Thursday, May 2, 2013

ಹೂ ಗೊಂಚಲು :

ಈ ಕಾರಿರುಳ ನಿಟ್ಟುಸಿರುಗಳು
ಚಂದಿರನ ಕರೆತರಲಾರವು ..
ಕಳೆದುಕೊಳ್ಳುವ ಸುಖದಲಿ
ಮೈಮರೆತ ಬಾನಿಗೆ ಅವನೊಬ್ಬ
ಹಳೆಯ ಗೆಣೆಯ!
ನೆನೆಸಿಕೊಳ್ಳುವ ಕಣ್ಣಿಗೆ
ಅವನಿಲ್ಲದ ಕತ್ತಲು
ಕತ್ತು ಹಿಸುಕುವ ಕೈಯಂತೆ ...
ಉಸಿರು ಕಟ್ಟುತ್ತಲೇ ಇದೆ..
ನಿನ್ನೆದೆಯಲಿ ಚಂದಿರನಿಲ್ಲ !!

*********************

ಅಸಂಖ್ಯ ಕ್ಷೀರಪಥಗಳು
ನಿನ್ನ ಅಕ್ಷಿಪಟಲದೊಳಗೆ ಹುದುಗಿವೆ..

********************

ಮಲ್ಲಿಗೆಯ ಮೊಗ್ಗೊಂದು ಕಾಣೆಯಾಗಿದೆ
ಹುಡುಕಿಕೊಡುವಿರಾ...
ರಾತ್ರಿಯೆಲ್ಲಾ ಎದೆಯಂಗಳದಿ ಹರಡಿತ್ತು,
ಘಮ್ಮಾನೆ ಪರಿಮಳ ಚೆಲ್ಲಿ .

*********************

ಕಾಯುತ್ತಲೇ ಇರುವ ಒಲವಿನಲಿ ಅದೆಷ್ಟೋ ಕನಸುಗಳು
ಪರಿಭ್ರಮಿಸುತ್ತಲೇ ಇವೆ...
ಇವತ್ತು ..
ನಾಳೆ..
ನಾಳಿದ್ದು ...
ನಿನ್ನ ಪ್ರೀತಿಯ ಮೋಹರಾಗಬಹುದೆಂದು
ನನ್ನೆದೆಯ ಮೇಲೆ.
ಧ್ಯಾನ..
ಹಳಹಳಿಕೆ...
ನಿಟ್ಟುಸಿರು ...
ಈಗ ಚಂದ್ರಮಗೆ ಚಕೋರಿಯ ಚಿಂತೆ

**********************

ಆಲಿಕಲ್ಲುಗಳನ್ನು ಆಯ್ದು ಬೊಗಸೆ
ತುಂಬಿಕೊಂಡಂತೆ... ಪ್ರೀತಿ !
ಹಿಂಗಾರು -ಮುಂಗಾರುಗಳ ಕಾಯಬೇಕು
ಚಂಡಮಾರುತವ ನೆನೆಯಬೇಕು ..
ಅಲ್ಲೆಲ್ಲೋ ಸಾಗರದಲಿ ವಾಯುಭಾರ
ಕುಸಿಯಬೇಕು ....
ಅದರೂ ಖಾತ್ರಿಯಿಲ್ಲ ....
ಬಿದ್ದಾಗಷ್ಟೇ ಆಯ್ದುಕೊಳ್ಳಬೇಕು!

***************

ನನ್ನೊಳಗೂ ನಿನ್ನೊಳಗೂ
ಏನೂ ಇಲ್ಲ , ಒಲವಿನ ಹೊರತು.
ಇಬ್ಬರೂ ಹಾಡುವುದು ,
ಸಮರಸ ಭಾವಗಳು ಕಲೆತು.
ನೀನು ಹರಿಯಲು ನಾನು ದಡ
ಉದ್ದಕೂ ಅದೆಷ್ಟು ಮಾತು
ಶಬ್ದ ಮುದ್ರೆಯ ಒಡೆದು !

**************

ಹೇ ,
ಗಾಳಿ...
ಚಂದ್ರ...
ತಾರೆ...
ಅಲೆ...
ಶಬ್ದ- ನಿಶ್ಯಬ್ದ ಗಳೇ
ಕಣ್ಣು ಮುಚ್ಚಿಕೊಳ್ಳಿ
ನನ್ನ ಕನಸಿನ ಕಕ್ಷೆಯಲಿ
ಅವಳು ನಗ್ನಳಾಗುತ್ತಿದ್ದಾಳೆ !

*************

ಈ ಚಂದಿರನೆಕೋ ಮುನಿಸಿಕೊಂಡ ..
ಇವಳ ಜೊತೆಗೆ ..
ಒಳಗೂ ಹೊರಗೂ
ಕತ್ತಲು ನನಗೆ !

**************

2 comments:

  1. ಇಬ್ಬನಿಯನ್ನು ತಬ್ಬಿದ ಗರಿಕೆಯಷ್ಟು ಇಷ್ಟವಾದವು ಹೂ ಗೊಂಚಲ ಸಾಲುಗಳು...

    ReplyDelete