Wednesday, October 8, 2014

ತೂಗಿಬಿಟ್ಟ ಪಾಪದ ಬಟ್ಟಲು



ನೆತ್ತಿಯ ಮೇಲೆ ಒಂದು ಸಣ್ಣ ರಂಧ್ರ ಕೊರೆದು
ಒಂದು ಬಟ್ಟಲು ತೂಗಿ ಬಿಡಲಾಗಿದೆ.
ಐದು ಕೈಗಳು ಇಹದ ಕಡಲಿನಲಿ ಅಪ್ಪಳಿಸುವ
ಉಪ್ಪಿನ ನೀರ ಮೊಗೆಮೊಗೆದು ತುಂಬಿಕೊಳ್ಳುತ್ತಿವೆ.
ಎಷ್ಟು ಧಾರಾಳ
ಎಷ್ಟು ಧಾವಂತ
ಎಷ್ಟು ದಾಹ
ಬಟ್ಟಲ ಹೊಟ್ಟೆ ತುಂಬುತ್ತಿಲ್ಲ
ಮೊಗೆದು ಸುರಿದದ್ದಷ್ಟೂ ನಿಲ್ಲುತ್ತಿಲ್ಲ

ಪಂಪು ಪೈಪು ಜೋಡಿಸಿ ಕಡಲನೇ
ಬಟ್ಟಲಿಗೆ ಬೋರಲು ಇಡಲಾಯಿತು
ನೆತ್ತಿಯ ಪಾದ ನಿಂತಿದ್ದ ಹಾಯಿದೋಣಿ ತಳಕ್ಕೆ ಬಿದ್ದು ಚೂರಾಯಿತು.
ಬಟ್ಟಲಿನ್ನೂ ಖಾಲಿಯೇ!
ದೋಣಿಯ ಕಟ್ಟಿಗೆ ಸುಟ್ಟು ಬೆಂಕಿಯ ತುರುಕಿ
ಮೂಗುಗಳ ಹಿಡಿದು ಜೀವದುಸಿರುಗಳ ಅದುಮಿ
ಬ್ರಹ್ಮಾಂಡವನೇ ಹಿಡಿದು ಬಟ್ಟಲ ಸುರಿಯಲು, ಏನೂ ಆಗಲಿಲ್ಲ.. ತುಂಬಲಿಲ್ಲ

ದಾರಿಹೋಕ ತಿರುಕನೊಬ್ಬ
ತೂಗಿಬಿಟ್ಟ ಪಾಪದ ಬಟ್ಟಲು ರಾದ್ಧಾಂತವ ಕಂಡು
ಜೋಳಿಗೆಯಿಂದ
ಅರ್ಧ ಎಂಜಲು ಹುಣಸೆಹಣ್ಣು ಹಾಕಿದ
ಬಟ್ಟಲು ಥಟ್ಟನೆ ನೆಲಕ್ಕೆ ಬೋರಲು ಬಿದ್ದಿತು
ಬ್ರಹ್ಮರಂಧ್ರದಲ್ಲಿ ಸಹಸ್ರಾರದ ಹೂ ಹುಟ್ಟಿ
ಸರ್ವವೂ ಸ್ವಸ್ಥಾನ ಸೇರಿಕೊಂಡವು. ~

ಮಠದ ಬೆಕ್ಕು ಮತ್ತು ದೇವರ ಸಾವು

ಭವದ ಲಜ್ಜೆಯ ತೊರೆದು
ಇಹದ ಕಾಮವ ಹಳಿದು, ಒಂದೊಂದೂ ಅರಿವೆಯ
ಅರಿವುಗಳಲಿ ಹರಿದುಹಾಕಿ
ಬೆತ್ತಲಾಗಬೇಕಿತ್ತು ಬಯಲಿನಲಿ ಗುರುವು

ಕುಟೀಚಕನ ಸುತ್ತ ಕೋಟೆಯ ಕಾವಲು
ನಿಂತು ಏನ ಕಾಯಬೇಕಿತ್ತು? ಒಳಗೆ ಏನು ನಡೆದಿತ್ತು !
ವಿರಕ್ತನ ಮೈಯಲ್ಲಿ ಯಾವ ರಿಕ್ತಿಯು ಸುಳಿದಿತ್ತು ?
ಕಾಣಬೇಕಿತ್ತು ತೆರೆದಪರದೆಯಲಿ ಗುರುವು

ಎದೆಯಲ್ಲಿ ಯೋಗಮುದ್ರೆಯ ಹೊತ್ತ ಮೇಲೆ
ಸ್ತನ ಕಂಡು ಚಿತ್ತದಲಿ ಸ್ಥಾನಪಲ್ಲಟಗೊಂಡರೆ, ಅಲ್ಲಿ
ವಿಷದ ಕಳ್ಳಿಸಾಲು ಬೆಳೆದು ರೋಗದ ನಾಯಿ ಹೆಣ ಬಿದ್ದುದಲ್ಲದೇ
ಮತ್ತಾವ ವಾಸನೆ ಇರದು.
ಅರಳಬೇಕಿತ್ತು ಗಂಧದಹೂವಾಗಿ ಗುರುವು

ಅದಾಗದೇ

ನೆಲಕೆ ಕೃಷ್ಣಾಜಿನ, ಮೈತುಂಬಾ ಬೆಚ್ಚಗೆ ಕಷಾಯವಸ್ತ್ರ
ಮಿನುಗುವ ರುದ್ರಾಕ್ಷಿ ಸ್ಪಟಿಕ ಮಣಿಮಾಲೆಗಳು
ಬೆಳ್ಳಿಯ ಪಾದುಕೆಯ ಮೇಲೆ ಚಿನ್ನದ ಅಂಗುಷ್ಠ
ಕೈಯಲ್ಲಿ ಜಪಮಣಿ, ಬಾಯಿತುಂಬಾ ಧರ್ಮಮಂತ್ರ
ದೀನತೆಯನ್ನು ಉದ್ದೀಪಿಸುವ ಕ್ಷುದ್ರ ಮೊಗಮಂದಹಾಸ
ಅಯ್ಯಾ ..
ಜಂಗಮರ ಮಠದಲ್ಲಿ ಬೆಕ್ಕನ್ನು ಸಾಕಲಾಗಿ
ಆಕಳ ಕೆಚ್ಚಲಿಗೆ ಸೋಂಕು ತಾಗಿತು
ಮಕ್ಕಳು ಹಸಿದುವು, ಪ್ರಸಾದ ರುಚಿಸದಾಯಿತು.
ಕೆಚ್ಚಲ ತುಂಬಾ ಉಗುರು ಚುಚ್ಚಿದ ಗುರುತುಗಳಲಿ ರಕ್ತ ಒಸರುತ್ತಿರಲು
ಯಾಜಕರು ಬಲಿಗೆ ಸಿದ್ದರಾದರು, ಭಕ್ತರು ಉಮೇದಿನಲಿ
ಸಾಕ್ಷಿಯಾದರು.

ಇದಾದ ಮರುಕ್ಷಣ ದೇವರುಗಳು ಸತ್ತುಹೋದ
ಸುದ್ದಿಯೊಂದು ಬಲಿಪೀಠದ ಕೆಳಗೆ
ಬಿಸಿ ರಕ್ತದಂತೆ ಹರಿಯಿತು! ~

Monday, May 26, 2014

ಬಿಡಿ ಹೂ ~ 26

ಹೂಗಳು ಹೊದ್ದ 
ಇಹದ ಪರಿಮಳವ 
ಬಯಲಗಾಳಿ ಕದ್ದ ಮೇಲೆ
ದುಂಬಿಗಳ ಕಣ್ಣು 
ಹೆಣ್ಣಿನ ಮುಂಗುರುಳ ಮೇಲೆ !

ನಾನು ಆಲಿಕಲ್ಲು



ನಾನು
ಮುಂಗಾರು ಮರೆತು
ಎಸೆದು ಹೋದ ಆಲಿಕಲ್ಲು.

ಕೆಳಕ್ಕೆ ಬಿದ್ದಾಗ
ಪುಟ್ಟ ಮಕ್ಕಳ ಬೊಗಸೆ ತುಂಬಿಕೊಳ್ಳುತ್ತೇನೆ
ಮನುಷ್ಯನ  ಎದೆಯಂಗಳದಲ್ಲಿ
ನೆನಪಾಗಿ ಕರಗುತ್ತೇನೆ!

ಆದರೂ ನಾ ಬರುವುದನ್ನು
ದರಿದ್ರಕಾಲವೆನ್ನಲಾಗಿದೆ .
ಆದರೂ ನಾ ಬಂದೇ ಬರುತ್ತೇನೆ. 
ಎಲ್ಲರಂತೆ ನನಗೂ ಬದುಕಲು ರಹದಾರಿಯಿದೆ. 

ರತ್ನಾವಳಿ ~ 2

ಹೇಳಿದ್ದು ಇಷ್ಟೇ
ಯಾವೊಬ್ಬನ ಮುಖವನ್ನು
ಕನ್ನಡಿಯನ್ನು ಆಧರಿಸಿ ನೋಡಲಾಗುತ್ತದೆಯೋ
ನಿಜದಲ್ಲಿ ಅದು ಅವನದ್ದಲ್ಲ!

~ ರತ್ನಾವಳಿ , ನಾಗಾರ್ಜುನ | ಕ್ರಿ. ಶ. 150

ರತ್ನಾವಳಿ ~1

ಭೂತ ಮತ್ತು ಭವಿಷ್ಯದ
ವಸ್ತು ಮತ್ತು ಪ್ರಜ್ಞೆಗಳು ಅರ್ಥಹೀನ
ಇವುಗಳಿಗೆ ಭಿನ್ನವಾಗಿಲ್ಲದ
ವರ್ತಮಾನದ ವಸ್ತುವೂ ಅಷ್ಟೇ!

~ ರತ್ನಾವಳಿ , ನಾಗಾರ್ಜುನ | ಕ್ರಿ. ಶ. 150

ಯೊಸ ಬುಶಾನ್ | 3

ಗುಡಿಯ ಹಿಂಬಾಗಿಲಿನಿಂದ
ಬಂದಿದ್ದು...
ದವನದ ಗಿಡವೆಷ್ಟು ಬೆಳೆದಿದೆ ಕಾಣಲು!

裏門の
寺に逢着す
蓬かな

~ ಯೊಸ ಬುಶಾನ್ | 3