Saturday, January 21, 2017

ಅಡುಗೆಯೊಂಬುದೊಂದು ಆಧ್ಯಾತ್ಮ

ಈ ಅಡುಗೆ ಅನ್ನುವುದು ಯಾಕೆ ಯೋಗ ಅಥವಾ ಅಧ್ಯಾತ್ಮ ಅಂತ ಪರಿಗಣಿತವಾಗಬಾರದು?! ಇದು ಸುಮಾರು ಎರಡು ದಶಕಗಳ ಕಾಲದಿಂದ ನನ್ನ ತಲೆಯಲ್ಲಿ ಓಡಾಡುತ್ತಿರುವ ಎರೆಹುಳು  ಅಂದಹಾಗೆ ಅಧ್ಯಾತ್ಮ ಮತ್ತು ಯೋಗ ಅನ್ನುವುದು ನಿಮಗೆಲ್ಲಾ ಗೊತ್ತಿರಬೇಕಲ್ಲ. ಈಚೆಗೆ ಮಾರ್ಕೆಟ್ ನಲ್ಲಿ ಈರುಳ್ಳಿ - ಟೋಮೊಟೊ ಗಿಂತಲೂ ಹೆಚ್ಚು ಬಿಕರಿಯಾಗುವ ಮತ್ತು ವೆಚ್ಚದಾಯಕ ನಿತ್ಯೋಪಯೋಗಿ ಸಾಧನಗಳು. ಟಿವಿಗಳಲ್ಲಿ ಸಿಡಿಗಳಲ್ಲಿಯೋಗಅಧ್ಯಾತ್ಮದ ಸೆಂಟರ್ ಗಳಲ್ಲಿ ತೂಕಕ್ಕೆ ಹಾಕುವುದಿಲ್ಲ ಬಿಟ್ಟರೆ ಗ್ಯಾರಂಟಿ ದುಡ್ಡಿಗೆ ಮಾರುತ್ತಾರೆ. ನನಗೂ ಈ ಧಾವಂತದ ಬದುಕಿನಿಂದ ಸ್ವಲ್ಪ ಅಧ್ಯಾತ್ಮ - ಯೋಗದ ಕಡೆಗೆ ಹೊರಳಿಕೊಳ್ಳಬೇಕು ಎಂದೆನಿಸಿ ಸುಮ್ಮೆನೆ ಅತ್ತ ನೋಡಿದೆ.. ಹುಃ ಅದು ಸುತಾರಾಂ ನನಗೆ ಒಗ್ಗಿಕೊಳುವುದಿಲ್ಲವೆನಿಸಿ ಬಾಲ್ಯದಿಂದಲೂ ನಾನು ಬಹಳ ಆವಿಷ್ಕಾರಗಳಲ್ಲಿ ತೊಡಗಿರುವ ಅಡುಗೆಯನ್ನೇ ಆರಿಸಿಕೊಂಡೇ. ಅಡುಗೆ ನನ್ನ ಅಧ್ಯಾತ್ಮ ಮತ್ತು ಯೋಗದ ಮಾರ್ಗ. ಮೂಗು ಹಿಡಿದು ಕಾಲು ಮಡಚಿ ಗಂಟೆಗಟ್ಟಲೇ ಕೂರುವ ಬದಲು ಮಾಂಸ - ಕಾಯಿಪಲ್ಲೆಗಳನ್ನು  ತರಹೇವಾರಿ ಹಚ್ಚುತ್ತಾ ಉಪ್ಪು ಹುಳಿ ಖಾರಗಳನ್ನು ಬೆರೆಸಿ ಹೊಸ ಹೊಸ ರುಚಿ ರುಚಿಗಳನ್ನು ಮಾಡುತ್ತಾ ಅದನ್ನು ಧೇನಿಸುತ್ತಾ ಒಲೆಯ  ಮುಂದೆ ಕಾಲ ಕಳೆಯುವುದು ಯಾವ ಅಧ್ಯಾತ್ಮಕ್ಕೂ ಕಡಿಮೆ ಇಲ್ಲ ಎನಿಸಿಬಿಟ್ಟಿತು. ಅಲ್ಲದೇ ಈ ಆಧ್ಯಾತ್ಮ ನಂಬಿದವರ ಹೊಟ್ಟೆಯನ್ನಂತೂ ತುಂಬಿಸುತ್ತದೆ ಹೊರತು ಯಾರನ್ನೂ ಮೋಸ ಮಾಡುವುದಿಲ್ಲ ನೋಡಿ.  ಅಪ್ಪಿ ತಪ್ಪಿ ಅಜೀರ್ಣವಾಗಬಹುದು ಅಷ್ಟೇ! ಅದರಿಂದಲೂ ಹೊಟ್ಟೆ ಶುಚಿಯಾಗುವ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು. ಇದೆಲ್ಲಾ ತುಂಬಾ ಪಾಸಿಟಿವ್ ಯೋಚಕರಿಗೆ ಎಂದು ಕೈತೊಳೆದುಕೊಳ್ಳುವವರೂ ಇದ್ದಾರೆ.    




ಈ ಅಧ್ಯಾತ್ಮ ಗುಂಗು ಹತ್ತಿದ್ದು ಹಳ್ಳಿಯಿಂದ ಸಿಟಿಗೆ ಬಂದು ನಾನು  ಹೈಸ್ಕೂಲ್ ಸೇರಿದ ಸಮಯದಲ್ಲಿ.  ಅಮ್ಮ  ಊರಿಗೆ ಹೋಗುವುದನ್ನೇ ಕಾಯ್ದು  ಮನೆಯಲ್ಲಿ ಇರುವ ಏನೇನೋ ತರಕಾರಿಗಳನ್ನು ಸುಲಿದು ಕೊಚ್ಚಿ ಎಣ್ಣೆಯ ಬಾಣಲೆಗೆ ಸುರಿದು ಕುದಿಸಿ ಅದಕ್ಕೊಂದಷ್ಟೂ ಬೇಳೆ- ಅಕ್ಕಿ  ಹಾಕಿ ಚೆನ್ನಾಗಿ ಕುದಿಸುವುದು. ಆ ದಿನಗಳಲ್ಲಿ ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಮೋಗ್ಲಿ ಕಾರ್ಟೂನ್ (the jungle book) ಉದಯ ಟಿವಿಯಲ್ಲಿ ಬರ್ತಿತ್ತು ಅದೂ ಕನ್ನಡದಲ್ಲಿ. ಅದನ್ನು ನೋಡುತ್ತಾ ಕುಳಿತು ಬಿಟ್ಟರೆ ಈ ಒಲೆಯ ಅದರ ಮೇಲೆ ಬೇಯುತ್ತಿರುವ ನಳಪಾಕ ಎರಡೂ ಅಬ್ಬೇಪಾರಿಗಳೇ. ನಮ್ಮ ಏರಿಯಾದ ಮನೆಗಳು  .ಕುಂಬಾರ ಹೆಂಚಿನ ಒಟ್ಟೊಟ್ಟಿಗಿನ ಮನೆಗಳು. ನಮ್ಮ ಅಡುಗೆ ಮನೆಯಲ್ಲಿ ತಲಾ ಸೀಯಲು ಶುರುವಾದರೆ ಇಡೀ ಬೀದಿಗೆ ಕಂಟಿನ ವಾಸನೆ ಹಬ್ಬಿಕೊಂಡು 'ಪ್ರಸಾದೂ ss .... ' ರಾಗ ಎಳೆದುಕೊಂಡು ಯಾರಾದರೂ ಬಂದೆ ಬರ್ತಾ ಇದ್ರು. ಹಾಗೆ ರಾಗವನ್ನು ಕೇಳಿದಾಗಲೇ ನನಗೆ ಅಡುಗೆ ಮನೆಯ ಅಬ್ಬೇಪಾರಿಗಳು ನೆನೆಪಿಗೆ ಬರ್ತಾ ಇದ್ದುದು. ಅಮೇಲಿನದು ಯೋಗ ಕಾರ್ಯಕ್ರಮ. ಅಮ್ಮ ವಾಪಸು ಬರುವುದರೊಳಗೆ ,ಮನೆಯಲ್ಲಿ ವಾಸನೆ ಹೋಗಿಸಿ,ತಳ ಹಿಡಿದು ಕರಟಾಗಿರುವುದನ್ನು ತೆಗೆದು ಪಾತ್ರೆಯನ್ನು ಮೊದಲಿನಂತೆ ಮಾಡುವುದು. ಆದಂತೂ ಹರಸಾಹಸ. ಮೊದಲು ಚಾಕುವಿನಿಂದ ಕೆರೆದು ಬಂದಷ್ಟನ್ನೂ ತೆಗೆದು ಆಮೇಲೆ ಅದಕ್ಕೆ ಚೂರು ಸರ್ಫಿನ ಪುಡಿ ಹಾಕಿ ನೆನೆಸಿ ಮತ್ತೆ ತೆಂಗಿನ ಚಗರೆಬಚ್ಚಲು ಮನೆ ಒಲೆಯ ಬೂದಿಇಟ್ಟಿಗೆ ಪುಡಿ ಹಾಕಿ ಕಪ್ಪೆಲ್ಲಾ ಕರಗುವವರೆಗೂ ತಿಕ್ಕುತ್ತಾ ಕೂರುವುದು. ಕೆಲವು ಸಲ ಅನ್ನದ ಬದಲು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇತ್ತು ಮೂರು ಕಿಮಿ ದೂರದ ಶಾಲೆಗೆ ಹೋಗಿದ್ದ ಉದಾಹರಣೆಗಳು ಬೇಕಾದಷ್ಟಿವೆ. ಮಧ್ಯಾಹ್ನ ಉತ್ತಕ್ಕೆ ಬಿಟ್ಟಾಗ ನೆನೆಸಿಕೊಂಡು ಸೈಕ್ಲು ತುಳಿದುಕೊಂಡು ಬಂದು ಗ್ಯಾಸ್ ಆರಿಸಿ ಪಾತ್ರೆ ತಿಕ್ಕಿದ್ದನ್ನು ಮರೆಯಬಹುದೇ!

ನಾವು ಹುಟ್ಟಾ ಮಾಂಸಾಹಾರಿಗಳು ನಮ್ಮ ಮನೆದೇವರಂತೂ ನೈವೇದ್ಯಕ್ಕೆ ಬಾಡೂಟವೇ ಆಗಬೇಕು ಅನ್ನುವವನು. ಯುಗಾದಿ - ಶ್ರಾವಣ - ಮಹಾಲಯ ಅಮಾವಾಸ್ಯೆಗಳಲ್ಲಿ ದೊಡ್ಡ ಸಮಾರಾಧನೆಯೇ ನಮ್ಮ ಮನೆಗಳಲ್ಲಿ ಆಗುತ್ತದೆ. ಬಂಧುಗಳು - ಸ್ನೇಹಿತರು ಎಲ್ಲ ಕೂಡಿಕೊಳ್ಳುತ್ತಾರೆ. ಆದರೆ ಅವರಿಗೆಲ್ಲಾ ಅಡುಗೆ ಮಾಡುವವರು ಯಾರುಅದಕ್ಕಾಗಿ ಅಡುಗೆ ಭಟ್ಟರು ಅಂತೆಲ್ಲ ಇರಲಿಲ್ಲ ( ಈವಾಗ ಲಭ್ಯರಿದ್ದಾರೆ! ) ಮನೆಯ ಗಂಡಸರೇ ಸೇರಿಕೊಂಡು ಮಾಂಸ ಕತ್ತರಿಸಿ ಹಚ್ಚಿ ಸಾಂಬಾರಿಗೆಗೊಜ್ಜಿಗೆ ಅಂತೆಲ್ಲ ಭಾಗ ಮಾಡಿ ಚೆರ್ಬಿಯನ್ನು (ಕೊಬ್ಬು ) ವಿಶೇಷವಾಗಿ ಎತ್ತಿಟ್ಟುಕೊಂಡು ಮನೆಯ ಹೊರಗೆ ಅಥವಾ ಕೊಟ್ಟಿಗೆಯ ಜಾಗಗಳಲ್ಲಿ ಒಲೆಯನ್ನು ಹಾಕಿ ಮನೆಯಲ್ಲಿಯೇ ಇರುವ ದೊಡ್ಡ ದೊಡ್ಡ  ತಾಮ್ರದ ದಬರೆಗಳನ್ನುಹಿತ್ತಾಳೆ ಹಂಡೆಗಳನ್ನು ಹೊರಮೈಗೆ ಮಣ್ಣು ಮೆತ್ತಿ (ಉರಿಗೆ ಕಪ್ಪಿಡಿಯಬಾರದೆಂದು) ಒಲೆಯ ಮೇಲೆ ಇಟ್ಟು ಅರಿಶಿನ ಈರುಳ್ಳಿ ಒಗ್ಗರಣೆ ಹಾಕುವುದರ ಮೂಲಕ ಶುರು ಮಾಡುತ್ತಿದ್ದರು. ಹೆಣ್ಣು ಮಕ್ಕಳು ತರಕಾರಿ ಹಚ್ಚಿಕೊಡುವುದುಮಸಾಲೆ ರುಬ್ಬುವುದುಪೂಜೆಗೆ ಸಿದ್ದ ಮಾಡಿಕೊಳ್ಳುವುದುಮನೆಗೆ ಬಂದ ಅತಿಥಿಗಳ ಸತ್ಕಾರ ಹೀಗೆ ಬೇರೆಯ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಆಶ್ಚರ್ಯವೆಂದರೆ ವರ್ಷದ ಇತರ ದಿನಗಳಲ್ಲಿ ಒಂದು ಕಾಫಿ ಕೂಡ ಮಾಡಿಕೊಳ್ಳದ ಗಂಡಸರು ಈ ಹಬ್ಬಗಳಲ್ಲಿ ತುಂಬಾ ಅಚ್ಚುಕಟ್ಟಾಗಿ ಅಡುಗೆ ಮನೆಯನ್ನು ನಿಭಾಯಿಸುತ್ತಿದ್ದರು. ಅಕ್ಕಪಕ್ಕದ ಮನೆಯವರುಸೋದರ ಸಂಬಂಧಿಗಳು ಮೊದಲೇ ಇಂತ ವೇಳೆಗೆ ಬರಬೇಕೆಂದು ನಿಶ್ಚಯಿಸಿಕೊಂಡು ಬೆಳಗಾಗುವ ಹೊತ್ತಿಗೆ ಮೊದಲು ಮಾಂಸ ಸಿದ್ದವಾಗಬೇಕುಆಮೇಲೆ ಸಾಂಬಾರುಗೊಜ್ಜುಮುದ್ದೆಅನ್ನ ಉಳಿದ ಸಣ್ಣ ಪುಟ್ಟ ತಿಂಡಿಗಳು ಸೇರಿ   ಮಧ್ಯಾಹ್ನದ ಹೊತ್ತಿಗೆ ಎಲ್ಲ ಅಡುಗೆಗಳು ಸಿದ್ದವಾಗುತ್ತಿದ್ದವು.  ಹಿತ್ತಾಳೆ ಹಂಡೆಯ ಮಟನ್ ಸಾಂಬಾರಿಗೆ  ಇಷ್ಟು ಕೈ ಉಪ್ಪುಬೋಟಿ ಗೊಜ್ಜಿಗೆ ಇಷ್ಟು ಹಿಡಿ,ಕೋಳಿ ಮಾಂಸದ ಫ್ರೈಗೆ ಇಷ್ಟು ಆಮೇಲೆ ಇಷ್ಟು ಬಟ್ಟಲು ಮಸಾಲೆ ಇಷ್ಟು ಸೌಟು ಖಾರದ ಪುಡಿಇಷ್ಟು ಬೊಗಸೆ ಬೆಳ್ಳೆಲ್ಲಿ  ಎಂಬ ಅವರ ಲೆಕ್ಕಾಚಾರ ನನಗೆ ಎಂದೂ ಅರ್ಥವೇ ಆಗುತ್ತಿರಲಿಲ್ಲ. ಅವರು ಕನಿಷ್ಠ ರುಚಿಯನ್ನು ಕೂಡ ಅಡುಗೆ ಮಾಡುವಾಗ ನೋಡುತ್ತಿರಲಿಲ್ಲ. ಕಾರಣ ದೇವರಿಗೆ ಮೊದಲ ಎಲೆಯ ಪ್ರಸಾದವಾಗಬೇಕು. ನಂತರವೇ ನಮ್ಮೆಲ್ಲರ ಊಟ. ಮುದ್ದೆಯನ್ನು ಮಾಡುವುದನ್ನು ನೋಡುವುದು ಗರಡಿ ಮನೆಯ ಜಟ್ಟಿಗಳ ಕುಸ್ತಿ ಪಂದ್ಯವನ್ನು ನೋಡಿದಂತೆ ಇರುತ್ತಿತ್ತು. ಕುದಿಯುವ ನೀರಿಗೆ ರಾಗಿ ಹಿಟ್ಟನ್ನು ಹಾಕಿ ದೊಡ್ಡ ದೊಣ್ಣೆಗಳಲ್ಲಿ ಅದನ್ನು ತಿರುವುತ್ತಾ ಬೇಯಿಸುವುದು ಬೆಂದ ಮೇಲೆ ಬನಿಯಾಗಿ ಮತ್ತೆ ತಿರುವಿ ಉದ್ದಕ್ಕೆ ಬೊಂಬಿನಂತೆ ಮುದ್ದೆಯ ಹಿಟ್ಟನ್ನು ಮಾಡಿಕೊಂಡು ದೊಡ್ಡ ತಟ್ಟೆಯ ಮೇಲೊ ಕಲ್ಲು  ಹಾಸಿನ ಮೇಲೊ ತುಂಡಾಗಿ ಕತ್ತರಿಸಿಕೊಂಡು ಬಿಸಿಬಿಸಿ ಮುದ್ದೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಇನ್ನೂ ಅನ್ನವನ್ನು ಬೇಯಿಸಿದ ಮೇಲೆ ಉದ್ದ ಏಣಿಯ ಮೇಲೆ ಬಿದಿರಿನ ಮಂಕರಿಗಳನ್ನು ಸಾಲಾಗಿ ಇಟ್ಟು ಅದಕ್ಕೆ  ಅನ್ನವನ್ನು ಸುರಿದು ಗಂಜಿ ಬಸಿದು ಹೋಗುವಂತೆ ಮಾಡಿಆಮೇಲೆ ಅದನ್ನು ಜಗುಲಿ ಮೇಲೆ ಹಾಸಿದ ಬಿಳಿ ಬಟ್ಟೆ ಅಥವಾ ಸೋಗೆ ಚಾಪೆಯ ಮೇಲೆ ಹರಡುವುದು.. ಹೀಗೆ ದೊಡ್ಡ ಪ್ರಕ್ರಿಯೆಯೇ ಅಲ್ಲಿ ಜರಗುತ್ತಿತ್ತು. ಇದೆಲ್ಲವನ್ನು ನೋಡುತ್ತಾ ಬೆಳೆದ ನನಗೆ ಇಂತಹ ಹಬ್ಬದ ಈ ಅಡುಗೆ ಮನೆಯೇ ನನ್ನ ಮೊದಲ ಕರ್ಮಭೂಮಿ. ಮಾಂಸ ಕತ್ತರಿಸಲು ಚೂರಿಕೈಕೊಡಲಿ ಅದಕ್ಕೆ ಮರದ ಕೊಂಟು ಒದಗಿಸುವುದುತೊಳೆಯಲು ಬಿಸಿನೀರುಒಳಕೆ ಸೌದೆ ತಂದು ಒಲೆಯ ಬಳಿ ಜೋಡಿಸುವುದು,
ಅಮ್ಮ -ಅಜ್ಜಿಯರು ರುಬ್ಬಿದ ಮಸಾಲೆ - ತರಕಾರಿಗಳನ್ನು ಅಡುಗೆ ಮನೆಯತ್ತ ವರ್ಗಾಯಿಸುವುದು. ಬಿಡುವಿಲ್ಲದ ಕೆಲಸ ಪುಟಾಣಿಗಳಿಗೆ. ಆದ್ರೆ ನಮ್ಮ ಮನೆಯಲ್ಲಿ ನನ್ನ ಬಾಲ್ಯದ ಕಾಲಕ್ಕೆ ನಾನು ಒಬ್ಬನೇ ಪುಟಾಣಿ. ಉಳಿದ ಮಕ್ಕಳೆಲ್ಲಾ ಇನ್ನೂ ತೊಟ್ಟಿಲಲ್ಲಿ ಇದ್ದುವು. ಹಬ್ಬದ ಸಂಭ್ರಮವೆಂದರೆ ಅದು ಊಟದಲ್ಲೇ. ದೇವರು ಕೂಡ ಇಲ್ಲಿ ನಿಮಿತ್ತ. ಅನ್ನ ದೇವರ ಮುಂದೆ ಇನ್ನೂ ದೇವರು ಉಂಟೆ ಅನ್ನುವ ಹಾಗೆ. 


ಆಮೇಲೆ ಅಮ್ಮನ ತವರು ಮನೆಯ ಕುಲದೇವತೆ ಒಲೆಯ ಮೇಲೆ ಹಸೆಮಣೆಯನ್ನು ಕುಳಿತು ಹಾಕಿ ಕುಳಿತುಕೊಂಡಿದ್ದಾಳಂತೆ. ಹಾಗಾಗಿ ನನ್ನ ಅಜ್ಜಿಯ ಮನೆಯಲ್ಲಿ ತೀರಾ ಮಡಿ-ಮೈಲಿಗೆ ಆಚಾರಗಳು. ಅವರಂತೂ ಅಡುಗೆ ಮನೆಯನ್ನು ತುಂಬಾ ಶುಚಿಯಾಗಿ ದೇವರ ಕೋಣೆಯಂತೆ ಇಟ್ಟುಕೊಳ್ತಾ ಇದ್ರು. ಕೆಮ್ಮಣ್ಣಿನಿಂದ ಅದಕ್ಕೆ ಬಣ್ಣ ಮಾಡ್ತಾ ಇದ್ರು. ನನ್ನ ಬಾಲ್ಯವನ್ನು ಹೆಚ್ಚಿಗೆ ತಾಯಿ ತವರಲ್ಲೇ ಕಳೆದಿದ್ದ ನನಗೆ ಅಪ್ಪ -ಅಮ್ಮನ ಕಡೆಯವರ ಇದೆಲ್ಲ ಆಚರಣೆಗಳ ವೈವಿದ್ಯತೆಗಳು ಗೊಂದಲವನ್ನು ಉಂಟು ಮಾಡುತ್ತಿದುದು ಸಹಜವಾಗೇ ಆಗಿದ್ದರೂ ಶೂದ್ರ ಪರಂಪರೆಗಳಲ್ಲಿ ಆಹಾರ ಅನ್ನುವುದು ನಾನಾ ವಿಧಗಳಲ್ಲಿ ದೇವರ ಆಚರಣೆಯ ಬಹುಮುಖ್ಯ ಭಾಗವಾಗಿ ಕೆಲವೆಡೆ ದೇವರಾಗೀಯೇ ಕಾಣಿಸಿಕೊಳ್ಳುವುದು ಈಗಲೂ ಸೋಜಿಗವೆನಿಸುತ್ತದೆ.        

ನಾನು ಬೆಳೆದಂತೆ ಅಡುಗೆ ಮಾಡುವ ಆಸಕ್ತಿಯೂ ಬೆಳೆಯಿತು. ಕೊರಿಯನ್ - ಇಟಾಲಿಯನ್ ಅಡುಗೆಗೆಗಳು ಅದ್ರಲ್ಲಿ ಮಾಂಸ ಮತ್ತು ತರಕಾರಿಗಳ  ಸಮಬಳಕೆಯಂತೂ ನನಗೆ ತೀರ ಆಸಕ್ತಿಯನ್ನುಂಟು ಮಾಡಿತು. ಬಹುತೇಕ ಭಾರತೀಯ ಅಡುಗೆಗಳಲ್ಲಿ ಮಾಂಸದ ಜೊತೆಗೆ ಹೆಚ್ಚು ತರಕಾರಿಗಳನ್ನು - ಸೊಪ್ಪನ್ನು ಬಳಸುವುದು ಆಘೋಷಿತವಾಗಿ ನಿಷಿದ್ದ . ಆದರೆ ನಾನು ಬಿಡಬೇಕಲ್ಲ  ಈಗಾಗಲೇ ನಾವು ಮಾಸದ ಅಡುಗೆಗೆ ಮೆಂತ್ಯೆ - ಪಾಲಕ್ ಬಳಸುವುದು ರೂಢಿ. ಇನ್ನೂ ಕೊತ್ತಂಬರಿ ಸೊಪ್ಪು ಇಲ್ಲದ ಆಡುಗೆಉಂಟೆಅದೊಂದು ತರಹದ ಅಡುಗೆಯ ಅವಿಭಾಜ್ಯದ ಅಂಗ. ಅದರಲ್ಲೂ ಮಸಾಲೆಯುಕ್ತ ಅಡುಗೆಗಳಲ್ಲಿ ಆದಿಲ್ಲದ ಅಡುಗೆಯಿಲ್ಲ. ಅಲಂಕಾರಕ್ಕು ಸೈ ಆಸ್ವಾದಕ್ಕೂ ಸೈ.    ಚಿಕನ್ ಜೊತೆಗೆ ಎಲೆಕೋಸು ಬಳಸಿ ಹುರಿಯುವುದು,  ಜೇನುತುಪ್ಪ ಮೆಣಸಿನ ಪಂದಿಕರಿ,  ಹೊಟ್ಟೆಯೊಳಗೆ ಸಬ್ಬಸಿಗೆ - ಮೆಂತ್ಯೆ ಹಾಕಿ ಇಡೀ ಮೀನನ್ನ ಫ್ರೈ ಮಾಡೋದು ಇದೆಲ್ಲಾ ಅಮ್ಮನಿಗೆ ಮೊದಮೊದಲು ಬಹಳ ಕಿರಿಕಿರಿ ಯಾಗಿತ್ತು. ಅಡುಗೆ ಮನೆಗೆ ಬರಲೇ ಬೇಡ ಅಂತ ನಿರ್ಬಂಧ ಕೂಡ ವಿಧಿಸಿದ್ದಳು ಅಲ್ಲದೇ ನಾನು ಆಚಾರಕ್ಕೆ ವಿರುದ್ದ ಅಡುಗೆಗಳನ್ನು ಮಾಡ್ತೀನಿ ಅನ್ನೋ ಆರೋಪ ಬೇರೆ ಇತ್ತು. ಆದ್ರೆ ಅಮ್ಮ ದಿನೇ ದಿನೇ ಅಡುಗೆಯ ಹೊಸ ವಿಧಕ್ಕೆ ಹೊಸರುಚಿಗೆ  ಹೊಂದಿಕೊಂಡಳು. ಆದರೆ ಇದಕ್ಕೆ ಅದು ಇಷ್ಟು ಹಾಕು. ಇದು ಹಾಕಬೇಡ ಅಂತೆಲ್ಲಾ ಒಂದಷ್ಟು ಉಪದೇಶ ಮಾಡಿ ಕಡೆಗೆ ನಾನು ಇನ್ನೇನೋ ಮಾಡಿಕೊಂಡು ತಂದಾಗ ತಿನ್ನದೇ ಮುನಿಸಿಕೊಳ್ಳುವುದು. ಆಮೇಲೆ ತಿಂದು ಓಕೆ ಪರ್ವಾಗಿಲ್ಲ ಅನ್ನೋದು ಈಗಲೂ ನಡೆಯುತ್ತಲೇ ಇದೆ. 



ಆರಂಭದಲ್ಲೇ ಹೇಳಿದಂತೆ ಈ ಅಡುಗೆ ಅನ್ನುವುದು ನಿಜಕ್ಕೂ ಗಂಡು ಮಕ್ಕಳಿಗೆ ಒಳ್ಳೆಯ ಅಧ್ಯಾತ್ಮ ಮತ್ತು ಯೋಗ. ಅದು ಹೆಣ್ಣು ಮಕ್ಕಳನ್ನು ಅರಿತುಕೊಳ್ಳುವ ಹಾಗೂ ಬದುಕಿನಲ್ಲಿ ಸ್ವಾವಲಂಬಿ ಆಗುವ ಮಾರ್ಗ ಕೂಡ. ಸಂಪಾದಿಸುವುದು ಮಾತ್ರ ಸಾಲದು ಅದು ಹೊಟ್ಟೆಯನ್ನು ತುಂಬಿಸಬೇಕಲ್ಲ. ಹಸಿದಾಗ ಹಣದಿಂದ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಹೊಟ್ಟೆಯನ್ನು ಅಡುಗೆ ಅಡುಗೆ ಮಾತ್ರ ತುಂಬಿಸಬಲ್ಲುದು. ಎಲ್ಲೆಡೆ ಎಲ್ಲಾ ಸಮಯದಲ್ಲೂ ನಮಗೆ ಹೊಟೇಲ್ ಗಳುಅಡುಗೆ ಕೆಲಸದವರು ಮತ್ಯಾರೋ ಮಡಿ ಬಡಿಸುವ ಜನ  ಸಿಗಲಾರರು. ನಿನಗೆ ನೀನೆ ಗುರುವಾಗುವ ಮೊದಲ ಹಂತವೇ ಅಡುಗೆ.   ದುಡ್ಡುಕೊಟ್ಟು ಅಧ್ಯಾತ್ಮವನ್ನು ಕೊಳ್ಳುವ ಬದಲು  ತಾಯಿತಂಗಿ ಅಥವಾ ಹೆಂಡತಿಯ ಜೊತೆಗೆ  ಒಂದಷ್ಟು ದಿನ  ಅಡುಗೆ ಮನೆಯ ಸ್ವಯಂ ಸೇವಕರಾಗಿ ಕೆಲ್ಸ ಮಾಡಿ.  ಆಮೇಲೆ ಯಾವ ಅಧ್ಯಾತ್ಮ ಮತ್ತು ಯೋಗ ನಿಮ್ಮನ್ನು ಮಾನಸಿಕ-ದೈಹಿಕವಾಗಿ  ಸರಿಪಡಿಸಬಹುದಿತ್ತೋ ಅದಕ್ಕಿಂತಲೂ ಉತ್ತಮ ಮನುಷ್ಯರಾಗುವಿರಿ.. ಖಂಡಿತ. 

'ಉಸ್ತಾದ್ ಹೊಟೇಲ್ಎಂಬ ಮಲೆಯಾಳಿ  ಚಿತ್ರವೊಂದರಲ್ಲಿ ಹೊಟೇಲ್ ಮಾಲೀಕನಾದ ಉಸ್ತಾದ್ ತಾತ  ತಮ್ಮ ಮೊಮ್ಮಗನಿಗೆ ಹೋಟೆಲು ನಡೆಸುವ/ಅಡುಗೆ ಮಾಡುವುದರ  ಕುರಿತು ಒಂದೊಳ್ಳೆಯ ಮಾತು ಹೇಳುತ್ತಾನೆ ಯಾರು ಬೇಕಾದರೂ ಹೊಟ್ಟೆಯನ್ನು  ತುಂಬಿಸುವ ಅಡುಗೆ ಮಾಡಬಹುದು. ಆದರೆ ಮನಸ್ಸನ್ನೂ ತುಂಬಿಸುವ ಅಡುಗೆ ಮಾತ್ರ ಒಳ್ಳೆಯ ಅಡುಗೆ ಅನಿಸಿಕೊಳ್ಳುತ್ತದೆ'  ..ಎಷ್ಟು ನಿಜ ಅಲ್ಲವೇ. 
ಹಾ! ಮರತೇ ಬಿಟ್ಟೆ ಅಡುಗೆ ಮನೆಯಲ್ಲಿ ಬಿರಿಯಾನಿ ತಳ ಹಿಡಿಯಿತು ಅನಿಸತ್ತೆ. ನಾನು  ಹೊರಟೆ. ನೀವು ತರಕಾರಿ ಹಚ್ಚಲು ಶುರುಮಾಡಿಕೊಳ್ಳಿ.. ಇಂಗು- ತೆಂಗು ಇದ್ರೆ ಮಂಗ ಕೂಡ ಅಡುಗೆ ಮಾಡಬಹುದಂತೆ! ಹ್ಹ ಹ್ಹ ಹ್ಹ   


- ವಾರ್ತಾಭಾರತಿ ವಿಶೇಷಾಂಕ - ೨೦೧೬ ರಲ್ಲಿ ಪ್ರಕಟಿತ 

2 comments:

  1. ಇಂಗು, ತೆಂಗು ತುಂಬಿದ ಅಧ್ಯಾತ್ಮ ಯೋಗ!

    ReplyDelete
  2. ಹ್ಹ ಹ್ಹ ಹ್ಹ ಥ್ಯಾಂಕ್ಯುೂ ಸರ್

    ReplyDelete