Monday, January 16, 2017

ನೆತ್ತರಲಿ ನೆಂದ ಚಂದಿರನ ಜೊತೆಗೊಂದು ಸಂಜೆ

ನೆತ್ತರಲಿ ನೆಂದ ಚಂದ್ರ - ಕವಿತೆ ಮತ್ತು ಅನುವಾದಗಳ ಮೂಲಕ ನಮಗೆ ಚಿರಪರಿಚತರಾಗಿರುವ ಹಿರಿಯ ಕವಯತ್ರಿ ಎಂ.ಆರ್. ಕಮಲ ಅವರ ಹೊಸ ಪುಸ್ತಕ. ಈ ಹಿಂದೆ ಮಾಯಾ ಎಂಜಲೋ ಅವರ ಆತ್ಮ ಚರಿತ್ರೆ 'ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ' ಹಾಗೂ ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ ಇತ್ಯಾದಿಗಳನ್ನೂ ಆಫ್ರಿಕನ್ - ಅಮೆರಿಕನ್, ಆಫ್ರಿಕನ್ ಕವಯತ್ರಿಯರ ಕಾವ್ಯವನ್ನು ಸರಣಿಯಲ್ಲಿ ಕನ್ನಡಕ್ಕೆ ತಂದಿದ್ದರು. ಅದೇ ಸರಣಿಯ ಅರಬ್ ಕಾವ್ಯದ ಪುಸ್ತಕ ಇದಾದರೂ ವರ್ತಮಾನದ ಮಹಿಳಾ ಲೋಕದ ತಲ್ಲಣಗಳ ನಡುವೆ ಈ ಕವನ ಸಂಗ್ರಹದ ಒಳದನಿ ಸ್ವಲ್ಪ ತೀವ್ರ ಸ್ವರೂಪದ್ದಾಗಿದೆ. ಮತ್ತು ಈ ಕಾಲಕ್ಕೆ ಕನ್ನಡ ಓದುಗರಿಗೆ ಇದು ಲಭ್ಯವಾಗಿದ್ದು ಒಳ್ಳೆಯದೇ ಆಗಿದೆ.



ಅರಬ್ ಕಾವ್ಯದ ಭೂತ ಮತ್ತು ವರ್ತಮಾನ
ಅರಬ್ ಕಾವ್ಯಕ್ಕೆ ಅರಬ್ ದೇಶದ ಇವತ್ತಿನ ರಾಜಕೀಯವಾದ ಭೌಗೋಲಿಕ ಪ್ರದೇಶದ ಸರಹದ್ದು ಅಲ್ಲವೇ ಅಲ್ಲ. ದುಬೈ , ಓಮನ್ , ಕುವೈತ್ , ಯುಎಇ ಕೊಲ್ಲಿ ರಾಷ್ಟ್ರಗಳಿಗೆ ಅರಬ್ ಸೀಮಿತವಾಗಿಲ್ಲ. ಈಜಿಪ್ಟ್ , ಲೆಬೆನಾನ್ , ಪ್ಯಾಲೆಸ್ಟೈನ್ , ಸಿರಿಯಾ, ಇರಾಕ್, ಉತ್ತರ ಆಫ್ರಿಕಾ , ಜೋರ್ಡನ್, ಆಲ್ಜಿರೀಯ , ಟ್ಯುನೇಷಿಯಾ , ಲಿಬಿಯಾ, ಮೊರೊಕ್ಕೊ ಸೇರಿದಂತೆ ಸಮಸ್ತ ಮಧ್ಯಪ್ರಾಚ್ಯವೇ ಅರಬ್ ಸಂಸ್ಕೃತಿಯನ್ನು ಒಳಗೊಂಡಿದೆ. ಅಲ್ಲಿ ಯಹೂದಿ, ಕ್ರೈಸ್ತ, ಪಾರಸಿಕ, ಇಸ್ಲಾಂ ಮತಗಳು ಹುಟ್ಟಿ ಹರಡಿ ಆಳಿವೆ. ಯಾವೊಂದೂ ನಶಿಸಿಲ್ಲ! ಆದರೆ ಅಲ್ಲಿ ಹುಟ್ಟಿದ ಸಾಮ್ರಾಜ್ಯಗಳು, ಶಾಂತಿದೂತರನ್ನು ಅಲ್ಲಿನ ರಾಜಕೀಯ ಅನೈತಿಕವಾಗಿ ಹತ್ಯೆ ಮಾಡಿದೆ. ಜೆರುಸೆಲಂ ನಂಥ ನಗರಿ ಸಾವಿರಾರು ವರ್ಷಗಳಿಂದ ರಕ್ತಪಾತಗಳಲ್ಲಿ ಮುಳುಗೆದ್ದಿದೆ. ಆದರೂ 'ಪವಿತ್ರ ನಗರ' ಎಂಬ ತಲೆಪಟ್ಟಿಯನ್ನು ಹೊತ್ತುಕೊಂಡೇ ಇದೆ. ಹೀಗಿರುವಾಗ ಅಲ್ಲಿನ ಹೆಣ್ಣು ಮಕ್ಕಳ ಕಾವ್ಯ ಬಹಳ ಆಸಕ್ತಿಯನ್ನು ಹುಟ್ಟಿಸದೇ ಇರದು. ಮಧ್ಯಪ್ರಾಚ್ಯ ಕೂಡ ನಮ್ಮ ದೇಶದ ಹಾಗೆ ಪುರಾತನ ಮತ್ತು ವೈವಿಧ್ಯ ಪೂರ್ಣ.
ಅರಬ್ ಮಹಿಳೆಯರ ಕಾವ್ಯ ಎಂದಾಕ್ಷಣ 'ಅರಬ್ ಮಹಿಳೆಯರು ಕಾವ್ಯ ಬರೆಯುವುದು ಉಂಟೇ (ಸಾಧ್ಯವಿದೆಯೇ) ?' ಎಂದು ಪ್ರಶ್ನಿಸಬಹುದಾದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಅರಬ್ ರಾಷ್ಟ್ರಗಳ ಸಾಮಾಜಿಕ ಕಾನೂನುಗಳು, ಹೆಣ್ಣು ಮಕ್ಕಳ ಸಿಗಬೇಕಾದ ಮಾನವ ಹಕ್ಕುಗಳ ನಿರಾಕರಣೆ, ಹೇಳಲಾಗದಷ್ಟು ದೌರ್ಜನ್ಯಗಳು ಇದೆಲ್ಲವೂ ನಮ್ಮನ್ನು ನಂಬದಿರುವಂತೆ ಮಾಡುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಆದರೂ ಕಾಲಕಾಲದಲ್ಲಿ ಅರಬ್ ಕಾವ್ಯದಲ್ಲಿ ಮಹಿಳೆಯರ ಪ್ರಮುಖ ಉಪಸ್ಥಿತಿಯನ್ನು ಈ ಇಡೀ ಕಾವ್ಯ ಸಂಪುಟ ನಮ್ಮ ಮುಂದೆ ಎತ್ತಿ ತೋರಿಸುತ್ತಿದೆ. ಹಾಗಿದ್ದರೆ ಅರಬ್ ಮಹಿಳಾ ಕಾವ್ಯ ಯಾವಾಗ? ಎಲ್ಲಿ? ಹೇಗೆ? ಯಾರಿಂದ? ಹುಟ್ಟಿಕೊಂಡಿತು ಎನ್ನುವ ಕುತೂಹಲವಿದ್ದರೆ ಈ ಕಾವ್ಯ ಸಂಪುಟದ ತುಸು ದೀರ್ಘಪ್ರಸ್ತಾವನೆಯನ್ನು ಓದಬೇಕು. ಕವಿತೆಗಳ ಅನುವಾದದ ಜೊತೆಗೆ ಕಮಲಾ ಅವರು ಅಲ್ಲಿನ ಕಾವ್ಯ -ಕಾಲವನ್ನು ಅಭ್ಯಾಸ ಮಾಡಿ ಕಾಲಾನುಕ್ರಮದಲ್ಲಿ ಅಲ್ಲಿನ ಪ್ರಮುಖ ಅರಬ್ ಕವಯತ್ರಿಯರ ವಿವರಗಳನ್ನು ಅಂದಿನ ರಾಜಕೀಯ -ಸಾಮಾಜಿಕ ಪರಿಸ್ಥಿತಿಗಳ ಜೊತೆಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ . ಇಂತಹವೊಂದು ಪ್ರಯತ್ನಕ್ಕಾಗಿ ಅವರು ಆರೇಳು ವರ್ಷ ಫ್ರೆಂಚ್ ಭಾಷೆಯನ್ನು ಕಲಿತು ಅಭ್ಯಾಸವನ್ನು ಮಾಡಿ ಉತ್ತಮ ಕವಿತೆಗಳನ್ನು ಬಹಳಷ್ಟು ಕಡೆ ಅರಸಿ ಆಯ್ಕೆ ಮಾಡಿದ್ದಾರೆ. ಅವರೇ ಹೇಳುವಂತೆ ನಥಾಲಿ ಹಂದರ್ ರ 'ದಿ ಪೊಯೆಟ್ರಿ ಆಫ್ ಅರಬ್ ವಿಮೆನ್' ಅವುಗಳಲ್ಲಿ ಮುಖ್ಯವಾದ ಮೂಲಕೃತಿ. ನಥಾಲಿ ಫ್ರೆಂಚ್ ಅಮೇರಿಕನ್ ಆದರೂ ಅವರು ಮೂಲ ಪ್ಯಾಲೆಸ್ಟೈನೀ ವಲಸಿಗರು. ಹಾಗಾಗಿ ನಥಾಲಿ ಅವರ ಕಾವ್ಯ ಸಂಗ್ರಹ ಪ್ರಮಾಣೀಕೃತವಾದುದು. ಅವರಿಗೆ ಮಧ್ಯಪ್ರಾಚ್ಯದ ಒಳಉಸಿರಿನ ಸದ್ದು ಉಳಿದವರಿಗಿಂತ ಚೆನ್ನಾಗಿಯೇ ಕೇಳುತ್ತದೆ.

ಕವಯತ್ರಿಯವರೇ ಹೇಳುವಂತೆ ಇಪ್ಪತ್ತನೆಯ ಶತಮಾನದ ಉತ್ತರಾರ್ಧವನ್ನು ಅರಬ್ ಮಹಿಳಾ ಸಾಹಿತ್ಯದ ಮುಂಬೆಳಗಿನ ಕಾಲವೆಂದೇ ಗುರುತಿಸಲಾಗಿದೆ. ಈ ಕಾಲದಲ್ಲಿ ಬಂದ ಸಾಹಿತ್ಯವು ಅರಬ್ ಲೋಕದ ರಾಜಕೀಯ -ಸಾಮಾಜಿಕ -ಸಾಂಸ್ಕೃತಿಕ ಸ್ಥಾನ ಪಲ್ಲಟಗಳನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವುದರಲ್ಲಿ ಎಷ್ಟು ಸಫಲವಾಗಿಯೆನ್ನುವುದು ಪ್ರಸ್ತುತ ಕಾವ್ಯ ಸಂಪುಟದ ನೂರಾರು ಕವಿತೆಗಳ ಓದಿನಲ್ಲಿ ನಮ್ಮ ಗಮನ ಬರುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಪ್ರಸ್ತಾವನೆಯಲ್ಲಿ ಇಸ್ಲಾಂ ಪೂರ್ವಕಾಲದಿಂದ ಇವತ್ತಿನ ಆಧುನಿಕ ಕಾಲದವರೆಗೆ ಅರಬ್ ಲೇಖಕಿಯರು. ಸಮಾಜ, ಸಾಹಿತ್ಯ ಮತ್ತು ಸನ್ನಿವೇಶಗಳ ವಿವರಣೆ ಉಪಕಾರಿಯಾಗಿದೆ. ಉದಾರವಾದಿಗಳಿಂದ ವರ್ತಮಾನದಲ್ಲಿ ತೀವ್ರ ಟೀಕೆಗೆ ಒಳಗಾಗುತ್ತಿರುವ ಹಿಜಾಬ್ (ಮುಖಗವಸು) ಇಸ್ಲಾಂ ಷರಿಯಾದ ಭಾಗವಲ್ಲವೆಂದು ೧೯ನೇ ಶತಮಾನದ ಮೊದಲಲ್ಲೇ ಅಂದರೆ ನೂರು ವರ್ಷಗಳ ಹಿಂದೆಯೇ ಅರಬ್ ಲೇಖಕಿಯರು ವಿರೋಧಿಸಿದ್ದಾರೆ. ಸಂತಸದ ಸಂಗತಿಯೆಂದರೆ ಇದನ್ನು ಅಂದಿನ ಕೆಲವು ಲೇಖಕರು ಕೂಡ ಬೆಂಬಲಿಸಿದ್ದು. ಇಂತಹ ಹಲವು ರೋಚಕ ಸಂಗತಿಗಳೂ ಕೂಡ ಪುಸ್ತಕದಲ್ಲಿವೆ.



ಅನುವಾದ ಮತ್ತು ಕಾವ್ಯದ ಸ್ವರೂಪ :
ಭಾಷೆಯಿಂದ ಭಾಷೆಗೆ ತರ್ಜುಮೆಗೊಳ್ಳುವಾಗ ಕಾವ್ಯ 'ಪರಕಾಯ ಪ್ರವೇಶ' ವನ್ನು ಮಾಡಲೇಬೇಕು. ಯಥಾಸ್ಥಿತಿಯಲ್ಲಿ ಬಂದರೆ ಎರಡು ದೇಶ-ಭಾಷೆಯ ಪರಿಸರ ವಿಭಿನ್ನವಾಗಿದ್ದಾಗ ಕಾವ್ಯದ ಉದ್ದೇಶವಾಗಲಿ ಅರ್ಥವಾಗಲಿ ನಮಗೆ ಮುಟ್ಟುವುದು ಸಾಧ್ಯವಾಗದೆ ವಿಫಲ ಪ್ರಯತ್ನವಾಗಿಬಿಡುತ್ತದೆ. ಅನುವಾದದಲ್ಲಿ 'ಕಾವ್ಯ ಸವಕಳಿ' ಹೆಚ್ಚಾಗಿ ಸಂಭವಿಸುವ ಅಪಾಯವೂ ಇದೆ. ಆ ದೃಷ್ಟಿಯಿಂದ ಅನುವಾದ ಅನ್ನುವುದು ಭಾಷಿಕ ಭಟ್ಟಿ ಇಳಿಸುವ ಕಾಯಕವಲ್ಲ. ಅದೊಂದು ಸ್ವತಂತ್ರ ಸೃಜನಶೀಲ ಕೃತಿ.
ಈ ಕವಿತೆಗಳ ಅನುವಾದದ ಆರಂಭದ ನಂತರದ ನಡುವಿನ ಆರೇಳು ವರ್ಷಗಳಲ್ಲಿ ಕಮಲಾ ಅವರು ಫ್ರೆಂಚ್ ಭಾಷೆಯನ್ನೂ ಕಲಿತಿದ್ದಾರೆ. ಇದರಿಂದ ಓದಿಗೆ ಮತ್ತೊಂದು ಮಧ್ಯವರ್ತಿ ಭಾಷೆಯನ್ನು ಅವಲಂಬನೆ ತಪ್ಪಿದೆ ಮತ್ತು ಕಾವ್ಯದ ಮೂಲ ದ್ರವ್ಯವನ್ನು ನೇರವಾಗಿ ಫ್ರೆಂಚ್ ನಿಂದ್ ಕನ್ನಡಕ್ಕೆ ತಂದು ನಮಗೆ ಉಣಬಡಿಸಲು ಸಾಧ್ಯವಾಗಿದೆ. ಹಾಗಾಗಿಯೇ ಇಲ್ಲಿನ ಕವಿತೆಗಳ ಯಾವ ತುದಿಯಲ್ಲಿಯೂ ಒಗ್ಗದ ಪದವಿಲ್ಲ, ಒಲಿಯದ ನುಡಿಯಿಲ್ಲ, ಅಗ್ಗದ ಸಾಲುಗಳು ಖಂಡಿತ ಲಭ್ಯವಿಲ್ಲ. ಕಾವ್ಯದ ಹರಿತ, ಮೊನಚು ಮತ್ತು ಲೋಕದೃಷ್ಟಿ ಭಾಷೆಯಿಂದ ಭಾಷೆಗೆ, ದೇಶದಿಂದ ದೇಶಕ್ಕೆ ಹೋದಂತೆಲ್ಲಾ ಸೂಕ್ಷ್ಮವಾಗಬೇಕು. ಅಂತಹ ಸೂಕ್ಷ್ಮತೆಯನ್ನು ಕಮಲಾ ಅವರ ಅನುವಾದದಲ್ಲಿ ಕಾಣಬಹುದಾಗಿದೆ.
ಈ ಕವಿತೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ,

''
ಅವಳ ಕೂದಲು ಅದೆಷ್ಟು ನೀಳ, ನೀಳವೆಂದರೆ
ನಿಂತಾಗ ಕಾಲಿಗೆ ಸುತ್ತಿಕೊಳ್ಳುತ್ತಾಳೆ
ಅವಳ ಬೆರಳುಗಳು ಅದೆಷ್ಟು ನೀಳ, ನೀಳವೆಂದರೆ
ತಾವರೆಯ ಗಿಡದ ಹಣ್ಣ ಕೋಣೆಯಿಂದಲೇ ಕೀಳುತ್ತಾಳೆ
ತೊಡೆಯಿಂದ ಉಕ್ಕಿ ಹರಿವ ಮಳೆಯಲ್ಲಿ ಮಡಿಯುಟ್ಟು
ಕನಸು ಕಾಣುತ್ತಾಳೆ ''

ಒಂದು ದೇಶ - ಪುಟ ೧೮೧
ಫೋಜಿಯಾ ಅನು-ಖಾಲಿದ್

ಇದೊಂದು ಪುಟ್ಟ ಕವಿತೆ ಒಂದು ದೇಶವನ್ನು ಒಂದು ಹೆಣ್ಣನ್ನು ಅದೆಷ್ಟು ವಿಸ್ತಾರವಾದ ನೆಲೆಯಲ್ಲಿ ಕಟ್ಟಿಕೊಡುತ್ತದೆ ಎಂಬುದನ್ನು ಹೇಳಲಾಗದು ಬದಲಿಗೆ ಮತ್ತಷ್ಟು ಬಾರಿ ಓದಿ ಓದಿ ಕಣ್ಣಿನಲ್ಲಿ ಕಟ್ಟಿಕೊಳ್ಳಬೇಕು. ಈ ಕಟ್ಟಿಕೊಳ್ಳುವಿಕೆ ಹೆಣ್ತನವನ್ನು ಉಳ್ಳ ಓದುಗನಿಗೆ ಕಷ್ಟವಾಗದು. ಅವನ ತುಟಿಯ ತುದಿಯಿಂದಲೇ ಕವಿತೆ ಸಾಕ್ಷಾತ್ಕಾರವಾಗುತ್ತಾ ಸಾಗುತ್ತದೆ.
ಈ ಸಂಪುಟದಲ್ಲಿ ಕವಿತೆಗಳು ಗಾತ್ರದಲ್ಲಿ ಐದಾರು ಸಾಲಿನ ಪುಟ್ಟ ಕವಿತೆಯಿಂದ ಹಿಡಿದು ಗದ್ಯಕವನಗಳಂತಹ ಪ್ರಯೋಗಗಳ ವರೆಗೆ ಹರಡಿಕೊಂಡಿವೆ. ಅವುಗಳ ಅಭಿವ್ಯಕ್ತಿಯ ಪ್ರಮಾಣ ಮತ್ತು ಪರಿಣಾಮಗಳಲ್ಲಿ ಮಾತ್ರ ಅಂತಹ ಗುರುತರ ವ್ಯತ್ಯಾಸವೇನೂ ನನ್ನ ಓದಿನಲ್ಲಿ ಕಂಡು ಬರಲಿಲ್ಲ. ಸಾಲುಸಾಲುಗಳು ಕೂಡ ಪ್ರಭಾವಶಾಲಿಯಾಗಿವೆ.

ಆತ್ಮಕ್ಕೇ ಹೊಲಿದ
ಅರೇಬಿಯಾದ ಕಸೂತಿ ವಸ್ತ್ರ
ನನನ್ ಮನೆಯ ನೆನಪು
ಪುಟ - ೨೨೪ , ಲೊರೆನ್ ಜರೋ -ಜೊಜೊನಿಸ್

ಇರುಳಿಗೆ ನೋವು , ವ್ಯಥೆ ತುಂಬಿ
ಕಣ್ಣೊಳಗಿನ ನಿದಿರೆಯ ಕಸಿಯುತ್ತದೆ
ಪುಟ ೧೩೨ , ನಜಿಕ್ ಅಲ್ -ಮಲೈಕಾ

ಸೂರ್ಯ ಮೈಮೇಲೆ ಸುರಿಯುತ್ತಾನೆ
ಒಳಗೆ, ಭಾವನೆಗಳ ಕಸೂತಿ ಮಾಡಿದ ಬೆಳ್ಳಿಕೊಳ
ಪುಟ ೧೨೯, ಧಾಬ್ಯಾ ಖಮೀಸ್

ಇವುಗಳಲ್ಲದೇ
ಬೈರುಟ್ , ಕ್ಲೇರ್ ಗೆಬೀಲಿ
ಹಳದಿ ಕೈಗವಸು , ನಯೋಮಿ ಶಿಹಾದ್ ನೈ
ಬಾಗಿದ ಮನೆಯಿಂದ, ಸಬಾಹ್ ಅಲ್ ಖರ್ರತ್ ಜ್ವೆನ್
ಋತುಮಾನಗಳು , ಸಫಾ ಪಾತಿ
ಈ ಎಲ್ಲ ಗಪದ್ಯಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ.

ಮೂರೂ ನೂರು ಪುಟ ಈ ಸಂಪುಟದಲ್ಲಿ ಎಪ್ಪತ್ತಾರು ಜನ ಅರಬ್ ಕವಯತ್ರಿಯರ ಕವಿತೆಗಳಿವೆ. ಈ ಎಲ್ಲರೂ ೧೯೪೦ ನಂತರದ ಎರಡು ದಶಕಗಳಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶಗಳಲ್ಲಿ ಜನಿಸಿದವರು. ಅವರಲ್ಲಿ ಕೆಲವರು ತವರಿನಲ್ಲೇ ನೆಲೆಸಿದ್ದರೆ ಮತ್ತು ಕೆಲವರು ಪಶ್ಚಿಮ ದೇಶಗಳಲ್ಲಿ ಬದುಕು ಕಂಡುಕೊಂಡಿದ್ದಾರೆ. ಈ ಅವಧಿಯಲ್ಲಿ ಮಧ್ಯ ಪ್ರಾಚ್ಯ ಕೂಡ ಸಾಕಷ್ಟು ರಾಜಕಾರಣದ ಏಳುಬೀಳುಗಳನ್ನ, ಸಾಮಾಜಿಕ ಬದುಕಿನಲ್ಲಿ ಬರ್ಬರತೆಯನ್ನು ಕಂಡಿದೆ. ಹಾಗಾಗಿ ಈ ಕಾವ್ಯಗಳು ಆ ಕಾಲದ ದಿನಚರಿಯನ್ನು ತಮ್ಮೊಳಗೆ ಹಿಡಿದಿಟ್ಟುಕೊಂಡಿವೆ.

ಗಾಜಾ ತೆವಳುತ್ತಿದೆ
ತನ್ನ ತಣ್ಣನೆಯ ಕೈಕಾಲುಗಳೊಂದಿಗೆ
ಪಾಪದ ಕೊಡ ತುಂಬಿ ತುಳುಕಿರುವ
'ಉರಿನಗರ'ದ ನನ್ನ ಜೀವನದಂತೆ
ಪುಟ - ೧೨೬ , ದೋನಿಯ ಎಲ್ - ಅಮಲ್ ಇಸ್ಮಾಯಿಲ್

ನೆನಪಿಸಿಕೋ - ಪುಟ್ಟಕಂದನ ಗುಟ್ಟು ಸಾಮ್ರಾಜ್ಯವನ್ನು ,
ಲೆಬನಾನ್ ಬೆಟ್ಟದ ಪಂಜರದ ತಳದಲ್ಲಿ
ಸತ್ತ ಹಕ್ಕಿಗಳ ಬಗೆಗಿನ ಶಕುನ ..
ಹೇಗೆ ಓಡುವುದೆಂದು ಮಾತ್ರ ನಮಗೆ ತಿಳಿಯಲಿಲ್ಲ.
ಪುಟ ೧೪೬ - ನದಿಯಾ ತುಯೇನಿ

ನಗರಗಳನ್ನು ಕಟ್ಟಿ
ಕಾಲಕ್ಕೆ , ಕಾಲದ ಬೀಜಗಳಿಗೆ,
ಹೃದಯಕ್ಕೆ , ಕಣ್ಣಿಗೆ ,
ಯುಗಕ್ಕೆ ಮತ್ತು ಮಕ್ಕಳಿಗೆ
ಸಿಪ್ಪೆಯನ್ನು ಕಿತ್ತೆಸೆಯಿರಿ -ನಂತರ!
ಗಡಿಯಿರದ ಗಾಳಿಗೆ
ನಿಮ್ಮನು ತೂಗು ಹಾಕಿಕೊಳ್ಳಿ
ಪುಟ - ೬೪ ಆಂದ್ರೆ ಶೆದಿ

ಬಿಟ್ಟುಬಿಡು ನನ್ನ ;
ಇರುಳಿಗೆ,
'ಸುನ್ನಿಗಳ ಕಿಟಕಿಯಿಂದ
ಹೊಮ್ಮಿಬರುವ ಕತ್ತಲಿಗೆ,
ನೋವಿನಿಂದ ಚರಗುಟ್ಟುವ ಒಣಗಿದೆಲೆಗಳಿಗೆ
ಪುಟ - ೨೧೬ , ಲೀನಾ ಟಿಬಿ

ಈ ಕವಿತೆಗಳ ಆಯ್ದ ಸಾಲುಗಳು ಅಲ್ಲಿನ ಸ್ಥಿತ್ಯಂತರಗಳ ಅನಧಿಕೃತ ದಾಖಲೆಗಳೇ ಆಗಿವೆ. ದೇಶ - ಗಡಿ -ಧರ್ಮ - ಜಾತಿ ಕಡೆಗೆ ಹೆಣ್ಣು ಎನ್ನುವ ತಾರತಮ್ಯಗಳು ಹೇಗೆಲ್ಲಾ ನಮ್ಮನು ನಮ್ಮ ಬದುಕನ್ನು ಶೋಷಿಸಿಕೊಂಡು, ದೌರ್ಜನ್ಯಗಳನ್ನು ಪೋಷಿಸಿಕೊಂಡು ಬಂದಿವೆ ಎನ್ನುವುದರ ಇತಿಹಾಸವೂ ಈ ಕವಿತೆಗಳಲ್ಲಿ ಅಡಗಿಕೊಂಡಿದೆ. ಆದರೆ ಅದನ್ನು ಹುಡುಕಿ ಓದುವ ಮತ್ತು ಗಂಭೀರವಾಗಿ ಪರಿಗಣಿಸುವ ಮನಸುಗಳು ಈ ಕಾಲಕ್ಕೆ ತುರ್ತಾಗಿ ಬೇಕಾಗಿವೆ.

***

'' ಬೆಟ್ಟದಡಿಯ
ಕಲ್ಲುಬಂಡೆಗಳ ನಡುವೆ
ಸಾಯಲೆಂದು ಚಿಟ್ಟೆಯೊಂದು ಬಂತು!
ಬೆಟ್ಟ ತನ್ನ ನೆರಳನ್ನು ಚೆಲ್ಲಿ
ಸಾವಿನ ಗುಟ್ಟನ್ನು ಮುಚ್ಚಿಟ್ಟುಬಿಟ್ಟಿತು! ''
ಪುಟ - ೭೬ , ಎಟೆಲ್ ಅದ್ನಾನ್

ಝೆನ್ ಕಾವ್ಯದಂತಿರುವ ಈ ರೂಪಕಕಾವ್ಯ ದೊಡ್ಡ ದೊಡ್ಡ ಕವಿತೆಗಳ ಅಕ್ಷರ ರಾಶಿಯನ್ನೇ ನಾಚಿಸಿ ಅರ್ಥಸಂಪತ್ತಿನ ಅಧಿಪತಿಯಾಗಿಬಿಡುತ್ತದೆ. ಅರಬ್ಬಿನ ಬಿಸಿಲ ಬೇಗೆಯ ನಡುವೆ ಬೆಟ್ಟದಡಿ ಸಿಕ್ಕು ಸಾಯಲು ಬಂದ ಚಿಟ್ಟೆ ಅದರ ನೆರಳಲ್ಲೇ ಸಾವ ಮರೆತು ಬದುಕು ಕಟ್ಟಿಕೊಳ್ಳುವುದು ಎಷ್ಟು ಚೆಂದ. ಚೂರಾದರೂ ಭಾಷೆ ಮತ್ತು ಭಾವ ಇದು ಅನುವಾದ ಎನಿಸದೆ ನಮ್ಮದೇ ಜೀವ ಮಿಡಿದುದೊಂದು ಸಾಲಿನಂತೆ ಮಿಂಚಿದೆ ಕವಿತೆ.

‘’ಸಾವು,
ಎತ್ತರೆತ್ತರದ ಮರಗಳು ರಾತ್ರಿ ಬೇರಿನೊಂದಿಗೆ
ಚೆಲ್ಲಾಟವಾಡಿ ಎಲೆಗಳ ಮಬ್ಬುಗೊಳಿಸುತ್ತವೆ
ಸಾವು,
ಆಕಾರವಿಲ್ಲದ ದೇಹ
ಅಲೌಕಿಕ ಅಳಿವಿಗೆ ಹೊಗೆಯಂತೆ ಹಂಬಲಿಸುತ್ತದೆ
ನೀನದರ ನೆರಳಿನಲ್ಲಿ ಹೆಜ್ಜೆಗುರುತು ಬರೆಯುತ್ತೀಯ
ನಜ್ಜುಗುಜ್ಜಾದ ಎದೆಯಲ್ಲಿ ಮಳೆಯ ಮುಚ್ಚಿಡುತ್ತೀಯ
ನಿನ್ನ ಹೆಜ್ಜೆಗೆ ದಾರಿಹೋಕರ ದಾರಿಯೇ ಮರೆಯಾಗುತ್ತದೆ ‘’
ಪುಟ - ೬೨ , ಅಲ್ - ಜಹ್ರಾ ಅಲ್ - ಮನ್ಸೂರಿ

ಎಷ್ಟೋ ದಿನಗಳ ನಂತರ
ನಿನ್ನ 'ನಿಲುವುಗನ್ನಡಿ'ಯೆದುರು ನಿಂತರೆ
ಧೂಳು ಹಿಡಿದ ಕಪ್ಪಿನಲಿ
ಹೇರ್ ಪಿನ್ನುಗಳು !
ಪುಟ -೫೪ ಡಿಯಾಸ್ಪೋರ

ನೋವೇ ಒಂದಷ್ಟು ಕಾಲ ದೂರವಿರು
ನನ್ನ ನೋಟ್ ಪುಸ್ತಕದಲ್ಲಿ
ಎದೆಯ ತೋಟಗಳ ಬರೆಯುತ್ತೇನೆ
ಪುಟ - ೨೭೩ , ಹಮ್ದ ಖಮೀಸ್

ಈ ಇಡೀ ಕಾವ್ಯಸಂಪುಟ ಹೆಣ್ಣಿನ ಕಣ್ಣಿನೊಳಗಿನ ಹಸಿಕೆಂಡದಂತೆ ಓದುತ್ತ ಸಾಗಿದಂತೆಲ್ಲಾ ಸುಡುತ್ತದೆ, ಬೆಚ್ಚಗಾಗಿಸುತ್ತದೆ, ಇನ್ನೊಂದಷ್ಟು ಹೆಜ್ಜೆ ಮುಂದಿಟ್ಟರೆ ಕಣ್ಣಾಲಿ ತುಂಬಿಸುತ್ತದೆ. ಸಾವು ಅದರ ಆಕಾರವಿಲ್ಲದ ದೇಹ ಮತ್ತು ಅದರ ಪ್ರಯಾಣ ನಮ್ಮ ನೆರಳಾಗೇ ಸಾಗುತ್ತಿರುವ ದೃಶ್ಯವನ್ನು ಕವಿತೆ ಎಷ್ಟು ಸರಳವಾಗಿ ಹೇಳುತ್ತದೆಯೆಂದರೆ ಒಮ್ಮೆ ಬಾಯಿ ಬಿಟ್ಟು ಓದಿದರೆ ಸಾಕು ಅನಿಸುತ್ತದೆ. ಉಳಿದ ಅರ್ಥವ್ಯಾಖ್ಯಾನ ವ್ಯರ್ಥ.




ಪೌರಸ್ತ್ಯ ಚಿಂತನೆ ಮತ್ತು ಕನ್ನಡ ಸಾಹಿತ್ಯ
ಮೂರೂ ನೂರು ಪುಟಗಳಷ್ಟು ದೊಡ್ಡದಿರುವ ಈ ಅನುವಾದ ಸಂಗ್ರಹ ಬಹುಶಃ ನನ್ನ ಓದಿನ ಮಿತಿಯಲ್ಲಿ ಕನ್ನಡದ ಮೊತ್ತ ಮೊದಲ ಅರಬ್ ಕಾವ್ಯದ ಸಂಪುಟ. ಅದರಲ್ಲುವು ಅಲ್ಲಿನ ಮಹಿಳಾಲೋಕದ ಒಳದನಿಯನ್ನು ತೆರೆದಿಟ್ಟ ಮಹತ್ವದ ಪುಸ್ತಕ ಇದಾಗಿದೆ. ವರ್ತಮಾನದ ಹಲವು ತಲ್ಲಣಗಳ ಹಿನ್ನೆಲೆಯಲ್ಲಿ ಅರಬ್ ಮಹಿಳಾ ಸಂವೇದನೆಯ ಕುರಿತ ಕುತೂಹಲ ಬಹಳ ದೊಡ್ಡದು. ಅದಕ್ಕೆ ಸಂಬಂಧಿಸಿದಂತೆ ಈ ಪುಸ್ತಕ ಪೂರ್ಣ ನಮ್ಮ ಕುತೂಹಲವನ್ನು ತಣಿಸದಿದ್ದರೂ ಕೆಲವು ದಶಕಗಳ ಹಿಂದಿನ ಮತ್ತು ಇವತ್ತಿನ ದಿನಗಳ ಕುರಿತ ಒಂದು ವಾರೆನೋಟ ನಮಗೆ ಖಂಡಿತ ಲಭ್ಯ.
ಆಧುನಿಕ ಕಾಲವನ್ನು ಮುಖ್ಯವಾಗಿಟ್ಟುಕೊಂಡು ಅರಬ್ಬಿನ ಸಾಹಿತ್ಯ ನಿರ್ಮಾಣದ ಹಿನ್ನೆಲೆ, ಆಧುನಿಕ ಕಾವ್ಯ ಮತ್ತು ಮಹಿಳೆಯರನ್ನು, ಅರಬ್ ದೇಶಕಾಲ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ತುಂಬಾ ಅಚ್ಚುಕಟ್ಟಾಗಿ ಈ ಪುಸ್ತಕವು ಪರಿಚಯಿಸಿದೆ. ಪ್ರಸ್ತಾವನೆಯನ್ನು ಓದದೇ ಬರಿಯ ಕಾವ್ಯಕ್ಕೆ ಪ್ರವೇಶಿಸಿದರೆ ಕಾವ್ಯನಿರ್ಮಿತಿಯ ಹಿನ್ನೆಲೆಯನ್ನು ಅರ್ಥಮಾಡಿಕೊಳುವುದರಲ್ಲಿ ಓದುಗನಿಗೆ ಕಷ್ಟವಾಗಬಹುದು. ಕಾರಣ ಅರಬ್ ಸಂಸ್ಕೃತಿ ಇಂದು ನಾವು ನೋಡುವಷ್ಟು ಮಟ್ಟಿಗೆ ಧರ್ಮಾಂಧತೆ , ಜನಾಂಗೀಯ ದ್ವೇಷ, ಮಹಿಳಾ ದೌರ್ಜನ್ಯ , ಮಾನವ ಹಕ್ಕುಗಳ ಉಲ್ಲಂಘನೆಯಂತಹ ಕರ್ಮಕೂಪದಲ್ಲಿ ಸಿಲುಕಿರಲಿಲ್ಲ. ನಾಗರೀಕತೆಯ ಉಗಮ ಸ್ಥಾನಗಳಲ್ಲಿ ಒಂದಾದ ಮಧ್ಯಪ್ರಾಚ್ಯ ಉತ್ತಮವಾದ ಏಳ್ಗೆಯನ್ನು ಸಾಧಿಸಿದ್ದ ಜೊತೆಗೆ ಕಲೆ, ಸಾಹಿತ, ವಾಸ್ತುಶಿಲ್ಪ, ವಿಜ್ಞಾನ ಮೊದಲಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದ ನಾಡಾಗಿತ್ತು . ಆದರೆ ಇಂದು ಅದರ ಸ್ಥಿತಿಯೂ ನರಕ ಸದೃಶವಾಗಿದೆ. ಈ ನಾಕ ನರಕಗಳ ನಡುವೆ ಅಲ್ಲಿನ ಹೆಣ್ಣು ಮಕ್ಕಳು ಕಟ್ಟಿದ ಕಾವ್ಯ ಈ ಪುಸ್ತಕದ ಮೂಲಕ ಕನ್ನಡದ ಓದುಗರಿಗೆ ಲಭ್ಯವಾಗಿದೆ.

ಪ್ಯಾಲೆಸ್ಟೈನ್ ಚಿಂತಕ , ಬರಹಗಾರ ಎಡ್ವರ್ಡ್ ಸೈದ್ ನಮಗೆ ಒದಗಿಸಿದ ಪೌರಸ್ತ್ಯ ಚಿಂತನೆ ನೆಲೆಗಟ್ಟಿನ ಓದಿಗೆ ಈ ಕೃತಿ ಸಹಾಯಕವಾಗಬಲ್ಲುದು. ಪೌರಸ್ತ್ಯ ಚಿಂತನೆಯನ್ನು ಅರಬ್ ಗೆ ಸೀಮಿತಮಾಡುವುದು ಈ ಮಾತಿನ ಉದ್ದೇಶವಲ್ಲ. ಹೊರ ಪ್ರಪಂಚಕ್ಕೆ ಪಾಶ್ಚಿಮಾತ್ಯ ಸಾಹಿತ್ಯ ಪ್ರಮಾಣಗಳಿಗೆ ಹೊರತಾದ ಮಾನದಂಡಗಳನ್ನು ರೂಪಿಸಿಕೊಳ್ಳುವುದು ಯಾಕೆ ಅವಶ್ಯಕವಾಯಿತು ಎನ್ನುವುದನ್ನು ತಿಳಿಯಲು ಮತ್ತು ನಮ್ಮ ಸಾಹಿತ್ಯ , ಕಾವ್ಯಗಳು ಹೇಗೆ ಇವುಗಳಿಗೆಲ್ಲಾ ವಿಭಿನ್ನ ಎಂದು ತಿಳಿದುಕೊಳ್ಳಲು ಪೌರಸ್ತ್ಯ ಚಿಂತನೆಯ ಅಗತ್ಯವಿದೆ. ಇದು ಶುರುವಾಗಿ ನಾಲ್ಕಾರು ದಶಕಗಳೇ ಕಳೆದರೂ ಈ ಕುರಿತ ಗಂಭೀರ ಚರ್ಚೆಗಳನ್ನು ನಾವು ಎತ್ತಿಕೊಳ್ಳುವುದರಲ್ಲಿ ಎಲ್ಲಿಯೋ ಸೋತಿದ್ದೇವೆ. ( ಈ ಕುರಿತು ಸಿ ಏನ್ ರಾಮಚಂದ್ರನ್ ಅವರ ಬರಹಗಳು ಮಾತ್ರ ಹೆಚ್ಚು ಚಾಲ್ತಿಯಲ್ಲಿವೆ ) ಹಾಗಾಗಿ ಈ ಕಾವ್ಯದ ಓದು ನಮಗೆ ಪೌರಸ್ತ್ಯ ಚಿಂತನೆಯ ಓದಿಗೆ ಸಹಾಯಕವಾಗಬಲ್ಲುದು ಎಂದೆನಿಸುತ್ತದೆ.

ಕಡೆಯಲ್ಲೊಂದು ಆಸಕ್ತಿಕರ ಸಂಗತಿಯು ನೆನಪಾಯಿತು ಅರಬ್ ಅಮೇರಿಕನ್ ಬರಹಗಾರರರು ತಮ್ಮ ಕಾವ್ಯ - ಬರಹಗಳನ್ನು ಆಹಾರದ ಶೀರ್ಷಿಕೆಗಳಲ್ಲಿ ಅಭಿವ್ಯಕ್ತಿಸುವ ಕುರಿತ ಸಂಗತಿಯನ್ನು ಕಮಲಾ ಅವರು ಈ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. (ಉದಾ : ಗ್ರೇಪ್ ಲೀವ್ಸ್ ; ಸೆಂಚುರಿ ಆಫ್ ಅರನ್ ಅಮೇರಿಕನ್ ಪೊಯೆಟ್ರಿ ; ಫುಡ್ ಫಾರ್ ಅವರ್ ಗ್ರ್ಯಾಂಡ್ ಮದರ್ಸ್ ) ಇದು ಬಹಳ ಕುತೂಹಲಭರಿತವಾಗಿದೆ. ಆಹಾರ ಮತ್ತು ಆಸ್ವಾದ ಎನ್ನುವುದು ಎಲ್ಲಿಲ್ಲಿಗೆ ತಳುಕು ಹಾಕಿಕೊಂಡಿವೆಯೋ ತಿಳಿಯದು. ಆದರೆ ಆಹಾರ ಮನಷ್ಯನ ಕಲಾಮಾರ್ಗದಲ್ಲಿ ಬಹುಮುಖ್ಯ ವಿಷಯವಾಗಿದೆ. ಆದರೆ ಅದು ಅಷ್ಟೇ ವಸ್ತುನಿಷ್ಠವಾಗಿ ಕಾಣಿಸಿಕೊಳ್ಳುವುದಿಲ್ಲವಷ್ಟೆ. ಅದೊಂದೂತರನಾದ ಗುಪ್ತಗಾಮಿನಿ.
ಅರಬ್ ಮಹಿಳಾ ಕಾವ್ಯದ ಹರವು ತುಂಬಾ ದೊಡ್ಡದಾಗಿದೆ. ಒಂದು ಸಾವಧಾನದ ಓದು ಖಂಡಿತ ಈ ಕೃತಿಗೆ ಬೇಕು. ಅಲ್ಲದೇ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಕಾವ್ಯಪ್ರೇಮಿಗಳು ಈ ಸಂಪುಟವನ್ನು ಓದಲೇಬೇಕೆಂಬುದು ನನ್ನ ಶಿಫಾರಸ್ಸು.


Thursday, January 12, 2017

ಚಿಕ್ಕಲ್ಲೂರಿನ ಜಾತ್ರೆ; ಪಂಕ್ತಿಸೇವೆ V/s ಪ್ರಾಣಿ ಬಲಿ

ಹಳೇ ಮೈಸೂರು ಭಾಗದ ಜನರಿಗೆ 'ಚಿಕ್ಕಲ್ಲೂರು' ಎನ್ನುವ ಹೆಸರು ಕೇಳಿದ್ರೆ ಸಾಕು 'ಜಾತ್ರೆ' ಯಾವಾಗ ಅನ್ನುವ ಮಾತೇ  ಮೊದಲು. ಕಾರಣ ನೂರಾರು ವರ್ಷಗಳಿಂದ ಆ ಜಾತ್ರೆಗೆ ಬರುವ ಜನಸಂಖ್ಯೆ, ಅಲ್ಲಿನ ಆಚಾರ ವಿಚಾರಗಳು ನಮ್ಮ ಭಾಗದ ಮನಸ್ಸನ್ನು ಅಷ್ಟರ ಮಟ್ಟಿಗೆ ಸೂರೆಗೊಂಡಿದ್ದವು. ಎಲ್ಲಿ ನೋಡಿದ್ರು 'ಚಿಕ್ಕಲೂರು ಜಾತ್ರಾ ವಿಶೇಷ'  ಎನ್ನುವ ಬಸ್ಸುಗಳ ಸಾಲುಗಳೇ ಸಾಗುತ್ತಿದ್ದುವು. ಅಲ್ಲಿ ಮಕ್ಕಳು ಹೋದ್ರೆ ಕಷ್ಟ ತಪ್ಪಿಸಿಕೊಂಡ್ರೆ ಹುಡುಕಲು ಕಷ್ಟ, ಲಕ್ಷಾಂತರ ಜನ ಸೇರುತ್ತಾರೆ. ಎಲ್ಲರೂ ಬಯಲಿನಲ್ಲಿಯೇ ಮಲಗಬೇಕು ಅಲ್ಲೇ ಅಡುಗೆ ಅಟ್ಟು ಉಣ್ಣಬೇಕು, ಭಂಗೀ ಸೇವೆ , ಪಂಕ್ತಿ ಸೇವೆ  ಇತ್ಯಾದಿಗಳು ನಮಗೆ ಬರ್ಮುಡಾ ಟ್ರ್ಯಾಂಗಲ್ ತರದ ಕುತೂಹಲವನ್ನು ಚಿಕ್ಕಲ್ಲೂರಿನ ಜಾತ್ರೆಯ ಬಗ್ಗೆ ಮೂಡಿಸಿದ್ದವು.  ನಮ್ಮೂರುಗಳಿಂದ ಜನ ಲಾರಿ, ಟೆಂಪೋ ಮಾಡಿಕೊಂಡು ಅಡುಗೆ ಸಾಮಾನು, ಕುರಿಕೋಳಿ, ಟೆಂಟು ಹಾಕಲು ಟರ್ಪಾಲು ಎಲ್ಲ ತುಂಬಿಕೊಂಡು ಹೋಗುವಾಗ ನನಗು ಹೋಗುವ ಆಸೆ ಮೂಡುತ್ತಿತ್ತಾದರೂ ಮನೆಯವರು ಮಾತ್ರ ತಪ್ಪಿಕೊಂಡ್ರೆ ಕಷ್ಟ ಅಂತ ಹೆದರಿ ಕಳುಹಿಸುತ್ತಿರಲಿಲ್ಲ. ಅಲ್ಲದೇ ನಾವು ಮಂಟೇಸ್ವಾಮಿ ದೇವರ ಒಕ್ಕಲಲ್ಲ ಅನ್ನುವ ಕಾರಣವೂ ಇತ್ತು. ದಶಕದ ಹಿಂದೆ ಚಿಕ್ಕಲ್ಲೂರಿಗೆ ಹೋಗಿದ್ದ ನನ್ನ ಅತ್ತೆ ಮಗಳು ದೊಡ್ಡ ಅಡುಗೆ ಒಲೆಗೆ ಬಿದ್ದು ಬೆನ್ನು ಪೂರಾ ಸುಟ್ಟು ಬೊಬ್ಬೆ ಎದ್ದಿದ್ದ ನೆನೆಪಿಸಿಕೊಂಡ್ರೆ ಭಯವಾಗತ್ತೆ.  ಭಯ-ಭಕ್ತಿ, ಬಾಡೂಟಗಳಿಗೆ ಚಿಕ್ಕಲ್ಲೂರಿನ ಜಾತ್ರೆ ಸದಾ ಪ್ರಸಿದ್ದಿ. 



ಮಳವಳ್ಳಿಯ ಮೂಲಕ  ಕೊಳ್ಳೇಗಾಲಕ್ಕೆ ಹೋಗುವ ರಸ್ತೆಯಲ್ಲಿ ಕೊಳ್ಳೇಗಾಲಕ್ಕೂ ಏಳೆಂಟು ಕಿಮಿ ಹಿಂದೆ ಎಡಕ್ಕೆ ತಿರುವಿ ಕೊತ್ತನೂರು ದಾಟಿ ಮುಂದೆ ಹೋದರೆ ಚಿಕ್ಕಲೂರು ಸಿಗುತ್ತದೆ. ಅಲ್ಲಿಂದ ೩-೪ ಕಿಮಿ ದೂರದಲ್ಲೇ ಕಾವೇರಿ ನದಿ ಹರಿಯುತ್ತದೆ. ಆ ಕಡೆಯ ದಡದಲ್ಲಿ ಮುತ್ತತ್ತಿ ಊರಿದೆ.  ಚಿಕ್ಕಲ್ಲೂರಿನಲ್ಲಿ ಮಂಟೇಸ್ವಾಮಿಯ ಶಿಷ್ಯ ಸಿದ್ದಪ್ಪಾಜಿಯ ಗದ್ದುಗೆಯಿದೆ. ಇದು ಮಂಟೇಸ್ವಾಮಿ ಪರಂಪರೆಯ ಬಹುಮುಖ್ಯ ಗದ್ದಿಗೆ. ವಿಶ್ವಕರ್ಮ ಜಾತಿಯವರನ್ನು ಸೇರಿಸಿ ಎಲ್ಲ ಅವೈದಿಕ  ಜಾತಿಯ ಜನರು ಈ ಗದ್ದಿಗೆಗೆ ನಡೆದುಕೊಳ್ಳುತ್ತಾರೆ. 
ಹಾಗಾಗಿಯೇ ಹಳೆ ಮೈಸೂರುಭಾಗದ ಜಾತ್ರೆಗಳಲ್ಲಿ ಚಿಕ್ಕಲೂರಿನ ಜಾತ್ರೆಗೆ ಅಧಿಕ ಸಂಖ್ಯೆಯ ಜನ ಸೇರುತ್ತಾರೆ. ಮೂಲಗದ್ದುಗೆಯು  ಬೊಪ್ಪೇಗೌಡನ ಪುರದ ಧರೆಗೆ ದೊಡ್ಡವರ ಮಠದ ಉಸ್ತುವಾರಿಗೆ  ಸೇರಿದೆ. ಹಾಗಾಗಿ ವೈದಿಕ ಸಂಸ್ಕೃತಿಯಾ ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ವಿಶ್ವಕರ್ಮ ಸಮಾಜದವರು ಹೊಸಮಠ ಎನ್ನುವ ಹೊಸ ಗದ್ದುಗೆಯನ್ನು ನಿರ್ಮಿಸಿಕೊಂಡಿದ್ದಾರೆ. ಇದು ಮೂಲಗದ್ದುಗೆಯಿಂದ ಒಂದು-ಒಂದೂವರೆ ಕಿಮಿ ದೂರದಲ್ಲಿದೆ. ಆದರೆ ಇದಕ್ಕೆ ಒಳ್ಳೆಯ ಅನುದಾನಗಳು ಸಿಗಲಾಗಿ ಗುಡಿಗೋಪುರಗಳು ದೊಡ್ಡದಾಗಿ ನಿರ್ಮಿತವಾಗಿವೆ. ಆದರೆ ಮೂಲಗದ್ದುಗೆ ಈಗಲೂ ಸರಳವಾಗೇ ಇದೆ. ಅದಕ್ಕೂ ರಾಯಗೋಪುರ ಕಟ್ಟಲಾಗಿದೆ. ಜಾತ್ರೆಯ ನಡಾವಳಿಗಳು ಇಲ್ಲಿಯೇ ನಡೆಯುವುದು




ಜಾತ್ರೆಯ ಹಿನ್ನೆಲೆ ಏನು?  ಜಾತ್ರೆಯ ಆಚರಣೆಗಳು ಏನು?

ಹಲಗೂರಿನಲ್ಲಿ ಕಬ್ಬಿಣದ ಆಯುಧಗಳನ್ನು ಮಾಡಿ ಮಾರಿ ಹೆಚ್ಚು ಹಣ ಸಂಪಾದಿಸಿ, ಸಂಪತ್ತಿನ ದೆಸೆಯಿಂದ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದ, ಬಡವರು-ರೈತಾಪಿಗಳನ್ನು ತುಚ್ಛವಾಗಿ ಕಾಣುತ್ತಿದ್ದ ವಿಶ್ವಕರ್ಮ ಜಾತಿಯ ಪಾಂಚಾಳ ದೊರೆಗಳಿಗೆ ಬುದ್ದಿ ಕಲಿಸಬೇಕೆಂದು ಬೊಪ್ಪೇಗೌಡನ ಪುರದಲ್ಲಿದ್ದ ಗುರು ಮಂಟೇಸ್ವಾಮಿಯು ಅದೇ ಜಾತಿಯ ಮನೆಯಿಂದ ಸಿದ್ದಪ್ಪಾಜಿಯನ್ನು ತನ್ನ ಶಿಷ್ಯನನ್ನಾಗಿ ಪಡೆದುಕೊಂಡು ವರುಷಗಳ ತರುವಾಯ ಹಲಗೂರಿನ ದೊರೆಗಳ ಮನೆಯಿಂದ ತನಗೆ ಮಠ  ಕಟ್ಟಲು ಕಬ್ಬಿಣವನ್ನು ಭಿಕ್ಷೆ ಬೇಡಿ ತರಲು ಕಳುಹಿಸುತ್ತಾನೆ. ಹಾಗೆ ಕಳುಹಿಸುವಾಗ ಅವನಿಗೆ ಅಗೋಚರವಾದ ನೀಲಿಗ್ಯಾನವನ್ನು, ಮಾತ್ರಿಕ ಶಕ್ತಿಗಳನ್ನು ಎದುರಿಸುವ ಕಪ್ಪುಧೂಳನ್ನು ಕೊಟ್ಟು ಕಳುಹಿಸುತ್ತಾನೆ. ಅಲ್ಲದೆ ಮುಂದೆ ಚಿಕ್ಕಲ್ಲೂರಿನಲ್ಲಿ ಗುಡಿ ಕಟ್ಟಿಸಿ ಒಂಟಿ ದೇವರಾಗಿಸಿ ಎಲ್ಲ ಜಾತಿಯ ಜನ ಪೂಜೆ ಮಾಡುವ ಮೆರೆಯುವ ದೇವರಾಗಿಸುತ್ತೇನೆ ಅಂದು ಮಾತುಕೊಡುತ್ತಾನೆ. ಹಲಗೂರಿಗೆ ಭಿಕ್ಷಕ್ಕೆ  ಬಂದ ಸಿದ್ದಪ್ಪಾಜಿಯನ್ನು ಸೆರೆ ಹಿಡಿಯುವ ದೊರೆಗಳು ಪವಾಡಗಳನ್ನು ಮಾಡಿ ತೋರಿದರೆ ಕಬ್ಬಿಣ ಕೊಡುವುದಾಗಿ ಮಾತು ಕೊಡುತ್ತಾರೆ. ಅದರಂತೆ ಅವರು ಹೇಳುವ ಎಲ್ಲ ಪಂದ್ಯಗಳನ್ನು ಗೆದ್ದು  ಪವಾಡ ತೋರುವ ಸಿದ್ದಪ್ಪಾಜಿಗೆ ಕಬ್ಬಿಣ ಕೊಡಲು ಹಿಂದೇಟು ಹಾಕಿದಾಗ ಅವನ ಮಾಂತ್ರಿಕ ಶಕ್ತಿಯಿಂದ ಇಡೀ ಊರನ್ನೇ ರೋಗದ ಮಾರಿಯರು ಬಂದು  ಆಕ್ರಮಿಸಿಕೊಳ್ಳುತ್ತಾರೆ. ಕಡೆಗೆ ಸೋತ ಹಲಗೂರಿನ ದೊರೆಗಳು ಕಬ್ಬಿಣದ ಆಯುಧಗಳನ್ನು ಮಠವನ್ನು ಕಟ್ಟಿಕೊಡುತ್ತಾರೆ.  ಮುಂದೆ ಕಲಿಗಾಲದಲ್ಲಿ ತಾನು ನರಲೋಕದಲ್ಲಿರಬಾರದೆಂದು ಎಲ್ಲ ಶಿಷ್ಯಂದಿರಿಗೂ ಜವಾಬ್ದಾರಿಗಳನ್ನು ವಹಿಸಿ ಮಂಟೇಸ್ವಾಮಿ ಜೀವ ಸಮಾಧಿಯಾಗುತ್ತಾನೆ.  ತರುವಾಯ ಸಿದ್ದಪ್ಪಾಜಿ ಕೂಡ ಚಿಕ್ಕಲ್ಲೂರಿನಲ್ಲಿ ಗುರುವು ಹೇಳಿದ ಮಾತಿನಂತೆ ಜೀವಸಮಾಧಿಯಾಗುತ್ತಾನೆ. ಆ ಗದ್ದುಗೆಯಲ್ಲೇ ಈ ಪ್ರಖ್ಯಾತ ಜಾತ್ರೆ ನಡೆಯುವುದು. 

ಜಾತ್ರೆ ಅಂದ ಮೇಲೆ ಅಲ್ಲಿ ಅದಕೆ ತನ್ನದೇ ಆದ ರೀತಿನೀತಿಗಳಿವೆ. ಪರಂಪರೆಯ ಐತಿಹ್ಯವಿದೆ. ಮಂಟೇಸ್ವಾಮಿ ಪರಂಪರೆಯಲ್ಲಿ ಮೂರೂ ಪ್ರಸಿದ್ಧ ಜಾತ್ರೆಗಳಿವೆ. ಒಂದು ಬನದ ಹುಣ್ಣಿಮೆಯ ದಿನ ಚಿಕ್ಕಲ್ಲೂರಿನಲ್ಲಿ ನಡೆಯುವ ಸಿದ್ದಪ್ಪಾಜಿ ಜಾತ್ರೆ. ಇದು ಮೊದಲನೆಯ ಮುಖ್ಯ ಜಾತ್ರೆ. ಎರಡನೆಯದು ಶಿವರಾತ್ರಿ ಸಮಯದಲ್ಲಿ ಬೊಪ್ಪೇಗೌಡನ ಪುರದಲ್ಲಿ ನಡೆಯುವ ಮಂಟೇಸ್ವಾಮಿ ಸ್ವಾಮಿ ಜಾತ್ರೆ. ಮೂರನೆಯದು ಕಪ್ಪಡಿಯಲ್ಲಿ ನಡೆಯುವ ರಾಚಪ್ಪಾಜಿ ಜಾತ್ರೆ. 
ಐದು ದಿನ ನಡೆಯುವ ಚಿಕ್ಕಲ್ಲೂರಿನ  ಜಾತ್ರೆಯಲ್ಲಿ ಮೊದಲ ದಿನ ಚಂದ್ರಮಂಡಲ ಸೇವೆ  ( ಬಿದಿರಿನ ದೊಡ್ಡ ತಡಿಕೆಯಲ್ಲಿ ಧಾನ್ಯಗಳನ್ನು ಕಟ್ಟಿ ಬೆಂಕಿ ಇಡುತ್ತಾರೆ ಯಾವ ದಿಕ್ಕಿಗೆ ಯಾವ ಧಾನ್ಯ ಹೆಚ್ಚು ಉರಿಯುತ್ತದೋ ಆ ದಿಕ್ಕಿನಲ್ಲಿ ಮಳೆ -ಬೆಳೆ ಚೆನ್ನಾಗಿ ಆಗುತ್ತದೆ ಎಂಬುದು ಜನರ ನಂಬಿಕೆ ) 
ಮೊದಲ ದಿನ ಚಂದ್ರಮಂಡಲ ಸೇವೆ 
ಎರಡನೇ ದಿನ ದೊಡ್ಡವರ ಸೇವೆ 
ಮೂರನೇ ದಿನ ಮುಡಿ ಸೇವೆ 
ನಾಲ್ಕನೆಯ ದಿನ ಭಂಗಿ ಸೇವೆ (ನಿಷೇಧಿಸಲಾಗಿದೆ) / ಪಂಕ್ತಿಸೇವೆ 
ಐದನೆಯ ದಿನ ಮುತ್ತತ್ತರಾಯನ ಸೇವೆ 





ಮೊದಲಿನಿಂದಲೂ ಮಾಂಸ -ಮದ್ಯ - ಭಂಗಿ ಸೇವನೆ ಈ ಜಾತ್ರೆಯಲ್ಲಿ ಸಾಮಾನ್ಯವಾಗಿತ್ತು. ಪಂಕ್ತಿಸೇವೆಯ ದಿನ ಜಾತ್ರೆ ಬಂದಿರುವ ಜನ ತಮ್ಮ ತಮ್ಮ ಬಿಡಾರಗಳಲ್ಲಿ ಅವರಿಗಿಷ್ಟವಾದ ಮಾಂಸಾಹಾರ ಅಥವಾ ಸಸ್ಯಾಹಾರದ ಅಡುಗೆಯನ್ನು ಮಾಡಿ ಅದನ್ನು ದೇವರಿಗೆ ಎಡೆಯಿಕ್ಕಿ ನಂತರ ಜಾತ್ರೆಗೆ ಬಂದಿರುವ ಜನಕ್ಕೆ  ಜಾತಿ-ಕುಲದ ತಾರತಮ್ಯ ಮಾಡದೆ ಜೊತೆಯಲ್ಲಿಯೇ ಕೂರಿಸಿಕೊಂಡು ಊಟ ಮಾಡುತ್ತಾರೆ. ಸಸ್ಯಾಹಾರದ ಅಡುಗೆ ಮಾಡುವ ಜನ ಇದ್ದಾರಾದರೂ ಭಾಳ ಕಡಿಮೆ.  ಬಹುತೇಕ ಎಲ್ಲರೂ ಮಾಂಸಾಹಾರವನ್ನೇ ಮಾಡುತ್ತಾರೆ. ಆದರೆ ಎಲ್ಲಿಯೂ ತಾವು ತಂದ  ಕುರಿಕೋಳಿಗಳನ್ನು ಬಲಿ ಕೊಡುವುದಿಲ್ಲ. ತಮ್ಮ ತಮ್ಮ ಬಿಡಾರಗಳಲ್ಲಿ ಅವನ್ನು ಅಡುಗೆಗೆ ಬಳಸಿಕೊಳ್ಳುತ್ತಾರೆ. ನೂರಾರು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. ವೈದಿಕ ಮತ್ತು ಇತರೆ ಮೇಲ್ವರ್ಗದ ಧಾರ್ಮಿಕ ಆಚರಣೆಗಳು ಮಾಂಸಾಹಾರವನ್ನು ಕೀಳಾಗಿ ಮತ್ತು ಕೆಟ್ಟದಾಗಿ ಪರಿಗಣಿಸಿದರೆ ಅವೈದಿಕ ಪರಂಪರೆಯ ಮತಗಳು ಮಾಂಸಾಹಾರವನ್ನೇ ಅವರ ಧಾರ್ಮಿಕ ಆಚರಣೆಯ ಮುಖ್ಯಭಾಗವಾಗಿ ಪರಿಗಣಿಸುತ್ತಾರೆ. ಆದರೆ ಈಚೆಗೆ ಕೆಲವು ಸಿನಿಮೀಯ ಬೆಳವಣಿಗೆಗಳು ಕಂಡು ಬರುತ್ತಿವೆ. ಕೆಲವು ಮೇಲ್ವರ್ಗದ ಜನರು ಇದು ಪ್ರಾಣಿಬಲಿ ನಿಷೇಧ ಕಾಯ್ದೆಯ ಉಲ್ಲಂಘನೆಯೆಂದು ಕಳೆದ ವರ್ಷ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಜಾತ್ರೆಯಲ್ಲಿ ಬಾಡೂಟ ಮಾಡದಂತೆ ತಡೆ ಒಡ್ಡಲಾಯಿತು. ಇದಕ್ಕಾಗಿ ಚಿಕ್ಕಲ್ಲೂರು ಪ್ರವೇಶ ಮಾಡುವ ೧೦-೨೦ ಕಿಮಿ ದೂರದ ಎಲ್ಲ ಮಾರ್ಗಗಳಲ್ಲಿಯೂ ಚೆಕ್ ಪೋಸ್ಟ್ ಗಳನ್ನ ಇಟ್ಟು  ಕುರಿಕೋಳಿಗಳನ್ನು ಜಾತ್ರೆ ಕೊಂಡೊಯ್ಯದಂತೆ ವಶಪಡಿಸಿಕೊಳ್ಳಲಾಯ್ತು. 

* ಜನರ ಉಣ್ಣುವ ತಟ್ಟೆಯಲ್ಲಿ ಮಾತ್ರ ಇವರಿಗೆ ಹಿಂಸೆ ಎನ್ನುವುದು ಯಾಕೆ ಕಾಣುತ್ತಿದೆ? ಆಹಾರದಲ್ಲಿ ಮಾಂಸದ ಬಳಕೆ ಮಾನವ ವಿಕಾಸದ ಕಾಲದಿಂದಲೂ ಇದೆ. ಅಲ್ಲದೆ ಅದು ಪ್ರಾಕೃತಿಕ  ಸಮತೋಲನದ  ನಿಯಮ. 

* ನಾವು ತಿನ್ನುವ ಆಹಾರ ನಮ್ಮ ಹಕ್ಕು ಅದನ್ನು ನಿಷೇಧ ಮಾಡುವುದು, ಕಸಿಯುವುದು  ಎಂತಲೇ ಅರ್ಥ ಹಾಗಾದ್ರೆ ಇದು ಈ ದೇಶದ ನಾಗರೀಕನಿಗಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲವೇ?  ಬಲವಂತವಾಗಿ ನಮ್ಮ ಆಹಾರವನ್ನು ನಿಷೇಧಿಸಲು ಸಂವಿಧಾನ ನಿಮಗೆ ಹಕ್ಕು ನೀಡಿದೆಯೇ?  

* ಯಾಕೆ ಯಾವಾಗಲೂ ಅವೈದಿಕ ಮತಗಳ ಆಚರಣೆಗಳು ಮಾತ್ರ ಕಾನೂನಿನ ನಿಷೇಧಕ್ಕೆ ಒಳಪಡುತ್ತವೆ. ಅಥವಾ ಅನಾಗರೀಕ ಎಂದು ಪರಿಗಣಿಸಲ್ಪಡುತ್ತವೆ. ಹಾಗಿದ್ರೆ ಈ ಸಮಾಜ ಯಾರದ್ದು ? ಯಾರ ಸ್ವತ್ತು?    

* ಮಡೆಸ್ನಾನವನ್ನು ಎಡೆಸ್ನಾನ ಮಾಡಿಕೊಳ್ಳಿ ಎಂದು ಸಲಹೆ ನೀಡಲು ಶಕ್ಯವಿರುವ ಮುಖಂಡರು ''ಬಲಿ ಕೊಡಕೂಡದು. ಆದ್ರೆ ಮಾಂಸಾಹಾರ ಸೇವನೆಗೆ ಯಾವ ನಿಷೇಧವೂ ಇಲ್ಲ'' ಅಂತ ಹೇಳಲು ಯಾಕೆ ಯಾರೂ ಮುತುವರ್ಜಿ ವಹಿಸುವುದಿಲ್ಲ. 

*   ನಮ್ಮ ಜಾತ್ರೆಯಲ್ಲಿ ನಾವು ಊಟ ಮಾಡುವುದನ್ನು ಸರಕಾರ/ ನ್ಯಾಯಾಲಯಗಳು ನಿಷೇಧ ಮಾಡುವುದಾದರೆ ಉಡುಪಿ ಧರ್ಮಸ್ಥಳ ಸೇರಿದಂತೆ ವೈದಿಕ ಆಚರಣೆಯ ಕ್ಷೇತ್ರಗಳಲ್ಲಿ 'ಅನ್ನ ಸಂತರ್ಪಣೆ ಯಾಕೆ ನಡೆಯಬೇಕು' ಅದೂ ಪಂಕ್ತಿ ಬೇಧದಲ್ಲಿ .. ಜನರ ಜಾತಿ ತಾರತಮ್ಯದಲ್ಲಿ! ಹಾಗಿದ್ದರೆ ಸಸ್ಯಾಹಾರ ಮಾತ್ರ ಕಾನೂನು ಬದ್ಧವೇ? 

*  ಚಿಕ್ಕಲ್ಲೂರಿನ ಗದ್ದುಗೆಯಲ್ಲಿ ಬಳಿ ನೀಡುವ ಯಾವ ಬಲಿಪೀಠವೂ ಇಲ್ಲ. ಇದೆ ದಿನವೇ ನಡೆಯುತ್ತಿದ್ದ ಭಂಗಿ ಸೇವೆಯನ್ನು ಸರಕಾರ ಕಟ್ಟುನಿಟ್ಟಾಗಿ ನಿಷೇಧಿಸಿದ ಮೇಲೆ ಜನ ಆ ಸೇವೆಯನ್ನು ನಿಲ್ಲಿಸಿದರು. ಭಂಗಿ ಸೊಪ್ಪಿನ ಬಳಕೆ ದೇಶದಾದ್ಯಂತ ನಿಷೇಧವಾಗಿರುವಾಗ ಇಲ್ಲಿನ ಜನರೂ ಒಪ್ಪಿದರು. ಮತ್ತು ಭಂಗಿ ಸೇವನೆ ಜನರ ಆಹಾರ ಕ್ರಮವಾಗೇನೂ ಇಲ್ಲ. ಹಾಗಿರುವಾಗ  ಪಂಕ್ತಿಸೇವೆಯನ್ನು ನಿಷೇಧಿಸಲು ನಿಮಗೆ ಯಾವ ಹಕ್ಕು ಇದೆ. 


ಸರಕಾರ / ನ್ಯಾಯಾಲಯ ಇತರ ಸಂಸ್ಥೆಗಳು ಜನರ ಮಾತು, ಆಹಾರ, ಉಡುಗೆ ತೊಡುಗೆ, ಭಾಷೆಗಳ ಮೇಲೆ ಕಾನೂನಿನ ಹೇರಿಕೆ ಮಾಡುವ ಬದಲು ಎಲ್ಲರೂ ಸಮಾನವಾಗಿ ಬದುಕುವ ಸಾಮಾಜಿಕ ನ್ಯಾಯದ ಸಂಕೇತದಂತಿರುವ ಇಂತಹ ಸಾಂಸ್ಕೃತಿಕ ಆಚರಣೆಗಳನ್ನು ಬೆಂಬಲಿಸಬೇಕು. ಮತ್ತು  ಅಂತಹ ಊರುಗಳಿಗೆ ಒಳ್ಳೆಯ ರಸ್ತೆ, ಕುಡಿಯುವ ನೀರು, ಪ್ರಾಥಮಿಕ ಅರೋಗ್ಯ ಕೇಂದ್ರ , ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಲಕ್ಷಾಂತರ ಜನ ಸೇರುವ ಇಂತಹ ಜಾತ್ರೆಗಳಲ್ಲಿ ಅವಘಡಗಳು ಉಂಟಾಗದಂತೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು. ಜನರು ಎದುರು ನೋಡುವುದು ಇದನ್ನು. ಅದು ಬಿಟ್ಟು ಅವರ ಉಣ್ಣುವ ಆಹಾರ, ತೊಡುವ ಬಟ್ಟೆಯ ನಿಷೇಧಗಳನ್ನಲ್ಲ. ಅಂತಹ ಸ್ಥಿತಿಯು ಮತ್ತೆ ಮತ್ತೆ ಎದುರಾದರೆ ಖಂಡಿತ ಜನ ದಂಗೆ ಏಳುತ್ತಾರೆ.  ಸರಕಾರ ಇನ್ನಾದರೂ ಎಚ್ಛೆತ್ತುಕೊಂಡು ಇಂತಹ ಕ್ಷುಲ್ಲಕ ನಿಷೇಧಗಳು ಜಾರಿಯಾಗದಂತೆ ನಿಗಾ ವಹಿಸಬೇಕು.  
ಮತಧರ್ಮ ಜಾತಿಗಳ ತಾರತಮ್ಯವಿಲ್ಲದೆ ಒಟ್ಟಿಗೆ ಕುಳಿತು ಬಾಡೂಟ ಮಾಡುವ 'ಪಂಕ್ತಿಸೇವೆ' ನಮ್ಮ ಸಹಿಷ್ಣು ಸಮಾಜದ ಉತ್ತಮ ನಡವಳಿಕೆ. ಅದನ್ನು ನಿಷೇಧ ಮಾಡುವುದು ಅಕ್ರಮ ಮತ್ತು ಅನೀತಿ ಎಂದೇ ನಾನು ನಂಬುತ್ತೇನೆ. 

- ಆರ್. ಪಿ.  

ಬನದ ಹುಣ್ಣಿಮೆ 
ಜನವರಿ ೧೨ , ೨೦೧೭     

ಚಿತ್ರಗಳು : ಉಷಾ ಕಟ್ಟೆಮನೆ ಮತ್ತು ಕುಮಾರ ರೈತ 


          



Sunday, August 21, 2016

ಡಾನ್ ಬಾಸ್ಕೋ ಮ್ಯೂಸಿಯಂ, ಶಿಲ್ಲಾಂಗ್ | ಪ್ರವಾಸ ಕಥನ 2



ಹಂದಿಮಾಂಸವನ್ನ ಸಣ್ಣಗೆ ಉದ್ದಕೆ ಒಳ್ಳೆ ಈರುಳ್ಳಿ ಹಚ್ಚಿದಂತೆ ಹಚ್ಚಿ  ಹುರಿದಿದ್ದ ಫ್ರೈಡ್ ರೈಸ್ ತಿನ್ನೋವಾಗ ಇದೇನು ಹೊಸ ತರಹ  ಇದೆಯಲ್ಲ! ಇದು ತರಕಾರಿಯಾ? ಮಾಂಸವಾ? ಯಾವ ಮಾಂಸ?! ಇತ್ಯಾದಿ ಪ್ರಶ್ನೆ ಏಳ್ತಾ ಇದ್ರು ಹಸಿದ ಹೊಟ್ಟೆಗೆ ಉತ್ತರವಂತೂ ಸದ್ಯಕ್ಕೆ ಬೇಕಿರಲಿಲ್ಲ. ಅಷ್ಟರಲ್ಲೇ ಮಧ್ಯೆ ಬೆರಳು ಗಾತ್ರದ ಸುಂಡಕಾಯಿ ( ಒಳಮೈನ ಕೊಬ್ಬಿನ ಭಾಗ) ಸಿಕ್ಕಿತು. ಆಹಾ! ಇದು ಹಂದಿಮಾಂಸವೇ ಎಂದು ಒಳಗೇ ನಕ್ಕೊಂಡವನೇ ಅದನ್ನು ಮುಗಿಸಿದ ಮೇಲೆ ಇನ್ನೊಂದು ಸಣ್ಣ ಕವರ್ ತೆಗೆದರೆ ಅಯ್ಯೋ ಚಿಲ್ಲಿ ಸಾಸ್ ಇದ್ರಲ್ಲಿ ಇತ್ತು. ಅದೂ ಮೊದಲೇ ಸಿಕ್ಕಿದ್ರೆ ರುಚಿ ಸ್ವಲ್ಪನಾದ್ರೂ ಹಿಡಿಸುತ್ತಿತ್ತೋ ಏನೋ.  ಅಸಲಿಗೆ ನನಗೆ ಫ್ರೈಡ್ ರೈಸ್ ಅಷ್ಟೇನೂ ಇಷ್ಟವಾಗಲಿಲ್ಲ. ಅದಕ್ಕೆ ತಕ್ಕ ಉಪ್ಪು - ಖಾರ - ಮಸಾಲೆಯೇ ಇಲ್ಲ. ಈಶಾನ್ಯ ಭಾರತದ ಅಡುಗೆ ಮಸಾಲೆ ಖಂಡಿತ ನನಗೆ ಇಷ್ಟವಾಗಲಿಲ್ಲ. ಅದೊಂತರ ಒಗರು ಹುಳಿ. ದಕ್ಷಿಣದ ಘಂ ಎನ್ನುವ ಮಸಾಲೆಯೇ ನನಗೆ ಪ್ರಿಯ.       

ಈ ನಡುವೆ ಪ್ರಯಾಣ -ಪರಿಪಾಡಲು ಮಾತುಕತೆ ಸಾಗಿತ್ತು. ದೇವೇಂದ್ರರಿಗೆ ಆಫೀಸಿನ ಕೆಲಸವಿದ್ದುದರಿಂದ ಶಿಲ್ಲಾಂಗಿನ ಬಹುಮುಖ್ಯ ಆಕರ್ಷಣೆಗಳಲ್ಲಿ ಒಂದಾದ   '' ಡಾನ್ ಬಾಸ್ಕೋ ಮ್ಯೂಸಿಯಂ '' ನೋಡಿಬನ್ನಿ ಎಂದು ಕಳುಹಿಸಿಕೊಟ್ಟರು. ಅದಾಗಲೇ ನಾನು ಶಿಲ್ಲಾಂಗ್ ನಗರಕ್ಕೆ ಬರುತ್ತಿದ್ದಂತೆ ಯಾವ ರಸ್ತೆಯಲ್ಲಿ ನೋಡಿದರೂ ಈ ಮ್ಯೂಸಿಯಂ ಗೆ ಹೋಗುವ ದಾರಿ ತೋರುವ ಬೋರ್ಡ್ ಗಳನ್ನು ನೆಟ್ಟಿರುವುದನ್ನು ನೋಡಿದ್ದೆ.  
ಗಂಟೆ ಸಂಜೆ 4.00 ಆಗಿತ್ತು. ಮ್ಯೂಸಿಯಂ ನೋಡುವ ಸಮಯ  5.30 ಕ್ಕೆ ಕೊನೆ. ಮೇಘಾಲಯ ಹೈಕೋರ್ಟ್ ಎದುರಿನಿಂದ ಮಾವ್ಲೈನಲ್ಲಿರುವ ಮ್ಯೂಸಿಯಂಗೆ ಶಿಲ್ಲಾಂಗಿನ ಏರು-ಇಳಿಜಾರಿನ ಕಡಿದಾದ ರಸ್ತೆಗಳು ಮತ್ತು ಸೈಲೆಂಟ್ ಟ್ರಾಫಿಕ್ ನ ( ಇಲ್ಲಿ ವಿಪರೀತ ಟ್ರಾಫಿಕ್ ಆದರೆ ಜನ ಹೆಚ್ಚು ಸದ್ದು ಮಾಡುವುದಿಲ್ಲ, ತುಂಬಾ ಅಗತ್ಯ ಬಿದ್ದರೆ ಮಾತ್ರ ಒಂದು ಸಲ ಹಾರ್ನ್ ಹೊಡಿಯಬಹುದಷ್ಟೇ) ನಡುವೆ ಹೋಗಲು ಕನಿಷ್ಠವೆಂದರೂ 20-30 ನಿಮಿಷ ಬೇಕೇಬೇಕು. 



ಸಂಜೆ 4.40 ಕ್ಕೆ ಮ್ಯೂಸಿಯಂ ಮುಟ್ಟಿದೆ.  ಪ್ರವೇಶ ಕೌಂಟರ್ ನಲ್ಲಿ ಟಿಕೆಟ್ ಕೊಳ್ಳಲು ಹೋದಾಗ ಆತ ಯಾವ ರಾಜ್ಯ ಸಾರ್ ಅಸ್ಸಾಮ್ ಅಥವಾ ಬಂಗಾಳ ಅಂದ. ನಾನು ' ಇಲ್ಲಪ್ಪಾ ಕರ್ನಾಟಕ' ಎಂದೆ. ಆತ ನಗುತ್ತಾ ಟಿಕೆಟ್ ಕೊಟ್ಟು ' ಏಳು ಅಂತಸ್ತಿನ ಮ್ಯೂಸಿಯಂ ನೋಡಲು ಕನಿಷ್ಟವೆಂದರೂ ಮೂರು ಗಂಟೆಕಾಲ ಬೇಕು,  ನಿಮಗೆ ಇರುವುದು 40 ನಿಮಿಷಗಳು ಮಾತ್ರ. ಬೇಗನೆ ನೋಡಿ ಬನ್ನಿ. ಕಡೆಗೆ ಎಲ್ಲೆ ಇದ್ದರೂ 5.30ಕ್ಕೆ ಹೊರ ಬಂದುಬಿಡಿ ದಯವಿಟ್ಟು' ಎಂದು ವಿನಂತಿಸಿದ. ಒಳಗೆ ದಾರಿ ತೋರಲು ಮತ್ತೊಬ್ಬ ಮೇಲ್ವಿಚಾರಕ ನನ್ನೊಂದಿಗೆ ಬಂದ. 

ಹೊರಗಿನಿಂದ ನೋಡಿದರೆ ಚೂಪು ಮೊನೆಯ ಎಲೆಯಾಕಾರದ ಪುಟ್ಟದೊಂದು ಕಟ್ಟಡದಂತೆ ಕಾಣುವ ಈ ಮ್ಯೂಸಿಯಂ ಏಳು ಅಂತಸ್ತುಗಳನ್ನು ಹೊಂದಿದೆ ಎಂದು ನಂಬುವುದು ಭಾಳ ಕಷ್ಟ! ಒಳಾಂಗಣ ಪ್ರವೇಶ ಮಾಡುವವರೆಗೂ ಈಶಾನ್ಯ ಭಾರತದ ವಿವಿಧ ಬುಡಕಟ್ಟಿನ ಜನ ಪ್ರತಿಮೆಗಳನ್ನು ಎರಡೂ ಬದಿಗೂ ನಿಲ್ಲಿಸಿದ್ದರು ಅದೇನು ಅಷ್ಟು ಆಕರ್ಷಕ ಎನಿಸಲಿಲ್ಲ ಮೊದಲಿಗೆ ಆದರೆ ಹೊರಗೆ ಬರುವಾಗ ಅದರ ಮಹತ್ವ ತಿಳಿಯಿತು. 
ಒಳಾಂಗಣ ಮೊದಲಲ್ಲಿ ಮ್ಯೂಸಿಯಂನ ಆಡಳಿತ ಮತ್ತು ಕೆಲವು ಕರಕುಶಲ ವಸ್ತುಗಳ, ಪೋಟೋಗಳ ಮಾರಾಟ ಕೇಂದ್ರವಿದೆ. ಇಲ್ಲಿಯವರೆಗೂ ಜೊತೆಗೆ ಬಂದ ಮೇಲ್ವಿಚಾರಕ '' ನಿಮಗೆ ಸಮಯ ಕಡಿಮೆ ಇರುವುದರಿಂದ ಮೊದಲು ನೆಲಮಹಡಿಯಿಂದ ಮೊದಲು ಶುರು ಮಾಡಿ, ಫೋಟೋ ತೆಗೆದುಕೊಳ್ಳಲು ಇಲ್ಲಿ ಅವಕಾಶವಿದೆ. ಅದಕ್ಕೆಂದು ನೂರು ರೂಪಾಯಿಗಳ ಶುಲ್ಕಭರಿಸಬೇಕು,   ಆದರೆ ನಿಮಗೆ ಸಮಯದ ಅವಕಾಶವೇ ಇಲ್ಲದಿರುವುದರಿಂದ ಅದನ್ನು ತೆಗೆದುಕೊಳ್ಳಲ್ಲು ಹೋಗಬೇಡಿ. ನೋಡಿ ಬನ್ನಿ '' ಎಂದು ಹೇಳಿ ನಕ್ಕು ಹೊರಟೇ ಬಿಟ್ಟ. 
ನಾನು ಕೂಡ ಮ್ಯೂಸಿಯಂನಲ್ಲಿ ಎಂಥ ಪೋಟ ತೆಗೆಯೋದು ಎಂದು ನಿರ್ಲಕ್ಷ್ಯ ಮಾಡಿದೆ. ಅದೇ ನಾನು ಮಾಡಿದ ದೊಡ್ಡ ತಪ್ಪು. ಇದು ಎಷ್ಟು ಅಪರೂಪದ ಮ್ಯೂಸಿಯಂ ಎಂದು ನನಗರಿವಿರಲಿಲ್ಲ. ಏಳು ಅಂತಸ್ತಿನ ಕಟ್ಟಡದ ಮಧ್ಯ ಭಾಗದಲ್ಲಿ ನಾನಿದ್ದೆ. ಇಲ್ಲಿಯ ಭೂಪ್ರದೇಶ ಸಂಪೂರ್ಣ ಬೆಟ್ಟಗಳಿಂದ ಕೂಡಿರುವುದರಿಂದ ಪ್ರವೇಶದ್ವಾರ ರಸ್ತೆ ಮಟ್ಟದಲ್ಲಿದ್ದರೆ, ಕಟ್ಟಡ ಮಾತ್ರ ಅರ್ಧ ಕೆಳಕ್ಕೆ ಇನ್ನರ್ಧ ಮೇಲುಭಾಗಕ್ಕೆಕ್ಕೆ ಇದೆ. ದಡದಡನೆ ಕೆಳಕ್ಕೆ ಇಳಿಯ ತೊಡಗಿದೆ. ಮನಸ್ಸಿನಲ್ಲಿ ''ಬೇಗ ಬೇಗ'' ಎನ್ನುವ ಆಶರೀರವಾಣಿ ಸದ್ದು. ನಾನು ಭೇಟಿಯಿತ್ತ ಸಮಯ ವಾರದ ಮಧ್ಯದಿನದ ಸಂಜೆಯಾಗಿದ್ದರಿಂದಲೋ ಏನೋ ಜನವೇ ಇರಲಿಲ್ಲ ಇದ್ದ ಮೂರು ನಾಲ್ಕು ಮಂದಿ ಆಗಲೇ ನೋಡಿ ಮುಗಿಸಿ ವಾಪಸು ಬರ್ತಾ ಇದ್ದರು. ಮೆಟ್ಟಿಲುಗಳನ್ನು ಇಳಿದರೆ ಎಲ್ಲ ಕೋಣೆಗಳು ಕತ್ತಲಿನಿಂದ ಕೂಡಿದ್ದವು. ಇದೇನಪ್ಪ ಇಲ್ಲಿ ಲೈಟೇ ಇಲ್ಲವಲ್ಲ ಎಂದು ಕೊಂಡೆ ಒಳಗೆ ಒಂದು ಹೆಜ್ಜೆ ಇಟ್ಟೆ . ಥಟ್ಟನೆ ಲೈಟುಗಳು ಹೊತ್ತಿಕೊಂಡವು. ಎಲ್ಲ ಕೋಣೆಗಳಲ್ಲೂ ಇದೇ ತರಹದ ವ್ಯವಸ್ಥೆ ಮಾಡಲಾಗಿತ್ತು. ವೀಕ್ಷಕರು ಒಳಗೆ ಬಂದಾಗ ಮಾತ್ರ ಹೊತ್ತಿಕೊಳ್ಳುವ ಲೈಟುಗಳು ಹೊರಗೆ ಹೋದ ಕೆಲವೇ ಕ್ಷಣಗಳಲ್ಲಿ ಆರಿಹೋಗುತ್ತಾ ಇದ್ದುವು. 


ಸ್ವಲ್ಪವೇ ಸಮಯವಿದ್ದುದರಿಂದ ನಾನು ಬೇಗ ಬೇಗ ಮುಂದೆ ಹೋಗತೊಡಗಿದೆ. ಆದರೆ ಮ್ಯೂಸಿಯಂನ ಸಂಗ್ರಹ ಹಾಗೆ ಹೋಗಲು ಬಿಡುತ್ತಲೇ ಇರಲಿಲ್ಲ. ಮೊದಲಿಗೆ ಏನೋ ಒಣ ಭಣಭಣ ಎನ್ನುತ್ತಿದ ಮ್ಯೂಸಿಯಂಗೆ ಜೀವ ಬಂದಂತೆ ಭಾಸವಾಗ ತೊಡಗಿತು. ಈಶಾನ್ಯ ಭಾರತದ ದಿಕ್ಕು ದಿಕ್ಕುಗಳಲ್ಲಿರುವ ಬೇರೆ ಬೇರೆ ಬುಡಕಟ್ಟುಜನರು ಅವರ ಉಡುಪು - ಬೇಟೆ - ಮನೆ - ಆಯುಧ , ಬದುಕು ಎಲ್ಲವನ್ನೂ ಪ್ರತಿನಿಧಿಸುವ ವಸ್ತುಗಳ ಅಗಾಧ ಸಂಗ್ರಹ, ಅವುಗಳ ವಿವರಣೆ. ಕಾಲಾನುಕ್ರಮದಲ್ಲಿ ಸರಿಯಾದ ಜೋಡಣೆ. ಬೇರೆ ಬೇರೆ ಬುಡಕಟ್ಟು ಜನರ ಜೀವವೈವಿಧ್ಯತೆಯ ಲಕ್ಷಣಗಳು, ಮುಖಚರ್ಯೆಗಳು, ಅವರ ಧಾರ್ಮಿಕ ನಂಬಿಕೆಗಳು, ಅವನ್ನು ಸೂಚಿಸುವ, ಬೇರೆ ಬೇರೆ ಆಚರಣೆಗಳ ಸಾಮಗ್ರಿಗಳು - ವಿಧಿವಿಧಾನಗಳ ಪ್ರತಿರೂಪಗಳು.  ಬೇರೆ ಬೇರೆ ಲೋಹದ ಸಾಮಗ್ರಿಗಳು ಮತ್ತು ಮಣ್ಣಿನ ಮಡಕೆಗಳು ಅವುಗಳ ಮೇಲಿನ ಚಿತ್ತಾರ, ನೇಯ್ಗೆ ಅದಕ್ಕೆ ಬಳಸುವ ಹತ್ತಿ, ಉಣ್ಣೆ ಇತ್ಯಾದಿ, ಪ್ರತಿ ಬುಡಕಟ್ಟು ಕೂಡ ಈ ನೇಯ್ಗೆ ಬಟ್ಟೆಯಲ್ಲಿ ಹೆಣೆಯುವ ಅವರದೇ ಆದ ಕಲೆ. ಬಣ್ಣದ ಚಿತ್ತಾರಗಳನ್ನ ಹೊಂದಿವೆ. ಈ ಭಾಗದ ಜನರು ಹೆಚ್ಚು ಆಧರಿಸಿದ್ದು ಬಿದಿರನ್ನು. ಬಿದಿರಿನಿಂದ ಇಲ್ಲಿನ ಬುಡಕಟ್ಟು ಮಾಡುತ್ತಿದ್ದ ನೂರಾರು ಸಾಧನಗಳು ಇಲ್ಲಿ ನೋಡಲು ಲಭ್ಯ. ಮೀನು ಹಿಡಿಯುವ ಕುಣಿಕೆಗಳೇ ಅದೆಷ್ಟೋ ಹತ್ತಾರು ವಿನ್ಯಾಸದಲ್ಲಿ, ಗಾತ್ರದಲ್ಲಿ ಇವೆ. 
ನನ್ನನ್ನು ಬೆರಗಾಗಿಸಿದ್ದು ಎಂದರೆ ಬಿದಿರಿನ ಸಂಗೀತ ಸಾಧನಗಳು ಏಕತಾರಿಯನ್ನು , ವೀಣೆಯನ್ನು ಹೋಲುವ ಮಧ್ಯಮಗಾತ್ರದ ಈ ಸಾಧನಗಳನ್ನು ನೋಡಿದರೆ ಇಲ್ಲಿನ ಪೂರ್ವಿಕರಿಗೆ ಸಂಗೀತದ ಮೇಲೆ ಅದೆಷ್ಟು ಪ್ರೀತಿ ಇತ್ತು ಎಂದು ತಿಳಿಯುತ್ತದೆ. 




19 ನೇ ಶತಮಾನದ ಕೊನೆಯ ಭಾಗದವರೆಗೂ ಈಶಾನ್ಯ ಭಾರತದ ಜನ ಹೇಗೆ ಬದುಕಿರಬಹುದು ಎನ್ನುವ ಸಂಕ್ಷಿಪ್ತ ನೋಟ ಈ ಇಡೀ ಮ್ಯೂಸಿಯಂ ನೋಡುವುದರಿಂದ ನಮಗೆ ಸಿಗುವುದಂತೂ ಖಂಡಿತ. ಇದಿಷ್ಟೂ 5 ಅಂತಸ್ತುಗಳಲ್ಲಿ ಹರಡಿಕೊಂಡಿದ್ದರೆ, ಮೇಲಿನ ಎರಡು ಅಂತಸ್ತುಗಳಲ್ಲಿ ಈ ಭಾಗಕ್ಕೆ ಕ್ರೈಸ್ತ ಧರ್ಮದ ಆಗಮನ,  ಬುಡಕಟ್ಟು ಜನರ ಮತಾಂತರ, ಅವರಿಗೆ ಶಿಕ್ಷಣ, ನಾಗರೀಕ ಜೀವನದ ಪರಿಚಯ ಇತ್ಯಾದಿಗಳ ಜೊತೆಗೆ ಸ್ವಲ್ಪ ಅತಿರೇಕವೆನಿಸುವ ಕ್ರೈಸ್ತ ಧರ್ಮ ಕುರಿತ ವಿವರಣೆಗಳ ಭಿತ್ತಿಪತ್ರಗಳೂ, ಪ್ರತಿರೂಪಗಳೂ ಇವೆ. ಈ ಬಗ್ಗೆ ನಿರ್ಲಕ್ಷ್ಯವಹಿಸುವುದು ಉತ್ತಮ. ಉಳಿದಂತೆ ಈಶಾನ್ಯ ಭಾರತದ ಪೂರ್ವದ ಇತಿಹಾಸ, ಪರಿಸರ, ಸಾಮಾಜಿಕ ಜೀವನ ಕುರಿತಂತೆ ಈ ಮ್ಯೂಸಿಯಂನಲ್ಲಿರುವ ಅಮೋಘ ಸಂಗ್ರಹ, ಅವುಗಳ ನಿರ್ವಹಣೆ ಅನುಕರಣೀಯ. 
ಅಂತೂ ಇಂತೂ ಏಳನೆಯ ಅಂತಸ್ತಿನ ಮಧ್ಯಭಾಗಕ್ಕೆ ಹೋಗುವುದರೊಳಗೆ ಸಮಯ ಮುಗಿದಿತ್ತು. ಕಡೆಯದಾಗಿ ಟೆರೇಸಿನಲ್ಲಿ ನಿಂತು ಇಡೀ ಶಿಲ್ಲಾಂಗ್ ಅನ್ನು ನೋಡುವ ಆಕಾಶನಡಿಗೆ (Skywalk) ಭಾಗ್ಯ ಮಾತ್ರ ತಪ್ಪಿಹೋಯಿತು. 
ವಾಪಸು ಹೊರಗೆ ಬಂದಾಗ ಇಡೀ ಮ್ಯೂಸಿಯಂ ''ಈಶಾನ್ಯ ಭಾರತ'' ಕುರಿತ  ಒಂದು ಸ್ಪಷ್ಟವಾದ ತಾತ್ವಿಕ ಪರಿಕಲ್ಪನೆಯನ್ನು ನನಗೆ ಒದಗಿಸಿತ್ತು. ಅಲ್ಲಿಗೆ ಹೋದವರು ಖಂಡಿತ 'ಡಾನ್  ಬಾಸ್ಕೋ ಮ್ಯೂಸಿಯಂ' ನೋಡಲೇ ಬೇಕೆಂದು ನನ್ನ ಆಗ್ರಹವು. 


ವಾಪಸು  ಲಾಯಿಮುಕ್ರದಲ್ಲಿರುವ  ಲಿಂಡ್ ಹರ್ಸ್ಟ್ ಎಸ್ಟೇಟಿನ ಬ್ರಿಟೀಷರ ಕಾಲದ ಬಂಗಲೆಗೆ ಬಂದು ವಿರಮಿಸಿದೆ. ಬೆಂಗಳೂರಿನಿಂದ ಶಿಲ್ಲಾಂಗ್ ಪ್ರಯಾಣ, ಮ್ಯೂಸಿಯಂ ಸುತ್ತಿದ ಚೂರು ಸುಸ್ತಿಗೆ ಒಳ್ಳೆಯ ಬಿಸಿನೀರ ಸ್ನಾನ ಮುಗಿಸಿ ಗೆಳೆಯನೊಂದಿಗೆ ಊಟಕ್ಕೆ ಹೊರಗೆ ಹೊರಟೆ. 'ಕೆಫೆ ಶಿಲ್ಲಾಂಗ್' ನಲ್ಲಿ ಸದಾ ಸಂಗೀತದ ಗುಂಗು ಇರುತ್ತದಯೆಂತೆ. ನಾವು ಹೋದಾಗ ಯಾಕೋ ಪ್ರಶಾಂತವಾಗಿತ್ತು. ಒಂದು ಬಟ್ಟಲು ಅನ್ನ, ಒಂದು  ಹಿಡಿಯಷ್ಟು  ಹಸಿ ತರಕಾರಿ, ಸುಟ್ಟ ಪಂದಿಗೊಜ್ಜು ತಿಂದು ಶಿಲ್ಲಾಂಗ್ ಬೀದಿಗಳಲ್ಲಿ ಅಡ್ಡಾಡುತ್ತಾ ಮೇಘಾಲಯದ ಜನ, ಭಾಷೆ, ಸರ್ಕಾರ ಇತ್ಯಾದಿ ಮಾತನಾಡುತ್ತಾ ಮನೆ ಸೇರಿದೋ. 

********** 

ಮುಂದೆ ಜಲಪಾತಗಳ ಊರುಗಳ ತೀರ್ಥಯಾತ್ರೆ ..  - 3 

ಚಿತ್ರಗಳು : Internet         
   
                                
             

Wednesday, August 17, 2016

ಕೊಡೆಸಂತರ ಮಳೆಬೀಡು | ಶಿಲ್ಲಾಂಗ್ ಪ್ರವಾಸ - 1

ಓದುವುದು ಬೋರಿಂಗ್ ಎನ್ನ ಬಹುದು ಆದರೆ ಊರುಸುತ್ತುವುದು, ವಿವಿಧ ಊಟಗಳನ್ನು ಹುಡುಕುವುದನ್ನ ಬಹುಶಃ ಯಾರೂ ಬೋರಿಂಗ್ ಎನ್ನಲಾಗದು. ಯಾಕಂದರೆ ಮನುಷ್ಯನಿಗೆ ಇವೆರಡೂ ಸದಾ ರುಚಿಯ ವಿಷಯಗಳು. ಒಂದು ಕಣ್ಣಿಗೆ ಮತ್ತೊಂದು ನಾಲಗೆಗೆ! 

ನಾನು ಕಾಲೇಜಿನಲ್ಲಿ ಓದುವಾಗ ಕ್ಲಾಸ್ ಗೆ ಹಾಜರಾಗುವುದಕ್ಕಿಂತ ಹೆಚ್ಚು ಹೊರಗೆ ವಿಚಾರ ಸಂಕಿರಣ, ಕಾರ್ಯಾಗಾರಗಳು ಕಮ್ಮಟಗಳು ಅಂತ ತಿರುಗಿದ್ದೇ ಹೆಚ್ಚು. ಓದಿದ್ದು ಕಾಮರ್ಸ್ ಆದರೂ ಒಲವೆಲ್ಲಾ ಸಾಹಿತ್ಯದಲ್ಲೇ ಇತ್ತು. ಇದು ಹೀಗೆಯೇ ಅನಿಸತ್ತೆ. ಯಾವುದನ್ನ ನಾವು ಔಪಚಾರಿಕವಾಗಿ ಓದುತ್ತೇವೋ ಅದರಲ್ಲಿ ನಮ್ಮ ಆಸಕ್ತಿ ಕುಗ್ಗಿ ಮತ್ತೊಂದರಲ್ಲಿ ಬೆಳೆದುಕೊಳ್ಳುತ್ತದೆ.  ಯಾವಾಗ ಎಂ ಕಾಂ ಮುಗಿಸಿ, ವ್ಯವಹಾರದಲ್ಲಿ ಮಗ್ನನಾದೇನೋ ಇದಕ್ಕೆಲ್ಲಾ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗತೊಡಗಿತು. ಜೊತೆಗೆ ಗೆಳೆಯರು ಕೂಡ ಅವರವರ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು.. ಸುತ್ತೋಕೆ ಜೊತೆ ಕೂಡ ಇಲ್ಲ. ಹೀಗೆಯೇ ಮುಂದುವರಿದು ಆರು ವರ್ಷಗಳ ಕಾಲ ನಾನು ಹೊರಗೆ ಓಡಾಡುವುದು ಅಸಾಧ್ಯವಾಯಿತು. ಊರು ಸುತ್ತುವ ಆಸೆ ಹಾಗೆ ಉಳಿಯಿತು, ಕೋಶ ಓದುವ ಕಾಯಕ ಮಾತ್ರ ಮುಂದುವರಿದಿತ್ತು. 

ಕಳೆದ ಮೂರು ವರ್ಷಗಳಿಂದ ಈಶಾನ್ಯ ಭಾರತದತ್ತ ಹೋಗುವ ಆಸೆಯಿತ್ತು. ಆದರೆ ಪ್ರತಿ ಪ್ಲಾನ್ ಸಿದ್ದವಾದಾಗಲೂ ಗೆಳೆಯರು ಕೈಕೊಡುತ್ತಲೇ ಇದ್ರು. ಆಮೇಲೆ ಶಿಲ್ಲಾಂಗ್ ನಲ್ಲಿದ್ದ ಗೆಳೆಯ ದೇವೇಂದ್ರ ಅಬ್ಬಿಗೇರಿಯವರು ಕೂಡ  ಬಹಳ ಸರ್ತಿ ಕರೆದು ಸುಸ್ತಾಗಿ ಬಂದ್ರೆ ಬನ್ನಿ ಇಲ್ಲಾಂದ್ರೆ ಈ ಸಾರ್ತಿ ನಂಗೆ ಇಲ್ಲಿಂದ ಬೇರೆ ಕಡೆಗೆ ವರ್ಗ ಆಗಬಹುದು ಅಂತ ಒಂದು ಬಾಂಬ್ ಬೇರೆ ಹಾಕಿದ್ರು. ಮತ್ತೆ ಗೆಳೆಯರೊಂದಿಗೆ ಸಾಲು ಚರ್ಚೆ. ಆದರೆ ಪ್ರಯೋಜನವಿಲ್ಲ. ಯಾರು ಸಧ್ಯಕ್ಕೆ ಬರಲು ತಯಾರು ಇಲ್ಲ. ಒಬ್ಬನೇ ಬರೋಬ್ಬರಿ ಮೂರು ಸಾವಿರ ಕಿಮಿ ಪ್ರಯಾಣ ಮಾಡುವುದು. ಅದೂ ಕನ್ನಡವಲ್ಲದೇ ಬೇರೆ ಭಾಷೆಯನ್ನು ತಿಳಿಯದ, ಜೀವನದಲ್ಲಿ ಒಂದೆರಡು ಸಲ ಮಾತ್ರ ಕರ್ನಾಟಕದ ಆಚೆಗೆ ಹೋಗಿದ್ದ ನಾನು ಈಶಾನ್ಯ ಭಾರತಕ್ಕೆ ಪ್ರಯಾಣ ಮಾಡುವುದು ಸೋಜಿಗದ ವಿಚಾರವೇ ಆಗಿತ್ತು. ಬಾರದೇ ಕೈ ಕೊಟ್ಟ ಗೆಳೆಯರು ಅಣಕಿಸುವುದನ್ನು ಏನು ಬಿಟ್ಟಿರಲಿಲ್ಲ. ಈ ನಡುವೆ ಅವರು ನನ್ನನ್ನು ಬಿಟ್ಟು ಬಹಳಷ್ಟು ಪ್ರವಾಸ ಮಾಡಿದ್ದರು! 'ನೀನು ಶಿಲ್ಲಾಂಗ್ ಗೆ ಹೋದ ಹಾಗೆ' ಎನ್ನುವ ಕುಹಕವೂ ಬಂತು ಬಿಡಿ. ಇದು ಬೇಸರವನ್ನು ಉಂಟುಮಾಡಿದರೂ ಕೆಟ್ಟದೊಂದು ಹಟವನ್ನು ಹುಟ್ಟುಹಾಕಿತು. ಇವರನ್ನೆ ಯಾಕೆ ನೆಚ್ಚಿಕೊಂಡು ಕೂರಬೇಕು ಎಂದುಕೊಂಡವನೇ ಯಾರಿಗೂ ಹೇಳದೇ ಕೇಳದೆ ಆನ್ಲೈನ್ ನಲ್ಲಿ ಹೋಗುವುದಕ್ಕೆ ಬರುವುದಕ್ಕೆ ವಿಮಾನದ ಸೀಟನ್ನು ಬುಕ್ ಮಾಡಿಯೇ ಬಿಟ್ಟೆ!
ಸೀಟು ಬುಕ್ಕೇನೋ ಆಯಿತು ಆದರೆ ನಾನು ಫಜೀತಿಗೆ ಸಿಲುಕಿಕೊಂಡೆ. ಇದುವರೆವಿಗೂ ನಾನು ರೈಲು -ಬಸ್ಸುಗಳ ನೆಲಮಾರ್ಗ ಬಿಟ್ಟು ಜಲಮಾರ್ಗ -ವಾಯುಮಾರ್ಗಗಳಲ್ಲಿ ಓಡಾಡಿದವನಲ್ಲ. ಶಿಲ್ಲಾಂಗ್ ಮುಟ್ಟಲು ರೈಲು- ಬಸ್ ಪ್ರಯಾಸ ಸೇರಿಸಿ  ಎರಡು ಮೂರು ದಿನ ಬೇಕು. ಮತ್ತೆ ವಾಪಸು ಆಗಲು ಕೂಡ ಅಷ್ಟೇ ದಿನ ಬೇಕು. ಹತ್ತತ್ತಿರ ಹೋಗಿ ಬರೋದಿಕ್ಕೇ ಒಂದು ವಾರ ಬೇಕು. ಆಮೇಲೆ ಅಲ್ಲಿ ಕನಿಷ್ಠ ಮೂರು ದಿನವಾದರೂ ಇರಬೇಕು. ಅಷ್ಟು ಸಮಯ ಖಂಡಿತ ನನ್ನ ಬಳಿ ಇರಲಿಲ್ಲ. ಹೇಗೋ ಐದು ದಿನಗಳನ್ನು ಹೊಂದಿಸಿಕೊಂಡಿದ್ದೆ. ವಿಮಾನದಲ್ಲಿ ಹೋದರೆ ಒಂದು ಮಧ್ಯಾಹ್ನದಲ್ಲಿ ನಾನು  ಶಿಲ್ಲಾಂಗ್ ತಲುಪಿಕೊಳ್ಳಬಹುದಿತ್ತು. ಆದರೆ ಹೇಗೆ ಹೋಗುವುದು. ಹಳ್ಳಿಗಾಡಿನ ಹುಡುಗನೊಬ್ಬ ಮೊದಲ ಬಾರಿ ವಿಮಾನಪ್ರಯಾಣ ಮಾಡುವುದು ಭಾಳ ಇರುಸುಮುರಿಸಿನ ವಿಚಾರ. ಯಾಕಂದರೆ ವಿಮಾನಯಾನದ ನಮಗೆ ಸದಾ ಕನಸಿನ ವಿಚಾರವಾಗಿತ್ತು. ಅದೀಗ ಕೈಗೆ ಎಟುಕಿತ್ತು. ಆದರೆ ಮುಟ್ಟಲು ಏನೋ ಅಂಜಿಕೆ ಅಷ್ಟೇ! 

ಸರಿ. ವಿಮಾನದ ಸೀಟನ್ನು ಬುಕ್ ಮಾಡಿ ಒಂದು ವಾರ ಕಳೆದಿತ್ತು. ಮಂಡ್ಯದಿಂದ ಏರ್ ಪೋರ್ಟ್ ಗೆ ಹೋಗುವುದು ಹೇಗೆ? ರೈಲು, ಬಸ್ ನಿಲ್ದಾಣಗಳು ಊರಿನಲ್ಲಿಯೇ ಇರ್ತಾವೆ. ಆದರೆ ಈ ವಿಮಾನ ನಿಲ್ದಾಣಗಳು ಊರಾಚೆಗೆ ಮತ್ತೊಂದು ಊರಿನಲ್ಲಿ ಇರ್ತಾವೆ! ಬೆಂಗಳೂರಿನ ನನ್ನ ಮನೆಯಿಂದ ಎಷ್ಟು ದೂರ ಎಂದು ಗೂಗಲ್ ಮಾಡಿದೆ. ಬರೋಬ್ಬರಿ 40 ಕಿಮಿ! ಮಂಡ್ಯದಿಂದ ಮೈಸೂರಿಗೆ ಇರುವ ಅಂತರ ಇದು!  ನನಗಿರುವುದು ಬೆಳಿಗ್ಗೆ 7.45 ರ ವಿಮಾನ ಅದು ಅಸ್ಸಾಮಿನ ಗುವಾಹತಿಯನ್ನು ಮುಟ್ಟುವುದು 10.30 ಕ್ಕೆ ಅಂದರೆ ಸುಮಾರು ಮೂರು ಸಾವಿರ ಕಿಮಿ ದೂರಕ್ಕೆ ಬರೀ ಮೂರು ಗಂಟೆ ಪ್ರಯಾಣ! ಅಲ್ಲಿಂದ 100 ಕಿಮಿ ದೂರದ ಶಿಲ್ಲಾಂಗ್ ಗೆ ಟ್ಯಾಕ್ಸಿಯಲ್ಲಿ ಪಯಣಿಸಬೇಕು. ಈಶಾನ್ಯ ಭಾರತದಲ್ಲಿ ಬಸ್ ಗಳನ್ನು ಹೆಚ್ಚು ನಂಬಿಕೊಳುವಂತಿಲ್ಲ. ಒಬ್ಬನೇ ಬೇರೆ ಹೋಗಬೇಕು. ಕಡೆಗಳಿಗೆಯಲ್ಲಿ ಕೂಡ ಯಾರಾದರೂ ಗೆಳೆಯರು ಸೇರಿಕೊಂಡರೆ ಸಾಕು ಎಂದು ಪ್ರಯತ್ನಿಸಿದೆ. ಎಲ್ಲರೂ ನನ್ನ ಪ್ರವಾಸವನ್ನು ತಡೆಯುವುದಕ್ಕೇ ನೋಡ್ತಾ ಇರುವಂತೆ ಭಾಸವಾಗುತ್ತಿತ್ತು. ಕಡೆಗೆ ನಿರ್ಧಾರ ಮಾಡಿಬಿಟ್ಟೆ ಏನೇ ಆಗಲಿ ಒಬ್ಬನೇ ಹೋಗುವುದು ಎಂದು. ಕಡೆಗೆ ಮೈಸೂರಿನಿಂದ ಮಧ್ಯರಾತ್ರಿ ಬೆಂಗಳೂರಿನ ಎರ್ಪೋರ್ಟ್ಗೆ ಹೋಗುವ ಫ್ಲೈ ಬಸ್ ಗೆ ಹತ್ತಿದ್ರೆ ಸಾಕು ಎಂದು ಯೋಚಿಸಿ ನಿಶ್ಚಿಂತನಾದೆ. 


ನಾನು ಹೋಗಬೇಕಾಗಿದ್ದು ಮಂಗಳವಾರ ಬೆಳಿಗ್ಗೆ. ಅದಕ್ಕೆ ಸೋಮವಾರ ಮಧ್ಯರಾತ್ರಿ ಮೈಸೂರಿನಿಂದ ಬೆಂಗಳೂರು ಏರ್ಪೋರ್ಟ್ ಗೆ ಹೊರಡುವ ಫ್ಲೈ ಬಸ್ ನಲ್ಲಿ ಹೋಗಣ ಅಂತ ಪ್ಲಾನ್ ಮಾಡಿದ್ದೇನಲ್ಲ,  ಆ ಪ್ಲಾನ್ ನೆಗೆದುಬಿತ್ತು. KSRTC ನೌಕರರು ಸೋಮವಾರದಿಂದಲೇ ಮುಷ್ಕರ ಶುರು ಮಾಡಿದ್ರು. ಏರ್ಪೋರ್ಟ್ ಇರಲಿ, ಬೆಂಗಳೂರಿಗೆ ತಲುಪಲು ಕೂಡ ಬಸ್ ಇರಲಿಲ್ಲ. ಅಂದ ಮೇಲೆ ಎಲ್ಲಿಯ ಫ್ಲೈ ಬಸ್?! ರೈಲಿನಲ್ಲಿ ಹೋಗುವುದು ಈ ಸಮಯದಲ್ಲಿ ಇನ್ನೂ ಪ್ರಯಾಸಕರ. ತಡ ಮಾಡದೇ ಗೆಳೆಯ ವಿಜೇತನನ್ನು ನನ್ನ ಜೊತೆಗೆ ಬಂದು ಬೆಂಗಳೂರಿನ ಮನೆಯಲ್ಲಿ  ಇದ್ದು ಬೆಂಗಳೂರಿನ ಎರ್ಪೋರ್ಟ್ ಗೆ ನನ್ನ ಬಿಟ್ಟು ನೀನು ಕೆಲಸಕ್ಕೆ ಹೋಗು ಎಂದು ಹೇಳಿ ಒಪ್ಪಿಸಿದೆ. ನನಗಿನ್ನೂ 'ಏರ್ಪೋರ್ಟ್ ಫೋಬಿಯಾ' ಹೋಗಿರಲಿಲ್ಲ. ಹೇಗೂ ಬಸ್ ಮುಷ್ಕರ ಇದ್ದುದರಿಂದ ಮಂಡ್ಯದಿಂದ ನನ್ನ ಆಕ್ಟಿವ ಗಾಡಿಯಲ್ಲಿ ಇಬ್ಬರೂ ಹೊರಟೆವು. ಒಂದಷ್ಟು ಲಗೇಜು ಜಾಸ್ತಿ ಇದ್ದುದರಿಂದಲೂ, ನಾನು ನಿಧಾನಕ್ಕೆ  ಗಾಡಿ ಚಲಾಯಿಸುವುದರಿಂದಲೂ ಸಂಜೆ 5.00 ಕ್ಕೆ ಮಂಡ್ಯ ಬಿಟ್ಟ ನಾವು ಮಾಗಡಿ ರೋಡ್ ತಲುಪಿದಾಗ ರಾತ್ರಿ 8.00 ಗಂಟೆಯಾಗಿತ್ತು. ಬ್ಯಾಗಿನಲ್ಲಿದ್ದ ಮ್ಯಾಗಿಯನ್ನು ಬೇಯಿಸಿ ತಿಂದು ಮಲಗಿಕೊಂಡ ನಾವು ಬೆಳಿಗ್ಗೆ 4.00ಕ್ಕೆ ಎದ್ದು ಹೊರಡಲು ಅನುವಾದೆವು. ಅಪರೂಪಕ್ಕೆ ಪ್ರವಾಸಕ್ಕೆ ಒಪ್ಪಿದ್ದ ಅಪ್ಪ, ಬೆಂಗಳೂರಿನ ಮನೆಯಿಂದ ಏರ್ಪೋರ್ಟ್ ಗೆ ಹೋಗಲು ಕಾರಿನ ವ್ಯವಸ್ಥೆ ಕೂಡ ಮಾಡಿದ್ದರು. ಮುಂಜಾನೆ 5.30 ಗಂಟೆಗೆ ಏರ್ಪೋರ್ಟ್ಗೆ  ಬಂದಿಳಿದರೆ ಜನವೋ ಜನ. ಅರೆ! ಈ ಮುಂಜಾನೆಯಲ್ಲಿಯೇ ಇಷ್ಟು ಜನವಾದ್ರೆ ಹಗಲಿನಲ್ಲಿ ಎಷ್ಟು ಜನ ಎಂದು ಬೆರಗಾದೆ. ಅಸಲಿಗೆ ಅದು ಆಧುನಿಕ ರೈಲ್ವೇ ಸ್ಟೇಷನ್ ತರವೇ ಕಂಡಿದ್ದು ಮೊದಲಿಗೆ. ಬೆಂಗಳೂರಿನ ಏರ್ಪೋಟ್ ನೋಡಲು ಕಣ್ಣೆರಡು ಸಾಲದು. ಮೂರು ಬಾರಿ ಶತಪಥ ಹಾಕಿದ ಮೇಲೆ ವಿಜೇತ ಲಗ್ಗೇಜು ಹಾಕುವ ಕೌಂಟರ್ ಅನ್ನು ಅಲ್ಲಿಂದ ಸೆಕ್ಯುರಿಟಿ ಚೆಕ್ ಗೆ ಹೋಗುವ ದಾರಿಯನ್ನು ತೋರಿಸಿದ. ತದನಂತರ ಟಿಕೆಟ್ ನಲ್ಲಿ ತೋರಿರುವ ಗೇಟ್ ನಲ್ಲಿ ಹೋಗಿ ಕಾಯಬೇಕೆಂದು, ಅಲ್ಲಿಂದ ವಿಮಾನ ಹತ್ತಿಕೊಳುವ ಬಗೆಯನ್ನು ತಿಳಿಸಿ ವಾಪಸು ಹೊರಟ, ಟಿಕೆಟ್ ಇಲ್ಲದೆ ಅವನು ಏರ್ಪೋರ್ಟ್ ನ ಒಳಗೆ ಬರಲು ಸಾಧ್ಯವಿರಲಿಲ್ಲ. 'ಸರಿ' ಎಂದು ಅವನನ್ನು ಕಳುಹಿಸಿಕೊಟ್ಟು ಅವನು ಹೇಳಿದಂತೆಯೇ ಕೌಂಟರ್ ನಲ್ಲಿ ಬ್ಯಾಗ್ ಕೊಟ್ಟು, ಸೆಕ್ಯುರಿಟಿ ಯಾವ ಕಡೆ ಎಂದು ಕೇಳಿ ಮೊದಲ ಮಹಡಿಯನ್ನು ಹತ್ತಿ ತಪಾಸಣೆ ಮುಗಿಸಿಕೊಂಡು ಗೇಟ್ 8 ರ ಬಳಿ ವಿಮಾನ ಕಾಯುತ್ತಾ ಕುಳಿತೆ. ಇನ್ನೂ ಬೆಳಿಗ್ಗೆ 6.00 ಗಂಟೆಯಾಗಿತ್ತು. 

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಹಳ ಸುಂದರವಾಗಿದೆ. ಅತ್ಯಾಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಲ್ಲಿರುವ ಹೊಟೇಲ್ ಗಳು, ಅಂಗಡಿ ಮಳಿಗೆಗಳು ನೋಡಲು ಚೆಂದ ಆದರೆ ಕೊಳ್ಳಲು ಬಲುದುಬಾರಿ! ನಾನಂತೂ ಗೇಟ್ 8 ನ್ನು ಬಿಟ್ಟು ಕದಲಲಿಲ್ಲ. ಕೂತಲ್ಲೇ ಎಲ್ಲ ಕಡೆ ಕಣ್ಣು ಹಾಯಿಸಿದೆ ಅಷ್ಟೇ ಹ್ಹ ಹ್ಹ ಹ್ಹ. .00ಬೆಳಿಗ್ಗೆ 7.15 ಕ್ಕೆ ವಿಮಾನ ಬಂತು. ಸಾಲಿನಲ್ಲಿ ನಿಂತು ವಿಮಾನ ಒಳಗೆ ಬಂದರೆ ಅದು ನಮ್ಮ ರಾಜಹಂಸ ಬಸ್ಸಿನಂತೆ ಇತ್ತು! ಅಯ್ಯೋ ಇಷ್ಟೇನಾ ವಿಮಾನ ಅಂದುಕೊಂಡು 18 ಸೀಟಿನ ಕಿಟಕಿ ಮಗ್ಗುಲಿಗೆ ಒರಗಿಕೊಂಡೆ. ಹತ್ತು ಹದಿನೈದು ನಿಮಿಷಗಳಲ್ಲಿ ವಿಮಾನ ಹೊರಟೇ ಬಿಟ್ಟಿತು. ಎಲ್ಲ ಪ್ರಯಾಣಿಕರು ಅದಾಗಲೇ ಬಂದಿದ್ದ ಕಾರಣ 7.45 ಕ್ಕೆ ಹೊರಡಬೇಕಾದ ವಿಮಾನ 7.30ಕ್ಕೆ ಗುವಾಹತಿಯತ್ತ ಹಾರಿತು. 

ಗುವಾಹತಿಯಲ್ಲಿ ಭಾಳ ಮಳೆ. ಬ್ರಹ್ಮಪುತ್ರ ನದಿ ನೆರೆ ಬಂದು ಹರಿಯುತ್ತಿತ್ತು. ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವಾಗ ಅಯ್ಯೋ ನಡಿಗೆ ಬೀಳುತ್ತಾ , ಭತ್ತದ ಗದ್ದೆಗೆ ಬೀಳುತ್ತೋ ಅನ್ನುವ ಹಾಗೆ ಇಳಿಯಿತು. ಬೆಂಗಳೂರು ಏರ್ಪೋರ್ಟ್ ನೋಡಿದ್ದ ನನಗೆ ಗುವಾಹತಿ ಏರ್ಪೋರ್ಟ್ ಮದ್ದೂರಿನ ಬಸ್ ನಿಲ್ದಾಣ.ದಂತೆ ಕಂಡಿದ್ದು ಸುಳ್ಳಲ್ಲ. ಹೊರಗೆ ಬರುವುದೇ ತಡ. ಟ್ಯಾಕ್ಸಿಯವರ ಕಾಟ. ಅದನ್ನು ತಪ್ಪಿಸಿಕೊಂಡು ಶಿಲ್ಲಾಂಗ್ ಟ್ಯಾಕ್ಸಿಯನ್ನು ಹುಡುಕತೊಡಗಿದೆ. ಅಸ್ಸಾಮಿ , ಬಂಗಾಳಿ, ಹಿಂದಿ ಭಾಷೆಯ ಹೆಸರುಗಳು ಗೊತ್ತೇ ವಿನಃ ಭಾಷೆ ಹುಃ ಉಪ್ಪಿನಕಾಯಷ್ಟೂ ತಿಳಿಯದು. ಅಷ್ಟರಲ್ಲಿಯೇ ಒಬ್ಬ ಮುದುಕಪ್ಪ ಶಿಲ್ಲಾಂಗ್ ಗೆ ಶೇರ್ ಟ್ಯಾಕ್ಸಿಯಲ್ಲಿ ಬರ್ತೀರಾ ಎಂದು ಕೇಳಿದ. ಸರಿ ನಡಿಯಪ್ಪ ಎಂದು ಒಪ್ಪಿ ಅವನ ಕಾರೊಳಗೆ ಬ್ಯಾಗ್ ಹಾಕಿ ಕುಳಿತೆ. ಆಹಾ! ಗುವಾಹತಿಯಲ್ಲಿ ಮಳೆ ಬಂದರೂ ಅಲ್ಲಿನ ಬಿಸಿ ಹವೆಗೆ ಕಾವಲೆ ಮೇಲೆ ಹಾಕಿದ ದೋಸೆಯಂತೆ ಭಾಸವಾಗುತ್ತಿತ್ತು. ಹೊರಗೆ ಬಂದು ಮರದ ನೆರಳಿಗೆ ನಿಂತೆ. ನಿಂತೇ ಎರಡು ಗಂಟೆ ಕಳೆದುಹೋದುವು.   ಮುದುಕಪ್ಪ  ಕಾರು ಚಲಾಯಿಸಲು ಇನ್ನೂ ಮೂವರು ಪ್ರಯಾಣಿಕರು ಬೇಕಿತ್ತು . ಬೆಳಿಗ್ಗೆ 11.30ಕ್ಕೆ ಶುರುವಾದ ಹುಡುಕಾಟದಲ್ಲಿ ಮೊದಲಿಗೆ ಕೋಲ್ಕತ್ತಾ ಹುಡುಗನೊಬ್ಬ ಬಂದ. ಆಮೇಲೆ ಒಂದು ಶಿಲ್ಲಾಂಗಿನ ಹುಡುಗಿ ಬಂದಳು, ಕಡೆಯಲ್ಲಿ ಅರುಣಾಚಲದ ಬೆಡಗಿಯೊಬ್ಬಳು ಬಂದು ನಾನು ಮುಂದೆ ಕುಳಿತಿದ್ದ ಸೀಟಿನಲ್ಲಿ ವಿರಮಿಸಿದಳು. ಕೋಲ್ಕತ್ತಾ ಹುಡುಗನಿಗೆ ಹುಡಗಿ ಪಕ್ಕ ಕೂರಲು ತಕರಾರು. ಕಡೆಗೆ ನಾನೇ 'ನೋ ಪ್ರಾಬ್ಲಮ್' ಎಂದು ಮಧ್ಯಕ್ಕೆ ಮಹಾದೇವನಂತೆ ವಿರಾಜಮಾನನಾದೆ. ಆವಾಗಲೇ ತಿಳಿದಿದ್ದು ಮಧ್ಯೆ ಕೂರುವ ಸಂಕಟ! .ಅಂತೂ ತಿಂತೂ ಮಧ್ಯಾಹ್ನ 2.30ಕ್ಕೆ ಗುವಾಹತಿಯಿಂದ ಶಿಲ್ಲಾಂಗ್ ನತ್ತ ಟ್ಯಾಕ್ಸಿ ಹೊರಟಿತು 




ಅಸ್ಸಾಮಿನ ಗುವಾಹತಿಯಿಂದ ಮೇಘಾಲಯದ ಶಿಲ್ಲಾಂಗಿನವರೆಗೆ ಭಾರತ ಸರಕಾರ ಮೂರು-ನಾಲ್ಕು ವರ್ಷಗಳ ಹಿಂದೆ ಒಳ್ಳೆಯ ಎರಡು ಜೋಡಿ ರಸ್ತೆ ನಿರ್ಮಿಸಿದೆ. ಇದೊಂತರ ನಮ್ಮ ಘಟ್ಟದ ರಸ್ತೆಗಳನ್ನೇ ನೆನೆಪಿಸುತ್ತೆ. ಎರಡೂವರೆ ಗಂಟೆಗಳ ತರುವಾಯ ಶಿಲ್ಲಾಂಗಿನ ಪೊಲೀಸ್ ಬಜಾರ್ ನಲ್ಲಿ ಗಾಡಿ ನಿಲ್ಲಿಸುವ ಮೊದಲೇ ಗೆಳೆಯ ದೇವೇಂದ್ರ ಕಾಣಿಸಿಕೊಂಡರು. ನಿಜವಾಗಲೂ ದೇವೇಂದ್ರ -ಮೇಘಾಲಯ ಪದಗಳು ಒಳ್ಳೆಯ ಜೋಡಿಯಾಗಿದ್ದುವು. 
ಅದಾಗಲೇ ಟ್ಯಾಕ್ಸಿ 500 ರೂ ಪಾವತಿಸಿದ್ದೆ. ದೇವೇಂದ್ರ ಕಂಡ ಕೂಡಲೇ ಟ್ಯಾಕ್ಸಿ ನಿಲ್ಲಿಸಿಸಿ ಮುದುಕಪ್ಪನಿಗೆ ಧನ್ಯವಾದ ಹೇಳಿ ಇಬ್ಬರೂ ಪೊಲೀಸ್ ಬಜಾರಿನ ಪಕ್ಕದಲ್ಲೇ ಇದ್ದ ಅವರ ಆಫೀಸಿಗೆ ಹೋದೆವು. 

ಶಿಲ್ಲಾಂಗ್ ತಲುಪುವ ತುರಾತುರಿಯಲ್ಲಿ ಏನೂ ತಿಂದಿರಲಿಲ್ಲ. ರಾತ್ರಿ ತಿಂತಿದ್ದ ಮ್ಯಾಗಿಯೇ ಶಿಲ್ಲಾಂಗ್ ವರೆವಿಗೂ ನನ್ನನು ಮುಟ್ಟಿಸಿತ್ತು. ಆಫೀಸ್ ತಲುಪಿದಾಗ ಹುರಿದ ಹಂದಿಮಾಂಸದ ಅನ್ನ ನನಗಾಗಿ ಕಾಯುತ್ತಿತ್ತು. ಹಸಿವಿಗೆ ಯಾವ ಹಂಗು ಹೇಳಿ.. ಮಾತು ಮಾತು ನಡೆಯುತ್ತಾ ಹೊಟ್ಟೆ ತುಂಬಿತ್ತು ... 



ಮುಂದುವರಿಯುವುದು ... 

ಈಶಾನ್ಯ ಭಾರತದ ಅಮೂಲ್ಯವಾದ ಮ್ಯೂಸಿಯಂ - ಡಾನ್ ಬಾಸ್ಕೋ 
ಶಿಲ್ಲಾಂಗ್ ನ ಬೀದಿಗಳು, ಮಾರುಕಟ್ಟೆ ಇತ್ಯಾದಿ                                                                                                                       

ನಾವೆಲ್ಲರೂ ಒಂದು ಪ್ರಮಾಣ ಮಾಡಬೇಕಿದೆ :


ನೈತಿಕತೆಯನ್ನು ಬಿಟ್ಟು ವ್ಯವಹಾರ ಮತ್ತು ರಾಜಕೀಯಕ್ಕೆ ಇಳಿದಿರುವ ಮಾಧ್ಯಮಗಳ ಒಡೆತನ ಬಹುತೇಕ ಇಂದು ಬಂಡವಾಳಶಾಹಿಗಳು ಮತ್ತು ಪಟ್ಟಭದ್ರ ಹಿತಾಸಕ್ತರ ಕೈಗಳಲ್ಲಿ ಇವೆ. ಇವು ದೇಶಕಾಲಗಳನ್ನು ನೋಡಿಕೊಂಡು ತಮಗೆ ಬೇಕಾದ ಸರಕಾರ / ವ್ಯಕ್ತಿ / ಸಂಸ್ಥೆಗಳ ಪರವಾಗಿ ವಕಾಲತ್ತು ವಹಿಸಿಕೊಳ್ಳುತ್ತವೆ. ಕಾರಣ ಇವುಗಳು ಬದುಕಲು ಬೇಕಾದ ಮೇವು ಸಿಗುವುದೇ ಅಲ್ಲಿಂದ! ಅಲ್ಲದೇ ಇವೆಲ್ಲಾ ಸುದ್ದಿ ಪತ್ರಿಕೆ /ಮಾಧ್ಯಮಗಳು ಬಂಡವಾಳಶಾಹಿಗಳು ಮತ್ತು ಪಟ್ಟಭದ್ರ ಹಿತಾಸಕ್ತರು ತಮ್ಮ ಹಲವಾರು ವ್ಯವಹಾರಗಳನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಾಕಿಕೊಂಡಿರುವ ಖಾಸಗಿ ರಕ್ಷಣಾದಳಗಳಾಗಿ ಮಾರ್ಪಟ್ಟಿವೆ. ಇಲ್ಲಿ ನೈತಿಕತೆಯನ್ನು, ಪಾರದರ್ಶಕತೆಯನ್ನು, ಸಾಮಾಜಿಕ ಬದ್ದತೆಯನ್ನು ನಿರೀಕ್ಷಿಸುವುದು ವೃಥಾ ವ್ಯರ್ಥ!
ಕಳೆದ ಎರಡು ದಶಕಗಳಲ್ಲಿ ದೇಶದಲ್ಲಿ ಸಾವಿರಾರು ಸುದ್ದಿ ಪತ್ರಿಕೆಗಳು ಮತ್ತು ನೂರಾರು ಸುದ್ದಿವಾಹಿನಿಗಳು ತಲೆ ಎತ್ತಿವೆ. ಅವುಗಳ ಬಂಡವಾಳ ಎಲ್ಲಿಯದು? ಪ್ರತಿಯೊಂದರ ಹಿಂದೆ ಒಬ್ಬ ರಾಜಕಾರಣಿ ಅಥವಾ ವ್ಯವಹಾರಸ್ಥ ಕಾಣಿಸಿಕೊಳ್ಳುತ್ತಾನೆ. ಹೆಸರಿಗೆ ಮಾತ್ರ ಒಬ್ಬ ಸಂಪಾದಕನಿರುತ್ತಾನೆ. ಆತನೇನಾದರೂ ಇವರ ಆಲೋಚನೆಗಳಿಗೆ ವಿರುದ್ದವಾಗಿ ಕೆಲಸ ಮಾಡಿದರೆ ಆ ದಿನವೇ ಆತ ಕೆಲಸ ಕಳೆದುಕೊಳ್ಳುತ್ತಾನೆ. ಅವರಿಗೆ ಬೇಕಿರುವುದು ಬರಿಯ ಅವರ ಕೆಲಸಗಳಿಗೆ/ ವ್ಯವಹಾರಗಳಿಗೆ ಬೇಕಾದ ಒಬ್ಬ ಸಂಪಾದಕ ಮಾತ್ರ. ಆತನಿಗೆ ಸಾಮಾಜಿಕ ಬದ್ದತೆ ಎಂಬುದರ ಅರಿವು ಕಡ್ಡಾಯವೇನಲ್ಲ! ಮುಖ್ಯವಾಗಿ ಇಲ್ಲಿ ನಾವು ಯೋಚಿಸಿಬೇಕಾದ್ದು ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಬದುಕಲು ಬೇಕಾದಷ್ಟೂ ಹಣ ಅವುಗಳಿಂದ ನಿಜವಾಗಲೂ ಸಂಪಾದನೆಯಾಗುತ್ತಿದೆಯೇ ? ಅಥವಾ ಅವು ಅಡ್ಡದಾರಿಯನ್ನು ತುಳಿದಿವೆಯೇ ಎಂದು?! ಯಾಕೆಂದರೆ ಇವು ನಡೆಯುತ್ತಿರುವುದು ಓದುಗ ನೋಡುಗರು ಕೊಡುವ ಚಂದಾಹಣದಿಂದ ಅಥವಾ ಮುಖಬೆಲೆಯಿಂದ ಅಲ್ಲವೇ ಅಲ್ಲ ಬದಲಿಗೆ ಜಾಹೀರಾತುಗಳಿಂದ. ಆದರೆ ಬರುತ್ತಿರುವ ಜಾಹೀರಾತುಗಳಿಂದ ಮಾತ್ರವೇ ಇವು ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿವೆಯೋ ಅಥವಾ ದಂಡಿಯಾಗಿ ರಾಜಕಾರಣಿಗಳು / ವ್ಯವಹಾರಸ್ಥರು ತಮ್ಮ ಹಣವನ್ನು ಇದಕ್ಕೆ ಹರಿಯಬಿಟ್ಟಿದ್ದಾರೋ ನೋಡಬೇಕು. ಇದೊಂದು ಅನುಮಾನ. ಈ ಕುರಿತು ಯಾರಾದರೂ ತನಿಖೆ ಮಾಡಬೇಕು. ಈ ತನಿಖೆಯು ನಮ್ಮನ್ನು ಬೆಚ್ಚಿಬೀಳಿಸುವ ವರದಿಯನ್ನು ನೀಡುವುದರಲ್ಲಿ ಸಂಶಯವಿಲ್ಲ.
ಈವಾಗ ನಾವು ಮಾಡಬೇಕಿರುವುದಾದರೂ ಏನು ?
ಧಾರಾವಾಹಿ - ಹಾಸ್ಯ ಕಾರ್ಯಕ್ರಮ -ಚಲನಚಿತ್ರಗಳನ್ನು ಪ್ರಸಾರ ಮಾಡುವ ಮನೋರಂಜನೆಯ ಚಾನೆಲ್ ಗಳ ಹೊರತಾಗಿರುವ, ಪಕ್ಷಪಾತಿಯಾಗಿರುವ, ಸಾಮಾಜಿಕ ಬದ್ದತೆಯಿಲ್ಲದ ಸುದ್ದಿವಾಹಿನಿಗಳು, ಪತ್ರಿಕೆಗಳನ್ನು ನಾವು ಬಹಿಷ್ಕರಿಸಬೇಕು. ಅವುಗಳಲ್ಲಿ ನಡೆಯುವ ಕೆಟ್ಟ ಚರ್ಚೆಗಳಲ್ಲಿ ಪಾಲ್ಗೊಳ್ಳುವುದು, ಪೋನ್ ಇನ್ ಕಾರ್ಯಕ್ರಮಗಳಲ್ಲಿ ಮಾತನಾಡುವುದು, ನೋಡುವುದು / ಓದುವುದು, ಬರೆಯುವುದು ಇತ್ಯಾದಿ ಬೆಂಬಲಗಳನ್ನು ನಿಲ್ಲಿಸಬೇಕು. ಪದೇ ಪದೇ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಉಮೇದಿನಲ್ಲಿ ಕೆಟ್ಟ ಹೇಳಿಕೆಗಳನ್ನು ಕೊಡುವುದನ್ನ ನಿಲ್ಲಿಸಬೇಕು. ಒಟ್ಟಾರೆ ಇಂತಹ ದುರುಳ ಸುದ್ದಿ ಮಾಧ್ಯಮಗಳನ್ನು ದೂರವಿಟ್ಟು ಸಾಮಾಜಿಕ ನ್ಯಾಯ ಮತ್ತು ಬದ್ದತೆಯುಳ್ಳ ಕೆಲಸಗಳಲ್ಲಿ ನಾವು ಮಗ್ನರಾಗಬೇಕು. ಅಂತಹ ಕೆಲಸಗಳನ್ನು ಮತ್ತಷ್ಟು ಜನ ಮಾಡುವಂತೆ ಪ್ರೇರೇಪಿಸಬೇಕು. ( ಈ ನಿಟ್ಟಿನಲ್ಲಿ ನೀಲಾ ಮೇಡಂ ಅವರು ಗುಲ್ಬರ್ಗದಲ್ಲಿ ಕೆರೆಗಳ ನಿರ್ಮಾಣದಂತಹ ಕೆಲಸವನ್ನು ಯಾವ ಪ್ರಚಾರವೂ ಇಲ್ಲದೆ ನಿರಂತರವಾಗಿ ನಡೆಸಿಕೊಂಡು ಬರ್ತಾ ಇದಾರೆ. ಇದು ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಕೃಷಿ/ ಕುಡಿಯುವ ನೀರು ಒದಗಿಸುತ್ತಾ ಇದೆ)
ಕೃಷಿ / ಉದ್ಯೋಗ / ಪರಿಸರ ಸಂರಕ್ಷಣೆ/ ಎಲ್ಲದರಲ್ಲೂ ಎಲ್ಲ ಜಾತಿ ಧರ್ಮದ ಜನರಿಗೆ ಸಮಾನ ಅವಕಾಶ ಮತ್ತು ಸ್ಥಾನಮಾನವನ್ನು ಕಲ್ಪಿಸುತ್ತ ಮುಂದೆ ಸಾಗಬೇಕಿದೆ. ಆವಾಗ ಈ ವ್ಯವಹಾರಸ್ಥ ಸುದ್ದಿ ಮಾಧ್ಯಮಗಳು ತಾವಾಗಿಯೇ ನಶಿಸಿ, ಸಾಮಾಜಿಕ ಬದ್ದತೆಯುಳ್ಳ ಮಾಧ್ಯಮಗಳು ನಮ್ಮ ನಡುವೆ ಉಳಿದುಕೊಳ್ಳುತ್ತವೆ.
ಈಗಲೇ ಪ್ರಮಾಣ ಮಾಡಿ '' ಪಕ್ಷಪಾತಿಯಾಗಿರುವ, ಸಾಮಾಜಿಕ ಬದ್ದತೆಯಿಲ್ಲದ ಸುದ್ದಿವಾಹಿನಿಗಳು, ಪತ್ರಿಕೆಗಳ ಓದು-ಬರಹ-ಪಾಲ್ಗೊಳ್ಳುವಿಕೆಯಿಂದ ದೂರವಾಗೋಣ ''

Wednesday, August 10, 2016

ವರ್ತಮಾನದ ಕಾವ್ಯ ಮತ್ತು ಅಕ್ಷರ ಹಿಂಸೆ | ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕಾರ ಭಾಷಣ



ಎಲ್ಲರಿಗೂ ನಮಸ್ಕಾರ 

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಿಂದ ಕಡೆಂಗೋಡ್ಲು ಕಾವ್ಯ ಸ್ಪರ್ಧೆಯ ವಿವರಗಳನ್ನು ಪಡೆದುಕೊಂಡ ಹತ್ತುವರ್ಷಗಳ ನಂತರ ಅದರಲ್ಲಿ ಭಾಗವಹಿಸಿ, ಪುರಸ್ಕಾರವನ್ನು ಪಡೆದದ್ದು ನನಗೆ ಬಹಳ ಖುಷಿಯ ವಿಚಾರವೇ ಆಗಿದೆ  
ಕಾವೇರಿತೀರದಿಂದ ಕಡಲತಡಿಗೆ ಕರೆಯಿಸಿ ಈ ಪುರಸ್ಕಾರವನ್ನು ನನಗೆ ನೀಡುತ್ತಿರುವ   ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದವರಿಗೂ. ಮತ್ತು ತೀರ್ಪುಗಾರರಿಗೂ ನನ್ನ ಹೃದಯ ತುಂಬಿದ ಧನ್ಯವಾದಗಳು. 

  


ಮಾತೇ ನಿಲ್ಲದ ಕಾಲದಲ್ಲಿ ತತ್ವ ಅಪಥ್ಯವಾಗುತ್ತದೆ. ಅಂತಹ ಕಾಲದಲ್ಲಿ ಕಾವ್ಯದ ಗತಿಯೇನು ?!
ಅಂತಹ ಕಾಲದಲ್ಲೇ ನಿಂತಿರುವ ನಾನು ಬೇರೆ ಯಾರೋ, ಯಾರನ್ನೋ  ಕೇಳುವುದಕ್ಕಿಂತ ನನ್ನನು ನಾನೇ ಆಗಾಗ್ಗೆ ಕೇಳಿಕೊಳ್ಳುವ ಪ್ರಶ್ನೆ ಕೂಡ. ಅಲ್ಲದೇ ಇವತ್ತಿನ ಕಾವ್ಯ ಯಾವುದಕ್ಕೆ? ಯಾರಿಗೆ? ಮತ್ತು ಯಾಕೆ ?
ಎಂಬಂತಹ ಪ್ರಶ್ನೆಗಳನ್ನು ಆಗಾಗ್ಗೆ ಎಲ್ಲ ಕವಿಗಳು - ವಿಮರ್ಶಕರು, ಓದುಗರು ಕೇಳಿಕೊಳ್ಳುತ್ತಲೇ ಇರುತ್ತಾರೆ ಅನಿಸತ್ತೆ. ಹಾಗೆ ಈ ಪ್ರಶ್ನೆಯೇ ಹುಟ್ಟದೇ ಹೋಗಿದ್ದರೆ ಕಾವ್ಯ ಹುಟ್ಟುವುದು ಕೂಡ ಕಷ್ಟವಾಗಿರುವ ಸಮಾಜವೊಂದರ ಭಾಗವಾಗಿ ನಾವಿರುತ್ತಿದ್ದೆವು ಅಷ್ಟೇ. ಇದರ ಉತ್ತರವೂ ಕೂಡ ಆಯಾ ದೇಶಕಾಲ, ಭಾಷೆಗಳ ಮೇಲೆ ಅವಲಂಬಿತವಾಗಿ ಬದಲಾದ ತನ್ನದೇ ಕಾರಣಗಳನ್ನು, ಪ್ರೇರಣೆಗಳನ್ನು ಹೊಂದಿರತ್ತೆ. ಹಾಗಿದ್ದರೆ ಈ ಕಾಲದ ಈ ದೇಶದ ಈ ಭಾಷೆಯ ಕಾವ್ಯ ನಿರ್ಮಿತಿಯ  ಕಾರಣಗಳು ಯಾವುವು ಅಂತ ಕೇಳಿದ್ರೆ ನಾನು ಪರೀಕ್ಷೆ ಬರೆಯಲು ಬಾರದ ಹುಡುಗನಂತೆ ಸುಮ್ಮನೆ ನಿಂತುಬಿಡ್ತೀನಿ. ಯಾಕಂದ್ರೆ ನನಗೆ ಪ್ರಶ್ನೆ ಮಾತ್ರ ಚೆನ್ನಾಗಿ ಗೊತ್ತು ಆದರೆ ಉತ್ತರ ಕುರಿತು ಅಷ್ಟಾಗಿ ಇನ್ನೂ ತಲೆಕೆಡಿಸಿಕೊಳ್ಳದವ. ಕಾವ್ಯ ಕಟ್ಟುವಲ್ಲಿ ನನಗೆ ಬಾಹ್ಯ ಒತ್ತಡಗಳಿಗಿಂತ ಅಂತರಿಕ ಒತ್ತಡಗಳೇ ಜಾಸ್ತಿ ಇದ್ದುವು. ಅದರಲ್ಲಿ ಮುಖ್ಯವಾದದ್ದು 'ಮಾತು'.  ಸದಾ ಗೆಳೆಯರೊಂದಿಗೆ ನಾನಾ ವಿಚಾರವಾಗಿ ಮಾತನಾಡುತ್ತಿದ್ದ ನಾನು ಕೆಲವೊಮ್ಮೆ ತೀರ ಅಸಂಗತವಾದ ಮೌನಕ್ಕೆ ಒಳಗಾಗಿಬಿಡುತ್ತಿದ್ದೆ. ಇದು ಯಾಕೆ ಅಸಂಗತವಾದ ಮೌನವೆಂದರೆ ಕೆಲವು ಮಾತುಗಳನ್ನು ಕಾವ್ಯದ ಮೂಲಕ ಮಾತ್ರ ನಾನು ಹೇಳಬಲ್ಲವನಾಗಿದ್ದೇ. ಅದು ಯಾವುದಾದರೂ ಆಗಿರಲಿ. ನನ್ನ ಅಭಿವ್ಯಕ್ತಿಯ ಮುಖ್ಯ ಮಾರ್ಗ 'ಕಾವ್ಯವೇ' ಆಗಿತ್ತು. ಬೇರೆಯದೇ ಆದ ರೀತಿಯಲ್ಲಿ ನಾನು ಮಾತನಾಡಲು ಸಾಧ್ಯವಿರಲಿಲ್ಲ. ನಿಮಗೆ ದೋಸೆಯೇ ಯಾಕೆ ಇಷ್ಟ? ಇಡ್ಲಿ ಯಾಕೆ ಇಷ್ಟವಿಲ್ಲ ಅಂದ್ರೆ ಏನು ಹೇಳಲು ಸಾಧ್ಯ!  
ಕಾವ್ಯ ಯಾವುದಕ್ಕೆ? ಯಾರಿಗೆ? ಮತ್ತು ಯಾಕೆ ಎನ್ನುವುದಕ್ಕೆ ನನ್ನ ಉತ್ತರ ನನಗೆ ಸಿಕ್ಕಿದ್ದು ನಾಗರೀಕನಾಗಿ ನಾನು ಆ ಮೂಲಕ ಸಮಾಜದೊಂದಿಗೆ, ಮನುಷ್ಯನಾಗಿ ಪ್ರಕೃತಿಯೊಂದಿಗೆ  ಪ್ರತಿಸ್ಪಂಧಿಸಿಬಲ್ಲವನಾಗಿದ್ದೇ.   
ಕಾವ್ಯವು,  ಜಗತ್ತು ಮತ್ತು ವ್ಯಕ್ತಿಯ ನಡುವೆ ಸೇತುವಾಗಿತ್ತು.   

ಕಾವ್ಯವು ರಾಜಕಾರಣವನ್ನು ಮಾತನಾಡಬಹುದೇ?!  ಅಗತ್ಯವಾಗಿ ಮತ್ತು ಅತ್ಯಂತ ಜರೂರಾಗಿ ಕಾವ್ಯ ರಾಜಕಾರಣವನ್ನು ಮಾತನಾಡಬೇಕು. ಕಾವ್ಯಕ್ಕೆ ಎಲ್ಲೆಯನ್ನು ಹಾಕಲು ನಾವು ಯಾರು? ಅದು ಸಂಪೂರ್ಣ ಸ್ವತಂತ್ರವಾದ ಅಭಿವ್ಯಕ್ತಿ ಮಾಧ್ಯಮ. ಅದಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಈ ನೆಲದಲ್ಲಿ ಕಾವ್ಯಗಳು ಹುಟ್ಟಿದ್ದೇ ರಾಜಕೀಯದಿಂದ. ರಾಮಾಯಣ ಭಾರತಾದಿ ಮಹಾಕಾವ್ಯಗಳು, ಜನಪದರ ಮೌಖಿಕ ಮಹಾಕಾವ್ಯಗಳೂ ಕೂಡ ರಾಜಕಾರಣ, ಧರ್ಮಕಾರಣಗಳಿಂದ ಕೂಡಿವೆ. ಆದರೆ ಕಾವ್ಯ ಪಕ್ಷಪಾತಿಯಾಗಬಾರದು. ಕಾವ್ಯಕ್ಕೊಂದು ಆಘೋಷಿತವಾದ ಸಾಮಾಜಿಕ ಬದ್ದತೆಯಿದೆ.   ಜನನಯಕರಾಗಬೇಕಾದ ಕಾವ್ಯಗಳು ಯಾವಾಗ ಪವಿತ್ರ ಗ್ರಂಥಗಳಾಗ ತೊಡಗುತ್ತವೋ ಅಲ್ಲಿಗೆ ಅದು ದುಂಡಾವರ್ತನೆಗೆ ಇಳಿದಿದೆ ಎಂದು ಅರ್ಥ. ಅದರ ಉಪದ್ರವ ಹೆಚ್ಚಾದಷ್ಟೂ ಅದರ ಕವಿತಶೀಲತೆ ತೆಳುವಾಗುತ್ತಾ ಕೇವಲ ಅಕ್ಷರವಾಗುತ್ತದೆ. ಕಡೆಗೆ ತೆಳುಪದರವೂ ಉದುರಿ ಬರಿಯ ಎಲುಬು ಮಾತ್ರ ಉಳಿದಾಗ ಅಲ್ಲಿ ಅಕ್ಷರದ ಹಿಂಸೆ ಶುರುವಾಗುತ್ತದೆ. 
ಈವಾಗ ಕಾವ್ಯದ ವ್ಯಾಪ್ತಿ ಮತ್ತಷ್ಟು ಹರಡಿಕೊಳ್ಳುತ್ತದೆ. ಈವಾಗ ಕಾವ್ಯ ಎಂದರೆ ಬರಿಯ ಕವಿತೆ (Poetry) ಮಾತ್ರವಲ್ಲ ಅದು ನಾಟಕ, ಕಥೆ, ಕಾದಂಬರಿ ಒಟ್ಟೂ ಎಲ್ಲ ತರಹದ ಬರಹವೂ ಸೇರಿಕೊಳ್ಳುತ್ತದೆ. ಯಾಕಾದನ್ರೇ ಈ ಪ್ರಪಂಚದ ಎಲ್ಲ ಸಾಹಿತ್ಯವೂ ಮೊದಲು ಕಾವ್ಯದಿಂದ ಶುರುವಾಗಿ ಬೇರೆಬೇರೆಯಾಗಿ ಕವಲೊಡೆದು ಬೆಳೆದು ಸ್ವತಂತ್ರ ಅಸ್ತಿತ್ವ ಪಡೆದುಕೊಂಡವು. ಅದರ ಅವುಗಳಲ್ಲಿ ಹರಿಯುತ್ತಿರುವ ರಕ್ತ ಮಾತ್ರ ಕಾವ್ಯವೇ ಆಗಿದೆ. 
ಉದಾ: ಹಿಂದೆ ಅನಂತಮೂರ್ತಿಯವರು, 'ಭೈರಪ್ಪನವರ ಕಾದಂಬರಿಯಲ್ಲಿ ಕಾವ್ಯತ್ವವಿಲ್ಲ'   ಎಂಬಂತಹ ಮಾತನಾಡಿದ್ದರು.    
ಕಾವ್ಯತ್ವವಿಲ್ಲದ ಸಾಹಿತ್ಯ ಪ್ರಕಾರವೇ ಇಲ್ಲ. ಯಾವಾಗ ಕಾವ್ಯಾತ್ಮವನ್ನು ಕಳೆದುಕೊಂಡು ಬರಿಯ ಎಲುಬು ಬರಹದಲ್ಲಿ ಉಳಿಯಿತೋ, ಅದು ಸರ್ವಭಕ್ಷಕ  ಸಸ್ತನಿಯಾಗಿ ಜನರ ಆಲೋಚನೆಗಳನ್ನು ತಿಂದು ಬದುಕಲು ಶುರು ಮಾಡುತ್ತದೆ. ಇಲ್ಲೇ ಅಕ್ಷರದ ಹಿಂಸೆ ಶುರುವಾಗುವುದು. ಅಕ್ಷರದ ಹಿಂಸೆ ಕುದುರೆಯ ಜೀನು ಇದ್ದ ಹಾಗೆ. ತನ್ನ ಅನುಯಾಯಿಗಳನ್ನು ತನ್ನ ದಾರಿಯಲ್ಲಿ ತಪ್ಪಿಸಿಕೊಳ್ಳದ ಹಾಗೆ   ವರ್ತಮಾನದ ಕಾವ್ಯದಲ್ಲಿ ಅಥವಾ ಎಲ್ಲ ರೀತಿಯ ಬರಹಗಳಲ್ಲಿ ಈ ರೀತಿಯ ಅಕ್ಷರದ ಹಿಂಸೆ ಶುರುವಾಗಿದೆ. ಅದು ಕೆಳವರ್ಗದ  ಜನಾಂಗಗಳನ್ನು, ಅವರುಗಳ ಬದುಕನ್ನು, ಹಕ್ಕುಗಳನ್ನು, ಸವಲತ್ತುಗಳನ್ನು ದರ್ಪದಿಂದ ಪ್ರಶ್ನಿಸುತ್ತಾ ತಮ್ಮ ಸಂಸ್ಕೃತಿಯನ್ನು ಏಕಮಾತ್ರವಾಗಿ ಎಲ್ಲ ಅನುಸರಿಸಬೇಕೆಂದು ಕಟ್ಟಪ್ಪಣೆ ಮಾಡಲು ಶುರು ಮಾಡುತ್ತದೆ. .ಇಲ್ಲಿಗೆ ನಿಲ್ಲದೆ ಈಗ ಪತ್ರಿಕಾ ರಂಗ ಮತ್ತು ಸುದ್ದಿ ಮಾಧ್ಯಮಗಳಿಗೂ ಸೋಂಕು ಹತ್ತಿಕೊಂಡಿದೆ. ಇದೇನು ವರ್ತಮಾನದಲ್ಲಿ ಕಾಣುತ್ತಿರುವ ಹೊಸ ಸಮಸ್ಯೆಯೇನು ಅಲ್ಲ. ಇದು ಮನುಷ್ಯನ ಬದುಕಿನುದ್ದಕೂ ನೆರಳಿನಂತೆ ಜೊತೆಯಲ್ಲಿಯೇ ಬರುತ್ತದೆ. ಆದರೆ ಪ್ರಜಾಸತ್ತೆಯ ಸೂರಿನಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಲ್ಲಿ ಬದುಕಬೇಕಾದ ಹೊತ್ತಿನಲ್ಲಿ ಮತ್ತದೇ ಊಳಿಗದ ಸಮಾಜವನ್ನು ಬಯಸುವ  ಈ ಕೆಟ್ಟ ನೆರಳು ನಮಗಿಂತಲೂ ದೊಡ್ಡದಾಗಿ ಬೆಳೆದು ಬೆಳಕನ್ನೇ ತಿಂದು ಹಾಕುತ್ತಿದೆ. ಮುಂದೆ ಇದರ ಸ್ವರೂಪದ ಸ್ವಲ್ಪ ಯೋಚಿಸಿದರೂ ವಿನಾಶವೇ ಎದ್ದು ಕಾಣುತ್ತಿದೆ. 

ಅಕ್ಷರದ ಹಿಂಸೆ ಮತ್ತು  'ಅಭಿವ್ಯಕ್ತಿ ಸ್ವಾತಂತ್ರ್ಯ' 

ಯಾವ ಸ್ವಾತಂತ್ರ್ಯವೂ ಸ್ವೇಚ್ಛಾಚಾರವಲ್ಲ. ಹಾಗೆಯೇ ಎಲ್ಲ ಮಾತುಗಳೂ - ಬರಹಗಳೂ 'ಅಭಿವ್ಯಕ್ತಿ ಸ್ವಾತಂತ್ರ್ಯ' ಎನಿಸುವುದಿಲ್ಲ. ವಿರೋಧ ಮಾಡುವುದಕ್ಕೂ , ವೈರ-ದ್ವೇಷಗಳನ್ನು ಸಾಧಿಸುವುದಕ್ಕೂ ವ್ಯತ್ಯಾಸವಿದೆಯಲ್ಲವೇ?!
ಈ ಹಿಂದೆ ಮಾತಿನಲ್ಲಿ ಹಿಂಸೆಯಿತ್ತು. ಬೈಗುಳವಾಗಿ, ಅಪಹಾಸ್ಯವಾಗಿ, ಕುಹಕವಾಗಿ ಅದು ನಡೆದು ಬಂದಿತ್ತು. ಆದರೆ ಅದು ಅಷ್ಟು ಸುಲಭಕ್ಕೆ ಉಳಿಯುತ್ತಿರಲಿಲ್ಲ. ಕಾಲದ ಹಂಗಿನಲ್ಲಿ ಕರಗಿಹೋಗುತ್ತಿತ್ತು. ಆದರೆ ಈ ಕಾಲದಲ್ಲಿ ಹಾಗಲ್ಲ ಅದು ಅಕ್ಷರಕ್ಕೆ ಬಂದು ನಿಂತಿದೆ. ಅಕ್ಷರವೆಂಬುದು ಸುಲಭಕ್ಕೆ ಅಳಿಯುವುದಿಲ್ಲ. ಅಳಿಸಲು ಸಾಧ್ಯವೂ ಇಲ್ಲ. ಅದು ಎಲ್ಲ ಸಾಕ್ಷ್ಯಗಳೊಂದಿಗೆ ಹಾಗೆಯೇ ನಿಲ್ಲುತ್ತದೆ. ಆರೋಪ -ಅಪರಾಧಗಳ ನಡುವೆ ವಿಚಾರಣೆಯೇ ಇಲ್ಲದೆ ಶಿಕ್ಷೆಯಾಗುತ್ತದೆ.  ಆದರೆ ಅಪರಾಧ ಯಾರದು ಅಪರಾಧಿ ಯಾರು ಯಾವುದನ್ನೂ ನಾವು ತಿಳಿಯೆವು. ಕಾರಣ ಇದೆಲ್ಲವೂ ನಮ್ಮಗಳ ಪರೋಕ್ಷ ಉಪಸ್ಥಿತಿಯಲ್ಲಿ e - ಮಾಧ್ಯಮಗಳಲ್ಲಿ ನಡೆದುಹೋಗುತ್ತದೆ. ಫೇಸ್ಬುಕ್, ಟ್ವಿಟ್ಟರ್, ಬ್ಲಾಗ್ ಗಳಲ್ಲಿ ಚೂರೇ ಚೂರಾಗಿ ಶುರುವಾದ ಈ ಹಿಂಸೆಯ ಕೊಂಡಿ ಇದೀಗ ಪತ್ರಿಕೆ/ ಸುದ್ದಿ ಚಾನೆಲ್ ಗಳವರೆಗೆ ವ್ಯಾಪಿಸಿಕೊಂಡಿದೆ.  ಪತ್ರಿಕೆ/ ಸುದ್ದಿ ಚಾನೆಲ್ ಗಳ ನಿತ್ಯದ ಪ್ರಸಾರ ಮತ್ತು ಪ್ರಚಾರಕ್ಕಾಗಿ ರೋಚಕವಾದ ಸುದ್ದಿಗಳು ಬೇಕಾಗಿವೆ. ಅವುಗಳ ಪ್ರಸಾರ ಮಾಡುವ ಜನರ ಗಮನ ಸೆಳೆದು ಅಲ್ಲಿ ಹಣ ಸಂಪಾದಿಸುವ ಚಟಕ್ಕೆ ಪತ್ರಿಕೆ/ ಸುದ್ದಿ ಚಾನೆಲ್ ಗಳು ಬಂದು ನಿಂತಿವೆ. ಹೀಗೆ ಬಂದು ನಿಂತ ಪತ್ರಿಕೆ/ ಸುದ್ದಿ ಚಾನೆಲ್ ಗಳು ಅಕ್ಷರ ಹಿಂಸೆಯ ಸ್ವರೂಪವನ್ನು ನಮ್ಮ ಮನದಾಳಕ್ಕೆ ನಿತ್ಯವೂ ಬಿತ್ತುತ್ತಲೇ ಇವೆ. ಕೆಲವಂತೂ ವ್ಯಕ್ತಿಗಳ - ಪಕ್ಷಗಳ - ಮತ/ಧರ್ಮಗಳ ಮುಖವಾಣಿಗಳಾಗಿವೆ. ಇವುಗಳೆಲ್ಲದರ ಸ್ವಾರ್ಥದ ಹಿನ್ನೆಲೆಯಲ್ಲಿ ಸಿದ್ದವಾಗುತ್ತಿರುವ ರೋಚಕ ಸುದ್ದಿಗಳೂ 'ಅಕ್ಷರ ಹಿಂಸೆ' ಯ ಬೃಹತ್ ಮಾಧ್ಯಮಗಳಾಗಿವೆ. 

ಇದನ್ನು ನಿಲ್ಲಿಸುವುದು ಹೇಗೆ ? ಎಂದು ಪ್ರಶ್ನೆ ಕೇಳಿದರೆ ನಿಜಕ್ಕೂ ನನ್ನ ಬಳಿ ಸಿದ್ದ ಉತ್ತರವಿಲ್ಲ. ಆದರೆ ಕಾವ್ಯದಿಂದ ಎದುರಿಸಬಹುದು ಎಂದು ಮಾತ್ರ ಸಲಹೆ ನೀಡಬಲ್ಲೆ. ಆದರೆ ಎಂತಹ ಕಾವ್ಯವನ್ನು ಇದರ ಎದುರಿಗೆ ಕಟ್ಟಿ ಅದನ್ನು ಮಣಿಸಬೇಕು ಎಂಬುದನ್ನೂ ಕಟ್ಟುವ ಕವಿಯೇ ಯೋಚಿಸಿಬೇಕು. ಅವನಿಗೆ ಚೆನ್ನಾಗಿ ಗೊತ್ತು ಅಕ್ಷರದ ಹಿಂಸೆಯನು ಮಣಿಸುವ ಪರಿ. ಆದರೆ ಅದು ನಿಧಾನಮಾರ್ಗ. ಅಲ್ಲಿಯವರೆಗೂ?! ನನಗೂ ಗೊತ್ತಿಲ್ಲ. ಈ ಸಮಸ್ಯೆ ಬಹಳ ಗಂಭೀರವಾಗಿದೆ. ನಾವು ಮಕ್ಕಳಾಟವೆಂಬಂತೆ ಸುಮ್ಮನಿದ್ದೇವೆ. 


ಕಾವ್ಯ ಮತ್ತು ಬುಲೆಟ್ ಬೈಕ್ 

ಇಷ್ಟೆಲ್ಲಾ ರಗಳೆಗಳ ನಡುವೆ ಇವತ್ತಿನ ನನ್ನ ಪೀಳಿಗೆಯ ಕಾವ್ಯ ಹೇಗಿದೆ ಅಂದರೆ 
ಹಳೆಯ ಸೇತುವೆಯ ಮೇಲೆ ತಳ್ಳುವ ತೆಪ್ಪದಂತೆ ಇದೆ. ನನ್ನನೂ ಸೇರಿಸಿ 'ನಾವೆಲ್ಲ ನದಿಗೆ ಧುಮುಕಲು ಹೆದರಿದಂತೆ  ಕಾಣುತ್ತಿದೆ'. ಕಾವ್ಯದಲ್ಲಿ ನವ್ಯದವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಬಿಟ್ಟು ನಾವಿನ್ನೂ ಮೇಲೆ ಏಳುತ್ತಿಲ್ಲ. ಎದ್ದ ಕೆಲವರು ಮುಂದೆ ನಡೆಯುತ್ತಿಲ್ಲ. ನಡೆದ ಕೆಲವೇ ಕೆಲವರು ಕಾಣುತ್ತಲೇ ಇಲ್ಲ.    
ಕಾವ್ಯ ಯಾಕೆ ಯಾರಿಗೂ ಶೋಕಿಯ ವಿಷಯದಂತೆ ಕಾಣುತ್ತಿಲ್ಲ. ಅಸಲಿಗೆ ಅದು ಶೋಕಿಯಲ್ಲ ಎಂಬುದು ಬೇರೆ ವಿಚಾರ. ಇವತ್ತಿನ ಯುವಜನತೆ ಇಷ್ಟಪಡುವ ಒಂದು ಬುಲೆಟ್ ಬೈಕುಗಳು  ದಶಕಗಳ ಹಿಂದೆಯೇ ಅವುಗಳ ಪ್ರಸ್ತುತತೆ ಕಳೆದುಕೊಂಡು ಮೂಲೆಗೆ /ಗುಜರಿಗೆ ಸೇರಿದ್ದವು. ಆದರೆ ಯಾವುದೋ ಒಂದು ಸುಪ್ತ ಪ್ರಜ್ಞೆ, ಹಳೆಯದನ್ನು ಮರು ಬಳಸುವ ಹೊಸ ಶೋಕಿಯೊಂದನ್ನು ಹುಟ್ಟು ಹಾಕಿತು. ಸ್ವಲ್ಪ ವೆಚ್ಚವಾದರೂ ಸರಿಯೇ ಇದೀಗ ಊರುಗಳಲ್ಲಿ ಕಾಣುವುದೇ ದುಸ್ತರವಾಗಿದ್ದ ಬುಲೆಟ್ ಬೈಕುಗಳು,  ಗಲ್ಲಿ ಗಲ್ಲಿಗಳಲ್ಲಿ ನಾ ರೀತಿಯ ವಿನ್ಯಾಸ, ಬಣ್ಣ, ಸಾಮರ್ಥ್ಯಗಳನ್ನು ಮೈದುಂಬಿಕೊಂಡು ಓಡಾಡುತ್ತಿವೆ. ಜನಕ್ಕೂ ಅದರಲ್ಲಿ ಏನೋ ಅನುರಾಗ. 
ಇಂಥದು ಕಾವ್ಯದಲ್ಲಿ ಯಾಕೆ ಘಟಿಸಬಾರದು?! ನಾನಂತೂ ಇಂತಹದೊಂದು ಪವಾಡ ನಡೆದೇ ತಿರುತ್ತದೆ ಎಂದು ಭಾವಿಸಿ ಕಾಯುತ್ತಲೇ ಇದ್ದೇನೆ. ಅಕ್ಷರ ಹಿಂಸೆಗೆ, ಧಾವಂತದ ಬದುಕಿಗೆ ಕಾವ್ಯ ಔಷಧವಾಗಬಲ್ಲುವುದು, ಅದರ ಹೊಸಹುಟ್ಟು ಇಷ್ಟರಲ್ಲಿಯೇ ಘಟಿಸಲಿದೆ ಎಂಬುದು ನನ್ನ ನಂಬಿಕೆ.           

ನನ್ನದೊಂದು ಕವಿತೆ ಓದಿ ನನ್ನ ಮಾತನ್ನು ಕೊನೆಗೊಳಿಸುವೆ. 
ಅಕ್ಷರದ ಹಿಂಸೆ - ಕವಿತೆ ವಾಚನ 
ನಮಸ್ಕಾರ.                


(ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಸ್ವೀಕಾರ ಭಾಷಣದ ವಿಸ್ಕೃತ ರೂಪ)