Wednesday, August 17, 2016

ಕೊಡೆಸಂತರ ಮಳೆಬೀಡು | ಶಿಲ್ಲಾಂಗ್ ಪ್ರವಾಸ - 1

ಓದುವುದು ಬೋರಿಂಗ್ ಎನ್ನ ಬಹುದು ಆದರೆ ಊರುಸುತ್ತುವುದು, ವಿವಿಧ ಊಟಗಳನ್ನು ಹುಡುಕುವುದನ್ನ ಬಹುಶಃ ಯಾರೂ ಬೋರಿಂಗ್ ಎನ್ನಲಾಗದು. ಯಾಕಂದರೆ ಮನುಷ್ಯನಿಗೆ ಇವೆರಡೂ ಸದಾ ರುಚಿಯ ವಿಷಯಗಳು. ಒಂದು ಕಣ್ಣಿಗೆ ಮತ್ತೊಂದು ನಾಲಗೆಗೆ! 

ನಾನು ಕಾಲೇಜಿನಲ್ಲಿ ಓದುವಾಗ ಕ್ಲಾಸ್ ಗೆ ಹಾಜರಾಗುವುದಕ್ಕಿಂತ ಹೆಚ್ಚು ಹೊರಗೆ ವಿಚಾರ ಸಂಕಿರಣ, ಕಾರ್ಯಾಗಾರಗಳು ಕಮ್ಮಟಗಳು ಅಂತ ತಿರುಗಿದ್ದೇ ಹೆಚ್ಚು. ಓದಿದ್ದು ಕಾಮರ್ಸ್ ಆದರೂ ಒಲವೆಲ್ಲಾ ಸಾಹಿತ್ಯದಲ್ಲೇ ಇತ್ತು. ಇದು ಹೀಗೆಯೇ ಅನಿಸತ್ತೆ. ಯಾವುದನ್ನ ನಾವು ಔಪಚಾರಿಕವಾಗಿ ಓದುತ್ತೇವೋ ಅದರಲ್ಲಿ ನಮ್ಮ ಆಸಕ್ತಿ ಕುಗ್ಗಿ ಮತ್ತೊಂದರಲ್ಲಿ ಬೆಳೆದುಕೊಳ್ಳುತ್ತದೆ.  ಯಾವಾಗ ಎಂ ಕಾಂ ಮುಗಿಸಿ, ವ್ಯವಹಾರದಲ್ಲಿ ಮಗ್ನನಾದೇನೋ ಇದಕ್ಕೆಲ್ಲಾ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗತೊಡಗಿತು. ಜೊತೆಗೆ ಗೆಳೆಯರು ಕೂಡ ಅವರವರ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು.. ಸುತ್ತೋಕೆ ಜೊತೆ ಕೂಡ ಇಲ್ಲ. ಹೀಗೆಯೇ ಮುಂದುವರಿದು ಆರು ವರ್ಷಗಳ ಕಾಲ ನಾನು ಹೊರಗೆ ಓಡಾಡುವುದು ಅಸಾಧ್ಯವಾಯಿತು. ಊರು ಸುತ್ತುವ ಆಸೆ ಹಾಗೆ ಉಳಿಯಿತು, ಕೋಶ ಓದುವ ಕಾಯಕ ಮಾತ್ರ ಮುಂದುವರಿದಿತ್ತು. 

ಕಳೆದ ಮೂರು ವರ್ಷಗಳಿಂದ ಈಶಾನ್ಯ ಭಾರತದತ್ತ ಹೋಗುವ ಆಸೆಯಿತ್ತು. ಆದರೆ ಪ್ರತಿ ಪ್ಲಾನ್ ಸಿದ್ದವಾದಾಗಲೂ ಗೆಳೆಯರು ಕೈಕೊಡುತ್ತಲೇ ಇದ್ರು. ಆಮೇಲೆ ಶಿಲ್ಲಾಂಗ್ ನಲ್ಲಿದ್ದ ಗೆಳೆಯ ದೇವೇಂದ್ರ ಅಬ್ಬಿಗೇರಿಯವರು ಕೂಡ  ಬಹಳ ಸರ್ತಿ ಕರೆದು ಸುಸ್ತಾಗಿ ಬಂದ್ರೆ ಬನ್ನಿ ಇಲ್ಲಾಂದ್ರೆ ಈ ಸಾರ್ತಿ ನಂಗೆ ಇಲ್ಲಿಂದ ಬೇರೆ ಕಡೆಗೆ ವರ್ಗ ಆಗಬಹುದು ಅಂತ ಒಂದು ಬಾಂಬ್ ಬೇರೆ ಹಾಕಿದ್ರು. ಮತ್ತೆ ಗೆಳೆಯರೊಂದಿಗೆ ಸಾಲು ಚರ್ಚೆ. ಆದರೆ ಪ್ರಯೋಜನವಿಲ್ಲ. ಯಾರು ಸಧ್ಯಕ್ಕೆ ಬರಲು ತಯಾರು ಇಲ್ಲ. ಒಬ್ಬನೇ ಬರೋಬ್ಬರಿ ಮೂರು ಸಾವಿರ ಕಿಮಿ ಪ್ರಯಾಣ ಮಾಡುವುದು. ಅದೂ ಕನ್ನಡವಲ್ಲದೇ ಬೇರೆ ಭಾಷೆಯನ್ನು ತಿಳಿಯದ, ಜೀವನದಲ್ಲಿ ಒಂದೆರಡು ಸಲ ಮಾತ್ರ ಕರ್ನಾಟಕದ ಆಚೆಗೆ ಹೋಗಿದ್ದ ನಾನು ಈಶಾನ್ಯ ಭಾರತಕ್ಕೆ ಪ್ರಯಾಣ ಮಾಡುವುದು ಸೋಜಿಗದ ವಿಚಾರವೇ ಆಗಿತ್ತು. ಬಾರದೇ ಕೈ ಕೊಟ್ಟ ಗೆಳೆಯರು ಅಣಕಿಸುವುದನ್ನು ಏನು ಬಿಟ್ಟಿರಲಿಲ್ಲ. ಈ ನಡುವೆ ಅವರು ನನ್ನನ್ನು ಬಿಟ್ಟು ಬಹಳಷ್ಟು ಪ್ರವಾಸ ಮಾಡಿದ್ದರು! 'ನೀನು ಶಿಲ್ಲಾಂಗ್ ಗೆ ಹೋದ ಹಾಗೆ' ಎನ್ನುವ ಕುಹಕವೂ ಬಂತು ಬಿಡಿ. ಇದು ಬೇಸರವನ್ನು ಉಂಟುಮಾಡಿದರೂ ಕೆಟ್ಟದೊಂದು ಹಟವನ್ನು ಹುಟ್ಟುಹಾಕಿತು. ಇವರನ್ನೆ ಯಾಕೆ ನೆಚ್ಚಿಕೊಂಡು ಕೂರಬೇಕು ಎಂದುಕೊಂಡವನೇ ಯಾರಿಗೂ ಹೇಳದೇ ಕೇಳದೆ ಆನ್ಲೈನ್ ನಲ್ಲಿ ಹೋಗುವುದಕ್ಕೆ ಬರುವುದಕ್ಕೆ ವಿಮಾನದ ಸೀಟನ್ನು ಬುಕ್ ಮಾಡಿಯೇ ಬಿಟ್ಟೆ!
ಸೀಟು ಬುಕ್ಕೇನೋ ಆಯಿತು ಆದರೆ ನಾನು ಫಜೀತಿಗೆ ಸಿಲುಕಿಕೊಂಡೆ. ಇದುವರೆವಿಗೂ ನಾನು ರೈಲು -ಬಸ್ಸುಗಳ ನೆಲಮಾರ್ಗ ಬಿಟ್ಟು ಜಲಮಾರ್ಗ -ವಾಯುಮಾರ್ಗಗಳಲ್ಲಿ ಓಡಾಡಿದವನಲ್ಲ. ಶಿಲ್ಲಾಂಗ್ ಮುಟ್ಟಲು ರೈಲು- ಬಸ್ ಪ್ರಯಾಸ ಸೇರಿಸಿ  ಎರಡು ಮೂರು ದಿನ ಬೇಕು. ಮತ್ತೆ ವಾಪಸು ಆಗಲು ಕೂಡ ಅಷ್ಟೇ ದಿನ ಬೇಕು. ಹತ್ತತ್ತಿರ ಹೋಗಿ ಬರೋದಿಕ್ಕೇ ಒಂದು ವಾರ ಬೇಕು. ಆಮೇಲೆ ಅಲ್ಲಿ ಕನಿಷ್ಠ ಮೂರು ದಿನವಾದರೂ ಇರಬೇಕು. ಅಷ್ಟು ಸಮಯ ಖಂಡಿತ ನನ್ನ ಬಳಿ ಇರಲಿಲ್ಲ. ಹೇಗೋ ಐದು ದಿನಗಳನ್ನು ಹೊಂದಿಸಿಕೊಂಡಿದ್ದೆ. ವಿಮಾನದಲ್ಲಿ ಹೋದರೆ ಒಂದು ಮಧ್ಯಾಹ್ನದಲ್ಲಿ ನಾನು  ಶಿಲ್ಲಾಂಗ್ ತಲುಪಿಕೊಳ್ಳಬಹುದಿತ್ತು. ಆದರೆ ಹೇಗೆ ಹೋಗುವುದು. ಹಳ್ಳಿಗಾಡಿನ ಹುಡುಗನೊಬ್ಬ ಮೊದಲ ಬಾರಿ ವಿಮಾನಪ್ರಯಾಣ ಮಾಡುವುದು ಭಾಳ ಇರುಸುಮುರಿಸಿನ ವಿಚಾರ. ಯಾಕಂದರೆ ವಿಮಾನಯಾನದ ನಮಗೆ ಸದಾ ಕನಸಿನ ವಿಚಾರವಾಗಿತ್ತು. ಅದೀಗ ಕೈಗೆ ಎಟುಕಿತ್ತು. ಆದರೆ ಮುಟ್ಟಲು ಏನೋ ಅಂಜಿಕೆ ಅಷ್ಟೇ! 

ಸರಿ. ವಿಮಾನದ ಸೀಟನ್ನು ಬುಕ್ ಮಾಡಿ ಒಂದು ವಾರ ಕಳೆದಿತ್ತು. ಮಂಡ್ಯದಿಂದ ಏರ್ ಪೋರ್ಟ್ ಗೆ ಹೋಗುವುದು ಹೇಗೆ? ರೈಲು, ಬಸ್ ನಿಲ್ದಾಣಗಳು ಊರಿನಲ್ಲಿಯೇ ಇರ್ತಾವೆ. ಆದರೆ ಈ ವಿಮಾನ ನಿಲ್ದಾಣಗಳು ಊರಾಚೆಗೆ ಮತ್ತೊಂದು ಊರಿನಲ್ಲಿ ಇರ್ತಾವೆ! ಬೆಂಗಳೂರಿನ ನನ್ನ ಮನೆಯಿಂದ ಎಷ್ಟು ದೂರ ಎಂದು ಗೂಗಲ್ ಮಾಡಿದೆ. ಬರೋಬ್ಬರಿ 40 ಕಿಮಿ! ಮಂಡ್ಯದಿಂದ ಮೈಸೂರಿಗೆ ಇರುವ ಅಂತರ ಇದು!  ನನಗಿರುವುದು ಬೆಳಿಗ್ಗೆ 7.45 ರ ವಿಮಾನ ಅದು ಅಸ್ಸಾಮಿನ ಗುವಾಹತಿಯನ್ನು ಮುಟ್ಟುವುದು 10.30 ಕ್ಕೆ ಅಂದರೆ ಸುಮಾರು ಮೂರು ಸಾವಿರ ಕಿಮಿ ದೂರಕ್ಕೆ ಬರೀ ಮೂರು ಗಂಟೆ ಪ್ರಯಾಣ! ಅಲ್ಲಿಂದ 100 ಕಿಮಿ ದೂರದ ಶಿಲ್ಲಾಂಗ್ ಗೆ ಟ್ಯಾಕ್ಸಿಯಲ್ಲಿ ಪಯಣಿಸಬೇಕು. ಈಶಾನ್ಯ ಭಾರತದಲ್ಲಿ ಬಸ್ ಗಳನ್ನು ಹೆಚ್ಚು ನಂಬಿಕೊಳುವಂತಿಲ್ಲ. ಒಬ್ಬನೇ ಬೇರೆ ಹೋಗಬೇಕು. ಕಡೆಗಳಿಗೆಯಲ್ಲಿ ಕೂಡ ಯಾರಾದರೂ ಗೆಳೆಯರು ಸೇರಿಕೊಂಡರೆ ಸಾಕು ಎಂದು ಪ್ರಯತ್ನಿಸಿದೆ. ಎಲ್ಲರೂ ನನ್ನ ಪ್ರವಾಸವನ್ನು ತಡೆಯುವುದಕ್ಕೇ ನೋಡ್ತಾ ಇರುವಂತೆ ಭಾಸವಾಗುತ್ತಿತ್ತು. ಕಡೆಗೆ ನಿರ್ಧಾರ ಮಾಡಿಬಿಟ್ಟೆ ಏನೇ ಆಗಲಿ ಒಬ್ಬನೇ ಹೋಗುವುದು ಎಂದು. ಕಡೆಗೆ ಮೈಸೂರಿನಿಂದ ಮಧ್ಯರಾತ್ರಿ ಬೆಂಗಳೂರಿನ ಎರ್ಪೋರ್ಟ್ಗೆ ಹೋಗುವ ಫ್ಲೈ ಬಸ್ ಗೆ ಹತ್ತಿದ್ರೆ ಸಾಕು ಎಂದು ಯೋಚಿಸಿ ನಿಶ್ಚಿಂತನಾದೆ. 


ನಾನು ಹೋಗಬೇಕಾಗಿದ್ದು ಮಂಗಳವಾರ ಬೆಳಿಗ್ಗೆ. ಅದಕ್ಕೆ ಸೋಮವಾರ ಮಧ್ಯರಾತ್ರಿ ಮೈಸೂರಿನಿಂದ ಬೆಂಗಳೂರು ಏರ್ಪೋರ್ಟ್ ಗೆ ಹೊರಡುವ ಫ್ಲೈ ಬಸ್ ನಲ್ಲಿ ಹೋಗಣ ಅಂತ ಪ್ಲಾನ್ ಮಾಡಿದ್ದೇನಲ್ಲ,  ಆ ಪ್ಲಾನ್ ನೆಗೆದುಬಿತ್ತು. KSRTC ನೌಕರರು ಸೋಮವಾರದಿಂದಲೇ ಮುಷ್ಕರ ಶುರು ಮಾಡಿದ್ರು. ಏರ್ಪೋರ್ಟ್ ಇರಲಿ, ಬೆಂಗಳೂರಿಗೆ ತಲುಪಲು ಕೂಡ ಬಸ್ ಇರಲಿಲ್ಲ. ಅಂದ ಮೇಲೆ ಎಲ್ಲಿಯ ಫ್ಲೈ ಬಸ್?! ರೈಲಿನಲ್ಲಿ ಹೋಗುವುದು ಈ ಸಮಯದಲ್ಲಿ ಇನ್ನೂ ಪ್ರಯಾಸಕರ. ತಡ ಮಾಡದೇ ಗೆಳೆಯ ವಿಜೇತನನ್ನು ನನ್ನ ಜೊತೆಗೆ ಬಂದು ಬೆಂಗಳೂರಿನ ಮನೆಯಲ್ಲಿ  ಇದ್ದು ಬೆಂಗಳೂರಿನ ಎರ್ಪೋರ್ಟ್ ಗೆ ನನ್ನ ಬಿಟ್ಟು ನೀನು ಕೆಲಸಕ್ಕೆ ಹೋಗು ಎಂದು ಹೇಳಿ ಒಪ್ಪಿಸಿದೆ. ನನಗಿನ್ನೂ 'ಏರ್ಪೋರ್ಟ್ ಫೋಬಿಯಾ' ಹೋಗಿರಲಿಲ್ಲ. ಹೇಗೂ ಬಸ್ ಮುಷ್ಕರ ಇದ್ದುದರಿಂದ ಮಂಡ್ಯದಿಂದ ನನ್ನ ಆಕ್ಟಿವ ಗಾಡಿಯಲ್ಲಿ ಇಬ್ಬರೂ ಹೊರಟೆವು. ಒಂದಷ್ಟು ಲಗೇಜು ಜಾಸ್ತಿ ಇದ್ದುದರಿಂದಲೂ, ನಾನು ನಿಧಾನಕ್ಕೆ  ಗಾಡಿ ಚಲಾಯಿಸುವುದರಿಂದಲೂ ಸಂಜೆ 5.00 ಕ್ಕೆ ಮಂಡ್ಯ ಬಿಟ್ಟ ನಾವು ಮಾಗಡಿ ರೋಡ್ ತಲುಪಿದಾಗ ರಾತ್ರಿ 8.00 ಗಂಟೆಯಾಗಿತ್ತು. ಬ್ಯಾಗಿನಲ್ಲಿದ್ದ ಮ್ಯಾಗಿಯನ್ನು ಬೇಯಿಸಿ ತಿಂದು ಮಲಗಿಕೊಂಡ ನಾವು ಬೆಳಿಗ್ಗೆ 4.00ಕ್ಕೆ ಎದ್ದು ಹೊರಡಲು ಅನುವಾದೆವು. ಅಪರೂಪಕ್ಕೆ ಪ್ರವಾಸಕ್ಕೆ ಒಪ್ಪಿದ್ದ ಅಪ್ಪ, ಬೆಂಗಳೂರಿನ ಮನೆಯಿಂದ ಏರ್ಪೋರ್ಟ್ ಗೆ ಹೋಗಲು ಕಾರಿನ ವ್ಯವಸ್ಥೆ ಕೂಡ ಮಾಡಿದ್ದರು. ಮುಂಜಾನೆ 5.30 ಗಂಟೆಗೆ ಏರ್ಪೋರ್ಟ್ಗೆ  ಬಂದಿಳಿದರೆ ಜನವೋ ಜನ. ಅರೆ! ಈ ಮುಂಜಾನೆಯಲ್ಲಿಯೇ ಇಷ್ಟು ಜನವಾದ್ರೆ ಹಗಲಿನಲ್ಲಿ ಎಷ್ಟು ಜನ ಎಂದು ಬೆರಗಾದೆ. ಅಸಲಿಗೆ ಅದು ಆಧುನಿಕ ರೈಲ್ವೇ ಸ್ಟೇಷನ್ ತರವೇ ಕಂಡಿದ್ದು ಮೊದಲಿಗೆ. ಬೆಂಗಳೂರಿನ ಏರ್ಪೋಟ್ ನೋಡಲು ಕಣ್ಣೆರಡು ಸಾಲದು. ಮೂರು ಬಾರಿ ಶತಪಥ ಹಾಕಿದ ಮೇಲೆ ವಿಜೇತ ಲಗ್ಗೇಜು ಹಾಕುವ ಕೌಂಟರ್ ಅನ್ನು ಅಲ್ಲಿಂದ ಸೆಕ್ಯುರಿಟಿ ಚೆಕ್ ಗೆ ಹೋಗುವ ದಾರಿಯನ್ನು ತೋರಿಸಿದ. ತದನಂತರ ಟಿಕೆಟ್ ನಲ್ಲಿ ತೋರಿರುವ ಗೇಟ್ ನಲ್ಲಿ ಹೋಗಿ ಕಾಯಬೇಕೆಂದು, ಅಲ್ಲಿಂದ ವಿಮಾನ ಹತ್ತಿಕೊಳುವ ಬಗೆಯನ್ನು ತಿಳಿಸಿ ವಾಪಸು ಹೊರಟ, ಟಿಕೆಟ್ ಇಲ್ಲದೆ ಅವನು ಏರ್ಪೋರ್ಟ್ ನ ಒಳಗೆ ಬರಲು ಸಾಧ್ಯವಿರಲಿಲ್ಲ. 'ಸರಿ' ಎಂದು ಅವನನ್ನು ಕಳುಹಿಸಿಕೊಟ್ಟು ಅವನು ಹೇಳಿದಂತೆಯೇ ಕೌಂಟರ್ ನಲ್ಲಿ ಬ್ಯಾಗ್ ಕೊಟ್ಟು, ಸೆಕ್ಯುರಿಟಿ ಯಾವ ಕಡೆ ಎಂದು ಕೇಳಿ ಮೊದಲ ಮಹಡಿಯನ್ನು ಹತ್ತಿ ತಪಾಸಣೆ ಮುಗಿಸಿಕೊಂಡು ಗೇಟ್ 8 ರ ಬಳಿ ವಿಮಾನ ಕಾಯುತ್ತಾ ಕುಳಿತೆ. ಇನ್ನೂ ಬೆಳಿಗ್ಗೆ 6.00 ಗಂಟೆಯಾಗಿತ್ತು. 

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಹಳ ಸುಂದರವಾಗಿದೆ. ಅತ್ಯಾಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲಿರುವ ಹೊಟೇಲ್ ಗಳು, ಅಂಗಡಿ ಮಳಿಗೆಗಳು ನೋಡಲು ಚೆಂದ ಆದರೆ ಕೊಳ್ಳಲು ಬಲುದುಬಾರಿ! ನಾನಂತೂ ಗೇಟ್ 8 ನ್ನು ಬಿಟ್ಟು ಕದಲಲಿಲ್ಲ. ಕೂತಲ್ಲೇ ಎಲ್ಲ ಕಡೆ ಕಣ್ಣು ಹಾಯಿಸಿದೆ ಅಷ್ಟೇ ಹ್ಹ ಹ್ಹ ಹ್ಹ. .00ಬೆಳಿಗ್ಗೆ 7.15 ಕ್ಕೆ ವಿಮಾನ ಬಂತು. ಸಾಲಿನಲ್ಲಿ ನಿಂತು ವಿಮಾನ ಒಳಗೆ ಬಂದರೆ ಅದು ನಮ್ಮ ರಾಜಹಂಸ ಬಸ್ಸಿನಂತೆ ಇತ್ತು! ಅಯ್ಯೋ ಇಷ್ಟೇನಾ ವಿಮಾನ ಅಂದುಕೊಂಡು 18 ಸೀಟಿನ ಕಿಟಕಿ ಮಗ್ಗುಲಿಗೆ ಒರಗಿಕೊಂಡೆ. ಹತ್ತು ಹದಿನೈದು ನಿಮಿಷಗಳಲ್ಲಿ ವಿಮಾನ ಹೊರಟೇ ಬಿಟ್ಟಿತು. ಎಲ್ಲ ಪ್ರಯಾಣಿಕರು ಅದಾಗಲೇ ಬಂದಿದ್ದ ಕಾರಣ 7.45 ಕ್ಕೆ ಹೊರಡಬೇಕಾದ ವಿಮಾನ 7.30ಕ್ಕೆ ಗುವಾಹತಿಯತ್ತ ಹಾರಿತು. 

ಗುವಾಹತಿಯಲ್ಲಿ ಭಾಳ ಮಳೆ. ಬ್ರಹ್ಮಪುತ್ರ ನದಿ ನೆರೆ ಬಂದು ಹರಿಯುತ್ತಿತ್ತು. ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವಾಗ ಅಯ್ಯೋ ನಡಿಗೆ ಬೀಳುತ್ತಾ , ಭತ್ತದ ಗದ್ದೆಗೆ ಬೀಳುತ್ತೋ ಅನ್ನುವ ಹಾಗೆ ಇಳಿಯಿತು. ಬೆಂಗಳೂರು ಏರ್ಪೋರ್ಟ್ ನೋಡಿದ್ದ ನನಗೆ ಗುವಾಹತಿ ಏರ್ಪೋರ್ಟ್ ಮದ್ದೂರಿನ ಬಸ್ ನಿಲ್ದಾಣ.ದಂತೆ ಕಂಡಿದ್ದು ಸುಳ್ಳಲ್ಲ. ಹೊರಗೆ ಬರುವುದೇ ತಡ. ಟ್ಯಾಕ್ಸಿಯವರ ಕಾಟ. ಅದನ್ನು ತಪ್ಪಿಸಿಕೊಂಡು ಶಿಲ್ಲಾಂಗ್ ಟ್ಯಾಕ್ಸಿಯನ್ನು ಹುಡುಕತೊಡಗಿದೆ. ಅಸ್ಸಾಮಿ , ಬಂಗಾಳಿ, ಹಿಂದಿ ಭಾಷೆಯ ಹೆಸರುಗಳು ಗೊತ್ತೇ ವಿನಃ ಭಾಷೆ ಹುಃ ಉಪ್ಪಿನಕಾಯಷ್ಟೂ ತಿಳಿಯದು. ಅಷ್ಟರಲ್ಲಿಯೇ ಒಬ್ಬ ಮುದುಕಪ್ಪ ಶಿಲ್ಲಾಂಗ್ ಗೆ ಶೇರ್ ಟ್ಯಾಕ್ಸಿಯಲ್ಲಿ ಬರ್ತೀರಾ ಎಂದು ಕೇಳಿದ. ಸರಿ ನಡಿಯಪ್ಪ ಎಂದು ಒಪ್ಪಿ ಅವನ ಕಾರೊಳಗೆ ಬ್ಯಾಗ್ ಹಾಕಿ ಕುಳಿತೆ. ಆಹಾ! ಗುವಾಹತಿಯಲ್ಲಿ ಮಳೆ ಬಂದರೂ ಅಲ್ಲಿನ ಬಿಸಿ ಹವೆಗೆ ಕಾವಲೆ ಮೇಲೆ ಹಾಕಿದ ದೋಸೆಯಂತೆ ಭಾಸವಾಗುತ್ತಿತ್ತು. ಹೊರಗೆ ಬಂದು ಮರದ ನೆರಳಿಗೆ ನಿಂತೆ. ನಿಂತೇ ಎರಡು ಗಂಟೆ ಕಳೆದುಹೋದುವು.   ಮುದುಕಪ್ಪ  ಕಾರು ಚಲಾಯಿಸಲು ಇನ್ನೂ ಮೂವರು ಪ್ರಯಾಣಿಕರು ಬೇಕಿತ್ತು . ಬೆಳಿಗ್ಗೆ 11.30ಕ್ಕೆ ಶುರುವಾದ ಹುಡುಕಾಟದಲ್ಲಿ ಮೊದಲಿಗೆ ಕೋಲ್ಕತ್ತಾ ಹುಡುಗನೊಬ್ಬ ಬಂದ. ಆಮೇಲೆ ಒಂದು ಶಿಲ್ಲಾಂಗಿನ ಹುಡುಗಿ ಬಂದಳು, ಕಡೆಯಲ್ಲಿ ಅರುಣಾಚಲದ ಬೆಡಗಿಯೊಬ್ಬಳು ಬಂದು ನಾನು ಮುಂದೆ ಕುಳಿತಿದ್ದ ಸೀಟಿನಲ್ಲಿ ವಿರಮಿಸಿದಳು. ಕೋಲ್ಕತ್ತಾ ಹುಡುಗನಿಗೆ ಹುಡಗಿ ಪಕ್ಕ ಕೂರಲು ತಕರಾರು. ಕಡೆಗೆ ನಾನೇ 'ನೋ ಪ್ರಾಬ್ಲಮ್' ಎಂದು ಮಧ್ಯಕ್ಕೆ ಮಹಾದೇವನಂತೆ ವಿರಾಜಮಾನನಾದೆ. ಆವಾಗಲೇ ತಿಳಿದಿದ್ದು ಮಧ್ಯೆ ಕೂರುವ ಸಂಕಟ! .ಅಂತೂ ತಿಂತೂ ಮಧ್ಯಾಹ್ನ 2.30ಕ್ಕೆ ಗುವಾಹತಿಯಿಂದ ಶಿಲ್ಲಾಂಗ್ ನತ್ತ ಟ್ಯಾಕ್ಸಿ ಹೊರಟಿತು 
ಅಸ್ಸಾಮಿನ ಗುವಾಹತಿಯಿಂದ ಮೇಘಾಲಯದ ಶಿಲ್ಲಾಂಗಿನವರೆಗೆ ಭಾರತ ಸರಕಾರ ಮೂರು-ನಾಲ್ಕು ವರ್ಷಗಳ ಹಿಂದೆ ಒಳ್ಳೆಯ ಎರಡು ಜೋಡಿ ರಸ್ತೆ ನಿರ್ಮಿಸಿದೆ. ಇದೊಂತರ ನಮ್ಮ ಘಟ್ಟದ ರಸ್ತೆಗಳನ್ನೇ ನೆನೆಪಿಸುತ್ತೆ. ಎರಡೂವರೆ ಗಂಟೆಗಳ ತರುವಾಯ ಶಿಲ್ಲಾಂಗಿನ ಪೊಲೀಸ್ ಬಜಾರ್ ನಲ್ಲಿ ಗಾಡಿ ನಿಲ್ಲಿಸುವ ಮೊದಲೇ ಗೆಳೆಯ ದೇವೇಂದ್ರ ಕಾಣಿಸಿಕೊಂಡರು. ನಿಜವಾಗಲೂ ದೇವೇಂದ್ರ -ಮೇಘಾಲಯ ಪದಗಳು ಒಳ್ಳೆಯ ಜೋಡಿಯಾಗಿದ್ದುವು. 
ಅದಾಗಲೇ ಟ್ಯಾಕ್ಸಿ 500 ರೂ ಪಾವತಿಸಿದ್ದೆ. ದೇವೇಂದ್ರ ಕಂಡ ಕೂಡಲೇ ಟ್ಯಾಕ್ಸಿ ನಿಲ್ಲಿಸಿಸಿ ಮುದುಕಪ್ಪನಿಗೆ ಧನ್ಯವಾದ ಹೇಳಿ ಇಬ್ಬರೂ ಪೊಲೀಸ್ ಬಜಾರಿನ ಪಕ್ಕದಲ್ಲೇ ಇದ್ದ ಅವರ ಆಫೀಸಿಗೆ ಹೋದೆವು. 

ಶಿಲ್ಲಾಂಗ್ ತಲುಪುವ ತುರಾತುರಿಯಲ್ಲಿ ಏನೂ ತಿಂದಿರಲಿಲ್ಲ. ರಾತ್ರಿ ತಿಂತಿದ್ದ ಮ್ಯಾಗಿಯೇ ಶಿಲ್ಲಾಂಗ್ ವರೆವಿಗೂ ನನ್ನನು ಮುಟ್ಟಿಸಿತ್ತು. ಆಫೀಸ್ ತಲುಪಿದಾಗ ಹುರಿದ ಹಂದಿಮಾಂಸದ ಅನ್ನ ನನಗಾಗಿ ಕಾಯುತ್ತಿತ್ತು. ಹಸಿವಿಗೆ ಯಾವ ಹಂಗು ಹೇಳಿ.. ಮಾತು ಮಾತು ನಡೆಯುತ್ತಾ ಹೊಟ್ಟೆ ತುಂಬಿತ್ತು ... ಮುಂದುವರಿಯುವುದು ... 

ಈಶಾನ್ಯ ಭಾರತದ ಅಮೂಲ್ಯವಾದ ಮ್ಯೂಸಿಯಂ - ಡಾನ್ ಬಾಸ್ಕೋ 
ಶಿಲ್ಲಾಂಗ್ ನ ಬೀದಿಗಳು, ಮಾರುಕಟ್ಟೆ ಇತ್ಯಾದಿ                                                                                                                       

9 comments:

 1. ನಿರೂಪಣೆ ಆಕರ್ಷಕವಾಗಿದೆ,ಕುತೂಹಲಕರವಾಗಿದೆ....ತಪ್ಪದೇ ಮುಂದುವರಿಸಿ.

  ReplyDelete
 2. ಪ್ರವಾಸ ಕಥನ ಆಸಕ್ತಿದಾಯಕ... ಮುಂದುವರಿಸಿ...

  ReplyDelete
 3. ಪ್ರವಾಸದ ಮೊದಲ ಕಂತು ಇಷ್ಟಾ ಆಯ್ತು, ಪಯಣದ ಅನುಭವ ಸೊಗಸಾಗಿದೆ. ಕೆಲವು ಕಡೆ ಬರೆಯುವಾಗ ಪದಗಳಲ್ಲಿ ಒಂದೆರಡು ಬೆರಳಚ್ಚು ದೊಸವಿದೆ, 1] 'ನೀನು ಹೋದ ಹಾಗೆ' ಅಂತಗ ಕುಹಕವೂ ಬಂತು ಬಿಡಿ. 2]ರೈಲು -ಬಸ್ಸುಹಾಲ ನೆಲಮಾರ್ಗ ಬಿಟ್ಟು ಜಲಮಾರ್ಗ -ವಾಯುಮಾರ್ಗಗಳಲ್ಲಿ ಓಡಾಡಿದವನಲ್ಲ.3]ಬೆಂಗಳೂರಿನ ಮನೆಯಿಂದ ಏರ್ಪೋರ್ಟ್ ಗೆ ಹೋಗಲು ಕರೀನಾ ವ್ಯವಸ್ಥೆ ಕೂಡ ಮಾಡಿದ್ದರು ಇವುಗಳು ಸಾಮಾನ್ಯವಾಗಿ ನನ್ನನ್ನೂ ಸೇರಿದಂತೆ ಎಲ್ಲರಲ್ಲಿಯೂ ಆಗುವ ತಪ್ಪುಗಳು ಅಷ್ಟೇ ಇದನ್ನು ಸರಿ ಪಡಿಸಿ , ಇಡೀ ಪ್ರವಾಸದ ಅನುಭವದ ಸಾರ ಓದಲು ನಾನು ಸಿದ್ದವಾಗಿರುವೆ.

  ReplyDelete
 4. @ ಜೀವನ ಮುಕ್ತ & ಕುಮಾರ ರೈತ ಸರ್: ನಿಮ್ಮಿಬ್ಬರಿಗೂ ಧನ್ಯವಾದಗಳು :)
  @ಬಾಲು ಸರ್ : ಪದದೋಷಗಳನ್ನು ಆದಷ್ಟು ನೋಡಿ ತಿದ್ದಿರುವೆನು. ನಿಮ್ಮ ಸಲಹೆಗೆ ಧನ್ಯವಾದ.

  ReplyDelete
 5. ಸ್ವಾರಸ್ಯಕರ ಕಥನ. ಆಸಾಮಿನ ಅಚ್ಚರಿಗಳನ್ನು ಓದಲು ಕುತೂಹಲಿಯಾಗಿದ್ದೇನೆ.

  ReplyDelete
 6. ತುಂಬ ಚೆನ್ನು. ಮುಂದಿನ ಕಂತುಗಳಿಗಾಗಿ ಕಾಯುವಂತೆ ಮಾಡಿದ್ದೀರಿ, ಆರ್ಪಿ. Thanks.

  ReplyDelete
 7. ಎಲ್ಲರಿಗೂ ಥ್ಯಾಂಕ್ಸ್ ... ಬಿಡುವಾದಾಗ ಈ ಕಂತುಗಳನ್ನು ಪೂರೈಸುವೆ. :) :)

  ReplyDelete
 8. "...ಸೀಳೋಟದ ರಮ್ಯಚಿತ್ರಗಳಿಗೆ ಮಾರುಹೋಗಿ ಸಂದ ಐದು ವರ್ಷಗಳುದ್ದಕ್ಕೆ ಅನೇಕ ಸಾಹಸಿಗಳು, ಅಂಥಾದ್ದು ಇನ್ನೊಂದಾದರೆ ನಾ ಮುಂದು ತಾ ಮುಂದು ಎಂದದ್ದಿತ್ತು. ಅದರಲ್ಲೂ ಕೆಲವು ಬೈಕ್‍ವೀರರು "ನಾನೇ ಜೋಡಿಯನ್ನೂ ಕರೆದುಕೊಂಡು ಬರುತ್ತೇನೆ" ಎಂದು ಆಶ್ವಾಸನೆ ಕೊಟ್ಟದ್ದೂ ಇತ್ತು. ಆದರೆ ನಿಜ ಸಾಹಸಯಾನದ ಘೋಷಣೆಯಾದಾಗ, ವಿವರಗಳ ಪ್ರಖರತೆಗೆ ಬುರುಗುಗಳೆಲ್ಲ ಆರಿಹೋದವು..." ಕೈಕೊಟ್ಟ ಗೆಳೆಯರು, ನಿರುತ್ತೇಜಕ ವೀರರ ನಿಮ್ಮ ಕಥನ ಓದುವಾಗ ನನ್ನ ಮೇಲಿನ ಮಾತುಗಳಿಗೆ ಸಾಮ್ಯ ಕಂಡೆ :-)

  ReplyDelete
  Replies
  1. ನೀವು ಎಷ್ಟೇ ಆದರೂ ನಮ್ಮ ಹಿರಿಯರಲ್ಲವೇ :D

   Delete