Friday, April 26, 2013

ಬೇಲಿಯ ಹೂ

ಕಳೆದುಕೊಂಡು ಪರಿತಪಿಸುತ್ತಿರುವ
ಒಲವನ್ನು ಒಮ್ಮೆ
ಕರುಣಿಸಿಬಿಡು ಭಗವಂತ
ನೇಸರನ ಎಳೆಬಿಸಿಲಿಗೆ ಕಾಯುತ್ತಿರುವ
ಬೇಲಿಯ ಹೂ, ನಾನು.
ಅರಳಿಬಿಡುತ್ತೇನೆ
ಬರುವ ಮುಂಗಾರಿಗೆ ಸಿಕ್ಕು
ಉದುರುವ ಮುನ್ನ.
ಇದೊಂದು ಅಮೃತಗಳಿಗೆ
ನನ್ನದಾಗಲಿ, ನಿನ್ನೊಲವಿನಿಂದ
ಅರಳಿದ್ದೇ ಆದರೆ
ಮುಂದಿನ ಏಳೇಳು ಜನುಮವೂ
ನಿನ್ನ ತಿರುವಡಿಯಲ್ಲಿ ಹೂವಾಗುತ್ತೇನೆ. ~ RP

ಬೋಧಿಯ ಅರಸುತ್ತಾ

ಸುಮ್ಮನೆ ಪಯಣಿಸುತ್ತಿದ್ದೇನೆ, ಭೂಮಿಯಂತೆ
ನನಗೆ ನೆಲೆಯಿಲ್ಲ
ಚಕ್ರ ನಿಲ್ಲುವುದಿಲ್ಲ
ಅರಿವಿಲ್ಲದೆ ಸಾಗುವ ಈ ಹಾದಿಗುಂಟದಲಿ
ನೀನ್ನೆನ್ನ ಒಳಗಿನಲಿ
ಸಣ್ಣ ಹೂ ಸೊಡರಿನಲಿ
ಬೆಳಗು ದಾರಿಯ ಧಮ್ಮಕಕ್ಷೆಯ ನಡಿಗೆಗೆ
ಬೋಧಿಸತ್ವಾ ಎದೆ
ತುಂಬಿದರೆ ಸಾಲದು
ಬುದ್ದಿ ಭ್ರಮಿಸಬೇಕು ನಿನ್ನ ತಿರುವಡಿಯಲ್ಲಿ! ~ RP

ಬಿಡಿ ಹೂ: 3

ಭ್ರಮೆಯ ಬಂಧನದಿಂದ ಮುಕ್ತಿಗೊಳಿಸಿ 
ಮತ್ತೂ ಪ್ರಪಂಚವ ತೋರಿಸಿದ!
ಬೋಧಿಧರ್ಮ ಇಳಿದುಬಿಡು ಎದೆಗೆ

ಕಾಡಬೇಡ ಕಾಯಿಸಬೇಡ. 
ತೆರೆದ ಬಾಗಿಲು ನಾನು
ಅರಳಿಯ ಬೀಜ ನೆತ್ತಿಯಲಿ ಚಿಗುರಿಲಿ.

ಬಿಡಿ ಹೂ:2

ಕೆಂಡಸಂಪಿಗೆಯ
ಘಮಕ್ಕೆ
ಮನದೊಳಗೆ ಮೈನೆರೆದೆ!

ಬಿಡಿ ಹೂ: 1

ನಿನ್ನ ಕರುಣೆ
ತೊನೆವ ಭತ್ತದ ತೆನೆಯಾಗಲಿ
ತುಂಬಿ ಹರಿವ ನದಿಯ ನಡುವಾಗಲಿ
ಎಲ್ಲರ ಎದೆಯಲಿ ನಗುವ ಹೂವಾಗಲಿ ...
ಬೋಧಿಧರ್ಮ.

Wednesday, February 6, 2013

ಅಕ್ಷೋಭ್ಯ ಬುದ್ದನ ಕಥೆ




ಬೌದ್ದ ದರ್ಶನವೂ , ವೈದಿಕ ದರ್ಶನಗಳಂತೆ  ಬಹು ವಿಸ್ತಾರವಾಗಿದೆ. ಮಹಾ-ಹೀನ -ವಜ್ರಯಾನಗಳೆಂಬ ಮೂರು ಪಂಥಗಳಲ್ಲಿ, ಒಂದೇ  ತಳಹದಿಯ ಹಲವು ಕವಲುಗಳ ದಾರ್ಶನಿಕರು ಲಭ್ಯ. ಹೊಸದಾಗಿ ತಿಳಿಯಲು ಹೊರಟವರಿಗೆ ಪಾರಿಭಾಷಿಕ ಪದಗಳ ತೊಡರು ಎದುರಾಗುವುದು ಸಾಮಾನ್ಯ.  ಅದರಲ್ಲೂ  ಬೌದ್ದ ದರ್ಶನಗಳಲ್ಲಿ ಹೇರಳವಾಗಿ ಸಿಗುವ ಸಂಸ್ಕೃತ ಪದಾರ್ಥ ತಿಳಿಯುವುದು ಸ್ವಲ್ಪ ಕಷ್ಟವೇ ಸರಿ. ಅ ರೀತಿಯ ಪ್ರತಿ ಪಾರಿಭಾಷಿಕ ಪದವು ತನ್ನದೇ ಆದ ಧೀರ್ಘ ವಿವರಣೆ,ಸಂದರ್ಭಗಳಿಂದ ಸಮೃದ್ದವಾಗಿದೆ. ಆಗಾಗ್ಗೆ ತಿಳಿದಂತೆ, ತಿಳಿಸಿದಂತೆ ಅವುಗಳನು ಹೇಳುತ್ತೇನೆ. ನಾನು ಕೂಡ ಇನ್ನು ಪ್ರಾಥಮಿಕ ಹಂತದ ಓದುಗನೇ!   
ಸದ್ಯಕ್ಕೆ ನಾನು ಹೇಳ ಹೊರಟಿದ್ದು  ವಜ್ರಯಾನ ಪಂಥದ ಐದು ಜನ ಜ್ಞಾನಬುದ್ಧರಲ್ಲಿ  ಒಬ್ಬನಾದ ಅಕ್ಷೋಭ್ಯ ಬುದ್ದನ ಕಥೆ. ಉಳಿದವರು ಅಮೋಘಸಿದ್ದಿ , ವೈರೋಚನ ,ರತ್ನಸಂಭವ,ಅಮಿತಾಭ.
ವಜ್ರಾಯನ ತಾಂತ್ರಿಕ ಪಂಥವಾದರಿಂದ ಇಲ್ಲಿ ಮಂಡಲಗಳಿಗೆ ಪ್ರಾಮುಖ್ಯತೆ ಹೆಚ್ಚು. ಅಕ್ಶೋಭ್ಯನು ವಜ್ರಶೇಖರ ಸೂತ್ರಧಾರಿತ  'ವಜ್ರಧಾತು'( Diamond Realm)* ಮಂಡಲದ ಪಶ್ಚಿಮದಲ್ಲೂ & ಸುಖವತಿಯ (Pure  Land )* ಪಶ್ಚಿಮದ ಒಡೆಯನಾಗಿ ನೆಲೆಸಿದ್ದಾನೆ.



ಅಕ್ಷೋಭ್ಯ ಬುದ್ದ

ಅಮಿತಾಭ ಬುದ್ಧ 



ಅಮೋಘಸಿದ್ದಿ ಬುದ್ದ 

ರತ್ನಸಂಭವ ಬುದ್ದ 

ಅವಲೋಕಿತೇಶ್ವರ ಮಂಡಲ 

ವೈರೋಚನ ಬುದ್ದ 


ಅಕ್ಷೋಭ್ಯನ ಕಾಲ ಸುಮಾರು ಕ್ರಿ.ಪೂ.೧೪೭. ಬೌದ್ದ ಭಿಕ್ಕುವೊಬ್ಬ ತಾನು ಇನ್ನೆಂದು ಕೋಪ -ದ್ವೇಷಗಳನ್ನೂ    ತಾಳುವುದಿಲ್ಲವೆಂದು & ಅಲ್ಲಿಯವರೆಗೂ ಇರುವಲ್ಲಿಯೇ ಸ್ಥಿರನಾಗುವೆನೆಂದು ನಿರ್ಧರಿಸುತ್ತಾನೆ. ತುಂಬಾ ಕಾಲದ ತನ್ನ ನಿರ್ಧಾರ ಪಾಲನೆಯಿಂದ ಜ್ಞಾನೋದಯವಾಗಿ ಬುದ್ದನಾಗುತ್ತಾನೆ. ಅವನೇ ಅಕ್ಷೋಭ್ಯ .
ಇನ್ನುಳಿದಂತೆ ಅವನ ತಾಂತ್ರಿಕ ವಿವರಣೆಗಳು ಬೇಕಾದಷ್ಟು ಸಿಗುತ್ತವೆ. ಅಕ್ಶೋಭ್ಯನು  ಎರಡು ಅನೆಗಳೊಂದಿಗೆ ಕಮಲದಲಿ, ನೆಲೆಸಿದ್ದಾನೆ. ಬಲಗೈ ಆದಿಬುದ್ದನ "ಭೂಸ್ಪರ್ಶ  ಮುದ್ರೆ "*ಯಲ್ಲಿ & ಎಡಗೈನಲ್ಲಿ 'ಶೂನ್ಯ' ಸಂಕೇತ 'ವಜ್ರ'ವನು ಹಿಡಿದ್ದಾನೆ. ಬಣ್ಣಗಳಲ್ಲಿ ನೀಲಿ .. ಧಾತುಗಳಲ್ಲಿ  ಜಲ .. ಹಾಗಾಗಿಯೇ ವಜ್ರದಲಿ ಎರಡು ಬಣ್ಣಗಳು ಸೂರ್ಯ ಬೆಳಕು ನೀರಿನಲ್ಲಿ ಪ್ರತಿಬಿಂಬಿತವಾಗಿ ಬಿಳಿಯ ಬಣ್ಣವಾದರೆ .. ಆಳ ಸಮುದ್ರವನ್ನು  ನೀಲಿ ಪ್ರತಿನಿಧಿಸುತ್ತದೆ. ಬೌದ್ದ ತಾಂತ್ರಿಕರ ಪ್ರಕಾರ 'ನೀಲಿ ಬಣ್ಣವು ಕೋಪ -ದ್ವೇಷಗಳ ಶಕ್ತಿಯನ್ನು, ಜ್ಞಾನ - ಸಿದ್ದಿಗಳಾಗಿ ಮಾರ್ಪಡಿಸುತ್ತದೆ. ಹಾಗಾಗಿಯೇ ಮಂಡಲದಲಿ ಅಕ್ಷೋಭ್ಯನು ನೀಲಿ ಬಣ್ಣದಲಿ ಪ್ರತಿನಿಧಿಸುತ್ತಾನೆ.
ಅಕ್ಷೋಭ್ಯ ಬುದ್ದನ ಸೂತ್ರ & ಧ್ಯಾನ ಕೋಪ-ದ್ವೇಷಗಳನು  ಶಮನ ಮಾಡುತ್ತದೆ ಎಂಬುದು ಬೌದ್ದರ ನಂಬಿಕೆ.


*ಮಂಡಲ = ನಮ್ಮಲಿನ ಪ್ರತಿಷ್ಟಾಪನ  ಕಲೆ
* 'ವಜ್ರಧಾತು'( Diamond Realm)
* ಸುಖವತಿ/ಅಭಿರತಿ  (Pure  Land )* ಮುಂದಿನ ದಿನಗಳಲಿ ವಿಸ್ತಾರವಾಗಿ ಹೇಳುವೆ
Pic :Philip Rodgers, Atlanta

Monday, January 25, 2010

ಕಾವ್ಯ ಪ್ರೇರಣೆಯ ಕ್ಷಣಗಳು....

ಜನವರಿ ೨೪, 2010 ರ ಭಾನುವಾರ ನಾಗಮಂಗಲದ ಎಚ್. ಬೊಮ್ಮನಹಳ್ಳಿ ಯ ಶ್ರೀ ಅಶೋಕ್ ರವರ ಮನೆಯಂಗಳದಲಿ ನಾಗಮಂಗಲದ ಕಾವ್ಯಾಸಕ್ತರ ಬಳಗ ಏರ್ಪಡಿಸಿದ್ದ "ಕಾವ್ಯ ಪ್ರೇರಣೆ" ಯ ಕಲಾಪದ ಚಿತ್ರಗಳು ಇಗೋ ಇಲ್ಲಿವೆ..








ಕವಿ
ಎಸ್ ಮಂಜುನಾಥ್ ರವರಿಂದ... ಕಾವ್ಯ ಕಾರಣ!




ಎಸ್ ಮಂಜುನಾಥ್ , ಎಚ್.ಎಸ್.ವೆಂಕಟೇಶಮೂರ್ತಿ , ಮತ್ತು ನಾ.ಸು. ನಾಗೇಶ್