Tuesday, July 16, 2013

ಸಂಕ್ರಮಣ ಸ್ನಾನ


ಸಂಕ್ರಾಂತಿ ಪುರುಷ ಬರುತ್ತಾನೆಂದು
ಇವಳು ತೋರಣ ಕಟ್ಟಿಸಿ
ಉತ್ತರಾಣಿ ಸಿಕ್ಕಿಸಿದಳು ಸೂರಿಗೆ.
ಒಳಗೆ ಘಮಗುಡುವ ಕಿಚಡಿ
ಬೋಗುಣಿಗಳು ತುಂಬಿದ
ಎಳ್ಳು ಜೀರಿಗೆ ಬೆಲ್ಲ

ರಾತ್ರಿ ತಂಬೂಲ ಮೆಲ್ಲುತ್ತ
ಕೇಳಿಯೇ ಬಿಟ್ಟೆ ಯಾರವನು
ಬರಲಿಲ್ಲವೆಂದು?
ಇವಾಗಲ್ಲವ ಸಂಕ್ರಮಣವೆಂದು
ಎದೆಯೇರಿದಳು
ಕತ್ತಲು ನಾಚುತ್ತಾ
ಬೆಳಕು ಬೆಚ್ಚುತ್ತಾ
ಖಗಮಿಗಗಳಿಗೂ ರೋಮಾಂಚನ
ಮಾಗಿಯ ಚಳಿ ಬೆವತು
ಸಾಂಗವಾಯಿತು ಸಂಕ್ರಮಣ ಸ್ನಾನ

ಕೋಟಿ ಸೂರ್ಯರು ಹುಟ್ಟಿದರು
ಅವಳ ನೀಳಕೂದಲ ಹನಿಗಳಲ್ಲಿ
ನನ್ನ ಕಣ್ಣುಗಳಲ್ಲಿ ಹಾಲುಪಥದ
ನಕ್ಷತ್ರ ರಾಶಿ

ಇದೀಗ
ಚಂದ್ರ ಪಾಳಿಯ ಮುಗಿಲಬಾಗಿಲಲ್ಲಿ
ಮಿಥುನ ಸಂಕ್ರಮಣ!

No comments:

Post a Comment