Wednesday, October 9, 2013

ಷಡ್ಜದ ದನಿ

ನೀನು ಕಣ್ಣಿನಲ್ಲಿ
ಮೀಟಿದಷ್ಟು ನೋವು ದಾಟಿ
ನಾದವಾಗುತ್ತೇನೆ.
ಏದುಸಿರಿನ ಎದೆಯ ಕೊಳಲು
ನುಡಿಯುತ್ತದೆ ನಿನ್ನೇ ಮನದನ್ನೆ.
ಈ ಶಬ್ದತೀರದಲಿ
ಅದೆಷ್ಟು ರಾಗಗಳು!
ಅದೆಷ್ಟು ಅಲೆಗಳು!
ಅದೆಷ್ಟು ವಾಂಛೆ!!

ಕಾಯುತ್ತಿವೆ ನರನಾಡಿಗಳು
ಹುರಿಗೊಂಡು ನಿನ್ನ ಬೆರಳಿಗೆ
ಸಿಕ್ಕು ಮೋಕ್ಷ ಹೊಂದಲು.
ಶ್ರಾವಣದ ಸಂಜೆರಂಗು
ನಿನ್ನದೊಂದು ಆಲಾಪ
ಸಾಕು ಸಾಕು ..
ಅಷ್ಟು ಸಾಕು
ಸ್ವರಗಳು ಚಿತ್ರಗೊಂಡು
ಮುಗಿಲಕಡಲಿನ ತೇಲಲು
ನಾ ನಿನ್ನ ಅಭಿಮಾನಿ.

ಅದೋ ಷಡ್ಜದ ದನಿ
ಕೇಳಿಬರುತ್ತಿದೆ....

~ ಆರ್.ಪಿ.

ಶರತ್ಕಾಲದ ರಾತ್ರಿಗಳು

ಈ ಶರತ್ಕಾಲದ ರಾತ್ರಿಗಳು
ಉದ್ದುದ್ದ ಎಳೆದಂತೆ
ಬಹುದೀರ್ಘ ಬೆಳಗಿನವರೆಗೆ
ಮೈತುಂಬ ಹಾಲು ಸುರಿದುಕೊಂಡ
ಚಂದಿರ, ಕೊರೆವ ಚಳಿಗಾಳಿ,
ಚಂಡಿ ಹಿಡಿದಂತೆ ಸುರಿವ ಮಳೆ

ನನ್ನ ನೀರ ನೀರವ ಮಂಡಲದಲಿ
ಅವಳು ಹ್ಞೂ ಕಾರಾಕ್ಷರದಲಿ
ಕಟ್ಟಿ ಹಾಕಿದ್ದಾಳೆ... ಕಟುಕಿ
ದುಂಬಿಯ ಬಂಧನ ಲೋಕನ್ಯಾಯವಲ್ಲ!

ಚುಕ್ಕಿಗಳು 'ಚ್ಚ್ ಚ್ಚ್' ಲೊಚಗುಟ್ಟುತ್ತವೆ.
ಕಪೌಂಡಿನಾಚೆ ಹೂಗಳು ಮೂಸಿನಗುತ್ತವೆ.
ಜೀರುಂಡೆಯ ಜೊಂಪು, ಕಪ್ಪೆಯ ವಟರಿನ ಮಧ್ಯೆ
ಒಂದೇ ಜಪ
ಒಂದೇ ತಪ
ಬರಲಿ ಸಾಕೊಂದೇ ಸಿಡಿಲು
ಆಮೇಲೆ ನನ್ನದು ಮುತ್ತಿನ ಮಳೆ.

ಇಂದಿರ ಕೇಳಿಸಿಕೊಂಡನೆನೋ
ಹೊರಗೆ ಮಿಂಚುತ್ತಿದೆ,
ಒಳಗೆ ಹರಿಯುತ್ತಿದೆ! ~ ಆರ್.ಪಿ.

ಬೆಬ್ಬನೆ ಬೆರೆವವರ ಕೇಡು

ಬೆಬ್ಬನೆ ಬೆರೆವವರ ಕೇಡು
**************
ಭ್ರಮೆ ಕಟ್ಟಿದ ಮೋಡಗಳು
ಬೆಟ್ಟವ ಮುಚ್ಚಿ, ಕರಗಿಸುವ
ಛಲದಲ್ಲಿ ಹನಿಯ ಚೆಲ್ಲಿದುವು.
ಅಯ್ಯಾ,
ಬೆಟ್ಟ ಜಗ್ಗಲಿಲ್ಲ..
ಬಯಲು ಕುಗ್ಗಲಿಲ್ಲ..
ನದಿ ನಿಲ್ಲಲಿಲ್ಲ..

ಅಮಾಸೆ ಕತ್ತಲಲಿ
ಧೂಮಕೇತುವಿನ ಬಾಲ
ಹಿಡಿದ ಧೂಳು ಕಸ ಕಡ್ಡಿಗಳು
ಆಗಸದಲ್ಲಿ ಮೆರೆದುವು.
ಸೂರ್ಯನ ಸೋಲಿಸಿದ
ಸ್ವರತಿಗೆ ಸಿಕ್ಕು
ಅಯ್ಯಾ,
ಬೆಳಗಾದೊಡನೆ
ಬಟ್ಟಬಯಲಾದುವು.

ನದಿಗೆ ದಾರಿಯಿಲ್ಲವೆಂದು
ಅಣಕಿಸಿದ ಅಡ್ಡಕಸುಬಿನ
ನಗರದ ಘಟಾರಗಳು
ಅಯ್ಯಾ,
ಎಲ್ಲ ಬೀದಿಗಳ ಸುತ್ತಿ
ನದಿಯ ಎದೆ ಹೊಕ್ಕಿ
ಮೋಕ್ಷ ಕಂಡುವು.

ಅಯ್ಯಾ,
ಆಚಾರವನರಿಯದೆ ವಿಭವವಳಿಯದೆ
ಕೋಪವಡಗದೆ ತಾಪ ಮುರಿಯದೆ,
ಬರಿದೆ ಭಕ್ತರಾದೆವೆಂದು ಬೆಬ್ಬನೆ ಬೆರೆವವರ ಕೇಡಿಂಗೆ
ನಾನು ಮರುಗುವೆನು ಕಾಣಾ ಗುಹೇಶ್ವರಾ.

ಕಾಮಮೋಕ್ಷದ...


ಋತುಗಳು ಉರುಳುರುಳಿ ಚಕ್ರಗಳು ಹದಿನೆಂಟು ಮೈಲಿ
ಮಡಿ ದಾಟಿ ರೆಕ್ಕೆಯಲಿ ಹಾರಿ ಹಾರಿ ನಭದೆತ್ತರ
ಕೋಲ್ಮಿಂಚ ಕೈಲಿಡಿದು ಗುಡುಗುಡುಗಿ ಗುಟುರು ಹಾಕಿ
ಕಾರ್ಮೋಡ ಕವಿದು ಅರೆಗತ್ತಲ ಕಸಿವಿಸಿಯಲ್ಲಿ
ಯಾರು ಕಾಣದಂತೆ ಬಿದ್ದೀತು ಸಣ್ಣ ಹೂ ಮಳೆ!

ರೋಮಗಳು ನಿಮಿರಿ ರೋಮಾಂಚನದಾಚೆಗೆ
ಕಣ್ಣುಗಳು ಕಮರಿ ಅಕ್ಷಿಪಟಲದಾಚೆಗೆ
ಹೂಗಳಿಗೆ ತೆರೆದುಕೊಂಡವು ಎರಡೂ
ಬಯಲೆಲ್ಲಾ ಹರಡಿಕೊಂಡು ಸೊಗಡು

ಭೂಮಿ ಹಾಸಿಕೊಂಡಳು ಎದೆಯ
ಬಾನ ಚಪ್ಪರಕೆ ನಕ್ಷತ್ರಗಳ ನೇತು
ಸೂರ್ಯನೂ, ಚಂದ್ರನೂ ಮುಂದು
ನಿಂತ ಮೂರು ಸಂಜಿ ಹೊತ್ತು.

ಹೊತ್ತು ಇಳಿಯುತ್ತಾ ದೀಪ ಹೊತ್ತಿದ
ಹೊನ್ನು ಹೋಳಾಗಿ ಹೊಳೆವ ಹೊತ್ತು
ಸಂಜೆಮಲ್ಲಿಗೆ ಅರಳಿ ದುಂಡುಮಲ್ಲಿಗೆ ಚೆಲ್ಲಿ
ಕಣ್ಣುಗಳು ಕಲೆತು ತುಟಿಗಳು ಬೆರೆತು
ಅವಳು ಹೆದೆಯೇರಿಸಿ ಬಾಣ ಹೂಡಿದಳು
ಪುಂಖಾನುಪುಂಖ ಕಟ್ಟಿ ಪ್ರೇಮಸಂಕ.

ಬಿಲ್ಲು ಮುರಿದು ಅವಳೆದೆಗೆ ಬಿದ್ದು
ಆಳಕ್ಕೆ ಮುಳುಗಿ ಮುತ್ತು ಹೊತ್ತು ತಂದೆ
ಅವಳೋ ಎದೆಯ ರೋಮ ಕಿತ್ತು
ಮುತ್ತಿನ ಬೀಜ ಬಿತ್ತಳು, ಬೆಳ್ಳಿಯ ಬೆಳೆಗೆ.
ಇಬ್ಬರ ಕಸುವು ನಿಲ್ಲಲಿಲ್ಲ ತೀರಲಿಲ್ಲ

ಈಗ ಬಿಸಿಲ ಮಳೆಗೆ ತೆರೆದು ಮಲಗಿ
ಅಗಾಧ ಬೆಳಕು ಮೈತುಂಬಿ ಅದೆಂತ
ಶಕ್ತಿ, ಉದ್ದೀಪಿಸಿದ ಉಲ್ಲಾಸ ಹೂವಾಗಿ
ಅರಳಿದಂತೆ, ಘಮಿಸಿದಂತೆ ಕಾಮಮೋಕ್ಷ. ~ RP

ಒಂದು ಬೊಗಸೆಯಷ್ಟು ಒಲವು


ಒಲವು
ಪಡೆದುಕೊಳ್ಳುವುದರಲ್ಲಿ
ಕಾಣುವುದೇ ಇಲ್ಲ ನೂರೆಂಟು ಪರದೆಗಳು!
ಕಳೆದುಕೊಳ್ಳುತ್ತಾ
ಎಷ್ಟು ವ್ಯಾಪಿಸುತ್ತಾ ಇದೆ
ಎಷ್ಟು ಹೃದಯಗಳಿಗೆ ತಗುಲುತ್ತಾ ಇದೆ
ಗಾಳಿ ಮೈದುಂಬಿದ ಗಂಧದಂತೆ.

ಕಳೆದುಕೊಳ್ಳಬೇಕು
ಒಲವನ್ನು ಒಮ್ಮೆಯಾದರೂ
ಸಾಧ್ಯವಾದರೆ ಪದೇ ಪದೇ..
ಸಿನಿಕ ಪ್ರೇಮ
ಹುಂಬ ದಾಂಪತ್ಯ
ಪ್ರವಿತ್ರ ಕಾಮ
ಎಂಬೆಲ್ಲ ಬೇಲಿಗಳಿಂದ
ಕಸಿದುಕೊಳ್ಳಬೇಕು ಒಲವ
ಕಳೆದುಕೊಳ್ಳಬೇಕು.

ಉತ್ತು, ಬಿತ್ತು, ಬೆಳೆಯವ ಗದ್ದೆಯಂತೆ
ಕಳೆದುಕೊಳ್ಳಬೇಕು.
ಹೂ, ಹಣ್ಣು, ಬೀಜವಾಗುವ ಸಸಿಯಂತೆ
ಕಳೆದುಕೊಳ್ಳಬೇಕು.

ಕೊನೆಗೆ ಒಲವು ನೀನಾಗಿ
ಕಳೆದುಹೋಗಬೇಕು...
ಬೇನೆಯಲ್ಲಿ ಒಂದೊಂದು ಅಂಗವೂ
ಕಳೆದುಕೊಂಡ ಹಾಗೆ
ಡವಗುಟ್ಟುವ ಎದೆಯೊಂದು ಉಳಿದು
ಉಸಿರು ದೀರ್ಘವಾಗುವ ಹಾಗೆ

ನೋಡು ನೋಡು
ಆವಾಗ ದಕ್ಕೀತು ಒಂದು ಬೊಗಸೆಯಷ್ಟು
ಒಲವು
ಆವಾಗ ದಕ್ಕೀತು ಒಂದು ಪಾವಿನಷ್ಟು
ಮೋಕ್ಷ
ಪರದೆಗಳ ಸರಿಸಿ ಪಾರದರ್ಶಕವಾಗು
ಕಳೆದುಕೊ ಒಮ್ಮೆಯಾದರೂ....

ಶರತ್ಕಾಲದ ಸಾಲು

ಶರತ್ತಿನ ಈ ಮುಂಜಾನೆಯಲಿ ಅರುಣನ ಅಭಿಸಾರಿಕೆ
ಪೂರ್ವದಿಗಂತದಲಿ ನಾಚಿ ಕೆನ್ನೆ ಕೆಂಪೇರಿದ್ದಾಳೆ, ಉಷೆ! 

***
ಟೆರೇಸಿನ ಮೇಲೆ ನಾನೂ, ಆಗಸದಲಿ ಚಂದಿರನೂ ಒಂಟಿ
ಕಳೆಯುತ್ತಿವೆ ಶರತ್ತಿನ ರಾತ್ರಿಗಳು ಉರಿನಾವೆಯ ಮೇಲೆ.

***
ಶರತ್ಕಾಲದ ರಾತ್ರಿಗಳನ್ನು ನಿರಾಳ ಕಳೆಯಲಾಗದು
ದಡಕ್ಕನೆ ಬೀಸುವ ಮಳೆಗಾಳಿಗಳ ಗಂಡು ಎದುರಿಸಲಾರ. 

***
ಅರೇ.. ಶರತ್ತಿನ ರಾತ್ರಿ ಆಗಸದಲ್ಲಿ ಇವಳಿಟ್ಟ ಚುಕ್ಕಿಗಳು
ಬೆಳಗಾನ ಬೆತ್ತಲ ಬಯಲಲಿ ನಾವು ಸೇರಿ ರಾಶಿಯೆನಿಸಿದವು. 

***
ಈ ಶರತ್ತಿನ ಸೋನೆ ಮಳೆಯಲ್ಲಿ ನೆನೆದ ಮೇಲೂ
ತುಂಬುಚಂದಿರನಂತ ಅವಳು ನೆನಪಾಗದಿರಲಾರಳು! 

***
ಶರತ್ತಿನ ಚಿತ್ತೆ ಮಳೆಗೆ ಊರೆಲ್ಲ ಚಿಟ್ಟೆ
ಹಾರಲು, ಬದುಕಲು ತೊಟ್ಟವ ಕಳಚಿಟ್ಟೆ!

***
ಜುಮುರು ಮಳೆ, ಬಿಗಿಯುವ ಚಳಿಗೆ ಶರತ್ತಿನ ಚಂದಿರನ
ದೂಷಿಸುತ್ತಾಳೆ, ಮಗ್ಗುಲಲಿ ಮಲಗಿದವನು ನಾನು! 

***
ಶರತ್ತಿನ ಸಂಜೆಸೂರ್ಯನ ಚೆಲುವಿಗೆ ಸೋತು
ಪಶ್ಚಿಮತೀರದಲಿ ಕ್ಷಿತಿಜೆ ಮೈನೆರೆತು ಕೆಂಪಾದಳು
 
 
 
 
 
 

ಸೌಂದರ್ಯಲಹರಿ ಅನುವಾದ

ಶಂಕರನ ''ಸೌಂದರ್ಯಲಹರಿಯ'' ನನ್ನದೊಂದು ಅನುವಾದ :

ಲಲಾಟಂ ಲಾವಣ್ಯ ದ್ಯುತಿ ವಿಮಲ-ಮಾಭಾತಿ ತವ ಯತ್
ದ್ವಿತೀಯಂ ತನ್ಮನ್ಯೇ ಮಕುಟಘಟಿತಂ ಚಂದ್ರಶಕಲಮ್ |
ವಿಪರ್ಯಾಸ-ನ್ಯಾಸಾ ದುಭಯಮಪಿ ಸಂಭೂಯ ಚ ಮಿಥಃ
ಸುಧಾಲೇಪಸ್ಯೂತಿಃ ಪರಿಣಮತಿ ರಾಕಾ-ಹಿಮಕರಃ ||

ಲಲಿತೇ, ನಿನ್ನ ಹಸನಾದ ಹೊಳೆವ
ಹಣೆಯದು ಬಿದಿಗೆಚಂದ್ರಮನಂತೆ ಕಾಣುತಿರೆ
ಕಿರೀಟದ ಮೇಲ್ಮತ್ತೊಂದು ಅರ್ಧಚಂದ್ರನ ಚೂರು
ತಲೆಕೆಳಗು ಮಾಡಿ ಕೂಡಿಸಿದರಲ್ಲಿ
ಎರಡು ಹೋಳು ಒಂದಾಗಿಸಿ
ಅಮೃತವೇ ಹರಿವ ಪೂರ್ಣಚಂದಿರ
ಕಾಣುವನಲ್ಲಿ ನಿನ್ನ ಮೊಗದಲ್ಲಿ.

Friday, September 13, 2013

ಕಟ್ಟುಕಥೆಗಳು +1

ಬೆಳಿಗ್ಗೆಯಷ್ಟೇ ಕಾವ್ಯ ಬರೆವುದ ಕಲಿಸಿ ಎಂದು ಕೇಳಿದ್ದ ಶಿಷ್ಯನಿಗೆ
ಇಂಕು ಖಾಲಿಯಾದ ಪೆನ್ನು ಕೈಗಿತ್ತು ಗುರು ಹೊರನಡೆದ.
ಶಿಷ್ಯ ಗಲಿಬಿಲಿಯಿಂದ ನೋಡುತ್ತಾ ಇದ್ದ. ಒಂದಷ್ಟು ದೂರ ನಡೆದು ಅರಳಿದ ಹೂ ನೋಡುತ್ತಾ
'ಮೊದಲು ಒಳಗೆ ಇಂಕು ತುಂಬಿಕೊ.. ಪೆನ್ನು ಬರೆಯುತ್ತದೆ' ಎಂದರು, ಪ್ರಜ್ಞಾಪರಿಮಿತರು.

>>RP ಕಟ್ಟುಕಥೆಗಳು +1

ಮನಸ್ಸೇಕೋ ವ್ಯಾಕುಲ

ದಾಜ಼ು ಹುಇಕೆ ತನ್ನ ಗುರು ಬೋಧಿಧರ್ಮರಲ್ಲಿ ' ನನ್ನ ಮನಸ್ಸೇಕೋ ವ್ಯಾಕುಲಗೊಂಡಿದೆ .. ತಿಳಿಗೊಳಿಸುವಿರ ?' ಎಂದು ಕೇಳಿಕೊಂಡ
ಅದಕ್ಕೆ ಬೋಧಿಧರ್ಮ 'ಎಲ್ಲಿ ನಿನ್ನ ಮನಸ್ಸನ್ನು ಕೊಡು.. ತಿಳಿಗೊಳಿಸುವೆ' ಎಂದರು.
ಹುಇಕೆ ನಿರ್ಲಿಪ್ತನಾಗಿ 'ನಾನೂ ಹುಡುಕಿದೆ .. ಆದ್ರೆ ಸಿಗಲೇ ಇಲ್ಲ' ಎಂದ.
'ನೋಡಿದ .. ನಾನದನಾಗಲೇ ತಿಳಿಗೊಳಿಸಿರುವೆ' ಎಂದರು ಬೋಧಿಧರ್ಮ!

~ ಕೋನ್ ಪ್ರಸಂಗಗಳು >> ಆರ್.ಪಿ. -1

ಪ್ರವಾದಿಗಳ ದೇವ ರಹದಾರಿ -1



ನಿದ್ದೆಯಲ್ಲ .. ಎಚ್ಚರವಲ್ಲ
ಅಮಲಂತೂ ಅಲ್ಲವೇ ಅಲ್ಲ
ಅಲ್ಲಾಹುವಿನ ಆಜ್ಞೆತಂದವರು
ಸೀಳಿದರು ಗಂಟಲಿಂದ
ಗುಹ್ಯದವರೆಗೆ..
ಇನಿತು ರಕ್ತ ಹರಿಯಲ್ಲಿಲ್ಲ
ಪ್ರಭುವೇ ನಿನ್ನ ಕರುಣೆ
ಎಲ್ಲ ಮಾಯೆ ಎಲ್ಲ ಬಂಧ
ತೊಳೆದ ಜಮ್ ಜಮ್*
ಜಲದ ಬೆಳಕು, ಎದೆಯ
ತುಂಬಿತು ಅರಿವು, ನಂಬಿಕೆಯ
ಹೊನಲು..
ಅಬ್ಬಬ್ಬಾ ದೊರೆಯೇ ಅದೆಂತು
ಸಹಿಸಿದೆಯೋ ಲೋಕದ ನೋವ!

ಜೆರುಸಲೇಂ ಕರೆಯುತ್ತಿದೆ ನಿನ್ನ
ದೇವರ ವಾಕ್ಯ ವರದಿಮಾಡಲು
ಈ ನಾಡಿನ ತುಂಬಾ..
ಹೊರಡು ದೊರೆಯೇ ಆಲ್ಬಾರಕ್ ಕಾದಿದೆ
ಹೊರಡು ದೊರೆಯೇ ದೇವದೂತ ಗೇಬ್ರಿಯಲ್
ಕಾದಿದ್ದಾನೆ...
ಹೊರಡು ಜಗತ್ತು ನಿನ್ನವಾಕ್ಯಕ್ಕೆ ಕಾದಿದೆ.

~ ಆರ್.ಪಿ. >> ಜೆರುಸಲೇಂ ಕವಿತೆಗಳು

*ಜಮ್ ಜಮ್ = ಮೆಕ್ಕಾದಲ್ಲಿ ಸಿಗುವ ಪವಿತ್ರ ತೀರ್ಥ
ಈ ರಾತ್ರಿ ಕಡುಕಪ್ಪು
ಕತ್ತಲಿನಲಿ ನಿನ್ನ ಏಕಾಂತದ
ಉತ್ತುಂಗಕ್ಕೇರಲೇಬೇಕು, ಪಿಸುಗುಟ್ಟಿದಳು
ಮತ್ತು ಇದೀಗ ಹಲವು ಸುತ್ತಿನ
ಅಭ್ಯಾಸ ನಡೆಯುತ್ತಿದೆ
ಮುಚ್ಚಿದ ಕಣ್ಣುಗಳಲಿ. - ಗಾಥಾ ಸಪ್ತಶತಿ 249
ಜಗದ ಕಣ್ಣಿನ ಉದ್ದಗಲಕ್ಕೂ
ತುಂಬಿಕೊಂಡ ಚೆಂದದ ಹೆಣ್ಣುಗಳು.
ಸೌಂದರ್ಯ ಪ್ರವಾಹದ
ಅವಳ ಎಡಭಾಗವನ್ನು
ಅವಳ ಬಲಭಾಗಕ್ಕಷ್ಟೇsss
ಹೋಲಿಸಬಹುದು! ~  ಗಾಥಾ ಸಪ್ತಶತಿ 303

ಎರಡೇ ದಾರಿ


ಕಲ್ಯಾಣದ ಮಹಾಮನೆಯಲ್ಲಿ
ಇದ್ದವರೆಲ್ಲಾ ಶರಣರಲ್ಲ ಕಾಣಾ
ಲಿಂಗ ಕಟ್ಟಿದವರೆಲ್ಲಾ ಜಂಗಮರಲ್ಲ

ಅನುಭವ ಮಂಟಪದಲ್ಲಿ
ಅದೆಷ್ಟೋ ಕೊಳೆತ ಮೆದುಳಿನ
ಕಲ್ಲುಗಳು ಲಿಂಗವೆನಿಸಿದ್ದವೋ?!

ಮುಖಕ್ಕೆ ಅಂಟಿಸಿಕೊಂಡ
ಬಣ್ಣಗಳ ತೊಳೆಯದ ಹೊರತು
ಅನೃತದ ಅಲಂಕಾರಗಳ
ಕಳಚದ ಹೊರತು
ನಿನ್ನ ಒಳಗೆ ಬರಗೊಡುವುದಿಲ್ಲ

ಕಾಮನಬಿಲ್ಲಿಗೆ ಜಗಸೂರೆಗೊಳ್ಳಬಹುದು
ಮೋಸಹೋಗಬಹುದು
ಆಕಾಶದ ಕುಲಕ್ಕೆ ಯಾವ ಬಣ್ಣವೂ ಇಲ್ಲ

ಹೋಗು
ಸಿಕ್ಕುವುದು ಎರಡೇ ದಾರಿ
ಅಹಂಕಾರಕ್ಕೆ ಬಾಗಿಲುಂಟು
ಒಲವೆಂಬುದು ಬಟಾಬಯಲು ~