Tuesday, December 29, 2009
ಇಷ್ಟೇ!
ನನ್ನೆದೆಯಲ್ಲಿ ಬುದ್ದ ನಗೆಯ
ಅಲೆಯೊಂದು ಇದೆ.
ಅವಳ ಅನಿವಾರ್ಯತೆ ಬಿಟ್ಟು
ಆಸೆಗಳಿಲ್ಲ!
ದೇಹದ ತುಂಬಾ
ಬೆಳೆದು ನಿಂತ ರೋಮಗಳಿಗೆ
ಅವಳ ಬೆವರ ಹನಿಗಳು ಬೇಕು
ಅಷ್ಟೆ!
ನಾನು ನಿರುಮ್ಮಳವಾಗಿ ಬದುಕುತ್ತೇನೆ
ಕಾರಣ,
ನನ್ನೆದೆಯಲ್ಲಿ ಬುದ್ದ ನಗೆಯ
ಅಲೆಯೊಂದು ಇದೆ.
ಗಾಂಧಿ ಮತ್ತು ಸ್ವಾತಂತ್ರ್ಯ
ಕುಂಕುಮ ಭೂಮಿಯ ತುಂಬಾ
ಮಲ್ಲಿಗೆ ಬಳ್ಳಿಗಳ ನೆಟ್ಟ ,
ಅವ ಕೊಟ್ಟ ಬಿಳಿಯ ಹೂಗಳು
ನಮ್ಮ ರಕ್ತ ಸಿಕ್ತ
ಕೈಗಳಲಿ ನಗುತ್ತಲಿವೆ!
ಅವನ ಎದೆಗೂಡಿನ
ಎಲುಬುಗಳಿಂದ ಬಿಡಿಸಿಕೊಂಡ
ಪಾರಿವಾಳದ ರೆಕ್ಕೆಗಳು
ನಮ್ಮ ತೆಕ್ಕೆಗಳಲಿ ಬಂಧಿ..!!
ಮುಷ್ಟಿಗಳಲಿ ಸಿಕ್ಕಿಕೊಂಡಿದೆ,
ಅದರ ಉಸಿರು.
ಉರಿವ ನಮ್ಮ ಚರ್ಮದ
ಮೈಬಿಸಿಗೆ ಸೀದುಕಂಟಾದ
ಅದರ ಪುಕ್ಕಗಳ ವಾಸನೆ..
ಬೆತ್ತಲಾಗಿದೆ ಹಕ್ಕಿ,
ಬಿಳಿಯ ಚಾದರ ಹೊದ್ದಿಸುವ
ಮೊದಲು ಮುಷ್ಠಿ ಸಡಿಲಿಸಿ!!!
ಪ್ರೇಮ ಪ್ರಸಂಗಗಳು-2
ಅದೊಂದು ನಿರ್ಜನ ನದಿ ತೀರದ ಹಾಸುಗಲ್ಲು... ಹನಿಗಳಷ್ಟೇ ನೀರು ಜಾರುವಲ್ಲಿ ಮಲಗಿದಂತೆ ಕುಳಿತ ಅವರಿಬ್ಬರು ಸಮುದ್ರ ಸೇರುವ ಕುರಿತು ಚಿಂತಿತರು. 'ಬದುಕು ದೊಡ್ಡದು... ಸಮುದ್ರದಷ್ಟು!' ಭೀತಿಯಿಂದ ಅವಳು ವ್ಯಾಖ್ಯಾನಿಸಿದಳು. ಮೊಗದ ಮೇಲೆ ಬೀಳುವ ಹನಿಗಳ ಅನಂದದಲ್ಲೇ ಆತನೆಂದ,' ನಾನೊಟ್ಟಿಗಿರುತ್ತೇನೆ ಬಾ. ಅಂಗೈಲಿ ಪ್ರಪಂಚ ತೋರಿಸುತ್ತೇನೆ ... ರಾತ್ರಿ -ಹಗಲುಗಳ ಹಂಗಿಲ್ಲದೆ !' ಆಕೆ ಈತನ ಭುಜಕ್ಕೆ ತಲೆಯೊರಗಿಸಿ ಕಣ್ಮುಚ್ಚಿದಳು. ಹುಡುಗನ ಮುಂದೆ ತೆರೆದುಕೊಂಡ ನೀಲವಿಸ್ತರ ಶರಧಿ... ಮೋಡ ಕವಿದಾಗಸದಲಿ ಮಿಂಚುಗಳು..*****
ಪ್ರೇಮ ಪ್ರಸಂಗಗಳು-1
ಹೂ ಮಾರುವ ಹುಡುಗ ಸಿರಿವಂತರ ಕೇರಿಯ ಹುಡುಗಿಯೊಬ್ಬಳಿಗೆ ನಿತ್ಯ ಮಲ್ಲಿಗೆ ದಂಡೆ ನೀಡುತ್ತಿದ್ದ, ಹಣ ಪಡೆದು...?! ಮಲ್ಲಿಗೆ ಮುಡಿದ ಆಕೆಯ ಕಣ್ಣ ತುಂಬ ಮಿಂಚಿನ ಬೆಳಕು , ರಿಕ್ತಕರನಾದ ಇವನ ಮನಸ್ಸಿನೊಳಗೆ ಹೂ ಮಳೆ...! ದಿನದಿನಗಳು ಉರುಳುತ್ತಲೇ ಪ್ರೀತಿ ಧಮನಿಧಮನಿಗಳಲು ವ್ಯಾಪಿಸಿ, ಬೆಳೆದು ಬೆಳದಿಂಗಳು ಸುರಿಯತೊಡಗಿತ್ತು.
ಆ ದಿನ ಮಲ್ಲಿಗೆ ಬದಲು ಗುಲಾಬಿ ನೀಡಲು ಮುಂದಾದ ಹುಡುಗನ ಕೈಗಳು ನಡುತ್ತಿದುದ ಗಮನಿಸಿದ ಹುಡುಗಿ ತಾನೆ ಕಸಿದು ಹೂ ಮುಡಿದಳು. ನಸುನಾಚಿದ ನಗುವೊಂದ ಆತನ ಕೈಗಿತ್ತಳು. ಮಲ್ಲಿಗೆ ಅಂಗಳದಿ ಚೆಲ್ಲಿತ್ತು! ಹುಡುಗನ ಸೈಕಲ್ಲಿನ ಹೂ ಬುಟ್ಟಿ ತುಂಬ ಗುಲಾಬಿಗಳು.
Subscribe to:
Posts (Atom)