Friday, September 18, 2009

ಅವಳಿಲ್ಲದ ರಾತ್ರಿಗಳು

ರಾತ್ರಿ ಕಳೆಯುವುದೆಂತು
ನಿನಿಲ್ಲದಯೇ.....
ಅಸಾಧ್ಯ! ಹೇ ರಾತ್ರಿಯೇ
ಅವಳಿಲ್ಲದ ನೀ ಹಗಲಾಗು !
ಕಾಲ ಹೊಯ್ವ ಹೆಗಲಾಗು...!
ಮರೆಯಾಗಿಸು ಮನಸಿನ
ಮುಂದಿನ ಹೂದೋಟದ ಕನಸುಗಳ
ಗಾಳಿ-ಗಂಧ- ಆಕಾಶಗಳ
ಕಣ್ಣಿಂದ.... ಆಚೆಗೆ, ದಿಗಂತದಾಚೆಗೆ....

ಅಂಗಾಂಗದೊಳಗೆಲ್ಲ ಧುಮ್ಮಿಕ್ಕುವ
ರಸಧಾರೆಯ ತಾರೆಯ
ಮಿಂಚಿಗೆ, ನಾಡಿಗಳಿಗೆಲ್ಲಾ
ವಿದ್ಯುತ್ ಪುಳಕ, ನರಕ.

ನಾನೊಂಟಿಯಾದರೆ ಒಡಲಿನ
ಅಗ್ನಿ ಕ್ರಿಯಾಶೀಲ ಮತ್ತೂ
ಅಶ್ಲೀಲ..!?
ಜ್ವಾಲೆಗಳು ಸರ್ವವ್ಯಾಪಿ....
ಕತ್ತಲೂ ಬೆಚ್ಚುವಂತೆ
ನನ್ನೊಳಗೆ?

ನೀನಿದ್ದರೆ ನಿದಿರೆ
ನಿಧನ, ಮದಿರೆಗೆ ಮಂಗಳ....
ಹಗಲು-ರಾತ್ರಿ ಸಂಯುಕ್ತ ಸಂಕಲನ

ಈ ರಾತ್ರಿ ಕಳೆಯುವುದು
ಅದೆಂತೋ...
ಆ ಹಗಲು ಮೂಡುವುದು
ಇನ್ನೆಂತೋ....

Tuesday, September 15, 2009

ಒಂದು ಮುತ್ತಿನ ಪ್ರಸಂಗ


ಮೇಲೆ ನಿಗಿದು ನಿಂತ ಹಿಮ್ಮಡಿ....
ದೇಹ ಬಿದ್ದದ್ದು ಬೆರಳುಗಳ ಮೇಲೆ,
ಪುಟ್ಟ ಬೆರಳುಗಳ ಮೇಲೆ...
ಎರಡೂ ಕೈಗಳು ಚಾಚಿದ್ದು
ಉಕ್ಕಿನೆದೆಯ ಬಾಹುಬಲಿಯ
ತೋಳು ಬಳಸಿಕತ್ತಿನ ಹಿಂದೆ
ಕೂದಲುಗಳ ಹಿಡಿದು..

ಅವಳ ತುಟಿಗಳ ಬಳಿಗೆ
ಇವನು ಬಾಗಿ ತಂದ
ತುಟಿಗಳ ಒತ್ತಿ ಹಿಡಿದು ...
ಉಸಿರು ಸಂದಿಗ್ದ ..!
ಎದೆ ಬಡಿತ ಪಡೆದಿದ್ದು
ಸಾವಿರ ಚಂಡಮಾರುತದ ವೇಗ
ಉದ್ವೇಗ... ಸಂವೇಗ...!!

ಒಳ ಚಾಚಿದ ರಸನಗಳು
ಕೂಡಿಕೊಂಡವು.....
ಶ್ವಾಸದೊಳಗೆ ಅಡಗಿಕೊಂಡ
ಆಮ್ಲಜನಕವ ಹಿಡಿದು
ವಿನಿಮಯಿಸಿಕೊಂಡವು...
ಆಸ್ವಾದಿಸಿದುವು... ಚಪ್ಪರಿಸಿದುವು,
ನೆತ್ತಿಗೆ ಅಮಲು
ಮನಸ್ಸಿಗೆ ಸಂಪಿಗೆ ಘಮಲು.

ಕಣ್ಣುಗಳು ಕೆಂಪೇರಿದುವು
ಇವಳು ಹಿಡಿದ ಉಸಿರು
ಅವನಲ್ಲಿ ಬಿಡುಗಡೆ...
ಬೆಸೆದುಕೊಂಡ ಕೈಗಳು ಗಟ್ಟಿ
ಉಕ್ಕನು ಮೀರಿಸೀತು ಮೆಟ್ಟಿ...!

ಕಣ್ಣಿಗೆ ಕಣ್ಣು...
ಎದೆಗೆ ಎದೆ...
ಸಿಕ್ಕಿಕೊಂಡ ಉಸಿರು...
ಒತ್ತಿದ ತುಟಿಗಳಿನ್ನೂ .....?

ಮಾತು, ಭಾವ, ಒಲವು


ಮೊದಲ
ಮುಂಗಾರ
ಮಳೆಗೆ ಮೈಯೊಡ್ಡಿ
ನಿಂತ ಭೂತಾಯ
ದೇಹ ಘಮ್ ಎಂದಾಗ
ನನ್ನ ಮಾತು ಮಥಿಸಿ,
ಕಾವ್ಯ ಕಾರಣವಾಗುತ್ತದೆ.

ರಗರಗನೆ ಉರಿವ
ಸೂರ್ಯನ ಬೆಳಕು
ಚಂದ್ರನಿಗೆ ನೆರಳಾಗಿ
ಬೆಳದಿಂಗಳಾದಾಗ
ನನ್ನ ಭಾವ ಬಸಿದು
ಜೀವ ಚಿಲುಮೆಯಾಗುತ್ತದೆ.

ಕೆಂಡದ ಬಣ್ಣದ
ಮಲ್ಲಿಗ ಮೈ..ಮುಖದ
ಅವಳ ಒಲವಿನ ನಗು
ಶಬ್ದತೀರದಲೆ ಚುಂಬಿಸಿದಾಗ
ಹೃದಯ ಹೂಬನವಾಗುತ್ತದೆ.