ಹಂದಿಮಾಂಸವನ್ನ ಸಣ್ಣಗೆ ಉದ್ದಕೆ ಒಳ್ಳೆ ಈರುಳ್ಳಿ ಹಚ್ಚಿದಂತೆ ಹಚ್ಚಿ ಹುರಿದಿದ್ದ ಫ್ರೈಡ್ ರೈಸ್ ತಿನ್ನೋವಾಗ ಇದೇನು ಹೊಸ ತರಹ ಇದೆಯಲ್ಲ! ಇದು ತರಕಾರಿಯಾ? ಮಾಂಸವಾ? ಯಾವ ಮಾಂಸ?! ಇತ್ಯಾದಿ ಪ್ರಶ್ನೆ ಏಳ್ತಾ ಇದ್ರು ಹಸಿದ ಹೊಟ್ಟೆಗೆ ಉತ್ತರವಂತೂ ಸದ್ಯಕ್ಕೆ ಬೇಕಿರಲಿಲ್ಲ. ಅಷ್ಟರಲ್ಲೇ ಮಧ್ಯೆ ಬೆರಳು ಗಾತ್ರದ ಸುಂಡಕಾಯಿ ( ಒಳಮೈನ ಕೊಬ್ಬಿನ ಭಾಗ) ಸಿಕ್ಕಿತು. ಆಹಾ! ಇದು ಹಂದಿಮಾಂಸವೇ ಎಂದು ಒಳಗೇ ನಕ್ಕೊಂಡವನೇ ಅದನ್ನು ಮುಗಿಸಿದ ಮೇಲೆ ಇನ್ನೊಂದು ಸಣ್ಣ ಕವರ್ ತೆಗೆದರೆ ಅಯ್ಯೋ ಚಿಲ್ಲಿ ಸಾಸ್ ಇದ್ರಲ್ಲಿ ಇತ್ತು. ಅದೂ ಮೊದಲೇ ಸಿಕ್ಕಿದ್ರೆ ರುಚಿ ಸ್ವಲ್ಪನಾದ್ರೂ ಹಿಡಿಸುತ್ತಿತ್ತೋ ಏನೋ. ಅಸಲಿಗೆ ನನಗೆ ಫ್ರೈಡ್ ರೈಸ್ ಅಷ್ಟೇನೂ ಇಷ್ಟವಾಗಲಿಲ್ಲ. ಅದಕ್ಕೆ ತಕ್ಕ ಉಪ್ಪು - ಖಾರ - ಮಸಾಲೆಯೇ ಇಲ್ಲ. ಈಶಾನ್ಯ ಭಾರತದ ಅಡುಗೆ ಮಸಾಲೆ ಖಂಡಿತ ನನಗೆ ಇಷ್ಟವಾಗಲಿಲ್ಲ. ಅದೊಂತರ ಒಗರು ಹುಳಿ. ದಕ್ಷಿಣದ ಘಂ ಎನ್ನುವ ಮಸಾಲೆಯೇ ನನಗೆ ಪ್ರಿಯ.
ಈ ನಡುವೆ ಪ್ರಯಾಣ -ಪರಿಪಾಡಲು ಮಾತುಕತೆ ಸಾಗಿತ್ತು. ದೇವೇಂದ್ರರಿಗೆ ಆಫೀಸಿನ ಕೆಲಸವಿದ್ದುದರಿಂದ ಶಿಲ್ಲಾಂಗಿನ ಬಹುಮುಖ್ಯ ಆಕರ್ಷಣೆಗಳಲ್ಲಿ ಒಂದಾದ '' ಡಾನ್ ಬಾಸ್ಕೋ ಮ್ಯೂಸಿಯಂ '' ನೋಡಿಬನ್ನಿ ಎಂದು ಕಳುಹಿಸಿಕೊಟ್ಟರು. ಅದಾಗಲೇ ನಾನು ಶಿಲ್ಲಾಂಗ್ ನಗರಕ್ಕೆ ಬರುತ್ತಿದ್ದಂತೆ ಯಾವ ರಸ್ತೆಯಲ್ಲಿ ನೋಡಿದರೂ ಈ ಮ್ಯೂಸಿಯಂ ಗೆ ಹೋಗುವ ದಾರಿ ತೋರುವ ಬೋರ್ಡ್ ಗಳನ್ನು ನೆಟ್ಟಿರುವುದನ್ನು ನೋಡಿದ್ದೆ.
ಗಂಟೆ ಸಂಜೆ 4.00 ಆಗಿತ್ತು. ಮ್ಯೂಸಿಯಂ ನೋಡುವ ಸಮಯ 5.30 ಕ್ಕೆ ಕೊನೆ. ಮೇಘಾಲಯ ಹೈಕೋರ್ಟ್ ಎದುರಿನಿಂದ ಮಾವ್ಲೈನಲ್ಲಿರುವ ಮ್ಯೂಸಿಯಂಗೆ ಶಿಲ್ಲಾಂಗಿನ ಏರು-ಇಳಿಜಾರಿನ ಕಡಿದಾದ ರಸ್ತೆಗಳು ಮತ್ತು ಸೈಲೆಂಟ್ ಟ್ರಾಫಿಕ್ ನ ( ಇಲ್ಲಿ ವಿಪರೀತ ಟ್ರಾಫಿಕ್ ಆದರೆ ಜನ ಹೆಚ್ಚು ಸದ್ದು ಮಾಡುವುದಿಲ್ಲ, ತುಂಬಾ ಅಗತ್ಯ ಬಿದ್ದರೆ ಮಾತ್ರ ಒಂದು ಸಲ ಹಾರ್ನ್ ಹೊಡಿಯಬಹುದಷ್ಟೇ) ನಡುವೆ ಹೋಗಲು ಕನಿಷ್ಠವೆಂದರೂ 20-30 ನಿಮಿಷ ಬೇಕೇಬೇಕು.
ಸಂಜೆ 4.40 ಕ್ಕೆ ಮ್ಯೂಸಿಯಂ ಮುಟ್ಟಿದೆ. ಪ್ರವೇಶ ಕೌಂಟರ್ ನಲ್ಲಿ ಟಿಕೆಟ್ ಕೊಳ್ಳಲು ಹೋದಾಗ ಆತ ಯಾವ ರಾಜ್ಯ ಸಾರ್ ಅಸ್ಸಾಮ್ ಅಥವಾ ಬಂಗಾಳ ಅಂದ. ನಾನು ' ಇಲ್ಲಪ್ಪಾ ಕರ್ನಾಟಕ' ಎಂದೆ. ಆತ ನಗುತ್ತಾ ಟಿಕೆಟ್ ಕೊಟ್ಟು ' ಏಳು ಅಂತಸ್ತಿನ ಮ್ಯೂಸಿಯಂ ನೋಡಲು ಕನಿಷ್ಟವೆಂದರೂ ಮೂರು ಗಂಟೆಕಾಲ ಬೇಕು, ನಿಮಗೆ ಇರುವುದು 40 ನಿಮಿಷಗಳು ಮಾತ್ರ. ಬೇಗನೆ ನೋಡಿ ಬನ್ನಿ. ಕಡೆಗೆ ಎಲ್ಲೆ ಇದ್ದರೂ 5.30ಕ್ಕೆ ಹೊರ ಬಂದುಬಿಡಿ ದಯವಿಟ್ಟು' ಎಂದು ವಿನಂತಿಸಿದ. ಒಳಗೆ ದಾರಿ ತೋರಲು ಮತ್ತೊಬ್ಬ ಮೇಲ್ವಿಚಾರಕ ನನ್ನೊಂದಿಗೆ ಬಂದ.
ಹೊರಗಿನಿಂದ ನೋಡಿದರೆ ಚೂಪು ಮೊನೆಯ ಎಲೆಯಾಕಾರದ ಪುಟ್ಟದೊಂದು ಕಟ್ಟಡದಂತೆ ಕಾಣುವ ಈ ಮ್ಯೂಸಿಯಂ ಏಳು ಅಂತಸ್ತುಗಳನ್ನು ಹೊಂದಿದೆ ಎಂದು ನಂಬುವುದು ಭಾಳ ಕಷ್ಟ! ಒಳಾಂಗಣ ಪ್ರವೇಶ ಮಾಡುವವರೆಗೂ ಈಶಾನ್ಯ ಭಾರತದ ವಿವಿಧ ಬುಡಕಟ್ಟಿನ ಜನ ಪ್ರತಿಮೆಗಳನ್ನು ಎರಡೂ ಬದಿಗೂ ನಿಲ್ಲಿಸಿದ್ದರು ಅದೇನು ಅಷ್ಟು ಆಕರ್ಷಕ ಎನಿಸಲಿಲ್ಲ ಮೊದಲಿಗೆ ಆದರೆ ಹೊರಗೆ ಬರುವಾಗ ಅದರ ಮಹತ್ವ ತಿಳಿಯಿತು.
ಒಳಾಂಗಣ ಮೊದಲಲ್ಲಿ ಮ್ಯೂಸಿಯಂನ ಆಡಳಿತ ಮತ್ತು ಕೆಲವು ಕರಕುಶಲ ವಸ್ತುಗಳ, ಪೋಟೋಗಳ ಮಾರಾಟ ಕೇಂದ್ರವಿದೆ. ಇಲ್ಲಿಯವರೆಗೂ ಜೊತೆಗೆ ಬಂದ ಮೇಲ್ವಿಚಾರಕ '' ನಿಮಗೆ ಸಮಯ ಕಡಿಮೆ ಇರುವುದರಿಂದ ಮೊದಲು ನೆಲಮಹಡಿಯಿಂದ ಮೊದಲು ಶುರು ಮಾಡಿ, ಫೋಟೋ ತೆಗೆದುಕೊಳ್ಳಲು ಇಲ್ಲಿ ಅವಕಾಶವಿದೆ. ಅದಕ್ಕೆಂದು ನೂರು ರೂಪಾಯಿಗಳ ಶುಲ್ಕಭರಿಸಬೇಕು, ಆದರೆ ನಿಮಗೆ ಸಮಯದ ಅವಕಾಶವೇ ಇಲ್ಲದಿರುವುದರಿಂದ ಅದನ್ನು ತೆಗೆದುಕೊಳ್ಳಲ್ಲು ಹೋಗಬೇಡಿ. ನೋಡಿ ಬನ್ನಿ '' ಎಂದು ಹೇಳಿ ನಕ್ಕು ಹೊರಟೇ ಬಿಟ್ಟ.
ನಾನು ಕೂಡ ಮ್ಯೂಸಿಯಂನಲ್ಲಿ ಎಂಥ ಪೋಟ ತೆಗೆಯೋದು ಎಂದು ನಿರ್ಲಕ್ಷ್ಯ ಮಾಡಿದೆ. ಅದೇ ನಾನು ಮಾಡಿದ ದೊಡ್ಡ ತಪ್ಪು. ಇದು ಎಷ್ಟು ಅಪರೂಪದ ಮ್ಯೂಸಿಯಂ ಎಂದು ನನಗರಿವಿರಲಿಲ್ಲ. ಏಳು ಅಂತಸ್ತಿನ ಕಟ್ಟಡದ ಮಧ್ಯ ಭಾಗದಲ್ಲಿ ನಾನಿದ್ದೆ. ಇಲ್ಲಿಯ ಭೂಪ್ರದೇಶ ಸಂಪೂರ್ಣ ಬೆಟ್ಟಗಳಿಂದ ಕೂಡಿರುವುದರಿಂದ ಪ್ರವೇಶದ್ವಾರ ರಸ್ತೆ ಮಟ್ಟದಲ್ಲಿದ್ದರೆ, ಕಟ್ಟಡ ಮಾತ್ರ ಅರ್ಧ ಕೆಳಕ್ಕೆ ಇನ್ನರ್ಧ ಮೇಲುಭಾಗಕ್ಕೆಕ್ಕೆ ಇದೆ. ದಡದಡನೆ ಕೆಳಕ್ಕೆ ಇಳಿಯ ತೊಡಗಿದೆ. ಮನಸ್ಸಿನಲ್ಲಿ ''ಬೇಗ ಬೇಗ'' ಎನ್ನುವ ಆಶರೀರವಾಣಿ ಸದ್ದು. ನಾನು ಭೇಟಿಯಿತ್ತ ಸಮಯ ವಾರದ ಮಧ್ಯದಿನದ ಸಂಜೆಯಾಗಿದ್ದರಿಂದಲೋ ಏನೋ ಜನವೇ ಇರಲಿಲ್ಲ ಇದ್ದ ಮೂರು ನಾಲ್ಕು ಮಂದಿ ಆಗಲೇ ನೋಡಿ ಮುಗಿಸಿ ವಾಪಸು ಬರ್ತಾ ಇದ್ದರು. ಮೆಟ್ಟಿಲುಗಳನ್ನು ಇಳಿದರೆ ಎಲ್ಲ ಕೋಣೆಗಳು ಕತ್ತಲಿನಿಂದ ಕೂಡಿದ್ದವು. ಇದೇನಪ್ಪ ಇಲ್ಲಿ ಲೈಟೇ ಇಲ್ಲವಲ್ಲ ಎಂದು ಕೊಂಡೆ ಒಳಗೆ ಒಂದು ಹೆಜ್ಜೆ ಇಟ್ಟೆ . ಥಟ್ಟನೆ ಲೈಟುಗಳು ಹೊತ್ತಿಕೊಂಡವು. ಎಲ್ಲ ಕೋಣೆಗಳಲ್ಲೂ ಇದೇ ತರಹದ ವ್ಯವಸ್ಥೆ ಮಾಡಲಾಗಿತ್ತು. ವೀಕ್ಷಕರು ಒಳಗೆ ಬಂದಾಗ ಮಾತ್ರ ಹೊತ್ತಿಕೊಳ್ಳುವ ಲೈಟುಗಳು ಹೊರಗೆ ಹೋದ ಕೆಲವೇ ಕ್ಷಣಗಳಲ್ಲಿ ಆರಿಹೋಗುತ್ತಾ ಇದ್ದುವು.
ಸ್ವಲ್ಪವೇ ಸಮಯವಿದ್ದುದರಿಂದ ನಾನು ಬೇಗ ಬೇಗ ಮುಂದೆ ಹೋಗತೊಡಗಿದೆ. ಆದರೆ ಮ್ಯೂಸಿಯಂನ ಸಂಗ್ರಹ ಹಾಗೆ ಹೋಗಲು ಬಿಡುತ್ತಲೇ ಇರಲಿಲ್ಲ. ಮೊದಲಿಗೆ ಏನೋ ಒಣ ಭಣಭಣ ಎನ್ನುತ್ತಿದ ಮ್ಯೂಸಿಯಂಗೆ ಜೀವ ಬಂದಂತೆ ಭಾಸವಾಗ ತೊಡಗಿತು. ಈಶಾನ್ಯ ಭಾರತದ ದಿಕ್ಕು ದಿಕ್ಕುಗಳಲ್ಲಿರುವ ಬೇರೆ ಬೇರೆ ಬುಡಕಟ್ಟುಜನರು ಅವರ ಉಡುಪು - ಬೇಟೆ - ಮನೆ - ಆಯುಧ , ಬದುಕು ಎಲ್ಲವನ್ನೂ ಪ್ರತಿನಿಧಿಸುವ ವಸ್ತುಗಳ ಅಗಾಧ ಸಂಗ್ರಹ, ಅವುಗಳ ವಿವರಣೆ. ಕಾಲಾನುಕ್ರಮದಲ್ಲಿ ಸರಿಯಾದ ಜೋಡಣೆ. ಬೇರೆ ಬೇರೆ ಬುಡಕಟ್ಟು ಜನರ ಜೀವವೈವಿಧ್ಯತೆಯ ಲಕ್ಷಣಗಳು, ಮುಖಚರ್ಯೆಗಳು, ಅವರ ಧಾರ್ಮಿಕ ನಂಬಿಕೆಗಳು, ಅವನ್ನು ಸೂಚಿಸುವ, ಬೇರೆ ಬೇರೆ ಆಚರಣೆಗಳ ಸಾಮಗ್ರಿಗಳು - ವಿಧಿವಿಧಾನಗಳ ಪ್ರತಿರೂಪಗಳು. ಬೇರೆ ಬೇರೆ ಲೋಹದ ಸಾಮಗ್ರಿಗಳು ಮತ್ತು ಮಣ್ಣಿನ ಮಡಕೆಗಳು ಅವುಗಳ ಮೇಲಿನ ಚಿತ್ತಾರ, ನೇಯ್ಗೆ ಅದಕ್ಕೆ ಬಳಸುವ ಹತ್ತಿ, ಉಣ್ಣೆ ಇತ್ಯಾದಿ, ಪ್ರತಿ ಬುಡಕಟ್ಟು ಕೂಡ ಈ ನೇಯ್ಗೆ ಬಟ್ಟೆಯಲ್ಲಿ ಹೆಣೆಯುವ ಅವರದೇ ಆದ ಕಲೆ. ಬಣ್ಣದ ಚಿತ್ತಾರಗಳನ್ನ ಹೊಂದಿವೆ. ಈ ಭಾಗದ ಜನರು ಹೆಚ್ಚು ಆಧರಿಸಿದ್ದು ಬಿದಿರನ್ನು. ಬಿದಿರಿನಿಂದ ಇಲ್ಲಿನ ಬುಡಕಟ್ಟು ಮಾಡುತ್ತಿದ್ದ ನೂರಾರು ಸಾಧನಗಳು ಇಲ್ಲಿ ನೋಡಲು ಲಭ್ಯ. ಮೀನು ಹಿಡಿಯುವ ಕುಣಿಕೆಗಳೇ ಅದೆಷ್ಟೋ ಹತ್ತಾರು ವಿನ್ಯಾಸದಲ್ಲಿ, ಗಾತ್ರದಲ್ಲಿ ಇವೆ.
ನನ್ನನ್ನು ಬೆರಗಾಗಿಸಿದ್ದು ಎಂದರೆ ಬಿದಿರಿನ ಸಂಗೀತ ಸಾಧನಗಳು ಏಕತಾರಿಯನ್ನು , ವೀಣೆಯನ್ನು ಹೋಲುವ ಮಧ್ಯಮಗಾತ್ರದ ಈ ಸಾಧನಗಳನ್ನು ನೋಡಿದರೆ ಇಲ್ಲಿನ ಪೂರ್ವಿಕರಿಗೆ ಸಂಗೀತದ ಮೇಲೆ ಅದೆಷ್ಟು ಪ್ರೀತಿ ಇತ್ತು ಎಂದು ತಿಳಿಯುತ್ತದೆ.
19 ನೇ ಶತಮಾನದ ಕೊನೆಯ ಭಾಗದವರೆಗೂ ಈಶಾನ್ಯ ಭಾರತದ ಜನ ಹೇಗೆ ಬದುಕಿರಬಹುದು ಎನ್ನುವ ಸಂಕ್ಷಿಪ್ತ ನೋಟ ಈ ಇಡೀ ಮ್ಯೂಸಿಯಂ ನೋಡುವುದರಿಂದ ನಮಗೆ ಸಿಗುವುದಂತೂ ಖಂಡಿತ. ಇದಿಷ್ಟೂ 5 ಅಂತಸ್ತುಗಳಲ್ಲಿ ಹರಡಿಕೊಂಡಿದ್ದರೆ, ಮೇಲಿನ ಎರಡು ಅಂತಸ್ತುಗಳಲ್ಲಿ ಈ ಭಾಗಕ್ಕೆ ಕ್ರೈಸ್ತ ಧರ್ಮದ ಆಗಮನ, ಬುಡಕಟ್ಟು ಜನರ ಮತಾಂತರ, ಅವರಿಗೆ ಶಿಕ್ಷಣ, ನಾಗರೀಕ ಜೀವನದ ಪರಿಚಯ ಇತ್ಯಾದಿಗಳ ಜೊತೆಗೆ ಸ್ವಲ್ಪ ಅತಿರೇಕವೆನಿಸುವ ಕ್ರೈಸ್ತ ಧರ್ಮ ಕುರಿತ ವಿವರಣೆಗಳ ಭಿತ್ತಿಪತ್ರಗಳೂ, ಪ್ರತಿರೂಪಗಳೂ ಇವೆ. ಈ ಬಗ್ಗೆ ನಿರ್ಲಕ್ಷ್ಯವಹಿಸುವುದು ಉತ್ತಮ. ಉಳಿದಂತೆ ಈಶಾನ್ಯ ಭಾರತದ ಪೂರ್ವದ ಇತಿಹಾಸ, ಪರಿಸರ, ಸಾಮಾಜಿಕ ಜೀವನ ಕುರಿತಂತೆ ಈ ಮ್ಯೂಸಿಯಂನಲ್ಲಿರುವ ಅಮೋಘ ಸಂಗ್ರಹ, ಅವುಗಳ ನಿರ್ವಹಣೆ ಅನುಕರಣೀಯ.
ಅಂತೂ ಇಂತೂ ಏಳನೆಯ ಅಂತಸ್ತಿನ ಮಧ್ಯಭಾಗಕ್ಕೆ ಹೋಗುವುದರೊಳಗೆ ಸಮಯ ಮುಗಿದಿತ್ತು. ಕಡೆಯದಾಗಿ ಟೆರೇಸಿನಲ್ಲಿ ನಿಂತು ಇಡೀ ಶಿಲ್ಲಾಂಗ್ ಅನ್ನು ನೋಡುವ ಆಕಾಶನಡಿಗೆ (Skywalk) ಭಾಗ್ಯ ಮಾತ್ರ ತಪ್ಪಿಹೋಯಿತು.
ವಾಪಸು ಹೊರಗೆ ಬಂದಾಗ ಇಡೀ ಮ್ಯೂಸಿಯಂ ''ಈಶಾನ್ಯ ಭಾರತ'' ಕುರಿತ ಒಂದು ಸ್ಪಷ್ಟವಾದ ತಾತ್ವಿಕ ಪರಿಕಲ್ಪನೆಯನ್ನು ನನಗೆ ಒದಗಿಸಿತ್ತು. ಅಲ್ಲಿಗೆ ಹೋದವರು ಖಂಡಿತ 'ಡಾನ್ ಬಾಸ್ಕೋ ಮ್ಯೂಸಿಯಂ' ನೋಡಲೇ ಬೇಕೆಂದು ನನ್ನ ಆಗ್ರಹವು.
ವಾಪಸು ಲಾಯಿಮುಕ್ರದಲ್ಲಿರುವ ಲಿಂಡ್ ಹರ್ಸ್ಟ್ ಎಸ್ಟೇಟಿನ ಬ್ರಿಟೀಷರ ಕಾಲದ ಬಂಗಲೆಗೆ ಬಂದು ವಿರಮಿಸಿದೆ. ಬೆಂಗಳೂರಿನಿಂದ ಶಿಲ್ಲಾಂಗ್ ಪ್ರಯಾಣ, ಮ್ಯೂಸಿಯಂ ಸುತ್ತಿದ ಚೂರು ಸುಸ್ತಿಗೆ ಒಳ್ಳೆಯ ಬಿಸಿನೀರ ಸ್ನಾನ ಮುಗಿಸಿ ಗೆಳೆಯನೊಂದಿಗೆ ಊಟಕ್ಕೆ ಹೊರಗೆ ಹೊರಟೆ. 'ಕೆಫೆ ಶಿಲ್ಲಾಂಗ್' ನಲ್ಲಿ ಸದಾ ಸಂಗೀತದ ಗುಂಗು ಇರುತ್ತದಯೆಂತೆ. ನಾವು ಹೋದಾಗ ಯಾಕೋ ಪ್ರಶಾಂತವಾಗಿತ್ತು. ಒಂದು ಬಟ್ಟಲು ಅನ್ನ, ಒಂದು ಹಿಡಿಯಷ್ಟು ಹಸಿ ತರಕಾರಿ, ಸುಟ್ಟ ಪಂದಿಗೊಜ್ಜು ತಿಂದು ಶಿಲ್ಲಾಂಗ್ ಬೀದಿಗಳಲ್ಲಿ ಅಡ್ಡಾಡುತ್ತಾ ಮೇಘಾಲಯದ ಜನ, ಭಾಷೆ, ಸರ್ಕಾರ ಇತ್ಯಾದಿ ಮಾತನಾಡುತ್ತಾ ಮನೆ ಸೇರಿದೋ.
**********
ಮುಂದೆ ಜಲಪಾತಗಳ ಊರುಗಳ ತೀರ್ಥಯಾತ್ರೆ .. - 3
ಚಿತ್ರಗಳು : Internet