ಬುದ್ದನ ಉತ್ತರ :
ನೀನೆಂದು ಕಂಡೆ ನನ್ನ ನಗುವ ..
ಸುಳ್ಳು ಹೇಳಬೇಡ...
ಈ ಜಗತ್ತಿನಂತೆ
ನೀನೂ ಸುಳ್ಳಾಗಬೇಡ!
ನಾನೆಂದೂ ನಕ್ಕಿರಲಿಲ್ಲ
ನಕ್ಕೆನೆಂದು ಭ್ರಮಿಸಿದರು.
ಸುಖದುಃಖ ಇಲ್ಲವಾದ ಮೇಲೆ
ನಗು-ಅಳು ಎಲ್ಲಿಯವು?
ಅಜ್ಞಾನ ಕಾಲದಲಿ ವಿಲಾಸಗಳನು
ಬಿಟ್ಟೆ..ವಿಜ್ಞಾನದ ಕೂಸು ನೀನು
ಯಾವುದನ್ನೂ ಬಿಡಲಾರೆ..
ನನ್ನಂತೆ ಬದುಕುವವರು ಸಾವಿರ
ಇದ್ದಾರೆ.. ಸಿಕ್ಕಿದ್ದರಲ್ಲಿ ಸುಖ ಕಂಡು
ನಿನ್ನ ನಾಗರೀಕತೆಗಳಾಚೆ
ತಿಟ್ಟುತೆವರುಗಳಲಿ
ಅರಳಿ ಮರದಡಿ ಕೂತದ್ದು ಮಾತ್ರವಲ್ಲ
ಬದುಕು ಕೂಡ ಧ್ಯಾನವೇ!
ನೀನು ಧ್ಯಾನಿಸಿದಷ್ಟು ನಿನ್ನದು..
ತತ್ವ ತಾಮಸಗಳು ನಂಗೆ ಗೊತ್ತಿಲ್ಲ
ನಾನು ಬಾಳಿ ಬಿಟ್ಟದ್ದು ಬದುಕು.
ನಿನ್ನ ಆಸೆ ಜೀವಂತವಾಗಿರುವವರೆಗೂ
ನನ್ನ ನಾಣ್ಯ ಚಲಾವಣೆಯಲ್ಲಿರುತ್ತದೆ.
ಎದೆ ತುಂಬಿದ ಕಾರಿರುಳ ಬಯಕೆಗಳ
ಬಯಲಿಗೆಸೆದು ನೋಡು...
ನೀನು ನೀನಾಗುತ್ತಿ.. ನಾನಾಗಲಾರೆ!
No comments:
Post a Comment