Tuesday, December 29, 2009

ಪ್ರೇಮ ಪ್ರಸಂಗಗಳು-2


ದೊಂದು ನಿರ್ಜನ ನದಿ ತೀರದ ಹಾಸುಗಲ್ಲು... ಹನಿಗಳಷ್ಟೇ ನೀರು ಜಾರುವಲ್ಲಿ ಮಲಗಿದಂತೆ ಕುಳಿತ ಅವರಿಬ್ಬರು ಸಮುದ್ರ ಸೇರುವ ಕುರಿತು ಚಿಂತಿತರು. 'ಬದುಕು ದೊಡ್ಡದು... ಸಮುದ್ರದಷ್ಟು!' ಭೀತಿಯಿಂದ ಅವಳು ವ್ಯಾಖ್ಯಾನಿಸಿದಳು. ಮೊಗದ ಮೇಲೆ ಬೀಳುವ ಹನಿಗಳ ಅನಂದದಲ್ಲೇ ಆತನೆಂದ,' ನಾನೊಟ್ಟಿಗಿರುತ್ತೇನೆ ಬಾ. ಅಂಗೈಲಿ ಪ್ರಪಂಚ ತೋರಿಸುತ್ತೇನೆ ... ರಾತ್ರಿ -ಹಗಲುಗಳ ಹಂಗಿಲ್ಲದೆ !' ಆಕೆ ಈತನ ಭುಜಕ್ಕೆ ತಲೆಯೊರಗಿಸಿ ಕಣ್ಮುಚ್ಚಿದಳು. ಹುಡುಗನ ಮುಂದೆ ತೆರೆದುಕೊಂಡ ನೀಲವಿಸ್ತರ ಶರಧಿ... ಮೋಡ ಕವಿದಾಗಸದಲಿ ಮಿಂಚುಗಳು..*****

ಪ್ರೇಮ ಪ್ರಸಂಗಗಳು-1

ಹೂ ಮಾರುವ ಹುಡುಗ ಸಿರಿವಂತರ ಕೇರಿಯ ಹುಡುಗಿಯೊಬ್ಬಳಿಗೆ ನಿತ್ಯ ಮಲ್ಲಿಗೆ ದಂಡೆ ನೀಡುತ್ತಿದ್ದ, ಹಣ ಪಡೆದು...?! ಮಲ್ಲಿಗೆ ಮುಡಿದ ಆಕೆಯ ಕಣ್ಣ ತುಂಬ ಮಿಂಚಿನ ಬೆಳಕು , ರಿಕ್ತಕರನಾದ ಇವನ ಮನಸ್ಸಿನೊಳಗೆ ಹೂ ಮಳೆ...! ದಿನದಿನಗಳು ಉರುಳುತ್ತಲೇ ಪ್ರೀತಿ ಧಮನಿಧಮನಿಗಳಲು ವ್ಯಾಪಿಸಿ, ಬೆಳೆದು ಬೆಳದಿಂಗಳು ಸುರಿಯತೊಡಗಿತ್ತು.
ದಿನ ಮಲ್ಲಿಗೆ ಬದಲು ಗುಲಾಬಿ ನೀಡಲು ಮುಂದಾದ ಹುಡುಗನ ಕೈಗಳು ನಡುತ್ತಿದುದ ಗಮನಿಸಿದ ಹುಡುಗಿ ತಾನೆ ಕಸಿದು ಹೂ ಮುಡಿದಳು. ನಸುನಾಚಿದ ನಗುವೊಂದ ಆತನ ಕೈಗಿತ್ತಳು. ಮಲ್ಲಿಗೆ ಅಂಗಳದಿ ಚೆಲ್ಲಿತ್ತು! ಹುಡುಗನ ಸೈಕಲ್ಲಿನ ಹೂ ಬುಟ್ಟಿ ತುಂಬ ಗುಲಾಬಿಗಳು.

Friday, October 23, 2009

ಅವಳೆಂಬ ಮನೋವ್ಯಾಧಿ...

ಕೂಗುತಿಹ ರೈಲಿನ
ಪುಟ್ ಬೋರ್ಡಿನ ಮೇಲೆ
ಒಲವಿನ ಹಣತೆಯೊಂದು
ಬಿಮ್ಮನೆ ಕುಳಿತಿದೆ..!
ಬೀಸುವ ಬಿರುಗಾಳಿಗೆ
ಮೈಯೊಡ್ಡಿ ಎದೆಬಿರಿದು
ಉರಿಯುತ್ತಿದೆ...
ಉಸಿರಿನ ಜೀವಜಲದಲಿ!

ಬರುವಳೆಂಬ ನಿರೀಕ್ಷೆಯ
ಮನೋವ್ಯಾಧಿಗೆ,
ಬಿರುಗಾಳಿಯ ದಬ್ಬಿ ಹೊರ-
ಇಣುಕುತ್ತಿದೆ ಉರಿಯ ಜ್ವಾಲೆ.
ನನ್ನ ಸೆಳೆಯುತ್ತಿದೆ ನನ್ನಿಂದ
ಅವಳೆಡೆಗೆ...
ಹರಿವ ನೀರು ತಗ್ಗಿನೆಡೆಗೆ?

ಮೈಮೇಲೆ ಅವಳಿಟ್ಟ
ಚಿತ್ತಾರದ ರಂಗೋಲಿಯ
ಬಣ್ಣವಿನ್ನೂ ಅಳಿಸಿಲ್ಲ..
ಅಲ್ಲಿ ಚೆಲ್ಲಿದ ಎದೆಯ
ರಕ್ತ ಹೆಪ್ಪುಗಟ್ಟುವುದಿದೆ.

ಕಣ್ ರೆಪ್ಪೆಯ ಮೇಲೆ ಬರೆದ
ಕವಿತೆ ಅಳಿಸಲಾಗುವುದಿಲ್ಲ...
ಅವಳಿನ್ನೂ ಓದುವುದಿದೆ.

ಓಡುವ ರೈಲಿನ ಹಿಂದೆಯೇ
ನೆನಪುಗಳು ಮಾಸುತ್ತಿವೆ,
ಅವಳು ಮಾತ್ರ ಕರಗುತ್ತಿಲ್ಲ.

ಎಂಜಿನ್ ಕೂಗಿನ ಶಬ್ದಕ್ಕೆ
ಬೆಚ್ಚುತ್ತಲೇ, ಅಳುಕುತ್ತಲೇ ...
ಕುಳಿತಿದೆ ಹಣತೆ,
ಜೋಪಾನ ಮಾಡುವ
ಅವಳ ಕೈಗಳ ನಿರೀಕ್ಷೆಯಲಿ.

Monday, October 19, 2009

ನಾನು ಸದಾ ನಿನ್ನೊಂದಿಗೆ... ನೀನು ಸದಾ ನನ್ನೊಂದಿಗೆ !


ನಾನು ಸದಾ ನಿನ್ನೊಂದಿಗೆ... ನೀನು ಸದಾ
ನನ್ನೊಂದಿಗೆ , ನಾವಿಬ್ಬರೂ
ಸದಾ ಜಗತ್ತೆಂಬ ಮಾಯೆಯೊಂದಿಗೆ... ಹುಡುಕುತ್ತಲೇ ಸದಾ
ಬದುಕಿನ ಕವಲು ದಾರಿಗಳ ... ಹೆಣೆಯುತ್ತಲೇ
ಸದಾ ಸುಂದರ ಕನಸುಗಳ...
ನೋಡುತ್ತಲೇ ಸದಾ ಎಟುಕದ ತಾರೆಗಳ ... ಎಣಿಸುತ್ತಲೇ
ಸದಾ ಸಂಬಳದ ಅಂಕಿಗಳ ... ಮುಗಿಸುತ್ತ ಸದಾ ತೃಪ್ತಿಯಾಗದ ರಾತ್ರಿಗಳ ...
ಸಾಗಿಸುತ್ತಾ ಸದಾ ಹೆಗಲ ಮೇಲೆ ಬಾಳ ನೊಗವ , ನಾನು ಸದಾ ನಿನ್ನೊಂದಿಗೆ... ನೀನು ಸದಾ ನನ್ನೊಂದಿಗೆ !

ರಿಕ್ತ ಮನಸಿನಲಿ ರಕ್ತಿಯ ಹೂವಿಲ್ಲ



ಮತ್ತೆ ಮತ್ತೆ ಅಲವತ್ತುಕೊಳ್ಳುತ್ತೇನೆ
ನಿನ್ನೊಂದಿಗೆ ...
ಕಳೆದುಹೋದ ಅಮ್ಮನ
ನೆನಪಿನಲ್ಲಿ ಸಿಗುವುದು ಕೂಡ
ನೀನೊಬ್ಬಳೆ?!


ಮಧ್ಯರಾತ್ರಿಗಳಲಿ ನಿಲ್ಲಿಸಿದ
ನನ್ನ ಅಳು ...
ನಿನ್ನದೊಂದು ತಲೆ ನೇವರಿಕೆಗೆ
ನೆಮ್ಮದಿಯ ನಿದ್ದೆ ಮಾಡಿತ್ತು.


ನೋಡು... ಮನಸು ರಿಕ್ತ,
ರಕ್ತಿಯ ಹೂಗಳೆಲ್ಲಾ
ಕಡಲ ತಡಿಯ ಉಪ್ಪು ನೀರಿನಲ್ಲಿ
ನನ್ನ ಉಸಿರು ಸಿಕ್ಕಿದಂತೆ...
ಬೆಂದ ಬೇಳೆಯ ಕಾಳು!


ವಿಶ್ವಾಸ- ವಿದ್ರೋಹಗಳದ್ದು
ಅರಿವಿನ ಅಹಂಕಾರ.
ನಾನೋ ಏಕಾಂತಗಳ ಜಡಿಮಳೆಗೆ
ಸಿಕ್ಕ ತೆಂಗಿನಮರ !


ರಿಕ್ತ ಮನಸಿನಲಿ ರಕ್ತಿಯ ಹೂವಿಲ್ಲ
ಬಾ.... ಮತ್ತೊಮ್ಮೆ ...
ಎರಡೊಮ್ಮೆ...
ತಲೆ ನೇವರಿಸಿ ಬಿಡು,
ಕಳೆದು ಹೋಗಲಿ ಬಂಧ...
ಅಧ್ಯಾಯ ಮುಗಿದು... ಆರಂಭವಾಗಲಿ ಹೊಸಕಾವ್ಯ.

ಬೆತ್ತಲ ರಾತ್ರಿಯ ಕಣ್ಣುಗಳು

ಬೆತ್ತಲು , ಸರಿ ಕಾಣದ
ಕಣ್ಣಿಗೂ... ಬಯಕೆ
ಕಡಲ ತಡಿಯ ಬೆತ್ತಲ ಸ್ನಾನ.....,
ಚಂದಿರನಲ್ಲೇ ಮಿಂದಂತೆ
ನರಗಳಿಗೆಲ್ಲಾ ವಿದ್ಯುತ್ ಸಂಪರ್ಕ!

ಮಧ್ಯರಾತ್ರಿಯಾದರೂ ಅರಸುತಿದೆ
ಕಿನಾರೆಯ ಇಂಚಿಂಚು
ಸೌಂದರ್ಯದ ಹಪಾಹಪಿ
ಉದರಾಂತಾರಾಳದ ಕೆಳಗೆ
ಏನೋ ತಹತಹ.

ರಾತ್ರಿ ಸರಿದು ಮುಂದೆ
ಪ್ರಹರ ಮೂರು...
ತಟದಲ್ಲಿ ಮೌನ ಕ್ರಾಂತಿ ,
ಮಾನುಷಶಾಂತಿ.

ಅಲೆಯ ಶಬ್ದಗಳಲಿ
ಅವಿತ ಕಾವ್ಯದ ಸಾಲುಗಳು
ರಿಂಗಣಿಸುತ್ತಲೇ ಇವೆ ,
ಇಳಿದು-ಏರಿ ಭೋರ್ಗೆರೆದು....
ನನ್ನ ಕರೆದು ಬಾರೋ ಮೋಹನಮುರಳಿ!

ಕಣ್ಣುಗಳು ಇನ್ನಷ್ಟು ಆಶಾವಾದಿ
ಮುಚ್ಚಿ ಕಟ್ಟಿಕೊಳ್ಳುತ್ತವೆ ,
ಸಿಗದ ಅರೆನಗ್ನತೆಯ ಪ್ರತಿಮೆ!

ರಾತ್ರಿ ಅಳಿಸಿದ ರವಿ ನಕ್ಕಾಗ .....
ನಾನು ಮಾತ್ರ ಬೆತ್ತಲು
ಕಡಲು...ನೀರು ಸುತ್ತಲು.....
ಮತ್ತೆ ಕಣ್ಣುಗಳಲಿ ಸೌಂದರ್ಯದ ತೆವಲು.

ಕಲ್ಲು ಕರಗುವ ಸಮಯ


ಒದ್ದೆ ಚರ್ಮದ ಮೇಲೆ
ಸೋಂಕಿದ ಅವಳ ಕಿಡಿ ಮೈ ....!
ಹೊತ್ತಿತು...
ದೀರ್ಘ ಬಿಸಿಯುಸಿರು
ದೇಹದಾರಿಗಳ ಇಕ್ಕೆಲಗಳ
ವ್ಯಾಪಿಸಿ
ವ್ಯೋಮ ಸುರಂಗವ
ಕಂಪಿಸಿ,
ನುಗ್ಗಿತು ಸೀಳಿದಂತೆ
ಸಿಡಿಲು....
ಉರಿಯ ಮಾರಿಗೆ
ಜೀವಗತಿಯ ಒಲವು.

ತಹಿಸಿದ ರಸ್ತೆಗಳು
ಈಗ ಭತ್ತದ ಗದ್ದೆ ,
ನಿಂತ ಬೆದರು ಬೊಂಬೆ ..!
ಬೆಂಕಿ ಕರಗಿ
ಬೆಣ್ಣೆ ಬೆವರಿ
ನಿಲುವ ಹೊತ್ತು
ಕಲ್ಲು ಕರಗುವ ಸಮಯ.