Friday, March 30, 2018

ವರ್ತಮಾನಕ್ಕೆ ಹಿಡಿದ ಪ್ರತಿಮಾ ಕನ್ನಡಿ : ಕಾದಂಬರಿಯ ಸೃಜನಶೀಲ ಅನುವಾದ

ಪುಸ್ತಕ : ‘ದಮ್ಮಲಾಲ್ ಚೋಪ್ರಾ’ – ಕಾದಂಬರಿ  
ತೆಲುಗು ಮೂಲ : ಮಧುರಾಂತಕಂ ನರೇಂದ್ರ
ಕನ್ನಡಾನುವಾದ : ಕುಂ. ವೀರಭದ್ರಪ್ಪ
ಬೆಲೆ : ೧೦೦ ರೂ , ಪುಟ : ೧೧೨ 
ಪ್ರಕಾಶನ : ಆಕೃತಿ ಪುಸ್ತಕ, ಬೆಂಗಳೂರು    
ಹಿರಿಯ ಕಥೆಗಾರರಾದ ಕುಂವೀ ಅವರು, ಬಹಳ ಕಾಲದಿಂದಲೂ ತೆಲುಗಿನ ನೂರಾರು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಅವುಗಳಲ್ಲಿ ಹೊಸದು ಈಚೆಗೆ ಹೊರಬಂದ ''ದಮ್ಮ ಲಾಲ್ ಚೋಪ್ರ''. 
 ಇದು ತೆಲುಗಿನ ಕಥೆಗಾರ ಮಧುರಾಂತಕಂ ನರೇಂದ್ರ ಅವರ ' ಅಂಸ್ಟರ್ ಡ್ಯಾಮ್ ಲೋ ಅದ್ಬುತಂ'  ಎಂಬ  ಕಾದಂಬರಿಯ ಅನುವಾದವಾಗಿದೆ. ಸ್ವಲ್ಪ ಹೆಚ್ಚು ಸ್ವಾತಂತ್ರ್ಯವನ್ನು ಇಟ್ಟುಕೊಂಡು ಮಾಡಿದ ಈ ಅನುವಾದ ಮತ್ತೊಂದು ಸೃಜನಶೀಲ ಕೃತಿಯಾಗಿಯೇ ಕನ್ನಡಕ್ಕೆ ಬಂದಿರುವುದು ಸಂತಸದ ಸಂಗತಿ. 

ಒಬ್ಬ ಸೃಜನಶೀಲ ಬರಹಗಾರ ವರ್ತಮಾನಕ್ಕೆ ಹೇಗೆ ಸ್ಪಂದಿಸುತ್ತಾನೆ ಎನ್ನುವುದಕ್ಕೆ ಈ ಕಾದಂಬರಿ ಉತ್ತಮ ಉದಾಹರಣೆ. ತೆಲುಗಿನಲ್ಲಿ ೨೦೧೩ರ ಕೊನೆಯಲ್ಲಿ ಪ್ರಕಟಗೊಂಡ ಈ ಕೃತಿ, ಅಷ್ಟೇನೂ ಸದ್ದು ಮಾಡಲಿಲ್ಲ. ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲೇ ಮಾರುಕಟ್ಟೆಗೆ ಬಂದ ಕನ್ನಡ ಅನುವಾದ ಕೂಡ ಅಷ್ಟೇ. ಬಹುಶಃ ಕಾದಂಬರಿ ತನ್ನಲ್ಲಿ ಹುದುಗಿಸಿಕೊಂಡಿರುವ ಮೆಟಫರ್ ಗಳನ್ನೂ ಗುರುತಿಸುವಲ್ಲಿ ಓದುಗರು, ವಿಮರ್ಶಕರು ಸೋತಿರಬಹುದು ಅಥವಾ ಕಥನದ ದೀರ್ಘ ನಿರೂಪಣೆ ಕುತೂಹಲವನ್ನು ಹುಟ್ಟಿಸದೇ ಇರಬಹುದು. ಆದರೆ ಚೂರು ಗಮನವಿಟ್ಟು ಓದತೊಡಗಿದರೆ ಕಾದಂಬರಿಯ ಪಾತ್ರ ಮತ್ತು ವಿಷಯಗಳು  ನಮ್ಮ ಮುಂದೆ ವಿಸ್ಮಯದೊಂದಿಗೆ ಚಿತ್ರಿತವಾಗುತ್ತಾ ಹೋಗುತ್ತವೆ.          

ಈ ಕಥನವು ಜಾರ್ಜ್ ಅರ್ನವೆಲ್ ನ 'ದಿ ಅನಿಮಲ್ ಫಾರ್ಮ್', '1986' ಮತ್ತು ಬ್ರೆಕ್ಟ್ ನ ರಾಜಕೀಯ ಕವಿತೆಗಳನ್ನು ನೆನೆಪಿಸುತ್ತದೆ.  ವರ್ತಮಾನದ ರಾಜಕೀಯವನ್ನು ಮೆಟಾಫರ್ ಆಗಿ ಇಟ್ಟುಕೊಂಡು ಬಂದ ಕಾದಂಬರಿಗಳು ಈಚೆಗೆ ಕಂಡುಬಂದಿಲ್ಲ. (ನನ್ನ ಓದಿನ ಮಿತಿಯಲ್ಲಿ) ಆದರೆ ಈ ಕೃತಿ ವರ್ತಮಾನ‌ದ ರಾಜಕೀಯವನ್ನು ಅತ್ಯಂತ ಸ್ಪಷ್ಟವಾಗಿ ಎರಡು ಪಾತ್ರಗಳ ಮುಖೇನ ಕಟ್ಟಿಕೊಳ್ಳುತ್ತಾ ಸಾಗಿದೆ. ರಾಷ್ಟ್ರೀಯತೆ, ಹಿಂದಿ, ಆರ್ಯ-ದ್ರಾವಿಡ, ಸನ್ಯಾಸ-ಯೋಗ-ಅಗೋಚರ ಶಕ್ತಿ- ಸನಾತನ ಧರ್ಮ. ಇಸ್ಲಾಂ ಪೋಬಿಯಾ, ಇಸ್ಲಾಂ ಭಯೋತ್ಪಾದಕತೆ, ಭಾರತೀಯ ಸಮಾಜದ ವಿದ್ಯಾವಂತ ವರ್ಗ ಮತ್ತು ಅವರ ಅರಿವುಗೇಡಿತನ, ಅದ್ಬುತ ಒಂದರ ಭ್ರಮೆ ಸೃಷ್ಟಿಸುವ ಮನುಷ್ಯ.. ಇತ್ಯಾದಿಯಾದ ಕಥನದ ವಸ್ತು-ವಿಷಯಗಳು ಏನಿವೆಯೋ ಇದೇ ತೆರನಾದ ಕಥನೊದ್ದೇಶ ಅನಿಮಲ್ ಫಾರ್ಮ್ ನ ಕಥನದೊಳಗೂ ಹುದುಗಿದೆ. ಈ ಕಾದಂಬರಿಗಳ ದೇಶಕಾಲ ಮತ್ತು ಆಯಾಮಗಳು ಬೇರೆಯೇ ಆಗಿದ್ದರೂ ಅವು ಚಿತ್ರಿಸಿರುವ ರಾಜಕೀಯ ರೂಪಕಗಳು ಮತ್ತು ಸಂರಚನೆಯ ಉದ್ದೇಶ ಒಂದೇ ಆಗಿದೆ. 

ಕಾದಂಬರಿಯಲ್ಲಿ ಮೂರು ಮುಖ್ಯ ಪಾತ್ರಗಳಿವೆ.  ದಮ್ಮಲಾಲ್ ಚೋಪ್ರ, ಕಥಾ ನಿರೂಪಕ ಮತ್ತು ಅಂಸ್ಟರ್ ಡ್ಯಾಮ್ ವಿಮಾನ ನಿಲ್ದಾಣ. ಪ್ರೊಫೆಸರ್ ಆಗಿರುವ ಕಥಾ ನಿರೂಪಕನ ಜೊತೆ ವ್ಯಾಪಾರಿಯಗಿರುವ ಚೋಪ್ರ ಭಾರತದಿಂದ ಮೆಕ್ಸಿಕೋ ಗೆ ಅಂಸ್ಟರ್ ಡ್ಯಾಮ್ ಮೂಲಕ ಪ್ರಯಾಣಿಸುವುದೇ ಮೊದಲ ರೂಪಕವಾಗಿದೆ. ಚೋಪ್ರ ರಾಜಸ್ತಾನದವನು ಅವನಿಗೆ ತನ್ನ ಭಾಗದ ಹಿಂದಿ ಬಿಟ್ಟರೆ ಬೇರೆ ಭಾಷೆ ಬಾರದು. ನಿರೂಪಕ ಆಂಧ್ರ ರಾಜ್ಯದವನು ಆತನಿಗೆ ತೆಲಗು, ಇಂಗ್ಲಿಶ್ ಬಿಟ್ಟರೆ ಬೇರೆ ಭಾಷೆಬಾರದು, ಬಂದರೂ ಹರಕು ಹಿಂದಿ. ಆದರೆ ಹಿಂದಿಯ ಮಾತುಕತೆಯನ್ನು ಬಯಸುವ ಚೋಪ್ರ ತುಂಬಾ ವಿಲಕ್ಷನಕಾರಿ ಮನುಷ್ಯ. ಆತ ಯಾವುದೊ ಅತೀಂದ್ರಿಯ ಶಕ್ತಿಯನ್ನು ಪಡೆದವನಂತೆ  ಅಂಸ್ಟರ್ ಡ್ಯಾಮ್ ನಲ್ಲಿ ಅದ್ಬುತ ನಡೆಯಲಿದೆ. ಅದನ್ನು ಯಾರೂ ತಪ್ಪಿಸಲಾಗದು ಅದಕ್ಕಾಗಿಯೇ ತಾನು ಅಲ್ಲಿಗೆ ಹೋಗುತ್ತಿರುವುದಾಗಿ ಕಾದಂಬರಿಯ ಕಡೆಯ ವರೆವಿಗೂ ಕನವರಿಸುತ್ತಲೇ ಇರುತ್ತಾನೆ. ಹಾಗಿದ್ದರೆ ಏನದು ಅದ್ಬುತ?! 
ಈ ಅದ್ಬುತವು ಈ ಕಾದಂಬರಿಯನ್ನು ಒಂದು ಪತ್ತೇದಾರಿ ಕಥನದಂತೆ ಕೊನೆಯವರೆಗೂ ನಮ್ಮನ್ನು ಎಳೆದುಕೊಂಡು ಹೋಗುತ್ತದೆ. ಕಾದಂಬರಿಯ ಪೂರ್ತಿ ತುಂಬಿರುವ ಈ ಅದ್ಬುತ ‘ ಅಚ್ಚೇ ದಿನ್’ ತರಹದ ಹೇಳಿಕೆಯಂತೆ ಕಂಡು ಬಂದರೆ ಆಶ್ಚರ್ಯ ಪಡಬೇಕಿಲ್ಲ. ಯಾಕಂದರೆ ಕೊನೆಗೂ ಆ ಅದ್ಬುತ ಎಲ್ಲಿ ಹೇಗೆ ಘಟಿಸಿತು ಎಂಬುದನ್ನು ನೀವು ಕಾದಂಬರಿ ಓದಿಯೇ ತಿಳಿಯಬೇಕು. ಆದರೆ ಈ ಚೋಪ್ರ ಸಾಮಾನ್ಯನಲ್ಲ ಅದ್ಬುತವೊಂದರ ಭ್ರಮೆ ಸೃಷ್ಟಿಸುತ್ತಾ ಕಥಾ ನಿರೂಪಕನನ್ನ ಹೆದರಿಸುತ್ತಾ ಅವನಿಂದ ರಕ್ಷಣೆ ಪಡೆಯುತ್ತಾ ಸಾಗುವ ವಿಲಕ್ಷಣ ಪಾತ್ರ. ನಿಂತಲ್ಲಿ, ಕೂತಲ್ಲಿ    ‘ಅಂಸ್ಟರ್ ಡ್ಯಾಮ್ ನಲ್ಲಿ ಅದ್ಬುತ.. ಅಂಸ್ಟರ್ ಡ್ಯಾಮ್ ನಲ್ಲಿ ಅದ್ಬುತ’ ಅಂತ ಬಡಬಡಿಸುವುದು, ಟಾಯ್ಲೆಟ್ಟಿನ ಕಮೋಡ್ ಮೇಲೆ ಪದ್ಮಾಸನ ಹಾಕಿ ಕುಳಿತು ಧ್ಯಾನ ಮಾಡುವುದು, ಏನೇನೋ ಬೀಜಾಕ್ಷರಗಳನ್ನು ಜಪಿಸುವುದು, ಅಸಂಬದ್ದವಾಗಿ ಕವಿತೆ, ಮಂಡಲ, ಯಂತ್ರ-ಮಂತ್ರಗಳನ್ನು ಡೈರಿಯಲ್ಲಿ ಬರೆಯುವುದು. ಭಯೋತ್ಪಾದನೆ ಕುರಿತು ಉದ್ದುದ್ದ ಭಾಷಣ ಮಾಡುವುದು, ಮಕ್ಕಳ ತಿಂಡಿ ಕದ್ದು ತಿನ್ನುವುದು, ತಂದೆಯ ವಾರ್ಷಿಕ ತಿಥಿಯೆಂದು ತಿನ್ನದೆ ಇರುವ ನಾಟಕ ಮಾಡುವುದು, ಇದೆಲ್ಲಾ ರಗಳೆಗಳಿಂದ ವಿಮಾನ ನಿಲ್ದಾಣದ ಅಧಿಕಾರಿಗಳ ಸಂದೇಹಕ್ಕೆ ಸಿಕ್ಕು ಸೆಕ್ಯೂರಿಟಿ ಅಧಿಕಾರಿಗಳ ತಪಾಸಣೆಗೆ  ಒಳಗಾಗುವುದು. ಹೀಗೆ ಕೇವಲ ೨೪ ಗಂಟೆಗಳ ಕಾಲ ವಿಮಾನ ಕಾಯುವ ಅವಧಿಯಲ್ಲಿ ಈತನ ವಿಶ್ವರೂಪವನ್ನು ಕಾದಂಬರಿಯ ನಿರೂಪಕ ನಮ್ಮ ಮುಂದೆ ಚಿತ್ರಿಸುತ್ತಾ ಹೊಗಿತ್ತಾನೆ. ಇಲ್ಲಿ ಹೆಚ್ಚು ಮೆಟಫರ್ ಗಳಿಂದ ಕಥನವನ್ನು ಕಟ್ಟಿಕೊಳ್ಳುವಾಗ ಕೆಲವು ಕಡೆ ವಿಪರೀತವಾದ ವಿವರಣೆಗಳು ಓದುಗನನ್ನು ಸುಸ್ತು ಮಾಡುತ್ತವೆ. ಇದನ್ನು ಓದುವಾಗ ಕೊಡುವ ಚಲನಚಿತ್ರದ ಮಾದರಿಯ ಅನುಭವವನ್ನು ಮರೆಯಲಾಗದು.   

ಈ ಎರಡು ಪಾತ್ರಗಳ ಮೂಲಕ ಧಾರ್ಮಿಕ ಮೂಲಭೂತವಾದ ಹೇಗೆ ಬಹುತ್ವದ ಸಮಾಜದೊಳಗೆ ವಿದ್ಯಾವಂತ ಜನರಿಂದ ಹರಡಿಕೊಳ್ಳುತ್ತಿದೆ ಎಂಬುದನ್ನುಸಲೀಸಾಗಿ ನಿರೂಪಿಸಲಾಗಿದೆ. MBA ಪದವಿಧರನಾದ ಚೋಪ್ರ, ಮೆಕ್ಸಿಕೋ ಗೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಬಂದು ಅಂಸ್ಟರ್ ಡ್ಯಾಮ್ ಅದ್ಬುತ, ಅಗೋಚರ ಶಕ್ತಿಗಳ ಜೊತೆ ಮಾತುಕತೆ, ದನದ ಮಾಂಸ ಆಹಾರದ ಬಗ್ಗೆ ಕಿಡಿಕಾರುವುದು, ಸನಾತನ-ಯೋಗ-ಧರ್ಮ ಸಂರಕ್ಷಣೆ, ಅದಕ್ಕಾಗಿ ಸೇನೆ ಕಟ್ಟುತ್ತಿನಿ ಎನ್ನುವುದು, ಕಡೆಗೆ ತನ್ನ ಸಹಪ್ರಯಾಣಿಕನಾದ ಕಥಾ ನಿರೂಪಕನ ಜಾತಿ- ಧರ್ಮ ಯಾವುದು ಅಂತ ಹುಡುಕುವುದು – ಇದೆಲ್ಲವೂ ವರ್ತಮಾನದಲ್ಲಿ ನಮ್ಮ ಮುಂದೆ ನಡೆಯುತ್ತಿರುವ ಸಂಗತಿಗಳು. ಸರಕಾರದ ಮಂತ್ರಿಗಳು, ಅವರ ವಕ್ತಾರರು ಯಾವುದೇ ಅಂಜಿಕೆ, ಅಳುಕು ಇಲ್ಲದೆ ಘಂಟಾಘೋಷವಾಗಿ ಒಂದು ಸಂಸ್ಕೃತಿ, ಒಂದು ಧರ್ಮ, ಒಂದು ಭಾಷೆ ಹೇರುತ್ತಿರುವ ಹೊತ್ತಿನಲ್ಲಿ ಈ ಕಾದಂಬರಿಯು ತೋರಿಸುತ್ತಿರುವ ಚಿತ್ರ ದೊಡ್ಡ ಕ್ಯಾನ್ವಸಿನದು. .

ನಡುವೆ ಏರ್ಪೋರ್ಟ್ ಲಾಂಜ್ ನಲ್ಲಿರುವ ದೊಡ್ಡ ಭೂ-ಗೋಲದ ಆಕಾರದ ಆಟಿಕೆಯ ಪ್ರಸ್ತಾಪ ಬಹು ಆಸಕ್ತಿಕರವಾಗಿದೆ.  ಅಲ್ಲಿಗೆ ಬಂದು ಆಟವಾಡುವ ಅಮೇರಿಕಾ ಮತ್ತು ರಷ್ಯ ಮಕ್ಕಳು, ತಮ್ಮ ಪಾಡಿಗೆ ತಾವಿರುವ ತಂದೆತಾಯಿ, ಅವರ ಬಗ್ಗೆ ಚೋಪ್ರ ಮತ್ತು ನಿರೂಪಕನ ಅಭಿಮತ.. ಇತ್ಯಾದಿಗಳ ನಡುವೆ ವಿಶ್ವವನ್ನು ಅಮೇರಿಕಾ, ರಷ್ಯಾ ಹಾಗು ಜರ್ಮನ್ ಹೇಗೆ ಕಬಳಿಸಿ ಹಾಳುಮಾಡಲು ಪದೇ ಪದೇ ಯತ್ನಿಸುತ್ತಿವೆ ಎಂಬುದು ಸೂಚ್ಯವಾಗಿ ತಿಳಿಸಲಾಗಿದೆ. ಜೋತೆಗೆ  ಅದೇ ಲಾಂಜ್ ನಲ್ಲಿ  ಭಾರತವನ್ನು ಪ್ರತಿನಿಧಿಸುವ ಎರಡು ಪಾತ್ರಗಳು ಕೂಡ ಉಪಸ್ಥಿತರಿದ್ದುವು.. ಪ್ರಸಕ್ತ ಭಾರತದ ಕೋಲಾಹಲವನ್ನು ತಣ್ಣಗೆ ನಿರೂಪಿಸುತ್ತ!   


ಕಾದಂಬರಿಯ ಕಡೆಯ ವರೆಗೂ ಚೋಪ್ರನೊಂದಿಗೆ ಏಗುವ ಕಥಾ ನಿರೂಪಕ ಇನ್ನೇನೋ ದೆಹಲಿಗೆ ಮರಳುವ ಹೊತ್ತಿನಲ್ಲಿ ಚೋಪ್ರ ತಾನೇ ‘ನಿನ್ನ ರಕ್ಷಣೆ ಮಾಡಿದನೆಂದು, ನಿನ್ನ ಜಾತಿ ಯಾವುದು ಎಂದು ನನಗೆ ಗೊತ್ತಿದೆ. ಅದನ್ನು ಮೆಕ್ಸಿಕೋ ಬಂದಾಗಲೇ ನನಗೆ ಪರಿಚಯವಿರುವ ತಿರುಪತಿಯ ಗೆಳೆಯನೋಬ್ಬನಿಂದ ವಿಚಾರ ಮಾಡಿದೆನೆಂದು’ ಹೇಳಿದಾಗ ಕಥಾ ನಿರೂಪಕ ದಿಗ್ಭ್ರಾಂತ ನಾಗುತ್ತಾನೆ. ಇದುವರೆಗೂ ಇದ್ದ ಕಥೆಯ ರೋಚಕತೆ ಬೇರೆಗೆಡೆಗೆ ತಿರುಗುತ್ತದೆ. ಇಂತಹ ಅರೆಹುಚ್ಚನೊಂದಿಗೆ ಅದೆಲ್ಲವನ್ನು ವಿವರಿಸುವ ಅಗತ್ಯವಿಲ್ಲವೆಂದು ಕಥಾ ನಿರೂಪಕ ಮೌನಕ್ಕೆ ಜಾರುತ್ತಾನೆ. ಮತ್ತೆ ಚೋಪ್ರ ‘ಅಂಸ್ಟರ್ ಡ್ಯಾಮ್ ಅದ್ಬುತ.. ಅಂಸ್ಟರ್ ಡ್ಯಾಮ್ ಅದ್ಬುತ’ ಎಂದು ಕೂಗಿಕೊಳ್ಳುತ್ತಾನೆ. ಆದರೆ ಕಥಾ ನಿರೂಪಕನ ಮೌನ ಎನ್ನುವುದು ವರ್ತಮಾನದಲ್ಲಿ ಅದ್ಬುತದ ಭ್ರಮೆ ಹುಟ್ಟಿಸುತ್ತಿರುವ ಸರಕಾರ / ನಾಯಕರ ಮುಂದಿನ ಸಾಮಾನ್ಯ ನಾಗರಿಕನ ಮೌನ ಕೂಡ ಆಗಿದೆ ಎಂಬುದನ್ನು ತಿಳಿಯಲು ನಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ.  
               
ತನ್ನ ವರ್ತಮಾನಕ್ಕೆ ಪ್ರತಿಸ್ಪಂದಿಸದ ಒಬ್ಬ ಸೃಜನಶೀಲ ಬರಹಗಾರ ಇರಲಾರ. ಅದರಲ್ಲೂ ಅರಾಜಕತೆ ಮತ್ತು ಅಸಮಾನತೆಯು ಹೆಚ್ಚಾದಂತೆಲ್ಲಾ ಆ ಬಗೆಗಿನ ತಲ್ಲಣಗಳು ಸೃಜನಶೀಲ ಕೃತಿಗಳ ಮೇಲೆ ಮೂಲಕ ಹೊರಬೀಳುವುದು ಸಾಮಾನ್ಯ ಸಂಗತಿ. ಆದರೆ ವರ್ತಮಾನದ ಭಾರತದಲ್ಲಿ ಅಂತಹ ಸೃಜನಶೀಲ ಚಟುವಟಿಕೆಗಳಿಗೆ ಪ್ರತಿಗ್ರಾಮಿ ಸಂಸ್ಕೃತಿಯಿಂದ ಬೆದರಿಕೆಗಳು ಶುರುವಾಗಿವೆ ಮಾತ್ರವಲ್ಲ ಕೌರ್ಯ ಕೊಲ್ಲುವವರೆಗೆ ಬಂದು ನಿಂತಿದೆ. ಇಂತಹ ಹೊತ್ತಿನಲ್ಲಿ ಯಾವ ಪಕ್ಷ, ಸರಕಾರ ಇತ್ಯಾದಿಗಳನ್ನು ತೋರಿಸದೆ ಎರಡು ಪಾತ್ರಗಳ ಮೂಲಕ ಭಾರತ ದರ್ಶನ ಮಾಡಿಸಿದ ಮಧುರಂತಕಂ ನರೇಂದ್ರ ಹಾಗು ಕುಂವೀ ಅವರಿಗೆ ಅಭಿನಂದಿಸಬೇಕು. ಈ ಕಾದಂಬರಿಯೊಳಗೆ ಹರಿದಿರುವ ಪ್ರಜ್ಞಾಪ್ರವಾಹ, ರೂಪಕಗಳ ಪ್ರವಾಹದಲ್ಲಿ ಅದರ ಜನಪ್ರಿಯ ಮಾದರಿಯ ನಿರೂಪಣೆ ಕೊಚ್ಚಿ ಹೋಗಿದೆ. ಹಾಗಾಗಿ ವಿವರಪೂರ್ಣವಾದ ಓದಿಗೆ ಸಾವಧಾನ-ಸಾವಕಾಶ ಎರಡೂ ಬೇಕು.

No comments:

Post a Comment