ದರಸವನೆರದು
ಕವಿಗಳು
ಕವಿತೆಯ ಬೊಂಬೆಯ ಮಾಡಿದರು.
ಉಪಮೆ, ಪ್ರತಿಮೆಗಳ ಆಭರಣವಿಟ್ಟು
ಅರ್ಥದ ಪರದೆಯ ಹೊದಿಸಿದರು.
ಎಡೆಯಿರದ ಹಾಗೆ ಕವಿತೆಗಳ
ಕೂರಿಸಿದರು,.
ಗುರುವೇ
ಹೃದಯವ ಇಟ್ಟ ಕವಿಯ
ಕಾಣೆನಲ್ಲ!

ಬಿಡಿ ಹೂ : 18

ಆಕಾಶದಲ್ಲಿ ನಕ್ಷತ್ರ ಜಾರಿ
ಬೀಳುವುದನ್ನು ಕಂಡಾಗ
ಕವಿತೆಗಳು
ಹಾಳೆಗಳಲ್ಲಿ ಅವಿತುಕೊಂಡವು.
ನಾಪತ್ತೆಯಾದ ಕವಿಯನ್ನು
ಜಗತ್ತು ಹುಡುಕುತ್ತಿದೆ
ಪ್ರತಿ ರಾತ್ರಿ!

ಬಿಡಿ ಹೂ:16

ಇಷ್ಟೆಲ್ಲಾ ಯುದ್ಧಕ್ರಾಂತಿಗಳು
ಆದ ಮೇಲೂ
ಸಾಬರನ
ಕಾಫಿರನ
ರಕ್ತದ ರುಚಿ ಉಪ್ಪೋ ಸಪ್ಪೆಯೋ
ಯಾರೂ ಹೇಳಲಿಲ್ಲ!
ಹಾಗಾಗಿ ಮನುಷ್ಯರೆಂದು
ಖಾತರಿಯಾಯಿತು!!

ಬಿಡಿ ಹೂ:11

ಈ ಲೋಕದಲ್ಲಿ ಎಲ್ಲ
ಜೀವಗಳ ಮೈ ಮೇಲೂ
ಕವಿತೆಗಳಿವೆ..
ಕೆಲವು ನಮ್ಮಂಥ
ನಾಚಿಕೆಗೆಟ್ಟವರು ಮಾತ್ರ
ಆಗಾಗ್ಗೆ
ಬೆತ್ತಲಾಗುತ್ತೇವೆ!

ಬಿಡಿ ಹೂ:17

ಕೋವಿ ಹಿಡಿದು ಕೊರಳು ಕೊಯ್ದ
ಪಾಪವ ನೆತ್ತಿಯಲಿ ಹೊತ್ತು
ಯಾರನ್ನು ದೂಷಿಸುವೆ?
ಹೋಗು ಹೋಗು..
ನಿನ್ನ ಕೈಯ ರಕ್ತ ತೊಳೆದುಕೊ
ಮಕ್ಕಳು ಬೆಚ್ಚುತ್ತವೆ!

ಬಿಡಿ ಹೂ:15

ಕಣ್ಣುಗಳ ಕಂಡು
ತಳಮಳಿಸಿದ
ಕತ್ತಲೆಯು
ಬೆತ್ತಲಾಗುವ ಭಯದಿ
ಬೆಳಕನರಸುತ್ತಿದೆ!

ಬಿಡಿ ಹೂ:14

ಕಿಡಿಗೇಡಿ ಕಾಮನಬಿಲ್ಲು
ಅವಳ ಬೆನ್ನಿನಲ್ಲಿ ಮೂಡಿದೆ..
ನಡೆದ್ದಿದ್ದೇನು?,
ಮಳೆ ನಿಂತ ಮುಂಜಾನೆ !

ಬಿಡಿ ಹೂ:13

ಈ ಬಿರುಬೇಸಗೆಯ ಝಳಕ್ಕೆ
ಒಳಕೋಣೆಯ ಹೂ ಪಕಳೆಗಳು
ಕಳಚಿ ಬೀಳುತ್ತಲೇ ಇವೆ..
ಕತ್ತಲಲ್ಲೂ ಮಿಂಚುತ್ತಿವೆ
ನಗ್ನ ಶಲಾಕೆಗಳು! ~

ಬಿಡಿ ಹೂ:12

ಸಿಡಿಲ ಉಂಡೆಯ ಮಾಡಿ
ಮೋಡಗಳ ಮೋರೆಗೆ ಎಸೆದು
ಮಳೆ ಕರೆಯುತ್ತಾಳೆ
ಇವಳು ಆಕಾಶಕ್ಕೆ
ಕಾಲು ಇಳಿಬಿಟ್ಟು ಘಲ್ಲೆನಿಸುವ
ಗುಡುಗಿನ ಗೆಜ್ಜೆನಾದಕೆ
ಎದೆ ಡವಗುಡುತ್ತದೆ.. ಮಳೆಗಾಲವೊಂದು
ಪ್ರಣಯರುದ್ರನರ್ತನ!

ಬಿಡಿ ಹೂ: 10

ಸೋರುವ ಸೂರು
ತೊಟ್ಟಿಕ್ಕುವ ಹನಿ
ಥಂಡಿಯ ನಡುಗುವ ಮೈಯಲ್ಲಿ
ಬಡವಿಯೊಬ್ಬಳ ಮಳೆಗಾಲದ
ಹಾಡು
ಕೇಳಗೊಡುವುದಿಲ್ಲ
ಎಷ್ಟು ತಾತ್ಸಾರ
ಈ ಮಳೆ ಗಾಳಿಗೂ
ಬಡವರೆಂದರೆ !!

Thursday, May 16, 2013

ಬಿಡಿ ಹೂ: 9




ಅದೆಷ್ಟೋ
ಪ್ರೀತಿಸಿದರು , ಪ್ರೇಮಿಸಿದರು
ಪ್ರಣಯದ ಪ್ರಲೋಭನೆಗೆ
ಪರಿತಪಿಸಿದರು.
ನಾನೋ
ಹೂವು ಹಣ್ಣು
ಗಾಳಿ ಮಳೆ
ಭೂಮಿ ಆಕಾಶಗಳ
ಸಂಗಕ್ಕೆ ಸಿಕ್ಕು ,
ಕಳೆದುಕೊಳ್ಳುವ ಭೀತಿಯಲ್ಲಿ
ಪ್ರೀತಿಸಲೇ ಇಲ್ಲ!

ಬಿಡಿ ಹೂ : 8



ಎಣಿಸದೇ ಬಿದ್ದ
ದಾರಿಯಲಿ
ನಡೆಯುತ್ತಲೇ
ಇದ್ದೇನೆ..
ನಡೆದವನಿಗೆ
ಮಾತ್ರ
ದಾರಿಗಳು
ದಕ್ಕುತ್ತವೆ.

*****


ಜೊತೆಗಾಗಿ ಅರಸಿದ
ಕಣ್ಣುಗಳಿಗೆ
ದಹಿಸುವ ಬೆಳಕು
ಕೊರೆಯುವ ಕತ್ತಲು
ನಿರ್ವಾತ ನಿಷ್ಕರುಣ ವ್ಯೋಮ
ಕಂಡಿತು.