Monday, January 25, 2010

ಕಾವ್ಯ ಪ್ರೇರಣೆಯ ಕ್ಷಣಗಳು....

ಜನವರಿ ೨೪, 2010 ರ ಭಾನುವಾರ ನಾಗಮಂಗಲದ ಎಚ್. ಬೊಮ್ಮನಹಳ್ಳಿ ಯ ಶ್ರೀ ಅಶೋಕ್ ರವರ ಮನೆಯಂಗಳದಲಿ ನಾಗಮಂಗಲದ ಕಾವ್ಯಾಸಕ್ತರ ಬಳಗ ಏರ್ಪಡಿಸಿದ್ದ "ಕಾವ್ಯ ಪ್ರೇರಣೆ" ಯ ಕಲಾಪದ ಚಿತ್ರಗಳು ಇಗೋ ಇಲ್ಲಿವೆ..








ಕವಿ
ಎಸ್ ಮಂಜುನಾಥ್ ರವರಿಂದ... ಕಾವ್ಯ ಕಾರಣ!




ಎಸ್ ಮಂಜುನಾಥ್ , ಎಚ್.ಎಸ್.ವೆಂಕಟೇಶಮೂರ್ತಿ , ಮತ್ತು ನಾ.ಸು. ನಾಗೇಶ್

















Tuesday, December 29, 2009

ಇಷ್ಟೇ!


ನನ್ನೆದೆಯಲ್ಲಿ ಬುದ್ದ ನಗೆಯ
ಅಲೆಯೊಂದು ಇದೆ.
ಅವಳ ಅನಿವಾರ್ಯತೆ ಬಿಟ್ಟು
ಆಸೆಗಳಿಲ್ಲ!

ದೇಹದ ತುಂಬಾ
ಬೆಳೆದು ನಿಂತ ರೋಮಗಳಿಗೆ
ಅವಳ ಬೆವರ ಹನಿಗಳು ಬೇಕು
ಅಷ್ಟೆ!

ನಾನು ನಿರುಮ್ಮಳವಾಗಿ ಬದುಕುತ್ತೇನೆ
ಕಾರಣ,
ನನ್ನೆದೆಯಲ್ಲಿ ಬುದ್ದ ನಗೆಯ
ಅಲೆಯೊಂದು ಇದೆ.

ಗಾಂಧಿ ಮತ್ತು ಸ್ವಾತಂತ್ರ್ಯ


ಕುಂಕುಮ ಭೂಮಿಯ ತುಂಬಾ
ಮಲ್ಲಿಗೆ ಬಳ್ಳಿಗಳ ನೆಟ್ಟ ,
ಅವ ಕೊಟ್ಟ ಬಿಳಿಯ ಹೂಗಳು
ನಮ್ಮ ರಕ್ತ ಸಿಕ್ತ
ಕೈಗಳಲಿ ನಗುತ್ತಲಿವೆ!

ಅವನ ಎದೆಗೂಡಿನ
ಎಲುಬುಗಳಿಂದ ಬಿಡಿಸಿಕೊಂಡ
ಪಾರಿವಾಳದ ರೆಕ್ಕೆಗಳು
ನಮ್ಮ ತೆಕ್ಕೆಗಳಲಿ ಬಂಧಿ..!!
ಮುಷ್ಟಿಗಳಲಿ ಸಿಕ್ಕಿಕೊಂಡಿದೆ,
ಅದರ ಉಸಿರು.

ಉರಿವ ನಮ್ಮ ಚರ್ಮದ
ಮೈಬಿಸಿಗೆ ಸೀದುಕಂಟಾದ
ಅದರ ಪುಕ್ಕಗಳ ವಾಸನೆ..
ಬೆತ್ತಲಾಗಿದೆ ಹಕ್ಕಿ,
ಬಿಳಿಯ ಚಾದರ ಹೊದ್ದಿಸುವ
ಮೊದಲು ಮುಷ್ಠಿ ಸಡಿಲಿಸಿ!!!

ಪ್ರೇಮ ಪ್ರಸಂಗಗಳು-2


ದೊಂದು ನಿರ್ಜನ ನದಿ ತೀರದ ಹಾಸುಗಲ್ಲು... ಹನಿಗಳಷ್ಟೇ ನೀರು ಜಾರುವಲ್ಲಿ ಮಲಗಿದಂತೆ ಕುಳಿತ ಅವರಿಬ್ಬರು ಸಮುದ್ರ ಸೇರುವ ಕುರಿತು ಚಿಂತಿತರು. 'ಬದುಕು ದೊಡ್ಡದು... ಸಮುದ್ರದಷ್ಟು!' ಭೀತಿಯಿಂದ ಅವಳು ವ್ಯಾಖ್ಯಾನಿಸಿದಳು. ಮೊಗದ ಮೇಲೆ ಬೀಳುವ ಹನಿಗಳ ಅನಂದದಲ್ಲೇ ಆತನೆಂದ,' ನಾನೊಟ್ಟಿಗಿರುತ್ತೇನೆ ಬಾ. ಅಂಗೈಲಿ ಪ್ರಪಂಚ ತೋರಿಸುತ್ತೇನೆ ... ರಾತ್ರಿ -ಹಗಲುಗಳ ಹಂಗಿಲ್ಲದೆ !' ಆಕೆ ಈತನ ಭುಜಕ್ಕೆ ತಲೆಯೊರಗಿಸಿ ಕಣ್ಮುಚ್ಚಿದಳು. ಹುಡುಗನ ಮುಂದೆ ತೆರೆದುಕೊಂಡ ನೀಲವಿಸ್ತರ ಶರಧಿ... ಮೋಡ ಕವಿದಾಗಸದಲಿ ಮಿಂಚುಗಳು..*****

ಪ್ರೇಮ ಪ್ರಸಂಗಗಳು-1

ಹೂ ಮಾರುವ ಹುಡುಗ ಸಿರಿವಂತರ ಕೇರಿಯ ಹುಡುಗಿಯೊಬ್ಬಳಿಗೆ ನಿತ್ಯ ಮಲ್ಲಿಗೆ ದಂಡೆ ನೀಡುತ್ತಿದ್ದ, ಹಣ ಪಡೆದು...?! ಮಲ್ಲಿಗೆ ಮುಡಿದ ಆಕೆಯ ಕಣ್ಣ ತುಂಬ ಮಿಂಚಿನ ಬೆಳಕು , ರಿಕ್ತಕರನಾದ ಇವನ ಮನಸ್ಸಿನೊಳಗೆ ಹೂ ಮಳೆ...! ದಿನದಿನಗಳು ಉರುಳುತ್ತಲೇ ಪ್ರೀತಿ ಧಮನಿಧಮನಿಗಳಲು ವ್ಯಾಪಿಸಿ, ಬೆಳೆದು ಬೆಳದಿಂಗಳು ಸುರಿಯತೊಡಗಿತ್ತು.
ದಿನ ಮಲ್ಲಿಗೆ ಬದಲು ಗುಲಾಬಿ ನೀಡಲು ಮುಂದಾದ ಹುಡುಗನ ಕೈಗಳು ನಡುತ್ತಿದುದ ಗಮನಿಸಿದ ಹುಡುಗಿ ತಾನೆ ಕಸಿದು ಹೂ ಮುಡಿದಳು. ನಸುನಾಚಿದ ನಗುವೊಂದ ಆತನ ಕೈಗಿತ್ತಳು. ಮಲ್ಲಿಗೆ ಅಂಗಳದಿ ಚೆಲ್ಲಿತ್ತು! ಹುಡುಗನ ಸೈಕಲ್ಲಿನ ಹೂ ಬುಟ್ಟಿ ತುಂಬ ಗುಲಾಬಿಗಳು.

Friday, October 23, 2009

ಅವಳೆಂಬ ಮನೋವ್ಯಾಧಿ...

ಕೂಗುತಿಹ ರೈಲಿನ
ಪುಟ್ ಬೋರ್ಡಿನ ಮೇಲೆ
ಒಲವಿನ ಹಣತೆಯೊಂದು
ಬಿಮ್ಮನೆ ಕುಳಿತಿದೆ..!
ಬೀಸುವ ಬಿರುಗಾಳಿಗೆ
ಮೈಯೊಡ್ಡಿ ಎದೆಬಿರಿದು
ಉರಿಯುತ್ತಿದೆ...
ಉಸಿರಿನ ಜೀವಜಲದಲಿ!

ಬರುವಳೆಂಬ ನಿರೀಕ್ಷೆಯ
ಮನೋವ್ಯಾಧಿಗೆ,
ಬಿರುಗಾಳಿಯ ದಬ್ಬಿ ಹೊರ-
ಇಣುಕುತ್ತಿದೆ ಉರಿಯ ಜ್ವಾಲೆ.
ನನ್ನ ಸೆಳೆಯುತ್ತಿದೆ ನನ್ನಿಂದ
ಅವಳೆಡೆಗೆ...
ಹರಿವ ನೀರು ತಗ್ಗಿನೆಡೆಗೆ?

ಮೈಮೇಲೆ ಅವಳಿಟ್ಟ
ಚಿತ್ತಾರದ ರಂಗೋಲಿಯ
ಬಣ್ಣವಿನ್ನೂ ಅಳಿಸಿಲ್ಲ..
ಅಲ್ಲಿ ಚೆಲ್ಲಿದ ಎದೆಯ
ರಕ್ತ ಹೆಪ್ಪುಗಟ್ಟುವುದಿದೆ.

ಕಣ್ ರೆಪ್ಪೆಯ ಮೇಲೆ ಬರೆದ
ಕವಿತೆ ಅಳಿಸಲಾಗುವುದಿಲ್ಲ...
ಅವಳಿನ್ನೂ ಓದುವುದಿದೆ.

ಓಡುವ ರೈಲಿನ ಹಿಂದೆಯೇ
ನೆನಪುಗಳು ಮಾಸುತ್ತಿವೆ,
ಅವಳು ಮಾತ್ರ ಕರಗುತ್ತಿಲ್ಲ.

ಎಂಜಿನ್ ಕೂಗಿನ ಶಬ್ದಕ್ಕೆ
ಬೆಚ್ಚುತ್ತಲೇ, ಅಳುಕುತ್ತಲೇ ...
ಕುಳಿತಿದೆ ಹಣತೆ,
ಜೋಪಾನ ಮಾಡುವ
ಅವಳ ಕೈಗಳ ನಿರೀಕ್ಷೆಯಲಿ.

Monday, October 19, 2009

ನಾನು ಸದಾ ನಿನ್ನೊಂದಿಗೆ... ನೀನು ಸದಾ ನನ್ನೊಂದಿಗೆ !


ನಾನು ಸದಾ ನಿನ್ನೊಂದಿಗೆ... ನೀನು ಸದಾ
ನನ್ನೊಂದಿಗೆ , ನಾವಿಬ್ಬರೂ
ಸದಾ ಜಗತ್ತೆಂಬ ಮಾಯೆಯೊಂದಿಗೆ... ಹುಡುಕುತ್ತಲೇ ಸದಾ
ಬದುಕಿನ ಕವಲು ದಾರಿಗಳ ... ಹೆಣೆಯುತ್ತಲೇ
ಸದಾ ಸುಂದರ ಕನಸುಗಳ...
ನೋಡುತ್ತಲೇ ಸದಾ ಎಟುಕದ ತಾರೆಗಳ ... ಎಣಿಸುತ್ತಲೇ
ಸದಾ ಸಂಬಳದ ಅಂಕಿಗಳ ... ಮುಗಿಸುತ್ತ ಸದಾ ತೃಪ್ತಿಯಾಗದ ರಾತ್ರಿಗಳ ...
ಸಾಗಿಸುತ್ತಾ ಸದಾ ಹೆಗಲ ಮೇಲೆ ಬಾಳ ನೊಗವ , ನಾನು ಸದಾ ನಿನ್ನೊಂದಿಗೆ... ನೀನು ಸದಾ ನನ್ನೊಂದಿಗೆ !