Showing posts with label ಕವಿತೆ. Show all posts
Showing posts with label ಕವಿತೆ. Show all posts

Friday, June 2, 2017

ಅರ್ಥಶಾಸ್ತ್ರ

ಚಾಣಕ್ಯನ ಬಿಚ್ಚಿದ ಶಿಖೆಯ
ಗುತ್ತಿಗೆ ಪಡೆದಂತೆ ಅರ್ಥಶಾಸ್ತ್ರವ
ಉಸುರುತ್ತಿದ್ದ ಗಿಳಿಗಳು ಮಾಯಾವಾಗಿವೆ.
ನೀವು ಕಾಣಿರೆ ನೀವು ಕಾಣಿರೆ
ಯಾವ ಅಡ್ಡೆಯೊಳಗೆ ಅವಿತು ಹೋದವೆಂದು?
ಬೀಭತ್ಸ ಭಾಷಣಕಾರ ಪ್ರಧಾನಿಗಳು
ಇಂದು ಉಪವಾಸ, ನಾಳೆ ಯೋಗಾಸನ
ನಾಳಿದ್ದಿನಿಂದ ನಲವತ್ತು ದೇಶಪರ್ಯಟನೆ
ದ್ವಿಪಕ್ಷೀಯ ಮಾತುಕತೆಗೆ ಕ್ಯಾಮೆರಾದವರೊಡನೆ!
ಇಲ್ಲಿ ನಿತ್ಯನಾರಕ, ನಿಲ್ಲದ ನರಮೇಧ
ಹರಿದ ಸೆರಗುಗಳೊಳಗೆ ಕರಗಿದ ಹೂಗಳು
ಉಣ್ಣುವ ತಟ್ಟೆಗಳ ತಡಕಾಡುವ ಗೂಂಡಾಗಳು ;
ರದ್ದುಗೊಂಡ ನೋಟುಗಳಲಿ ಮಾಸಿಹೋದ ಕನಸುಗಳು
ನಿಂತುಹೋದ ಕಾರ್ಖಾನೆಗಳು, ಹಸಿವುಗೆಟ್ಟ ಹೊಟ್ಟೆಗಳು
ಒಣಗಿದ ಗದ್ದೆ, ಬದುಕಲಾರದ ಬಡಜೀವಗಳು
ಕಿತ್ತುತಿನ್ನುವ ತೆರಿಗೆಗಳು, ಬ್ಯಾಂಕುಗಳು ಜೊತೆಗೆ
ದೇಶಭಕ್ತಿಯ ಬಂಡಲುಬಡಾಯಿಗಳು.
ಲೆಕ್ಕಬಾರದ, ಗಂಟಲು ಸೇದುಹೋದ ಆ ಗಿಳಿಗಳ
ನೀವು ಕಾಣಿರೆ! ನೀವು ಕಾಣಿರೆ!
ಕಂಡಲ್ಲಿ ಕೊರಳು ಪಟ್ಟಿಯಿಡಿದು ಕೇಳಿರೆ
ಎಲ್ಲಿ ಚಾಣಕ್ಯನ ಅರ್ಥಶಾಸ್ತ್ರ?
ಎಲ್ಲಿ ಚಿನ್ನ ಹೊದಿಸಿದ ಹೆದ್ದಾರಿಗಳು?
ಎಲ್ಲಿ ಹದಿನೈದು ಲಕ್ಷರುಪಾಯಿಗಳು?
ಅಸಲಿಗೆ
ಭಾಷಣಕೋರರ ಮಾತುಸೋತ ಭಾರತದಲಿ
ಅರ್ಥಶಾಸ್ತ್ರವೆಂದರೆ ಎರಡುದ್ದರಣೆ ಗೋಮೂತ್ರ! ~

Wednesday, October 8, 2014

ತೂಗಿಬಿಟ್ಟ ಪಾಪದ ಬಟ್ಟಲು



ನೆತ್ತಿಯ ಮೇಲೆ ಒಂದು ಸಣ್ಣ ರಂಧ್ರ ಕೊರೆದು
ಒಂದು ಬಟ್ಟಲು ತೂಗಿ ಬಿಡಲಾಗಿದೆ.
ಐದು ಕೈಗಳು ಇಹದ ಕಡಲಿನಲಿ ಅಪ್ಪಳಿಸುವ
ಉಪ್ಪಿನ ನೀರ ಮೊಗೆಮೊಗೆದು ತುಂಬಿಕೊಳ್ಳುತ್ತಿವೆ.
ಎಷ್ಟು ಧಾರಾಳ
ಎಷ್ಟು ಧಾವಂತ
ಎಷ್ಟು ದಾಹ
ಬಟ್ಟಲ ಹೊಟ್ಟೆ ತುಂಬುತ್ತಿಲ್ಲ
ಮೊಗೆದು ಸುರಿದದ್ದಷ್ಟೂ ನಿಲ್ಲುತ್ತಿಲ್ಲ

ಪಂಪು ಪೈಪು ಜೋಡಿಸಿ ಕಡಲನೇ
ಬಟ್ಟಲಿಗೆ ಬೋರಲು ಇಡಲಾಯಿತು
ನೆತ್ತಿಯ ಪಾದ ನಿಂತಿದ್ದ ಹಾಯಿದೋಣಿ ತಳಕ್ಕೆ ಬಿದ್ದು ಚೂರಾಯಿತು.
ಬಟ್ಟಲಿನ್ನೂ ಖಾಲಿಯೇ!
ದೋಣಿಯ ಕಟ್ಟಿಗೆ ಸುಟ್ಟು ಬೆಂಕಿಯ ತುರುಕಿ
ಮೂಗುಗಳ ಹಿಡಿದು ಜೀವದುಸಿರುಗಳ ಅದುಮಿ
ಬ್ರಹ್ಮಾಂಡವನೇ ಹಿಡಿದು ಬಟ್ಟಲ ಸುರಿಯಲು, ಏನೂ ಆಗಲಿಲ್ಲ.. ತುಂಬಲಿಲ್ಲ

ದಾರಿಹೋಕ ತಿರುಕನೊಬ್ಬ
ತೂಗಿಬಿಟ್ಟ ಪಾಪದ ಬಟ್ಟಲು ರಾದ್ಧಾಂತವ ಕಂಡು
ಜೋಳಿಗೆಯಿಂದ
ಅರ್ಧ ಎಂಜಲು ಹುಣಸೆಹಣ್ಣು ಹಾಕಿದ
ಬಟ್ಟಲು ಥಟ್ಟನೆ ನೆಲಕ್ಕೆ ಬೋರಲು ಬಿದ್ದಿತು
ಬ್ರಹ್ಮರಂಧ್ರದಲ್ಲಿ ಸಹಸ್ರಾರದ ಹೂ ಹುಟ್ಟಿ
ಸರ್ವವೂ ಸ್ವಸ್ಥಾನ ಸೇರಿಕೊಂಡವು. ~

ಮಠದ ಬೆಕ್ಕು ಮತ್ತು ದೇವರ ಸಾವು

ಭವದ ಲಜ್ಜೆಯ ತೊರೆದು
ಇಹದ ಕಾಮವ ಹಳಿದು, ಒಂದೊಂದೂ ಅರಿವೆಯ
ಅರಿವುಗಳಲಿ ಹರಿದುಹಾಕಿ
ಬೆತ್ತಲಾಗಬೇಕಿತ್ತು ಬಯಲಿನಲಿ ಗುರುವು

ಕುಟೀಚಕನ ಸುತ್ತ ಕೋಟೆಯ ಕಾವಲು
ನಿಂತು ಏನ ಕಾಯಬೇಕಿತ್ತು? ಒಳಗೆ ಏನು ನಡೆದಿತ್ತು !
ವಿರಕ್ತನ ಮೈಯಲ್ಲಿ ಯಾವ ರಿಕ್ತಿಯು ಸುಳಿದಿತ್ತು ?
ಕಾಣಬೇಕಿತ್ತು ತೆರೆದಪರದೆಯಲಿ ಗುರುವು

ಎದೆಯಲ್ಲಿ ಯೋಗಮುದ್ರೆಯ ಹೊತ್ತ ಮೇಲೆ
ಸ್ತನ ಕಂಡು ಚಿತ್ತದಲಿ ಸ್ಥಾನಪಲ್ಲಟಗೊಂಡರೆ, ಅಲ್ಲಿ
ವಿಷದ ಕಳ್ಳಿಸಾಲು ಬೆಳೆದು ರೋಗದ ನಾಯಿ ಹೆಣ ಬಿದ್ದುದಲ್ಲದೇ
ಮತ್ತಾವ ವಾಸನೆ ಇರದು.
ಅರಳಬೇಕಿತ್ತು ಗಂಧದಹೂವಾಗಿ ಗುರುವು

ಅದಾಗದೇ

ನೆಲಕೆ ಕೃಷ್ಣಾಜಿನ, ಮೈತುಂಬಾ ಬೆಚ್ಚಗೆ ಕಷಾಯವಸ್ತ್ರ
ಮಿನುಗುವ ರುದ್ರಾಕ್ಷಿ ಸ್ಪಟಿಕ ಮಣಿಮಾಲೆಗಳು
ಬೆಳ್ಳಿಯ ಪಾದುಕೆಯ ಮೇಲೆ ಚಿನ್ನದ ಅಂಗುಷ್ಠ
ಕೈಯಲ್ಲಿ ಜಪಮಣಿ, ಬಾಯಿತುಂಬಾ ಧರ್ಮಮಂತ್ರ
ದೀನತೆಯನ್ನು ಉದ್ದೀಪಿಸುವ ಕ್ಷುದ್ರ ಮೊಗಮಂದಹಾಸ
ಅಯ್ಯಾ ..
ಜಂಗಮರ ಮಠದಲ್ಲಿ ಬೆಕ್ಕನ್ನು ಸಾಕಲಾಗಿ
ಆಕಳ ಕೆಚ್ಚಲಿಗೆ ಸೋಂಕು ತಾಗಿತು
ಮಕ್ಕಳು ಹಸಿದುವು, ಪ್ರಸಾದ ರುಚಿಸದಾಯಿತು.
ಕೆಚ್ಚಲ ತುಂಬಾ ಉಗುರು ಚುಚ್ಚಿದ ಗುರುತುಗಳಲಿ ರಕ್ತ ಒಸರುತ್ತಿರಲು
ಯಾಜಕರು ಬಲಿಗೆ ಸಿದ್ದರಾದರು, ಭಕ್ತರು ಉಮೇದಿನಲಿ
ಸಾಕ್ಷಿಯಾದರು.

ಇದಾದ ಮರುಕ್ಷಣ ದೇವರುಗಳು ಸತ್ತುಹೋದ
ಸುದ್ದಿಯೊಂದು ಬಲಿಪೀಠದ ಕೆಳಗೆ
ಬಿಸಿ ರಕ್ತದಂತೆ ಹರಿಯಿತು! ~

Monday, May 26, 2014

ನಾನು ಆಲಿಕಲ್ಲು



ನಾನು
ಮುಂಗಾರು ಮರೆತು
ಎಸೆದು ಹೋದ ಆಲಿಕಲ್ಲು.

ಕೆಳಕ್ಕೆ ಬಿದ್ದಾಗ
ಪುಟ್ಟ ಮಕ್ಕಳ ಬೊಗಸೆ ತುಂಬಿಕೊಳ್ಳುತ್ತೇನೆ
ಮನುಷ್ಯನ  ಎದೆಯಂಗಳದಲ್ಲಿ
ನೆನಪಾಗಿ ಕರಗುತ್ತೇನೆ!

ಆದರೂ ನಾ ಬರುವುದನ್ನು
ದರಿದ್ರಕಾಲವೆನ್ನಲಾಗಿದೆ .
ಆದರೂ ನಾ ಬಂದೇ ಬರುತ್ತೇನೆ. 
ಎಲ್ಲರಂತೆ ನನಗೂ ಬದುಕಲು ರಹದಾರಿಯಿದೆ. 

ಮಳೆಯೇ ಬಾ

ಎಲ್ಲವೂ ಬೇಡವಾದಾಗ
ನಿನ್ನನ್ನೇ
ಕಾಯುತ್ತೇನೆ ಅನವರತ
ಬಾ ಮಳೆಯೇ
ಬಾ ನಿನ್ನ ರಭಸಕ್ಕೆ
ಸಿಕ್ಕು ಕೊಚ್ಚಿ ಹೋಗಲಿ
ಎಲ್ಲ ಕಿಚ್ಚುಗಳು
ಆ ತೇವದಲ್ಲೊಂದು ಹೊಸಕಾಳು ಬಿದ್ದು
ಮೊಳೆತು ಹಸಿರಾಗಲಿ..
ಜಗದುದ್ದ ಜಗದಗಲ ನೆರಳಾಗಲಿ.
ಮಳೆಯೇ ಬಾ.. ಎಲ್ಲೂ ನಿಲ್ಲದೆ ಬಾ. 


ನಿನ್ನ ಛಾತಿ

ನಿಜವೇ..
ನಿನಗೆ ಛಾತಿ ಇದ್ದರೆ
ಬಾ
ನನ್ನದೆಯ ಒಳಗೆ ನಿನ್ನ ನದಿ ಹರಿಸು!

ನೀ ಹರಿದು ಬಂದ್ದದ್ದೇ ಆದರೆ
ಈ ಬಯಲಬಾಗಿಲ ಬೀಗಗಳು
ಕರಗಿ ನಿನ್ನ ಕಾಲ್ಗೆಜ್ಜೆಯಾಗುತ್ತವೆ.
ಅಲೆಯ ನೊರೆಗಳು ತುಂಬಿ
ಗಾಳಿಗುಳ್ಳೆ ಒಡೆದು, ಆಹಾ!
ಅದೇನು ತಾಜಾ ಉಸಿರು
ಹೊಸಒಲೆಯಲ್ಲಿ ಉರಿವ ಬೆಂಕಿ.
ಮತ್ಸ್ಯಗಂಧ ತುಂಬಿದ
ನಿನ್ನೊಡಲಿನಲ್ಲಿ ನಾ ಜೇನಾಗಿಳಿಯುತ್ತೇನೆ ~ ಕಲ್ಲು ಹೂವೊಂದು ಮೈನೆರೆತು

ಶಕುಂತಲೆ ಮತ್ತು ಉಂಗುರ

ಈ ಕಾಲದ ಶಕುಂತಲೆಯರ
ಉಂಗುರಗಳನ್ನು
ಮೀನುಗಳು ನುಂಗುವುದೇ ಇಲ್ಲ.
ಅದನ್ನು ತೊಡಿಸಿದ ದುಷ್ಯಂತರು
ಮಾತ್ರ
ಪ್ರತಿನಿತ್ಯ ಬೆರಳುಗಳಲ್ಲಿ
ಹುಡುಕುತ್ತಾರೆ!


*** 
ಅವಳ ವ್ಯಾನಿಟಿ ಬ್ಯಾಗಿನಲ್ಲಿ
ಬೇಕಾದಷ್ಟೂ ಉಂಗುರಗಳು
ಅವಳು ಹೆಸರನ್ನಷ್ಟೇ ಹುಡುಕುತ್ತಾಳೆ

ಕಣ್ರೆಪ್ಪೆಯ ಸಂಧಿಯಲ್ಲಿ
ಎಲ್ಲೋ ಅವಿತುಹೋಗಿವೆ!  


***

ಅಕ್ಕ ಕೇಳೆ
ಚೆನ್ನಮಲ್ಲನ ಸುತ್ತ ಹಿಡಿದಿಪ್ಪ
ನನ್ನ ಕಾಯದ ಮೇಲೆ
ಉರಿವ ಒಲವೇ
ಉಂಗುರ ಕಾಣೇ! 


***

ಉಂಗುರ ಕಳೆದ ಮೇಲೆ
ಶಕುಂತಲೆ ಏನು
ಶಬರಿಯಂತೆ ದಾರಿ ಕಾಯಲಿಲ್ಲ!
ಒಡಲ ಬೀಜವ ಕಾಯ್ದು
ಮೊಳೆಸಿ ಭರತನೆಂಬ
ವಸಂತದ ಗಾನವ ಹಾಡುತ್ತಾಳೆ.
ಅವಳು ವಾಸ್ತವದ ವಾರಸುದಾರೆ.


***

ಉಂಗುರ ಕದ್ದಿದ್ದಂತು ನಿಜ
ಬಿದ್ದಿದ್ದು ಸುಳ್ಳೇ ಸುಳ್ಳು!
ಹಾಗೆ ಕದ್ದಿದ್ದನ್ನು ಮೀನಿನೊಳಗೆ ಕಾಪಿಡಲಾಯ್ತು
ದೂರ್ವಾಸನ ಶಾಪ
ಹೆಸರುಳಿಸಿಕೊಳ್ಳಲು
ಇಷ್ಟೆಲ್ಲಾ ಹೆಣಗಬೇಕಾಯ್ತು


***

    

ಡ್ರ್ಯಾಗನ್ನ ಉರಿನಾಲಗೆ

ಭಾಷಣಗಳ ಚೌಕಟ್ಟಿನ
ಹೊರಗೆ ಎಳೆದುಕೊಳ್ಳಬೇಕು..
ಈ ನಾಲಿಗೆಯ
ಹದ ಮಾಡಿಕೊಳ್ಳಬೇಕು
ಒಲವ ಕುಲುಮೆಯಲ್ಲಿ ಕಾಯಿಸಿ..
ಚೂಪಾಗಿಸಬೇಕು.

ಮೈಕಿನ ಮುಂದೆ ಬಡಿದು ಬಡಿದು
ಮಾತನಾಡಿದ್ದು
ಸಾಕು ಸಾಕು
ಉಳುವವನ ಬಗ್ಗೆ
ಹೊರುವವನ ಬಗ್ಗೆ
ಹೆಣ್ಣಿನ ಬಗ್ಗೆ
ಭೂಮಿಯ ಬಗ್ಗೆ
ಗೊತ್ತಿದ್ದದ್ದು ಗೊತ್ತಿಲ್ಲದ್ದು
ಎಲ್ಲವನ್ನೂ ಬಾಚಿಕೊಂಡು
ಬಡಬಡಿಸಿದ್ದು.

ಆದರೆ
ಡ್ರ್ಯಾಗನ್ನ ಉರಿನಾಲಗೆ ಬೇಕಾಗಿದೆ
ಸುಡಬೇಕಾದ ಕೊಳಕು ತುಂಬುತ್ತಿದೆ
ಮಾತು ಸತ್ತ ನೆಲದಲ್ಲಿ
ಮೌನ ಒಂದು ಕೋವಿ
ಈಡು ಹೊಡೆಯಲು ಕ್ಷಣಗಳು ಕಾದಿವೆ! ~ ಕೋವಿ ಮತ್ತು ಕೊಳಲು

ವೈಶಾಖದ ಸಂಜೆ

ವೈಶಾಖದ ಸಂಜೆ
ಬಿರುಗಾಳಿ, ಸಣ್ಣಮಳೆ
ಒಳಗೆ ಬೆವರು
ಹೊರಗೆ ಮಲ್ಲಿಗೆಮೊಗ್ಗು ನೆನೆಯುತ್ತಿವೆ.

ಸೊಡರೊಂದ ಹೊತ್ತಿಸಲು
ಅವಳ ನಡು ಬಳಸಿದ ಕೈಗಳು
ಉರಿ ತಗುಲಿಸಿಕೊಂಡಿವೆ.

ಮಿಂಚಿನಮುತ್ತು ಚೆಲ್ಲುವ ಇಂದು
ಬೆಳಗಾನ ದೀಪಾವಳಿಯಲ್ಲಪ್ಪೋ!! ~ ಮಿಥುನ ಸಂಕ್ರಮಣ

ಅವನೊಳಗೆ ಅವನ ಸಾವು

ಈ ಮನುಷ್ಯನೇಕೆ ನಿನ್ನಂತೆ
ಹರಿಯುದಿಲ್ಲ ಹೊಳೆಯೇ
ಎದೆಯಲ್ಲಿ
ನಿಂತು ನಿಂತು ಕೊಳೆಯುತ್ತಾನೆ, ರಾಡಿಯಾಗಿ.

ಮೀನು ಏಡಿ ಹಾವು
ಕನಿಷ್ಠ ಮನುಷ್ಯನೂ ಬದುಕುತ್ತಿಲ್ಲ.
ಅವನೊಳಗೆ
ಹೂ ಕೂಡ ಬೆಳೆಯದಷ್ಟು ಬಗ್ಗಡ!

ಅವನು ಹರಿಯುತ್ತಿಲ್ಲ,
ಕಾಲದ ಸ್ತಬ್ದತೆ ಬಯಸುತ್ತಾ
ಕಾಲವಾಗಿದ್ದಾನೆ. ಅವನ ಬಗ್ಗಡದಲ್ಲಿ
ಅವನವೇ ಕಾಲುಗಳು ಹೂತು.

ಅವನೀಗ ಜೀವನೂ ಅಲ್ಲ
ಉಸಿರು, ಮಾತು, ನಡೆ
ಎಲ್ಲ ಯಂತ್ರಸಾದೃಶ.
ಅವನದೇ ಬುದ್ದಿಯಲ್ಲಿ ಪ್ರಜ್ಞೆ ಅಮಾನತಾಗಿದೆ!

ಹರಿಯದ ನದಿಯೊಂದ ಒಳಗೆ ಸಾಕಿದರೆ
ಅವನೊಳಗೆ ಅವನ ಸಾವು!! ~ ಕೋವಿ ಮತ್ತು ಕೊಳಲು

ಎಷ್ಟೊಂದು ಚೌಕಟ್ಟುಗಳು

ಅಡಿ ಇಟ್ಟಲೆಲ್ಲ ಎಷ್ಟು ಚೌಕಟ್ಟುಗಳು
ಗುರುವೇ ಇಲ್ಲಿ ?!
ಒಂದು ತಪ್ಪಿದರೆ ಮತ್ತೊಂದು,
ಬಯಲೆನ್ನುವುದು ಬರೀ ಬಾಯಿ ಮಾತು!

ಹರಡಿಕೊಳ್ಳಲು ಕೈ ಕೋಳ
ಹಾಡಿಕೊಳ್ಳಲು ಬಾಯಿ ಬೀಗ
ಹೆಜ್ಜೆ ಇಟ್ಟಲ್ಲಿ ಕಾಲು ಬಂಧಿ.
ಬಾಗಿಲುಗಳ ದಾಟುತ್ತಾ ದಾಟುತ್ತಾ
ಮತ್ತೆ ಮತ್ತೆ ಬಾಗಿಲುಗಳನ್ನು ಸಂಧಿಸುತ್ತಲೇ
ಇದ್ದೇನೆ ಇಲ್ಲೇ!

ನಡಿಗೆಯ ದಣಿವು ನೀಗುತ್ತಿಲ್ಲ.
ದಾರಿ ಮುಗಿಯುತ್ತಿಲ್ಲ
ಸರಿದಷ್ಟೂ ಗೋಡೆಗಳು ಏಳುತ್ತಿವೆ
ಬಾಗಿಲುಗಳು ಕಾಣುತ್ತಿವೆ.

ಗುರುವೇ
ನಾನು ಹೊರಟಿದ್ದು ಕದಳಿಗೆ
ಎಷ್ಟೊಂದು ಚೌಕಟ್ಟುಗಳು
ಎಷ್ಟೊಂದು ಬಾಗಿಲುಗಳು
ಎಲ್ಲಯ್ಯ ಬಯಲು ?! ~ ಕೋವಿ ಮತ್ತು ಕೊಳಲು

Tuesday, May 20, 2014

ಒಂದು ರಸ್ತೆ ಮತ್ತು ಹತ್ಯೆ



ಕೊಡಲಿ ಮಚ್ಚು
ಗರಗಸ ಮೇಷಿನು
ಎಷ್ಟೆಲ್ಲಾ ಸಿದ್ದವಾಗಿವೆ
ಇದು ಸತ್ಯದ ಭಯವೊ?
ಅಥವಾ ಸುಳ್ಳಿನ ಕಪಟವೊ ?

ಹೊಸ ರಸ್ತೆಗಾಗಿ
ಹಳೆಯ ಮರಗಳನ್ನು
ಅವುಗಳ ಮಕ್ಕಳನ್ನು
ಹುದುಗಿರುವ ಭ್ರೂಣಗಳನ್ನು
ಹುಡುಕಿ ಹುಡುಕಿ ತುಂಡು ಮಾಡಲಾಗುತ್ತಿದೆ
ಮತ್ತೆ ಚಿಗುರದಂತೆ ಬೇರಿಗೂ
ಆಮ್ಲದ ಸಿಂಪರಣೆ.

ಆರು ಪಥಗಳ ಹೊಸರಸ್ತೆ ಬರುತ್ತಿದೆ
ಊರಿನೊಳಗೆ
ಎದೆಯನ್ನು
ಸೀಳಿಕೊಂಡು ಹೋಗುತ್ತದೆ
ರಸ್ತೆ ಏನಿದ್ದರೂ ವಾಹನಗಳಿಗೆ
ಜೀವಗಳಿಗೆ ಅಲ್ಲ!

ಅಲ್ಲೊಂದು ನಾಯಿ
ಇಲ್ಲೊಂದು ಕರು
ಮತ್ತೊಮ್ಮೆ ಮನುಷ್ಯ
ರಸ್ತೆಯ ರಕ್ತದಾಹ.. ಮುಗಿಯುವುದಿಲ್ಲ

ಉಬ್ಬುಗಳೂ, ನಿಲ್ದಾಣಗಳೂ
ಸರ್ಕಲ್ಲುಗಳು
ಬೇಕಾದಷ್ಟಿವೆ.. ಆದರೆ ಯಾರು ನಿಲ್ಲುವುದಿಲ್ಲ!  
ಅಲ್ಲೆಲ್ಲೂ ಮರಗಳು ಇಲ್ಲ
ಹಾಗಾಗಿ ಹೂ-ಹಣ್ಣು ಇಲ್ಲ
ಹಾಗಾಗಿ  ಹಕ್ಕಿಗಳು ಇಲ್ಲ
ಹಾಗಾಗಿ ನೆರಳೂ ಇಲ್ಲ
ಹಾಗಾಗಿ ಜನರೂ ಇಲ್ಲ
ಬರಿಯ ರಸ್ತೆ ಹರಿದು ಮಲಗಿದೆ
ಉಂಡು ಉರುಳಿದ ಹೆಬ್ಬಾವಿನಂತೆ!  

Tuesday, May 13, 2014

ತೊಟ್ಟಿಕ್ಕುವ ಎದೆಯ ರಕ್ತ ; ನಿನ್ನ ಪದ್ಯ

ನೀನು ಜೊತೆಗಿರದ ರಾತ್ರಿಗಳ
ಮಾರಿಕೊಂಡೆ..
ಏಕಾಂತದ ದವಲಾಗ್ನಿಯ
ಉಣಿಸಲು,
ಕವಿತೆಯ ಸಂಗ ಮಾಡಿದೆ.

ನೀನು ಮಾಡಿಟ್ಟ ವೈನೂ
ಬಜಾರಿನಲ್ಲಿ ಸಿಕ್ಕುವ ಸುಡು ಸಿಗರೇಟು
ಹಾಳು ಪಿಚ್ಚರುಗಳು ನನಗೆ ಪಥ್ಯವಲ್ಲ.
ನಿನ್ನ ಬಿಟ್ಟು ಯಾವುದರ ಹಿಂದೆಯೂ
ಒಲವಿಲ್ಲ,... ಹೋಗುವುದಿಲ್ಲ.

ನಿನ್ನ ಕಣಿವೆಯಲಿ ನಾನು ಜಾರುವಾಗ
ಹೇಳಿಕೊಂಡ ಕೇಳ್ವಿಗಳು, ಈಗ ಮಾತನಾಡುತ್ತವೆ
ಬಹಳ. ಕವಿಸಮಯವಂತೀಗ?
ನನಗೇನೋ ತಿಳಿಯದು
ಸುರತ ತಪ್ಪಿದಕ್ಕೆ ಕವಿತೆಯೇ ಸುಖ ಎಂದುಕೊಂಡೆ!

ನೀನಿಲ್ಲದ ಈ ಬಿಡುವುಗಳಲ್ಲೇ
ಪೊರೆ ಕಳಚಿಕೊಳ್ಳುವುದು
ವಿಷವ ಕಕ್ಕುವುದು .... ಈ ಕವಿತೆಗಳಲ್ಲಿ
ನನ್ನ ನಗ್ನ ಸತ್ಯ ,
ಹೇಳಲರಿಯದ ಕೆಟ್ಟ ಕನಸು,
ನಿನ್ನೊಲವ ಉಸಿರುಗಟ್ಟಿಸಿವೆ.

ಈ ಪಾಡುಗಳೆಲ್ಲಾ
ಸಾಕೆನಿಸಿ ನಿರ್ಭಾವಕ್ಕೆ ನನ್ನ ಬಿಗಿದುಕೊಂಡರೆ
ತೊಟ್ಟಿಕ್ಕುವ ಎದೆಯ ರಕ್ತವೂ
ಹಾಳೆಯ ಮೇಲೆ ಬಿದ್ದು ಚಿತ್ರವಾಗಿ
ಮತ್ತೆರಡು ಕಣ್ಣ ಹನಿಗಳು ಕೂಡಿ
ನಿನ್ನ ಪದ್ಯವಾಗುತ್ತದೆ.
ರಾತ್ರಿಗಳು ನಿನ್ನನು ಮಿಸ್ ಮಾಡಿಕೊಳ್ಳುತ್ತಿವೆ,
ಕವಿತೆಗಳಿದ್ದೂ!

Sunday, May 11, 2014

ಇವತ್ತು ರಜೆ ಹಾಕಿದ್ದೀವಿ



       ಬೆಳಗು ಇಬ್ಬನಿ ಅರಳುವ
ಹೊತ್ತಿಗೆ..
ಇವಳ ಮುಡಿ ಬಿಚ್ಚಿದ ಘಮಲಿನ
ಉನ್ಮತ್ತ ತಾವರೆಯ ಮೋರೆಯಲ್ಲಿ
ದುಂಬಿಯೊಂದು ಕುಳಿತು
ಬೆಚ್ಚನೆಯ ಕಾಫಿ ಹೀರುತ್ತಾ
ಕಚ್ಚಿದ ಚಾಕಲೇಟಿನ ಸಿಹಿ ಅಂಟು
ಗಲ್ಲವ ಸವರುತ್ತಾ ಸಾಗುತ್ತಿದೆ
ಎದೆ ತಪ್ಪಲಿಗೆ.

ಅಲಾರಮ್ಮು ಬಾಯಿ ಬಡಿಯುತ್ತಿದೆ
ಮತ್ತಿಲ್ಲಿ ಮೊಬೈಲು
ಹೊರಗಲ್ಲಿ ಟ್ರಿಣ್ ಟ್ರಿಣ್ ಹಾಲಿನವನ ಸೈಕಲ್ಲು
ಟಿವಿಯಲ್ಲಿ ದಿನಭವಿಷ್ಯದ ಡುಮ್ಮಣ್ಣ
ಮಧ್ಯೆ ಮಧ್ಯೆ ಟ್ರಾಫಿಕ್ ಜಾಮು
'
ಇವತ್ತು ರಜೆ... ರಜೆ ಹಾಕಿದ್ದೀವಿ'
ಪಿಸುಗುಟ್ಟಿಕೊಂಡೆವು.. ನಗುನಗುತ್ತಾ

ಕುಟ್ಟಿ ಪುಡಿ ಮಾಡಿದ MTR ಮಸಾಲೆ
ಸಣ್ಣಗೆ ಹಚ್ಚಿದ ಕಾಯಿಪಲ್ಲೆ
ಕುಕ್ಕರ್ ಆಗಾಗ ಏದುಸಿರುಬಿಡುತ್ತಾ
ಮೂರ್ನಾಲ್ಕು ಶಿಳ್ಳೆ ಹಾಕಿ ಬಿಟ್ಟಿದೆ!

ಇದೀಗ ಟೀ ಸಮಯ
ಸೊಪ್ಪು ಹದವಾಗಿ ಬೇಯುತ್ತಿದೆ
ಬಣ್ಣ ಬಿಡುತ್ತಾ
ಅಷ್ಟು ಸಕ್ಕರೆಯ ಅರಳು
ಪಾವು ಅಳತೆಯ ಹಾಲು
ಕುದಿ ಬರುವ ಹೊತ್ತಿಗೆ..
ಬೇಸಗೆಯ ಬೆವರ ಬೆಳಕು
ಮೈಯೆಲ್ಲಾ ಹೊಳೆಯಾಗಿ ತುಂಬಿ
ಕೋಡಿ ಬಿತ್ತು!

ಗಾಳಿ ಕದ್ದ ಸುಗಂಧ

ಬೇಸಗೆಯ ಮುಗಿಲು ಅದೆಷ್ಟು
ನಿಗಿನಿಗಿಯುವ ನೀಲಿ ನೀಲಿ
ಇಳಿದಷ್ಟೂ ಆಳಕ್ಕೆ
ಇಳಿಯುತ್ತಲೇ ಇದೆ
ಕಾಣುತ್ತ ಕಂಡಷ್ಟೂ ಕೆರಳಿಸುತ್ತಾ
ಕರೆದೊಯ್ಯುತ್ತಲೇ ಇದೆ
ಅವಳ ಕಣ್ಣುಗಳ ಒಳಗೆ ಅವಿತ
ಅಸಂಗತ ಸುರುಳಿ ಸಾಕ್ಷ್ಯಗಳಂತೆ!

ಬೆವರುವ ಮೈಗೆ
ಟೆರೇಸಿನ ತಣ್ಣನೆಯ ಗಾಳಿ ಸೋಂಕಿ
ಪುಳಕಿಸುತ್ತದೆ
ಅವಳೋ ಕಾರ್ಮೊಡದಂತೆ ಕವಿದು
ಆವರಿಸಿ ಬಿಡುತ್ತಾಳೆ
ಬೆಳಕು ಹರಿದರೂ ಬಿದ್ದ ಮಳೆ, ಆಲಿಕಲ್ಲು
ಕೊಚ್ಚಿಹೋದ ತೆವರಿಯ ಬದು
ಗಮನಕ್ಕೇಬಾರದು.

ವಿಚಾರವಿಷ್ಟೇ
ಕಾಡುಮಲ್ಲಿಗೆ ದಳ ಬಿರಿದ ಸುಗಂಧ
ಗಾಳಿ ಕದ್ದೊಯ್ದಿದೆ!

ಗೋಲ್ಗಥೆಯ ಶಿಲುಬೆ

ಶುಭಶುಕ್ರವಾರ ಸುರಿದ ಮಳೆಗೆ
ಶಿಲುಬೆ ಕರಗಿತ್ತು.
ಗೋಲ್ಗಥೆಯ ಮೇಲೆ
ಐದು ಮೊಳೆಗಳು ಮಾತ್ರ
ನಡುಗುತ್ತ
ಲೋಕಾಪವಾದಕ್ಕೆ ಎದೆ ಕೊಟ್ಟವು!


***
ಒಳಗೆಲ್ಲಾ
ಪಾಪ, ಕೌರ್ಯಗಳೇ ತುಂಬಿರುವ
ಶಿಲುಬೆಯ ಹೊತ್ತು ತಂದ
ನಿನ್ನ ದೇಹ ಸೀಳಿದ
ಮೊಳೆಯ ಸ್ಪರ್ಶ
ಅವ ಸುಟ್ಟು ಸೀಯಲಿ.
ಬಿದ್ದ ರಕ್ತದ ಹನಿ ಬೆರೆತು
ಶಿಲುಬೆ ಕರಗಿ ಘನವು ಉಳಿಯಲಿ!


***
ಎಲ್ಲೆಲ್ಲೂ ಕೊಲ್ಲುವ ಕೊಲೆಗಾರ
ದೇವರುಗಳ ನಡುವೆ
ನೀನೊಬ್ಬ ಒಲವಿನ ಹೂಗಾರ
ಶತ್ರುವನ್ನು ಪ್ರೀತಿಸಿಬಿಡು ಎಂದವನು
ಶಿಲುಬೆಯನ್ನೇ ಏರಿದವನು.


***

ನೀನು ಹರಿದು ಹಂಚಿದ್ದು
ಲೋಕದ ಹಸಿವೆಗೆ
ಬರಿಯ ಮೀನು, ರೊಟ್ಟಿಯ ಚೂರುಗಳನ್ನಷ್ಟೇ ಅಲ್ಲ
ಕರಗಲಾರದ ಪ್ರೀತಿಯನ್ನು ಕೂಡ.

ಆದರೆ ಹೊತ್ತಿದ್ದು ಬೆಟ್ಟಕ್ಕೆ
ಒಬ್ಬನೇ
ನೋವುಗಳ ಬಲುಭಾರದ ಶಿಲುಬೆಯನ್ನು!

***

ಶಿಲುಬೆಯ ಮೊಳೆಗಳು
ಪ್ರಾರ್ಥಿಸುತ್ತಿವೆ
ಉಳಿದ ಜನುಮಗಳು
ಅವನು ನಡೆವ ದಾರಿಯಲ್ಲಿ
ಹುಲ್ಲಾಗಿ ಹುಟ್ಟ ಬಯಸಿ ~
 

ವಿಷಾದದ ನಿಟ್ಟುಸಿರು

ಎಲ್ಲ ನೆನಪುಗಳ ಒಳಗೊಂದು
ವಿಷಾದದ ನಿಟ್ಟುಸಿರು
ಜೀವಂತ!

ಎಷ್ಟು ಹಂಬಲವೆಂದರೆ
ತಿರುಗಿ ಹಿಂದಕ್ಕೆ
ಅದರ ತಲೆತೆಗೆದು ಬರುವಷ್ಟು
ಮರುಕ್ಷಣ
ಮತ್ತೆ ಮರುಕ !

ಈ ಹೆಣ್ಮಕ್ಲು ಕಟುಕಿಯರು

ನೀನಿಳಿಸಿ ಹೋದ ಬೆವರ ಮತ್ತಿನ್ನೂ
ಇಳಿದೇ ಇಲ್ಲ
ನೋಡು ಮೈ ಘಮಲು
ಒಂದು ಅಫೀಮು

ಅಸ್ತವ್ಯಸ್ತ ಹಾಸಿಗೆ ಮೇಲೆ
ನಿನ್ನ ಉದ್ದುದ್ದ ತಲೆಗೂದಲ
ಗುರುತು
ನೆನ್ನೆಯ ನೆನಪ ಬೆಚ್ಚಗಿಡುತ್ತಿದೆ

ಕುಡಿದುಳಿದ ಅರ್ಧ ಬಾಟಲಿ ನೀರು
ಚೂರೇ ಚೂರು ವೈನು
ಮಡಿಚಿಟ್ಟ ಪುಸ್ತಕ
ಇಬ್ಬರೂ ಓದಿ ಆಲಂಗಿಸಿ ನಕ್ಕ ಪರಿ
ನೆನೆಪಾಗುವ ಹೊತ್ತಿಗೆ

ಥುತ್
ಈ ಹೆಣ್ಮಕ್ಲು ಕಟುಕಿಯರು
ಇದ್ದಕ್ಕಿದ್ದಂತೆ
ಹೊರಟು ಬಿಡುತ್ತಾರೆ
ತವರಿಗೆ.. ಟೂರಿಗೆ..

ಹಸಿರು ಟೀ ಘಮಲು

'ಮಲಗುವ ಮುನ್ನ
ಕವಿತೆ ಓದಬೇಕು' ಅಪ್ಪಣೆ ಕೊಡಿಸಿದಳು
ಕೊಡಗಿನ ಗೌಡತಿ
ಕೊರಿಯಾದ ಹಸಿರು ಟೀ ಪುಡಿ
ಹಿಡಿದು ಅತ್ತ ಹರಿದಳು.
ಕುದಿಸುತ್ತಾ ಅದೇನೋ ಹಾಡುತ್ತಾ
ಆಗಾಗ್ಗೆ ನನ್ನತ್ತ ಇಣುಕಿದಳು,
ನಕ್ಕಳು ಮಾಟಗಾತಿ.

ಪರಿಕರಕ್ಕೆ ಪರಿತಪಿಸುವಾಗ
ಅವಳು ಕಳಚಿಟ್ಟ ಮೂಗುತಿ,
ಮುತ್ತಿನ ಓಲೆ, ಬೆಳ್ಳಿಯ ಕಾಲಂದಿಗೆ
ಟೈಟಾನ್ ವಾಚು..
ಅರೆ! ವ್ಯಾನಿಟಿ ಬ್ಯಾಗಿನಲ್ಲಿ
ಘಮಗುಡುವ ಕಾಂಡೋಮ್ಮು
ಅರೆರೆ! ಈಗ ನೆನಪಾತು
ನಾನು ಹೊತ್ತು ತಂದ
ಎರಡು ಪಲ್ಲಕ್ಕಿ ಮಲ್ಲಿಗೆ ಕಾರ್ ಶೆಡ್ ನಲ್ಲೇ
ಉಳಿದು ಹೋಗಿದೆ.

ಎರಡು ಪಿಂಗಾಣಿ ಬಟ್ಟಲು
ತುಂಬಿ ಬಂದುವು.
ಟೀ ಹೀರುತ್ತಾ ಹೀರುತ್ತಾ
ಇಬ್ಬರ ಮೈ ಮೇಲೆ
ಕವಿತೆಗಳು ಕಂಡುವು
ಓದುತ್ತಾ ಹೇಳುತ್ತಾ
ಒಳಕೋಣೆಯಿಂದ ಹಜಾರಕ್ಕೆ
ಇರುಳ ಕವಿಗೋಷ್ಠಿ ಸಂಪನ್ನ.

ಮುಂಜಾನೆ ಮತ್ತೆ ಹಸಿರು ಟೀ
ಕುದಿಯುತ್ತಿದೆ...
ಇಲ್ಲೆನೋ ಘಮಲು!

ಬೆಕ್ಕು ಹಿಡಿದ ಕೋವಿ



ಕೋವಿ, ಸಿಡಿಮದ್ದು ಹಿಡಿದು
ನೀನು ಸಮಾಜ ಬದಲಿಸಿದ್ದು,
ಇದೆಯಾ ನೆನಪು..
ಎಷ್ಟು ಜೀವಗಳ ಕೊಂದಿದ್ದೆಯೆಂದು!

ಮುಚ್ಚಿಡಬೇಡ
ನಿನ್ನ ಎದೆಯ ವಾಸಿಯಾಗದೆ
ಹುಣ್ಣು
ಅದರ ಕೊಳೆತ ಸೋಂಕು
ತಾಗದಿರಲಿ ಲೋಕಕ್ಕೆ
ಸೋಗಿನ ಬೆಕ್ಕೇ
ಕಳಚು ನಿನ್ನ ಹಗಲುವೇಷ.

ಬಟ್ಟಲು ಖಾಲಿ ಇದೆ
ನಾವ್ಯಾರು ಕಣ್ಣು ಮುಚ್ಚಿಲ್ಲ!