Sunday, July 7, 2013

ಇನ್ನೂ ಎಚ್ಚರಗೊಳ್ಳದ ನಾನು!

ನೆನ್ನೆ ಮಹಾದೇವಿಯಕ್ಕ ಕಳುಹಿದ ಮುಕ್ತಾಯಿ ಕನಸಿನಲಿ ಕಂಡು ಇಂತೆಂದಳು:

'ಮರುಳೇ ಇನ್ನೂ ಏನು ದಕ್ಕೀತೆಂದು
ಹುಡುಕುತ್ತಲೇ ಇದ್ದಿ.. ಎನ್ನ ಅಜಗಣ್ಣನು
ನಿನ್ನೊಳಗೆ ಮನೆಯ ಮಾಡಿ ನಿಂತು
ವರುಷಗಳು ಸಂದೋ ..
ನೀನು ಇನ್ನೂ ಸ್ಥಾವರಕ್ಕಂಟಿ
ಬೆಳೆವ ಬಳ್ಳಿಯಲ್ಲ..
ಸಿಡಿವ ಸಾಸಿವೆ ಬೀಜ
ಊರು ತುಂಬಬೇಕು
ಜನ ತುಂಬಬೇಕು
ಮನ ತುಂಬಬೇಕು
ಜಂಗಮನಾಗಬೇಕು ಅರಿವಿಗೆ
ಜಂಗಮನಾಗಬೇಕು ಬದುಕಿಗೆ
ಹೊರಡು.. ಬಿಟ್ಟು ಹೊರಡು
ಹಣವು ನಿನ್ನದಲ್ಲ
ಪ್ರೇಮವು ನಿನ್ನದಲ್ಲ
ಸತ್ಯ ಒಂದೇ ನಿನ್ನದು
ಅದರೊಡನೆ ಹೊರಡು...
ನೀರಬೊಂಬೆಗೆ ನಿರಾಳದ ಗಜ್ಜೆ
ಕಟ್ಟಿ ಅಜಗಣ್ಣನು ಕರೆದಿದ್ದಾನೆ
ಅಗ್ನಿಯ ಸಿಂಹಾಸನ ನಿನ್ನದು
ಎನ್ನ ಕರ್ಪೂರದ ಪುತ್ಥಳಿಯೇ
ಪೋಗು
ಅಕ್ಕಯ್ಯ ಶ್ರೀಶೈಲದ ದಾರಿಯಲ್ಲಿ
ಪ್ರಭುದೇವರ ಕಲ್ಯಾಣಕ್ಕೆ ಕರೆದೊಯ್ಯಲು
ಕಾದಿದ್ದಾಳೆ. ಶಬ್ದ ಸಂದಣಿಯ ಮಾತು ಬೇಡ.
ನಾನು ಮತ್ತೆ ಬರುವಳಲ್ಲ, ಮರುಳೇ
ಅನುಭವ ಮಂಟಪಕೆ ಅನುವಾಗು
ಶಬುದಮುಗುದನೆ...

ನಾನು ಮುಕ್ತಾಯಿಯ ಮಡಿಲಲಿ ಕೂಸಾಗಿ

'ಅವ್ವಾ.. ಎಲ್ಲವೂ ಏಕವಾಗಿರಲು
ಇಲ್ಲೇನು... ಅಲ್ಲೇನು...??
ಸ್ಥಾಯಿಯೋ ಚಲನವೋ
ಸತ್ಯ ತೋರಿದೆಡೆ ನೆಲೆ
ಗುಟುಕು ನೀರು, ಹಿಡಿ ಅನ್ನ
ಮತ್ತೆ ಪಯಣ...
ಬರುವೆ ಹೇಳು ಅಕ್ಕಯ್ಯಗೆ
ಚೆನ್ನಮಲ್ಲನ ಶರಣೆಗೆ
ಕನಸಿನ ಕಲ್ಯಾಣದ ಹಾದಿ
ತುಂಬಿ ಬೆಳಗುತ್ತಿದೆ ಎದುರಿಗೆ...

*****
ಹಾಗೆಯೇ ಮಬ್ಬ ಮರೆಯೊಂದು
ಬೀಸಿ ಅಮಲೊಂದು ಆವರಿಸಿ
ಹಗಲು ಹರಿದು ಇರುಳು ಸರಿದು
ಮನೆಯಂಗಳದ ಹೆಜ್ಜೆಗುರುತು
ಇನ್ನೂ ಎಚ್ಚರಗೊಳ್ಳದ ನಾನು!

>>> RP 12.06.2013

ಗೀತ ಗೋವಿಂದ

“My love, you have no cause
to curse me so: I ask, as this
fierce passion burns my mind,
to drink the nectar from your lotus mouth.”
- Gitagovinda, Jaydeva

ನನ್ನೊಲವೇ,
ನನ್ನ ಶಪಿಸುವ ಕಾರಣಗಳಾವೂ ನಿನ್ನಲ್ಲಿಲ್ಲ
ಹಾಗಾಗಿ ಕೇಳುವೆ, ಈ ಪರಿಯ ಉಗ್ರ
ಅನುರಕ್ತಿಯು ನನ್ನ ಮನಸ ದಹಿಸುತ್ತಿದೆ ,
ನಿನ್ನ ಕೆಂದಾವರೆಯ ತುಟಿಗಳಿಂದ
ಅಮೃತವ ಮೊಗೆದು ಕುಡಿಯಲು.
- ಗೀತ ಗೋವಿಂದ, ಜಯದೇವ

ಗಾಥಾ ಸಪ್ತಸತಿ

I have heard so much about you from others
And now at last I see you with my own eyes.
Please, my dear, say something
So that my ears, too, may drink nectar.

- Gāthā Saptaśatī

ಬೇಕಾದಷ್ಟು ಕೇಳ್ಪಟ್ಟೆ ನಿನ್ನ ಕುರಿತು
ಅದ್ಯಾರ್ಯಾರಿಂದಲೋ...
ನೋಡೀಗ ನನ್ನ ಕಣ್ಣುಗಳಿಂದಲೇ ನಿನ್ನನ್ನ
ತುಂಬಿಕೊಳ್ತಾ ಇದ್ದೀನಿ..
ಏನಾದರೂ ಮಾತನಾಡೆ ಮನದನ್ನೆ
ಈ ಕಿವಿಗಳಿಗೂ ಅಮೃತದ ಸವಿ ಸಿಗಲಿ.

- ಗಾಥಾ ಸಪ್ತಸತಿ

ಅನಾಮಿಕ ಲಕೋಟೆ

ಇನ್ನೂ ಬಟವಾಟೆಯಾಗದ ಪ್ರೇಮಪತ್ರವೊಂದು
ಎದೆಯೊಳಗೆ ಹಾಗೆ ಉಳಿದಿದೆ.
ನಿನ್ನೆಯ ತಡಕಾಟದಲಿ
ತಟ್ಟನೆ ಈ ಟಪಾಲು ಸಿಕ್ಕಿತು,
ಅರೆ! ಅವಳ ಹೆಸರೇ ಕಾಣುತ್ತಿಲ್ಲ
ಅಳಿಸಿಹೋಗಿದೆ!!
ತೆಗೆದು ನೋಡಲು ನನಗೆ
ಹಕ್ಕಿಲ್ಲ.
ಏನು ಬರೆದಿದ್ದೆನೋ ನೆನಪಿಲ್ಲ
ಅದರ ಹಂಗೂ ಇಲ್ಲ.
ಅದರ ಜಾಗಕೆ ಮರಳಿಸಿದೆ.

Wednesday, June 12, 2013

ಮತ್ತೊಂದು ಮಳೆಗಾಲ




ಮತ್ತೊಂದು ಮಳೆಗಾಲ!!
*****************

ಕಳೆದ ಮುಂಗಾರುಗಳೂ
ಉರುಳಿದ ಋತುಚಕ್ರಗಳೂ
ಮತ್ತೆ ಮತ್ತೆ
ನನ್ನ ಸಂಧಿಸಿವೆ
ಹರೆಯದ ಹದಿಬದೆತನವ
ಹೊತ್ತುಹೋಗುತ್ತಿವೆ.
ಇನ್ನೂ.. ಇನ್ನೂ
ನನ್ನ ಪ್ರೀತಿಯ ಪ್ರಸ್ತಾಪಕ್ಕೆ
ನಿನ್ನೊಲವಿನ ಮೊಹರಾಗಿಲ್ಲ!

ನಿನ್ನ ನೆತ್ತಿಯ ಘಮಲಿನ ಅಮಲಿಗೆ
ಕಾದಿದ್ದೇನೆ.. ಕಾಯಿಸಬೇಡ!
ಕೆಂದುಟಿ ತುಂಬಿರುವ
ಮದ್ಯಸಾರವ ಮೊಗೆಯಲು
ಹಪಹಪಿಸುತ್ತಿರುವ ನನ್ನ
ತುಟಿಗಳಿಗೆ ಒಂದೇ ಜ್ವರ..

ಬೀಸುವ ಮುಂಗಾರ ಮಳೆಗಾಳಿಗೆ
ಸಿಕ್ಕ ಈ ದೇಹದಲ್ಲಿ ದಡಕ್ಕನೆ
ನಿನ್ನ ಬೆಚ್ಚನೆಯ ನೆನಪು
ಅಷ್ಟೇ! ನಿಂತಲ್ಲೇ ಸ್ವಯಂ ಸಂಭೋಗ ಸಿದ್ದಿ!!

ಈ ಕಾಲಸ್ತ್ರೀ ಬಹುಚಂಚಲೆ
ಋತು ಪ್ರಜ್ಞೆಗಳರಿವಿಲ್ಲದೆ
ಎದೆಗೆ ಕೊಳದೊಳಗೆ ಕಲ್ಲಸೆದು
ಶೃಂಗಾರ ಅಲೆಯ ಎಳೆಗಳ
ಬಿತ್ತರಿಸುತ್ತಾಳೆ ಬಿನ್ನಾಣಗಿತ್ತಿ

ಸಾಕು ಮಾಡು
ಈ ನೋಟ ಈ ಆಟ
ನನಗೀಗ ಇಪ್ಪತ್ತೆರಡು ಮಳೆಗಾಲ
ಈ ಹುಚ್ಚುನದಿ ನೆರೆಬರುವ
ಮುನ್ನ ಹೊಲಕೆ ನೀರುಣಿಸಬೇಕು..
ಮುತ್ತಿನ ಬೆಳೆ ಬೆಳೆಯಬೇಕು
ನಿಶ್ಚಿತ ಹೊಲದೊಡತಿ ನೀನು
ಅನುವಾಗಬೇಕು, ಮತ್ತೊಂದು ಮಳೆಗಾಲ ಬಂದಿದೆ.

>> RP 18.02.2009

Thursday, May 16, 2013

ಮಾತನಾಡದ ಕವಿತೆ

 ಮಾತನಾಡದ ಕವಿತೆ
****************
 
ಮಾತನಾಡದ ಕವಿತೆಯೊಂದು
ಬೇಕಾಗಿದೆ
ಕೊಡುವಿರಾ ಯಾರಾದರೂ
ಘನಕವಿಗಳು!
ಗುರುದಕ್ಷಿಣೆಗೆ
ಅರಸುತ್ತಿದ್ದೇನೆ.

ಇಲ್ಲಿ,
ಗಾಳಿ ಸುಯ್ ಗುಡುತ್ತದೆ
ಮಳೆ ಮೊರೆಯುತ್ತದೆ
ದುಂಬಿ ಝೆಂಕರಿಸುತ್ತದೆ
ಎಲೆಗಳು ತೂಗುತ್ತವೆ
ಹೂ ಅರಳುತ್ತದೆ
ಹಕ್ಕಿ ಹಾಡುತ್ತದೆ.

ಹಾಗಿದ್ದರೆ ಎಲ್ಲಿದೆ ಆ
ಮೌನ... ಮಾನವಂತ ಮೌನ
ಕವಿತೆಯೊಳಗೆ
ಎಲ್ಲಿ ಎಲ್ಲಿ ಅಡಗಿದೆ? ಕೊಡುವಿರಾ
ಹುಡುಕಿ.. ಹುಡುಕಿ
ಯಾರಾದರೂ
ಘನಕವಿಗಳು!

ಮಾತನಾಡದ ಉಪಮೆ, ರೂಪಕ , ಪದ
ಕೊನೆಗೆ ಅಕ್ಷರವನ್ನು
ತಾ ಎಂದ ಗುರು ಬೋಧಿಧರ್ಮ
ಅರಸುತ್ತಿದ್ದೇನೆ. ಕನಿಷ್ಟ
ತೋರುವಿರಾ ಯಾರಾದರೂ
ಘನಕವಿಗಳು!
                                    >> RP

ಬಿಡಿ ಹೂ: 9




ಅದೆಷ್ಟೋ
ಪ್ರೀತಿಸಿದರು , ಪ್ರೇಮಿಸಿದರು
ಪ್ರಣಯದ ಪ್ರಲೋಭನೆಗೆ
ಪರಿತಪಿಸಿದರು.
ನಾನೋ
ಹೂವು ಹಣ್ಣು
ಗಾಳಿ ಮಳೆ
ಭೂಮಿ ಆಕಾಶಗಳ
ಸಂಗಕ್ಕೆ ಸಿಕ್ಕು ,
ಕಳೆದುಕೊಳ್ಳುವ ಭೀತಿಯಲ್ಲಿ
ಪ್ರೀತಿಸಲೇ ಇಲ್ಲ!