Showing posts with label ಪೀರಿಯಡ್ ಮಿಕ್ಸ್. Show all posts
Showing posts with label ಪೀರಿಯಡ್ ಮಿಕ್ಸ್. Show all posts

Saturday, March 8, 2014

ಪೀರಿಯಡ್ಸ್ ಕವಿತೆಗಳು ~3

ಪೀರಿಯಡ್ಸ್ ಕವಿತೆಗಳು
**************

ಮೂರೂ ದಿನ ಇವಳೇ ದೇವರು!
ಪಾದ್ಯ..ಅರ್ಘ್ಯ..ಆಚಮನ.. ಅಭ್ಯಂಜನ
ನೈವೇದ್ಯ ಷೋಡಶೋಪಚಾರಗಳು
ಇಷ್ಟಲ್ಲದೇ ಕೊನೆಗೆ
ಏಕಾಂತ ಸೇವೆ ತಪ್ಪಿಸುವುದಿಲ್ಲ !!

***

ಹಾಸಿಗೆಯಂತೆ ,
ಚಾಪೆಯಲ್ಲೂ ನನಗೆ ಪಾಲಿದೆ...
ನನ್ನೆದೆಯ ಮೇಲೆ ತಲೆಯಿರಿಸದ ಹೊರತು
ನಿದ್ದೆ ಹತ್ತುವುದಿಲ್ಲ ಅವಳಿಗೆ!

***

ನಾನು ಒಳ್ಳೆ ಬಾಣಸಿಗ.
ಅದರೂ ಅವಳ ಆದೇಶಗಳು
ಅಡುಗೆ ಮನೆಯತ್ತ ತೋರುತ್ತಲೇ ಇರುತ್ತವೆ,
ತಳ ಹಿಡೀತು, ಉಕ್ಕೀತು .. ಉಪ್ಪು ನಾಲ್ಕೆ ಕಾಳು..
ಮುಗಿಸಿ ಉಣ್ಣುವಾಗ ನಳಪಾಕ.

****

ಬೆಚ್ಚಗೆ ಕೈ ಹಿಡಿದಪ್ಪಿ 'ಕವಿತೆ ಹೇಳೋ' ಎಂದು
ಹೊಗಳಿಸಿಕೊಳ್ಳುತಾ ಮೂರು ರಾತ್ರಿಗಳ ,
ಮೂರು ಗುಲಗಂಜಿ ಗಳಿಗೆ ಮಾಡುತ್ತಾಳೆ,
ಮಾಟಗಾತಿ!

****

ರಾತ್ರಿಯ ಸಮುದ್ರಸ್ನಾನಕ್ಕೆ
ಮತ್ತೆ ಮಡಿಯಾಗುತ್ತಿದ್ದೇನೆ..
ಮೂರು ದಿನಗಳ ನಂತರ!

Friday, August 23, 2013

ಪೀರಿಯಡ್ ಮಿಕ್ಸ್ -2



ನನ್ನ ದೇವರನ್ನು ಹೊರಗೆ
ಮನೆಯ ಹೊರಗೆ
ಭದ್ರಗೊಳಿಸಿದ್ದೇನೆ ಪುಟ್ಟ ಗುಡಿ ಕಟ್ಟಿ
ಇವಳು ನಗುತ್ತಾಳೆ..
'ನನ್ನ ಮೂರು ದಿನಕ್ಕೆ ಹೆದರಿ
ದೇವರನ್ನು ಹೊರಗಿಟ್ಟ
ನೀನಾವ ಭಕ್ತನೋ ಪೋಕರಿ'
ಎಂದು ಉರುಳಾಡಿ ನಗುತ್ತಾಳೆ
ಅದೇ ಪ್ರತಿ ತಿಂಗಳು
ಹೊರಗೆ ಕೂರುವ ಮೂರೂ ದಿನ.

ಅವಳಿಗೇನು ಗೊತ್ತು
ಆ ನಗುವಿನಲ್ಲೇ ನನ್ನ ದೇವರು
ಪ್ರತ್ಯಕ್ಷನಾಗೋದು ಅಂತ!
ತಿಂಗಳ ಪೂಜೆಗೆ ಅವನು
ದಕ್ಕೋದು ಮೂರು ದಿನ ಮಾತ್ರ!!
ಅದಕ್ಕೆ ಈ ಏಕಾಂತ ಸೇವೆ.

ಅವಾಗಷ್ಟೇ ಅವಳು ಮಗು
ನಾನು ಮಹಾತಾಯಿ..
ಮಗುವಿಗಿಂತಲೂ ಮುಗ್ಧವಾಗಿ
ಅಪ್ಪಿ ಮಲಗುತ್ತಾಳೆ, ನೋವು
ಹೇಳುವ ನಾಲಗೆ ಮಾತು
ಮರೆತು ಮಲಗಿರುತ್ತದೆ.

ಆವಾಗ ದೇವರು ಕೂಡ
ನನ್ನೊಡನೆ ಲಾಲಿ ಹಾಡುತ್ತಾನೆ
ಗುಡಿಯಿಂದ ಮನೆಗೆ ಬಂದು..
ತಿಂಗಳಲಿ ಮೂರು ದಿನ ಮಾತ್ರ

~ ಆರ್.ಪಿ. >> ಪೀರಿಯಡ್ ಮಿಕ್ಸ್ (2)

Thursday, May 2, 2013

ಪಿರಿಯಡ್ ಮಿಕ್ಸ್ - 1

ಪಿರಿಯಡ್ ಮಿಕ್ಸ್...

'ಋತು ಗಾನ''ದಿಂದ ಒಂದು ಆಲಾಪ
*********************

ಅವಳು ಒಳಬರದ
ಮೂರೂ ದಿನವೂ
ನಾನೂ ಹೊರಗಾಗುತ್ತೇನೆ!

ಬಾಲ್ಕನಿಯಲಿ ಬೆಚ್ಚಗೆ ಕುಳಿತು
ಬೆಂಕಿ ಇಲ್ಲದ ಅಡುಗೆ ಅಟ್ಟು,
ಕೊಂಚ ದ್ರಾಕ್ಷಾರಸ ಗುಟುಕಿಸಿ
ಮುತ್ತಿನ ಮಲ್ಲಿಗೆ ಕಟ್ಟುತ್ತಾ,
ಕಣ್ಣಲಿ ತುಂಬಿದ ಪ್ರೀತಿಯ
ಎದೆಗಿಳಿಸಿಕೊಳ್ಳುತ್ತೇವೆ,
ಅವನರತ.

ಒಮ್ಮೊಮ್ಮೆ
ನೋವಿಗೆ ಬಿಗಿದಪ್ಪುತ್ತಾಳೆ ..
ನನ್ನ ಕಣ್ಣಲಿ ಅವಳು ಅಳುತ್ತಾಳೆ
ನನ್ನ ಚಡಪಡಿಕೆ ಕಂಡು
ಮೂದಲಿಸುತ್ತಾಳೆ.

ಅವಳ ನಾಭಿಯ ಹೊಕ್ಕ ಬೆರಳಿನಿಂದ
ನೋವು ನನಗೂ ವರ್ಗವಾಗಲೆಂದು,
ನನ್ನ ಕೈ ಅಲ್ಲೇ ನಡುವಿನಲ್ಲೇ ಬಿಡಾರ ಹೂಡಿದೆ.
ಮತ್ತೊಂದು ತಲೆಗೆ ತಳವಾಗಿದೆ.

ಈ ತೆರೆದ ಕಿರು ಹಜಾರದಲ್ಲಿ
ಹಿನ್ನಲೆಗೆ ಒಂದು ಸಣ್ಣ ರಾಗಾಲಾಪ,
ಮಿಟುಕಿ ಮಿನುಗುವ ಸಣ್ಣ ಸೊಡರು
ಅವಳ ನಿದ್ದೆಗೆ ನನ್ನ ಲಾಲಿ..
ಮಲಗಲಿ ನನ್ನೊಲವು ಸುವ್ವಾಲಿ.