ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು....
ಅಡುಗೆ
ಅನ್ನುವುದು ಅಧ್ಯಾತ್ಮ ನನ್ನ ಪಾಲಿಗೆ. ಐದು
ಇಂದ್ರಿಯಗಳನ್ನೂ ಒಂದೆಡೆ ಕೂತು ಕಟ್ಟಿ ಹಾಕುವುದಕ್ಕಿಂತಲೂ ನಿಸರ್ಗದತ್ತವಾದ ಹಾದಿಯಲ್ಲಿ ಅವನ್ನು
ಅವುಗಳ ಪಾಡಿಗೆ ಹಾರಲು ಬಿಡುವುದೇ ಅಧ್ಯಾತ್ಮ ಅನ್ನುವುದು ನನ್ನ ಡೆಫೆನೇಷನ್ನು. ಅಂತಹ ಒಂದು ಹಾದಿ
ಅಡುಗೆ. ಕಾರಣ ಎಲ್ಲಾ ಕಾಲದಲ್ಲೂ ಮನುಷ್ಯನಿಗೆ ಆಹಾರ
ಅನ್ನುವುದು ಬಹಳ ನೆಚ್ಚಿನ ವಿಷಯವೇ ಆಗಿತ್ತು. ಅದು ಬದುಕಿನ ಅನಿವಾರ್ಯತೆ ವಿಚಾರವಷ್ಟೇ ಅಲ್ಲದೆ ಅಭಿರುಚಿಯ ವಿಚಾರವೂ ಆಗಿತ್ತು.
ಮನುಷ್ಯ ಉಭಯಾಹಾರಿ ( ಸಸ್ಯ
ಮತ್ತು ಮಾಂಸ) ಆಗಿದ್ದುದ್ದೇ ಅಡುಗೆಯ ವಿಚಾರದಲ್ಲಿ passionate ಆಗಲು ಕಾರಣವೂ
ಇರಬಹುದು. ಭಾರತ ಉಪಖಂಡದಲ್ಲಂತೂ ಅಡುಗೆ ಎನ್ನುವುದು ಒಂದು ಶಾಸ್ತ್ರವೇ ಆಗಿದೆ. ಸಾವಿರಾರು
ವರ್ಷಗಳ ಹಿಂದೆಯೇ ಬಹಳಷ್ಟೂ ಕೃತಿಗಳು ಈ ಬಗ್ಗೆ ಬಂದಿವೆ. ಕನ್ನಡನಾಡಿನಲ್ಲಂತೂ ಮೂರನೆಯ ಸೋಮೇಶ್ವರನ ‘ಮಾನಸೋಲ್ಲಾಸ’, ಚಾವುಂಡರಾಯನ ‘ಲೋಕೋಪಕಾರಂ’, ಮೂರನೆಯ ಮಂಗರಸನ ‘ಸೂಪಶಾಸ್ತ್ರ’, ಕೆಳದಿ ಬಸಪ್ಪ
ನಾಯಕನ ‘ಶಿವತತ್ವ ರತ್ನಾಕರ’
ಮೊದಲಾದ ಪ್ರಾಚೀನ ಕೃತಿಗಳು ಬಂದಿವೆ.
ಮತ್ತು ಇವರು
ಯಾರೂ ಎಲ್ಲೂ ಸಸ್ಯ ಮತ್ತು ಮಾಂಸಾಹಾರವೆಂಬ ಭೇದ ತೋರದೆ ಬಗೆಬಗೆಯ ಮಾಂಸಾಹಾರೀ ಅಡುಗೆಗಳ ಬಗ್ಗೆ
ವಿವರಿಸಿದ್ದಾರೆ. ಸೋಮೇಶ್ವರನಂತೂ ಹಂದಿ ಮಾಂಸದ ಚಕ್ಕುಲಿಯಿಂದ ಹಿಡಿದು ವಡೆ, ತರಕಾರಿಗಳೊಂದಿಗೆ
ಹುರಿದು ಮಾಡುವ ಬಗೆ ಬಗೆಯ ಭಕ್ಷ್ಯಗಳನ್ನು ವಿವರಿಸಿದ್ದಾನೆ. ಸ್ವತಃ ಜೈನ ಧರ್ಮದವನಾದ ಚಾವುಂಡರಾಯ ಕೂಡ
ತನ್ನ ಕೃತಿಯಲ್ಲಿ ಮಾಂಸಾಹಾರದ ಖಾದ್ಯಗಳ ಬಗ್ಗೆ ಬಹಳವಾಗಿ ಬರೆದಿದ್ದಾನೆ. ಇದಿಷ್ಟೂ ಪೀಠಿಕೆ ಯಾಕೆ ಹೇಳಿದೆನೆಂದರೆ ನಮ್ಮ ಆಹಾರ ಪದ್ದತಿಯಲ್ಲಿ ಸಸ್ಯ
ಮತ್ತು ಮಾಂಸ ಎಂಬ ಮಡಿ ಎಂಬುದು ಇಲ್ಲ. ಆಹಾರ ಕ್ರಮ ಅವನ ಹಕ್ಕು ಎನ್ನುವುದನ್ನು ನಮ್ಮ ಪೂರ್ವಿಕರು
ಚೆನ್ನಾಗಿ ಅರ್ಥ ಮಾಡಿಕೊಂಡಿದ್ದನ್ನು ವರ್ತಮಾನದಲ್ಲಿ ನಾವು ಅರ್ಥಮಾಡಿಕೊಳ್ಳುವುದು ತೀರ ತುರ್ತಿನ ವಿಚಾರವಾಗಿದ್ದರಿಂದ ನೆನೆಪಿಸಬೇಕಾಯಿತು ಅಷ್ಟೇ!
ಈವಾಗ ಆ
ಮಾತಿನಿಂದ ಈ ಊಟಕ್ಕೆ ಮರಳೋಣ :
ದಕ್ಷಿಣ
ಕರ್ನಾಟಕದಲ್ಲಿ ‘ ಬಾಡೂಟ’ ಬಹಳ ಪ್ರಸಿದ್ದಿ. ಕಾರಣ
ಇಲ್ಲಿನ ಜನರ ಆಹಾರ ಸಂಸ್ಕೃತಿಯಲ್ಲಿ ಮಾಂಸಾಹಾರಕ್ಕೆ ಹೆಚ್ಚು ಪ್ರಾಧಾನ್ಯತೆ, ಹಲವು ದೈವೀಕ ಆಚರಣೆಗಳಲ್ಲಿ ಬಾಡೂಟ ಇರಲೇಬೇಕು.
ಇದ್ದೇ ಇರುತ್ತದೆ. ಅಲ್ಲದೆ ಇಲ್ಲಿನ
ವಿಶೇಷವೆಂದರೆ ಬಹಳಷ್ಟು ತರದ ಮಾಂಸಗಳನ್ನು ಅಡುಗೆಯಲ್ಲಿ ಬಳಸುವುದು. ಮತ್ತು ಕೆಲವು ಆಯಾ ಋತುಮಾನಗಳಿಗೆ ತಕ್ಕನಾದ ರಸಪಾಕಗಳನ್ನು ಮಾಡುವುದರಿಂದ
ತಿನ್ನಲು ಇನ್ನೂ ಸೊಗಸಾಗಿರುವುದೂ ಕೂಡ .
ಅಂತಹ
ಒಂದಷ್ಟು ಭರ್ಜರಿ ಬಾಡೂಟ ಕ್ರಮಗಳನ್ನು ಹೇಳುವವನಿದ್ದೇನೆ. ಅಸಲಿಗೆ ಇದು ಜನಪದರು ಈಗಾಗಲೇ ಬಳಸುತ್ತಿರುವುದರ
ಜೊತೆಗೆ ಒಂದಷ್ಟು ಸ್ವತಃ ನಾನು ಸೇರಿಸಿಕೊಂಡು ಮಾಡಿದ ಹೊಸ ಬಗೆಯ ಅಡುಗೆಯ ವಿವರಣೆಗಳು. ಮತ್ತು
ಕೆಲವು ತಾಳೆಯಾಗದ ಜೊತೆಗಾರಿಕೆಗಳೆಂದು ಬಳಸದೇ ಇರುವ ಪದಾರ್ಥಗಳೂ ಇಲ್ಲಿ ಸೇರಿಕೊಂಡಿವೆ. ಅದಷ್ಟೂ ಸರಳವಾಗಿರುವ ಈ ಅಡುಗೆಗಳಿಗೆ ಹೆಚ್ಚು ಸಿದ್ದತೆ
ಮತ್ತು ಸಮಯ ಬೇಕಾಗಿಲ್ಲ. ಅಡುಗೆಯ ಬಗ್ಗೆ ಹೆಚ್ಚು ಪ್ರೀತಿ ಇಟ್ಟುಕೊಂಡ ಒಬ್ಬರೇ ನಿಭಾಯಿಸಬಹುದು.
ಮಾತಿಗೆ ಇನ್ನೊಬ್ಬರು ಜೊತೆಯಲ್ಲಿದ್ದರೆ ಅಡುಗೆಯ
ಜೊತೆಯಲ್ಲಿಯೇ ಅರೆಬೆಂದ ಮಾಂಸದ ರುಚಿ ನೋಡಬಹುದು. ಅದು ಸಕ್ಕತ್ತಾಗಿರುತ್ತದೆ ;)
- ಎಲ್ಲ ಬಗೆಯ ಮಾಂಸಗಳನ್ನು ಬಿಸಿನೀರಿನಲ್ಲಿ 2-3 ತೊಳೆಯುವುದು ಒಳ್ಳೆಯದು
- ಅಡುಗೆಗೆ ಎಣ್ಣೆ ಬಹಳ ಮಿತವಾಗಿ ಬಳಸಬೇಕು. ಮಾಂಸದಲ್ಲಿಯೇ ಹೆಚ್ಚಿನ ಕೊಬ್ಬು ದೊರಕುವುದರಿಂದ ಹೆಚ್ಚಿಗೆ ಹಾಕುವುದು ಅನಾವಶ್ಯಕ
- ನಮ್ಮ ಅಡುಗೆಯಲ್ಲಿ ಇಂತಿಷ್ಟು ಚಮಚ, ಇಂತಿಷ್ಟು ಗ್ರಾಂ , ಕಿಲೋ ಎಂದು ಹೇಳುವುದು ಭಾಳ ಕಷ್ಟ
ಎಷ್ಟು ಜನಕ್ಕೆ ಅಡುಗೆ ಮಾಡಬೇಕು ಅಂದು ಹೇಳಿ ನೇರವಾಗಿ
ಹಿಡಿ, ಬೊಗಸೆ, ಚಿಟಿಕೆ ಎಂಬ ಮಾನದಂಡದಲ್ಲಿ ಅಡುಗೆ ಮಾಡಿ ಮುಗಿಸುತ್ತೇವೆ. ಪದಾರ್ಥವನ್ನು ಐದು ಬೆರಳು
ಹಿಡಿದಾಗಲೇ ಎಷ್ಟು ಪ್ರಮಾಣ ಹಾಕಬೇಕೆಂದು ಬಾಣಸಿಗನ ಪ್ರಜ್ಞೆಗೆ ಅರಿವಾಗುವುದು . ನಮ್ಮ ಅಮ್ಮಂದಿರಿಗಂತೂ
ಈ ಕ್ರಮ ಕರಗತ.
1. ಟೋಮೊಟೊ ಕೋಳಿಗೊಜ್ಜು : (Tomato Chicken fry )
ಇದನ್ನು
ರೆಡ್ ಚಿಲ್ಲಿ ಚಿಕನ್ ಅಂತಲೂ ಕರಿಯಬಹುದು.
ಕೋಳಿ
ಮಾಂಸ: ½ ಕೆಜಿ
ಕಾಳು
ಮೆಣಸಿನ ಪುಡಿ : 2 ಚಮಚ
ಶುಂಠಿ-ಬೆಳ್ಳುಳ್ಳಿ
ಮಿಶ್ರಣ ; 50
ಗ್ರಾಂ ನಷ್ಟು
ಹಚ್ಚಿದ
ಈರುಳ್ಳಿ : ಒಂದು ಹಿಡಿಯಷ್ಟು
ಹಚ್ಚಿದ
ಅಥವಾ ರುಬ್ಬಿದ ಟೋಮೊಟೊ : ಒಂದು ಬೊಗಸೆಯಷ್ಟು
ಹಸಿರು
ಮೆಣಸಿನಕಾಯಿ : ಐದು
ಗರಂ
ಮಸಾಲ ಪುಡಿ : 50 ಗ್ರಾಂ ನಷ್ಟು
ಕೆಂಪು
ಮೆಣಸಿನಕಾಯಿ ಪುಡಿ : 4 ಚಮಚ
ಅರಿಶಿನ
ಪುಡಿ : 3 ಚಿಟಿಕೆ
ಕೊತ್ತಂಬರಿ
ಸೊಪ್ಪು: ಅರ್ಧ ಹಿಡಿ
ಎಣ್ಣೆ
: 4 ಚಮಚ
ಉಪ್ಪು
: ರುಚಿಗೆ ತಕ್ಕಷ್ಟು
ಮಾಡುವ
ವಿಧಾನ: ಬಾಣೆಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಹಚ್ಚಿದ ಈರುಳ್ಳಿ, ಹಸಿರು ಮೆಣಸಿಕಾಯಿ ಕಾಯಿ ಹಾಕಿ
ಹುರಿದುಕೊಳ್ಳಿ. ಈರುಳ್ಳಿ ಕೆಂಪಾದಾಗ ಬಿಸಿನೀರಿನಲ್ಲಿ ತೊಳೆದ ಕೋಳಿಮಾಂಸವನ್ನು ಹಾಕಿ ಜೊತೆಗೆ ರುಚಿಗೆ
ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ. ಮಾಂಸದ ನೀರು ಬಿಟ್ಟುಕೊಳ್ಳಲು ಶುರುವಾಗುತ್ತದೆ. ನೀರು
ಇಂಗುವವರೆಗೂ ಬಾಡಿಸಿ. ನಂತರ ಟೋಮೊಟೊ, ಕಾಳು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಮಿಶ್ರಣ, ಗರಂ ಮಸಾಲ ಪುಡಿ, ಕೆಂಪು ಮೆಣಸಿನಕಾಯಿ ಪುಡಿ, ಹಾಕಿ ಬಾಡಿಸಿ. 100 ml ನಷ್ಟು ನೀರು ಸೇರಿಸಿ, ಚೆನ್ನಾಗಿ ಬೇಯಿಸಿ. 15- 20 ನಿಮಿಷ ಹದವಾಗಿ ಬೆಂದ ಗೊಜ್ಜನ್ನು ನಿಧಾನಕ್ಕೆ ಒಲೆಯಿಂದ
ಕೆಳಗಿಳಿಸಿ ಕೊತ್ತಂಬರಿ ಸೊಪ್ಪು ಉದುರಿಸಿ.
ರಾಗಿ
ಮುದ್ದೆ, ಅನ್ನ , ಚಪಾತಿ ರೊಟ್ಟಿ ಜೊತೆಗೆ ಅಲ್ಲದೆ ಬಿಡಿಯಾಗಿ ಕೋಳಿಗೊಜ್ಜನ್ನೇ ತಿನ್ನಲೂಬಹುದು.
2. ಹುರಿದ ಚಿಕನ್ನವಲಕ್ಕಿ (Chicken fried Flattened rice)
ಇದನ್ನು
ಅವಲಕ್ಕಿ ಚಿಕನ್ ಬಿರಿಯಾನಿ ಅಂತಲೂ
ಕರಿಯಬಹುದು.
ಕೋಳಿ
ಮಾಂಸ: ½ ಕೆಜಿ
ಗಟ್ಟಿ
ಅವಲಕ್ಕಿ ; ½ ಅರ್ಧ ಕೆಜಿ
ಕಾಳು
ಮೆಣಸಿನ ಪುಡಿ : 2 ಚಮಚ
ಶುಂಠಿ-ಬೆಳ್ಳುಳ್ಳಿ
ಮಿಶ್ರಣ ; 100
ಗ್ರಾಂ ನಷ್ಟು
ಉದ್ದಕೆ
ಹಚ್ಚಿದ ಈರುಳ್ಳಿ : ಒಂದು ಹಿಡಿಯಷ್ಟು
ಹಚ್ಚಿದ
ಟೋಮೊಟೊ : ಒಂದು ಹಿಡಿಯಷ್ಟು
ದೊನ್ನೆ
ಮೆಣಸಿನಕಾಯಿ : ಒಂದು ಹಿಡಿಯಷ್ಟು
ಹಸಿರು
ಮೆಣಸಿನಕಾಯಿ : ಐದು (ಸಣ್ಣಗೆ ಹಚ್ಚಿರಬೇಕು)
ಗರಂ
ಮಸಾಲ ಪುಡಿ : 50 ಗ್ರಾಂ ನಷ್ಟು
ಕೆಂಪು
ಮೆಣಸಿನಕಾಯಿ ಪುಡಿ : 4 ಚಮಚ
ಅರಿಶಿನ
ಪುಡಿ : 3 ಚಿಟಿಕೆ
ಕೊತ್ತಂಬರಿ
ಸೊಪ್ಪು: ಅರ್ಧ ಹಿಡಿ
ಎಣ್ಣೆ
: 4 ಚಮಚ
ಉಪ್ಪು
: ರುಚಿಗೆ ತಕ್ಕಷ್ಟು
ಮಾಡುವ
ವಿಧಾನ: ಬಾಣೆಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಹಚ್ಚಿದ ಈರುಳ್ಳಿ, ಹಸಿರು ಮೆಣಸಿಕಾಯಿ ಕಾಯಿ ಹಾಕಿ
ಹುರಿದುಕೊಳ್ಳಿ. ಈರುಳ್ಳಿ ಕೆಂಪಾದಾಗ ಬಿಸಿನೀರಿನಲ್ಲಿ ತೊಳೆದ ಕೋಳಿಮಾಂಸವನ್ನು ಹಾಕಿ ಜೊತೆಗೆ
ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ ಚೆನ್ನಾಗಿ
ಹುರಿಯಿರಿ. ಮಾಂಸದ ನೀರು ಬಿಟ್ಟುಕೊಳ್ಳಲು
ಶುರುವಾಗುತ್ತದೆ. ನೀರು ಇಂಗುವವರೆಗೂ ಬಾಡಿಸಿ. ನಂತರ ಟೋಮೊಟೊ, ಕಾಳು
ಮೆಣಸಿನ ಪುಡಿ,
ಶುಂಠಿ-ಬೆಳ್ಳುಳ್ಳಿ ಮಿಶ್ರಣ, ಗರಂ ಮಸಾಲ ಪುಡಿ, ಕೆಂಪು ಮೆಣಸಿನಕಾಯಿ ಪುಡಿ, ಹಾಕಿ ಬಾಡಿಸಿ.
200 ml ನಷ್ಟು ನೀರು ಸೇರಿಸಿ,
ಚೆನ್ನಾಗಿ ಬೇಯಿಸಿ. 15- 20 ನಿಮಿಷ ಹದವಾಗಿ ಬೆಂದ ಗೊಜ್ಜನ್ನು ನಿಧಾನಕ್ಕೆ ಒಲೆಯಿಂದ
ಕೆಳಗಿಳಿಸಿ. ಗಟ್ಟಿ ಅವಲಕ್ಕಿಯನ್ನು ನೀರಿನಲ್ಲಿ 2 ನಿಮಿಷ ನೆನೆಸಿ ತೊಳೆದು. ಸೋರಿಹಾಕಿ. ನೀರು
ಬಿಟ್ಟು ಬಿಡಿಬಿಡಿಯಾದ ಅವಲಕ್ಕಿಯನ್ನು ಸಿದ್ದವಾದ ಕೋಳಿಗೊಜ್ಜಿನ ಜೊತೆಗೆ ಹದವಾಗಿ ಕಲಸಿ. ಹೆಚ್ಚು
ಕಲಸಿದ್ರೆ ಅವಲಕ್ಕಿ ಮುದ್ದೆಯಾಗತ್ತೆ ಜಾಗ್ರತೆ! ಆಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ. ಮೊಸರುಬಜ್ಜಿಯ ಜೊತೆಗೆ ಸವಿಯಬಹುದು.
3. ಮೀನು ಮತ್ತು ಮೊಸರನ್ನ (Fish fry with Curd rice)
ಇದನ್ನು ಕೆಟ್ಟ ಕಾಂಬಿನೇಷನ್
ಅನ್ನುವರು ಉಂಟು.. ಆದರೆ ತಿಂದ ಮೇಲೆ ಹಾಗೆ ಹೇಳುವುದು ಕಷ್ಟಸಾಧ್ಯ
ತುಂಡುಮಾಡದ ಒಂದು ಪೂರ್ತಿ ಮೀನು
ಕಾಳು ಮೆಣಸು : 2 ಚಮಚ
ನಿಂಬೆಹಣ್ಣು : ಅರ್ಧ ಹೋಳು
ಮಸಾಲೆಗೆ : ತುರಿದ ತೆಂಗಿನ
ಕಾಯಿ – ಒಂದು ಹಿಡಿ
ಕಾಳು ಮೆಣಸು – 7-8 ಕಾಳು
ಒಣಮೆಣಸಿಕಾಯಿ – 3-4 ಎಸಳು
ಜೀರಿಗೆ – ಅರ್ಧ ಚಮಚ
ಬೆಳ್ಳುಳ್ಳಿ –ಬಿಡಿಸಿದ ಮೂರು
ಗೆಡ್ಡೆ
ಕೊತ್ತಂಬರಿ ಸೊಪ್ಪು : 4 ಎಸಳು
ಉಪ್ಪು ರುಚಿಗೆ ತಕ್ಕಷ್ಟು
ಇಷ್ಟನ್ನೂ 5 ಚಮಚದಷ್ಟೂ ನೀರು
ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.
ಮಾಡುವ ವಿಧಾನ : ತೊಳೆದ ಪೂರ್ತಿ
ಮೀನಿಗೆ ಪುಡಿಯುಪ್ಪು, ಕಾಳು ಮೆಣಸಿನಪುಡಿ, ನಿಂಬೆ ರಸ ಸವರಿ ಅರ್ಧ ಗಂಟೆ
ನೆನೆಸಬೇಕು.
ನಂತರ ಮಸಾಲೆಯನ್ನು ಹಚ್ಚಿ ಒಲೆಯ
ಮೇಲೆ ಕಾದ ತವಾ ಅಥವಾ ರೊಟ್ಟಿ ಅಂಚಿಗೆ ಸ್ವಲ್ಪ ಎಣ್ಣೆ ಹಾಕಿ ಮೀನು ಇಟ್ಟು ಎರಡೂ ಬದಿಯಲ್ಲಿ
ಸುಡಬೇಕು.
ಗಟ್ಟಿ ಮೊಸರಿನ ಕಲಸಿದ
ಅನ್ನಕ್ಕೆ ಸಾಸುವೆ , ಹಸಿರುಮೆಣಸಿಕಾಯಿ, ಕೊತ್ತಂಬರಿ ಸೊಪ್ಪಿನ ಒಗ್ಗರಣೆ ಕೊಡಬೇಕು
ಹದವಾಗಿ ಸುಟ್ಟ ಮೀನನ್ನು ಮೊಸರನ್ನದ ಜೊತೆ ಸವಿದರೆ ಅದಕ್ಕೆ ಮಿಗಿಲಾದ ಸುಖವಿಲ್ಲ
4. ಸಿಹಿಸೀಗಡಿ ಚಿತ್ರಾನ್ನ : (Freshwater prawns fried with Lemon rice)
ಬಯಲು ಸೀಮೆಯಲ್ಲಿ ಕೆಂಪು ಬಣ್ಣದ
ಸಿಹಿನೀರಿನ ಸಿಗದಿಗಳು ಸಿಗುತ್ತವೆ. ಇವು ಸಮುದ್ರದ ಸೀಗಡಿಗಳಂತೆ ದೊಡ್ಡದಾಗಿರುವುದಿಲ್ಲ.
ತುಂಬಾ
ಪುಟ್ಟದಾಗಿರುತ್ತವೆ. ದೇಹಕ್ಕೆ ಉಷ್ಣತೆ ಹೆಚ್ಚು ಎನ್ನುವ ಕಾರಣಕ್ಕೆ ಇವನ್ನೂ ಹೆಚ್ಚು ಮಳೆಗಾಲದಲ್ಲಿ ಬಳಸುವುದು ರೂಢಿ.
ಅರ್ಧ ಕೆಜಿ ಅಕ್ಕಿಯಿಂದ ಮಾಡಿದ
ಅನ್ನ
ಈರುಳ್ಳಿ : ಒಂದು ಹಿಡಿಯಷ್ಟು
ಟೋಮೊಟೊ : ಒಂದು ಹಿಡಿಯಷ್ಟು
ಹಸಿರು ಮೆಣಸಿನಕಾಯಿ ; ಐದು (ಸಣ್ಣಗೆ ಅಥವಾ ಉದ್ದಕ್ಕೆ ಹಚ್ಚಬೇಕು)
ಕಡಲೇಬೇಳೆ : ಮೂರು ಚಮಚದಷ್ಟೂ (
ಬೇಕಿದ್ದಲ್ಲಿ ಮಾತ್ರ ಬಳಸಬಹುದು )
ಕೊತ್ತಂಬರಿ ಸೊಪ್ಪು : ಅರ್ಧ
ಹಿಡಿಯಷ್ಟು
ಗರಂ ಮಸಾಲ : ಒಂದು ಚಮಚ
ಸಣ್ಣ ಸೀಗಡಿ : ಒಂದು ಹಿಡಿಯಷ್ಟು
ಎಣ್ಣೆ : 50 Ml
ಮಾಡುವ ವಿಧಾನ : ಬಾಣೆಲೆಯಲ್ಲಿ
ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಸಾಸುವೆ, ಈರುಳ್ಳಿ , ಹಸಿರು ಮೆಣಸಿನಕಾಯಿ,
ಟೋಮೊಟೊ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ಗರಂ ಮಸಾಲ ಮತ್ತು ಉಪ್ಪು ಅರಿಶಿನ ಸೇರಿಸಿ
ಬಾಡಿಸಿ.
ಸಿದ್ದವಾದ ಅನ್ನದ ಜೊತೆ
ಕಲಿಸಿರಿ.
ನಂಟ ಪ್ರತ್ಯೇಕವಾಗಿ
ಸೀಗಡಿಯನ್ನು ಎಣ್ಣೆಯಲ್ಲಿ ಎರಡು ನಿಮಿಷ ಹುರಿದುಕೊಳ್ಳಿ. ಜಾಗ್ರತೆ ಸೀಗಡಿ ಸೀದುದುಹೋಗಬಾರದು.
ಇದನ್ನು ಅನ್ನದ ಜೊತೆಗೆ
ಉದುರಿಸಿದರೆ. ಸೀಗಡಿ ಚಿತ್ರಾನ್ನ ಸಿದ್ದ.
5. ಮೆಣಸುಪ್ಪಿನ ಪಂದಿಕರಿ : (Pork pepper fry)
ಈ
ಹೆಸರು ಮೂಲತಃ ಕೊಡಗಿನದ್ದು. ಕೊಡವರು ಹಂದಿಬಾಡಿಲ್ಲಿ ಮಾಡುವ ಅಡುಗೆಗೆ ‘ಪಂದಿಕರಿ’
ಎಂದು ಕರೆಯುತ್ತಾರೆ.
ಈವಾಗ
ನಾವು ಅದನ್ನು ಆಮದು ಮಾಡಿಕೊಂಡು ಹಂದಿಬಾಡಿನ ಅಡುಗೆಗೆ ‘ಪಂದಿಕರಿ’ ಅಂತಲೇ
ಬಳಸುತ್ತಿದ್ದೇವೆ.
ಹಂದಿ
ಮಾಂಸ: ½ ಕೆಜಿ
ಕಾಳು
ಮೆಣಸು : 25 ಗ್ರಾಂ ನಷ್ಟು
ಶುಂಠಿ-ಬೆಳ್ಳುಳ್ಳಿ
ಮಿಶ್ರಣ ; 25
ಗ್ರಾಂ ನಷ್ಟು
ಹಚ್ಚಿದ
ಈರುಳ್ಳಿ : ಒಂದು ಹಿಡಿಯಷ್ಟು
ಹಸಿರು
ಮೆಣಸಿನಕಾಯಿ : ಐದು
ಅರಿಶಿನ
ಪುಡಿ : 3 ಚಿಟಿಕೆ
ಕೊತ್ತಂಬರಿ
ಸೊಪ್ಪು: ಅರ್ಧ ಹಿಡಿ
ಎಣ್ಣೆ
: 4 ಚಮಚ
ಉಪ್ಪು
: ರುಚಿಗೆ ತಕ್ಕಷ್ಟು
ಮಾಡುವ
ವಿಧಾನ : ಬಾಣೆಲೆಯಲ್ಲಿ ಎಣ್ಣೆಯನ್ನು ಹಾಕಿ
ಕಾಯಿಸಿ ಹಚ್ಚಿದ ಈರುಳ್ಳಿ, ಹಸಿರು
ಮೆಣಸಿಕಾಯಿ ಕಾಯಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ಕೆಂಪಾದಾಗ ಬಿಸಿನೀರಿನಲ್ಲಿ ತೊಳೆದ
ಹಂದಿಮಾಂಸವನ್ನು ಹಾಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ
ಪುಡಿ ಹಾಕಿ ಚೆನ್ನಾಗಿ ಹುರಿಯಿರಿ. ಮಾಂಸದ ನೀರು
ಬಿಟ್ಟುಕೊಳ್ಳಲು ಶುರುವಾಗುತ್ತದೆ. ನೀರು ಇಂಗುವವರೆಗೂ ಬಾಡಿಸಿ. ನಂತರ ಕಾಳು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಮಿಶ್ರಣ ಹಾಕಿ
200 ml ನಷ್ಟು ನೀರು ಹಾಕಿ ಬೇಯಲು ಬಿಡಿ.ಚೆನ್ನಾಗಿ ನೀರು ಇಂಗಿದ ಮೇಲೆ
ಕೊತ್ತಂಬರಿ ಸೊಪ್ಪು ಉದುರಿಸಿ ಬಾಡಿಸಿ
ಮೆಣಸುಪ್ಪಿನ ಪಂದಿಕರಿ ಸಿದ್ದ. ಅನ್ನ , ಚಪಾತಿ , ರೊಟ್ಟಿ ಯ ಜೊತೆ ತಿನ್ನಲು ಬಲು ಸೊಗಸು.
6. ಮಸಾಲೆ ಪಂದಿಗೊಜ್ಜು (Spicecy Pork fry )
ಹಂದಿ
ಮಾಂಸ: ½ ಕೆಜಿ
ಕಾಳು
ಮೆಣಸಿನ ಪುಡಿ : 2 ಚಮಚ
ಶುಂಠಿ-ಬೆಳ್ಳುಳ್ಳಿ
ಮಿಶ್ರಣ ; 50
ಗ್ರಾಂ ನಷ್ಟು
ಹಚ್ಚಿದ
ಈರುಳ್ಳಿ : ಒಂದು ಹಿಡಿಯಷ್ಟು
ಹಸಿರು
ಮೆಣಸಿನಕಾಯಿ : ಐದು
ಗರಂ
ಮಸಾಲ ಪುಡಿ : 50 ಗ್ರಾಂ ನಷ್ಟು
ಕೆಂಪು
ಮೆಣಸಿನಕಾಯಿ ಪುಡಿ : 2 ಚಮಚ
ಅರಿಶಿನ
ಪುಡಿ : 3 ಚಿಟಿಕೆ
ಕೊತ್ತಂಬರಿ
ಸೊಪ್ಪು: ಅರ್ಧ ಹಿಡಿ
ಎಣ್ಣೆ
: 4 ಚಮಚ
ಉಪ್ಪು
: ರುಚಿಗೆ ತಕ್ಕಷ್ಟು
ಮಾಡುವ
ವಿಧಾನ ಬಾಣೆಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ
ಹಚ್ಚಿದ ಈರುಳ್ಳಿ, ಹಸಿರು
ಮೆಣಸಿಕಾಯಿ ಕಾಯಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ಕೆಂಪಾದಾಗ ಬಿಸಿನೀರಿನಲ್ಲಿ ತೊಳೆದ
ಹಂದಿಮಾಂಸವನ್ನು ಹಾಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ
ಪುಡಿ ಹಾಕಿ ಚೆನ್ನಾಗಿ ಹುರಿಯಿರಿ. ಮಾಂಸದ ನೀರು
ಬಿಟ್ಟುಕೊಳ್ಳಲು ಶುರುವಾಗುತ್ತದೆ. ನೀರು ಇಂಗುವವರೆಗೂ ಬಾಡಿಸಿ. ನಂತರ ಕಾಳು ಮೆಣಸಿನ ಪುಡಿ, ಶುಂಠಿ-ಬೆಳ್ಳುಳ್ಳಿ ಮಿಶ್ರಣ, ಗರಂ ಮಸಾಲ ಪುಡಿ, ಕೆಂಪು ಮೆಣಸಿನಕಾಯಿ ಪುಡಿ ಹಾಕಿ ಬಾಡಿಸಿ.
300 ml ನಷ್ಟು ನೀರು ಸೇರಿಸಿ, ಚೆನ್ನಾಗಿ
ಬೇಯಿಸಿ. ಗಟ್ಟಿಯಾದ ಹೆಚ್ಚು ಗೊಜ್ಜು ಬೇಕಿದ್ದಲ್ಲಿ ಅರ್ಧ ಹೋಳಿನಷ್ಟು ಅರೆದ ತೆಂಗಿನಕಾಯಿನ ಮಿಶ್ರಣವನ್ನು ಇಲ್ಲಿ ಸೇರಿಸಿ. ಇಲ್ಲಿ
ತಳ ಹಿಡಿಯದಂತೆ ಜಾಗ್ರತೆ ವಹಿಸಬೇಕು. 15- 20 ನಿಮಿಷ ಹದವಾಗಿ ಬೆಂದ ಗೊಜ್ಜನ್ನು ನಿಧಾನಕ್ಕೆ
ಒಲೆಯಿಂದ ಕೆಳಗಿಳಿಸಿ ಕೊತ್ತಂಬರಿ ಸೊಪ್ಪು ಉದುರಿಸಿ.
ಈ
ಗೊಜ್ಜನ್ನು ರಾಗಿಮುದ್ದೆಯ ಜೊತೆ ಸವಿಯಲು ಚೆಂದ. ಉಳಿದಂತೆ ಅನ್ನ , ಚಪಾತಿ,
ರೊಟ್ಟಿಗೆ ಬಲುಮಜವಾಗಿರತ್ತೆ.
*ಕನ್ನಡ ಪ್ರಭದಲ್ಲಿ ಪ್ರಕಟಿತ