Sunday, May 11, 2014

ಬಿಡಿ ಹೂ:15

ಕಣ್ಣುಗಳ ಕಂಡು
ತಳಮಳಿಸಿದ
ಕತ್ತಲೆಯು
ಬೆತ್ತಲಾಗುವ ಭಯದಿ
ಬೆಳಕನರಸುತ್ತಿದೆ!

ಗಾಥಾ ಸಪ್ತಶತಿ : ನಾಂದಿ ಪದ್ಯ



1. ಕೆಂಪನೆ ಕೋಪದ ಕಮಲಲಕ್ಷಿತ ಪಶುಪತಿಗೂ,
ಚಂದಿರನ ಕಾಂತಿಯಿಂದ ಕಂಗೊಳಿಸುತ್ತಿವ ಸಿರಿಗೌರಿಗೂ
ಈ ಸಂಜೆಯಲ್ಲಿ ಬೊಗಸೆ ತುಂಬಿದ ಅರ್ಘ್ಯ ನೀಡುತ್ತಾ ನಮಸ್ಕರಿಸುತ್ತೇನೆ.

2. ನಾಚಿಕೆಯಾಗದೆ ಅವರಿಗೆ ಪ್ರೇಮದ ಫಿಲೋಸಫಿಯನ್ನು
ಮಾತನಾಡಲೊಲ್ಲದವರಿಗೆ, ಪ್ರಾಕೃತ ಪ್ರೇಮಕಾವ್ಯದ ಅಮೃತದ
ಸವಿಯನ್ನು ಕೇಳದವರಿಗೆ, ಓದದವರಿಗೆ.

3. ಕೋಟಿಗಟ್ಟಲೆ ಕವಿತೆಗಳನ್ನು 'ಅಲಂಕಾರ'ದ
ಕೊಳವೆಯಲ್ಲಿ ಊದಿ ನಿಗಿನಿಗಿ ಕೆಂಡಗಳನ್ನೇ
ಆರಿಸಿದ್ದಾನೆ ಕವಿವತ್ಸಲನಾದ 'ಹಾಲ'.

4. ನೋಡಿಲ್ಲಿ.. ಹೆಣ್ಣುಕೊಕ್ಕರೆಯು ಎಷ್ಟು ಸೊಗಸಾಗಿ
ಸ್ಥಿರವೂ, ಸ್ತಬ್ದವೂ ಆಗಿ, ಆ ತಾವರೆ ಎಲೆಯ ಮೇಲೆ
ಕುಳಿತಂತೆ ಕಾಣಿಸುತ್ತಿದೆ.
ಕಲೆರಹಿತ ಹಸಿರಹವಳದ ಹೂದಾನಿಯ ಮೇಲೆ
ಇತ್ತ ಶಂಖೂವಿನಂತೆ.

5. ಕಾಮಕೇಳಿಯಲ್ಲಿ ತೊಡಗಿರುವ
ಈ ಲಲನೆಯರ ಕಣ್ಣಿನ ಸೌಂದರ್ಯ ಅರಳಿದ
ನೀಲೋತ್ಪಲಗಳ ದಳಗಳನ್ನು ಹೋಲುತ್ತಿವೆ
ಸುಖಕ್ಕೆ ಸಿಕ್ಕು ರೆಪ್ಪೆ ಮುಚ್ಚದಿರಲಪ್ಪ!

6. ನೀನು ಆ ಗೋರಂಟಿಯ ಗಿಡದ ಬಳಿ
ನಿಂತು ಅಷ್ಟು ಉತ್ಕಟವಾಗಿ ಹುಡುಕುತ್ತಿರುವುದು
ನಿನಗಾಗಿ ಅಲ್ಲ, ಅವಳ ಪ್ರೀತಿಯ ತೆಕ್ಕೆಗಾಗಿ
ಅಲ್ಲವಾ? ಅದಕ್ಕೆ, ನಿನ್ನವಳು ತನ್ನ ತಾವರೆಯಂತ
ಮೊರೆಯನ್ನು ಅತ್ತ ತಿರುಗಿಸಿ ನಗುತ್ತಿದ್ದಾಳೆ.

ರಸಿಕ ಮಾರ್ಗ ~2

ಗಂಧದ ಘಮಲ ಕದ್ದು
ಕುಪ್ಪಸದೊಳಗೆ ತುಂಬಿಕೊಂಡಿದ್ದಾಳೆ
ರಾತ್ರಿಯ ನಶೆಯಲ್ಲಿ
ಗಂಧವ ಹೀರಲು
ತುಟಿಗಳು ಹೊಂಚುಹಾಕುತ್ತಿವೆ!

ರಸಿಕ ಮಾರ್ಗ ~ 1

ಡಬ್ಬಿಯಿಂದ ಜೇನ ತೆಗೆದು
ಮಗುವಿನ ಹಾಗೆ ಬೆರಳು ಚೀಪುತ್ತಾ
ಕುಳಿತಿದ್ದೆ..
ವೈಶಾಖದ ಬೇಸಗೆ ರಾತ್ರಿ.
ಇವಳು ಧಾವಿಸಿದ್ದೇ ತಿಳಿಯಲಿಲ್ಲ,
ನೀರಿಳಿದು ಗದ್ದೆ ತೆವರಿ ಕಿತ್ತಾಗಲೇ ಗೊತ್ತಾಗಿದ್ದು
ಹೆಣ್ಣು ಹೂವಲ್ಲ, ದುಂಬಿ!!

ಬಿಡಿ ಹೂ:14

ಕಿಡಿಗೇಡಿ ಕಾಮನಬಿಲ್ಲು
ಅವಳ ಬೆನ್ನಿನಲ್ಲಿ ಮೂಡಿದೆ..
ನಡೆದ್ದಿದ್ದೇನು?,
ಮಳೆ ನಿಂತ ಮುಂಜಾನೆ !

ಬಿಡಿ ಹೂ:13

ಈ ಬಿರುಬೇಸಗೆಯ ಝಳಕ್ಕೆ
ಒಳಕೋಣೆಯ ಹೂ ಪಕಳೆಗಳು
ಕಳಚಿ ಬೀಳುತ್ತಲೇ ಇವೆ..
ಕತ್ತಲಲ್ಲೂ ಮಿಂಚುತ್ತಿವೆ
ನಗ್ನ ಶಲಾಕೆಗಳು! ~

ಮುಗಿಲ ಹಣ್ಣು

ಹಗಲು ಬಣ್ಣವ ತೊಟ್ಟ
ಮುಗಿಲು
ತೊಟ್ಟು ಕಳಚಿ
ಕತ್ತಲ ಕೊಳಕ್ಕೆ ಬಿತ್ತು

ಅಗಲ ಬಾಯಿ ತೆಗೆದ
ಹುಣ್ಣಿಮೆಯ ಆಮೆ
ಒಮ್ಮೆಗೆ ಅದ ನುಂಗಿ
ಕಣ್ಣು ತೆರೆದು ನೋಡೆ
ನಕ್ಷತ್ರಗಳೆಲ್ಲಾ ಹುಳಗಳಾಗಿ
ಕಾಣಲು

ಹಾಲುಪಥದ ಪುರಾತನ
ಕಪ್ಪೆ
ಜಾರಿತು ಕೊಳಕೆ
ಏನೋ ಸದ್ದು !!