Friday, August 23, 2013

THE OCEAN'S SONG / ಮಹಾಕಡಲ ಒಡಲಹಾಡು





ವಿದ್ಯುತ್ ಪುಳಕದ ಅಲೆಗಳು
ಗಡಿ ಕಾಣಿಸದ ನೀರವಿಸ್ತಾರವೈಭವ
ಕಂಡ ನಾವು,
ಉದ್ದಕ್ಕೂ
ಅದೇ ಪ್ರಖ್ಯಾತ ಸಮುದ್ರ ದೀಪಸ್ತಂಭದ
ಅವಶೇಷಗಳ ನಡುವೆ ನಡೆದೆವು.

ಸಾಗರ ವ್ಯಾಪಿಯೇ!
ಅಲೆಗಳ ಕಾಲಿನ ಹೆಜ್ಜೆ ಗೆಜ್ಜೆ ಸದ್ದಿನಲ್ಲಿ
ನಿನ್ನ ಹಾಡು ಕೇಳಿ ಬೆರಗುಗೊಂಡೆ.
ಸತ್ಯವೇ ಬಾ ಇಲ್ಲಿ ಸಂಭವಿಸು!
ಗುಡುಗಿನ ಶ್ರುತಿಯಿಡಿದು, ನಿನ್ನ ಸೌಂದರ್ಯ ಕಾರುತ್ತ
ಬಾ ಇಲ್ಲಿ..

ಲೋಕವ ಬೇಟೆನಾಯಿಗಳು ಗಬಕ್ಕನೆ ಹಿಡಿದು
ನಿರಂಕುಶ ಪ್ರಭುತ್ವಕ್ಕೆ ಒಪ್ಪಿಸಿದುವು
ದಾಸ್ಯಕ್ಕೆ ತೊತ್ತಾಯಿತು..
ಚಿಂತಕರ ಆತ್ಮಗಳು ಹಾರಿದುವು
ಗರುಡಪಕ್ಷಿಯ ಹಾಗೆ ಪ್ರಭುತ್ವ ಮೆಟ್ಟಿ
ಎದ್ದುನಿಂತರು.

ಹುಟ್ಟುತ್ತಲೇ ಇರಿ! ಎದ್ದೇಳಿ! ಜನರೇ.. ಸೂರ್ಯರೇ..
ಭೂಮಿಯಾಚೆಗೆ ಜೋರು ಹೆಜ್ಜೆ ಸಪ್ಪಳ
ಕೇಳಿಬರತ್ತಿರಲಿ.
ಕತ್ತಲನ್ನು ತೊಡೆದುಹಾಕಬೇಕು
ಎಚ್ಚರಿಕೆಯ ಗಂಟೆ ಬಾರಿಸುತ್ತಲೇ ಇರಲಿ,
ಬೆಳಕೂ.. ನೀವು ಬಂದೂಕುಗಳು ಸಿದ್ದವಿರಿ.

ಮತ್ತೆ ನೀನು ಮಂಜಿನ ಮಾದಕ
ಮೋಹಕತೆಯನ್ನು ತಬ್ಬಿದವನು
ಅಚಾನಕ್ಕಾಗಿ
ದಿಟ್ಟ ನೊರೆಮಿಂಚಿನ ವ್ಯಾಘ್ರ ಬಿರುಗಾಳಿಗೆ
ಸಿಕ್ಕು ಬಂಡೆಗಲ್ಲಿನಂತೆ ಇದ್ದೂ ಗಡೀಪಾರಾದವನು!

         *ನಾನು ಅತಿಯಾದ ಪ್ರೀತಿ ಮತ್ತು ಕೋಪ ಎರಡನ್ನೂ ಇಟ್ಟಿರುವ 'ವಿಕ್ಟರ್ ಹ್ಯೂಗೊ' ' THE OCEAN'S SONG' ಕವಿತೆಯನ್ನು ಅನುವಾದಿಸಲು ಯತ್ನಿಸಿದ್ದೇನೆ.. 

 
  Pic:
salon-litteraire.com

ಕಟ್ಟುಕಥೆಗಳು +2

ಹಳ್ಳಿಯಲಿ ಭಿಕ್ಷಕೆ ಬಂದಿದ್ದ ಶಿಷ್ಯ ಕೇಳಿದ 'ಗುರುಗಳೇ ಕಾವ್ಯ ಆದ್ರೇನು' ?
ಪ್ರಜ್ಞಾಪರಮಿತರು ಕೈ ಬೊಟ್ಟು ಮಾಡಿ ತೋರಿಸುತ್ತಾ ಹೇಳಿದರು,
ಮರಕುಟಿಗ ಹಕ್ಕಿ ಮರ ಕುಟುಕುವ ಸದ್ದು ಕೇಳಿಸಿತೇ?
ಎತ್ತುಗಳ ಕಾಲಿನ ಗೊರಸಿನ ಸದ್ದು ?
ಹೋಗಲಿ ಹೆಣ್ಮಕ್ಕಳ ಬಳೆಗಳ ಸದ್ದು..
ಶಿಷ್ಯ 'ಇಲ್ಲ' ತಲೆಯಲ್ಲಾಡಿಸಿದ.
ಮೊದಲು ಕಿವಿಯಾಗು ದನಿಗೆ.. ಕಾವ್ಯ ಆಮೇಲೆ.
ಗೊಣಗಿದರು ಗುರುಗಳು.

>>RP ಕಟ್ಟುಕಥೆಗಳು +2

ನಾನು ಅಗಮ್ಯ

ಕಣ್ಣೀರು ತುಂಬಿದ ಕಣ್ಣುಗಳಲಿ
ಕನಸು ಕಾಣಲಾರೆ..
ಈ ಮೌನದಲಿ ಇನ್ನಷ್ಟು
ನನ್ನೆದೆಯ ಇರಿದುಕೊಳ್ಳಲಾರೆ..

ಬಿಟ್ಟುಬಿಡು ಕದಳಿಯ
ಬಾಗಿಲ ಬಳಿ ಇದ್ದೇನೆ
ಎದುರಾಗಬೇಡ..
ಹರಿಯುವ ನದಿಗೆ
ಈ ಒಡ್ಡು ಒಪ್ಪದು..

ನಾನು ಆಕಾಶದ ಕುಲ
ಎಟುಕಲಾರೆ... ಕೈ ಚಾಚಲಾರೆ
ತೊಲಗು ಇಲ್ಲಿಂದ
ಆಸೆಯೇ..
ಕನಸೇ..
ಒಲವೇ..
ನಾನು ಅಗಮ್ಯ. ~ ಆರ್ ಪಿ

ಭವದ ಬಾಗಿಲ ಅಗುಳಿ



1.     ಹೊತ್ತಿಗೆಗಳಲಿ ಹೊತ್ತು ಕಳೆಯುವಂತಿಲ್ಲ
ಗ್ರಹಣದ ಮೇಲೆ ಗ್ರಹಣ
ಬಯಲು ನಿಲುವಂತಿಲ್ಲ
ಕಣ್ಣು ಕಾಣುವಂತಿಲ್ಲ
ಧೃತರಾಷ್ಟ್ರನ ಸಂತತಿ ಈಗ ಕೋಟಿ ಕೋಟಿ.

ಎಲ್ಲರ ಕೈಲು ಪಗಡೆ ಕಾಯಿಗಳು
ಹಣ್ಣು ಮಾಡುವ ತವಕ
ಬಿಡದಲ್ಲ ಮೋಹ, ಗದ್ದುಗೆಯ ದಾಹ
ತೀರದಲ್ಲ.

ಬಂದರು ಹೋದರು
ಅದೇ ಸೂರ್ಯ, ಅದೇ ಚಂದ್ರ
ಹೊಸಬನ ಬರುವು ಕೂಡಲೇ ಇಲ್ಲ
ಇವರ ಊಳಿಗ ಮುಗಿಯುತ್ತಿಲ್ಲ.
ಜಗದ ಜೀತಕ್ಕೆ ಜಾಮೀನು ಕೊಡುವ
ಜಹಗೀರುದಾರ ಇಲ್ಲವೇ ಇಲ್ಲ!

ಕ್ರಾಂತಿರಾಗಗಳು ವಾಂತಿ ಮಾಡಿಕೊಂಡವು
ಕುಡಿದ ವಿಷವ ಇನ್ನೂ ಕಕ್ಕುತ್ತಲಿವೆ
ಕೆಲವರು
ಕಾಡಿನಲ್ಲಿ ಕೋವಿ ಹಿಡಿದರು
ಹಲವರು
ಊರಿನಲ್ಲಿ ಅಲಗು ಮಸೆದರು..

ಯುದ್ದ ಸನ್ನದ್ದವಾಗುತ್ತಿದೆ
ಅಯ್ಯಾ
ಎದೆಯೊಳಗೆ ಮರೆತು ಮಲಗಿರುವ ಶರಣರೆಲ್ಲ
ದಂಡೆತ್ತಿ ಬರಬೇಕು
ಭವದ ಬಾಗಿಲ ಅಗುಳಿ ಕಳಚಬೇಕು

ರೆಕ್ಕೆಗಳು ಸಿದ್ದವಿರಲಿ, ಹಾರುವ ಹೊತ್ತು ಸನಿಹದಲ್ಲೇ..

ಗುರುವಿನ ದಾರಿ ಕಾಯುತ್ತಾ

ನೀನು ಬಂಧವ ಹರಿವರೆಗೂ
ಭವಮಂಡಲ ದಾಟಲಾರೆ..
ಕರುಣಿಸಿಬಿಡು ದೀಕ್ಷೆ..
ನಿನ್ನ ಕಣ್ಣ ಕಿರಣದಲಿ
ಸುಟ್ಟು ಹೋಗಲಿ ಈ ಕಾಯ
ಬಿಟ್ಟು ಬಿಡಲಿ ಈ ಮಾಯಾ

ನಿನ್ನ ಕರೆವಿಗೆ ಕಾದಿದ್ದೇನೆ
ಗುರುವೆ..
ನನ್ನ ಮಿಣುಕು ಹುಳವೇ
ಕಾದ ಕತ್ತಲಿಗೆ
ಬೆಳಕ ತಂಪನೆರವ
ನನ್ನ ಬೆಳಕಿನ ಹುಳವೇ
ಬಾರಯ್ಯ.. ನನ್ನಯ್ಯ
ತಾರೋ ಜೋಗಯ್ಯ
ಮುತ್ತಿನ ಜೋಳಿಗೆಯ

ಹುಟ್ಟಿನ ಉಡುದಾರ
ಜಾತಿಯ ಜನಿವಾರ
ಕಿತ್ತು ಕರೆದು ಹೋಗು
ಗುರುವೇ
ಬೆತ್ತಲು ಬರಿದಾಗಿ
ಆಗಸದ ದಾರಿಯಲಿ
ಏಕವಾಗಿ ನಿಂತಿದ್ದೇನೆ
ಗುರುವೇ,,,,
ಬಾರಪ್ಪ ಈ ಮಳೆಯು
ನಿಲ್ಲುವುದರೊಳಗಾಗಿ
ನಿನ್ನ ಮಹಾಮನೆಗೆ
ಕರೆದೊಯ್ದುಬಿಡುವಂತೆ.... ~ ಆರ್. ಪಿ.

ಜಯದೇವನ ಗೀತಗೋವಿಂದ

ಬಂಡು ಹೂವಿನ ಕೆಂದಳಗಳಂತೆ
ಶೋಭಿಸುವ ನಿನ್ನಧರಗಳು
ಮಹೂವದ ಹೂ ಹೊಳಪು
ಕೂಡಿಟ್ಟುಕೊಂಡ ಸ್ಪುರದ್ರೂಪಿ ಗಲ್ಲ..
ಕಣ್ಣುಗಳಲಿ ಅರಳಿನಿಂತ
ನೀಲೋತ್ಪಲಗಳ ಸೌಂದರ್ಯ
ಮೂಗು ಹೊತ್ತು ತಂದ
ಎಳ್ಳು ಹೂವಿನ ಗಾಂಭೀರ್ಯ
ಇದೋ ನಿನ್ನ ಹಲ್ಲುಗಳಲಿ
ಕಾಂತಿ ಕಾರುತ್ತಿರುವ ಕಾಡುಮಲ್ಲಿಗೆ ..
ಚೆಲುವೆ, ಹೀಗೆ ಈ ಹೂಗಳೆಲ್ಲ ನಿನ್ನ
ಮೊಗದಲಿ ಘಮಿಸುವಾಗ ಹೂಬಾಣ ತೊಟ್ಟ
ಮನ್ಮಥನು ಜಗವ ಗೆಲ್ಲುವುದರಲ್ಲಿ ಸುಳ್ಳಿಲ್ಲ. ~ ಗೀತಗೋವಿಂದ

ಜಯದೇವನ ಗೀತಗೋವಿಂದ

ದೇವ ಧನ್ವಂತರಿಯೇ ನೀನಾಗಿದ್ದರೂ
ಮನ್ಮಥನ ಬಾಧೆಯಿಂದ ಬಳಲುತ್ತಿರುವ
ರಾಧೆಯಲ್ಲಿ ನಿನ್ನ ಅಮೃತದಂಥ ಅನುರಕ್ತಿಯು
ಅನುವಾಗದ ಹೊರತು ಗುಣವಾಗಳು.
ಅವಳ ಈ ನೋವನ್ನು ಉಪಶಮನಗೊಳಿಸದಿದ್ದರೆ
ಉಪೇಂದ್ರ ,
ನಿಜ.. ಸಿಡಿಲಿಗಿಂತಲೂ ಕ್ರೂರಿ ನೀನು. ~ ಜಯದೇವನ ಗೀತಗೋವಿಂದ

ಕಟ್ಟುಕತೆಗಳು-3

ಸುಮಾರು ದಿನಗಳಿಂದ ಪ್ರಶ್ನೆ ಕೇಳದೆ ದೀರ್ಘರುದ್ರಮೌನದಿಂದಿರುವ ಶಿಷ್ಯನನ್ನು ಕಂಡು ಪ್ರಜ್ಞಾಪರಿಮಿತರು ' ಇನ್ನು ಮುಂದೆ ನೀನು ಗುರು ಆಗುತ್ತೀ' ಎಂದರು. ಶಿಷ್ಯ 'ಇಷ್ಟು ದಿನ ನಾನು ಮೌನದಲಿ ಕೇಳಿದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ' ಎಂದವನೇ ಭಿಕ್ಷಾಪಾತ್ರೆ ಹಿಡಿದು ಹೊರಟ... ಆಶ್ರಮಕೆ ಹಿಂತಿರುಗಲಿಲ್ಲ.

~ ಆರ್.ಪಿ. >> ಕಟ್ಟುಕತೆಗಳು {3}

ಪೀರಿಯಡ್ ಮಿಕ್ಸ್ -2



ನನ್ನ ದೇವರನ್ನು ಹೊರಗೆ
ಮನೆಯ ಹೊರಗೆ
ಭದ್ರಗೊಳಿಸಿದ್ದೇನೆ ಪುಟ್ಟ ಗುಡಿ ಕಟ್ಟಿ
ಇವಳು ನಗುತ್ತಾಳೆ..
'ನನ್ನ ಮೂರು ದಿನಕ್ಕೆ ಹೆದರಿ
ದೇವರನ್ನು ಹೊರಗಿಟ್ಟ
ನೀನಾವ ಭಕ್ತನೋ ಪೋಕರಿ'
ಎಂದು ಉರುಳಾಡಿ ನಗುತ್ತಾಳೆ
ಅದೇ ಪ್ರತಿ ತಿಂಗಳು
ಹೊರಗೆ ಕೂರುವ ಮೂರೂ ದಿನ.

ಅವಳಿಗೇನು ಗೊತ್ತು
ಆ ನಗುವಿನಲ್ಲೇ ನನ್ನ ದೇವರು
ಪ್ರತ್ಯಕ್ಷನಾಗೋದು ಅಂತ!
ತಿಂಗಳ ಪೂಜೆಗೆ ಅವನು
ದಕ್ಕೋದು ಮೂರು ದಿನ ಮಾತ್ರ!!
ಅದಕ್ಕೆ ಈ ಏಕಾಂತ ಸೇವೆ.

ಅವಾಗಷ್ಟೇ ಅವಳು ಮಗು
ನಾನು ಮಹಾತಾಯಿ..
ಮಗುವಿಗಿಂತಲೂ ಮುಗ್ಧವಾಗಿ
ಅಪ್ಪಿ ಮಲಗುತ್ತಾಳೆ, ನೋವು
ಹೇಳುವ ನಾಲಗೆ ಮಾತು
ಮರೆತು ಮಲಗಿರುತ್ತದೆ.

ಆವಾಗ ದೇವರು ಕೂಡ
ನನ್ನೊಡನೆ ಲಾಲಿ ಹಾಡುತ್ತಾನೆ
ಗುಡಿಯಿಂದ ಮನೆಗೆ ಬಂದು..
ತಿಂಗಳಲಿ ಮೂರು ದಿನ ಮಾತ್ರ

~ ಆರ್.ಪಿ. >> ಪೀರಿಯಡ್ ಮಿಕ್ಸ್ (2)