Sunday, July 7, 2013

ಇನ್ನೂ ಎಚ್ಚರಗೊಳ್ಳದ ನಾನು!

ನೆನ್ನೆ ಮಹಾದೇವಿಯಕ್ಕ ಕಳುಹಿದ ಮುಕ್ತಾಯಿ ಕನಸಿನಲಿ ಕಂಡು ಇಂತೆಂದಳು:

'ಮರುಳೇ ಇನ್ನೂ ಏನು ದಕ್ಕೀತೆಂದು
ಹುಡುಕುತ್ತಲೇ ಇದ್ದಿ.. ಎನ್ನ ಅಜಗಣ್ಣನು
ನಿನ್ನೊಳಗೆ ಮನೆಯ ಮಾಡಿ ನಿಂತು
ವರುಷಗಳು ಸಂದೋ ..
ನೀನು ಇನ್ನೂ ಸ್ಥಾವರಕ್ಕಂಟಿ
ಬೆಳೆವ ಬಳ್ಳಿಯಲ್ಲ..
ಸಿಡಿವ ಸಾಸಿವೆ ಬೀಜ
ಊರು ತುಂಬಬೇಕು
ಜನ ತುಂಬಬೇಕು
ಮನ ತುಂಬಬೇಕು
ಜಂಗಮನಾಗಬೇಕು ಅರಿವಿಗೆ
ಜಂಗಮನಾಗಬೇಕು ಬದುಕಿಗೆ
ಹೊರಡು.. ಬಿಟ್ಟು ಹೊರಡು
ಹಣವು ನಿನ್ನದಲ್ಲ
ಪ್ರೇಮವು ನಿನ್ನದಲ್ಲ
ಸತ್ಯ ಒಂದೇ ನಿನ್ನದು
ಅದರೊಡನೆ ಹೊರಡು...
ನೀರಬೊಂಬೆಗೆ ನಿರಾಳದ ಗಜ್ಜೆ
ಕಟ್ಟಿ ಅಜಗಣ್ಣನು ಕರೆದಿದ್ದಾನೆ
ಅಗ್ನಿಯ ಸಿಂಹಾಸನ ನಿನ್ನದು
ಎನ್ನ ಕರ್ಪೂರದ ಪುತ್ಥಳಿಯೇ
ಪೋಗು
ಅಕ್ಕಯ್ಯ ಶ್ರೀಶೈಲದ ದಾರಿಯಲ್ಲಿ
ಪ್ರಭುದೇವರ ಕಲ್ಯಾಣಕ್ಕೆ ಕರೆದೊಯ್ಯಲು
ಕಾದಿದ್ದಾಳೆ. ಶಬ್ದ ಸಂದಣಿಯ ಮಾತು ಬೇಡ.
ನಾನು ಮತ್ತೆ ಬರುವಳಲ್ಲ, ಮರುಳೇ
ಅನುಭವ ಮಂಟಪಕೆ ಅನುವಾಗು
ಶಬುದಮುಗುದನೆ...

ನಾನು ಮುಕ್ತಾಯಿಯ ಮಡಿಲಲಿ ಕೂಸಾಗಿ

'ಅವ್ವಾ.. ಎಲ್ಲವೂ ಏಕವಾಗಿರಲು
ಇಲ್ಲೇನು... ಅಲ್ಲೇನು...??
ಸ್ಥಾಯಿಯೋ ಚಲನವೋ
ಸತ್ಯ ತೋರಿದೆಡೆ ನೆಲೆ
ಗುಟುಕು ನೀರು, ಹಿಡಿ ಅನ್ನ
ಮತ್ತೆ ಪಯಣ...
ಬರುವೆ ಹೇಳು ಅಕ್ಕಯ್ಯಗೆ
ಚೆನ್ನಮಲ್ಲನ ಶರಣೆಗೆ
ಕನಸಿನ ಕಲ್ಯಾಣದ ಹಾದಿ
ತುಂಬಿ ಬೆಳಗುತ್ತಿದೆ ಎದುರಿಗೆ...

*****
ಹಾಗೆಯೇ ಮಬ್ಬ ಮರೆಯೊಂದು
ಬೀಸಿ ಅಮಲೊಂದು ಆವರಿಸಿ
ಹಗಲು ಹರಿದು ಇರುಳು ಸರಿದು
ಮನೆಯಂಗಳದ ಹೆಜ್ಜೆಗುರುತು
ಇನ್ನೂ ಎಚ್ಚರಗೊಳ್ಳದ ನಾನು!

>>> RP 12.06.2013

No comments:

Post a Comment