Friday, July 19, 2013

ಉರಿಯ ಕನಸಿಗೆ

ಉರಿಯ ಕನಸಿಗೆ
ಕಲಿದೇವರು ಕಂಡಿದ್ದಾನೆ
***************

ಉರಿವ ಕನಸೊಂದು
ಬೀಳುತಿದೆ ಈ ರಾತ್ರಿಗಳಲಿ
'ಧರೆ ಹೊತ್ತಿ ಉರಿದರೆ ನಿಲಬಹುದೇ'
ಎಂದು ಬಸವ ಢಣ್ಣಾನಾಯಕ
ಕಿವಿಗೆ ಕೂಗಿ ಕತ್ತಲಾಗಿ ಬಿಡುತ್ತಿದ್ದಾನೆ

ಕತ್ತಲು ತುಂಬಿದ ನಿದ್ದೆಗೆ
ಉರಿಯ ತಾಪದ ಕನವು
ಅಕ್ಕಯ್ಯ ತಾಳಲಾರೆ
ಕದಳಿಗೆ ಕರೆಯೆ ಎನ್ನ

ಸಿದ್ದರಾಮ ಕಟ್ಟಿದ ಕೆರೆಯಲಿ
ಹೆಣಗಳ ಹೋಮ
ಕೆಂಪಾಗಸವ ತುಂಬಿದ
ರಕುತದ ಓಕುಳಿಗೆ
ಬಲಿಯ ಸಂಭ್ರಮ..

ಒಣಗಿದ ರಕ್ತ ಬೀಜಾಸುರರ
ಸಂತತಿ ನನ್ನ ರಕುತದೊಳಗೂ
ಹೊಕ್ಕು ಚಿಗುರುವಂತಿದೆ
ಹರಳಯ್ಯ ಬಾ ಸುಲಿದುಬಿಡು
ಈ ಕಾಯವ ಕಾಯಿಸಿ

ಮಡಿಯ ಮಡಿಕೆಗಳ
ಹೊರಗೆ ತೊಳೆದರೂ
ಒಳಗದೇ ಒಣಗಿದ ಅಮೇಧ್ಯ.

ಜನಿವಾರ ಶಿವದಾರ ಉಡುದಾರ
ದಾರ ದಾರ ದಾರಿದ್ರಗಳಾಗಿ
ಎನ್ನ ಕುಲವ ಸುತ್ತಿ ಕಟ್ಟಿ
ಉಸಿರ ಬೆಲೆ ದಾರವಾಯ್ತು

ಹಿಟ್ಟಿಲ್ಲದವರ ಹಂಗಿಸುವ
ದಿಕ್ಕಿಲ್ಲದವರ ದುರುಗುಟ್ಟುವ
ಸಂತ್ರಸ್ತರ ಸತಾಯಿಸುವ
ದೊಡ್ಡಮತದವರ ಮನೆಗೆ
ಕಲಿದೇವರು ಬಂದು ಕಂಕಣ
ಕಟ್ಟಿದ್ದಾನೆ!

ಈ ಉರಿಯ ಕನಸಿಗೆ
ಕಲಿದೇವರು ಕಂಡಿದ್ದಾನೆ..
ಅದಕ್ಕೆ ಈ ಭೀತಿಶಂಕೆ. - RP

No comments:

Post a Comment