ಹಾಲತೊರೆಯ ನಡುವೆ ಬಂಗಾರದ ಮೀನು
ಚಿಮ್ಮಿದಂತೆ ಶಿಲ್ಲಾಂಗಿನ ಸೂರ್ಯೋದಯ.
ಸಮಯದ ಗಾಳಕ್ಕೆ ಸಿಕ್ಕುವುದಿಲ್ಲ ಈ ಮೀನು ಹುಡುಗ
ಬಿದಿರು ಬುಟ್ಟಿ ಹಿಡಿದ ಹೆಂಗಳೆಯರ ಕಣ್ಣಲ್ಲಿ ತೇಲುವನು
ಘಟ್ಟದ ದೇವದಾರು ಮರಗಳ ನಡುವೆ ತೂರುವನು
ದಿನವು ಬಿಡಿದ ಮಳೆಯಲಿ ಮಲ್ಲಿಗೆಯಂತೆ ಮೀಯುವನು
ಇಳಿಜಾರು ರಸ್ತೆಗಳಲಿ ಚೆಂಡಿನಂತೆ ಉರುಳುವನು
ಕೈಚಾಚುವುದರೊಳಗೆ ಕರಗಿ ಮತ್ತಲ್ಲೇ ಅಂಗೈಲೇ ಮೂಡುವನು
ಕಡುಕಷ್ಟ ಕಾಣುವುದು ಶಿಲ್ಲಾಂಗಿನ ಟ್ರಾಫಿಕ್ಕಿನ ನಡುವೆ
ಏಳಕ್ಕೇ ಬ್ಯಾಗು ಹೆಗಲಿಗೇರಿಸಿದ ಮುದ್ದು ಮಕ್ಕಳ ನಡುವೆ
ಮಂಜು ಮುಸುಕಿದ ಮಲೆಕಾನುಗಳ ಉಬ್ಬಿದೆದೆಗಳ ನಡುವೆ
ಈ ಮಲೆಯ ಹುಡುಗ ಬಲುಕಾಮಿ ಸುರಪ್ರೇಮಿ
ಮಳೆಗಾಲವೆಂದರೆ ಬಿಳಿ-ಕಪ್ಪು ಮೋಡಗಳ ಜಗಜಟ್ಟಿ ಕಾಳಗ
ಕೊಡದಲಿ ಸುರಿದಂತ ಮಳೆಯೊಳಗೇ ಸೂರ್ಯಸವಾರಿ
ಊರು ಊರುಗಳಲೂ ಸೀತಾಳೆ ಹೂಗಳ ಭಾರೀ ಪರಿಷೆ
ಹೆಸರೊಂದೂ ನೆನಪಿಲ್ಲ ಕಣ್ಣೊಳಗದರ ಬಣ್ಣ ಮಾಸಿಲ್ಲ.
ಜಾವ ನಾಕಕ್ಕೇ ಆಕಳಿಸುವ ಹುಡುಗನ ಬಂಗಾರದ ಮೈಬಣ್ಣ
ಬೆಟ್ಟದ ಜೋಪಡಿಗಳಿಂದೆದ್ದು ನಲಿವ ಬಿಸಿಹಬೆಯ ಮಂಜು
ನಾಕಕ್ಕೆ ಇಲ್ಲಿಂದ ಬರೇ ಅರ್ಧಗೇಣು
ಮುಟ್ಟಿದರೆ ಕೈಗೆಟಕುವ ಶಿಲ್ಲಾಂಗಿನ ಸೂರ್ಯೋದಯ. ~
27-07-2016 | Lyndhurst estate | Shillong
ಮುಂಜಾನೆ ಮೂರೂ ಮುಕ್ಕಾಲಿಗೆಲ್ಲಾ ಎಚ್ಚರವಾಗಿಬಿಟ್ಟಿತು. ಹೆಚ್ಚಲ್ಲದಿದ್ದರೂ ಕೆಲವೇ ಪಕ್ಷಿಗಳ ಕಲರವ ಉಷಾಕಾಲದ ರಂಗು ಅದಾಗಲೇ ಶಿಲ್ಲಾಂಗಿನ ಮುಗಿಲಿಗೆ ಚಾಚಿಕೊಂಡಿತ್ತು. ಲಿಂಡ್ ಹರ್ಸ್ಟ್ ಎಸ್ಟೇಟಿನ (Lyndhurst Estate) ಮರದ ಬಂಗಲೆಯಲ್ಲಿ ಇದ್ದವರೇ ಇಬ್ಬರು. ಗೆಳೆಯ ದೇವೇಂದ್ರರನ್ನು ಎಬ್ಬಿಸುವ ಗೋಜಲಿಗೆ ಹೋಗದೆ ನನ್ನ ರೂಮಿನಿಂದಲೇ ಹೊರಕ್ಕೆ ಇರುವ ಬಾಗಿಲನ್ನು ತೆರೆದು ಹೊರಕ್ಕೆ ಬಂದೆ. ( ಲಿಂಡ್ ಹರ್ಸ್ಟ್ ಎಸ್ಟೇಟಿನ ಬಗ್ಗೆಯೇ ಒಂದು ಅಧ್ಯಾಯ ಬರೆಯಬೇಕಿದೆ , ಅವಾಗ ಈ ಬಾಗಿಲುಗಳ ಬಗ್ಗೆ ಮಾತಾಡೋಣ ) ಥಂಡಿ ಹವೆಯಾದರೂ ಅದು ಚುಚ್ಚುವ ಚಳಿಯಲ್ಲ. ಆಕಾಶದ ತುಂಬೆಲ್ಲಾ ಬಾಣ ಬಿರುಸುಗಳ ಪರಿಷೆಯಾದಂತೆ ಕಣ್ಣಿಗೆ ಹಬ್ಬವೆನಿಸಿತು. ನನ್ನ ಕ್ಯಾಮೆರಾ ಹಿಡಿದು ಮಂಜು ಸುರಿವ ಮಬ್ಬಿನಲ್ಲಿ ಹೂವು ಹುಳ -ಹುಪ್ಪಟೆ, ಎಸ್ಟೇಟಿನ ರಸ್ತೆ ಮುಗಿಲು ಇತ್ಯಾದಿಗಳನ್ನು ಕ್ಲಿಕ್ಕಿಸುತ್ತಾ ನಿಂತೆ. ಮಂಜಿನಲ್ಲಿ ನಿಲ್ಲಿವುದು ನನಗೆ ಪ್ರಯಾಸಕರ ಸಂಗತಿ. ಸೈನಸ್ ಸಮಸ್ಯೆ ಜಾಸ್ತಿಯಾದೀತೆಂಬ ಭಯ. ಅಲ್ಲದೆ ಅದು ಮುಂಗಾರಿನ ಸಮಯ. ಮಳೆ ಮತ್ತು ಮಂಜು, ಸೈನಸ್ ಗೆ ಮಾರಿಗಳು! ಆದರೆ ಹಾಗೇನು ಹೆಚ್ಚು ತೊಂದರೆಯಾಗಲಿಲ್ಲ. ತುಂಬಾ ಖುಷಿಯಾಗಿ ಒಂದಷ್ಟು ಹೊತ್ತು ಅಡ್ಡಾಡಿ ರೂಮಿನ ಮುಂಭಾಗ ಇದ್ದ ಮರದ ಮೆಟ್ಟಿಲುಗಳ ಮೇಲೆ ಕುಳಿತು ಕವಿತೆಯೊಂದನ್ನು ಮೊಬೈಲ್ ನಲ್ಲಿ ಟೈಪಿಸುತ್ತಾ ಕುಳಿತೆ. ಯಾಕೋ ಊರು ನೆನೆಪಾಗಿ ಬಿಟ್ಟಿತು. ಅಪರೂಪಕ್ಕೆ ಭಾಳ ದೂರ ಅದೂ ಮೊದಲ ಬಾರಿ ಕನ್ನಡನಾಡಿನಿಂದ ಇಷ್ಟು ದೂರ ಬಂದಿದ್ದು.
ಮುಖ ಸಪ್ಪೆಯಾಗುವಷ್ಟರಲ್ಲಿ ದೇವೇಂದ್ರ ಬಂದರು.
''ಹೊ ನೀವು ಆಗಲೇ ಎದ್ದಿದ್ದೀರಾ?
ಎನ್ನುತ್ತಾ ನಿದ್ದೆ -ಸೊಳ್ಳೆ - ಚಳಿ - ಕಾಲಮಾನದ ಬದಲಾವಣೆ ಕುರಿತು ಹರಟುತ್ತಾ' ಲಿಂಡ್ ಹರ್ಸ್ಟ್ ಎಸ್ಟೇಟಿನ ನೋಡು ದಿಬ್ಬದ (view point ) ಬಳಿಗೆ ಕರೆದೊಯ್ದರು. ಅಲ್ಲಿಂದ ಬಹುತೇಕ ಶಿಲ್ಲಾಂಗ್ ನ ಮುಖ್ಯ ಭಾಗ ಕಾಣಿಸುತ್ತದೆ. ಆದರೂ ಶಿಲ್ಲಾಂಗ್ ಅನ್ನುವುದು ಅಡಿಗರ ''ಮಲೆಘಟ್ಟ ಸೋಪಾನ ಇಳಿದಿಳಿದು ಮೂರೇ ಉರುಳು '' ಎನ್ನುವ ಭೂಮಿಗೀತ ಪದ್ಯದಂತೆ ಇಲ್ಲಿ ಉರುಳಿದರೆ ಸಾವಿರಾರು ಉರುಳು ಕೊನೆಗೆ ಜೀವಕ್ಕೂ ಉರುಳು ಗ್ಯಾರಂಟಿ. ಈ ಮಲೆಯ ವಯ್ಯಾರವನ್ನು ನೋಡಲು ಕಣ್ತುಂಬಿಕೊಳ್ಳಲು ಕರೆಂಟ್ ವೈರ್ ಗಳು ಮಾತ್ರ ಬಿಡುವುದಿಲ್ಲ. ಇಡೀ ಕಣಿವೆಗಳನ್ನ ಈ ವೈರುಗಳು ತಮ್ಮ ಅಷ್ಟದಿಗ್ಬಂಧನಗಳಲ್ಲಿ ಬಂಧಿಸಿಬಿಟ್ಟಿವೆ. ನೋಡಲು ಫೋಟೋ ತೆಗೆಯಲು ಎಲ್ಲೇಲ್ಲೂಯೂ ಅಡ್ಡಿಯೂ ಅಡ್ಡಿ. ಆದರೂ 'ಈಶಾನ್ಯ ಭಾರತ ವಿದ್ಯುಚ್ಛಕ್ತಿ ನಿಗಮ ನಿಯಮಿತ (North Eastern Electric Power Corporation Ltd) ಈ ಗುಡ್ಡಗಾಡಿನ ರಾಜ್ಯದ ಮೂಲೆ ಮೂಲೆಗಳಿಗೆ ವಿದ್ಯುತ್ ಒದಗಿಸಿದೆ. ರಸ್ತೆ ಮಾರ್ಗವೇ ಇಲ್ಲದ ಎಷ್ಟೋ ಕಡೆಗೆ ವಿದ್ಯುತ್ ಹರಿಯುತ್ತಿದೆ. ಇದು ಕಣ್ಣಾರೆ ನಾನು ಕಂಡದ್ದು. ಗಟ್ಟಿಯಾಗಿ ನಿಲ್ಲಿಸಿದ ವಿದ್ಯುತ್ ಕಂಬಗಳು ಚಾರಣ ಮಡಿದ ಬಹುತೇಕ ಪ್ರದೇಶಗಳಲ್ಲಿ ಕಂಡುಬಂದುವು. ನೋಡುದಿಬ್ಬದಿಂದ ಲಿಂಡ್ ಹರ್ಸ್ಟ್ ಎಸ್ಟೇಟಿನ ಇತಿಹಾಸ, ಬ್ರಿಟಿಷರ ಆಳ್ವಿಕೆ , ಮಿಷನರಿಗಳ ಸಾಹಸ ಮತ್ತು ಮತಾಂತರ ಇತ್ಯಾದಿಗಳನ್ನು ಮಾತನಾಡುತ್ತಾ ಮತ್ತದೇ ನಂಬರ್ 6 ರ ಬಂಗಲೆಯ ಮುಂದೆ ನಿಂತೆವು.
ಶಿಲ್ಲಾಂಗಿನಲ್ಲಿ ಬೆಳಿಗ್ಗೆ ತಿಂಡಿ ಹೋಟೆಲ್ ಹುಡುಕುವುದು ಚೂರು ಕಷ್ಟ. ಮಂಡ್ಯದಲ್ಲಿ ಬೆಳಿಗ್ಗೆಯೇ ಮುದ್ದೆ ಉಣ್ಣುವ ಹಾಗೆ ಅವರಲ್ಲೂ ಊಟದಿಂದಲೇ ದಿನ ಶುರುವಾಗುತ್ತದೆ. ಹಂದಿ ಮಾಂಸದ ಅಡುಗೆ, ನಿತ್ಯದ ರೂಢಿ. ಅಡುಗೆ ಮಾಡುವ ಬಡಿಸುವ ತಿನ್ನುವ ರೀತಿಯಲ್ಲಿ ಭಾರತೀಯ ಮತ್ತು ಮಂಗೋಲಿಯನ್ ರೀತಿ ರಿವಾಜುಗಳು ಬೆರೆತುಕೊಂಡಿವೆ. ತಿಂಡಿ ಸಿಗೋದಿಲ್ಲವಾಗಿ ನಾವು ಯಾವುದೇ ಹೋಟೆಲ್ ಅನ್ನು ಹುಡುಕುವುದಕ್ಕೆ ಹೋಗಲಿಲ್ಲ. ದೇವೇಂದ್ರರ ಮನೆಯ ಅಡುಗೆಯಾಕೆ ಬಂಗಾಳಿಯವರು. ನಾನಿದ್ದ ಮೊದಲ ದಿನ ಕೆಲಸಕ್ಕೆ ಬಂದಿರಲಿಲ್ಲ. ಹಾಗಾಗಿ ಬ್ರೆಡ್ ಬಟರ್ ತಿನ್ನೋಣ ಎಂದ ದೇವೇಂದ್ರರ ಯೋಜನೆಯನ್ನು ನಯವಾಗಿ ಒಪ್ಪಿಕೊಂಡು ಬ್ರೆಡ್ ಜೊತೆಗೆ ಆಮ್ಲೆಟ್ ಮಾಡಿ ಅದಕ್ಕೆ ಈರುಳ್ಳಿ ಟೊಮೊಟೊ ಸಲಾಡ್ ಮಾಡಿ ತಿಂದು 'ಇಂದಿನಿಂದ ಮೂರು ದಿನದ ಅಡುಗೆ ನಂದೇ. ಅಡುಗೆಯವರು ಬರುವುದು ಬೇಡ' ಎಂದೆ. 'ಅದಕ್ಕೇನು ನಿಮ್ಮ ಅಡುಗೆ ಫೋಟೋ ನೋಡಿ ಸಾಕಾಗಿದೆ ನೀವೇ ಮಾಡಿ' ಎಂದು ದೇವೇಂದ್ರ ನಕ್ಕರು . ಅದಾಗಲೇ 8.00 ಗಂಟೆಯಾಗಿತ್ತು. ಅಫೀಸ್ ನಲ್ಲಿ ರಜೆ ಸಿಕ್ಕದೆ ಇದ್ದುದರಿಂದ ದೇವೇಂದ್ರ ನನಗೆ ಒಂದಷ್ಟು ಮಾರ್ಗ, ಮಾಹಿತಿ ಕೊಟ್ಟು ಕಳುಹಿಸಿಕೊಟ್ಟರು. ಇಡೀ ದಿನ ಒಬ್ಬನೇ ಎರಡು ಜಿಲ್ಲೆಗಳನ್ನು ಸುತ್ತಬೇಕಾಗಿತ್ತು. (ಖಾಸಿ ಮತ್ತು ಜಾಂತಿಯಾ ). ನಾನು ಹೊರಟಿದ್ದ ಕಾರಿನ ಡ್ರೈವರ್ ಕಾರ್ತಿಕ್ ಮೂಲತಃ ಬಂಗಾಳದವರು ಈಚಿನ ವರ್ಷಗಳಲ್ಲಿ ಬದುಕಿನ ನಿಮಿತ್ತ ಶಿಲ್ಲಾಂಗ್ ಗೆ ಬಂದು ನೆಲೆಸಿದ್ದಾರೆ. ಇಲ್ಲಿನ ಪ್ರವಾಸೋದ್ಯಮ ಅವರಿಗೆ ಬದುಕು ಕಲ್ಪಿಸಿದೆ. ಆದರೆ ಸ್ಥಳೀಯರಿಗೆ? ಇಲ್ಲಿ ಹೆಚ್ಚು ಹೆಚ್ಚು ವ್ಯವಹಾರ ಮಾಡುವವರು ನೇಪಾಳಿಗಳು ಮತ್ತು ಬಂಗಾಳಿಗಳು. ಮೇಘಾಲಯದ ಸ್ಥಳೀಯ ಬುಡಕಟ್ಟು ಜನರಿಗೆ ಆದ್ಯತೆ ಸಿಕ್ಕುತ್ತಿಲ್ಲ. ಅಸಲಿಗೆ ಅವರಿಗೆ ಅವರ ಭಾಷೆಯೇ ಇನ್ನು ಅಧಿಕೃತವಾಗಿಲ್ಲ. ಶಾಲಾ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲಿದ್ದೆ. ದಕ್ಷಿಣ ಭಾರತದವರಂತೆ ಇವರೂ ಕೂಡ ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸುತ್ತಾರೆ. ಈಶಾನ್ಯ ಭಾರತ ರಾಜ್ಯಗಳಿಗೆ ಒಕ್ಕೂಟದ ಸರ್ಕಾರ ಕಾಯಕಲ್ಪ ನೀಡಬೇಕಿದೆ.
ಕಾರ್ತಿಕ್ ಗೆ ಒಳ್ಳೆಯ ಸಂವಹನ ಕೌಶಲವಿದೆ. ಆತ ಬಂಗಾಳಿ, ಹಿಂದಿ, ಖಾಸಿ ಸೇರಿದಂತೆ 5-6 ಭಾಷೆಗಳನ್ನು ಮಾತನಾಡಬಲ್ಲ. ಆದ್ರೆ ಇಂಗ್ಲಿಷ್ ಬಾರದು. ನನಗೋ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಚೂರು ಹರಕು ಇಂಗ್ಲಿಷ್ ಸಂಭಾಳಿಸಬಲ್ಲೆ. ಶಿಲ್ಲಾಂಗ್ ನ ಓಣಿ ಕಣಿವೆಗಳಲ್ಲಿ ಏರುತ್ತಾ ಇಳಿಯುತ್ತಾ ಹೊರೆಟೆವು... ಆಗಷ್ಟೇ ಸೂರ್ಯ ಮಲೆಗಳ ನಡುವೆ ಕಂಡು ಬಂದ ಮತ್ತೆ ಥಟ್ಟನೆ ಮಾಯವಾದ.
ಲಿಂಡ್ ಹರ್ಸ್ಟ್ ಎಸ್ಟೇಟ್ - 4
No comments:
Post a Comment