Friday, April 26, 2013

ತೊಟ್ಟಿಕ್ಕಿದಂತೆ ಎದೆಯ ರಕ್ತ , ನಿನ್ನ ಪದ್ಯ!


ನೀನು ಜೊತೆಗಿರದ ರಾತ್ರಿಗಳ
ಮಾರಿಕೊಂಡೆ..
ಏಕಾಂತದ ದವಲಾಗ್ನಿಯ
ಉಣಿಸಲು,
ಕವಿತೆಯ ಸಂಗ ಮಾಡಿದೆ.

ನೀನು ಮಾಡಿಟ್ಟ ವೈನೂ
ಬಜಾರಿನಲ್ಲಿ ಸಿಕ್ಕುವ ಸುಡು ಸಿಗರೇಟು
ಹಾಳು ಪಿಚ್ಚರುಗಳು ನನಗೆ ಪಥ್ಯವಲ್ಲ.
ನಿನ್ನ ಬಿಟ್ಟು ಯಾವುದರ ಹಿಂದೆಯೂ
ಒಲವಿಲ್ಲ,... ಹೋಗುವುದಿಲ್ಲ.

ನಿನ್ನ ಕಣಿವೆಯಲಿ ನಾನು ಜಾರುವಾಗ
ಹೇಳಿಕೊಂಡ ಕೇಳ್ವಿಗಳು, ಈಗ ಮಾತನಾಡುತ್ತವೆ
ಬಹಳ. ಕವಿಸಮಯವಂತೀಗ?
ನನಗೇನೋ ತಿಳಿಯದು
ಸುರತ ತಪ್ಪಿದಕ್ಕೆ ಕವಿತೆಯೇ ಸುಖ ಎಂದುಕೊಂಡೆ!

ಅಷ್ಟೇ ಅಲ್ಲ .. ನೀ ಬರುವುದರೊಳಗೆ
ಪೊರೆ ಕಳಚಿಕೊಳ್ಳುತ್ತೇನೆ.
ವಿಷವ ಕಕ್ಕಿಬಿಡುತ್ತೇನೆ. ಈ ಕವಿತೆಗಳಲ್ಲಿ
ನನ್ನ ನಗ್ನ ಸತ್ಯ ,
ಹೇಳಲರಿಯದ ಕೆಟ್ಟ ಕನಸು,
ನಿನ್ನೊಲವು ಉಸಿರುಗಟ್ಟಿವೆ.

ಸಾಕೆನಿಸಿ ನಿರ್ಭಾವಕ್ಕೆ ನನ್ನ ಬಿಗಿದಾಗ
ತೊಟ್ಟಿಕ್ಕಿದಂತೆ ಎದೆಯ ರಕ್ತ
ಹಾಳೆಯ ಮೇಲೆ ಚಿತ್ರವಾಗಿ ..
ಮತ್ತೆರಡು ಕಣ್ಣ ಹನಿಗಳು ಕೂಡಿ
ನಿನ್ನ ಪದ್ಯವಾಗುತ್ತದೆ.

ಶ್ರುತಿಕವೆಯ ಬಡಿದ ಸದ್ದು


ಅಂತೂ ಜ್ವರದ ಚಕ್ರ ತಿರುಗಿ
ಹೊಕ್ಕುಳು ಹೊಕ್ಕಿತು
ಕಣ್ಣು ಕಮಲ
ಕಿವಿ ಕಣಗಿಲೆ
ಮೂಗು ಸಂಪಿಗೆ
ಕೆಂಪಾಗಿ ಅರಳುತ್ತಿವೆ..

ಭ್ರೂಕುಟಿಯಲ್ಲಿ ಸಹಸ್ರಾರದ ಬಿಂದು
ಬೊಗಸೆ ತುಂಬಾ ಚಂದ್ರಜಲ.
ಆವಾಹಿಸುತ್ತೇನೆ
ಅವರೋಹಿಸುತ್ತೇನೆ
ನಿನ್ನೊಡಲ ತಾಪವನ್ನು
ಹಾಗೆ ಸಡಿಲವಾಗು
ಬೀಜಾಕ್ಷರಗಳು ಜೀವಕೋಶಗಳ
ಹೊಕ್ಕಲಿ
ಉರಿಯ ಬಿಸಿ ಆರಲಿ

ಬೆಳಗು ಸುರಿವ ಮಂಜಿನಂತೆ
ಬೈಗು ಬೀಸೋ ಗಾಳಿಯಂತೆ
ನೀ ತಂಪಾಗು
ನೀ ಕಂಪಾಗು

ಶ್ರುತಿಕವೆಯ ಬಡಿದ ಸದ್ದು....

ಪೋಲಿ ಪದ್ಯಗಳು ~ 1

ಕ್ಷಮಿಸಿ ಕವಿತೆಯೆಂದೂ ಖಾಸಗಿಯಲ್ಲ ....


***************
ಇಬ್ಬರಿಗೂ ಮಲ್ಲಿಗೆ ಘಮಲಿನ
ಅಮಲು .. ಇಳಿಯುವುದೇ ಇಲ್ಲ
ಹಗಲು ಇರುಳು!
****
ಅವಳ ಕಣ್ಣಿನ ಮುಂದೆ
ನನ್ನ ಮಾತು ನಡೆಯುವುದಿಲ್ಲ!
ಮುಹೂರ್ತದ ಪೌರೋಹಿತ್ಯ
ಅವಳದ್ದು.. ಮಹಾಸತ್ರ ನಮ್ಮಿಬ್ಬರದ್ದು .
******
ಏರಿಳಿವ ಆಟವೆಂದರೆ
ಹೊತ್ತು ಹೊರತಾಗುತ್ತೆ ..
****
ಮುತ್ತು ಪೋಣಿಸಲಿಲ್ಲವಾದರೆ
ಬಂಗಾರ ದಕ್ಕುವುದಿಲ್ಲ.
*****
ನೆನ್ನೆ ಹುಣ್ಣಿಮೆಯಲಿ
ಅವಳ ಆರ್ಭಟಕ್ಕೆ
ನಾನು ಕತ್ತಲು ಹುಡುಕುತ್ತಲಿದ್ದೆ..
*******
ಪುಂಖಾನುಪುಂಖವಾಗಿ ಬಿಟ್ಟ
ಬಾಣಗಳೆಲ್ಲ
ಒಮ್ಮೆಲೇ ಹಿಡಿದು ಹೀರಿದಳು..
ನಾನು ಪೆಚ್ಚಾದೆ ಮತ್ತೆ ಕೈ ಹಿಡಿದಳು
****
ಅವಳ ನಡುವಿನಲ್ಲಿ
ಯಾವುದೊ ತಂತಿಯನ್ನು
ನನ್ನ ಬೆರಳು ಹುಡುಕುತ್ತಲಿವೆ..
ಶಬ್ದ ಮಾತ್ರ ಬೆರಗಿಡಿದು
ನಿಂತಿತ್ತು!

ಪೋಲಿಪದ್ಯಗಳು - 2


**********
ಮೊದಲ ಮುಂಗಾರ
ಮಳೆಗೆ
ಭೂಮಿ ಘಮ್ ಎಂದಾಗ
ಅವಳು ಅಸ್ತು ಎಂದಳು
ಮಲ್ಲಿಗೆ ಕೊಣೆ ತುಂಬಾ ಘಮಿಸಿತ್ತು!
###
ಚಂದ್ರ ನಾಚುತ್ತಾನೆಂದು
ಚಾದರ ತೆಗೆದು ನನ್ನ ಹೊದೆಯುತ್ತಾಳೆ
ಕಪ್ಪೆ ಚಿಪ್ಪಿನಂತೆ ಅವಳನ್ನು
ನನ್ನೊಳಗೆ ಮುಚ್ಚಿಕೊಳ್ಳುತ್ತೇನೆ.
###
ಅವಳ ನೆತ್ತಿಯ ಘಮದಲ್ಲಿ
ಅದಾವುದೋ ಅಫೀಮು ಬೆರೆತಂತೆ
ಬೆಳಗು-ಬೈಗುಗಳ
ಹಂಗಿಲ್ಲದೆ ಅವಳ ಪ್ರೇಮದಲಿ ನಾನು ಉನ್ಮತ್ತ.

ಬುದ್ದ ನಕ್ಕಿರಲಿಲ್ಲವಂತೆ ಪ್ರವರ ...


ಬುದ್ದನ ಉತ್ತರ :

ನೀನೆಂದು ಕಂಡೆ ನನ್ನ ನಗುವ ..
ಸುಳ್ಳು ಹೇಳಬೇಡ...
ಈ ಜಗತ್ತಿನಂತೆ
ನೀನೂ ಸುಳ್ಳಾಗಬೇಡ!

ನಾನೆಂದೂ ನಕ್ಕಿರಲಿಲ್ಲ
ನಕ್ಕೆನೆಂದು ಭ್ರಮಿಸಿದರು.
ಸುಖದುಃಖ ಇಲ್ಲವಾದ ಮೇಲೆ
ನಗು-ಅಳು ಎಲ್ಲಿಯವು?

ಅಜ್ಞಾನ ಕಾಲದಲಿ ವಿಲಾಸಗಳನು
ಬಿಟ್ಟೆ..ವಿಜ್ಞಾನದ ಕೂಸು ನೀನು
ಯಾವುದನ್ನೂ ಬಿಡಲಾರೆ..
ನನ್ನಂತೆ ಬದುಕುವವರು ಸಾವಿರ
ಇದ್ದಾರೆ.. ಸಿಕ್ಕಿದ್ದರಲ್ಲಿ ಸುಖ ಕಂಡು
ನಿನ್ನ ನಾಗರೀಕತೆಗಳಾಚೆ
ತಿಟ್ಟುತೆವರುಗಳಲಿ

ಅರಳಿ ಮರದಡಿ ಕೂತದ್ದು ಮಾತ್ರವಲ್ಲ
ಬದುಕು ಕೂಡ ಧ್ಯಾನವೇ!
ನೀನು ಧ್ಯಾನಿಸಿದಷ್ಟು ನಿನ್ನದು..

ತತ್ವ ತಾಮಸಗಳು ನಂಗೆ ಗೊತ್ತಿಲ್ಲ
ನಾನು ಬಾಳಿ ಬಿಟ್ಟದ್ದು ಬದುಕು.
ನಿನ್ನ ಆಸೆ ಜೀವಂತವಾಗಿರುವವರೆಗೂ
ನನ್ನ ನಾಣ್ಯ ಚಲಾವಣೆಯಲ್ಲಿರುತ್ತದೆ.

ಎದೆ ತುಂಬಿದ ಕಾರಿರುಳ ಬಯಕೆಗಳ
ಬಯಲಿಗೆಸೆದು ನೋಡು...
ನೀನು ನೀನಾಗುತ್ತಿ.. ನಾನಾಗಲಾರೆ!

ಬಿಡಿ ಹೂ: 4

ಕ್ಷಮಿಸಿಬಿಡು,
ಭಗವಂತ .. ಪಾಪಪ್ರಜ್ಞೆಯಿರದ
ಹೊರತು ಕವಿಯಾಗಲಾರೆ!

ಬೇಲಿಯ ಹೂ

ಕಳೆದುಕೊಂಡು ಪರಿತಪಿಸುತ್ತಿರುವ
ಒಲವನ್ನು ಒಮ್ಮೆ
ಕರುಣಿಸಿಬಿಡು ಭಗವಂತ
ನೇಸರನ ಎಳೆಬಿಸಿಲಿಗೆ ಕಾಯುತ್ತಿರುವ
ಬೇಲಿಯ ಹೂ, ನಾನು.
ಅರಳಿಬಿಡುತ್ತೇನೆ
ಬರುವ ಮುಂಗಾರಿಗೆ ಸಿಕ್ಕು
ಉದುರುವ ಮುನ್ನ.
ಇದೊಂದು ಅಮೃತಗಳಿಗೆ
ನನ್ನದಾಗಲಿ, ನಿನ್ನೊಲವಿನಿಂದ
ಅರಳಿದ್ದೇ ಆದರೆ
ಮುಂದಿನ ಏಳೇಳು ಜನುಮವೂ
ನಿನ್ನ ತಿರುವಡಿಯಲ್ಲಿ ಹೂವಾಗುತ್ತೇನೆ. ~ RP

ಬೋಧಿಯ ಅರಸುತ್ತಾ

ಸುಮ್ಮನೆ ಪಯಣಿಸುತ್ತಿದ್ದೇನೆ, ಭೂಮಿಯಂತೆ
ನನಗೆ ನೆಲೆಯಿಲ್ಲ
ಚಕ್ರ ನಿಲ್ಲುವುದಿಲ್ಲ
ಅರಿವಿಲ್ಲದೆ ಸಾಗುವ ಈ ಹಾದಿಗುಂಟದಲಿ
ನೀನ್ನೆನ್ನ ಒಳಗಿನಲಿ
ಸಣ್ಣ ಹೂ ಸೊಡರಿನಲಿ
ಬೆಳಗು ದಾರಿಯ ಧಮ್ಮಕಕ್ಷೆಯ ನಡಿಗೆಗೆ
ಬೋಧಿಸತ್ವಾ ಎದೆ
ತುಂಬಿದರೆ ಸಾಲದು
ಬುದ್ದಿ ಭ್ರಮಿಸಬೇಕು ನಿನ್ನ ತಿರುವಡಿಯಲ್ಲಿ! ~ RP

ಬಿಡಿ ಹೂ: 3

ಭ್ರಮೆಯ ಬಂಧನದಿಂದ ಮುಕ್ತಿಗೊಳಿಸಿ 
ಮತ್ತೂ ಪ್ರಪಂಚವ ತೋರಿಸಿದ!
ಬೋಧಿಧರ್ಮ ಇಳಿದುಬಿಡು ಎದೆಗೆ

ಕಾಡಬೇಡ ಕಾಯಿಸಬೇಡ. 
ತೆರೆದ ಬಾಗಿಲು ನಾನು
ಅರಳಿಯ ಬೀಜ ನೆತ್ತಿಯಲಿ ಚಿಗುರಿಲಿ.

ಬಿಡಿ ಹೂ:2

ಕೆಂಡಸಂಪಿಗೆಯ
ಘಮಕ್ಕೆ
ಮನದೊಳಗೆ ಮೈನೆರೆದೆ!

ಬಿಡಿ ಹೂ: 1

ನಿನ್ನ ಕರುಣೆ
ತೊನೆವ ಭತ್ತದ ತೆನೆಯಾಗಲಿ
ತುಂಬಿ ಹರಿವ ನದಿಯ ನಡುವಾಗಲಿ
ಎಲ್ಲರ ಎದೆಯಲಿ ನಗುವ ಹೂವಾಗಲಿ ...
ಬೋಧಿಧರ್ಮ.