Showing posts with label ದೇಶಭಕ್ತ ಸೂಳೆಮಗನ ಗದ್ಯಗೀತೆ. Show all posts
Showing posts with label ದೇಶಭಕ್ತ ಸೂಳೆಮಗನ ಗದ್ಯಗೀತೆ. Show all posts

Thursday, April 16, 2015

ದೇಶಭಕ್ತ ಸೂಳೆಮಗನ ಗದ್ಯಗೀತೆ ~ ಪಿ. ಲಂಕೇಶ್




ಸೂಳೆಮಕ್ಕಳೆ, ಥೂ! ಖದ್ದರಿನಲ್ಲಿ, ರೇಷ್ಮೆಯಲ್ಲಿ, ಹಡಬಿಟ್ಟಿ ತಲೆಯಲ್ಲಿ
ಎಕ್ಸಿಸ್ಟೆನ್ಷಿಯಲಿಸಂ, ಲಾರೆನ್ಸ್, ಗಟಾರ, ವಾಲ್ಮೀಕಿ, ಅಲೆಕ್ಸಾಂಡರ್, ಗೀತೆ
ಚಿಕ್ಕಪೇಟೆಯ ಇಕ್ಕಟ್ಟಿನಲ್ಲಿ, ಅಮ್ಮನ ಸ್ವಂತ ಸಾರ್ವಜನಿಕ ಕೋಣೆಯಲ್ಲಿ
ಚರ್ಚೆ, ಸಂಧಾನ, ನಿಧಾನ, ತುಮುಲ ಇತ್ಯಾದಿಯಲ್ಲಿ
ಯಾರು ಕಾಣದ ನಿಮ್ಮ ಕೊಲೆಮನೆಯಲ್ಲಿ 
ಕಂಡುಬಿಟ್ಟಾರೆಂಬ ಭಯದಲ್ಲಿ
ಕಂಡಿದ್ದಾರೆ ಬಿಡು ಎಂಬ ನಿರಾಳದಲ್ಲಿ
ಲಂಗೋಟಿ ಬಿಚ್ಚಿಕೊಂಡು ಹೊಲಿಸುತ್ತಾ ಹೋಗುವುದ,

ಥೂ,  ಸೂಳೆಮಕ್ಕಳೆ! ಮುಖ ಮುಚ್ಚಿ ಓಡಾಡುವ ಸುಖದ
ಅಮ್ಮ ಕೂತಲ್ಲಿ ಉದುರಿಸಿದ ನಿಮ್ಮ ಕೋಟಿಗಳ ಲೆಕ್ಕ ಹಾಕಿ
ಮಕ್ಕಳಿವರೇನಮ್ಮ? ಎಂಥ ಒದರಿ ಕಬ್ಬಿಗರ ಕುರುವಾಗಿ
ಆಹಾ! ಆರ್ಯಪುತ್ರ! ಎಂಥ ಸಂಸ್ಕೃತಿ, ಎಂಥ ಸ್ಥಿತಿ, ಅಂತ ಅಡಿಗ-
ಡಿಗೆ ಸ್ಟಂಟ್ ಹಾಕಿ ನಿಲ್ಲಬೇಕಿನ್ನಿಸುತ್ತೆ – ಆದರೆ,

ನಿಮ್ಮ ಅಮ್ಮನ್ನ ಹೊಗಳಿ ಪದ್ಮಭೂಷಣನಾಗಿ
ನರಸತ್ತು, ಪುಷ್ಪಾಲಂಕೃತನಾಗಿ, ಪೂರ್ಣದೃಷ್ಟಿ ಬೊಚ್ಚುಬಾಯಿ ಶುಂಠ
ಕೃತಾರ್ಥ ನರೆತ ಖಾಲಿತಲೆ ಆಗಬೇಕೆನ್ನಿಸುತ್ತೆ – ಆದರೆ,
ಕೆಚ್ಚಲು ತುಂಬಿ, ಚೌಕಾಶಿಯಲ್ಲಿ ಕೈ ಹಿಡಿದು ಸೀರೆ ಬಿಚ್ಚದೆ ಸತ್ತು
ಸತ್ತಿಲ್ಲವೆಂದು ಜೋಗ್, ಜೋಕ್, ಪಿಕ್ ನಿಕ್ , ಮಕ್ಕಳು, ಮರಿ ;
ಇವಳ ಮತ್ತು ತೊಡೆಗಳ ಮತ್ತು ಕನಸುಗಳ ಮತ್ತು ಸ್ತನಗಳ ಮತ್ತು
ದಕ್ಷಿಣೆಯ ಮತ್ತು ವರನ ಮತ್ತು ಮದುವೆಯ ಮತ್ತು
ಮತ್ತು ಮತ್ತು ಮತ್ತು

ಸೂಳೆಮಕ್ಕಳೆ ಸಾಂಪ್ರದಾಯಿಕ ಲಗ್ನ ಬಲ್ಲೆಯಾ ?
ಹೆದರಿಕೆಯ ಜೊತೆಗೆ ಉಕ್ಕುವ ಉತ್ಸಾಹ ಬಲ್ಲೆಯಾ ?
ಗೆದ್ದೆವು ಎನ್ನುವಷ್ಟರಲ್ಲಿ ತೊಡೆಯಲ್ಲಿ ಕುಣಿವ ಗುಟ್ಟ ಬಲ್ಲೆಯಾ ?
ಗುಟ್ಟನ್ನು ಉಳ್ಳವರ ಸೊಕ್ಕ ಬಲ್ಲೆಯಾ ? ಆದರೂ,

ಆಹಾ! ದೇಶ ಬಾಂಧವ, ನಿನ್ನ ಅಪ್ಪಿ ಕೊಂಡಾಡಲೆ!
ನಿನ್ನ ಕೂದಲು ಬಾಚಿ ಹೂಮಾಲೆ ಹಾಕಲೆ!
ವೀರಮಾತೆಯ ಆರ್ಯಸಂಸ್ಕೃತಿಯ ಕುಸುಮ! ಅನ್ನಲೆ!
ತಿಲಕವಿಟ್ಟು ಸಂತೋಷಪಡಲೇ!

ಸೂಳೆಮಗನೆ, ನಿನ್ನ ಕರೆದಾಗ ನನ್ನನ್ನೇ ಕರೆದಂತಾಗುತ್ತೆ.
ನೀನೆಂದೊಡೆ ನಿನ್ನ ಅಮ್ಮನ ನೆನಪಾಗುತ್ತೆ .
ನನ್ನ ಅಮ್ಮನ ನೆನಪಾಗುತ್ತೆ
ಸುಳ್ಳು ಶುರುವಾದದೊಡನೆ  ಯಾರೋ ಗೊಳ್ಳನೆ ನಕ್ಕು ಬೆವೆಯುತ್ತೆ.

ಈ ಗಂಟಿಗೇನನ್ನುವುದು?

ಕೈಯಲ್ಲಿ ಕೈಯಿಟ್ಟು ನಡೆಯೋಣವೆ?
ಸಂದೇಹದಿಂದ ಕಂಡವರ ಜಾತಕ ಓದೋಣವೆ?
ಜೇಬಲ್ಲಿ ಕೈಯಿಟ್ಟು ಸುಮ್ಮನೆ ಕೂಡೋಣವೆ?
ಮೀಸೆ ಕತ್ತರಿಸುತ್ತ ಅಥವಾ ಪದ್ಮಶ್ರೀ ಆಗುತ್ತ
ಅಥವಾ ಗೀತೆ ಓದುತ್ತ ಅಥವ ರಸ್ತೆಗಳ ಗುಡಿಸುತ್ತ
ಅಥವಾ

ಅನ್ನುತ್ತಿದ್ದಂತೆಯೇ ನಾಲಗೆ ನರೆಯುತ್ತೆ.
ಗಲ್ಲದ ಹಿಂದೆ ಕೂದಲು ನರೆಯುತ್ತೆ.
ಪದ್ಮಭೂಷಣನ, ವೀರಯೋಧನ, ಪ್ರಧಾನಿಯ, ಹಜಾಮನ
ಅವಳು, ತೊಡೆ, ಕೂದಲು ಎಲ್ಲ ನರೆಯುತ್ತೆ ;
ಚೆಡ್ಡಿಯ ಕೂದಲು ನರೆಯುತ್ತೆ.
ಎಲಿಸಬೆತ್ ಮತ್ತು ಟೇಲರ್ ಮತ್ತು ಮಾಲೀಕ, ಮಾಣಿ
ದೇವರು, ದೆವ್ವ, ಕೋಟು, ಲಂಗ, ಸಮವಸ್ತ್ರದ ಕೂದಲು ನರೆಯುತ್ತೆ.
ಸತ್ಯ, ಸುಳ್ಳು, ಅಕ್ಕರೆ, ಸಂಭ್ರಮ, ಗುಟ್ಟು
ಎಲ್ಲ ನರೆಯುತ್ತೆ.

ಅದಕ್ಕೆ ಹೇಳುತ್ತೇನೆ , ಅನುಜ : ನೀನಿನ್ನು ನಿನ್ನ ಬ್ಯಾಗ್ ಹಿಡಿದು ನಗುತ್ತ
ಕುಶಲ ವಿಚಾರಿಸುತ್ತ ಸಭ್ಯತೆ ಸೂಸುತ್ತ

ಇತ್ತ ಬಂದರೆ ನಿನ್ನ ಹಿಡಿದು ತೋರುತ್ತೇನೆ ;
ಪಾಪಚಿತ್ತದ ನರೆಯ, ನರೆತ ಗೀತೆ, ಗಟಾರವ,
ವರ್ಗವಿಲ್ಲದೆ, ಮತ್ತೆ ಪ್ರಾಕ್ಸಿಯಿಲ್ಲದೆ, ಮತ್ತೆ ಕರ್ಮದ ಗಾಲಿಯಿಲ್ಲದೆ

ಎಲ್ಲ ಬೆಳ್ಳಗಾದ, ಬಿರುಕಾಗಿ ಬೂದಿಯಾದ,  ಗತಿಯ.

ಅಥವಾ ಬೆಳಗಾಗುವ, ಗಿಡಗಂಟೆಗಳ ಕೊರಳಾಗುವ,
ಮತ್ತೆ ಕತ್ತಲಾಗುವ, ಹಾಗೇ ಮುಗಿದು ಮೊಗ್ಗೆಯಾಗುವ
ಸ್ಥಿತಿಯ.   





 ~ ಪಿ. ಲಂಕೇಶ್