Monday, October 19, 2009

ರಿಕ್ತ ಮನಸಿನಲಿ ರಕ್ತಿಯ ಹೂವಿಲ್ಲ



ಮತ್ತೆ ಮತ್ತೆ ಅಲವತ್ತುಕೊಳ್ಳುತ್ತೇನೆ
ನಿನ್ನೊಂದಿಗೆ ...
ಕಳೆದುಹೋದ ಅಮ್ಮನ
ನೆನಪಿನಲ್ಲಿ ಸಿಗುವುದು ಕೂಡ
ನೀನೊಬ್ಬಳೆ?!


ಮಧ್ಯರಾತ್ರಿಗಳಲಿ ನಿಲ್ಲಿಸಿದ
ನನ್ನ ಅಳು ...
ನಿನ್ನದೊಂದು ತಲೆ ನೇವರಿಕೆಗೆ
ನೆಮ್ಮದಿಯ ನಿದ್ದೆ ಮಾಡಿತ್ತು.


ನೋಡು... ಮನಸು ರಿಕ್ತ,
ರಕ್ತಿಯ ಹೂಗಳೆಲ್ಲಾ
ಕಡಲ ತಡಿಯ ಉಪ್ಪು ನೀರಿನಲ್ಲಿ
ನನ್ನ ಉಸಿರು ಸಿಕ್ಕಿದಂತೆ...
ಬೆಂದ ಬೇಳೆಯ ಕಾಳು!


ವಿಶ್ವಾಸ- ವಿದ್ರೋಹಗಳದ್ದು
ಅರಿವಿನ ಅಹಂಕಾರ.
ನಾನೋ ಏಕಾಂತಗಳ ಜಡಿಮಳೆಗೆ
ಸಿಕ್ಕ ತೆಂಗಿನಮರ !


ರಿಕ್ತ ಮನಸಿನಲಿ ರಕ್ತಿಯ ಹೂವಿಲ್ಲ
ಬಾ.... ಮತ್ತೊಮ್ಮೆ ...
ಎರಡೊಮ್ಮೆ...
ತಲೆ ನೇವರಿಸಿ ಬಿಡು,
ಕಳೆದು ಹೋಗಲಿ ಬಂಧ...
ಅಧ್ಯಾಯ ಮುಗಿದು... ಆರಂಭವಾಗಲಿ ಹೊಸಕಾವ್ಯ.

No comments:

Post a Comment