Thursday, May 16, 2013

ಮಾತನಾಡದ ಕವಿತೆ

 ಮಾತನಾಡದ ಕವಿತೆ
****************
 
ಮಾತನಾಡದ ಕವಿತೆಯೊಂದು
ಬೇಕಾಗಿದೆ
ಕೊಡುವಿರಾ ಯಾರಾದರೂ
ಘನಕವಿಗಳು!
ಗುರುದಕ್ಷಿಣೆಗೆ
ಅರಸುತ್ತಿದ್ದೇನೆ.

ಇಲ್ಲಿ,
ಗಾಳಿ ಸುಯ್ ಗುಡುತ್ತದೆ
ಮಳೆ ಮೊರೆಯುತ್ತದೆ
ದುಂಬಿ ಝೆಂಕರಿಸುತ್ತದೆ
ಎಲೆಗಳು ತೂಗುತ್ತವೆ
ಹೂ ಅರಳುತ್ತದೆ
ಹಕ್ಕಿ ಹಾಡುತ್ತದೆ.

ಹಾಗಿದ್ದರೆ ಎಲ್ಲಿದೆ ಆ
ಮೌನ... ಮಾನವಂತ ಮೌನ
ಕವಿತೆಯೊಳಗೆ
ಎಲ್ಲಿ ಎಲ್ಲಿ ಅಡಗಿದೆ? ಕೊಡುವಿರಾ
ಹುಡುಕಿ.. ಹುಡುಕಿ
ಯಾರಾದರೂ
ಘನಕವಿಗಳು!

ಮಾತನಾಡದ ಉಪಮೆ, ರೂಪಕ , ಪದ
ಕೊನೆಗೆ ಅಕ್ಷರವನ್ನು
ತಾ ಎಂದ ಗುರು ಬೋಧಿಧರ್ಮ
ಅರಸುತ್ತಿದ್ದೇನೆ. ಕನಿಷ್ಟ
ತೋರುವಿರಾ ಯಾರಾದರೂ
ಘನಕವಿಗಳು!
                                    >> RP

ಬಿಡಿ ಹೂ: 9




ಅದೆಷ್ಟೋ
ಪ್ರೀತಿಸಿದರು , ಪ್ರೇಮಿಸಿದರು
ಪ್ರಣಯದ ಪ್ರಲೋಭನೆಗೆ
ಪರಿತಪಿಸಿದರು.
ನಾನೋ
ಹೂವು ಹಣ್ಣು
ಗಾಳಿ ಮಳೆ
ಭೂಮಿ ಆಕಾಶಗಳ
ಸಂಗಕ್ಕೆ ಸಿಕ್ಕು ,
ಕಳೆದುಕೊಳ್ಳುವ ಭೀತಿಯಲ್ಲಿ
ಪ್ರೀತಿಸಲೇ ಇಲ್ಲ!

ಬಿಡಿ ಹೂ : 8



ಎಣಿಸದೇ ಬಿದ್ದ
ದಾರಿಯಲಿ
ನಡೆಯುತ್ತಲೇ
ಇದ್ದೇನೆ..
ನಡೆದವನಿಗೆ
ಮಾತ್ರ
ದಾರಿಗಳು
ದಕ್ಕುತ್ತವೆ.

*****


ಜೊತೆಗಾಗಿ ಅರಸಿದ
ಕಣ್ಣುಗಳಿಗೆ
ದಹಿಸುವ ಬೆಳಕು
ಕೊರೆಯುವ ಕತ್ತಲು
ನಿರ್ವಾತ ನಿಷ್ಕರುಣ ವ್ಯೋಮ
ಕಂಡಿತು.



 

Thursday, May 2, 2013

ಹೂ ಗೊಂಚಲು :

ಈ ಕಾರಿರುಳ ನಿಟ್ಟುಸಿರುಗಳು
ಚಂದಿರನ ಕರೆತರಲಾರವು ..
ಕಳೆದುಕೊಳ್ಳುವ ಸುಖದಲಿ
ಮೈಮರೆತ ಬಾನಿಗೆ ಅವನೊಬ್ಬ
ಹಳೆಯ ಗೆಣೆಯ!
ನೆನೆಸಿಕೊಳ್ಳುವ ಕಣ್ಣಿಗೆ
ಅವನಿಲ್ಲದ ಕತ್ತಲು
ಕತ್ತು ಹಿಸುಕುವ ಕೈಯಂತೆ ...
ಉಸಿರು ಕಟ್ಟುತ್ತಲೇ ಇದೆ..
ನಿನ್ನೆದೆಯಲಿ ಚಂದಿರನಿಲ್ಲ !!

*********************

ಅಸಂಖ್ಯ ಕ್ಷೀರಪಥಗಳು
ನಿನ್ನ ಅಕ್ಷಿಪಟಲದೊಳಗೆ ಹುದುಗಿವೆ..

********************

ಮಲ್ಲಿಗೆಯ ಮೊಗ್ಗೊಂದು ಕಾಣೆಯಾಗಿದೆ
ಹುಡುಕಿಕೊಡುವಿರಾ...
ರಾತ್ರಿಯೆಲ್ಲಾ ಎದೆಯಂಗಳದಿ ಹರಡಿತ್ತು,
ಘಮ್ಮಾನೆ ಪರಿಮಳ ಚೆಲ್ಲಿ .

*********************

ಕಾಯುತ್ತಲೇ ಇರುವ ಒಲವಿನಲಿ ಅದೆಷ್ಟೋ ಕನಸುಗಳು
ಪರಿಭ್ರಮಿಸುತ್ತಲೇ ಇವೆ...
ಇವತ್ತು ..
ನಾಳೆ..
ನಾಳಿದ್ದು ...
ನಿನ್ನ ಪ್ರೀತಿಯ ಮೋಹರಾಗಬಹುದೆಂದು
ನನ್ನೆದೆಯ ಮೇಲೆ.
ಧ್ಯಾನ..
ಹಳಹಳಿಕೆ...
ನಿಟ್ಟುಸಿರು ...
ಈಗ ಚಂದ್ರಮಗೆ ಚಕೋರಿಯ ಚಿಂತೆ

**********************

ಆಲಿಕಲ್ಲುಗಳನ್ನು ಆಯ್ದು ಬೊಗಸೆ
ತುಂಬಿಕೊಂಡಂತೆ... ಪ್ರೀತಿ !
ಹಿಂಗಾರು -ಮುಂಗಾರುಗಳ ಕಾಯಬೇಕು
ಚಂಡಮಾರುತವ ನೆನೆಯಬೇಕು ..
ಅಲ್ಲೆಲ್ಲೋ ಸಾಗರದಲಿ ವಾಯುಭಾರ
ಕುಸಿಯಬೇಕು ....
ಅದರೂ ಖಾತ್ರಿಯಿಲ್ಲ ....
ಬಿದ್ದಾಗಷ್ಟೇ ಆಯ್ದುಕೊಳ್ಳಬೇಕು!

***************

ನನ್ನೊಳಗೂ ನಿನ್ನೊಳಗೂ
ಏನೂ ಇಲ್ಲ , ಒಲವಿನ ಹೊರತು.
ಇಬ್ಬರೂ ಹಾಡುವುದು ,
ಸಮರಸ ಭಾವಗಳು ಕಲೆತು.
ನೀನು ಹರಿಯಲು ನಾನು ದಡ
ಉದ್ದಕೂ ಅದೆಷ್ಟು ಮಾತು
ಶಬ್ದ ಮುದ್ರೆಯ ಒಡೆದು !

**************

ಹೇ ,
ಗಾಳಿ...
ಚಂದ್ರ...
ತಾರೆ...
ಅಲೆ...
ಶಬ್ದ- ನಿಶ್ಯಬ್ದ ಗಳೇ
ಕಣ್ಣು ಮುಚ್ಚಿಕೊಳ್ಳಿ
ನನ್ನ ಕನಸಿನ ಕಕ್ಷೆಯಲಿ
ಅವಳು ನಗ್ನಳಾಗುತ್ತಿದ್ದಾಳೆ !

*************

ಈ ಚಂದಿರನೆಕೋ ಮುನಿಸಿಕೊಂಡ ..
ಇವಳ ಜೊತೆಗೆ ..
ಒಳಗೂ ಹೊರಗೂ
ಕತ್ತಲು ನನಗೆ !

**************
ಹೂ ಗೊಂಚಲು :
ವರುಷಗಳ ತರುವಾಯ
ಹಳೆಯ ಪುಸ್ತಕದಿ
ಸಿಕ್ಕಿದ ನವಿಲುಗರಿ..
ಎದೆಯೊಳಗೆ ಹಾಗೆ ಕಾಪಿಟ್ಟುಕೊಂಡಿದ್ದೇನೆ,
ಹೊಸ ಪುಸ್ತಕದಲಿ ಅವಳ ಹೆಸರಿಲ್ಲ !

**********


ರಾತ್ರಿಯೆಲ್ಲಾ
ಕೂಡುತ್ತಾ ಕಳೆಯುತ್ತಾ
ಮತ್ತೆ ಮತ್ತೆ ಎಣಿಸುತ್ತ ಮುತ್ತಾ..
ಏರಿಳಿಯುತ್ತಾ
ಬೆಳಗಾಯಿತು ಎಂದಳು ..
'ಹೋ ಬಜೆಟ್ ಎಷ್ಟಾಯಿತು ' ಎಂದೆ
' ಗ್ರೀಷ್ಮಕ್ಕೆ ನಾವು ಮೂರು
ಸಂಜೆಗೆ ಮತ್ತೆ ಎಣಿಸುವ ' ನಾಚುತ್ತಾ
ಸ್ನಾನದ ಮನೆ ಹೊಕ್ಕಳು.

********************

'ನನ್ನ ಸುತ್ತ ಅದೆಷ್ಟೋ
ಬಣ್ಣದ ಗಾಳಿಪಟಗಳು ಗಿರಕಿ ಹೊಡೆಯುತ್ತಲೇ ಇವೆ
ನಿನ್ನಂಥಾ ಚಂದಿರನ ಮೀರಿಸಬಹುವೆ ...'
ಉಸಿರ ಹೀರುವ ಮುನ್ನ ಪಿಸುಗುಟ್ಟಿದಳು.
ಬೆಟ್ಟದಲಿ ಹೂಗಳಿಗೆ ಲೆಕ್ಕವೇ??
ಕಾಡು ಸಂಪಿಗೆ ಸಾಕು .. ನೆತ್ತಿಯ ಮತ್ತಿಗೆ !
ಗುನುಗಿದೆ ಕಿವಿಯೊಳಗೆ
ಅವಳು ಆಲಾಪಿಸುವ ಹೊತ್ತಿಗೆ!!

*******************

ಗಾಳಿಗೆ
ತೂರಿ ತೂರಿ ಮುಂಬರುವ
ಆ ಮುಂಗುರಳನ್ನು ಕಂಡರೆ
ಏನೋ ಅಸಾಧ್ಯ ಅಸೂಯೆ.
ಹಗಲಿರುಳೆನ್ನದೆ ಅವಳ
ಕೆನ್ನೆ ತಾಗಿ ಚುಂಬಿಸುತ್ತಿರುತ್ತವೆ.

******************

 ಕನಸಿನ ಬೇಟೆ
ಸದ್ಯಕ್ಕೆ ಮುಗಿಯುತ್ತಿಲ್ಲ ..
ಏಳು ಸಾಗರ ದಾಟಿ
ಏಳು ಸುತ್ತಿನ ಕೋಟೆ
ಅಲ್ಲಿ, ಅವಳಿಲ್ಲ!
ಇಲ್ಲಿ
ಏಳು ಸುತ್ತಿನ ಮಲ್ಲಿಗೆ
ಹಾಸಿಗೆ ತುಂಬೆಲ್ಲಾ ಅರಳಿ
ಘಂ ಘಮಾ ಘಮಾ ..
ಹಿಡಿಯಲು ಮನಸು
ಅಪ್ಪಲು ಅಳುಕು..
ಮಾಗಿಯ ಮುಂಜಾವು
ಬಿಸಿಲಿನ್ನೂ ಅವಳ ಮುಟ್ಟಿಲ್ಲ...
*****************

ಗಾಢ ಮೌನ ಕಣ್ಣ ಬಿಗಿದಿರಲು
ಕಂಠ ಉಲಿಯುದೆಂತು
ನಿನ್ನೊಲವಿನ ಪ್ರೇಮ ಗೀತೆಯಾ ??

******************

ಪ್ರಾಣ ಹಾರುವ ಮುನ್ನ
ಒಲವಿನ ಆತ್ಮಹತ್ಯೆಯಾಗಿತ್ತು !!

****************

ನಿನ್ನ ಮೌನಕೆ
ನನ್ನ ಅರಿವು-ಅಹಮ್ಮುಗಳು
ತಲೆದೂಗಿದವು.
*********
ಪ್ರೀತಿಯನ್ನು ಎದೆಯಲ್ಲಿ
ಇಟ್ಟುಕೊಳ್ಳಬಾರದು!!
ಇರಿದು ಹೊರ ನಡೆವಾಗ
ಉಸಿರೇ ಇರುವುದಿಲ್ಲ ಕೇಳಲು ಕಾರಣ !!

*************

 




 

ಬಿಡಿ ಹೂ:7

 ಬಿಡಿ ಹೂ :


ಒಂದು ಕವಿತೆ ಹುಟ್ಟುವ
ಮೊದಲು ಅದೆಷ್ಟೋ ಗರ್ಭಪಾತ !
ಕವಿಯೂ ಹೆಣ್ಣಾಗುತ್ತಾನೆ,
ಕಾವ್ಯಕಾರಣಕ್ಕೆ !!

ಬಿಡಿ ಹೂ: 6


ಬಿಡಿ ಹೂ :

ವರುಷಗಳ ತರುವಾಯ
ಹಳೆಯ ಪುಸ್ತಕದಿ
ಸಿಕ್ಕಿದ ನವಿಲುಗರಿ..
ಎದೆಯೊಳಗೆ ಹಾಗೆ ಕಾಪಿಟ್ಟುಕೊಂಡಿದ್ದೇನೆ,
ಹೊಸ ಪುಸ್ತಕದಲಿ ಅವಳ ಹೆಸರಿಲ್ಲ !

ಬಿಡಿ ಹೂ: 5

 ಬಿಡಿ ಹೂ :

ಬದುಕಿನ ಸಮುದ್ರದಲಿ
ನಿಂತು ಕಾವ್ಯ ಕಟ್ಟುತ್ತಿದ್ದೇವೆ
ಮುತ್ತುಗಳ ಪೋಣಿಸಿ..
ನಾವಿಬ್ಬರೂ ...
ಮೈ ಮನಸುಗಳೆಲ್ಲ ಮತ್ಸ್ಯಗಂಧ.
ನಾವೆಯದು ಸಾಗುತಿದೆ
ದೇಶ-ಕಾಲಗಳ ದಾಟಿ
ಲೋಕಾಂತದ ಆಚೆಗೆ ಏಕಾಂತಕ್ಕೆ
ಬೆಳ್ದಿಂಗಳ ಒಲವಿನ ಅಮರಾವತಿಗೆ

ಕತ್ತಲು ಎಷ್ಟೊತ್ತಿಗೆ !?


 

ನಾವಿಬ್ಬರೂ ಮಲಗಿದ
ರಾತ್ರಿಗಳಲಿ ಕತ್ತಲು
ಬಟ್ಟೆ ಕಳಚಿ
ಬೆರಗಿನಿಂದ ನೋಡುತ್ತಾ ಕೂರುತ್ತದೆ

ಚುರುಗುಟ್ಟುವ ಬೆಳಗಿನ
ಬಿಸಿಲಿನ ಕೋಲುಗಳು
ಬಡಿಯುತ್ತಿದ್ದರೂ
ಮೇಲೇಳಲು ಮನಸ್ಸಿಲ್ಲ
ನಮ್ಮ ಕತ್ತಲಿಗೆ!

ಅವಳ ತೆರೆದೆದೆಯ
ನನ್ನ ಉಕ್ಕಿನೆದೆಯ ಮೊನೆಗೆ
ಒತ್ತಿ, ಸೊಂಟದ ಕೆಳಜಾರಿದ
ಚಾದರ ಮೇಲೆಳೆದು ಕೊಂಡು
ಬೆಳಕನ್ನು ಶಪಿಸುತ್ತಲೇ
ಕೂದಲೆಳೆಯ ತುಟಿಯಂತರದಲಿ
ಪ್ರಶ್ನಿಸುತ್ತಾಳೆ , 'ಕತ್ತಲು ಎಷ್ಟೊತ್ತಿಗೆ' ?

ಪಿರಿಯಡ್ ಮಿಕ್ಸ್ - 1

ಪಿರಿಯಡ್ ಮಿಕ್ಸ್...

'ಋತು ಗಾನ''ದಿಂದ ಒಂದು ಆಲಾಪ
*********************

ಅವಳು ಒಳಬರದ
ಮೂರೂ ದಿನವೂ
ನಾನೂ ಹೊರಗಾಗುತ್ತೇನೆ!

ಬಾಲ್ಕನಿಯಲಿ ಬೆಚ್ಚಗೆ ಕುಳಿತು
ಬೆಂಕಿ ಇಲ್ಲದ ಅಡುಗೆ ಅಟ್ಟು,
ಕೊಂಚ ದ್ರಾಕ್ಷಾರಸ ಗುಟುಕಿಸಿ
ಮುತ್ತಿನ ಮಲ್ಲಿಗೆ ಕಟ್ಟುತ್ತಾ,
ಕಣ್ಣಲಿ ತುಂಬಿದ ಪ್ರೀತಿಯ
ಎದೆಗಿಳಿಸಿಕೊಳ್ಳುತ್ತೇವೆ,
ಅವನರತ.

ಒಮ್ಮೊಮ್ಮೆ
ನೋವಿಗೆ ಬಿಗಿದಪ್ಪುತ್ತಾಳೆ ..
ನನ್ನ ಕಣ್ಣಲಿ ಅವಳು ಅಳುತ್ತಾಳೆ
ನನ್ನ ಚಡಪಡಿಕೆ ಕಂಡು
ಮೂದಲಿಸುತ್ತಾಳೆ.

ಅವಳ ನಾಭಿಯ ಹೊಕ್ಕ ಬೆರಳಿನಿಂದ
ನೋವು ನನಗೂ ವರ್ಗವಾಗಲೆಂದು,
ನನ್ನ ಕೈ ಅಲ್ಲೇ ನಡುವಿನಲ್ಲೇ ಬಿಡಾರ ಹೂಡಿದೆ.
ಮತ್ತೊಂದು ತಲೆಗೆ ತಳವಾಗಿದೆ.

ಈ ತೆರೆದ ಕಿರು ಹಜಾರದಲ್ಲಿ
ಹಿನ್ನಲೆಗೆ ಒಂದು ಸಣ್ಣ ರಾಗಾಲಾಪ,
ಮಿಟುಕಿ ಮಿನುಗುವ ಸಣ್ಣ ಸೊಡರು
ಅವಳ ನಿದ್ದೆಗೆ ನನ್ನ ಲಾಲಿ..
ಮಲಗಲಿ ನನ್ನೊಲವು ಸುವ್ವಾಲಿ.