Friday, April 26, 2013

ತೊಟ್ಟಿಕ್ಕಿದಂತೆ ಎದೆಯ ರಕ್ತ , ನಿನ್ನ ಪದ್ಯ!


ನೀನು ಜೊತೆಗಿರದ ರಾತ್ರಿಗಳ
ಮಾರಿಕೊಂಡೆ..
ಏಕಾಂತದ ದವಲಾಗ್ನಿಯ
ಉಣಿಸಲು,
ಕವಿತೆಯ ಸಂಗ ಮಾಡಿದೆ.

ನೀನು ಮಾಡಿಟ್ಟ ವೈನೂ
ಬಜಾರಿನಲ್ಲಿ ಸಿಕ್ಕುವ ಸುಡು ಸಿಗರೇಟು
ಹಾಳು ಪಿಚ್ಚರುಗಳು ನನಗೆ ಪಥ್ಯವಲ್ಲ.
ನಿನ್ನ ಬಿಟ್ಟು ಯಾವುದರ ಹಿಂದೆಯೂ
ಒಲವಿಲ್ಲ,... ಹೋಗುವುದಿಲ್ಲ.

ನಿನ್ನ ಕಣಿವೆಯಲಿ ನಾನು ಜಾರುವಾಗ
ಹೇಳಿಕೊಂಡ ಕೇಳ್ವಿಗಳು, ಈಗ ಮಾತನಾಡುತ್ತವೆ
ಬಹಳ. ಕವಿಸಮಯವಂತೀಗ?
ನನಗೇನೋ ತಿಳಿಯದು
ಸುರತ ತಪ್ಪಿದಕ್ಕೆ ಕವಿತೆಯೇ ಸುಖ ಎಂದುಕೊಂಡೆ!

ಅಷ್ಟೇ ಅಲ್ಲ .. ನೀ ಬರುವುದರೊಳಗೆ
ಪೊರೆ ಕಳಚಿಕೊಳ್ಳುತ್ತೇನೆ.
ವಿಷವ ಕಕ್ಕಿಬಿಡುತ್ತೇನೆ. ಈ ಕವಿತೆಗಳಲ್ಲಿ
ನನ್ನ ನಗ್ನ ಸತ್ಯ ,
ಹೇಳಲರಿಯದ ಕೆಟ್ಟ ಕನಸು,
ನಿನ್ನೊಲವು ಉಸಿರುಗಟ್ಟಿವೆ.

ಸಾಕೆನಿಸಿ ನಿರ್ಭಾವಕ್ಕೆ ನನ್ನ ಬಿಗಿದಾಗ
ತೊಟ್ಟಿಕ್ಕಿದಂತೆ ಎದೆಯ ರಕ್ತ
ಹಾಳೆಯ ಮೇಲೆ ಚಿತ್ರವಾಗಿ ..
ಮತ್ತೆರಡು ಕಣ್ಣ ಹನಿಗಳು ಕೂಡಿ
ನಿನ್ನ ಪದ್ಯವಾಗುತ್ತದೆ.

No comments:

Post a Comment