Friday, April 26, 2013

ಬುದ್ದ ನಕ್ಕಿರಲಿಲ್ಲವಂತೆ ಪ್ರವರ ...


ಬುದ್ದನ ಉತ್ತರ :

ನೀನೆಂದು ಕಂಡೆ ನನ್ನ ನಗುವ ..
ಸುಳ್ಳು ಹೇಳಬೇಡ...
ಈ ಜಗತ್ತಿನಂತೆ
ನೀನೂ ಸುಳ್ಳಾಗಬೇಡ!

ನಾನೆಂದೂ ನಕ್ಕಿರಲಿಲ್ಲ
ನಕ್ಕೆನೆಂದು ಭ್ರಮಿಸಿದರು.
ಸುಖದುಃಖ ಇಲ್ಲವಾದ ಮೇಲೆ
ನಗು-ಅಳು ಎಲ್ಲಿಯವು?

ಅಜ್ಞಾನ ಕಾಲದಲಿ ವಿಲಾಸಗಳನು
ಬಿಟ್ಟೆ..ವಿಜ್ಞಾನದ ಕೂಸು ನೀನು
ಯಾವುದನ್ನೂ ಬಿಡಲಾರೆ..
ನನ್ನಂತೆ ಬದುಕುವವರು ಸಾವಿರ
ಇದ್ದಾರೆ.. ಸಿಕ್ಕಿದ್ದರಲ್ಲಿ ಸುಖ ಕಂಡು
ನಿನ್ನ ನಾಗರೀಕತೆಗಳಾಚೆ
ತಿಟ್ಟುತೆವರುಗಳಲಿ

ಅರಳಿ ಮರದಡಿ ಕೂತದ್ದು ಮಾತ್ರವಲ್ಲ
ಬದುಕು ಕೂಡ ಧ್ಯಾನವೇ!
ನೀನು ಧ್ಯಾನಿಸಿದಷ್ಟು ನಿನ್ನದು..

ತತ್ವ ತಾಮಸಗಳು ನಂಗೆ ಗೊತ್ತಿಲ್ಲ
ನಾನು ಬಾಳಿ ಬಿಟ್ಟದ್ದು ಬದುಕು.
ನಿನ್ನ ಆಸೆ ಜೀವಂತವಾಗಿರುವವರೆಗೂ
ನನ್ನ ನಾಣ್ಯ ಚಲಾವಣೆಯಲ್ಲಿರುತ್ತದೆ.

ಎದೆ ತುಂಬಿದ ಕಾರಿರುಳ ಬಯಕೆಗಳ
ಬಯಲಿಗೆಸೆದು ನೋಡು...
ನೀನು ನೀನಾಗುತ್ತಿ.. ನಾನಾಗಲಾರೆ!

ಬಿಡಿ ಹೂ: 4

ಕ್ಷಮಿಸಿಬಿಡು,
ಭಗವಂತ .. ಪಾಪಪ್ರಜ್ಞೆಯಿರದ
ಹೊರತು ಕವಿಯಾಗಲಾರೆ!

ಬೇಲಿಯ ಹೂ

ಕಳೆದುಕೊಂಡು ಪರಿತಪಿಸುತ್ತಿರುವ
ಒಲವನ್ನು ಒಮ್ಮೆ
ಕರುಣಿಸಿಬಿಡು ಭಗವಂತ
ನೇಸರನ ಎಳೆಬಿಸಿಲಿಗೆ ಕಾಯುತ್ತಿರುವ
ಬೇಲಿಯ ಹೂ, ನಾನು.
ಅರಳಿಬಿಡುತ್ತೇನೆ
ಬರುವ ಮುಂಗಾರಿಗೆ ಸಿಕ್ಕು
ಉದುರುವ ಮುನ್ನ.
ಇದೊಂದು ಅಮೃತಗಳಿಗೆ
ನನ್ನದಾಗಲಿ, ನಿನ್ನೊಲವಿನಿಂದ
ಅರಳಿದ್ದೇ ಆದರೆ
ಮುಂದಿನ ಏಳೇಳು ಜನುಮವೂ
ನಿನ್ನ ತಿರುವಡಿಯಲ್ಲಿ ಹೂವಾಗುತ್ತೇನೆ. ~ RP

ಬೋಧಿಯ ಅರಸುತ್ತಾ

ಸುಮ್ಮನೆ ಪಯಣಿಸುತ್ತಿದ್ದೇನೆ, ಭೂಮಿಯಂತೆ
ನನಗೆ ನೆಲೆಯಿಲ್ಲ
ಚಕ್ರ ನಿಲ್ಲುವುದಿಲ್ಲ
ಅರಿವಿಲ್ಲದೆ ಸಾಗುವ ಈ ಹಾದಿಗುಂಟದಲಿ
ನೀನ್ನೆನ್ನ ಒಳಗಿನಲಿ
ಸಣ್ಣ ಹೂ ಸೊಡರಿನಲಿ
ಬೆಳಗು ದಾರಿಯ ಧಮ್ಮಕಕ್ಷೆಯ ನಡಿಗೆಗೆ
ಬೋಧಿಸತ್ವಾ ಎದೆ
ತುಂಬಿದರೆ ಸಾಲದು
ಬುದ್ದಿ ಭ್ರಮಿಸಬೇಕು ನಿನ್ನ ತಿರುವಡಿಯಲ್ಲಿ! ~ RP

ಬಿಡಿ ಹೂ: 3

ಭ್ರಮೆಯ ಬಂಧನದಿಂದ ಮುಕ್ತಿಗೊಳಿಸಿ 
ಮತ್ತೂ ಪ್ರಪಂಚವ ತೋರಿಸಿದ!
ಬೋಧಿಧರ್ಮ ಇಳಿದುಬಿಡು ಎದೆಗೆ

ಕಾಡಬೇಡ ಕಾಯಿಸಬೇಡ. 
ತೆರೆದ ಬಾಗಿಲು ನಾನು
ಅರಳಿಯ ಬೀಜ ನೆತ್ತಿಯಲಿ ಚಿಗುರಿಲಿ.

ಬಿಡಿ ಹೂ:2

ಕೆಂಡಸಂಪಿಗೆಯ
ಘಮಕ್ಕೆ
ಮನದೊಳಗೆ ಮೈನೆರೆದೆ!

ಬಿಡಿ ಹೂ: 1

ನಿನ್ನ ಕರುಣೆ
ತೊನೆವ ಭತ್ತದ ತೆನೆಯಾಗಲಿ
ತುಂಬಿ ಹರಿವ ನದಿಯ ನಡುವಾಗಲಿ
ಎಲ್ಲರ ಎದೆಯಲಿ ನಗುವ ಹೂವಾಗಲಿ ...
ಬೋಧಿಧರ್ಮ.