Sunday, May 11, 2014

ಏಕಾಂಗಿಯ ವೈನ್

ಆಕಾಶವೇ ಕರಗಿ ತೊಟ್ಟಿಕ್ಕಿದಂತೆ
ಸುರಿವ ಮಳೆಗೆ
ಎದೆಬಾಗಿಲ ತೆರೆದುಕೊಂಡು
ಕಾಯುತ್ತದೆ ಹುಡುಗಿ
ನೆನೆದು ಒದ್ದೆಯಾಗಲು
ಅವ ಹಿಡಿವ ಕೊಡೆಗೆ ಜೊತೆಯಾಗಲು

ಒಂದಿಷ್ಟು ಸುಡುಕಾಫಿ
ಬೆಚ್ಚಗೆಯ ಬಿಸಿತೋಳ ಅಪ್ಪುಗೆಯ
ಅವನ ಕವಿತೆಯ ಜೊತೆಗೆ
ಮೈಯೊಳಗೊಂದು ಬಿಸಿಯ
ಹಸಿಕೆಂಡ ಬೀಳುತ್ತದೆ.

ಸಮಶೀತೋಷ್ಣದ ಏಕಾಂಗಿಯ ವೈನ್
ಯಾರಿಗೆ ಬೇಡ ಹೇಳಿ!?

ಬಿಡಿ ಹೂ:12

ಸಿಡಿಲ ಉಂಡೆಯ ಮಾಡಿ
ಮೋಡಗಳ ಮೋರೆಗೆ ಎಸೆದು
ಮಳೆ ಕರೆಯುತ್ತಾಳೆ
ಇವಳು ಆಕಾಶಕ್ಕೆ
ಕಾಲು ಇಳಿಬಿಟ್ಟು ಘಲ್ಲೆನಿಸುವ
ಗುಡುಗಿನ ಗೆಜ್ಜೆನಾದಕೆ
ಎದೆ ಡವಗುಡುತ್ತದೆ.. ಮಳೆಗಾಲವೊಂದು
ಪ್ರಣಯರುದ್ರನರ್ತನ!

ಬಿಡಿ ಹೂ: 11

ಕವಿಯೊಬ್ಬ
ಮಳೆಗೆ ಬಿಸಿ ಅಪ್ಪುಗೆಯ
ಕವಿತೆ ಬರೆದ.
ಅವ್ವ ಸೋರುವ ಸೂರಿನ ಕೆಳಗೆ
ಪಾತ್ರೆಗಳ ಹಿಡಿದು
ರಾತ್ರಿಯೆಲ್ಲ ಕೂತಳು.

ಬಳ್ಳಿಗಳು ಮೇಲೆ ಹಬ್ಬಿಕೊಂಡುವು
ಬೇರು ಕೆಳಗಿಳಿಯುತ್ತಲೇ ಇವೆ.

ಬಿಡಿ ಹೂ: 10

ಸೋರುವ ಸೂರು
ತೊಟ್ಟಿಕ್ಕುವ ಹನಿ
ಥಂಡಿಯ ನಡುಗುವ ಮೈಯಲ್ಲಿ
ಬಡವಿಯೊಬ್ಬಳ ಮಳೆಗಾಲದ
ಹಾಡು
ಕೇಳಗೊಡುವುದಿಲ್ಲ
ಎಷ್ಟು ತಾತ್ಸಾರ
ಈ ಮಳೆ ಗಾಳಿಗೂ
ಬಡವರೆಂದರೆ !!

ಕೋವಿ ಮತ್ತು ಕೊಳಲು ~ 1

ಕೆಂಪು ಮೆತ್ತಿದ ಈ ಕೈಗಳ
ಯಾವ ನೀರಿನಲ್ಲಿ ತೊಳೆದರೂ
ಹೋಗುತ್ತಿಲ್ಲ
ಪಾಪವೆಂಬ ಕೆಮಿಕಲ್ಲು ಅಷ್ಟು
ಗಾಢವಾಗಿಯೇನು? ಇನ್ನೂ ಈ ಲೋಕದಲ್ಲಿ!

ನೆನಪಿದೆ ಈ ನದಿಯುದ್ದ
ಹಸಿರ ರಾಶಿಯಲಿ
ಕೊಪ್ಪರಿಗೆಯ ಓಲೆ ಊದುವ ಕೊಳವೆಯಂತಾ
ಬೆಳೆದು ನಿಂತ ಬಿದಿರು ಮೆಳೆ
ನೆರೆದ ಹೆಣ್ಣುಗಳು
ಆ ಸೋಪಾನ ಕಟ್ಟೆಯ ಮೇಲೆ ಸೋಪು ತಿಕ್ಕಿ
ಉಕ್ಕುವ ನೊರೆಯಲ್ಲಿ ಆಡುತ್ತಾ
ಕೊಳಲ ಗಾನಕೆ ತಲೆದೂಗಿ
ಬಳಿ ಬಂದವರೆಷ್ಟೋ !
ಎದೆಯ ಪೊದೆಗೂದಲ ಎಳೆದು ಜುಮ್ಮೆನಿಸಿ
ಇಳಿದುಹೋದವರು ಯಾರ್ಯಾರೋ ?!

ಹೌದು ಹೌದು ಈ ನದಿ ಒಡಲು ಬತ್ತಿದ
ರಾತ್ರಿಯೇ
ನಾನು ಓಡಿದ್ದು
ಕೆಂಪು ಬಾವುಟ, ಕುಡುಗೋಲು ಹಿಡಿದು
ಎಲ್ಲೂ ನಿಲ್ಲದೆ ಓಡಿದ್ದು
ಊರು ಬಿಟ್ಟು ನಾಡು ದಾಟಿ
ದಂಡಕಾರಣ್ಯ ಸೇರಿದುದು
ಕೊಳಲ ತೂತುಗಳ ಮುಚ್ಚಿ ಗುಂಡುಗಳ ತುಂಬಿ
ಹಾರಿಸಿ ಕಂಡೆಲ್ಲೆಲ್ಲಾ ಕ್ರಾಂತಿಕಾರಿ ಎನಿಸಿಕೊಂಡಿದ್ದು
ಸಿರಿಯ ಎದೆಯ ಗುಂಡು ಬಡವನ ಹೊಟ್ಟೆ ಹರಿದಿದ್ದು

ಹರಿದದ್ದು ಬೊಗಸೆಯಲಿ ಮೊಗೆದು ನೋಡಿದರೆ
ರಕ್ಕಸನೊಬ್ಬ ಕಾಣುತ್ತಾನೆ ಅಲ್ಲಿ
ಥೇಟ್ ನನ್ನಂತೆಯೇ ...
ನಾನೆಯೇ
ಕೋವಿ ಹೊಡೆದ ಸದ್ದು
ಅದೋ ಬಿತ್ತು ಬಿದಿರು ಬೊಂಬು

ಮತ್ತೆ ಧಾರಾಳ ಬೀಳುತ್ತಿದೆ ಕಣ್ಣೀರು
ಕೆಂಪು ಜಾರುತ್ತಿದೆ ಅಷ್ಟಷ್ಟೇ.... ~

ಕೋವಿ ಮತ್ತು ಕೊಳಲು ~ 2

ಉಸಿರ ಕೊಳವೆಯ ಒಳಗೊಂದು
ಸಣ್ಣ ಸೂಜಿಗಾತ್ರದ
ತೂತು ಬಿದ್ದು
ಬೆಳಕಿರದ ಬೆಂಕಿಯ ರವ
ಎದೆಯ ಗೂಡಿಗೆ ತಾಗಿರಲು
ರಾತ್ರಿಯ ಕನಸುಗಳು ರಚ್ಚೆ ಹಿಡಿದು
ಕೊಳಲನೂದಿಸಿ
ಕಣ್ಣುಗಳ ತೂಗುಯ್ಯಾಲೆಯಲಿ
ನಿದ್ದೆಗೆ ಬಿದ್ದುವು.

ಕರ್ನಲನು ಹಿಡಿದ ಕೋವಿಗೆ ಬೆಚ್ಚಿದಂತೆ
ಧೋ ಸುರಿವ ಮಳೆಯಲ್ಲಿ
ಮತ್ತೆ ಮತ್ತೆ ಬೆಂಕಿಯ ಅರಸುತ್ತಾ
ಎದೆಗೆ ಕೈ ಇಡಲು
ಹಸಿಹಸಿ ಕೆಂಡ ಸಿಕ್ಕು
ನಿದ್ದೆಯ ಒದ್ದೆ ಕಣ್ಣುಗಳು
ಕತ್ತಲಲಿ ತಡವರಿಸುತ್ತಾ
ಮಡಿಲ ತುಂಬಾ ಕೆಂಡವ ತುಂಬಿಕೊಳ್ಳಲು

ಉಸಿರೂ ಕಿಡಿಯೂ
ಸೇರಿ ಹೊತ್ತಿ ಉರಿಯುತ್ತಿದೆ
ನೋಡಿದೀರಾ ..
ಆಕಾಶದ ತುಂಬೆಲ್ಲಾ
ಮಡಿಲ ಕೆಂಡ ಉರಿಯುತ್ತಿದೆ ನೋಡೀದಿರ?!

Saturday, March 8, 2014

ಪೀರಿಯಡ್ಸ್ ಕವಿತೆಗಳು ~3

ಪೀರಿಯಡ್ಸ್ ಕವಿತೆಗಳು
**************

ಮೂರೂ ದಿನ ಇವಳೇ ದೇವರು!
ಪಾದ್ಯ..ಅರ್ಘ್ಯ..ಆಚಮನ.. ಅಭ್ಯಂಜನ
ನೈವೇದ್ಯ ಷೋಡಶೋಪಚಾರಗಳು
ಇಷ್ಟಲ್ಲದೇ ಕೊನೆಗೆ
ಏಕಾಂತ ಸೇವೆ ತಪ್ಪಿಸುವುದಿಲ್ಲ !!

***

ಹಾಸಿಗೆಯಂತೆ ,
ಚಾಪೆಯಲ್ಲೂ ನನಗೆ ಪಾಲಿದೆ...
ನನ್ನೆದೆಯ ಮೇಲೆ ತಲೆಯಿರಿಸದ ಹೊರತು
ನಿದ್ದೆ ಹತ್ತುವುದಿಲ್ಲ ಅವಳಿಗೆ!

***

ನಾನು ಒಳ್ಳೆ ಬಾಣಸಿಗ.
ಅದರೂ ಅವಳ ಆದೇಶಗಳು
ಅಡುಗೆ ಮನೆಯತ್ತ ತೋರುತ್ತಲೇ ಇರುತ್ತವೆ,
ತಳ ಹಿಡೀತು, ಉಕ್ಕೀತು .. ಉಪ್ಪು ನಾಲ್ಕೆ ಕಾಳು..
ಮುಗಿಸಿ ಉಣ್ಣುವಾಗ ನಳಪಾಕ.

****

ಬೆಚ್ಚಗೆ ಕೈ ಹಿಡಿದಪ್ಪಿ 'ಕವಿತೆ ಹೇಳೋ' ಎಂದು
ಹೊಗಳಿಸಿಕೊಳ್ಳುತಾ ಮೂರು ರಾತ್ರಿಗಳ ,
ಮೂರು ಗುಲಗಂಜಿ ಗಳಿಗೆ ಮಾಡುತ್ತಾಳೆ,
ಮಾಟಗಾತಿ!

****

ರಾತ್ರಿಯ ಸಮುದ್ರಸ್ನಾನಕ್ಕೆ
ಮತ್ತೆ ಮಡಿಯಾಗುತ್ತಿದ್ದೇನೆ..
ಮೂರು ದಿನಗಳ ನಂತರ!