ಕೂಗುತಿಹ ರೈಲಿನ
ಪುಟ್ ಬೋರ್ಡಿನ ಮೇಲೆ
ಒಲವಿನ ಹಣತೆಯೊಂದು
ಬಿಮ್ಮನೆ ಕುಳಿತಿದೆ..!
ಬೀಸುವ ಬಿರುಗಾಳಿಗೆ
ಮೈಯೊಡ್ಡಿ ಎದೆಬಿರಿದು
ಉರಿಯುತ್ತಿದೆ...
ಉಸಿರಿನ ಜೀವಜಲದಲಿ!
ಬರುವಳೆಂಬ ನಿರೀಕ್ಷೆಯ
ಮನೋವ್ಯಾಧಿಗೆ,
ಬಿರುಗಾಳಿಯ ದಬ್ಬಿ ಹೊರ-
ಇಣುಕುತ್ತಿದೆ ಉರಿಯ ಜ್ವಾಲೆ.
ನನ್ನ ಸೆಳೆಯುತ್ತಿದೆ ನನ್ನಿಂದ
ಅವಳೆಡೆಗೆ...
ಹರಿವ ನೀರು ತಗ್ಗಿನೆಡೆಗೆ?
ಮೈಮೇಲೆ ಅವಳಿಟ್ಟ
ಚಿತ್ತಾರದ ರಂಗೋಲಿಯ
ಬಣ್ಣವಿನ್ನೂ ಅಳಿಸಿಲ್ಲ..
ಅಲ್ಲಿ ಚೆಲ್ಲಿದ ಎದೆಯ
ರಕ್ತ ಹೆಪ್ಪುಗಟ್ಟುವುದಿದೆ.
ಕಣ್ ರೆಪ್ಪೆಯ ಮೇಲೆ ಬರೆದ
ಕವಿತೆ ಅಳಿಸಲಾಗುವುದಿಲ್ಲ...
ಅವಳಿನ್ನೂ ಓದುವುದಿದೆ.
ಓಡುವ ರೈಲಿನ ಹಿಂದೆಯೇ
ನೆನಪುಗಳು ಮಾಸುತ್ತಿವೆ,
ಅವಳು ಮಾತ್ರ ಕರಗುತ್ತಿಲ್ಲ.
ಎಂಜಿನ್ ಕೂಗಿನ ಶಬ್ದಕ್ಕೆ
ಬೆಚ್ಚುತ್ತಲೇ, ಅಳುಕುತ್ತಲೇ ...
ಕುಳಿತಿದೆ ಹಣತೆ,
ಜೋಪಾನ ಮಾಡುವ
ಅವಳ ಕೈಗಳ ನಿರೀಕ್ಷೆಯಲಿ.
No comments:
Post a Comment