Wednesday, October 8, 2014

ತೂಗಿಬಿಟ್ಟ ಪಾಪದ ಬಟ್ಟಲು



ನೆತ್ತಿಯ ಮೇಲೆ ಒಂದು ಸಣ್ಣ ರಂಧ್ರ ಕೊರೆದು
ಒಂದು ಬಟ್ಟಲು ತೂಗಿ ಬಿಡಲಾಗಿದೆ.
ಐದು ಕೈಗಳು ಇಹದ ಕಡಲಿನಲಿ ಅಪ್ಪಳಿಸುವ
ಉಪ್ಪಿನ ನೀರ ಮೊಗೆಮೊಗೆದು ತುಂಬಿಕೊಳ್ಳುತ್ತಿವೆ.
ಎಷ್ಟು ಧಾರಾಳ
ಎಷ್ಟು ಧಾವಂತ
ಎಷ್ಟು ದಾಹ
ಬಟ್ಟಲ ಹೊಟ್ಟೆ ತುಂಬುತ್ತಿಲ್ಲ
ಮೊಗೆದು ಸುರಿದದ್ದಷ್ಟೂ ನಿಲ್ಲುತ್ತಿಲ್ಲ

ಪಂಪು ಪೈಪು ಜೋಡಿಸಿ ಕಡಲನೇ
ಬಟ್ಟಲಿಗೆ ಬೋರಲು ಇಡಲಾಯಿತು
ನೆತ್ತಿಯ ಪಾದ ನಿಂತಿದ್ದ ಹಾಯಿದೋಣಿ ತಳಕ್ಕೆ ಬಿದ್ದು ಚೂರಾಯಿತು.
ಬಟ್ಟಲಿನ್ನೂ ಖಾಲಿಯೇ!
ದೋಣಿಯ ಕಟ್ಟಿಗೆ ಸುಟ್ಟು ಬೆಂಕಿಯ ತುರುಕಿ
ಮೂಗುಗಳ ಹಿಡಿದು ಜೀವದುಸಿರುಗಳ ಅದುಮಿ
ಬ್ರಹ್ಮಾಂಡವನೇ ಹಿಡಿದು ಬಟ್ಟಲ ಸುರಿಯಲು, ಏನೂ ಆಗಲಿಲ್ಲ.. ತುಂಬಲಿಲ್ಲ

ದಾರಿಹೋಕ ತಿರುಕನೊಬ್ಬ
ತೂಗಿಬಿಟ್ಟ ಪಾಪದ ಬಟ್ಟಲು ರಾದ್ಧಾಂತವ ಕಂಡು
ಜೋಳಿಗೆಯಿಂದ
ಅರ್ಧ ಎಂಜಲು ಹುಣಸೆಹಣ್ಣು ಹಾಕಿದ
ಬಟ್ಟಲು ಥಟ್ಟನೆ ನೆಲಕ್ಕೆ ಬೋರಲು ಬಿದ್ದಿತು
ಬ್ರಹ್ಮರಂಧ್ರದಲ್ಲಿ ಸಹಸ್ರಾರದ ಹೂ ಹುಟ್ಟಿ
ಸರ್ವವೂ ಸ್ವಸ್ಥಾನ ಸೇರಿಕೊಂಡವು. ~

ಮಠದ ಬೆಕ್ಕು ಮತ್ತು ದೇವರ ಸಾವು

ಭವದ ಲಜ್ಜೆಯ ತೊರೆದು
ಇಹದ ಕಾಮವ ಹಳಿದು, ಒಂದೊಂದೂ ಅರಿವೆಯ
ಅರಿವುಗಳಲಿ ಹರಿದುಹಾಕಿ
ಬೆತ್ತಲಾಗಬೇಕಿತ್ತು ಬಯಲಿನಲಿ ಗುರುವು

ಕುಟೀಚಕನ ಸುತ್ತ ಕೋಟೆಯ ಕಾವಲು
ನಿಂತು ಏನ ಕಾಯಬೇಕಿತ್ತು? ಒಳಗೆ ಏನು ನಡೆದಿತ್ತು !
ವಿರಕ್ತನ ಮೈಯಲ್ಲಿ ಯಾವ ರಿಕ್ತಿಯು ಸುಳಿದಿತ್ತು ?
ಕಾಣಬೇಕಿತ್ತು ತೆರೆದಪರದೆಯಲಿ ಗುರುವು

ಎದೆಯಲ್ಲಿ ಯೋಗಮುದ್ರೆಯ ಹೊತ್ತ ಮೇಲೆ
ಸ್ತನ ಕಂಡು ಚಿತ್ತದಲಿ ಸ್ಥಾನಪಲ್ಲಟಗೊಂಡರೆ, ಅಲ್ಲಿ
ವಿಷದ ಕಳ್ಳಿಸಾಲು ಬೆಳೆದು ರೋಗದ ನಾಯಿ ಹೆಣ ಬಿದ್ದುದಲ್ಲದೇ
ಮತ್ತಾವ ವಾಸನೆ ಇರದು.
ಅರಳಬೇಕಿತ್ತು ಗಂಧದಹೂವಾಗಿ ಗುರುವು

ಅದಾಗದೇ

ನೆಲಕೆ ಕೃಷ್ಣಾಜಿನ, ಮೈತುಂಬಾ ಬೆಚ್ಚಗೆ ಕಷಾಯವಸ್ತ್ರ
ಮಿನುಗುವ ರುದ್ರಾಕ್ಷಿ ಸ್ಪಟಿಕ ಮಣಿಮಾಲೆಗಳು
ಬೆಳ್ಳಿಯ ಪಾದುಕೆಯ ಮೇಲೆ ಚಿನ್ನದ ಅಂಗುಷ್ಠ
ಕೈಯಲ್ಲಿ ಜಪಮಣಿ, ಬಾಯಿತುಂಬಾ ಧರ್ಮಮಂತ್ರ
ದೀನತೆಯನ್ನು ಉದ್ದೀಪಿಸುವ ಕ್ಷುದ್ರ ಮೊಗಮಂದಹಾಸ
ಅಯ್ಯಾ ..
ಜಂಗಮರ ಮಠದಲ್ಲಿ ಬೆಕ್ಕನ್ನು ಸಾಕಲಾಗಿ
ಆಕಳ ಕೆಚ್ಚಲಿಗೆ ಸೋಂಕು ತಾಗಿತು
ಮಕ್ಕಳು ಹಸಿದುವು, ಪ್ರಸಾದ ರುಚಿಸದಾಯಿತು.
ಕೆಚ್ಚಲ ತುಂಬಾ ಉಗುರು ಚುಚ್ಚಿದ ಗುರುತುಗಳಲಿ ರಕ್ತ ಒಸರುತ್ತಿರಲು
ಯಾಜಕರು ಬಲಿಗೆ ಸಿದ್ದರಾದರು, ಭಕ್ತರು ಉಮೇದಿನಲಿ
ಸಾಕ್ಷಿಯಾದರು.

ಇದಾದ ಮರುಕ್ಷಣ ದೇವರುಗಳು ಸತ್ತುಹೋದ
ಸುದ್ದಿಯೊಂದು ಬಲಿಪೀಠದ ಕೆಳಗೆ
ಬಿಸಿ ರಕ್ತದಂತೆ ಹರಿಯಿತು! ~

Monday, May 26, 2014

ಬಿಡಿ ಹೂ ~ 26

ಹೂಗಳು ಹೊದ್ದ 
ಇಹದ ಪರಿಮಳವ 
ಬಯಲಗಾಳಿ ಕದ್ದ ಮೇಲೆ
ದುಂಬಿಗಳ ಕಣ್ಣು 
ಹೆಣ್ಣಿನ ಮುಂಗುರುಳ ಮೇಲೆ !

ನಾನು ಆಲಿಕಲ್ಲು



ನಾನು
ಮುಂಗಾರು ಮರೆತು
ಎಸೆದು ಹೋದ ಆಲಿಕಲ್ಲು.

ಕೆಳಕ್ಕೆ ಬಿದ್ದಾಗ
ಪುಟ್ಟ ಮಕ್ಕಳ ಬೊಗಸೆ ತುಂಬಿಕೊಳ್ಳುತ್ತೇನೆ
ಮನುಷ್ಯನ  ಎದೆಯಂಗಳದಲ್ಲಿ
ನೆನಪಾಗಿ ಕರಗುತ್ತೇನೆ!

ಆದರೂ ನಾ ಬರುವುದನ್ನು
ದರಿದ್ರಕಾಲವೆನ್ನಲಾಗಿದೆ .
ಆದರೂ ನಾ ಬಂದೇ ಬರುತ್ತೇನೆ. 
ಎಲ್ಲರಂತೆ ನನಗೂ ಬದುಕಲು ರಹದಾರಿಯಿದೆ. 

ರತ್ನಾವಳಿ ~ 2

ಹೇಳಿದ್ದು ಇಷ್ಟೇ
ಯಾವೊಬ್ಬನ ಮುಖವನ್ನು
ಕನ್ನಡಿಯನ್ನು ಆಧರಿಸಿ ನೋಡಲಾಗುತ್ತದೆಯೋ
ನಿಜದಲ್ಲಿ ಅದು ಅವನದ್ದಲ್ಲ!

~ ರತ್ನಾವಳಿ , ನಾಗಾರ್ಜುನ | ಕ್ರಿ. ಶ. 150

ರತ್ನಾವಳಿ ~1

ಭೂತ ಮತ್ತು ಭವಿಷ್ಯದ
ವಸ್ತು ಮತ್ತು ಪ್ರಜ್ಞೆಗಳು ಅರ್ಥಹೀನ
ಇವುಗಳಿಗೆ ಭಿನ್ನವಾಗಿಲ್ಲದ
ವರ್ತಮಾನದ ವಸ್ತುವೂ ಅಷ್ಟೇ!

~ ರತ್ನಾವಳಿ , ನಾಗಾರ್ಜುನ | ಕ್ರಿ. ಶ. 150

ಯೊಸ ಬುಶಾನ್ | 3

ಗುಡಿಯ ಹಿಂಬಾಗಿಲಿನಿಂದ
ಬಂದಿದ್ದು...
ದವನದ ಗಿಡವೆಷ್ಟು ಬೆಳೆದಿದೆ ಕಾಣಲು!

裏門の
寺に逢着す
蓬かな

~ ಯೊಸ ಬುಶಾನ್ | 3

ಹಾಯ್ಕು ಹಗರಣ ~ 8

ತಣ್ಣನೆಯ ಬೆಂಕಿ ಸುಡುವುದಿಲ್ಲ
ಇಂಚಿಂಚೆ ಕೊಲ್ಲುತ್ತದೆ..
ಇರಿದ ರಕ್ತ ಸೋರದ ಹಾಗೆ!


***

ಗಾಣದಲ್ಲಿ ಒಣ ಹಾಕಿದ್ದ ಎಳ್ಳು
ಸಿಡಿದು
ಮೊಳೆತು ಹೂ ಬಿಟ್ಟಿತು.


 

ಬಾಶೋ | 307

ದೇಗುಲದ ಘಂಟೆಯೂ
ಕೀರುತ್ತದೆ.
ಸೀರುಂಡೆಯ ದನಿಯಂತೆ!

撞鐘も
ひびくやうなり
蝉の声

~ ಬಾಶೋ | 307

ಮಳೆಯೇ ಬಾ

ಎಲ್ಲವೂ ಬೇಡವಾದಾಗ
ನಿನ್ನನ್ನೇ
ಕಾಯುತ್ತೇನೆ ಅನವರತ
ಬಾ ಮಳೆಯೇ
ಬಾ ನಿನ್ನ ರಭಸಕ್ಕೆ
ಸಿಕ್ಕು ಕೊಚ್ಚಿ ಹೋಗಲಿ
ಎಲ್ಲ ಕಿಚ್ಚುಗಳು
ಆ ತೇವದಲ್ಲೊಂದು ಹೊಸಕಾಳು ಬಿದ್ದು
ಮೊಳೆತು ಹಸಿರಾಗಲಿ..
ಜಗದುದ್ದ ಜಗದಗಲ ನೆರಳಾಗಲಿ.
ಮಳೆಯೇ ಬಾ.. ಎಲ್ಲೂ ನಿಲ್ಲದೆ ಬಾ. 


ನಿನ್ನ ಛಾತಿ

ನಿಜವೇ..
ನಿನಗೆ ಛಾತಿ ಇದ್ದರೆ
ಬಾ
ನನ್ನದೆಯ ಒಳಗೆ ನಿನ್ನ ನದಿ ಹರಿಸು!

ನೀ ಹರಿದು ಬಂದ್ದದ್ದೇ ಆದರೆ
ಈ ಬಯಲಬಾಗಿಲ ಬೀಗಗಳು
ಕರಗಿ ನಿನ್ನ ಕಾಲ್ಗೆಜ್ಜೆಯಾಗುತ್ತವೆ.
ಅಲೆಯ ನೊರೆಗಳು ತುಂಬಿ
ಗಾಳಿಗುಳ್ಳೆ ಒಡೆದು, ಆಹಾ!
ಅದೇನು ತಾಜಾ ಉಸಿರು
ಹೊಸಒಲೆಯಲ್ಲಿ ಉರಿವ ಬೆಂಕಿ.
ಮತ್ಸ್ಯಗಂಧ ತುಂಬಿದ
ನಿನ್ನೊಡಲಿನಲ್ಲಿ ನಾ ಜೇನಾಗಿಳಿಯುತ್ತೇನೆ ~ ಕಲ್ಲು ಹೂವೊಂದು ಮೈನೆರೆತು

ಶಕುಂತಲೆ ಮತ್ತು ಉಂಗುರ

ಈ ಕಾಲದ ಶಕುಂತಲೆಯರ
ಉಂಗುರಗಳನ್ನು
ಮೀನುಗಳು ನುಂಗುವುದೇ ಇಲ್ಲ.
ಅದನ್ನು ತೊಡಿಸಿದ ದುಷ್ಯಂತರು
ಮಾತ್ರ
ಪ್ರತಿನಿತ್ಯ ಬೆರಳುಗಳಲ್ಲಿ
ಹುಡುಕುತ್ತಾರೆ!


*** 
ಅವಳ ವ್ಯಾನಿಟಿ ಬ್ಯಾಗಿನಲ್ಲಿ
ಬೇಕಾದಷ್ಟೂ ಉಂಗುರಗಳು
ಅವಳು ಹೆಸರನ್ನಷ್ಟೇ ಹುಡುಕುತ್ತಾಳೆ

ಕಣ್ರೆಪ್ಪೆಯ ಸಂಧಿಯಲ್ಲಿ
ಎಲ್ಲೋ ಅವಿತುಹೋಗಿವೆ!  


***

ಅಕ್ಕ ಕೇಳೆ
ಚೆನ್ನಮಲ್ಲನ ಸುತ್ತ ಹಿಡಿದಿಪ್ಪ
ನನ್ನ ಕಾಯದ ಮೇಲೆ
ಉರಿವ ಒಲವೇ
ಉಂಗುರ ಕಾಣೇ! 


***

ಉಂಗುರ ಕಳೆದ ಮೇಲೆ
ಶಕುಂತಲೆ ಏನು
ಶಬರಿಯಂತೆ ದಾರಿ ಕಾಯಲಿಲ್ಲ!
ಒಡಲ ಬೀಜವ ಕಾಯ್ದು
ಮೊಳೆಸಿ ಭರತನೆಂಬ
ವಸಂತದ ಗಾನವ ಹಾಡುತ್ತಾಳೆ.
ಅವಳು ವಾಸ್ತವದ ವಾರಸುದಾರೆ.


***

ಉಂಗುರ ಕದ್ದಿದ್ದಂತು ನಿಜ
ಬಿದ್ದಿದ್ದು ಸುಳ್ಳೇ ಸುಳ್ಳು!
ಹಾಗೆ ಕದ್ದಿದ್ದನ್ನು ಮೀನಿನೊಳಗೆ ಕಾಪಿಡಲಾಯ್ತು
ದೂರ್ವಾಸನ ಶಾಪ
ಹೆಸರುಳಿಸಿಕೊಳ್ಳಲು
ಇಷ್ಟೆಲ್ಲಾ ಹೆಣಗಬೇಕಾಯ್ತು


***

    

ಬಾಶೋ | 6

ನೀರಿನೊಳಗೆ
ತಮ್ಮ ಚಿತ್ರವ ನೋಡಿಕೊಳ್ಳುತ್ತಿವೆ
ನೀಲಿ ಬಾವುಟದ ಕಣ್ಣಿನ ಪಾಪೆಗಳು!

かきつばた
にたりやにたり
みずのかげ

~ ಬಾಶೋ | 6

ಡ್ರ್ಯಾಗನ್ನ ಉರಿನಾಲಗೆ

ಭಾಷಣಗಳ ಚೌಕಟ್ಟಿನ
ಹೊರಗೆ ಎಳೆದುಕೊಳ್ಳಬೇಕು..
ಈ ನಾಲಿಗೆಯ
ಹದ ಮಾಡಿಕೊಳ್ಳಬೇಕು
ಒಲವ ಕುಲುಮೆಯಲ್ಲಿ ಕಾಯಿಸಿ..
ಚೂಪಾಗಿಸಬೇಕು.

ಮೈಕಿನ ಮುಂದೆ ಬಡಿದು ಬಡಿದು
ಮಾತನಾಡಿದ್ದು
ಸಾಕು ಸಾಕು
ಉಳುವವನ ಬಗ್ಗೆ
ಹೊರುವವನ ಬಗ್ಗೆ
ಹೆಣ್ಣಿನ ಬಗ್ಗೆ
ಭೂಮಿಯ ಬಗ್ಗೆ
ಗೊತ್ತಿದ್ದದ್ದು ಗೊತ್ತಿಲ್ಲದ್ದು
ಎಲ್ಲವನ್ನೂ ಬಾಚಿಕೊಂಡು
ಬಡಬಡಿಸಿದ್ದು.

ಆದರೆ
ಡ್ರ್ಯಾಗನ್ನ ಉರಿನಾಲಗೆ ಬೇಕಾಗಿದೆ
ಸುಡಬೇಕಾದ ಕೊಳಕು ತುಂಬುತ್ತಿದೆ
ಮಾತು ಸತ್ತ ನೆಲದಲ್ಲಿ
ಮೌನ ಒಂದು ಕೋವಿ
ಈಡು ಹೊಡೆಯಲು ಕ್ಷಣಗಳು ಕಾದಿವೆ! ~ ಕೋವಿ ಮತ್ತು ಕೊಳಲು

ವೈಶಾಖದ ಸಂಜೆ

ವೈಶಾಖದ ಸಂಜೆ
ಬಿರುಗಾಳಿ, ಸಣ್ಣಮಳೆ
ಒಳಗೆ ಬೆವರು
ಹೊರಗೆ ಮಲ್ಲಿಗೆಮೊಗ್ಗು ನೆನೆಯುತ್ತಿವೆ.

ಸೊಡರೊಂದ ಹೊತ್ತಿಸಲು
ಅವಳ ನಡು ಬಳಸಿದ ಕೈಗಳು
ಉರಿ ತಗುಲಿಸಿಕೊಂಡಿವೆ.

ಮಿಂಚಿನಮುತ್ತು ಚೆಲ್ಲುವ ಇಂದು
ಬೆಳಗಾನ ದೀಪಾವಳಿಯಲ್ಲಪ್ಪೋ!! ~ ಮಿಥುನ ಸಂಕ್ರಮಣ

ಅವನೊಳಗೆ ಅವನ ಸಾವು

ಈ ಮನುಷ್ಯನೇಕೆ ನಿನ್ನಂತೆ
ಹರಿಯುದಿಲ್ಲ ಹೊಳೆಯೇ
ಎದೆಯಲ್ಲಿ
ನಿಂತು ನಿಂತು ಕೊಳೆಯುತ್ತಾನೆ, ರಾಡಿಯಾಗಿ.

ಮೀನು ಏಡಿ ಹಾವು
ಕನಿಷ್ಠ ಮನುಷ್ಯನೂ ಬದುಕುತ್ತಿಲ್ಲ.
ಅವನೊಳಗೆ
ಹೂ ಕೂಡ ಬೆಳೆಯದಷ್ಟು ಬಗ್ಗಡ!

ಅವನು ಹರಿಯುತ್ತಿಲ್ಲ,
ಕಾಲದ ಸ್ತಬ್ದತೆ ಬಯಸುತ್ತಾ
ಕಾಲವಾಗಿದ್ದಾನೆ. ಅವನ ಬಗ್ಗಡದಲ್ಲಿ
ಅವನವೇ ಕಾಲುಗಳು ಹೂತು.

ಅವನೀಗ ಜೀವನೂ ಅಲ್ಲ
ಉಸಿರು, ಮಾತು, ನಡೆ
ಎಲ್ಲ ಯಂತ್ರಸಾದೃಶ.
ಅವನದೇ ಬುದ್ದಿಯಲ್ಲಿ ಪ್ರಜ್ಞೆ ಅಮಾನತಾಗಿದೆ!

ಹರಿಯದ ನದಿಯೊಂದ ಒಳಗೆ ಸಾಕಿದರೆ
ಅವನೊಳಗೆ ಅವನ ಸಾವು!! ~ ಕೋವಿ ಮತ್ತು ಕೊಳಲು

ಎಷ್ಟೊಂದು ಚೌಕಟ್ಟುಗಳು

ಅಡಿ ಇಟ್ಟಲೆಲ್ಲ ಎಷ್ಟು ಚೌಕಟ್ಟುಗಳು
ಗುರುವೇ ಇಲ್ಲಿ ?!
ಒಂದು ತಪ್ಪಿದರೆ ಮತ್ತೊಂದು,
ಬಯಲೆನ್ನುವುದು ಬರೀ ಬಾಯಿ ಮಾತು!

ಹರಡಿಕೊಳ್ಳಲು ಕೈ ಕೋಳ
ಹಾಡಿಕೊಳ್ಳಲು ಬಾಯಿ ಬೀಗ
ಹೆಜ್ಜೆ ಇಟ್ಟಲ್ಲಿ ಕಾಲು ಬಂಧಿ.
ಬಾಗಿಲುಗಳ ದಾಟುತ್ತಾ ದಾಟುತ್ತಾ
ಮತ್ತೆ ಮತ್ತೆ ಬಾಗಿಲುಗಳನ್ನು ಸಂಧಿಸುತ್ತಲೇ
ಇದ್ದೇನೆ ಇಲ್ಲೇ!

ನಡಿಗೆಯ ದಣಿವು ನೀಗುತ್ತಿಲ್ಲ.
ದಾರಿ ಮುಗಿಯುತ್ತಿಲ್ಲ
ಸರಿದಷ್ಟೂ ಗೋಡೆಗಳು ಏಳುತ್ತಿವೆ
ಬಾಗಿಲುಗಳು ಕಾಣುತ್ತಿವೆ.

ಗುರುವೇ
ನಾನು ಹೊರಟಿದ್ದು ಕದಳಿಗೆ
ಎಷ್ಟೊಂದು ಚೌಕಟ್ಟುಗಳು
ಎಷ್ಟೊಂದು ಬಾಗಿಲುಗಳು
ಎಲ್ಲಯ್ಯ ಬಯಲು ?! ~ ಕೋವಿ ಮತ್ತು ಕೊಳಲು

Tuesday, May 20, 2014

ಒಂದು ರಸ್ತೆ ಮತ್ತು ಹತ್ಯೆ



ಕೊಡಲಿ ಮಚ್ಚು
ಗರಗಸ ಮೇಷಿನು
ಎಷ್ಟೆಲ್ಲಾ ಸಿದ್ದವಾಗಿವೆ
ಇದು ಸತ್ಯದ ಭಯವೊ?
ಅಥವಾ ಸುಳ್ಳಿನ ಕಪಟವೊ ?

ಹೊಸ ರಸ್ತೆಗಾಗಿ
ಹಳೆಯ ಮರಗಳನ್ನು
ಅವುಗಳ ಮಕ್ಕಳನ್ನು
ಹುದುಗಿರುವ ಭ್ರೂಣಗಳನ್ನು
ಹುಡುಕಿ ಹುಡುಕಿ ತುಂಡು ಮಾಡಲಾಗುತ್ತಿದೆ
ಮತ್ತೆ ಚಿಗುರದಂತೆ ಬೇರಿಗೂ
ಆಮ್ಲದ ಸಿಂಪರಣೆ.

ಆರು ಪಥಗಳ ಹೊಸರಸ್ತೆ ಬರುತ್ತಿದೆ
ಊರಿನೊಳಗೆ
ಎದೆಯನ್ನು
ಸೀಳಿಕೊಂಡು ಹೋಗುತ್ತದೆ
ರಸ್ತೆ ಏನಿದ್ದರೂ ವಾಹನಗಳಿಗೆ
ಜೀವಗಳಿಗೆ ಅಲ್ಲ!

ಅಲ್ಲೊಂದು ನಾಯಿ
ಇಲ್ಲೊಂದು ಕರು
ಮತ್ತೊಮ್ಮೆ ಮನುಷ್ಯ
ರಸ್ತೆಯ ರಕ್ತದಾಹ.. ಮುಗಿಯುವುದಿಲ್ಲ

ಉಬ್ಬುಗಳೂ, ನಿಲ್ದಾಣಗಳೂ
ಸರ್ಕಲ್ಲುಗಳು
ಬೇಕಾದಷ್ಟಿವೆ.. ಆದರೆ ಯಾರು ನಿಲ್ಲುವುದಿಲ್ಲ!  
ಅಲ್ಲೆಲ್ಲೂ ಮರಗಳು ಇಲ್ಲ
ಹಾಗಾಗಿ ಹೂ-ಹಣ್ಣು ಇಲ್ಲ
ಹಾಗಾಗಿ  ಹಕ್ಕಿಗಳು ಇಲ್ಲ
ಹಾಗಾಗಿ ನೆರಳೂ ಇಲ್ಲ
ಹಾಗಾಗಿ ಜನರೂ ಇಲ್ಲ
ಬರಿಯ ರಸ್ತೆ ಹರಿದು ಮಲಗಿದೆ
ಉಂಡು ಉರುಳಿದ ಹೆಬ್ಬಾವಿನಂತೆ!  

Monday, May 19, 2014

ಬಾಶೋ |364



ಹಸಿರೆಲೆ, ಚಿಗುರ ಕೆಂದೆಲೆಗಳ ನಡುವೆ
ಸೂರ್ಯ ಹರಿಯುತ್ತಿದ್ದಾನೆ..
ಆಹಾ! ಎಷ್ಟು ಪವಿತ್ರ!

あらたふと
青葉若葉の
日の光

~
ಬಾಶೋ |364

ರ್ ಯೊಕನ್ ತೈಗು | 92



ತೋಟದಲ್ಲಿ ಕ್ರಿಮಿಗಳದ್ದೇ
ಹಾಡು ಕೇಳಿಬರುತ್ತಿದೆ.
ಮುಸ್ಸಂಜೆಯಾಗಿರಬೇಕು!

宵暗や
せむざいはただ
虫の声
~
ರ್ ಯೊಕನ್ ತೈಗು | 92

ಬಾಶೋ |100



ಕಿಟಕಿಯಿಂದ ಬಿದ್ದ
ಚಂದಿರನ ಬೆಳಕಿನ ಚಚ್ಚೌಕ,
ನನ್ನ ಮನೆ.

我が 宿 和
資格 な 影 お
窓 の 月

~
ಬಾಶೋ |100