Friday, July 19, 2013

ಅಕ್ಕನ ಗೆಳತಿಯೊಬ್ಬಳ ಸ್ವಗತ

Chetana Thirthahalli ಅವರ ಕವರ್ ಫೋಟೋಗೆ ನನ್ನದೊಂದು ಅಕ್ಷರಮಾಲೆ...

ಅಕ್ಕನ ಗೆಳತಿಯೊಬ್ಬಳ ಸ್ವಗತ
*****************

ಕಳೆದುಕೊಳ್ಳುವುದೇನು?
ಹೀಗೆ ಹರಿದುಹೋಗುತ್ತಿರುವ
ಸಮಯದ ಚಂದಿರನ
ಬೆಳಕನ್ನ ...
ನೋಡುತ್ತಾ ಖುಷಿಯಿಂದ
ಹಾಗೆ ಕುಳಿತುಬಿಟ್ಟೆ

ತಾರೆಗಳು ಸುಮ್ಮನೆ
ವ್ಯಾನಿಟಿ ಬ್ಯಾಗಿನೊಳಗೆ
ತೂಕಡಿಸು ವಾಗ ..
ಸೂರ್ಯ ಇದೇ
ಮೊಗದಲ್ಲಿ ಅರಳಿಬಿಟ್ಟ
ಸಹಸ್ರಾರದಂತೆ

ನೋಡು ನೋಡು
ಗಜದೂರದ ಹಿಮಕಣಿವೆಯಲ್ಲಿ
ಅದೆಷ್ಟು ಪೂರ್ಣಚಂದಿರರು
ಕದ್ದು ಇಣುಕಿ ನೋಡುತ್ತಿದ್ದಾರೆ
ಅವನು ಮಾತ್ರ ಸಿಕ್ಕಲಿಲ್ಲ

ದ್ರವಿಡ ದೇಶದಿಂದ ದಣಿದು
ಬಂದೆ ಕಾಶ್ಮೀರದ ಶೈವ
ನೊಬ್ಬನ ಹುಡುಕಿ
ಅಕ್ಕನೂ ಬಂದಳು
ಚೆನ್ನಮಲ್ಲಿಕಾರ್ಜುನನ ತಡಕಿ

ಹುಡುಕುತ್ತಾ ಹುಡುಕುತ್ತಾ
ಸಮಯ ಹರಿಯುತ್ತಲೇ ಇತ್ತು
ಸಾಗುತ್ತಾ ಸಾಗುತ್ತಾ
ದಾರಿ ಮುಗಿಯದಾಗಿತ್ತು

ಅಕ್ಕ ನಕ್ಕಳು
ನನ್ನ ಚೆನ್ನ ಸಿಕ್ಕನೆಂದು
ನಾನು ನಕ್ಕಿದೆ
ನನ್ನ ಶಿವ ಒಳಗೇ ಇದ್ದನೆಂದು
ಇಬ್ಬರೂ ನಕ್ಕೆವು
ಲೋಕವರಿಯದಂತೆ ...
ದಾರಿಯ ಸುಖ .. ಕಾಣುವ ಸುಖ
ಉಂಡು ಮತ್ತೂ ನಕ್ಕೆವು - RP

ಉರಿಯ ಕನಸಿಗೆ

ಉರಿಯ ಕನಸಿಗೆ
ಕಲಿದೇವರು ಕಂಡಿದ್ದಾನೆ
***************

ಉರಿವ ಕನಸೊಂದು
ಬೀಳುತಿದೆ ಈ ರಾತ್ರಿಗಳಲಿ
'ಧರೆ ಹೊತ್ತಿ ಉರಿದರೆ ನಿಲಬಹುದೇ'
ಎಂದು ಬಸವ ಢಣ್ಣಾನಾಯಕ
ಕಿವಿಗೆ ಕೂಗಿ ಕತ್ತಲಾಗಿ ಬಿಡುತ್ತಿದ್ದಾನೆ

ಕತ್ತಲು ತುಂಬಿದ ನಿದ್ದೆಗೆ
ಉರಿಯ ತಾಪದ ಕನವು
ಅಕ್ಕಯ್ಯ ತಾಳಲಾರೆ
ಕದಳಿಗೆ ಕರೆಯೆ ಎನ್ನ

ಸಿದ್ದರಾಮ ಕಟ್ಟಿದ ಕೆರೆಯಲಿ
ಹೆಣಗಳ ಹೋಮ
ಕೆಂಪಾಗಸವ ತುಂಬಿದ
ರಕುತದ ಓಕುಳಿಗೆ
ಬಲಿಯ ಸಂಭ್ರಮ..

ಒಣಗಿದ ರಕ್ತ ಬೀಜಾಸುರರ
ಸಂತತಿ ನನ್ನ ರಕುತದೊಳಗೂ
ಹೊಕ್ಕು ಚಿಗುರುವಂತಿದೆ
ಹರಳಯ್ಯ ಬಾ ಸುಲಿದುಬಿಡು
ಈ ಕಾಯವ ಕಾಯಿಸಿ

ಮಡಿಯ ಮಡಿಕೆಗಳ
ಹೊರಗೆ ತೊಳೆದರೂ
ಒಳಗದೇ ಒಣಗಿದ ಅಮೇಧ್ಯ.

ಜನಿವಾರ ಶಿವದಾರ ಉಡುದಾರ
ದಾರ ದಾರ ದಾರಿದ್ರಗಳಾಗಿ
ಎನ್ನ ಕುಲವ ಸುತ್ತಿ ಕಟ್ಟಿ
ಉಸಿರ ಬೆಲೆ ದಾರವಾಯ್ತು

ಹಿಟ್ಟಿಲ್ಲದವರ ಹಂಗಿಸುವ
ದಿಕ್ಕಿಲ್ಲದವರ ದುರುಗುಟ್ಟುವ
ಸಂತ್ರಸ್ತರ ಸತಾಯಿಸುವ
ದೊಡ್ಡಮತದವರ ಮನೆಗೆ
ಕಲಿದೇವರು ಬಂದು ಕಂಕಣ
ಕಟ್ಟಿದ್ದಾನೆ!

ಈ ಉರಿಯ ಕನಸಿಗೆ
ಕಲಿದೇವರು ಕಂಡಿದ್ದಾನೆ..
ಅದಕ್ಕೆ ಈ ಭೀತಿಶಂಕೆ. - RP

ವೇಲಿಂಗ್ ವಾಲ್

ಜೆರುಸಲೇಂನ ಪಶ್ಚಿಮಗೋಡೆಗೆ ಒಂದು ಪತ್ರ (ವೇಲಿಂಗ್ ವಾಲ್ )
*************************

ನನ್ನದೊಂದು ಖಾಲಿ ಪತ್ರವನಿಟ್ಟು
ಪ್ರಾರ್ಥಿಸುವೆ ಪ್ರಭುವೇ
ಬವಣೆಗಳ ಬರೆಯಲಾಗದು
ಭಾವಿಸೋ ಭಗವಂತ..

ನಿನ್ನ ಕೊಂಡಿಗಳಲಿ ಸಿಕ್ಕಿರುವ
ಅಸಂಖ್ಯ ಕೋರಿಕೆಗಳಲಿ
ನಾನು ಕೂಗುವ ಕೂಗು
ನಿನ್ನ ಪಾದಕೆ ಅರುವಾಗಲಿ

ನನ್ನ ಮೂರು ಮುಕ್ಕೋಟಿ
ದೇವತೆಗಳ ಬದಿಗಿಟ್ಟು
ನಿನ್ನ ಬಳಿ ಸಾರಿರುವೆ
ಎದೆಗೆ ಬಾಚಿಗೆಕೊಳ್ಳೋ
ಒಮ್ಮೆಗೇ ಉಸಿರು ನಿನ್ನದಾಗಲಿ

ನನ್ನೀ ಅಳು, ನಿನಗಿತ್ತ ಮುತ್ತು
ಮೈಮರೆತ ಮನ ...
ಇದೋ ಪೂಜೆ ಮುಗಿಯಿಷ್ಟೇ!
ವರಕ್ಕೆ ಕಾಯುತ್ತಾ ಈ ಗೋಡೆಯ
ಕೊಂಡಿಯ ಹಲ್ಲಿಯಾಗುತ್ತೇನೆ. - RP

Tuesday, July 16, 2013

ಹಸಿದ ಹೊಟ್ಟೆಯ ಶಾಪ...!!!

ಹಸಿದ ಹೊಟ್ಟೆಯ ಶಾಪ...!!!
--------------------------------
ಹರಿದ ಅಂಡರುವೇರಿಗೂ ತ್ಯಾಪೆ
ಇದೆ ಸಾಹೇಬರೇ
ಬಟ್ಟೆ ನಮಗೆಂದೂ ಮಾನ ಮುಚ್ಚಿ
ಕೊಳ್ಳಲೂ ಸಿಗಲಿಲ್ಲ, ಶೋಕಿಗೆ
ಸಿಕ್ಕಿತೇ ?!

ನಿಮ್ಮ ವಾದ, ತರ್ಕಗಳ
ಹರಟೆಗಿಂತ ನಮ್ಮ ಬದುಕು
ದೊಡ್ಡದು ಅಲ್ವರಾ ?

ದುಡಿದ ಕೂಲಿ ದಿನಕ್ಕೆ
ರೂಪಾಯಿಯಲ್ಲೇ ಸಿಗೋದು
ಹ್ಹ ಹ್ಹ ಅದೂ ಅಪಮೌಲ್ಯ
ದುಡಿಸಿಕೊಂಡ ನಿಮಗೆ
ಸಾವಿರ ಸೇರಿದ ಡಾಲರು
ಮತ್ತು ಅದರ ದವಲತ್ತು

ಬಡವನ ತುತ್ತು ಅನ್ನದ ಮೇಲೆ
ರಾಜಕಾರಣ ಮಾಡುವ
ನಿಮ್ಮ ಬಾಯಿಗಳಿಗೆ
ನಿಮ್ಮ ದೇವರುಗಳಿಗೆ
ನಿಮ್ಮ ಧರ್ಮಗಳಿಗೆ
ನಿಮ್ಮ ಜಾತಿಗಳಿಗೆ
ಗೆದ್ದಲು ಹತ್ತಲಿ..

ನೀವು ನಡೆವ ಚಪ್ಪಲಿ
ನೀವು ಉಣ್ಣುವ ಅನ್ನ
ನೀವು ಹೊದೆವ ಬಟ್ಟೆ
ಎಲ್ಲಾ ಬಡವನ ಬೆವರು

ಬೆವರ ಬದಲು ರಕ್ತ
ಕೇಳುತ್ತೀರಿ… ನಿಮ್ಮ ಒಡಲು ಬರಿದಾದರೆ
ಬದುಕು ಬರವಾದೀತು ಸಾಹೇಬರೇ..
ಮುಂದೊಮ್ಮೆ ನಿಮ್ಮ ಬೆವರ ನೀವೇ
ಕುಡಿಯಬೇಕು.. ಕಾಲ ದೂರವಿಲ್ಲ

ಸಂಕ್ರಮಣ ಸ್ನಾನ


ಸಂಕ್ರಾಂತಿ ಪುರುಷ ಬರುತ್ತಾನೆಂದು
ಇವಳು ತೋರಣ ಕಟ್ಟಿಸಿ
ಉತ್ತರಾಣಿ ಸಿಕ್ಕಿಸಿದಳು ಸೂರಿಗೆ.
ಒಳಗೆ ಘಮಗುಡುವ ಕಿಚಡಿ
ಬೋಗುಣಿಗಳು ತುಂಬಿದ
ಎಳ್ಳು ಜೀರಿಗೆ ಬೆಲ್ಲ

ರಾತ್ರಿ ತಂಬೂಲ ಮೆಲ್ಲುತ್ತ
ಕೇಳಿಯೇ ಬಿಟ್ಟೆ ಯಾರವನು
ಬರಲಿಲ್ಲವೆಂದು?
ಇವಾಗಲ್ಲವ ಸಂಕ್ರಮಣವೆಂದು
ಎದೆಯೇರಿದಳು
ಕತ್ತಲು ನಾಚುತ್ತಾ
ಬೆಳಕು ಬೆಚ್ಚುತ್ತಾ
ಖಗಮಿಗಗಳಿಗೂ ರೋಮಾಂಚನ
ಮಾಗಿಯ ಚಳಿ ಬೆವತು
ಸಾಂಗವಾಯಿತು ಸಂಕ್ರಮಣ ಸ್ನಾನ

ಕೋಟಿ ಸೂರ್ಯರು ಹುಟ್ಟಿದರು
ಅವಳ ನೀಳಕೂದಲ ಹನಿಗಳಲ್ಲಿ
ನನ್ನ ಕಣ್ಣುಗಳಲ್ಲಿ ಹಾಲುಪಥದ
ನಕ್ಷತ್ರ ರಾಶಿ

ಇದೀಗ
ಚಂದ್ರ ಪಾಳಿಯ ಮುಗಿಲಬಾಗಿಲಲ್ಲಿ
ಮಿಥುನ ಸಂಕ್ರಮಣ!

Tuesday, July 9, 2013

ಬೆತ್ತಲ ಮೆಟ್ಟಿಲುಗಳು



1.      ಸಾವಿರ ಸಾವಿರ ಬೆತ್ತಲು
ಬಯಲಾದರು
ಒಲವಿನ ದಾರಿಗೆ ಕಾಣದಷ್ಟು
ಬೆತ್ತಲ ಮೆಟ್ಟಿಲುಗಳು

ನಾ ಕಳಚಿಕೊಳ್ಳುತ್ತಾ
ಮೆಟ್ಟಿಲು ಹತ್ತುತ್ತಿರುವೆ
ಪ್ರತಿ ಹೆಜ್ಜೆಗೂ ನನ್ನದೇ
ಪ್ರಾಣ ಸಿಕ್ಕಿದಂತೆ
ಎದೆಯೊಳಗೊಂದು ಸಣ್ಣ ಚೀರು

ಶೃಂಗದಲ್ಲಿ ಮತ್ತದೇ ನಿನ್ನ ಶೃಂಖಲೆ
ಎಲ್ಲೂ ನೀನೇ ಕಾಣುವ ಭ್ರಾಂತು
ಮಾತು ಮೌನಗಳ ನಡುವೆ ಸಿಕ್ಕೊಂಡ
ನಾನು
ಹುಡುಕುತ್ತಿದ್ದೇನೆ ನನ್ನ
ಬೆತ್ತಲು ಗುರುತು ಸಿಕ್ಕುತ್ತಿಲ್ಲ
ಇದಾವ ಗರ್ಭ!

ನಿನ್ನ ಕಾಯುತ್ತಾ
ಮೋಕ್ಷಕ್ಕೆ ಹವಣಿಸುತ್ತಾ
ಹಪಹಪಿಸುತ್ತಾ ..
ತೊಗಲು ಕೂಡ ಹರಿಯುತ್ತಿದೆ
ದಾರಿ ಮುಚ್ಚಿಕೊಳ್ಳುತ್ತಿದೆ
ಉಸಿರು ಕಟ್ಟುತ್ತಿದೆ.. ಸಂಜೆಸೂರ್ಯ
ಹೊರಟುಬಿಟ್ಟ.. ನೀ ಬರುತ್ತಿಯೇನು?!

Sunday, July 7, 2013

Oscar Wild ಮತ್ತು ಕವಿತೆ


‘The only difference between the saint and the sinner is that every saint has a past, and every sinner has a future.’ – Oscar Wilde.

ನೋಡು ನನ್ನ ಗತವೂ
ನೀನೇ ಆಗಿದ್ದೆ
ಬರುವ ಭವಿಷ್ಯತ್ತೂ
ಕೂಡ
ಹೊರತು ಬಾಳುವೆ ಬಾಳದು
ಕಾಲಧರ್ಮದ ಕಟ್ಟಳೆ
ಪ್ರೀತಿ ಮುರಿಯುತ್ತಲೇ ಇದೆ.

ನಾನೊಬ್ಬ ಹಳೆಯಗೊಡ್ಡು ಪಾಪಿಸಂತ
ಸಂಬಂಧಗಳ
fashion
ಕಾಲದಲ್ಲೂ ಒಲವಿನ
passion
ನಲ್ಲೇ ಬದುಕುತ್ತಿದ್ದೇನೆ
ಬಿಡಿಸಿಕೊಳ್ಳುತ್ತೀಯ,
ವರ್ತುಲಗಳಿಂದ
ಆವರ್ತಗಳಿಂದ
ಪೂರ್ಣ ನಿನ್ನ ಹರಿವಿನ ಸೆಳೆವಿಗೆ!