Monday, June 8, 2015

ಪುಸ್ತಕ ಪ್ರಕಟಣೆ : ಒಂದು ಸಲಹೆ

ನೀವು ಬರಹಗಾರರಾಗಿದ್ದು  ಹೊಸ ಪುಸ್ತಕವನ್ನು ನೀವೇ  ಪ್ರಕಟಿಸಬೇಕೇ ? ಇಲ್ಲಿ ಗಮನಿಸಿ :

* ಒಳ್ಳೆಯ ಬರಹಗಳನ್ನು ಆಯ್ದು ಗೆಳೆಯರಿಂದ- ಹಿರಿಯರಿಂದ ಓದಿಸಿ ಅಥವಾ ನೀವೇ ಒಂದು ಬಿಡುವಾದ ಸಮಯದಲ್ಲಿ ಓದಿ. ನಂತರ  ಮತ್ತೆ ಅವುಗಳಲ್ಲಿ ಸೂಕ್ತವೆನಿಸಿದ ಒಂದಷ್ಟು ಬರಹಗಳನ್ನು ಆಯ್ದು ವರ್ಗೀಕರಣ ಮಾಡಿಕೊಳ್ಳಿ.

ಉದಾ : ಕವಿತೆ/ಕಥೆಗಳು ಆದರೆ ಒಂದಾದಮೇಲೆ ಮತ್ತೊಂದು ಯಾವ ಕವಿತೆ /ಕಥೆ ಬರಬೇಕೆಂದು ಅನಿಸಿದೆಯೋ ಹಾಗೆ. 
ಇತರ ಬರಹಗಳು ಆದರೆ ನಿಮಗೆ ಸೂಕ್ತವೆನಿಸಿದ ಅನುಕ್ರಮದಲ್ಲಿ ಬರಹಗಳನ್ನು ಸಿದ್ದಪಡಿಸಿಕೊಳ್ಳಿ. 

* ಡಿಜಿಟಲ್ ಪ್ರಿಂಟಿಂಗ್ ಇರುವ ಕಾರಣ ಎಲ್ಲವೂ ಈಗ ಕಂಪ್ಯೂಟರ್ ಮಯ. ಹಾಗಾಗಿ
ನಿಮ್ಮ ಬರಹಗಳನ್ನು  ಬಿಡುವಾದಾಗ ಟೈಪ್ ಮಾಡಿ ಅನುಕ್ರಮವಾಗಿ ಒಂದು ಫೈಲ್ ಮಾಡಿಟ್ಟುಕೊಳ್ಳಿ. ಹೀಗೆ ಟೈಪ್ ಮಾಡುವಾಗ ನುಡಿ -ಶ್ರೀಲಿಪಿ - ಬರಹಗಳನ್ನೇ ಹೆಚ್ಚು ಬಳಸಿ ಸಾಧ್ಯವಾಗದೇ ಇದ್ದಲ್ಲಿ ಯುನಿಕೋಡ್ ನಲ್ಲೇ  ( ಸಾಮಾನ್ಯವಾಗಿ ನಾವು ಬಳಸುವ ಗೂಗುಲ್ ಕನ್ನಡ ಟೈಪ್ ಮತ್ತು ಮೊಬೈಲ್ ನ ಜಸ್ಟ್ ಕನ್ನಡ ಟೈಪ್ ಗಳು ) ಟೈಪಿಸಿಕೊಳ್ಳಿ. ಆಮೇಲೆ ಅದನ್ನು ASCI ಆಗಿ ಕನ್ವರ್ಟ್ ಮಾಡಿಕೊಳ್ಳಬೇಕು. 

* ನಿಮಗೆ Page Layout ಮಾಡಲು ಬಂದ್ರೆ ನಿಮಗೆ ಇಷ್ಟವಾದ ವಿನ್ಯಾಸದಲ್ಲಿ Pagemaker, Indesign ಸಾಫ್ಟ್ವೇರ್ ಗಳಲ್ಲಿ  ಪುಟವಿನ್ಯಾಸ ಮಾಡಿ.  ಮಧ್ಯೆ ಮಧ್ಯೆ ನಿಮಗೆ ಬೇಕಾದ ರೇಖಾಚಿತ್ರಗಳನ್ನು ಕಲಾವಿದರಿಂದ ಬರೆಸಿಕೊಂಡು ಬಳಸಿಕೊಳ್ಳಿ. ಇಂಟರ್ನೆಟ್ ಚಿತ್ರಗಳನ್ನು ಬಳಸಿಕೊಳ್ಳುವಾಗ ಕಾಪಿ ರೈಟ್ ಇದೆಯೇ ಗಮನಿಸಿ. ಇದ್ದಲ್ಲಿ ಅಂತಹ ಚಿತ್ರವನ್ನೂ ಬಳಸಬೇಡಿರಿ. ಇಲ್ಲವಾದಲ್ಲಿ ಆರಾಮಾಗಿ ಬಳಸಿ ಮತ್ತು ಚಿತ್ರದ ಮೂಲವನ್ನು  ಪುಟದ ಕಡೆಯಲ್ಲೊ, ಪುಸ್ತಕದ ಕಡೆಯಲ್ಲೊ  ಹೆಸರಿಸಿ.   ನಿಮಗೆ ಸಾಧ್ಯವಿಲ್ಲ ಎಂದಾದರೆ DTP, ಗ್ರಾಫಿಕ್ಸ್ ಗಳು ಬೇಕಾದಷ್ಟಿವೆ. ಕನಿಷ್ಠ ಒಂದು ಪುಟಕ್ಕೆ 10 ರೂಪಾಯಿಯಂತೆ ನಿಮಗೆ ಪುಟವಿನ್ಯಾಸ ಮಾಡಿಕೊಡುತ್ತಾರೆ. ವಿನ್ಯಾಸ ಮುಗಿದ ನಂತರ Printout  ತೆಗೆಸಿಕೊಂಡು ಒಮ್ಮೆ Proof ನೋಡಿಕೊಂಡು ಬಿಡಿ. ಅಕ್ಷರ, ವ್ಯಾಕರಣ ದೋಷಗಳು ಇದ್ದಲ್ಲಿ ತಿದ್ದಿಸಿ.   

* ಮುನ್ನುಡಿ ಬೆನ್ನುಡಿಗಳನ್ನು ಬರೆಸುವುದಿದ್ದರೆ  1-2 ತಿಂಗಳು ಮುಂಚಿತವಾಗಿಯೇ ಬರೆಯುವವರಲ್ಲಿ ನಿಮ್ಮ ಬರಹದ ಪ್ರತಿಗಳನ್ನು ನೀಡಿರಿ.

* 1/8 ಕ್ರೌನ್ , 1/8 ಡೆಮಿ , 1/9 ಡೆಮಿ , 1/6 ಡೆಮಿ ಮುಂತಾದ ಪುಸ್ತಕದ ಗಾತ್ರಗಳಿವೆ. ನಿಮಗೆ ಬೇಕಾದ ಗಾತ್ರವನ್ನು ನಿರ್ಧರಿಸಿ ಮತ್ತು  ಕೆಲವು ವಿಶೇಷ ಗಾತ್ರಗಳಿಗೆ ಕಾಗದ ಸುಮ್ಮನೆ ಕತ್ತರಿಸಿ ಹಾಳಾಗುತ್ತದೆ. ಅದನ್ನು ಅದಷ್ಟೂ ತಡೆಗಟ್ಟಿ.

* ನಿಮ್ಮ ಬರಹಗಳಿಗೆ ತಕ್ಕ ಮುಖಪುಟ ವಿನ್ಯಾಸವನ್ನು ಮಾಡಿಸಿಕೊಳ್ಳಿ. ತುಂಬಾ ಚೆನ್ನ್ಗಿ ವಿನ್ಯಾಸ ಮಾಡುವ ಕಲಾವಿದರು ನಮ್ಮಲಿ ಸಿಗುತ್ತಾರೆ. ಕನಿಷ್ಠ ರೂ.2000ಕ್ಕೆಲ್ಲಾ ಒಳ್ಳೆಯ ವಿನ್ಯಾಸ ನಿಮಗೆ ಸಿಗುತ್ತದೆ. ಅಥವಾ ನೀವೇ ಬಣ್ಣ ಕಾಗದ ಇತ್ಯಾದಿಗಳ ಕೋಲಾಜ್ ಮಾಡಿ ಸಿದ್ದಪಡಿಸಿ ಅದನ್ನು ಗ್ರಾಫಿಕ್ಸ್ ನವರಲ್ಲಿ ಕೊಟ್ಟು ನಿಮ್ಮ ಪುಸ್ತಕದ ಅಳತೆಗಿಂತ ಅರ್ಧ ಸೆಮಿ ಹೆಚ್ಚಾಗಿಯೇ PSD ಫೋಟೋಶಾಪ್ ಫೈಲ್ ಮಾಡಿಸಿಕೊಳ್ಳಿ

* ಮುಖಪುಟ-ಒಳಪುಟ ವಿನ್ಯಾಸ ಮತ್ತು ಬರಹಗಳು ಒಂದಕ್ಕೊಂದು ಪೂರಕವಾಗಿಯೇ ಇರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಎಲ್ಲವೂ ಏನೇನೋ ಹೇಳುತ್ತಾ ಆಭಾಸವಾಗಿಬಿಡುವ ಸಾಧ್ಯತೆಗಳಿವೆ.

*  ಸಿದ್ದವಾದ ಮುಖಪುಟದ PSD ಫೈಲ್ ಮತ್ತು ಬರಹಗಳ ಒಳಪುಟವಿನ್ಯಾಸವನ್ನು PDF ಫೈಲ್ ಮಾಡಿಕೊಂಡು ಬದ್ದತೆಯುಳ್ಳ ಒಳ್ಳೆ ಮುದ್ರಕರನ್ನು ಭೇಟಿಯಾಗಿ ದರವನ್ನು ಕುರಿತು ಚರ್ಚಿಸಿ.

* ಪುಸ್ತಕ ಮುದ್ರಣಕ್ಕೆ ಒಳ್ಳೆಯ ಗುಣಮಟ್ಟವನ್ನೇ ಆರಿಸಿ.
ಉದಾ: 70 GSM Maplitho ಕಾಗದ, ಮ್ಯಾಟ್ ಫಿನಿಷಿಂಗ್ ಇರುವ Multicolor  ಮುಖಪುಟವನ್ನು ಮಾಡಿಸಿಕೊಳ್ಳಿ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಗುಣಮಟ್ಟದ ಕಾಗದಕ್ಕೆ ಹೋಗಬಹುದು ಆದರೆ ಖರ್ಚು ಜಾಸ್ತಿಯಾಗುತ್ತದೆ.

ಕೆಳಗಿನದರದಲ್ಲಿ ಚೂರು ಹೆಚ್ಚು ಕಡಿಮೆಯಾಗಬಹುದು

70 GSM Maplitho - 4 color - 98/108 page - 1/8 ಕ್ರೌನ್ = ಕನಿಷ್ಠ ದರ ರೂ.18000
70 GSM Maplitho - 4 color - 98/108 page - 1/8 ಡೆಮಿ  = ಕನಿಷ್ಠ ದರ ರೂ.25000
70 GSM Maplitho - 4 color - 98/108 page - 1/9 ಡೆಮಿ  = ಕನಿಷ್ಠ ದರ ರೂ.23000
70 GSM Maplitho - 4 color - 98/108 page - 1/6 ಡೆಮಿ  = ಕನಿಷ್ಠ ದರ ರೂ.30000

* ಮುದ್ರಣಕ್ಕೆ ಕೊಟ್ಟ ಮೇಲೆ ಪೂರ್ಣಹಣವನ್ನು ಮುದ್ರಕರಿಗೆ ಪಾವತಿಸಿ. ಅದು ಒಳ್ಳೆಯ ಸಂಬಂಧವನ್ನು ಉಂಟು ಮಾಡುತ್ತದೆ. ಭಾಳಷ್ಟು ಪ್ರಕಾಶಕರು ಸರಿಯಾಗಿ ಹಣ ಪಾವತಿ ಮಾಡದೇ ಹೆಸರು ಕೆಡಿಸಿಕೊಂಡಿರುವುದೇ ಹೆಚ್ಚು :(  ಮಧ್ಯವರ್ತಿಗಳನ್ನು  ದೂರವಿಡಿ. ನೀವೇ ನೇರವಾಗಿ ಮುದ್ರಕರೊಂದಿಗೆ ಮಾತನಾಡಿ. ನಗದು ಹಣ ಪಾವತಿ ಮಾಡುವ ಬದಲು ಬ್ಯಾಂಕ್ , ಚೆಕ್ -ಡಿ‌ಡಿ ಮುಖಾಂತರ ಪಾವತಿ ಮಾಡಿ ಮತ್ತು ನಿಮ್ಮ ಮುದ್ರಣದ ಅವಶ್ಯಕತೆಗಳ ನಮೂದಾಗಿರುವ ( ಅಂದರೆ ಕಾಗದ - ಮುಖಪುಟ - ಸೈಜ್ ಗಳ ಕುರಿತ ಸ್ಪಷ್ಟ ಉಲ್ಲೇಖವಿರುವ) sale order ಅನ್ನು ಕೇಳಿ ಪಡೆದುಕೊಳ್ಳಿ. ಮುಂದೆ ಮೋಸ ಮಾಡಿದರೆ ಕಾನೂನು ಕ್ರಮ ಜರುಗಿಸಲು ಸಹಾಯವಾಗುತ್ತದೆ. ಮತ್ತು ಒಂದು ಬದ್ದತೆಯನ್ನು ಇಬ್ಬರಲ್ಲೂ ಉಂಟು ಮಾಡುತ್ತದೆ.

* ಪುಸ್ತಕವನ್ನು ISBN ನಲ್ಲಿ ರಿಜಿಸ್ಟರ್ ಮಾಡಬೇಕಿದ್ದರೆ 1-2 ತಿಂಗಳು ಮುಂಚಿತವಾಗಿಯೇ ನಿಮ್ಮ ಪುಸ್ತಕದ ಮುಖಪುಟದ ಪ್ರತಿಯೊಂದಿಗೆ ಕಲ್ಕತ್ತಾ ದಲ್ಲಿರುವ ಅದರ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿ ( ಈ ಅರ್ಜಿಯೂ ಇಂಟರ್ನೆಟ್ ನಲ್ಲಿ ಲಭ್ಯ. ಅದನ್ನು ಪ್ರಿಂಟ್ ತೆಗೆದು ವಿವರ ತುಂಬಿಸಿ ಮುಖಪುಟದ ಪ್ರತಿಯ ಜೊತೆ ಅವರ ವಿಳಾಸಕ್ಕೆ ಕಳುಹಿಸಿದರೆ ಸಾಕು. ಇದಕ್ಕೆ ಯಾವ ಶುಲ್ಕವೂ ಇಲ್ಲ.
ISBN ನಂಬರು ನಿಮಗೆ ಸಿಕ್ಕ ಮೇಲೆ ಅದನ್ನು ಪುಸ್ತಕದ ಮುಖಪುಟ ಮತ್ತು ಒಳಪುಟದಲ್ಲಿ ನಮೂದಿಸಿ.

* ISBN ಕಷ್ಟವೆನಿಸಿದರೆ ಮುದ್ರಣವಾದ ನಂತರದಲೇ ಬೆಂಗಳೂರಿನಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಹೋಗಿ ಪುಸ್ತಕದ 3 ಪ್ರತಿಗಳನ್ನು ಕೊಟ್ಟು ನಿಮ್ಮ ಪುಸ್ತಕದ ಕಾಪಿ ರೈಟ್ ಅನ್ನು ಕಾಯ್ದಿಸಿರಿಕೊಳ್ಳಿ.  ಇದಕ್ಕೆ ಯಾವ ಶುಲ್ಕವೂ ಇಲ್ಲ. ಉಚಿತ.

* ಗ್ರಂಥಾಲಯ ಇಲಾಖೆ ವರ್ಷಕ್ಕೆ ಎರಡು ಬಾರಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಸಲು ಅರ್ಜಿ ಕರೆಯುತ್ತದೆ. ಬಹುಶಃ ಜೂನ್ ಮತ್ತು ಜನವರಿಯಲ್ಲಿ. ಆವಾಗ ಅರ್ಜಿಯ ಜೊತೆಯಲ್ಲಿ ನಿಮ್ಮ ಪುಸ್ತಕದ ಮೂರು ಪ್ರತಿ ಹಾಗೂ ಕಾಪಿ ರೈಟ್ ಮಾಡಿಸಿದ ಸರ್ಟಿಫಿಕೇಟ್ ನ ನೆರಳಚ್ಚು ಪ್ರತಿ ( ಜೇರಾಕ್ಸ್ ) ಜೊತೆಗೆ ಸರಿಯಾದ ಸಮಯಕ್ಕೆ ಸಲ್ಲಿಸಿ. ಆಯ್ಕೆ ಗೊಂಡಲ್ಲಿ 300 ಪ್ರತಿಗಳನ್ನು ಪರಿಣಿತರು ನಿರ್ಧರಿಸಿದ ಬೆಲೆಯಲ್ಲಿ ಕೊಂಡುಕೊಳ್ಳುತ್ತಾರೆ.

ಉದಾ : ಈ ಬೆಲೆಯು ಕಾಗದ, ಮುದ್ರಣ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ. ಮತ್ತು ಒಂದು ಪುಟ ಇಂತಿಷ್ಟೂ ಎಂದು ನಿಗದಿ ಮಾಡಲಾಗುತ್ತದೆ. ಒಂದು ಅಂದಾಜು ಮಾಡುವುದಾದರೆ          
70 GSM Maplitho - 4 color - 108 page - 1/8 ಡೆಮಿ ಪುಸ್ತಕದ ಒಂದು ಪುಟಕ್ಕೆ 0.60 ಪೈಸೆ ಅಂದುಕೊಂಡರೆ  ರೂ. 64.80 ಯಂತೆ  

* ನಿಮಗೆ ಬೇಕಾದ ಪುಸ್ತಕದಂಗಡಿಗಳಿಗೆ ಕೊಡಬಹುದು. ಈಗೆಲ್ಲಾ ಶೇ. 40-50 ರಷ್ಟು ರಿಯಾಯಿತಿ ಕೇಳುವುದು ಸಾಮಾನ್ಯವಾಗಿದೆ. ಉಳಿದ ಹಣವು ಪುಸ್ತಕ ಮಾರಾಟವಾದ ನಂತರವೇ ನಿಮ್ಮನು ತಲುಪುವುದು.

* ಪುಸ್ತಕಗಳನ್ನು ಕಡಿಮೆ ಬೆಲೆಯಿಟ್ಟು ನೇರ ಮಾರಾಟ ಮಾಡಿ. ( ಕಾರ್ಯಕ್ರಮಗಳಲ್ಲಿ ಸ್ಟಾಲ್ ಹಾಕುವುದು, ಆನ್ಲೈನ್ ಮೂಲಕ ಮಾರುವುದು (pay u money ಮುಂತಾದ ವೆಬ್ಸೈಟ್ ಗಳು ಮತ್ತು flipkart , amazon, snapdeal ಮಳಿಗೆಗಳು)  ಓದುಗರಿಗೂ ಒಳ್ಳೆಯ ಪುಸ್ತಕ ಒಳ್ಳೆಯ ದರಕ್ಕೆ ಸಿಗುವಂತಾಗಲಿ.

ಕನ್ನಡ ಪುಸ್ತಕಗಳ ಪ್ರಕಟಣೆಗೆ ಉತ್ಸುಕರಾಗಿರುವ ಜನರಿಗೆ ನನ್ನ ಶುಭ ಹಾರೈಕೆಗಳು. ಒಳ್ಳೆಯದಾಗಲಿ. ಮಧ್ಯವರ್ತಿಗಳನ್ನು ನಂಬಿ ಮೋಸಹೋಗಬೇಡಿ. ವಿಚಾರಿಸಿ ಮುನ್ನಡೆಯಿರಿ.

- ಆರ್.ಪಿ.

Thursday, April 16, 2015

ದೇಶಭಕ್ತ ಸೂಳೆಮಗನ ಗದ್ಯಗೀತೆ ~ ಪಿ. ಲಂಕೇಶ್




ಸೂಳೆಮಕ್ಕಳೆ, ಥೂ! ಖದ್ದರಿನಲ್ಲಿ, ರೇಷ್ಮೆಯಲ್ಲಿ, ಹಡಬಿಟ್ಟಿ ತಲೆಯಲ್ಲಿ
ಎಕ್ಸಿಸ್ಟೆನ್ಷಿಯಲಿಸಂ, ಲಾರೆನ್ಸ್, ಗಟಾರ, ವಾಲ್ಮೀಕಿ, ಅಲೆಕ್ಸಾಂಡರ್, ಗೀತೆ
ಚಿಕ್ಕಪೇಟೆಯ ಇಕ್ಕಟ್ಟಿನಲ್ಲಿ, ಅಮ್ಮನ ಸ್ವಂತ ಸಾರ್ವಜನಿಕ ಕೋಣೆಯಲ್ಲಿ
ಚರ್ಚೆ, ಸಂಧಾನ, ನಿಧಾನ, ತುಮುಲ ಇತ್ಯಾದಿಯಲ್ಲಿ
ಯಾರು ಕಾಣದ ನಿಮ್ಮ ಕೊಲೆಮನೆಯಲ್ಲಿ 
ಕಂಡುಬಿಟ್ಟಾರೆಂಬ ಭಯದಲ್ಲಿ
ಕಂಡಿದ್ದಾರೆ ಬಿಡು ಎಂಬ ನಿರಾಳದಲ್ಲಿ
ಲಂಗೋಟಿ ಬಿಚ್ಚಿಕೊಂಡು ಹೊಲಿಸುತ್ತಾ ಹೋಗುವುದ,

ಥೂ,  ಸೂಳೆಮಕ್ಕಳೆ! ಮುಖ ಮುಚ್ಚಿ ಓಡಾಡುವ ಸುಖದ
ಅಮ್ಮ ಕೂತಲ್ಲಿ ಉದುರಿಸಿದ ನಿಮ್ಮ ಕೋಟಿಗಳ ಲೆಕ್ಕ ಹಾಕಿ
ಮಕ್ಕಳಿವರೇನಮ್ಮ? ಎಂಥ ಒದರಿ ಕಬ್ಬಿಗರ ಕುರುವಾಗಿ
ಆಹಾ! ಆರ್ಯಪುತ್ರ! ಎಂಥ ಸಂಸ್ಕೃತಿ, ಎಂಥ ಸ್ಥಿತಿ, ಅಂತ ಅಡಿಗ-
ಡಿಗೆ ಸ್ಟಂಟ್ ಹಾಕಿ ನಿಲ್ಲಬೇಕಿನ್ನಿಸುತ್ತೆ – ಆದರೆ,

ನಿಮ್ಮ ಅಮ್ಮನ್ನ ಹೊಗಳಿ ಪದ್ಮಭೂಷಣನಾಗಿ
ನರಸತ್ತು, ಪುಷ್ಪಾಲಂಕೃತನಾಗಿ, ಪೂರ್ಣದೃಷ್ಟಿ ಬೊಚ್ಚುಬಾಯಿ ಶುಂಠ
ಕೃತಾರ್ಥ ನರೆತ ಖಾಲಿತಲೆ ಆಗಬೇಕೆನ್ನಿಸುತ್ತೆ – ಆದರೆ,
ಕೆಚ್ಚಲು ತುಂಬಿ, ಚೌಕಾಶಿಯಲ್ಲಿ ಕೈ ಹಿಡಿದು ಸೀರೆ ಬಿಚ್ಚದೆ ಸತ್ತು
ಸತ್ತಿಲ್ಲವೆಂದು ಜೋಗ್, ಜೋಕ್, ಪಿಕ್ ನಿಕ್ , ಮಕ್ಕಳು, ಮರಿ ;
ಇವಳ ಮತ್ತು ತೊಡೆಗಳ ಮತ್ತು ಕನಸುಗಳ ಮತ್ತು ಸ್ತನಗಳ ಮತ್ತು
ದಕ್ಷಿಣೆಯ ಮತ್ತು ವರನ ಮತ್ತು ಮದುವೆಯ ಮತ್ತು
ಮತ್ತು ಮತ್ತು ಮತ್ತು

ಸೂಳೆಮಕ್ಕಳೆ ಸಾಂಪ್ರದಾಯಿಕ ಲಗ್ನ ಬಲ್ಲೆಯಾ ?
ಹೆದರಿಕೆಯ ಜೊತೆಗೆ ಉಕ್ಕುವ ಉತ್ಸಾಹ ಬಲ್ಲೆಯಾ ?
ಗೆದ್ದೆವು ಎನ್ನುವಷ್ಟರಲ್ಲಿ ತೊಡೆಯಲ್ಲಿ ಕುಣಿವ ಗುಟ್ಟ ಬಲ್ಲೆಯಾ ?
ಗುಟ್ಟನ್ನು ಉಳ್ಳವರ ಸೊಕ್ಕ ಬಲ್ಲೆಯಾ ? ಆದರೂ,

ಆಹಾ! ದೇಶ ಬಾಂಧವ, ನಿನ್ನ ಅಪ್ಪಿ ಕೊಂಡಾಡಲೆ!
ನಿನ್ನ ಕೂದಲು ಬಾಚಿ ಹೂಮಾಲೆ ಹಾಕಲೆ!
ವೀರಮಾತೆಯ ಆರ್ಯಸಂಸ್ಕೃತಿಯ ಕುಸುಮ! ಅನ್ನಲೆ!
ತಿಲಕವಿಟ್ಟು ಸಂತೋಷಪಡಲೇ!

ಸೂಳೆಮಗನೆ, ನಿನ್ನ ಕರೆದಾಗ ನನ್ನನ್ನೇ ಕರೆದಂತಾಗುತ್ತೆ.
ನೀನೆಂದೊಡೆ ನಿನ್ನ ಅಮ್ಮನ ನೆನಪಾಗುತ್ತೆ .
ನನ್ನ ಅಮ್ಮನ ನೆನಪಾಗುತ್ತೆ
ಸುಳ್ಳು ಶುರುವಾದದೊಡನೆ  ಯಾರೋ ಗೊಳ್ಳನೆ ನಕ್ಕು ಬೆವೆಯುತ್ತೆ.

ಈ ಗಂಟಿಗೇನನ್ನುವುದು?

ಕೈಯಲ್ಲಿ ಕೈಯಿಟ್ಟು ನಡೆಯೋಣವೆ?
ಸಂದೇಹದಿಂದ ಕಂಡವರ ಜಾತಕ ಓದೋಣವೆ?
ಜೇಬಲ್ಲಿ ಕೈಯಿಟ್ಟು ಸುಮ್ಮನೆ ಕೂಡೋಣವೆ?
ಮೀಸೆ ಕತ್ತರಿಸುತ್ತ ಅಥವಾ ಪದ್ಮಶ್ರೀ ಆಗುತ್ತ
ಅಥವಾ ಗೀತೆ ಓದುತ್ತ ಅಥವ ರಸ್ತೆಗಳ ಗುಡಿಸುತ್ತ
ಅಥವಾ

ಅನ್ನುತ್ತಿದ್ದಂತೆಯೇ ನಾಲಗೆ ನರೆಯುತ್ತೆ.
ಗಲ್ಲದ ಹಿಂದೆ ಕೂದಲು ನರೆಯುತ್ತೆ.
ಪದ್ಮಭೂಷಣನ, ವೀರಯೋಧನ, ಪ್ರಧಾನಿಯ, ಹಜಾಮನ
ಅವಳು, ತೊಡೆ, ಕೂದಲು ಎಲ್ಲ ನರೆಯುತ್ತೆ ;
ಚೆಡ್ಡಿಯ ಕೂದಲು ನರೆಯುತ್ತೆ.
ಎಲಿಸಬೆತ್ ಮತ್ತು ಟೇಲರ್ ಮತ್ತು ಮಾಲೀಕ, ಮಾಣಿ
ದೇವರು, ದೆವ್ವ, ಕೋಟು, ಲಂಗ, ಸಮವಸ್ತ್ರದ ಕೂದಲು ನರೆಯುತ್ತೆ.
ಸತ್ಯ, ಸುಳ್ಳು, ಅಕ್ಕರೆ, ಸಂಭ್ರಮ, ಗುಟ್ಟು
ಎಲ್ಲ ನರೆಯುತ್ತೆ.

ಅದಕ್ಕೆ ಹೇಳುತ್ತೇನೆ , ಅನುಜ : ನೀನಿನ್ನು ನಿನ್ನ ಬ್ಯಾಗ್ ಹಿಡಿದು ನಗುತ್ತ
ಕುಶಲ ವಿಚಾರಿಸುತ್ತ ಸಭ್ಯತೆ ಸೂಸುತ್ತ

ಇತ್ತ ಬಂದರೆ ನಿನ್ನ ಹಿಡಿದು ತೋರುತ್ತೇನೆ ;
ಪಾಪಚಿತ್ತದ ನರೆಯ, ನರೆತ ಗೀತೆ, ಗಟಾರವ,
ವರ್ಗವಿಲ್ಲದೆ, ಮತ್ತೆ ಪ್ರಾಕ್ಸಿಯಿಲ್ಲದೆ, ಮತ್ತೆ ಕರ್ಮದ ಗಾಲಿಯಿಲ್ಲದೆ

ಎಲ್ಲ ಬೆಳ್ಳಗಾದ, ಬಿರುಕಾಗಿ ಬೂದಿಯಾದ,  ಗತಿಯ.

ಅಥವಾ ಬೆಳಗಾಗುವ, ಗಿಡಗಂಟೆಗಳ ಕೊರಳಾಗುವ,
ಮತ್ತೆ ಕತ್ತಲಾಗುವ, ಹಾಗೇ ಮುಗಿದು ಮೊಗ್ಗೆಯಾಗುವ
ಸ್ಥಿತಿಯ.   





 ~ ಪಿ. ಲಂಕೇಶ್         


Wednesday, October 8, 2014

ತೂಗಿಬಿಟ್ಟ ಪಾಪದ ಬಟ್ಟಲು



ನೆತ್ತಿಯ ಮೇಲೆ ಒಂದು ಸಣ್ಣ ರಂಧ್ರ ಕೊರೆದು
ಒಂದು ಬಟ್ಟಲು ತೂಗಿ ಬಿಡಲಾಗಿದೆ.
ಐದು ಕೈಗಳು ಇಹದ ಕಡಲಿನಲಿ ಅಪ್ಪಳಿಸುವ
ಉಪ್ಪಿನ ನೀರ ಮೊಗೆಮೊಗೆದು ತುಂಬಿಕೊಳ್ಳುತ್ತಿವೆ.
ಎಷ್ಟು ಧಾರಾಳ
ಎಷ್ಟು ಧಾವಂತ
ಎಷ್ಟು ದಾಹ
ಬಟ್ಟಲ ಹೊಟ್ಟೆ ತುಂಬುತ್ತಿಲ್ಲ
ಮೊಗೆದು ಸುರಿದದ್ದಷ್ಟೂ ನಿಲ್ಲುತ್ತಿಲ್ಲ

ಪಂಪು ಪೈಪು ಜೋಡಿಸಿ ಕಡಲನೇ
ಬಟ್ಟಲಿಗೆ ಬೋರಲು ಇಡಲಾಯಿತು
ನೆತ್ತಿಯ ಪಾದ ನಿಂತಿದ್ದ ಹಾಯಿದೋಣಿ ತಳಕ್ಕೆ ಬಿದ್ದು ಚೂರಾಯಿತು.
ಬಟ್ಟಲಿನ್ನೂ ಖಾಲಿಯೇ!
ದೋಣಿಯ ಕಟ್ಟಿಗೆ ಸುಟ್ಟು ಬೆಂಕಿಯ ತುರುಕಿ
ಮೂಗುಗಳ ಹಿಡಿದು ಜೀವದುಸಿರುಗಳ ಅದುಮಿ
ಬ್ರಹ್ಮಾಂಡವನೇ ಹಿಡಿದು ಬಟ್ಟಲ ಸುರಿಯಲು, ಏನೂ ಆಗಲಿಲ್ಲ.. ತುಂಬಲಿಲ್ಲ

ದಾರಿಹೋಕ ತಿರುಕನೊಬ್ಬ
ತೂಗಿಬಿಟ್ಟ ಪಾಪದ ಬಟ್ಟಲು ರಾದ್ಧಾಂತವ ಕಂಡು
ಜೋಳಿಗೆಯಿಂದ
ಅರ್ಧ ಎಂಜಲು ಹುಣಸೆಹಣ್ಣು ಹಾಕಿದ
ಬಟ್ಟಲು ಥಟ್ಟನೆ ನೆಲಕ್ಕೆ ಬೋರಲು ಬಿದ್ದಿತು
ಬ್ರಹ್ಮರಂಧ್ರದಲ್ಲಿ ಸಹಸ್ರಾರದ ಹೂ ಹುಟ್ಟಿ
ಸರ್ವವೂ ಸ್ವಸ್ಥಾನ ಸೇರಿಕೊಂಡವು. ~

ಮಠದ ಬೆಕ್ಕು ಮತ್ತು ದೇವರ ಸಾವು

ಭವದ ಲಜ್ಜೆಯ ತೊರೆದು
ಇಹದ ಕಾಮವ ಹಳಿದು, ಒಂದೊಂದೂ ಅರಿವೆಯ
ಅರಿವುಗಳಲಿ ಹರಿದುಹಾಕಿ
ಬೆತ್ತಲಾಗಬೇಕಿತ್ತು ಬಯಲಿನಲಿ ಗುರುವು

ಕುಟೀಚಕನ ಸುತ್ತ ಕೋಟೆಯ ಕಾವಲು
ನಿಂತು ಏನ ಕಾಯಬೇಕಿತ್ತು? ಒಳಗೆ ಏನು ನಡೆದಿತ್ತು !
ವಿರಕ್ತನ ಮೈಯಲ್ಲಿ ಯಾವ ರಿಕ್ತಿಯು ಸುಳಿದಿತ್ತು ?
ಕಾಣಬೇಕಿತ್ತು ತೆರೆದಪರದೆಯಲಿ ಗುರುವು

ಎದೆಯಲ್ಲಿ ಯೋಗಮುದ್ರೆಯ ಹೊತ್ತ ಮೇಲೆ
ಸ್ತನ ಕಂಡು ಚಿತ್ತದಲಿ ಸ್ಥಾನಪಲ್ಲಟಗೊಂಡರೆ, ಅಲ್ಲಿ
ವಿಷದ ಕಳ್ಳಿಸಾಲು ಬೆಳೆದು ರೋಗದ ನಾಯಿ ಹೆಣ ಬಿದ್ದುದಲ್ಲದೇ
ಮತ್ತಾವ ವಾಸನೆ ಇರದು.
ಅರಳಬೇಕಿತ್ತು ಗಂಧದಹೂವಾಗಿ ಗುರುವು

ಅದಾಗದೇ

ನೆಲಕೆ ಕೃಷ್ಣಾಜಿನ, ಮೈತುಂಬಾ ಬೆಚ್ಚಗೆ ಕಷಾಯವಸ್ತ್ರ
ಮಿನುಗುವ ರುದ್ರಾಕ್ಷಿ ಸ್ಪಟಿಕ ಮಣಿಮಾಲೆಗಳು
ಬೆಳ್ಳಿಯ ಪಾದುಕೆಯ ಮೇಲೆ ಚಿನ್ನದ ಅಂಗುಷ್ಠ
ಕೈಯಲ್ಲಿ ಜಪಮಣಿ, ಬಾಯಿತುಂಬಾ ಧರ್ಮಮಂತ್ರ
ದೀನತೆಯನ್ನು ಉದ್ದೀಪಿಸುವ ಕ್ಷುದ್ರ ಮೊಗಮಂದಹಾಸ
ಅಯ್ಯಾ ..
ಜಂಗಮರ ಮಠದಲ್ಲಿ ಬೆಕ್ಕನ್ನು ಸಾಕಲಾಗಿ
ಆಕಳ ಕೆಚ್ಚಲಿಗೆ ಸೋಂಕು ತಾಗಿತು
ಮಕ್ಕಳು ಹಸಿದುವು, ಪ್ರಸಾದ ರುಚಿಸದಾಯಿತು.
ಕೆಚ್ಚಲ ತುಂಬಾ ಉಗುರು ಚುಚ್ಚಿದ ಗುರುತುಗಳಲಿ ರಕ್ತ ಒಸರುತ್ತಿರಲು
ಯಾಜಕರು ಬಲಿಗೆ ಸಿದ್ದರಾದರು, ಭಕ್ತರು ಉಮೇದಿನಲಿ
ಸಾಕ್ಷಿಯಾದರು.

ಇದಾದ ಮರುಕ್ಷಣ ದೇವರುಗಳು ಸತ್ತುಹೋದ
ಸುದ್ದಿಯೊಂದು ಬಲಿಪೀಠದ ಕೆಳಗೆ
ಬಿಸಿ ರಕ್ತದಂತೆ ಹರಿಯಿತು! ~

Monday, May 26, 2014

ಬಿಡಿ ಹೂ ~ 26

ಹೂಗಳು ಹೊದ್ದ 
ಇಹದ ಪರಿಮಳವ 
ಬಯಲಗಾಳಿ ಕದ್ದ ಮೇಲೆ
ದುಂಬಿಗಳ ಕಣ್ಣು 
ಹೆಣ್ಣಿನ ಮುಂಗುರುಳ ಮೇಲೆ !

ನಾನು ಆಲಿಕಲ್ಲು



ನಾನು
ಮುಂಗಾರು ಮರೆತು
ಎಸೆದು ಹೋದ ಆಲಿಕಲ್ಲು.

ಕೆಳಕ್ಕೆ ಬಿದ್ದಾಗ
ಪುಟ್ಟ ಮಕ್ಕಳ ಬೊಗಸೆ ತುಂಬಿಕೊಳ್ಳುತ್ತೇನೆ
ಮನುಷ್ಯನ  ಎದೆಯಂಗಳದಲ್ಲಿ
ನೆನಪಾಗಿ ಕರಗುತ್ತೇನೆ!

ಆದರೂ ನಾ ಬರುವುದನ್ನು
ದರಿದ್ರಕಾಲವೆನ್ನಲಾಗಿದೆ .
ಆದರೂ ನಾ ಬಂದೇ ಬರುತ್ತೇನೆ. 
ಎಲ್ಲರಂತೆ ನನಗೂ ಬದುಕಲು ರಹದಾರಿಯಿದೆ. 

ರತ್ನಾವಳಿ ~ 2

ಹೇಳಿದ್ದು ಇಷ್ಟೇ
ಯಾವೊಬ್ಬನ ಮುಖವನ್ನು
ಕನ್ನಡಿಯನ್ನು ಆಧರಿಸಿ ನೋಡಲಾಗುತ್ತದೆಯೋ
ನಿಜದಲ್ಲಿ ಅದು ಅವನದ್ದಲ್ಲ!

~ ರತ್ನಾವಳಿ , ನಾಗಾರ್ಜುನ | ಕ್ರಿ. ಶ. 150