Friday, August 7, 2015

ನಿಷೇಧ ಸಂಸ್ಕೃತಿ ಮತ್ತು ಜನ ಸರ್ಕಾರ

"ತೆರಿಗೆ ಅತಿಯಾಗಿ ಬಿಟ್ಟರೆ
ಜನ ಕದಿಯುತ್ತಾರೆ.
ಎಲ್ಲದರಲ್ಲಿ ಸರ್ಕಾರ ತಲೆ ಹಾಕಿದರೆ
ಸ್ಥೈರ್ಯ ಕಳೆದುಕೊಳ್ಳುತ್ತಾರೆ.

ಜನರ ಒಳಿತಿಗಾಗಿ ದುಡಿ
ಅವರನ್ನು ನಂಬು"
                 ~ ಲಾವೋತ್ಸೆ ,  ’ದಾವ್ ದ ಜಿಂಗ್ ’

 ಈಚೆಗೆ ಸರ್ಕಾರಗಳು ಜನಸಾಮಾನ್ಯರ ಬದುಕಿನ ಎಲ್ಲಂದರಲ್ಲಿ ತಲೆಹಾಕಲು ಶುರುಮಾಡಿವೆ. ಮನುಷ್ಯನ ಇಡೀ ಬದುಕಿನ ಆಗುಹೋಗುಗಳನ್ನು ಹೀಗೆಯೇ ಇರಬೇಕು, ಇದಿರಬಾರದು ; ಯಾವುದನ್ನ ತಿನ್ನಬೇಕು , ಯಾವ ತರಹದ ಬಟ್ಟೆ ಹಾಕಬೇಕು, ಯಾವುದನ್ನ ಓದಬೇಕು ಎಂದು ಕಟ್ಟಪ್ಪಣೆ ಮಾಡಲು ತೊಡಗಿವೆ.  ಯಾವ ನೈತಿಕತೆ ಜನ ಸಾಮಾನ್ಯರ ಬದುಕಿನೊಳಗೆ ಹಾಸುಹೊಕ್ಕಾಗಿ ಬೆಳೆದು ನಿಂತಿದೆಯೋ ಅದನ್ನು ಒಂದು ಆಲೋಚನಾ ಪರವಾಗಿ ನಿಂತು ಕೃತಕವಾಗಿ ಸೃಷ್ಟಿಸುವ ಕಾರ್ಯಕ್ಕೆ ಕೈಹಾಕಿವೆ. ಇದೆಲ್ಲರದರ ನಡುವೆ ಜನ ಇನ್ನೂ ಸ್ಥೈರ್ಯ ಕಳೆದುಕೊಂಡಿಲ್ಲ. ಅವರು ಕಳೆದುಕೊಂಡಾಗ ಏನಾಗುತ್ತದೆ ಎಂಬುದಕ್ಕೆ ಇತಿಹಾಸದಲ್ಲಿ ಬೇಕಾದಷ್ಟೂ ಉದಾಹರಣೆಗಳು ಸಿಗುತ್ತವೆ!

ಪ್ರಸ್ತುತ ಕೇಂದ್ರ ಸರ್ಕಾರ ಭಾಳಷ್ಟು ಪೋರ್ನ್ ಸೈಟ್ ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಅದರ ಸಂಖ್ಯೆ ಹತ್ತತ್ತಿರ 857 ಎಂಬುವ ಅಂಕಿಯಂಶಗಳನ್ನೂ ಸಹ ಬಿಡುಗಡೆ ಮಾಡುವುದರೊಂದಿಗೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸುವುದಕ್ಕಾಗಿಯೇ ಈ ನಿಷೇಧವನ್ನು ತರಲಾಗಿದೆಯೆಂದು ಹೇಳಿದೆ.  ಆದರೆ ಸುಪ್ರೀಂಕೋರ್ಟ್ 'ವಯಸ್ಕ ವ್ಯಕ್ತಿ ತನ್ನ ಖಾಸಗಿ ಕೋಣೆಯಲ್ಲಿ ಪೋರ್ನ್ ವೆಬ್ ಸೈಟ್ ಗಳ ವೀಕ್ಷಣೆಯನ್ನು ನಿಷೇಧಿಸುವುದು ಸಂವಿಧಾನ 21 ನೇ ಪರಿಚ್ಛೇಧದಲ್ಲಿ ಉಲ್ಲೇಖಿತ ''ವ್ಯಕ್ತಿ ಸ್ವಾತಂತ್ರ್ಯ''ದ  ಉಲ್ಲಂಘನೆಯಾಗುತ್ತದೆ' ಎಂದು ಅಭಿಪ್ರಾಯಪಟ್ಟಿದೆ.(ವರದಿ)  ಅಸಲಿಗೆ ಸುಪ್ರೀಂ ಕೋರ್ಟ್ ನ ಕಾಳಜಿ ಇದ್ದದ್ದು ಮಕ್ಕಳನ್ನು
ಪೋರ್ನೋಗ್ರಫಿ ಬಳಸಿಕೊಳ್ಳುತ್ತಿರುವುದನ್ನು ತಡೆಗಟ್ಟುವ ಬಗ್ಗೆ. ಹಾಗಾಗಿ ಈ ಬಗ್ಗೆ ಸರಕಾರ ಕಠಿಣಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ತನ್ನ ಮೂಲಭೂತವಾದಿ ಅಜೆಂಡಾಗಳನ್ನು ಜಾರಿಗೆ ತರಲು ಸದಾ ಹವಣಿಸುವ ಸರ್ಕಾರ ಏಕಾಏಕಿ 857 ವೆಬ್ ತಾಣಗಳ ಮೇಲೆ ನಿರ್ಬಂಧ ಹೇರಿತು. ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ವಿರೋಧ ಹೆಚ್ಚಾಯಿತೋ ಇದನ್ನು ನ್ಯಾಯಾಲಯದ ನಿರ್ದೇಶನ ಎಂತಲೂ ಮತ್ತು ತಾತ್ಕಾಲಿಕ ನಿರ್ಬಂಧ ಎಂತಲೂ ಹೇಳಿ ನುಣುಚಿಕೊಂಡಿತು. 

     ಇಷ್ಟು ದಿನಗಳವರೆಗೂ ಇಲ್ಲದ ರಾದ್ಧಾಂತ ಈವಾಗ ಎಲ್ಲಿಂದ ಹುಟ್ಟಿಕೊಂಡಿತು? ಮತ್ತು ಇಂಥ ತಾಣಗಳ ನಿಷೇಧಕ್ಕಿಂತಲೂ ಮಾಡಲೂ ಇನ್ನೂ ಬೇಕಾದಷ್ಟೂ ಕೆಲಸಗಳು ಇರುವಾಗ ಇವೆಲ್ಲಾ ಯಾಕೆ ಹುಟ್ಟಿಕೊಳ್ಳುತ್ತಿವೆ? ಎಂದು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೂ ಸಾಕು ಇದೆಲ್ಲವೂ ಯಾವುದೋ ಒಂದು ಸಿದ್ದಾಂತ ಪ್ರೇರಿತ ನೈತಿಕತೆಯನ್ನು ಪ್ರತಿಬಿಂಬಿಸುವ ಸಲುವಾಗಿ  ನಡೆಯತ್ತಿರುವ ಪ್ರಹಸನಗಳು ಎಂದು ಗೊತ್ತಾಗಿಬಿಡುತ್ತದೆ. ಮಕ್ಕಳನ್ನು ಪೋರ್ನೋಗ್ರಫಿ ಬಳಸಿಕೊಳ್ಳುತ್ತಿರುವುದು ಮತ್ತು ಮಾನವ ಕಳ್ಳಸಾಗಾಣಿಕೆಯು ಪೋರ್ನೋಗ್ರಫಿ ಸಲುವಾಗೇ ನಡೆಯುತ್ತಿದೆ ಎಂಬ ವಾದದೊಂದಿಗೆ ಇದನ್ನು ನಿಷೇಧ ಮಾಡಬೇಕು ಎನ್ನಲಾಗುತ್ತಿದೆ. ಹಾಗಿದ್ದರೆ ಪೋರ್ನೋಗ್ರಫಿಗೆ ನಿರ್ಬಂಧ ಹೇರಿದರೆ ಇದೆಲ್ಲವೂ ಸರಿಯಾಗಿ ಬಿಡುತ್ತದೆಯೇ? ಇಲ್ಲ! ಯಾಕಂದ್ರೆ ಇದೆಲ್ಲಾ ತುಂಬಾ ಹಿಂದಿನಿಂದಲೂ ಸಮಸ್ಯೆಗಳು. ಇಲ್ಲಿ ವೃಂದಾವನ ವಿಧವೆಯರು ನೆನಪಾಗುತ್ತಾರೆ. ಅವರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದು ಯಾರು? ಹೇಗೆ? ಏಕೆ? ಇದಕ್ಕೆ ಪೋರ್ನೋಗ್ರಫಿ ಕಾರಣ ಎನ್ನುತ್ತೀರೇನು?! (ವರದಿ ) ಮತ್ತೊಮ್ಮೆ ಈ ಕುರಿತು ಮಾತಾನಾಡುವೆ.  
ನಾವು ಗಮನಿಸಬೇಕಾದ್ದು ಸರ್ಕಾರಗಳು ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಮತ್ತಷ್ಟು ಜಟಿಲಗೊಳಿಸಿ ವಿವಾದಗಳಲ್ಲೇ ಪ್ರಚಾರ ಗಿಟ್ಟಿಸಿಕೊಂಡು ತಮ್ಮ ಅವಧಿ ಮುಗಿಸಿಕೊಳ್ಳುತ್ತವೆ ಅಥವಾ ಮತ್ತೊಂದು ಅವಧಿಗೆ ಚುನಾಯಿತರಾಗುತ್ತವೆ ಎಂಬುದನ್ನ.  

 ನಮ್ಮ ಜೀವನಕ್ಕೆ  ಪೋರ್ನ್ ಸೈಟ್ ಗಳ ಅವಶ್ಯಕತೆ ಇದೆಯೇ ಎಂದರೆ ನಾವು ತಬ್ಬಿಬ್ಬಾಗುವುದು ಸಹಜ.  ತುಂಬಾ ಮುಜುಗರವನ್ನು ತರುವ ಪ್ರಶ್ನೆ ಕೂಡ. ಯಾಕಂದ್ರೆ ಲೈಂಗಿಕ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಭಾರತೀಯ ಸಮಾಜದಲ್ಲಿ ಮಾತನಾಡುವುದು ಮತ್ತು ಅಭಿಪ್ರಾಯ ಹಂಚಿಕೊಳ್ಳುವುದು ತೀರ ಅಪರೂಪ. ಆದೇನಿದ್ದರೂ ಪಿಸುಪಿಸು ಮಾತಿನಲ್ಲೇ ನಡೆದುಹೋಗುತ್ತದೆ. ಆದರೆ ವಿಚಾರವೇ ಇಲ್ಲವೆಂದಲ್ಲ! ಗುಪ್ತವಾಗಿದೆಯಷ್ಟೇ. 
ಲೈಂಗಿಕ ಶಿಕ್ಷಣದಂತ ಸೂಕ್ಷ್ಮ ಕಲಿಕೆಗಳನ್ನು ಪರಿಸರದ ಜೊತೆಗೆ ಆಯಾ ಪ್ರಾದೇಶಿಕ ಜನ ಸಂಸ್ಕೃತಿಗಳು ಲಗಾಯ್ತಿನಿಂದಿಲೂ ಹೊಂದಿವೆ. ಮತ್ತು ’ಲೈಂಗಿಕತೆ ’ ಎನ್ನುವುದು ಉಪಖಂಡ ಬಹುತೇಕ ಎಲ್ಲ ಸಂಸ್ಕೃತಿಗಳಲ್ಲೂ ನಾನಾ ರೂಪಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವುದೇ ಸಾಕ್ಷಿ.  ಇಪ್ಪತ್ತಕ್ಕೂ ಹೆಚ್ಚು ಜನ ವಿದ್ವಾಂಸರು ನೂರಾರು ವರ್ಷಗಳ ಅವಧಿಯಲ್ಲಿ ಬರೆದ ಕಾಮಶಾಸ್ತ್ರ ( ಕಾಮಸೂತ್ರ ಇದರ ಒಂದು ಕೃತಿ ಅಷ್ಟೇ ) ಸಾವಿರಾರು ದೇವಳಗಳಲ್ಲಿ ಮೂಡಿಬಂದಿರುವ ಮಿಥುನ ಶಿಲ್ಪಗಳು, ಮಹಾಭಾರತಾದಿಯಾಗಿ ಪುರಾಣ -ಪುಣ್ಯಕತೆಗಳಲ್ಲಿನ ಸುರತ ಪ್ರಸಂಗಗಳು  ಇತ್ಯಾದಿ . ನಿಷೇಧ /ನಾಶ ಮಾಡುವುದೇ ಆಗಿದ್ದರೆ ಇಂತಹ ಎಲ್ಲಾ ರೂಪಗಳನ್ನು ನಾವು ನಾಶ ಮಾಡಬೇಕಾಗುತ್ತದೆ. ಯಾಕಂದರೆ ಇವೆಲ್ಲವೂ ಭಾಗಶಃ ಪೋರ್ನೋಗ್ರಫಿಯ ಅಂಶಗಳಿಂದ ಕೂಡಿವೆ. ಆದರೆ ಅಂತಹ ಸ್ಥಿತಿ ಖಂಡಿತ ಈ ದೇಶಕ್ಕೆ ಬಂದಿಲ್ಲ.  ನಾವು ನಾಶಗೊಳಿಸಬೇಕಿರುವುದು ಬಲವಂತ ಮತ್ತು ಹಿಂಸೆಯಿಂದ ಲೈಂಗಿಕ ಪ್ರಚೋದನೆಯ ಸ್ವರೂಪಗಳನ್ನೇ ಹೊರತು ಪೋರ್ನೋಗ್ರಫಿಯನ್ನೇ ಅಲ್ಲ. 

ಇನ್ನೂ ಕೆಲವರು ಬೈಕ್ ಸವಾರಿಯಲ್ಲಿ ಮೊಬೈಲ್ ಅನ್ನು, ರಸ್ತೆಬದಿಗಳಲ್ಲಿ ಸಿಗರೇಟು, ಮಧ್ಯ ಪಾನಗಳನ್ನು ನಿಷೇಧಿಸಿದ ಹಾಗೆ ಇದುವೇ ಎನ್ನುತ್ತಾರೆ. ಹೌದು ಅವು ಒಳ್ಳೆಯ ನಿಯಂತ್ರಣಗಳು ಅಷ್ಟೇ. ಮನೆಯಲ್ಲಿ ಮೊಬೈಲ್ ಬಳಸಲು, ಧೂಮಪಾನ - ಮಧ್ಯಪಾನ ಮಾಡಲು ನಿಷೇಧವಿಲ್ಲ. ಸಾರ್ವಜನಿಕ ಬದುಕಿಗೂ ವೈಯುಕ್ತಿಕ ಬದುಕಿಗೂ ವ್ಯತ್ಯಾಸವನ್ನು ನಾವು ಅರಿತುಕೊಳ್ಳಬೇಕು.  ಮತ್ತು ಪ್ರಾಣಿಸಂಭೋಗ, ಸಲಿಂಗ ಕಾಮ, ಹಲವು ಭಾವ ಭಂಗಿಗಳಲ್ಲಿರುವ ದೇವಳಗಳ ಮಿಥುನ ಶಿಲ್ಪಗಳನ್ನು ನೋಡಿಯೂ ಅದು ಶೃಂಗಾರವೆಂದೂ ಪೋರ್ನೋಗ್ರಫಿ ಅಲ್ಲವೆಂದು ಹೇಳುವವರಿಗೆ ಉತ್ತರಿಸದೇ ಇರುವುದೇ ಒಳ್ಳೆಯದು.    

ಜನರ ಆಹಾರವನ್ನು, ತೊಡುವ ಬಟ್ಟೆಯನ್ನು, ಆಡುವ ಭಾಷೆಯನ್ನು, ಓದುವ ಪುಸ್ತಕಗಳನ್ನು,  ಕಡೆಗೆ ಮನೆಯ ಕೋಣೆಯ ವೈಯುಕ್ತಿಕ ವ್ಯವಹಾರಗಳ ಮೇಲೆ ಹೇರುವ ಈ ’ನಿಷೇಧ ಸಂಸ್ಕೃತಿ’ ಭಾರತದಂತಾ ಉಪಖಂಡಕ್ಕೆ ಒಗ್ಗಿಕೊಳ್ಳುವುದಿಲ್ಲ. ಬದಲಿಗೆ ಜನರಲ್ಲಿ ಕೆಟ್ಟ ಕುತೂಹಲಕ್ಕೋ , ಸರ್ಕಾರ ವಿರೋಧಿ ಧೋರಣೆಗೊ ಕಾರಣವಾಗಿ ಬಿಡುತ್ತವೆ. ಕಾಮಸೂತ್ರವನ್ನು ಓದುವವರು ಓದಿಕೊಳ್ಳಲಿ,  ಪೋರ್ನ್ ನೋಡುವವರು ನೋಡಲಿ ಬಿಡಲಿ.. ಇದೆಲ್ಲವೂ ವ್ಯಕ್ತಿಗತ.

ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಕಾರ್ಪೊರೇಟ್ ಸಂಸ್ಕೃತಿಗೆ ಗಾಳಿ ಬೀಸುತ್ತಾ ಅದರೊಂದಿಗೆ ಅಧಾರ್ ವಾಪಸಾತಿ, ವ್ಯಾಪಮ್ ಹಗರಣ, ಲಲಿತ್ ಮೋದಿ ವಿವಾದ, ಗಲ್ಲು ಶಿಕ್ಷೆ ರದ್ದತಿ, ರೈತರ ಸರಣಿ ಆತ್ಮಹತ್ಯೆ, ಭೂ ಕಾಯ್ದೆ ವಿವಾದ, ಹಣದುಬ್ಬರ, ಸಂಸತ್ತಿನ ಅಧಿವೇಶನಗಳಲ್ಲಿ ವಿರೋಧ ಪಕ್ಷಗಳ ನಿರಂತರ ಧರಣಿಗಳಿಗೆ ಸಿಕ್ಕಿ ಬೇಸತ್ತಿರುವ ಸರ್ಕಾರ, ಈ ಸುದ್ದಿಗಳನ್ನು ಹತ್ತಿಕ್ಕಿ ದಾರಿ ತಪ್ಪಿಸಲು ಬಳಸಿದ ಹೊಸಬಾಣ ಪ್ರಯೋಗದಂತಿದೆ ಈ ಹೊಸ ನಿಷೇಧ.


ಏನೇ ಆದರೂ ಜನತಂತ್ರ ಸರಕಾರಗಳು ನಿಷೇಧ ಸಂಸ್ಕೃತಿಗಳಿಗೆ ಹೊರತಾಗಿರುವುದು ಒಳ್ಳೆಯದು.


 - ಕನ್ನಡ ಪ್ರಭ - 8 ನೇ ಆಗಸ್ಟ್ 2015  (http://epaper.kannadaprabha.in/PUBLICATIONS/KANNADAPRABHABANGALORE/KAN/2015/08/05/ArticleHtmls/05082015007005.shtml?Mode=1)

No comments:

Post a Comment