Thursday, January 12, 2017

ಚಿಕ್ಕಲ್ಲೂರಿನ ಜಾತ್ರೆ; ಪಂಕ್ತಿಸೇವೆ V/s ಪ್ರಾಣಿ ಬಲಿ

ಹಳೇ ಮೈಸೂರು ಭಾಗದ ಜನರಿಗೆ 'ಚಿಕ್ಕಲ್ಲೂರು' ಎನ್ನುವ ಹೆಸರು ಕೇಳಿದ್ರೆ ಸಾಕು 'ಜಾತ್ರೆ' ಯಾವಾಗ ಅನ್ನುವ ಮಾತೇ  ಮೊದಲು. ಕಾರಣ ನೂರಾರು ವರ್ಷಗಳಿಂದ ಆ ಜಾತ್ರೆಗೆ ಬರುವ ಜನಸಂಖ್ಯೆ, ಅಲ್ಲಿನ ಆಚಾರ ವಿಚಾರಗಳು ನಮ್ಮ ಭಾಗದ ಮನಸ್ಸನ್ನು ಅಷ್ಟರ ಮಟ್ಟಿಗೆ ಸೂರೆಗೊಂಡಿದ್ದವು. ಎಲ್ಲಿ ನೋಡಿದ್ರು 'ಚಿಕ್ಕಲೂರು ಜಾತ್ರಾ ವಿಶೇಷ'  ಎನ್ನುವ ಬಸ್ಸುಗಳ ಸಾಲುಗಳೇ ಸಾಗುತ್ತಿದ್ದುವು. ಅಲ್ಲಿ ಮಕ್ಕಳು ಹೋದ್ರೆ ಕಷ್ಟ ತಪ್ಪಿಸಿಕೊಂಡ್ರೆ ಹುಡುಕಲು ಕಷ್ಟ, ಲಕ್ಷಾಂತರ ಜನ ಸೇರುತ್ತಾರೆ. ಎಲ್ಲರೂ ಬಯಲಿನಲ್ಲಿಯೇ ಮಲಗಬೇಕು ಅಲ್ಲೇ ಅಡುಗೆ ಅಟ್ಟು ಉಣ್ಣಬೇಕು, ಭಂಗೀ ಸೇವೆ , ಪಂಕ್ತಿ ಸೇವೆ  ಇತ್ಯಾದಿಗಳು ನಮಗೆ ಬರ್ಮುಡಾ ಟ್ರ್ಯಾಂಗಲ್ ತರದ ಕುತೂಹಲವನ್ನು ಚಿಕ್ಕಲ್ಲೂರಿನ ಜಾತ್ರೆಯ ಬಗ್ಗೆ ಮೂಡಿಸಿದ್ದವು.  ನಮ್ಮೂರುಗಳಿಂದ ಜನ ಲಾರಿ, ಟೆಂಪೋ ಮಾಡಿಕೊಂಡು ಅಡುಗೆ ಸಾಮಾನು, ಕುರಿಕೋಳಿ, ಟೆಂಟು ಹಾಕಲು ಟರ್ಪಾಲು ಎಲ್ಲ ತುಂಬಿಕೊಂಡು ಹೋಗುವಾಗ ನನಗು ಹೋಗುವ ಆಸೆ ಮೂಡುತ್ತಿತ್ತಾದರೂ ಮನೆಯವರು ಮಾತ್ರ ತಪ್ಪಿಕೊಂಡ್ರೆ ಕಷ್ಟ ಅಂತ ಹೆದರಿ ಕಳುಹಿಸುತ್ತಿರಲಿಲ್ಲ. ಅಲ್ಲದೇ ನಾವು ಮಂಟೇಸ್ವಾಮಿ ದೇವರ ಒಕ್ಕಲಲ್ಲ ಅನ್ನುವ ಕಾರಣವೂ ಇತ್ತು. ದಶಕದ ಹಿಂದೆ ಚಿಕ್ಕಲ್ಲೂರಿಗೆ ಹೋಗಿದ್ದ ನನ್ನ ಅತ್ತೆ ಮಗಳು ದೊಡ್ಡ ಅಡುಗೆ ಒಲೆಗೆ ಬಿದ್ದು ಬೆನ್ನು ಪೂರಾ ಸುಟ್ಟು ಬೊಬ್ಬೆ ಎದ್ದಿದ್ದ ನೆನೆಪಿಸಿಕೊಂಡ್ರೆ ಭಯವಾಗತ್ತೆ.  ಭಯ-ಭಕ್ತಿ, ಬಾಡೂಟಗಳಿಗೆ ಚಿಕ್ಕಲ್ಲೂರಿನ ಜಾತ್ರೆ ಸದಾ ಪ್ರಸಿದ್ದಿ. ಮಳವಳ್ಳಿಯ ಮೂಲಕ  ಕೊಳ್ಳೇಗಾಲಕ್ಕೆ ಹೋಗುವ ರಸ್ತೆಯಲ್ಲಿ ಕೊಳ್ಳೇಗಾಲಕ್ಕೂ ಏಳೆಂಟು ಕಿಮಿ ಹಿಂದೆ ಎಡಕ್ಕೆ ತಿರುವಿ ಕೊತ್ತನೂರು ದಾಟಿ ಮುಂದೆ ಹೋದರೆ ಚಿಕ್ಕಲೂರು ಸಿಗುತ್ತದೆ. ಅಲ್ಲಿಂದ ೩-೪ ಕಿಮಿ ದೂರದಲ್ಲೇ ಕಾವೇರಿ ನದಿ ಹರಿಯುತ್ತದೆ. ಆ ಕಡೆಯ ದಡದಲ್ಲಿ ಮುತ್ತತ್ತಿ ಊರಿದೆ.  ಚಿಕ್ಕಲ್ಲೂರಿನಲ್ಲಿ ಮಂಟೇಸ್ವಾಮಿಯ ಶಿಷ್ಯ ಸಿದ್ದಪ್ಪಾಜಿಯ ಗದ್ದುಗೆಯಿದೆ. ಇದು ಮಂಟೇಸ್ವಾಮಿ ಪರಂಪರೆಯ ಬಹುಮುಖ್ಯ ಗದ್ದಿಗೆ. ವಿಶ್ವಕರ್ಮ ಜಾತಿಯವರನ್ನು ಸೇರಿಸಿ ಎಲ್ಲ ಅವೈದಿಕ  ಜಾತಿಯ ಜನರು ಈ ಗದ್ದಿಗೆಗೆ ನಡೆದುಕೊಳ್ಳುತ್ತಾರೆ. 
ಹಾಗಾಗಿಯೇ ಹಳೆ ಮೈಸೂರುಭಾಗದ ಜಾತ್ರೆಗಳಲ್ಲಿ ಚಿಕ್ಕಲೂರಿನ ಜಾತ್ರೆಗೆ ಅಧಿಕ ಸಂಖ್ಯೆಯ ಜನ ಸೇರುತ್ತಾರೆ. ಮೂಲಗದ್ದುಗೆಯು  ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಮಠದ ಉಸ್ತುವಾರಿಗೆ  ಸೇರಿದೆ. ಹಾಗಾಗಿ ವೈದಿಕ ಸಂಸ್ಕೃತಿಯಾ ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ವಿಶ್ವಕರ್ಮ ಸಮಾಜದವರು ಹೊಸಮಠ ಎನ್ನುವ ಹೊಸ ಗದ್ದುಗೆಯನ್ನು ನಿರ್ಮಿಸಿಕೊಂಡಿದ್ದಾರೆ. ಇದು ಮೂಲಗದ್ದುಗೆಯಿಂದ ಒಂದು-ಒಂದೂವರೆ ಕಿಮಿ ದೂರದಲ್ಲಿದೆ. ಆದರೆ ಇದಕ್ಕೆ ಒಳ್ಳೆಯ ಅನುದಾನಗಳು ಸಿಗಲಾಗಿ ಗುಡಿಗೋಪುರಗಳು ದೊಡ್ಡದಾಗಿ ನಿರ್ಮಿತವಾಗಿವೆ. ಆದರೆ ಮೂಲಗದ್ದುಗೆ ಈಗಲೂ ಸರಳವಾಗೇ ಇದೆ. ಅದಕ್ಕೂ ರಾಯಗೋಪುರ ಕಟ್ಟಲಾಗಿದೆ. ಜಾತ್ರೆಯ ನಡಾವಳಿಗಳು ಇಲ್ಲಿಯೇ ನಡೆಯುವುದು
ಜಾತ್ರೆಯ ಹಿನ್ನೆಲೆ ಏನು?  ಜಾತ್ರೆಯ ಆಚರಣೆಗಳು ಏನು?

ಹಲಗೂರಿನಲ್ಲಿ ಕಬ್ಬಿಣದ ಆಯುಧಗಳನ್ನು ಮಾಡಿ ಮಾರಿ ಹೆಚ್ಚು ಹಣ ಸಂಪಾದಿಸಿ, ಸಂಪತ್ತಿನ ದೆಸೆಯಿಂದ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದ, ಬಡವರು-ರೈತಾಪಿಗಳನ್ನು ತುಚ್ಛವಾಗಿ ಕಾಣುತ್ತಿದ್ದ ವಿಶ್ವಕರ್ಮ ಜಾತಿಯ ಪಾಂಚಾಳ ದೊರೆಗಳಿಗೆ ಬುದ್ದಿ ಕಲಿಸಬೇಕೆಂದು ಬೊಪ್ಪೇಗೌಡನ ಪುರದಲ್ಲಿದ್ದ ಗುರು ಮಂಟೇಸ್ವಾಮಿಯು ಅದೇ ಜಾತಿಯ ಮನೆಯಿಂದ ಸಿದ್ದಪ್ಪಾಜಿಯನ್ನು ತನ್ನ ಶಿಷ್ಯನನ್ನಾಗಿ ಪಡೆದುಕೊಂಡು ವರುಷಗಳ ತರುವಾಯ ಹಲಗೂರಿನ ದೊರೆಗಳ ಮನೆಯಿಂದ ತನಗೆ ಮಠ  ಕಟ್ಟಲು ಕಬ್ಬಿಣವನ್ನು ಭಿಕ್ಷೆ ಬೇಡಿ ತರಲು ಕಳುಹಿಸುತ್ತಾನೆ. ಹಾಗೆ ಕಳುಹಿಸುವಾಗ ಅವನಿಗೆ ಅಗೋಚರವಾದ ನೀಲಿಗ್ಯಾನವನ್ನು, ಮಾತ್ರಿಕ ಶಕ್ತಿಗಳನ್ನು ಎದುರಿಸುವ ಕಪ್ಪುಧೂಳನ್ನು ಕೊಟ್ಟು ಕಳುಹಿಸುತ್ತಾನೆ. ಅಲ್ಲದೆ ಮುಂದೆ ಚಿಕ್ಕಲ್ಲೂರಿನಲ್ಲಿ ಗುಡಿ ಕಟ್ಟಿಸಿ ಒಂಟಿ ದೇವರಾಗಿಸಿ ಎಲ್ಲ ಜಾತಿಯ ಜನ ಪೂಜೆ ಮಾಡುವ ಮೆರೆಯುವ ದೇವರಾಗಿಸುತ್ತೇನೆ ಅಂದು ಮಾತುಕೊಡುತ್ತಾನೆ. ಹಲಗೂರಿಗೆ ಭಿಕ್ಷಕ್ಕೆ  ಬಂದ ಸಿದ್ದಪ್ಪಾಜಿಯನ್ನು ಸೆರೆ ಹಿಡಿಯುವ ದೊರೆಗಳು ಪವಾಡಗಳನ್ನು ಮಾಡಿ ತೋರಿದರೆ ಕಬ್ಬಿಣ ಕೊಡುವುದಾಗಿ ಮಾತು ಕೊಡುತ್ತಾರೆ. ಅದರಂತೆ ಅವರು ಹೇಳುವ ಎಲ್ಲ ಪಂದ್ಯಗಳನ್ನು ಗೆದ್ದು  ಪವಾಡ ತೋರುವ ಸಿದ್ದಪ್ಪಾಜಿಗೆ ಕಬ್ಬಿಣ ಕೊಡಲು ಹಿಂದೇಟು ಹಾಕಿದಾಗ ಅವನ ಮಾಂತ್ರಿಕ ಶಕ್ತಿಯಿಂದ ಇಡೀ ಊರನ್ನೇ ರೋಗದ ಮಾರಿಯರು ಬಂದು  ಆಕ್ರಮಿಸಿಕೊಳ್ಳುತ್ತಾರೆ. ಕಡೆಗೆ ಸೋತ ಹಲಗೂರಿನ ದೊರೆಗಳು ಕಬ್ಬಿಣದ ಆಯುಧಗಳನ್ನು ಮಠವನ್ನು ಕಟ್ಟಿಕೊಡುತ್ತಾರೆ.  ಮುಂದೆ ಕಲಿಗಾಲದಲ್ಲಿ ತಾನು ನರಲೋಕದಲ್ಲಿರಬಾರದೆಂದು ಎಲ್ಲ ಶಿಷ್ಯಂದಿರಿಗೂ ಜವಾಬ್ದಾರಿಗಳನ್ನು ವಹಿಸಿ ಮಂಟೇಸ್ವಾಮಿ ಜೀವ ಸಮಾಧಿಯಾಗುತ್ತಾನೆ.  ತರುವಾಯ ಸಿದ್ದಪ್ಪಾಜಿ ಕೂಡ ಚಿಕ್ಕಲ್ಲೂರಿನಲ್ಲಿ ಗುರುವು ಹೇಳಿದ ಮಾತಿನಂತೆ ಜೀವಸಮಾಧಿಯಾಗುತ್ತಾನೆ. ಆ ಗದ್ದುಗೆಯಲ್ಲೇ ಈ ಪ್ರಖ್ಯಾತ ಜಾತ್ರೆ ನಡೆಯುವುದು. 

ಜಾತ್ರೆ ಅಂದ ಮೇಲೆ ಅಲ್ಲಿ ಅದಕೆ ತನ್ನದೇ ಆದ ರೀತಿನೀತಿಗಳಿವೆ. ಪರಂಪರೆಯ ಐತಿಹ್ಯವಿದೆ. ಮಂಟೇಸ್ವಾಮಿ ಪರಂಪರೆಯಲ್ಲಿ ಮೂರೂ ಪ್ರಸಿದ್ಧ ಜಾತ್ರೆಗಳಿವೆ. ಒಂದು ಬನದ ಹುಣ್ಣಿಮೆಯ ದಿನ ಚಿಕ್ಕಲ್ಲೂರಿನಲ್ಲಿ ನಡೆಯುವ ಸಿದ್ದಪ್ಪಾಜಿ ಜಾತ್ರೆ. ಇದು ಮೊದಲನೆಯ ಮುಖ್ಯ ಜಾತ್ರೆ. ಎರಡನೆಯದು ಶಿವರಾತ್ರಿ ಸಮಯದಲ್ಲಿ ಬೊಪ್ಪೇಗೌಡನ ಪುರದಲ್ಲಿ ನಡೆಯುವ ಮಂಟೇಸ್ವಾಮಿ ಸ್ವಾಮಿ ಜಾತ್ರೆ. ಮೂರನೆಯದು ಕಪ್ಪಡಿಯಲ್ಲಿ ನಡೆಯುವ ರಾಚಪ್ಪಾಜಿ ಜಾತ್ರೆ. 
ಐದು ದಿನ ನಡೆಯುವ ಚಿಕ್ಕಲ್ಲೂರಿನ  ಜಾತ್ರೆಯಲ್ಲಿ ಮೊದಲ ದಿನ ಚಂದ್ರಮಂಡಲ ಸೇವೆ  ( ಬಿದಿರಿನ ದೊಡ್ಡ ತಡಿಕೆಯಲ್ಲಿ ಧಾನ್ಯಗಳನ್ನು ಕಟ್ಟಿ ಬೆಂಕಿ ಇಡುತ್ತಾರೆ ಯಾವ ದಿಕ್ಕಿಗೆ ಯಾವ ಧಾನ್ಯ ಹೆಚ್ಚು ಉರಿಯುತ್ತದೋ ಆ ದಿಕ್ಕಿನಲ್ಲಿ ಮಳೆ -ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ಜನರ ನಂಬಿಕೆ ) 
ಮೊದಲ ದಿನ ಚಂದ್ರಮಂಡಲ ಸೇವೆ 
ಎರಡನೇ ದಿನ ದೊಡ್ಡವರ ಸೇವೆ 
ಮೂರನೇ ದಿನ ಮುಡಿ ಸೇವೆ 
ನಾಲ್ಕನೆಯ ದಿನ ಭಂಗಿ ಸೇವೆ (ನಿಷೇಧಿಸಲಾಗಿದೆ) / ಪಂಕ್ತಿಸೇವೆ 
ಐದನೆಯ ದಿನ ಮುತ್ತತ್ತರಾಯನ ಸೇವೆ 

ಮೊದಲಿನಿಂದಲೂ ಮಾಂಸ -ಮದ್ಯ - ಭಂಗಿ ಸೇವನೆ ಈ ಜಾತ್ರೆಯಲ್ಲಿ ಸಾಮಾನ್ಯವಾಗಿತ್ತು. ಪಂಕ್ತಿಸೇವೆಯ ದಿನ ಜಾತ್ರೆ ಬಂದಿರುವ ಜನ ತಮ್ಮ ತಮ್ಮ ಬಿಡಾರಗಳಲ್ಲಿ ಅವರಿಗಿಷ್ಟವಾದ ಮಾಂಸಾಹಾರ ಅಥವಾ ಸಸ್ಯಾಹಾರದ ಅಡುಗೆಯನ್ನು ಮಾಡಿ ಅದನ್ನು ದೇವರಿಗೆ ಎಡೆಯಿಕ್ಕಿ ನಂತರ ಜಾತ್ರೆಗೆ ಬಂದಿರುವ ಜನಕ್ಕೆ  ಜಾತಿ-ಕುಲದ ತಾರತಮ್ಯ ಮಾಡದೆ ಜೊತೆಯಲ್ಲಿಯೇ ಕೂರಿಸಿಕೊಂಡು ಊಟ ಮಾಡುತ್ತಾರೆ. ಸಸ್ಯಾಹಾರದ ಅಡುಗೆ ಮಾಡುವ ಜನ ಇದ್ದಾರಾದರೂ ಭಾಳ ಕಡಿಮೆ.  ಬಹುತೇಕ ಎಲ್ಲರೂ ಮಾಂಸಾಹಾರವನ್ನೇ ಮಾಡುತ್ತಾರೆ. ಆದರೆ ಎಲ್ಲಿಯೂ ತಾವು ತಂದ  ಕುರಿಕೋಳಿಗಳನ್ನು ಬಲಿ ಕೊಡುವುದಿಲ್ಲ. ತಮ್ಮ ತಮ್ಮ ಬಿಡಾರಗಳಲ್ಲಿ ಅವನ್ನು ಅಡುಗೆಗೆ ಬಳಸಿಕೊಳ್ಳುತ್ತಾರೆ. ನೂರಾರು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. ವೈದಿಕ ಮತ್ತು ಇತರೆ ಮೇಲ್ವರ್ಗದ ಧಾರ್ಮಿಕ ಆಚರಣೆಗಳು ಮಾಂಸಾಹಾರವನ್ನು ಕೀಳಾಗಿ ಮತ್ತು ಕೆಟ್ಟದಾಗಿ ಪರಿಗಣಿಸಿದರೆ ಅವೈದಿಕ ಪರಂಪರೆಯ ಮತಗಳು ಮಾಂಸಾಹಾರವನ್ನೇ ಅವರ ಧಾರ್ಮಿಕ ಆಚರಣೆಯ ಮುಖ್ಯಭಾಗವಾಗಿ ಪರಿಗಣಿಸುತ್ತಾರೆ. ಆದರೆ ಈಚೆಗೆ ಕೆಲವು ಸಿನಿಮೀಯ ಬೆಳವಣಿಗೆಗಳು ಕಂಡು ಬರುತ್ತಿವೆ. ಕೆಲವು ಮೇಲ್ವರ್ಗದ ಜನರು ಇದು ಪ್ರಾಣಿಬಲಿ ನಿಷೇಧ ಕಾಯ್ದೆಯ ಉಲ್ಲಂಘನೆಯೆಂದು ಕಳೆದ ವರ್ಷ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಜಾತ್ರೆಯಲ್ಲಿ ಬಾಡೂಟ ಮಾಡದಂತೆ ತಡೆ ಒಡ್ಡಲಾಯಿತು. ಇದಕ್ಕಾಗಿ ಚಿಕ್ಕಲ್ಲೂರು ಪ್ರವೇಶ ಮಾಡುವ ೧೦-೨೦ ಕಿಮಿ ದೂರದ ಎಲ್ಲ ಮಾರ್ಗಗಳಲ್ಲಿಯೂ ಚೆಕ್ ಪೋಸ್ಟ್ ಗಳನ್ನ ಇಟ್ಟು  ಕುರಿಕೋಳಿಗಳನ್ನು ಜಾತ್ರೆ ಕೊಂಡೊಯ್ಯದಂತೆ ವಶಪಡಿಸಿಕೊಳ್ಳಲಾಯ್ತು. 

* ಜನರ ಉಣ್ಣುವ ತಟ್ಟೆಯಲ್ಲಿ ಮಾತ್ರ ಇವರಿಗೆ ಹಿಂಸೆ ಎನ್ನುವುದು ಯಾಕೆ ಕಾಣುತ್ತಿದೆ? ಆಹಾರದಲ್ಲಿ ಮಾಂಸದ ಬಳಕೆ ಮಾನವ ವಿಕಾಸದ ಕಾಲದಿಂದಲೂ ಇದೆ. ಅಲ್ಲದೆ ಅದು ಪ್ರಾಕೃತಿಕ  ಸಮತೋಲನದ  ನಿಯಮ. 

* ನಾವು ತಿನ್ನುವ ಆಹಾರ ನಮ್ಮ ಹಕ್ಕು ಅದನ್ನು ನಿಷೇಧ ಮಾಡುವುದು, ಕಸಿಯುವುದು  ಎಂತಲೇ ಅರ್ಥ ಹಾಗಾದ್ರೆ ಇದು ಈ ದೇಶದ ನಾಗರೀಕನಿಗಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲವೇ?  ಬಲವಂತವಾಗಿ ನಮ್ಮ ಆಹಾರವನ್ನು ನಿಷೇಧಿಸಲು ಸಂವಿಧಾನ ನಿಮಗೆ ಹಕ್ಕು ನೀಡಿದೆಯೇ?  

* ಯಾಕೆ ಯಾವಾಗಲೂ ಅವೈದಿಕ ಮತಗಳ ಆಚರಣೆಗಳು ಮಾತ್ರ ಕಾನೂನಿನ ನಿಷೇಧಕ್ಕೆ ಒಳಪಡುತ್ತವೆ. ಅಥವಾ ಅನಾಗರೀಕ ಎಂದು ಪರಿಗಣಿಸಲ್ಪಡುತ್ತವೆ. ಹಾಗಿದ್ರೆ ಈ ಸಮಾಜ ಯಾರದ್ದು ? ಯಾರ ಸ್ವತ್ತು?    

* ಮಡೆಸ್ನಾನವನ್ನು ಎಡೆಸ್ನಾನ ಮಾಡಿಕೊಳ್ಳಿ ಎಂದು ಸಲಹೆ ನೀಡಲು ಶಕ್ಯವಿರುವ ಮುಖಂಡರು ''ಬಲಿ ಕೊಡಕೂಡದು. ಆದ್ರೆ ಮಾಂಸಾಹಾರ ಸೇವನೆಗೆ ಯಾವ ನಿಷೇಧವೂ ಇಲ್ಲ'' ಅಂತ ಹೇಳಲು ಯಾಕೆ ಯಾರೂ ಮುತುವರ್ಜಿ ವಹಿಸುವುದಿಲ್ಲ. 

*   ನಮ್ಮ ಜಾತ್ರೆಯಲ್ಲಿ ನಾವು ಊಟ ಮಾಡುವುದನ್ನು ಸರಕಾರ/ ನ್ಯಾಯಾಲಯಗಳು ನಿಷೇಧ ಮಾಡುವುದಾದರೆ ಉಡುಪಿ ಧರ್ಮಸ್ಥಳ ಸೇರಿದಂತೆ ವೈದಿಕ ಆಚರಣೆಯ ಕ್ಷೇತ್ರಗಳಲ್ಲಿ 'ಅನ್ನ ಸಂತರ್ಪಣೆ ಯಾಕೆ ನಡೆಯಬೇಕು' ಅದೂ ಪಂಕ್ತಿ ಬೇಧದಲ್ಲಿ .. ಜನರ ಜಾತಿ ತಾರತಮ್ಯದಲ್ಲಿ! ಹಾಗಿದ್ದರೆ ಸಸ್ಯಾಹಾರ ಮಾತ್ರ ಕಾನೂನು ಬದ್ಧವೇ? 

*  ಚಿಕ್ಕಲ್ಲೂರಿನ ಗದ್ದುಗೆಯಲ್ಲಿ ಬಳಿ ನೀಡುವ ಯಾವ ಬಲಿಪೀಠವೂ ಇಲ್ಲ. ಇದೆ ದಿನವೇ ನಡೆಯುತ್ತಿದ್ದ ಭಂಗಿ ಸೇವೆಯನ್ನು ಸರಕಾರ ಕಟ್ಟುನಿಟ್ಟಾಗಿ ನಿಷೇಧಿಸಿದ ಮೇಲೆ ಜನ ಆ ಸೇವೆಯನ್ನು ನಿಲ್ಲಿಸಿದರು. ಭಂಗಿ ಸೊಪ್ಪಿನ ಬಳಕೆ ದೇಶದಾದ್ಯಂತ ನಿಷೇಧವಾಗಿರುವಾಗ ಇಲ್ಲಿನ ಜನರೂ ಒಪ್ಪಿದರು. ಮತ್ತು ಭಂಗಿ ಸೇವನೆ ಜನರ ಆಹಾರ ಕ್ರಮವಾಗೇನೂ ಇಲ್ಲ. ಹಾಗಿರುವಾಗ  ಪಂಕ್ತಿಸೇವೆಯನ್ನು ನಿಷೇಧಿಸಲು ನಿಮಗೆ ಯಾವ ಹಕ್ಕು ಇದೆ. 


ಸರಕಾರ / ನ್ಯಾಯಾಲಯ ಇತರ ಸಂಸ್ಥೆಗಳು ಜನರ ಮಾತು, ಆಹಾರ, ಉಡುಗೆ ತೊಡುಗೆ, ಭಾಷೆಗಳ ಮೇಲೆ ಕಾನೂನಿನ ಹೇರಿಕೆ ಮಾಡುವ ಬದಲು ಎಲ್ಲರೂ ಸಮಾನವಾಗಿ ಬದುಕುವ ಸಾಮಾಜಿಕ ನ್ಯಾಯದ ಸಂಕೇತದಂತಿರುವ ಇಂತಹ ಸಾಂಸ್ಕೃತಿಕ ಆಚರಣೆಗಳನ್ನು ಬೆಂಬಲಿಸಬೇಕು. ಮತ್ತು  ಅಂತಹ ಊರುಗಳಿಗೆ ಒಳ್ಳೆಯ ರಸ್ತೆ, ಕುಡಿಯುವ ನೀರು, ಪ್ರಾಥಮಿಕ ಅರೋಗ್ಯ ಕೇಂದ್ರ , ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಲಕ್ಷಾಂತರ ಜನ ಸೇರುವ ಇಂತಹ ಜಾತ್ರೆಗಳಲ್ಲಿ ಅವಘಡಗಳು ಉಂಟಾಗದಂತೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಎದುರು ನೋಡುವುದು ಇದನ್ನು. ಅದು ಬಿಟ್ಟು ಅವರ ಉಣ್ಣುವ ಆಹಾರ, ತೊಡುವ ಬಟ್ಟೆಯ ನಿಷೇಧಗಳನ್ನಲ್ಲ. ಅಂತಹ ಸ್ಥಿತಿಯು ಮತ್ತೆ ಮತ್ತೆ ಎದುರಾದರೆ ಖಂಡಿತ ಜನ ದಂಗೆ ಏಳುತ್ತಾರೆ.  ಸರಕಾರ ಇನ್ನಾದರೂ ಎಚ್ಛೆತ್ತುಕೊಂಡು ಇಂತಹ ಕ್ಷುಲ್ಲಕ ನಿಷೇಧಗಳು ಜಾರಿಯಾಗದಂತೆ ನಿಗಾ ವಹಿಸಬೇಕು.  
ಮತಧರ್ಮ ಜಾತಿಗಳ ತಾರತಮ್ಯವಿಲ್ಲದೆ ಒಟ್ಟಿಗೆ ಕುಳಿತು ಬಾಡೂಟ ಮಾಡುವ 'ಪಂಕ್ತಿಸೇವೆ' ನಮ್ಮ ಸಹಿಷ್ಣು ಸಮಾಜದ ಉತ್ತಮ ನಡವಳಿಕೆ. ಅದನ್ನು ನಿಷೇಧ ಮಾಡುವುದು ಅಕ್ರಮ ಮತ್ತು ಅನೀತಿ ಎಂದೇ ನಾನು ನಂಬುತ್ತೇನೆ. 

- ಆರ್. ಪಿ.  

ಬನದ ಹುಣ್ಣಿಮೆ 
ಜನವರಿ ೧೨ , ೨೦೧೭     

ಚಿತ್ರಗಳು : ಉಷಾ ಕಟ್ಟೆಮನೆ ಮತ್ತು ಕುಮಾರ ರೈತ 


          2 comments:

  1. ನಿಮ್ಮ ಮಾತು ಸಮಂಜಸವಾಗಿದೆ. ನಾನು ನೂರಕ್ಕೆ ನೂರರಷ್ಟು ಸಹಮತಿಸುತ್ತೇನೆ.

    ReplyDelete
  2. ಸಿಗಿ,ಗಾವು, ದೇವರೂಟ,ಬಾಯಿಬಲಿ ಇನ್ನೂ ಮುಂತಾದ ಅನೇಕ ಪ್ರಾಣಿ ಬಲಿಕೊಡುವ ಆಚರಣೆಗಳು ರಾಜ್ಯಾದ್ಯಂತ ಎಲ್ಲಕಡೆ ಎಗ್ಗಿಲ್ಲದೆ ಪೋಲಿಸರ ಸಮ್ಮುಖದಲ್ಲೇ ನಡೆಯುತ್ತಿದೆ ,ಅದೂ ರಾಜಕೀಯ ಮುಖಂಡರ ಉಪಸ್ಥಿತಿಯಲ್ಲಿ ?!,ಹೀಗೆ ಕುಲ್ಲಂಖುಲ್ಲ ದೇವರ ಹೆಸರಿನಲ್ಲಿ ಬಲಿ ಕೊಡುವುದನ್ನು ಯಾವ ಪ್ರದೇಶದಲ್ಲೂ ನಿಷೇಧಿಸದಿರುವಾಗ ಹಾಗೆಯೇ ಈ ಪರಂಪರೆ
    ಎಲ್ಲೆಡೆಯೂ ಮುಂದುವರೆದುಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಲ್ಲೂರಿನಲ್ಲಿ ಮಾತ್ರ ಪ್ರಾಣಿಗಳನ್ನು ತರದಂತೆ ನಿಷೇಧವನ್ನು ಹೇರುವುದು ಯಾವ ಸಾಮಾಜಿಕ ನ್ಯಾಯ?ಅಷ್ಟಕ್ಕೂ ಪ್ರಾಣಿ ಬಲಿಯ ಆಚರಣೆಯೇ ಇಲ್ಲವೆಂದ ಮೇಲೆ ನಿಷೇಧವೇಕೆ?ಊರ ಮುಖಂಡರು ಏನು ಮಾಡುತ್ತಿದ್ದಾರೆ?

    ReplyDelete