Wednesday, August 10, 2016

ವರ್ತಮಾನದ ಕಾವ್ಯ ಮತ್ತು ಅಕ್ಷರ ಹಿಂಸೆ | ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕಾರ ಭಾಷಣ



ಎಲ್ಲರಿಗೂ ನಮಸ್ಕಾರ 

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಕಡೆಂಗೋಡ್ಲು ಕಾವ್ಯ ಸ್ಪರ್ಧೆಯ ವಿವರಗಳನ್ನು ಪಡೆದುಕೊಂಡ ಹತ್ತುವರ್ಷಗಳ ನಂತರ ಅದರಲ್ಲಿ ಭಾಗವಹಿಸಿ, ಪುರಸ್ಕಾರವನ್ನು ಪಡೆದದ್ದು ನನಗೆ ಬಹಳ ಖುಷಿಯ ವಿಚಾರವೇ ಆಗಿದೆ  
ಕಾವೇರಿತೀರದಿಂದ ಕಡಲತಡಿಗೆ ಕರೆಯಿಸಿ ಈ ಪುರಸ್ಕಾರವನ್ನು ನನಗೆ ನೀಡುತ್ತಿರುವ   ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದವರಿಗೂ. ಮತ್ತು ತೀರ್ಪುಗಾರರಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು. 

  


ಮಾತೇ ನಿಲ್ಲದ ಕಾಲದಲ್ಲಿ ತತ್ವ ಅಪಥ್ಯವಾಗುತ್ತದೆ. ಅಂತಹ ಕಾಲದಲ್ಲಿ ಕಾವ್ಯದ ಗತಿಯೇನು ?!
ಅಂತಹ ಕಾಲದಲ್ಲೇ ನಿಂತಿರುವ ನಾನು ಬೇರೆ ಯಾರೋ, ಯಾರನ್ನೋ  ಕೇಳುವುದಕ್ಕಿಂತ ನನ್ನನು ನಾನೇ ಆಗಾಗ್ಗೆ ಕೇಳಿಕೊಳ್ಳುವ ಪ್ರಶ್ನೆ ಕೂಡ. ಅಲ್ಲದೇ ಇವತ್ತಿನ ಕಾವ್ಯ ಯಾವುದಕ್ಕೆ? ಯಾರಿಗೆ? ಮತ್ತು ಯಾಕೆ ?
ಎಂಬಂತಹ ಪ್ರಶ್ನೆಗಳನ್ನು ಆಗಾಗ್ಗೆ ಎಲ್ಲ ಕವಿಗಳು - ವಿಮರ್ಶಕರು, ಓದುಗರು ಕೇಳಿಕೊಳ್ಳುತ್ತಲೇ ಇರುತ್ತಾರೆ ಅನಿಸತ್ತೆ. ಹಾಗೆ ಈ ಪ್ರಶ್ನೆಯೇ ಹುಟ್ಟದೇ ಹೋಗಿದ್ದರೆ ಕಾವ್ಯ ಹುಟ್ಟುವುದು ಕೂಡ ಕಷ್ಟವಾಗಿರುವ ಸಮಾಜವೊಂದರ ಭಾಗವಾಗಿ ನಾವಿರುತ್ತಿದ್ದೆವು ಅಷ್ಟೇ. ಇದರ ಉತ್ತರವೂ ಕೂಡ ಆಯಾ ದೇಶಕಾಲ, ಭಾಷೆಗಳ ಮೇಲೆ ಅವಲಂಬಿತವಾಗಿ ಬದಲಾದ ತನ್ನದೇ ಕಾರಣಗಳನ್ನು, ಪ್ರೇರಣೆಗಳನ್ನು ಹೊಂದಿರತ್ತೆ. ಹಾಗಿದ್ದರೆ ಈ ಕಾಲದ ಈ ದೇಶದ ಈ ಭಾಷೆಯ ಕಾವ್ಯ ನಿರ್ಮಿತಿಯ  ಕಾರಣಗಳು ಯಾವುವು ಅಂತ ಕೇಳಿದ್ರೆ ನಾನು ಪರೀಕ್ಷೆ ಬರೆಯಲು ಬಾರದ ಹುಡುಗನಂತೆ ಸುಮ್ಮನೆ ನಿಂತುಬಿಡ್ತೀನಿ. ಯಾಕಂದ್ರೆ ನನಗೆ ಪ್ರಶ್ನೆ ಮಾತ್ರ ಚೆನ್ನಾಗಿ ಗೊತ್ತು ಆದರೆ ಉತ್ತರ ಕುರಿತು ಅಷ್ಟಾಗಿ ಇನ್ನೂ ತಲೆಕೆಡಿಸಿಕೊಳ್ಳದವ. ಕಾವ್ಯ ಕಟ್ಟುವಲ್ಲಿ ನನಗೆ ಬಾಹ್ಯ ಒತ್ತಡಗಳಿಗಿಂತ ಅಂತರಿಕ ಒತ್ತಡಗಳೇ ಜಾಸ್ತಿ ಇದ್ದುವು. ಅದರಲ್ಲಿ ಮುಖ್ಯವಾದದ್ದು 'ಮಾತು'.  ಸದಾ ಗೆಳೆಯರೊಂದಿಗೆ ನಾನಾ ವಿಚಾರವಾಗಿ ಮಾತನಾಡುತ್ತಿದ್ದ ನಾನು ಕೆಲವೊಮ್ಮೆ ತೀರ ಅಸಂಗತವಾದ ಮೌನಕ್ಕೆ ಒಳಗಾಗಿಬಿಡುತ್ತಿದ್ದೆ. ಇದು ಯಾಕೆ ಅಸಂಗತವಾದ ಮೌನವೆಂದರೆ ಕೆಲವು ಮಾತುಗಳನ್ನು ಕಾವ್ಯದ ಮೂಲಕ ಮಾತ್ರ ನಾನು ಹೇಳಬಲ್ಲವನಾಗಿದ್ದೇ. ಅದು ಯಾವುದಾದರೂ ಆಗಿರಲಿ. ನನ್ನ ಅಭಿವ್ಯಕ್ತಿಯ ಮುಖ್ಯ ಮಾರ್ಗ 'ಕಾವ್ಯವೇ' ಆಗಿತ್ತು. ಬೇರೆಯದೇ ಆದ ರೀತಿಯಲ್ಲಿ ನಾನು ಮಾತನಾಡಲು ಸಾಧ್ಯವಿರಲಿಲ್ಲ. ನಿಮಗೆ ದೋಸೆಯೇ ಯಾಕೆ ಇಷ್ಟ? ಇಡ್ಲಿ ಯಾಕೆ ಇಷ್ಟವಿಲ್ಲ ಅಂದ್ರೆ ಏನು ಹೇಳಲು ಸಾಧ್ಯ!  
ಕಾವ್ಯ ಯಾವುದಕ್ಕೆ? ಯಾರಿಗೆ? ಮತ್ತು ಯಾಕೆ ಎನ್ನುವುದಕ್ಕೆ ನನ್ನ ಉತ್ತರ ನನಗೆ ಸಿಕ್ಕಿದ್ದು ನಾಗರೀಕನಾಗಿ ನಾನು ಆ ಮೂಲಕ ಸಮಾಜದೊಂದಿಗೆ, ಮನುಷ್ಯನಾಗಿ ಪ್ರಕೃತಿಯೊಂದಿಗೆ  ಪ್ರತಿಸ್ಪಂಧಿಸಿಬಲ್ಲವನಾಗಿದ್ದೇ.   
ಕಾವ್ಯವು,  ಜಗತ್ತು ಮತ್ತು ವ್ಯಕ್ತಿಯ ನಡುವೆ ಸೇತುವಾಗಿತ್ತು.   

ಕಾವ್ಯವು ರಾಜಕಾರಣವನ್ನು ಮಾತನಾಡಬಹುದೇ?!  ಅಗತ್ಯವಾಗಿ ಮತ್ತು ಅತ್ಯಂತ ಜರೂರಾಗಿ ಕಾವ್ಯ ರಾಜಕಾರಣವನ್ನು ಮಾತನಾಡಬೇಕು. ಕಾವ್ಯಕ್ಕೆ ಎಲ್ಲೆಯನ್ನು ಹಾಕಲು ನಾವು ಯಾರು? ಅದು ಸಂಪೂರ್ಣ ಸ್ವತಂತ್ರವಾದ ಅಭಿವ್ಯಕ್ತಿ ಮಾಧ್ಯಮ. ಅದಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಈ ನೆಲದಲ್ಲಿ ಕಾವ್ಯಗಳು ಹುಟ್ಟಿದ್ದೇ ರಾಜಕೀಯದಿಂದ. ರಾಮಾಯಣ ಭಾರತಾದಿ ಮಹಾಕಾವ್ಯಗಳು, ಜನಪದರ ಮೌಖಿಕ ಮಹಾಕಾವ್ಯಗಳೂ ಕೂಡ ರಾಜಕಾರಣ, ಧರ್ಮಕಾರಣಗಳಿಂದ ಕೂಡಿವೆ. ಆದರೆ ಕಾವ್ಯ ಪಕ್ಷಪಾತಿಯಾಗಬಾರದು. ಕಾವ್ಯಕ್ಕೊಂದು ಆಘೋಷಿತವಾದ ಸಾಮಾಜಿಕ ಬದ್ದತೆಯಿದೆ.   ಜನನಯಕರಾಗಬೇಕಾದ ಕಾವ್ಯಗಳು ಯಾವಾಗ ಪವಿತ್ರ ಗ್ರಂಥಗಳಾಗ ತೊಡಗುತ್ತವೋ ಅಲ್ಲಿಗೆ ಅದು ದುಂಡಾವರ್ತನೆಗೆ ಇಳಿದಿದೆ ಎಂದು ಅರ್ಥ. ಅದರ ಉಪದ್ರವ ಹೆಚ್ಚಾದಷ್ಟೂ ಅದರ ಕವಿತಶೀಲತೆ ತೆಳುವಾಗುತ್ತಾ ಕೇವಲ ಅಕ್ಷರವಾಗುತ್ತದೆ. ಕಡೆಗೆ ತೆಳುಪದರವೂ ಉದುರಿ ಬರಿಯ ಎಲುಬು ಮಾತ್ರ ಉಳಿದಾಗ ಅಲ್ಲಿ ಅಕ್ಷರದ ಹಿಂಸೆ ಶುರುವಾಗುತ್ತದೆ. 
ಈವಾಗ ಕಾವ್ಯದ ವ್ಯಾಪ್ತಿ ಮತ್ತಷ್ಟು ಹರಡಿಕೊಳ್ಳುತ್ತದೆ. ಈವಾಗ ಕಾವ್ಯ ಎಂದರೆ ಬರಿಯ ಕವಿತೆ (Poetry) ಮಾತ್ರವಲ್ಲ ಅದು ನಾಟಕ, ಕಥೆ, ಕಾದಂಬರಿ ಒಟ್ಟೂ ಎಲ್ಲ ತರಹದ ಬರಹವೂ ಸೇರಿಕೊಳ್ಳುತ್ತದೆ. ಯಾಕಾದನ್ರೇ ಈ ಪ್ರಪಂಚದ ಎಲ್ಲ ಸಾಹಿತ್ಯವೂ ಮೊದಲು ಕಾವ್ಯದಿಂದ ಶುರುವಾಗಿ ಬೇರೆಬೇರೆಯಾಗಿ ಕವಲೊಡೆದು ಬೆಳೆದು ಸ್ವತಂತ್ರ ಅಸ್ತಿತ್ವ ಪಡೆದುಕೊಂಡವು. ಅದರ ಅವುಗಳಲ್ಲಿ ಹರಿಯುತ್ತಿರುವ ರಕ್ತ ಮಾತ್ರ ಕಾವ್ಯವೇ ಆಗಿದೆ. 
ಉದಾ: ಹಿಂದೆ ಅನಂತಮೂರ್ತಿಯವರು, 'ಭೈರಪ್ಪನವರ ಕಾದಂಬರಿಯಲ್ಲಿ ಕಾವ್ಯತ್ವವಿಲ್ಲ'   ಎಂಬಂತಹ ಮಾತನಾಡಿದ್ದರು.    
ಕಾವ್ಯತ್ವವಿಲ್ಲದ ಸಾಹಿತ್ಯ ಪ್ರಕಾರವೇ ಇಲ್ಲ. ಯಾವಾಗ ಕಾವ್ಯಾತ್ಮವನ್ನು ಕಳೆದುಕೊಂಡು ಬರಿಯ ಎಲುಬು ಬರಹದಲ್ಲಿ ಉಳಿಯಿತೋ, ಅದು ಸರ್ವಭಕ್ಷಕ  ಸಸ್ತನಿಯಾಗಿ ಜನರ ಆಲೋಚನೆಗಳನ್ನು ತಿಂದು ಬದುಕಲು ಶುರು ಮಾಡುತ್ತದೆ. ಇಲ್ಲೇ ಅಕ್ಷರದ ಹಿಂಸೆ ಶುರುವಾಗುವುದು. ಅಕ್ಷರದ ಹಿಂಸೆ ಕುದುರೆಯ ಜೀನು ಇದ್ದ ಹಾಗೆ. ತನ್ನ ಅನುಯಾಯಿಗಳನ್ನು ತನ್ನ ದಾರಿಯಲ್ಲಿ ತಪ್ಪಿಸಿಕೊಳ್ಳದ ಹಾಗೆ   ವರ್ತಮಾನದ ಕಾವ್ಯದಲ್ಲಿ ಅಥವಾ ಎಲ್ಲ ರೀತಿಯ ಬರಹಗಳಲ್ಲಿ ಈ ರೀತಿಯ ಅಕ್ಷರದ ಹಿಂಸೆ ಶುರುವಾಗಿದೆ. ಅದು ಕೆಳವರ್ಗದ  ಜನಾಂಗಗಳನ್ನು, ಅವರುಗಳ ಬದುಕನ್ನು, ಹಕ್ಕುಗಳನ್ನು, ಸವಲತ್ತುಗಳನ್ನು ದರ್ಪದಿಂದ ಪ್ರಶ್ನಿಸುತ್ತಾ ತಮ್ಮ ಸಂಸ್ಕೃತಿಯನ್ನು ಏಕಮಾತ್ರವಾಗಿ ಎಲ್ಲ ಅನುಸರಿಸಬೇಕೆಂದು ಕಟ್ಟಪ್ಪಣೆ ಮಾಡಲು ಶುರು ಮಾಡುತ್ತದೆ. .ಇಲ್ಲಿಗೆ ನಿಲ್ಲದೆ ಈಗ ಪತ್ರಿಕಾ ರಂಗ ಮತ್ತು ಸುದ್ದಿ ಮಾಧ್ಯಮಗಳಿಗೂ ಸೋಂಕು ಹತ್ತಿಕೊಂಡಿದೆ. ಇದೇನು ವರ್ತಮಾನದಲ್ಲಿ ಕಾಣುತ್ತಿರುವ ಹೊಸ ಸಮಸ್ಯೆಯೇನು ಅಲ್ಲ. ಇದು ಮನುಷ್ಯನ ಬದುಕಿನುದ್ದಕೂ ನೆರಳಿನಂತೆ ಜೊತೆಯಲ್ಲಿಯೇ ಬರುತ್ತದೆ. ಆದರೆ ಪ್ರಜಾಸತ್ತೆಯ ಸೂರಿನಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಲ್ಲಿ ಬದುಕಬೇಕಾದ ಹೊತ್ತಿನಲ್ಲಿ ಮತ್ತದೇ ಊಳಿಗದ ಸಮಾಜವನ್ನು ಬಯಸುವ  ಈ ಕೆಟ್ಟ ನೆರಳು ನಮಗಿಂತಲೂ ದೊಡ್ಡದಾಗಿ ಬೆಳೆದು ಬೆಳಕನ್ನೇ ತಿಂದು ಹಾಕುತ್ತಿದೆ. ಮುಂದೆ ಇದರ ಸ್ವರೂಪದ ಸ್ವಲ್ಪ ಯೋಚಿಸಿದರೂ ವಿನಾಶವೇ ಎದ್ದು ಕಾಣುತ್ತಿದೆ. 

ಅಕ್ಷರದ ಹಿಂಸೆ ಮತ್ತು  'ಅಭಿವ್ಯಕ್ತಿ ಸ್ವಾತಂತ್ರ್ಯ' 

ಯಾವ ಸ್ವಾತಂತ್ರ್ಯವೂ ಸ್ವೇಚ್ಛಾಚಾರವಲ್ಲ. ಹಾಗೆಯೇ ಎಲ್ಲ ಮಾತುಗಳೂ - ಬರಹಗಳೂ 'ಅಭಿವ್ಯಕ್ತಿ ಸ್ವಾತಂತ್ರ್ಯ' ಎನಿಸುವುದಿಲ್ಲ. ವಿರೋಧ ಮಾಡುವುದಕ್ಕೂ , ವೈರ-ದ್ವೇಷಗಳನ್ನು ಸಾಧಿಸುವುದಕ್ಕೂ ವ್ಯತ್ಯಾಸವಿದೆಯಲ್ಲವೇ?!
ಈ ಹಿಂದೆ ಮಾತಿನಲ್ಲಿ ಹಿಂಸೆಯಿತ್ತು. ಬೈಗುಳವಾಗಿ, ಅಪಹಾಸ್ಯವಾಗಿ, ಕುಹಕವಾಗಿ ಅದು ನಡೆದು ಬಂದಿತ್ತು. ಆದರೆ ಅದು ಅಷ್ಟು ಸುಲಭಕ್ಕೆ ಉಳಿಯುತ್ತಿರಲಿಲ್ಲ. ಕಾಲದ ಹಂಗಿನಲ್ಲಿ ಕರಗಿಹೋಗುತ್ತಿತ್ತು. ಆದರೆ ಈ ಕಾಲದಲ್ಲಿ ಹಾಗಲ್ಲ ಅದು ಅಕ್ಷರಕ್ಕೆ ಬಂದು ನಿಂತಿದೆ. ಅಕ್ಷರವೆಂಬುದು ಸುಲಭಕ್ಕೆ ಅಳಿಯುವುದಿಲ್ಲ. ಅಳಿಸಲು ಸಾಧ್ಯವೂ ಇಲ್ಲ. ಅದು ಎಲ್ಲ ಸಾಕ್ಷ್ಯಗಳೊಂದಿಗೆ ಹಾಗೆಯೇ ನಿಲ್ಲುತ್ತದೆ. ಆರೋಪ -ಅಪರಾಧಗಳ ನಡುವೆ ವಿಚಾರಣೆಯೇ ಇಲ್ಲದೆ ಶಿಕ್ಷೆಯಾಗುತ್ತದೆ.  ಆದರೆ ಅಪರಾಧ ಯಾರದು ಅಪರಾಧಿ ಯಾರು ಯಾವುದನ್ನೂ ನಾವು ತಿಳಿಯೆವು. ಕಾರಣ ಇದೆಲ್ಲವೂ ನಮ್ಮಗಳ ಪರೋಕ್ಷ ಉಪಸ್ಥಿತಿಯಲ್ಲಿ e - ಮಾಧ್ಯಮಗಳಲ್ಲಿ ನಡೆದುಹೋಗುತ್ತದೆ. ಫೇಸ್ಬುಕ್, ಟ್ವಿಟ್ಟರ್, ಬ್ಲಾಗ್ ಗಳಲ್ಲಿ ಚೂರೇ ಚೂರಾಗಿ ಶುರುವಾದ ಈ ಹಿಂಸೆಯ ಕೊಂಡಿ ಇದೀಗ ಪತ್ರಿಕೆ/ ಸುದ್ದಿ ಚಾನೆಲ್ ಗಳವರೆಗೆ ವ್ಯಾಪಿಸಿಕೊಂಡಿದೆ.  ಪತ್ರಿಕೆ/ ಸುದ್ದಿ ಚಾನೆಲ್ ಗಳ ನಿತ್ಯದ ಪ್ರಸಾರ ಮತ್ತು ಪ್ರಚಾರಕ್ಕಾಗಿ ರೋಚಕವಾದ ಸುದ್ದಿಗಳು ಬೇಕಾಗಿವೆ. ಅವುಗಳ ಪ್ರಸಾರ ಮಾಡುವ ಜನರ ಗಮನ ಸೆಳೆದು ಅಲ್ಲಿ ಹಣ ಸಂಪಾದಿಸುವ ಚಟಕ್ಕೆ ಪತ್ರಿಕೆ/ ಸುದ್ದಿ ಚಾನೆಲ್ ಗಳು ಬಂದು ನಿಂತಿವೆ. ಹೀಗೆ ಬಂದು ನಿಂತ ಪತ್ರಿಕೆ/ ಸುದ್ದಿ ಚಾನೆಲ್ ಗಳು ಅಕ್ಷರ ಹಿಂಸೆಯ ಸ್ವರೂಪವನ್ನು ನಮ್ಮ ಮನದಾಳಕ್ಕೆ ನಿತ್ಯವೂ ಬಿತ್ತುತ್ತಲೇ ಇವೆ. ಕೆಲವಂತೂ ವ್ಯಕ್ತಿಗಳ - ಪಕ್ಷಗಳ - ಮತ/ಧರ್ಮಗಳ ಮುಖವಾಣಿಗಳಾಗಿವೆ. ಇವುಗಳೆಲ್ಲದರ ಸ್ವಾರ್ಥದ ಹಿನ್ನೆಲೆಯಲ್ಲಿ ಸಿದ್ದವಾಗುತ್ತಿರುವ ರೋಚಕ ಸುದ್ದಿಗಳೂ 'ಅಕ್ಷರ ಹಿಂಸೆ' ಯ ಬೃಹತ್ ಮಾಧ್ಯಮಗಳಾಗಿವೆ. 

ಇದನ್ನು ನಿಲ್ಲಿಸುವುದು ಹೇಗೆ ? ಎಂದು ಪ್ರಶ್ನೆ ಕೇಳಿದರೆ ನಿಜಕ್ಕೂ ನನ್ನ ಬಳಿ ಸಿದ್ದ ಉತ್ತರವಿಲ್ಲ. ಆದರೆ ಕಾವ್ಯದಿಂದ ಎದುರಿಸಬಹುದು ಎಂದು ಮಾತ್ರ ಸಲಹೆ ನೀಡಬಲ್ಲೆ. ಆದರೆ ಎಂತಹ ಕಾವ್ಯವನ್ನು ಇದರ ಎದುರಿಗೆ ಕಟ್ಟಿ ಅದನ್ನು ಮಣಿಸಬೇಕು ಎಂಬುದನ್ನೂ ಕಟ್ಟುವ ಕವಿಯೇ ಯೋಚಿಸಿಬೇಕು. ಅವನಿಗೆ ಚೆನ್ನಾಗಿ ಗೊತ್ತು ಅಕ್ಷರದ ಹಿಂಸೆಯನು ಮಣಿಸುವ ಪರಿ. ಆದರೆ ಅದು ನಿಧಾನಮಾರ್ಗ. ಅಲ್ಲಿಯವರೆಗೂ?! ನನಗೂ ಗೊತ್ತಿಲ್ಲ. ಈ ಸಮಸ್ಯೆ ಬಹಳ ಗಂಭೀರವಾಗಿದೆ. ನಾವು ಮಕ್ಕಳಾಟವೆಂಬಂತೆ ಸುಮ್ಮನಿದ್ದೇವೆ. 


ಕಾವ್ಯ ಮತ್ತು ಬುಲೆಟ್ ಬೈಕ್ 

ಇಷ್ಟೆಲ್ಲಾ ರಗಳೆಗಳ ನಡುವೆ ಇವತ್ತಿನ ನನ್ನ ಪೀಳಿಗೆಯ ಕಾವ್ಯ ಹೇಗಿದೆ ಅಂದರೆ 
ಹಳೆಯ ಸೇತುವೆಯ ಮೇಲೆ ತಳ್ಳುವ ತೆಪ್ಪದಂತೆ ಇದೆ. ನನ್ನನೂ ಸೇರಿಸಿ 'ನಾವೆಲ್ಲ ನದಿಗೆ ಧುಮುಕಲು ಹೆದರಿದಂತೆ  ಕಾಣುತ್ತಿದೆ'. ಕಾವ್ಯದಲ್ಲಿ ನವ್ಯದವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಬಿಟ್ಟು ನಾವಿನ್ನೂ ಮೇಲೆ ಏಳುತ್ತಿಲ್ಲ. ಎದ್ದ ಕೆಲವರು ಮುಂದೆ ನಡೆಯುತ್ತಿಲ್ಲ. ನಡೆದ ಕೆಲವೇ ಕೆಲವರು ಕಾಣುತ್ತಲೇ ಇಲ್ಲ.    
ಕಾವ್ಯ ಯಾಕೆ ಯಾರಿಗೂ ಶೋಕಿಯ ವಿಷಯದಂತೆ ಕಾಣುತ್ತಿಲ್ಲ. ಅಸಲಿಗೆ ಅದು ಶೋಕಿಯಲ್ಲ ಎಂಬುದು ಬೇರೆ ವಿಚಾರ. ಇವತ್ತಿನ ಯುವಜನತೆ ಇಷ್ಟಪಡುವ ಒಂದು ಬುಲೆಟ್ ಬೈಕುಗಳು  ದಶಕಗಳ ಹಿಂದೆಯೇ ಅವುಗಳ ಪ್ರಸ್ತುತತೆ ಕಳೆದುಕೊಂಡು ಮೂಲೆಗೆ /ಗುಜರಿಗೆ ಸೇರಿದ್ದವು. ಆದರೆ ಯಾವುದೋ ಒಂದು ಸುಪ್ತ ಪ್ರಜ್ಞೆ, ಹಳೆಯದನ್ನು ಮರು ಬಳಸುವ ಹೊಸ ಶೋಕಿಯೊಂದನ್ನು ಹುಟ್ಟು ಹಾಕಿತು. ಸ್ವಲ್ಪ ವೆಚ್ಚವಾದರೂ ಸರಿಯೇ ಇದೀಗ ಊರುಗಳಲ್ಲಿ ಕಾಣುವುದೇ ದುಸ್ತರವಾಗಿದ್ದ ಬುಲೆಟ್ ಬೈಕುಗಳು,  ಗಲ್ಲಿ ಗಲ್ಲಿಗಳಲ್ಲಿ ನಾ ರೀತಿಯ ವಿನ್ಯಾಸ, ಬಣ್ಣ, ಸಾಮರ್ಥ್ಯಗಳನ್ನು ಮೈದುಂಬಿಕೊಂಡು ಓಡಾಡುತ್ತಿವೆ. ಜನಕ್ಕೂ ಅದರಲ್ಲಿ ಏನೋ ಅನುರಾಗ. 
ಇಂಥದು ಕಾವ್ಯದಲ್ಲಿ ಯಾಕೆ ಘಟಿಸಬಾರದು?! ನಾನಂತೂ ಇಂತಹದೊಂದು ಪವಾಡ ನಡೆದೇ ತಿರುತ್ತದೆ ಎಂದು ಭಾವಿಸಿ ಕಾಯುತ್ತಲೇ ಇದ್ದೇನೆ. ಅಕ್ಷರ ಹಿಂಸೆಗೆ, ಧಾವಂತದ ಬದುಕಿಗೆ ಕಾವ್ಯ ಔಷಧವಾಗಬಲ್ಲುವುದು, ಅದರ ಹೊಸಹುಟ್ಟು ಇಷ್ಟರಲ್ಲಿಯೇ ಘಟಿಸಲಿದೆ ಎಂಬುದು ನನ್ನ ನಂಬಿಕೆ.           

ನನ್ನದೊಂದು ಕವಿತೆ ಓದಿ ನನ್ನ ಮಾತನ್ನು ಕೊನೆಗೊಳಿಸುವೆ. 
ಅಕ್ಷರದ ಹಿಂಸೆ - ಕವಿತೆ ವಾಚನ 
ನಮಸ್ಕಾರ.                


(ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕಾರ ಭಾಷಣದ ವಿಸ್ಕೃತ ರೂಪ)  

No comments:

Post a Comment