Friday, September 13, 2013

ಗೌರಿಯರ ದುಃಖ



ಬರಿಗೊರಳ ತುಂಬು ಸೆರಗಿನಿಂದ
ಹೊದ್ದುಕೊಂಡು
ಬರಿಗಾಲಲ್ಲಿ ತವರಿಗೆ
ಹೊರಟಳು ಅವ್ವ..
ಸೆರಗ ತುದಿಯಲ್ಲಿ
ಎರಡು ಹರಿದ ನೋಟಿನ
ಗಂಟು..

ಮಗಳ ಕಂಡ ಹಳೇಮುದುಕಿ
ಕಾಣದ ಕಣ್ಣು
ಚಡಪಡಿಸುತ್ತದೆ
ಮುಖ, ಮೈ ಮುಟ್ಟಿ ಮುಟ್ಟಿ
ಉಸಿರುಯ್ಯುತ್ತದೆ

ಗಂಜಿ, ಪಾಯಸ
ಹಬ್ಬದೂಟ.. ಹೊತ್ತು ಬೀಳುವ
ತನಕ ಒಂದೇ ಸಮ ಮಾತು
ಮುಗಿಸಿ ತಿರುಗಿ ಹೊರಟಾಗ

ಕಾಣದಂತೆ ತನ್ನವ್ವನ ಎಲೆಯಡಿಕೆ
ಚೀಲಕ್ಕೆ ಹರಿದ ನೋಟು ಸೇರಿಸುತ್ತಾಳೆ
ಅವಳವ್ವ ಅದಾಗಲೇ ಇವಳ ಬ್ಯಾಗಿನಲಿ
ಬೆಳ್ಳಿ ಕಾಲಂದಿಗೆ ಮುಚ್ಚಿಟ್ಟಿದಾಳೆ..

ಕಣ್ಣೀರಲಿ ತೊಯ್ದ
ಹರಿದೆರಡು ಸೆರಗುಗಳು
ಮುಂದಿನ ಗೌರಿಗೆ ಈ ಊರು ಕರೆಯುತ್ತೋ
ಇಲ್ಲವೋ ಅಂತಾನೆ ಮೌನಕ್ಕೆ ತುತ್ತಾಗುತ್ತವೆ. ~ ಆರ್.ಪಿ.

No comments:

Post a Comment