Saturday, March 8, 2014

ಪೀರಿಯಡ್ಸ್ ಕವಿತೆಗಳು ~3

ಪೀರಿಯಡ್ಸ್ ಕವಿತೆಗಳು
**************

ಮೂರೂ ದಿನ ಇವಳೇ ದೇವರು!
ಪಾದ್ಯ..ಅರ್ಘ್ಯ..ಆಚಮನ.. ಅಭ್ಯಂಜನ
ನೈವೇದ್ಯ ಷೋಡಶೋಪಚಾರಗಳು
ಇಷ್ಟಲ್ಲದೇ ಕೊನೆಗೆ
ಏಕಾಂತ ಸೇವೆ ತಪ್ಪಿಸುವುದಿಲ್ಲ !!

***

ಹಾಸಿಗೆಯಂತೆ ,
ಚಾಪೆಯಲ್ಲೂ ನನಗೆ ಪಾಲಿದೆ...
ನನ್ನೆದೆಯ ಮೇಲೆ ತಲೆಯಿರಿಸದ ಹೊರತು
ನಿದ್ದೆ ಹತ್ತುವುದಿಲ್ಲ ಅವಳಿಗೆ!

***

ನಾನು ಒಳ್ಳೆ ಬಾಣಸಿಗ.
ಅದರೂ ಅವಳ ಆದೇಶಗಳು
ಅಡುಗೆ ಮನೆಯತ್ತ ತೋರುತ್ತಲೇ ಇರುತ್ತವೆ,
ತಳ ಹಿಡೀತು, ಉಕ್ಕೀತು .. ಉಪ್ಪು ನಾಲ್ಕೆ ಕಾಳು..
ಮುಗಿಸಿ ಉಣ್ಣುವಾಗ ನಳಪಾಕ.

****

ಬೆಚ್ಚಗೆ ಕೈ ಹಿಡಿದಪ್ಪಿ 'ಕವಿತೆ ಹೇಳೋ' ಎಂದು
ಹೊಗಳಿಸಿಕೊಳ್ಳುತಾ ಮೂರು ರಾತ್ರಿಗಳ ,
ಮೂರು ಗುಲಗಂಜಿ ಗಳಿಗೆ ಮಾಡುತ್ತಾಳೆ,
ಮಾಟಗಾತಿ!

****

ರಾತ್ರಿಯ ಸಮುದ್ರಸ್ನಾನಕ್ಕೆ
ಮತ್ತೆ ಮಡಿಯಾಗುತ್ತಿದ್ದೇನೆ..
ಮೂರು ದಿನಗಳ ನಂತರ!

2 comments:

  1. ಒಮ್ಮೆಲೇ ಭಾವ ಕಡಲನ್ನು ಉಕ್ಕಿಸಿ ಏನೂ ಹೇಳಲಾಗದ ಸ್ಥಿತಿಗೆ ತಲುಪಿಸುವ ಶಕ್ತಿ ನಿಮ್ಮ ಸಾಲುಗಳಿಗೆ ರಾಜೆಂದ್ರ....ಬರೆಯುತ್ತಿರಿ

    ReplyDelete