Friday, September 13, 2013

ಕಟ್ಟುಕಥೆಗಳು +1

ಬೆಳಿಗ್ಗೆಯಷ್ಟೇ ಕಾವ್ಯ ಬರೆವುದ ಕಲಿಸಿ ಎಂದು ಕೇಳಿದ್ದ ಶಿಷ್ಯನಿಗೆ
ಇಂಕು ಖಾಲಿಯಾದ ಪೆನ್ನು ಕೈಗಿತ್ತು ಗುರು ಹೊರನಡೆದ.
ಶಿಷ್ಯ ಗಲಿಬಿಲಿಯಿಂದ ನೋಡುತ್ತಾ ಇದ್ದ. ಒಂದಷ್ಟು ದೂರ ನಡೆದು ಅರಳಿದ ಹೂ ನೋಡುತ್ತಾ
'ಮೊದಲು ಒಳಗೆ ಇಂಕು ತುಂಬಿಕೊ.. ಪೆನ್ನು ಬರೆಯುತ್ತದೆ' ಎಂದರು, ಪ್ರಜ್ಞಾಪರಿಮಿತರು.

>>RP ಕಟ್ಟುಕಥೆಗಳು +1

ಮನಸ್ಸೇಕೋ ವ್ಯಾಕುಲ

ದಾಜ಼ು ಹುಇಕೆ ತನ್ನ ಗುರು ಬೋಧಿಧರ್ಮರಲ್ಲಿ ' ನನ್ನ ಮನಸ್ಸೇಕೋ ವ್ಯಾಕುಲಗೊಂಡಿದೆ .. ತಿಳಿಗೊಳಿಸುವಿರ ?' ಎಂದು ಕೇಳಿಕೊಂಡ
ಅದಕ್ಕೆ ಬೋಧಿಧರ್ಮ 'ಎಲ್ಲಿ ನಿನ್ನ ಮನಸ್ಸನ್ನು ಕೊಡು.. ತಿಳಿಗೊಳಿಸುವೆ' ಎಂದರು.
ಹುಇಕೆ ನಿರ್ಲಿಪ್ತನಾಗಿ 'ನಾನೂ ಹುಡುಕಿದೆ .. ಆದ್ರೆ ಸಿಗಲೇ ಇಲ್ಲ' ಎಂದ.
'ನೋಡಿದ .. ನಾನದನಾಗಲೇ ತಿಳಿಗೊಳಿಸಿರುವೆ' ಎಂದರು ಬೋಧಿಧರ್ಮ!

~ ಕೋನ್ ಪ್ರಸಂಗಗಳು >> ಆರ್.ಪಿ. -1

ಪ್ರವಾದಿಗಳ ದೇವ ರಹದಾರಿ -1



ನಿದ್ದೆಯಲ್ಲ .. ಎಚ್ಚರವಲ್ಲ
ಅಮಲಂತೂ ಅಲ್ಲವೇ ಅಲ್ಲ
ಅಲ್ಲಾಹುವಿನ ಆಜ್ಞೆತಂದವರು
ಸೀಳಿದರು ಗಂಟಲಿಂದ
ಗುಹ್ಯದವರೆಗೆ..
ಇನಿತು ರಕ್ತ ಹರಿಯಲ್ಲಿಲ್ಲ
ಪ್ರಭುವೇ ನಿನ್ನ ಕರುಣೆ
ಎಲ್ಲ ಮಾಯೆ ಎಲ್ಲ ಬಂಧ
ತೊಳೆದ ಜಮ್ ಜಮ್*
ಜಲದ ಬೆಳಕು, ಎದೆಯ
ತುಂಬಿತು ಅರಿವು, ನಂಬಿಕೆಯ
ಹೊನಲು..
ಅಬ್ಬಬ್ಬಾ ದೊರೆಯೇ ಅದೆಂತು
ಸಹಿಸಿದೆಯೋ ಲೋಕದ ನೋವ!

ಜೆರುಸಲೇಂ ಕರೆಯುತ್ತಿದೆ ನಿನ್ನ
ದೇವರ ವಾಕ್ಯ ವರದಿಮಾಡಲು
ಈ ನಾಡಿನ ತುಂಬಾ..
ಹೊರಡು ದೊರೆಯೇ ಆಲ್ಬಾರಕ್ ಕಾದಿದೆ
ಹೊರಡು ದೊರೆಯೇ ದೇವದೂತ ಗೇಬ್ರಿಯಲ್
ಕಾದಿದ್ದಾನೆ...
ಹೊರಡು ಜಗತ್ತು ನಿನ್ನವಾಕ್ಯಕ್ಕೆ ಕಾದಿದೆ.

~ ಆರ್.ಪಿ. >> ಜೆರುಸಲೇಂ ಕವಿತೆಗಳು

*ಜಮ್ ಜಮ್ = ಮೆಕ್ಕಾದಲ್ಲಿ ಸಿಗುವ ಪವಿತ್ರ ತೀರ್ಥ
ಈ ರಾತ್ರಿ ಕಡುಕಪ್ಪು
ಕತ್ತಲಿನಲಿ ನಿನ್ನ ಏಕಾಂತದ
ಉತ್ತುಂಗಕ್ಕೇರಲೇಬೇಕು, ಪಿಸುಗುಟ್ಟಿದಳು
ಮತ್ತು ಇದೀಗ ಹಲವು ಸುತ್ತಿನ
ಅಭ್ಯಾಸ ನಡೆಯುತ್ತಿದೆ
ಮುಚ್ಚಿದ ಕಣ್ಣುಗಳಲಿ. - ಗಾಥಾ ಸಪ್ತಶತಿ 249
ಜಗದ ಕಣ್ಣಿನ ಉದ್ದಗಲಕ್ಕೂ
ತುಂಬಿಕೊಂಡ ಚೆಂದದ ಹೆಣ್ಣುಗಳು.
ಸೌಂದರ್ಯ ಪ್ರವಾಹದ
ಅವಳ ಎಡಭಾಗವನ್ನು
ಅವಳ ಬಲಭಾಗಕ್ಕಷ್ಟೇsss
ಹೋಲಿಸಬಹುದು! ~  ಗಾಥಾ ಸಪ್ತಶತಿ 303

ಎರಡೇ ದಾರಿ


ಕಲ್ಯಾಣದ ಮಹಾಮನೆಯಲ್ಲಿ
ಇದ್ದವರೆಲ್ಲಾ ಶರಣರಲ್ಲ ಕಾಣಾ
ಲಿಂಗ ಕಟ್ಟಿದವರೆಲ್ಲಾ ಜಂಗಮರಲ್ಲ

ಅನುಭವ ಮಂಟಪದಲ್ಲಿ
ಅದೆಷ್ಟೋ ಕೊಳೆತ ಮೆದುಳಿನ
ಕಲ್ಲುಗಳು ಲಿಂಗವೆನಿಸಿದ್ದವೋ?!

ಮುಖಕ್ಕೆ ಅಂಟಿಸಿಕೊಂಡ
ಬಣ್ಣಗಳ ತೊಳೆಯದ ಹೊರತು
ಅನೃತದ ಅಲಂಕಾರಗಳ
ಕಳಚದ ಹೊರತು
ನಿನ್ನ ಒಳಗೆ ಬರಗೊಡುವುದಿಲ್ಲ

ಕಾಮನಬಿಲ್ಲಿಗೆ ಜಗಸೂರೆಗೊಳ್ಳಬಹುದು
ಮೋಸಹೋಗಬಹುದು
ಆಕಾಶದ ಕುಲಕ್ಕೆ ಯಾವ ಬಣ್ಣವೂ ಇಲ್ಲ

ಹೋಗು
ಸಿಕ್ಕುವುದು ಎರಡೇ ದಾರಿ
ಅಹಂಕಾರಕ್ಕೆ ಬಾಗಿಲುಂಟು
ಒಲವೆಂಬುದು ಬಟಾಬಯಲು ~

ಗೌರಿಯರ ದುಃಖ



ಬರಿಗೊರಳ ತುಂಬು ಸೆರಗಿನಿಂದ
ಹೊದ್ದುಕೊಂಡು
ಬರಿಗಾಲಲ್ಲಿ ತವರಿಗೆ
ಹೊರಟಳು ಅವ್ವ..
ಸೆರಗ ತುದಿಯಲ್ಲಿ
ಎರಡು ಹರಿದ ನೋಟಿನ
ಗಂಟು..

ಮಗಳ ಕಂಡ ಹಳೇಮುದುಕಿ
ಕಾಣದ ಕಣ್ಣು
ಚಡಪಡಿಸುತ್ತದೆ
ಮುಖ, ಮೈ ಮುಟ್ಟಿ ಮುಟ್ಟಿ
ಉಸಿರುಯ್ಯುತ್ತದೆ

ಗಂಜಿ, ಪಾಯಸ
ಹಬ್ಬದೂಟ.. ಹೊತ್ತು ಬೀಳುವ
ತನಕ ಒಂದೇ ಸಮ ಮಾತು
ಮುಗಿಸಿ ತಿರುಗಿ ಹೊರಟಾಗ

ಕಾಣದಂತೆ ತನ್ನವ್ವನ ಎಲೆಯಡಿಕೆ
ಚೀಲಕ್ಕೆ ಹರಿದ ನೋಟು ಸೇರಿಸುತ್ತಾಳೆ
ಅವಳವ್ವ ಅದಾಗಲೇ ಇವಳ ಬ್ಯಾಗಿನಲಿ
ಬೆಳ್ಳಿ ಕಾಲಂದಿಗೆ ಮುಚ್ಚಿಟ್ಟಿದಾಳೆ..

ಕಣ್ಣೀರಲಿ ತೊಯ್ದ
ಹರಿದೆರಡು ಸೆರಗುಗಳು
ಮುಂದಿನ ಗೌರಿಗೆ ಈ ಊರು ಕರೆಯುತ್ತೋ
ಇಲ್ಲವೋ ಅಂತಾನೆ ಮೌನಕ್ಕೆ ತುತ್ತಾಗುತ್ತವೆ. ~ ಆರ್.ಪಿ.

ಖಾಲಿತನ

ನಾಡಿನ ತುಂಬೆಲ್ಲಾ ಭಾರತದಿಂದ ಬಂದಿರುವ ಬೋಧಿಧರ್ಮ ಸಂನ್ಯಾಸಿಯ ಗುಲ್ಲೋ ಗುಲ್ಲು.
ಇದು ಗುರು ಹುಂಗ್ ಚಿ ಅವರ ಕಿವಿಗೂ ಬಿತ್ತು.. ಶೊಲಿನ್* ನ ಅಂಗಳಕ್ಕೆ ಬಂದವರೇ ಬೋಧಿಧರ್ಮರನ್ನು
'ನನಗೆ ಬೌದ್ದ ಧರ್ಮ ಕುರಿತು ಪಾಠ ಹೇಳಿರೆಂದು' ಕೇಳಿಕೊಂಡು ತಮಗೆ ತಿಳಿದುದ ಹೇಳತೊಡಗಿದರು
'ಮನಸು, ಬುದ್ದ, ಸಕಲ ಜೀವ-ಜಂತುಗಳು - ಈ ಮೂರೂ ವಾಸ್ತವಗಳಲ್ಲ
ವಾಸ್ತವ ಅನ್ನೋದು ಕೂಡ ಖಾಲಿ.. ಯಾವ ಪರಿಧಿಯಿಲ್ಲ, ಕೊನೆಯಿಲ್ಲ.. ಎಲ್ಲವೂ ಖಾಲಿತನದಿಂದ ಕೂಡಿಲ್ಲವೇ? '
ಎಂದು ಮಾತು ಮುಂದುವರಿಸುತ್ತಲೇ ಇದ್ದಾಗ ಥಟ್ಟನೆ ಬೋಧಿಧರ್ಮರು ಹುನ್ಗ್ ಚಿಯ ತಲೆಗೆ ಕುಟುಕಿದರು.
ಹುನ್ಗ್ ಚಿ ನೋವಿನಿಂದ 'ಯಾಕೆ ಹೊಡೆದಿದ್ದು ?' ಎಂದು ಪ್ರಶ್ನಿಸಿದರು.
ಆಗ ಬೋಧಿಧರ್ಮರು ''ಎಲ್ಲವೂ ಖಾಲಿ ಇದ್ದ ಮೇಲೆ ಈ ನೋವು ಎಲ್ಲಿಂದ ಬಂತು ?
ಕಾಣಲಾಗದ್ದನ್ನು ಕಾಣು
ಕೇಳದಿರುವುದನ್ನು ಕೇಳು
ತಿಳಿಯದಿರುವುದನು ತಿಳಿ
ಅದೇ ನಿಜವಾದ ಸತ್ಯ '' ಎಂದು ಅಲ್ಲಿಂದ ಎದ್ದು ಹೊರಟರು.
ಸುತ್ತಲೂ ಇದ್ದ ಅವರ ಶಿಷ್ಯಂದಿರು ಕೋಪಗೊಂಡು ಹಲ್ಲೆಗೆ ಯತ್ನಿಸಿದಾಗ ಅವರನ್ನು ತಡೆದ ಹುನ್ಗ್ ಚಿ 'ಪದಗಳು ನನ್ನ ಮನಸ್ಸಿನಲಿರುವುದನು ಹೇಳಲಾರವು ಹೃದಯದಿಂದ ಅರ್ಥಮಾಡಿಕೊಳ್ಳಲು ಯತ್ನಿಸಿ' ಎಂದು ಹೇಳಿ ಬೋಧಿಧರ್ಮ ಹೋದ ಹಾಡಿಗೆ ಅಡ್ಡ ಬಿದ್ದರು.

ಶೊಲಿನ್ = ಚೀನಾದ ಬೌದ್ದ ದೇವಾಲಯ & ವಿದ್ಯಾಲಯಗಳ ಪಾರಿಭಾಷಿಕ ಪದ

~ ಕೋನ್ ಪ್ರಸಂಗಗಳು >> ಆರ್.ಪಿ. -2

Thursday, September 5, 2013

ಸ್ತ್ರೀ ಸೂಕ್ತ


ನಿನ್ನ ಛಾಯೆಯಷ್ಟೆ ಕಂಡು
ಮಾಯೆಯೆಂದು ಬೆಚ್ಚಿಬಿದ್ದರು
ನಿನ್ನ ಮೂರ್ತದ ಬಣ್ಣಕ್ಕೆ
ಹಚ್ಚಿ ಬೆಲೆ ಕಟ್ಟಿದರು
ನಾಲಗೆಯಲ್ಲಿ ನೀರು ಹನಿಸುತ್ತಲೇ
ಬೆಂಕಿ ಎಂದರು
ಕೊನೆಗೆ,
ದೇವರೆಂದರು ಸುಖದ ಪಾರಮ್ಯಕ್ಕೆ!
ಮಿಗಿಲಾಗಿ
ನಿಂತ ಗಂಡಿನ ದಡದಲ್ಲಿ
ಹರಿವ ನದಿಯಾಗಿದ್ದೆ ನೀನು.. ~ ಆರ್.ಪಿ.

ಶಿಶಿರದ ಮೊದಲ ಮಳೆ

ಶಿಶಿರದ ಮೊದಲಲ್ಲಿ ಬೀಳುವ
ರಾತ್ರಿಮಳೆ ಹೊತ್ತಲ್ಲಿ
ಇವಳು ಪ್ರಳಯ ಸ್ವರೂಪಿ..
ನಾನೋ ಬಯಲು ಸೀಮೆಯ
ಬಿಸಿಲು ಕುದುರೆ!

ಖುರಪುಟದ ನಾದ
ನದಿ ಹರಿಯೋ
ಶಬ್ದ ಸಂಕರಕ್ಕೆ
ಭೂವ್ಯೋಮಗಳು ಒಂದಾದ
ಸಿಡಿಲ ಸಂಭ್ರಮ

ಧೋ..ಧೋ.. ಸುರಿವ ಮಳೆ
ಭೋರ್ಗೆರೆವ ಗಂಡುಹೊಳೆ
ಹಾಗೆ ಸಣ್ಣಗೆ ಮೀಟಿದಂತೆ
ವೀಣೆ ತಂತಿ ತಾನ.

ದಾರಿಯುದ್ದ ಮುತ್ತಿನಧರ
ಕಚ್ಚಿದ ಮಧ್ಯಪಾನ
ಗಮ್ಯವೋ ಮುಳುಗೆದ್ದ
ಸಮಸ್ತ ತೀರ್ಥಸ್ನಾನ

ಮುಗಿಯುತ್ತಲೇ ಇಲ್ಲ
ದಂಡಯಾತ್ರೆ..
ಹರಿವ ನದಿಗೆ ಮೈಯೆಲ್ಲಾ ಕಾಲು
ಸುರಿವ ಮಳೆಗೆ ಮೈಯೆಲ್ಲಾ ಜೀವ

ಹಗಲು ಹಕ್ಕಿ ಹಾಡುವ ಹೊತ್ತಿಗೆ
ಅವಳು ಕೊಚ್ಚಿಹೋದ ಭತ್ತದ ಗದ್ದೆ
ನಾನು ನೆರೆ ನಿಂತ ಹೆಬ್ಬಳ್ಳ.. - ಆರ್.ಪಿ.
ಅಗಸೆ ಬೀಜಗಳನ್ನು ತೂಗುತ್ತಿದ್ದ ತೋಝನ್ ನನ್ನು ಭಿಕ್ಕುವೊಬ್ಬ ಕೇಳಿದ 'ಬುದ್ದ ಎಂದರೇನು?'
ತೋಝನ್ ಉತ್ತರಿಸಿದ 'ಮೂರು ಪೌಂಡ್ ಅಗಸೆ ಬೀಜ'.

ಟಿಪ್ಪಣಿ: ಹಳೇ ಝೆನ್ಸಂತ ತೋಝನ್ ಒಂಥರಾ ಕಪ್ಪೆಚಿಪ್ಪಿನ ಹಾಗೆ. ಅದರೆರಡು ಪಕಳೆಗಳನು ತೆರೆದರೆ ಅಂಗಾಂಗಗಳನು ನೋಡಬಹುದು. ಆದರೆ ಅದು ನಿಜವಾದ ತೋಝನ್ ಆಗಿರಬಹುದೇ? ಹಾಗೆಯೇ ಬುದ್ದ!

ಮಮುನ್ ಮುಕ್ತಕ :
ಮೂಗಿನ ಹತ್ತಿರಕ್ಕೆ ಘಮಗುಡುವ
ಮೂರು ಪೌಂಡ್ ಅಗಸೆ ಬೀಜ
ಮನಸಿಗೂ ಬಲು ಸಮೀಪ.
ಪ್ರಮಾಣ, ನಿರಾಕರಣಗಳ
ಮಾತಿನ ಮಂದಿ ಸರಿತಪ್ಪುಗಳಲ್ಲೇ
ಬದುಕುತ್ತಾರೆ, ಕಾಣಲಾರರಷ್ಟೆ!

~ ಅಗುಳಿಯಿಲ್ಲದ ಅಗಸೆಬಾಗಿಲು 禪 >> ಆರ್.ಪಿ.

ಅಗುಳಿಯಿಲ್ಲದ ಅಗಸೆಬಾಗಿಲು

ಗಾಳಿಯಲ್ಲಿ ಹಾರಾಡುತ್ತಿದ್ದ ಬಾವುಟವನ್ನು ನೋಡಿದ ಇಬ್ಬರು ಭಿಕ್ಕುಗಳು ವಾದಕ್ಕಿಳಿದರು
ಮೊದಲನೆಯವ ' ಬಾವುಟ ಹಾರುತ್ತಿದ್ದೆ ' ಎಂದ.
ಇನ್ನೊಬ್ಬ 'ಇಲ್ಲ .. ಗಾಳಿ ಹಾರುತ್ತಿದೆ ' ಎಂದು ಪ್ರತಿಕ್ರಿಯಿಸಿದ.
ಅದೇ ದಾರಿಯಲ್ಲಿ ಸಾಗುತ್ತಿದ್ದ ಗುರು ಹ್ಯುನೆಂಗ್ ರು ಹೇಳಿದರು ' ಬಾವುಟವೂ ಅಲ್ಲ .. ಗಾಳಿಯೂ ಅಲ್ಲ , ನಿಮ್ಮ ಮನಸು ಹಾರಾಡುತ್ತಿದೆ !'

ಟಿಪ್ಪಣಿ: ಹ್ಯುನೆಂಗ್ ರು ಝೆನ್ ಪರಂಪರೆಯ 6ನೇ ಹಾಗೂ ಕಡೆಯ ಗುರು. ಈ ಇಬ್ಬರು ಮಂದತಲೆಗಳ ಭಿಕ್ಕುಗಳ ವಾದ ಕೇಳಿ ಸಹಿಸಲಾಗದೆ .. ಸ್ವತಃ ಅವರೇ ಈ ರೀತಿಯ ಚೌಕಾಶಿ ಮಾಡಿದರು. ಕಬ್ಬಿಣ ತೆಗೆಯುತ್ತಿದ್ದ ಭಿಕ್ಕುಗಳಿಗೆ ಚಿನ್ನ ತೆಗೆದುಕೊಟ್ಟರು.. ಈ ಕೋನ್ ನಲ್ಲಿ. ಹಾರಾಡುತ್ತಿರುವ ಗಾಳಿ, ಬಾವುಟ, ಮನಸುಗಳ ಹೊರನೋಟ ಒಂದೇ ಆಗಿದ್ದರೂ ಅವುಗಳ ಸತ್ಯಸ್ವಭಾವ ಬೇರೆಯದೇ ಆಗಿದೆ.

ಮಮುನ್ಸ್ ಮುಕ್ತಕ:

ಗಾಳಿ, ಬಾವುಟ, ಮನಸು ಹಾರುತ್ತವೆ
ಅದೇ ಹಳೇ ಅರ್ಥದಲಿ
ಯಾವಾಗ ನಮ್ಮ ಬಾಯ್ಗಳು
ತೆರೆಯುತ್ತವೋ
ಆಗ ಎಲ್ಲಾ ಅಪಾರ್ಥ.

~ ಅಗುಳಿಯಿಲ್ಲದ ಅಗಸೆಬಾಗಿಲು 禪 >> ಆರ್.ಪಿ.
ದಾಜ಼ು ಹುಇಕೆ ತನ್ನ ಗುರು ಬೋಧಿಧರ್ಮರಲ್ಲಿ ' ನನ್ನ ಮನಸ್ಸೇಕೋ ವ್ಯಾಕುಲಗೊಂಡಿದೆ .. ತಿಳಿಗೊಳಿಸುವಿರ ?' ಎಂದು ಕೇಳಿಕೊಂಡ
ಅದಕ್ಕೆ ಬೋಧಿಧರ್ಮ 'ಎಲ್ಲಿ ನಿನ್ನ ಮನಸ್ಸನ್ನು ಕೊಡು.. ತಿಳಿಗೊಳಿಸುವೆ' ಎಂದರು.
ಹುಇಕೆ ನಿರ್ಲಿಪ್ತನಾಗಿ 'ನಾನೂ ಹುಡುಕಿದೆ .. ಆದ್ರೆ ಸಿಗಲೇ ಇಲ್ಲ' ಎಂದ.
'ನೋಡಿದ .. ನಾನದನಾಗಲೇ ತಿಳಿಗೊಳಿಸಿರುವೆ' ಎಂದರು ಬೋಧಿಧರ್ಮ!

~ ಕೋನ್ ಪ್ರಸಂಗಗಳು >> ಆರ್.ಪಿ. -1